ಅನಂತಮೂರ್ತಿಯವರ "ಭಾರತೀಯ ಸಂಸ್ಕೃತಿ ಮತ್ತು ಲೇಖಕ" – ಸಂಯುಕ್ತಾ ಪುಲಿಗಲ್

– ಸಂಯುಕ್ತಾ ಪುಲಿಗಲ್

ಕಳೆದ ವಾರ ನಾನು ತೇಜಸ್ವಿ ಮತ್ತು ಅನಂತಮೂರ್ತಿಯವರ ಎರಡು ಲೇಖನಗಳನ್ನು ಉಲ್ಲೇಖಿಸುತ್ತಾ ವಿಮರ್ಶೆಯ ಇತಿ-ಮಿತಿ ಮತ್ತು ಜವಾಬ್ದಾರಿಗಳ ಕುರಿತು ಮೆಲುಕು ಹಾಕಿದ್ದೆ. ಸಾಕಷ್ಟು ಪರ ಮತ್ತು ವಿರೋಧ ಜವಾಬುಗಳು ಬಂದವು. ಕೆಲವರು ತೇಜಸ್ವಿಯವರು ಅನಂತಮೂರ್ತಿಗಳ ಬಗ್ಗೆ ವಯಕ್ತಿಕವಾಗಿ ಮಾತನಾಡಲಾರರು. ಒಂದು ವೇಳೆ ನಿಜವಾದಲ್ಲಿ ಉದಾಹರಣೆಯಾಗಿ ಆ ಮಾತುಗಳನ್ನು ಇಲ್ಲಿ ಪ್ರಸ್ತುತ ಪಡಿಸಿ ಎಂದು ನಿಬಂಧಿಸಿದರು. ಅದಕ್ಕಾಗಿ ಒಂದು ಸಣ್ಣ ಸ್ಪಷ್ಟನೆ. ತೇಜಸ್ವಿಯವರ ಬಗ್ಗೆ ಅಪಾರ ಗೌರವ ಹೊಂದಿರುವ ನಾನು ಅವರ ವಿರುದ್ಧ ಯಾವ ಪ್ರೂಫುಗಳನ್ನೂ ತಯಾರು ಮಾಡುವ ಉದ್ದೇಶ ಹೊಂದಿಲ್ಲ. ನನ್ನ ಬಹು ಮೆಚ್ಚಿನ ಬರಹಗಾರರಲ್ಲಿ ತೇಜಸ್ವಿ ಒಬ್ಬರು. ನನ್ನ ಹಿಂದಿನ ಬರವಣಿಗೆಯ ಉದ್ದೇಶ ಕೇವಲ “ವಿಮರ್ಶೆ” ಎಂಬ ಸಾಹಿತ್ಯ ಪ್ರಕಾರವನ್ನು, ಅದರ ‘ಹಿಂದು-ಇಂದು-ಮುಂದು’ಗಳ ಬಗೆಗಿನ ಆಶಯಗಳನ್ನು ಗ್ರಹಿಸುವ ಪ್ರಯತ್ನವಷ್ಟೇ ಆಗಿತ್ತು.
 
ಬಹುಶಃ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಫೇಮಸ್ ಮತ್ತು ಇನ್-ಫೇಮಸ್ ಎರಡೂ ಒಟ್ಟಿಗೆ ಆಗಿರುವಂತಹ ಏಕೈಕ ವ್ಯಕ್ತಿ ಅನಂತಮೂರ್ತಿ. ‘ಕರ್ನಾಟಕ ಸಂಸ್ಕೃತಿ ವಿಶ್ಲೇಷಣೆ’ ಲೇಖನ ಓದಿ ಕುತೂಹಲಗೊಂಡು ಅಂದೇ ಸಪ್ನಾದಿಂದ ಕೊಂಡು ತಂದು ಓದಿದ ಅನಂತಮೂರ್ತಿಯವರ ಲೇಖನ ‘ಭಾರತೀಯ ಸಂಸ್ಕೃತಿ ಮತ್ತು ಲೇಖಕ’. ಸುಮಾರು ಮುವ್ವತ್ತು ಪುಟಗಳಿರುವ ಈ ಲೇಖನ ಒಂದೇ ಗುಕ್ಕಿನಲ್ಲಿ ಓದಿ ಬೆರಗಾದೆ! ಅನಂತಮೂರ್ತಿಯವರ ಕಥೆ, ಕಾದಂಬರಿಗಳಷ್ಟೇ ಓದಿದ್ದ ನಾನು ಅವರ ಚಿಂತನೆ, ವಿಚಾರಗಳ ಬರಹವನ್ನು ಮೊದಲ ಬಾರಿಗೆ ಓದಿದ್ದೆ. ಕೆಲವು ಸೂಕ್ಷ್ಮ ವಿಚಾರಗಳನ್ನು, ಸಾಧಾರಣ ಓದಿಗೆ ನಿಲುಕದ ತಿರುಳನ್ನು ಬಗೆಯಲು ಅನಂತಮೂರ್ತಿಯವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ ಎನ್ನಿಸಿತು. ತಮ್ಮ ಲೇಖನದಲ್ಲಿ ತಮ್ಮ ವಿಚಾರಗಳ ಬಗ್ಗೆ ಕಂಡುಬರುವ ಅಸ್ಪಷ್ಟತೆ ಮತ್ತು ವಿರೋಧಾಭಾಸಗಳನ್ನು ಅವರೇ ಸೂಚಿಸಿರುವುದು, ಬರವಣಿಗೆಯ ಪ್ರಾಮಾಣಿಕತೆಯನ್ನು ಬಿಂಬಿಸುತ್ತದೆ. ಈ ಲೇಖನದಲ್ಲಿನ ಅವರ ಮಾತುಗಳನ್ನೆಲ್ಲಾ ಒಪ್ಪಲೇಬೇಕಾದ ಹಂಗು, ಪ್ರಮೇಯಗಳಿಲ್ಲದೆ ಮತ್ತು ವಿರೋಧಿಸುವ ಯಾವುದೇ ನೈತಿಕ ದೌರ್ಜನ್ಯಗಳಿಲ್ಲದೆ, ತಟಸ್ತವಾಗಿ ಓದಿದಾಗ ಪ್ರತಿ ಓದುಗನಿಗೂ ಒಂದು ಇಂಟರೆಸ್ಟಿಂಗ್ ಮತ್ತು ತಾಜಾತನದ ಓದಿನ ಅನುಭವವಾಗಿ, ಅನೇಕ ವಿಚಾರಗಳು ಆಳಕ್ಕಿಳಿಯುತ್ತವೆ. ಇಷ್ಟಕ್ಕೂ ಆ ಲೇಖನದಲ್ಲಿ ಅವರು ಹೇಳಿದ್ದೇನು? ನೋಡೋಣ…
‘ಭಾರತೀಯ ಸಂಸ್ಕೃತಿ’ ಎಂದು ನಮ್ಮ ಆಧ್ಯಾತ್ಮ ಪರಂಪರೆ, ಸಿದ್ಧಾಂತ, ರೂಪುರೇಷೆಗಳನ್ನು ಸ್ಥೂಲವಾಗಿ ಹೆಸರಿಸಿ, ಇದಕ್ಕೂ ನಮ್ಮ ಲೇಖಕರಿಗೂ ಇರುವ ಅವಿನಾಭಾವ ಸಂಬಂಧವು ಒಂದು ಪರಿಣಾಮಕಾರೀ ಅಂಶವಾಗಿಯೂ ಮತ್ತು ಪರಿಮಿತಿಯಾಗಿಯೂ ಅವರವರ ಲೇಖನ, ಬರಹಗಳಲ್ಲಿ ಹೇಗೆ ಅನುರೂಪವಾಗಿದೆ ಎಂದು ವಿಶ್ಲೇಷಣಾತ್ಮಕವಾಗಿ ವಿವರಿಸಿದ್ದಾರೆ. ತೇಜಸ್ವಿ ಹೇಳುವಂತೆ ಇಲ್ಲಿ ಅನಂತಮೂರ್ತಿ ‘ಭಾರತೀಯ ಸಂಸ್ಕೃತಿ’ ಎಂಬ ಪರಿಕಲ್ಪನೆಗೆ ಸರಿಯಾದ ನ್ಯಾಯ ಒದಗಿಸದಿದ್ದರೂ, ಇಲ್ಲಿ ನಾವು ಗಮನಿಸಬೇಕಾದ್ದು, ಅರಿಯಬೇಕಾದ್ದು ನಮ್ಮ ಹಿಂದೂ ಸಮುದಾಯದ ಕೆಲ ಪಾರಮಾರ್ಥಿಕ, ತಾತ್ವಿಕ ಸಿದ್ಧಾಂತಗಳು ಬರಹಗಾರರಲ್ಲಿ ಹೇಗೆ ಮನೆಮಾಡಿದೆ, ಅದರ ಚಿತ್ರ ಲೇಖಕರ ಲೇಖನಿಯಿಂದ ಹೇಗೆ ರೂಪುಗೊಳ್ಳಲ್ಪಟ್ಟಿದೆ ಎಂಬ ಅನಂತಮೂರ್ತಿಯವರ ಅಧ್ಯಯನವನ್ನು.


ಮೊದಲಿಗೆ ಕ್ರೈಸ್ತ ಧರ್ಮ ಮತ್ತು ಹಿಂದೂ ಧರ್ಮದ ಮೂಲಭೂತ ವ್ಯತ್ಯಾಸಗಳ ಕಡೆ ನಮ್ಮ ಗಮನ ಸೆಳೆಯುತ್ತಾ ಅನಂತಮೂರ್ತಿಯವರು ಹೇಳುತ್ತಾರೆ, ಕ್ರೈಸ್ತ ಧರ್ಮ ಪಾಪಜನ್ಯವಾದರೆ ಹಿಂದೂ ಧರ್ಮ ಆನಂದಜನ್ಯವೆಂದು. ಅಂದರೆ, ಕ್ರೈಸ್ತರಲ್ಲಿ ಹುಟ್ಟು ಒಂದು ಪಾಪ, ನಮ್ಮಲ್ಲಿ ಹುಟ್ಟು ಒಂದು ಸಂಭ್ರಮ. “ದೌ ಶಲ್ ನಾಟ್” ಗಳ ಮೂಲಕ ಹೇರಿಕೆಯಾಗುವ ಅವರ ಧರ್ಮ ಹೇಗೆ ಒಂದು ಅಂಜಿಕೆಯಲ್ಲಿ ಕಳೆದುಹೋಗಬಹುದೋ ಹಾಗೆ ಹಿಂದೂ ಸಂಸ್ಕೃತಿಯಲ್ಲಿ “ಆನಂದಮಯ, ಸೃಷ್ಟಿಯ ತನ್ಮಯತೆ, ಪ್ರಜ್ಞೆ” ಎಂಬ ಹಿರಿಮೆಯಿಂದ ಪೊಳ್ಳು ಆಶಾವಾದ ಬೆಳೆಸಿಕೊಳ್ಳುವ ಅಪಾಯವಿದೆ ಎಂದು ಹೇಳುತ್ತಾರೆ. ನಮ್ಮಲ್ಲಿನ ಉನ್ನತ ವಿಚಾರಗಳು, ಆಧ್ಯಾತ್ಮ ಒಲವುಗಳಿಂದ ಒಬ್ಬ ಬರಹಗಾರ ಹೇಗೆ ಗಾಢವಾಗಿ ಬೆಳೆದು, ಅದ್ಭುತ ಸೃಷ್ಟಿ ರಚಿಸಲು ಸಾಧ್ಯವೋ, ಅಷ್ಟೇ ತೀವ್ರವಾಗಿ ಲೇಖಕ ನಮ್ಮ ಸಂಸ್ಕೃತಿಯ ಉದಾತ್ತ ವಿಚಾರಗಳ ಸ್ವರೂಪಕ್ಕೆ ಅಳ್ಳಕಗೊಂಡು ಚರ್ವಿತ ಚರ್ವಣವನ್ನು ಉಣಬಡಿಸುವುದೂ ಸಾಧ್ಯ ಎಂದು ಎಚ್ಚರಿಸುತ್ತಾರೆ. ಇದು ಬಹುಶಃ ಒಬ್ಬ ಲೇಖಕ ತನ್ನನ್ನು ತಾನು ಅರ್ಥೈಸಿಕೊಳ್ಳಲು, ರೂಪಿಸಿಕೊಳ್ಳಲು ನೆರವಾಗಬಹುದಾದ ಒಳ್ಳೆಯ ಸೈದ್ಧಾಂತಿಕ ನಿಲುವು ಎಂದು ನನಗನ್ನಿಸುತ್ತದೆ. 
ಅತ್ಯುತ್ತಮ ಲೇಖಕ ತಮ್ಮ ಸಂಸ್ಕೃತಿಯಿಂದ ಸೀಮಿತವಾಗಬೇಕಾಗಿಲ್ಲ ಎಂಬ ವಿಚಾರವನ್ನು ಹೇಳುತ್ತಾ ಅನಂತಮೂರ್ತಿಯವರು ಉದಾಹರಿಸುವುದು ಎಮರ್ಸನ್ ಮತ್ತು ವ್ಹಿಟ್ ಮನ್ ರನ್ನು. ಇವರಿಬ್ಬರೂ ನಮ್ಮ ಹಿಂದೂ ಧರ್ಮದಿಂದ ಪ್ರಭಾವಿತರಾದವರು ಎಂದು ಹೇಳುತ್ತಾರೆ. ಯಾವುದೇ ಸಂಸ್ಕೃತಿ ಅಥವಾ ಧರ್ಮ ಸಂಪೂರ್ಣತೆಯನ್ನು ಹೊಂದಿರುವುದಿಲ್ಲ. “ಯಾವ ಸಂಸ್ಕೃತಿಯಿಂದಾಗಲಿ ಹುಟ್ಟಿ ಬರುವ ಟೊಳ್ಳು ಪ್ರವೃತ್ತಿಗಳು ಸುಲಭವಾಗಿ ನಿವಾರ್ಯವಲ್ಲ. ಗಟ್ಟಿಗೂ-ಟೊಳ್ಳಿಗೂ ಸಹಜ ಸಂಬಂಧವಿದೆ. ಒಂದನ್ನು ಇನ್ನೊಂದರಿಂದ ಪ್ರಕ್ಯೇಕಿಸಿ ಪರೀಕ್ಷಿಸುವುದು ಅಸಾಧ್ಯ” – ಎಂಬ ಅನಂತಮೂರ್ತಿಯವರ ಮಾತು ಮೇಲ್ನೋಟಕ್ಕೆ ಅಪವಾದವೆನಿಸಿದರೂ, ಆಳವಾಗಿ ಗಮನಿಸಿದರೆ ನಿಜವೆನಿಸುತ್ತದೆ.
ನಂತರ ಅನಂತಮೂರ್ತಿಯವರು ನಮ್ಮ ಗಮನ ಸೆಳೆಯುವುದು ಸ್ವಾತಂತ್ರ್ಯ ಮತ್ತು ಸ್ವೇಚ್ಛೆ ಎರಡೂ ಸಮೃದ್ಧವಾಗಿರುವ ನಮ್ಮ ಸಂಸ್ಕೃತಿಯತ್ತ. ಇತರ ಸಂಸ್ಕೃತಿಗಳಂತೆ ಒಂದು ಕಠಿಣ ಶಿಸ್ತು, ಶಿಷ್ಟತೆ ನಮ್ಮಲ್ಲಿಲ್ಲದ ಕಾರಣ ನಾವು ಸ್ವತಂತ್ರರಾಗಿ ಆಲೋಚಿಸುತ್ತೇವೆ. ನಮ್ಮ ಸ್ವಾತಂತ್ರ್ಯವನ್ನು ಮೆಚ್ಚುತ್ತಲೇ, ಅನಂತಮೂರ್ತಿಯವರು ಎಚ್ಚರಿಸುವುದು, ನಾವು ಇದರಿಂದ ಫೋಕಸ್ ಕಳೆದುಕೊಳ್ಳಬಾರದು ಎಂದು. ಹೇಗೆಂದರೆ, ನಮ್ಮ ಸಂಸ್ಕೃತಿಯಲ್ಲಿ ಎಲ್ಲವೂ ಸಖ್ಯ. ಅಮೂರ್ತ ದೇವರು ಎನ್ನುತ್ತೇವೆ – ಮೂರ್ತಿ ಪೂಜೆ ಇದೆ, ನಿಷ್ಕಾಮ ಕರ್ಮ ಎನ್ನುತ್ತೇವೆ – ಉದ್ದೇಶಪೂರ್ವಕವಾಗಿಯೇ ಪೂಜಿಸುತ್ತೇವೆ, ಎಲ್ಲವೂ ಪರಮಾತ್ಮ ಸ್ವರೂಪಿ ಎನ್ನುತ್ತೇವೆ – ಜಾತಿ ಪದ್ಧತಿ ಇದೆ, ಇನ್ನು ಕೆಲವರು ಲೌಕಿಕ ಸತ್ಯ ಬೇರೆ ಪಾರಮಾರ್ಥಿಕ ಸತ್ಯ ಬೇರೆ ಎಂದು ಮನಗಂಡು, ಥಿಯರಿಟಿಕಲ್ ಆಗಿ ಒಂದು ಮಾತಾಡಿ, ಪ್ರಾಕ್ಟಿಕಲ್ ಆಗಿ ಇನ್ನೇನೋ ಮಾಡುತ್ತೇವೆ. ಮತ್ತೆ, ಇವೆಲ್ಲವೂ ನಮ್ಮ ಹಿಂದೂ ಧರ್ಮದಲ್ಲಿ ಸಾಧ್ಯ! “ವೈಷಮ್ಯಗಳಿಂದ ಮುಖ ತಿರುಗಿಸಿ ಮೂಲದಲ್ಲಿರುವ ಒಳಿತೊಂದೇ ನಮ್ಮ ಕಾಳಜಿಗೆ ಅರ್ಹ ಎಂದು ಪರಿಗಣಿಸುತ್ತೇವೆ”. ಈ ರೀತಿ ಬಹುಪ್ರಭೇದಗಳಿಂದ ಪ್ರಭಾವಿತರಾಗಿಯೇ ಅನೇಕರು (ಅನಂತಮೂರ್ತಿ ಹೆಸರಿಸುವುದು ವಿನಾಯಕರನ್ನು) ಅರವಿಂದರನ್ನೂ, ಸಾಯಿಬಾಬಾರನ್ನೂ ಒಟ್ಟಿಗೆ ನಂಬುವುದು ಸಾಧ್ಯವಾಗುತ್ತದೆ ಎಂದು ಸೂಚಿಸುತ್ತಾರೆ. ಈ ಅಬ್ಸರ್ವೇಶನ್ ನನ್ನ ಪ್ರಕಾರ ಅತ್ಯಂತ ಗಂಭೀರವಾದದ್ದು ಮತ್ತು ವಿಚಾರ ಮಾಡುವಂಥದ್ದು. ಬೇಂದ್ರೆಯವರ ಸಂವೇದನೆಗಳು ಸಹ, ಇವರ ಪ್ರಕಾರ ಹಿಂದೂ ಸಂಸ್ಕೃತಿಯ ಮೂಲಭೂತ ಪ್ರವೃತ್ತಿಗಳಿಂದ ಪ್ರೇರಿತವಾದ್ದು. ಅಡಿಗರಂತೆ ಬೇಂದ್ರೆ ವ್ಯಕ್ತಿ ಸ್ವಭಾವದ ವೈರುದ್ಧ್ಯಗಳನ್ನು ಒಳಹೊಕ್ಕು ನೋಡಿಲ್ಲ, ಎಂಬ ಅಂಬೋಣ ಅನಂತಮೂರ್ತಿಯವರದ್ದು. ಇಲ್ಲಿ ನವ್ಯ-ನವೋದಯಗಳ ತಿಕ್ಕಾಟಗಳು ಕಂಡರೂ ನನ್ನ ಮಿತಿಯ ಗ್ರಹಿಕೆಗೆ ನಿಲುಕಿದ್ದು, ಬೇಂದ್ರೆಯವರು ನಮ್ಮ ಸೃಷ್ಟಿಯ ಅತೀತಗಳ ಬಗೆಗಿನ ಒಂದು ಬೆರಗಿನೊಂದಿಗೆ ತಮ್ಮ ದೃಷ್ಟಿಯನ್ನು ಮಿತಿಗೊಳಿಸುತ್ತಾರೆ. ಅಡಿಗರು ಬೆರಗಿಗೂ ಮೀರಿದ ಪ್ರಶ್ನೆಗಳನ್ನು, ಹುಡುಕಾಟಗಳನ್ನು ಕೆದಕುತ್ತಾರೆ, ಬಹುಶಃ ಅನಂತಮೂರ್ತಿಯವರ ಲೇಖನ ಹೇಳುವುದು ಈ ನಿಲುವನ್ನೇ.
ಹಿಂದೂ ಸಂಸ್ಕೃತಿಯ ಸ್ವೇಚ್ಚಾ ಭಾವವನ್ನು ಆತಂಕ ದೃಷ್ಟಿಯಿಂದ ನೋಡುತ್ತಲೇ, ಅನಂತಮೂರ್ತಿಯವರು “ಆದರೆ ಇದೇ ಸಂಸ್ಕೃತಿಯಿಂದ ಪರಮಹಂಸರು ಪ್ರಭಾವಿತರಾಗಿದ್ದರು ಎಂಬುದನ್ನು ನೆನಪಿನಲ್ಲಿಡಬೇಕು” ಎಂದು ನಮ್ಮನ್ನು ಮತ್ತೊಮ್ಮೆ ಎಚ್ಚರಿಸುತ್ತಾರೆ. ಈ ದ್ವಿವಾದಗಳ ಛಾಯೆ, ಅವರಲ್ಲಿನ ಹುಡುಕಾಟದ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಮತ್ತೊಂದು ನಮ್ಮ ಸಂಸ್ಕೃತಿಯ ‘ಆತಂಕ’ ಎಂದು ಅನಂತಮೂರ್ತಿಯವರು ವಿಭಾಗಿಸುವುದು ನಮ್ಮಲ್ಲಿನ ಗುರುಹಿರಿಯರ ಭಕ್ತಿ. ಪಾಶ್ಚಾತ್ಯ ಬರಹಗಾರನೊಬ್ಬ ಹೇಳಿದ್ದನಂತೆ “ಭಾರತದಲ್ಲಿ (ಅಥವಾ ಹಿಂದೂಗಳು) ಅಪ್ಪ ಸಾಯುವವರೆಗೆ ಮಗ ಅಪ್ರಬುದ್ಧ” ಎಂದು. ನಾವು ನಮ್ಮಲ್ಲಿ ಎಷ್ಟೇ ವೈಚಾರಿಕ ಬುದ್ಧಿ ಬೆಳೆದರೂ ಹಿರಿಯರ ದಾರಿಯನ್ನು ಮೀರಲಾರೆವು. ನಮ್ಮ ವ್ಯಕ್ತಿತ್ವ ನಮ್ಮ ಹಿರಿಯರ ನಿಲುವುಗಳಿಂದ ಹೇರಿಕೆಯಾಗಿದ್ದು, ಸ್ಪಷ್ಟ ರೂಪವನ್ನೇ ಪಡೆಯುವುದಿಲ್ಲ. ಬೇರೆಯವರ ಜೀವನ ದೃಷ್ಟಿ ನಮ್ಮ ದೃಷ್ಟಿಯಾಗಿಯೂ ನಿಂತು ನಮ್ಮ ಪ್ರಜ್ಞೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದು ಒಂದು ವ್ಯಕ್ತಿ-ಸಂಸ್ಕೃತಿಯ ಕೊಡು-ಕೊಳ್ಳುವಿಕೆಯ ಸಂಬಂಧ ಏರುಪೇರಾಗುವಂತೆ ಮಾಡುತ್ತದೆ. ಹೀಗಾಗಿ ಏರ್ಪಟ್ಟ ಒಂದು ಕಂದರ ನಮ್ಮ ಸಂಸ್ಕೃತಿ ಹಾಗೂ ಲೇಖಕನ ಮದ್ಯೆಯೂ ಕಾಣಸಿಗುತ್ತದೆ ಎನ್ನುತ್ತಾರೆ ಅನಂತಮೂರ್ತಿ. ಇದನ್ನು ಅರ್ಥೈಸುವುದು ಸ್ವಲ್ಪ ಸವಾಲೇ ಆದರೂ, ನಮ್ಮ ಸಮುದಾಯ, ಕುಟುಂಬಗಳ ಮಟ್ಟಕ್ಕೆ ಈ ಪರಿಕಲ್ಪನೆಯನ್ನು ಇಳಿಸಿ ನೋಡಿದಾಗ ಹೌದೆನಿಸುತ್ತದೆ.
ಇಷ್ಟೆಲ್ಲಾ ಹೇಳುತ್ತಾ ಬಂದ ಅನಂತಮೂರ್ತಿಗಳು, ವ್ಯಕ್ತ ಪಡಿಸುವ ಮತ್ತೊಂದು ಮುಖ್ಯ ವಿಷಯ ಹಿಂದೂ ಧರ್ಮದ ಬಗ್ಗೆ ನಮಗಿರುವ ಹೆಚ್ಚಾದ ಗೌರವ, ಮತ್ತು ಅದರ ಬಳುವಳಿಯಾಗಿ ಕಾಣಸಿಗುವ ಹಿಂದೂ ಧರ್ಮದ ಬಗೆಗಿನ ಮೇಲರಿಮೆಯ ಬಗ್ಗೆ. “ಎಲ್ಲವೂ ನಮ್ಮಲ್ಲೇ ಇದೆ, ನಮ್ಮ ವೇದ, ಉಪನಿಷತ್ತುಗಳು ಹೇಳಲಾಗದ ಅಂಶವೇ ಇಲ್ಲ” ಎನ್ನುವಂತಹ ಭಾವ, ನಮ್ಮನ್ನು ಪ್ರಶ್ನಾ ಮನೋಭಾವ ಅಥವಾ ಹುಡುಕಾಟದಿಂದ ಮುಕ್ತಗೊಳಿಸುತ್ತದೆ. ಈ ಮುಕ್ತತೆ ನಮ್ಮನ್ನು ಆವರಿಸಿ ನಾವು ಒಂದು ಚರ್ವಿತ ಚರ್ವಣಕ್ಕೆ ಒಳಗೊಳ್ಳುತ್ತೇವೆ. ಯಾವುದೆಲ್ಲಾ ನಮ್ಮ ಜ್ಞಾನ ಗ್ರಹಿಕೆಗೆ, ಓದಿಗೆ ಸಿಗುವುದೋ ಅದೇ ಎಲ್ಲಾ ಎಂದು ತಿಳಿದು ನಮ್ಮ ವೈಚಾರಿಕ ಅಥವಾ ಕೆದಕುವ ಮನಸ್ಸನ್ನು ಮಲಗಿಸುತ್ತೇವೆ. ಕುವೆಂಪುರವರ ಬರಹ (ಪದ್ಯ ಮುಖ್ಯವಾಗಿ) ಇಂತಹ ಭಾವಕ್ಕೆ ಅಥವಾ ಮಿತಿಗೆ ಒಳಗೊಂಡಿಗೆ ಎಂಬುದು ಅನಂತಮೂರ್ತಿಯವರ ಅನಿಸಿಕೆ. “ಕುವೆಂಪುರವರ ಗದ್ಯಕ್ಕಿರುವ ವಾಹಕತ್ವ ಅವರ ಶಿಷ್ಟ ಸುಸಂಸ್ಕೃತ ಪದ್ಯಕ್ಕಿಲ್ಲ” ಎಂದು ಹೇಳುತ್ತಾರೆ. ಈ ಮಾತನ್ನು ಸಮರ್ಥಿಸಲು ಸಾಕಷ್ಟು ವಿವರಣೆಗಳನ್ನೂ ಕೊಡುತ್ತಾರೆ. ಇಷ್ಟೆಲ್ಲಾ ಮೂಲಭೂತ ವಿಚಾರಗಳನ್ನು ವಿವರಿಸುತ್ತಾ ನಂತರ ಅನೇಕ ಉದಾಹರಣೆಗಳ ಮೂಲಕ ಕುವೆಂಪು ಮತ್ತು ಅಡಿಗರ ಬರಹಗಳ ಬಗ್ಗೆ ಚರ್ಚಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಎಲ್ಲೂ ಕುವೆಂಪುರವರ ಬಗ್ಗೆಯಾಗಲಿ ಅಡಿಗರ ಬಗ್ಗೆ ಆಗಲೀ (ಇಬ್ಬರ ಬರಹಗಳ ವೈರುದ್ಧ್ಯಗಳನ್ನು ಮೆಚ್ಚುತ್ತಲೂ, ಪ್ರಶ್ನಿಸುತ್ತಲೂ) ಕೇವಲವಾಗಿ ಅಥವಾ ಟೀಕೆಮಾಡುವಂಥಾ ವಿವರಣೆಗಳನ್ನು ನೀಡುವುದಿಲ್ಲ. ಬದಲಾಗಿ ಒಂದು ಪ್ರಶ್ನಾತ್ಮಕ ಚರ್ಚೆಗೆ ಆಹ್ವಾನಿಸುವಂತೆ ಈ ಲೇಖನ ಟ್ಯೂನ್ ಆಗಿದೆ ಎನ್ನಬಹುದು.
ಇಷ್ಟು ನನ್ನ ಗ್ರಹಿಕೆಗೆ ನಿಲುಕಿದ “ಭಾರತೀಯ ಸಂಸ್ಕೃತಿ ಮತ್ತು ಲೇಖಕ” ಎಂಬ ಲೇಖನ. ಒಂದಷ್ಟು ವಿಚಾರಗಳು ಸಮ್ಮತವಾಗದೆಯೂ ಇಲ್ಲಿ ನನಗೆ ಕಲಿಕೆಗೆ, ವಿಚಾರವಾದಕ್ಕೆ ಸಾಕಷ್ಟು ಹೊಳಹುಗಳು ಸಿಕ್ಕಿವೆ. ಈ ಲೇಖನದ ಬಗ್ಗೆ ಇನ್ನು ಹೆಚ್ಚಿಗೆ ಹೇಳ ಬಯಸುವ ಅಥವಾ ನನ್ನ ರೀಡಿಂಗ್ ಸರಿ ಇಲ್ಲದ ಸಂದರ್ಭದಲ್ಲಿ ತಿದ್ದುವ ಎಲ್ಲ ಪ್ರತಿಕ್ರಿಯೆಗಳಿಗೆ ಸ್ವಾಗತ.
 
 

‍ಲೇಖಕರು G

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Anjali Ramanna

    Samyuktha Puligal Thanks for enriching my knowledge. If you had not written these two lines ; ” ಈ ಲೇಖನದಲ್ಲಿನ ಅವರ ಮಾತುಗಳನ್ನೆಲ್ಲಾ ಒಪ್ಪಲೇಬೇಕಾದ ಹಂಗು, ಪ್ರಮೇಯಗಳಿಲ್ಲದೆ ಮತ್ತು ವಿರೋಧಿಸುವ ಯಾವುದೇ ನೈತಿಕ ದೌರ್ಜನ್ಯಗಳಿಲ್ಲದೆ, ತಟಸ್ತವಾಗಿ ಓದಿದಾಗ…” all your sayings would have ended up with limited dimension, now the horizon is vast and enhancing too.

    ಪ್ರತಿಕ್ರಿಯೆ
  2. ಪು. ಸೂ . ಲಕ್ಷ್ಮೀನಾರಾಯಣ ರಾವ್

    ಲೇಖನ ಚೆನ್ನಾಗಿದೆ. ಫೇಸ್ಬುಕ್ ನಲ್ಲಿ ಕೊಟ್ಟಿರುವ ಸ್ಪಷ್ಟೀಕರಣವನ್ನು ಅವಧಿಗೂ ಲಗತ್ತಿಸುವುದು ಒಳ್ಳೆಯದು .

    ಪ್ರತಿಕ್ರಿಯೆ
  3. samyuktha

    ಒಂದು ಸಣ್ಣ ಸ್ಪಷ್ಟೀಕರಣ, ಅನಂತಮೂರ್ತಿಯವರ ಮಾತುಗಳು ಹೀಗಿವೆ – “ಕ್ರಿಸ್ತ ಧರ್ಮದ ಜೀವನದೃಷ್ಟಿ ಈ ಲೋಕ ಪಾಪಜನ್ಯವೆಂದರೆ, ಹಿಂದೂದೃಷ್ಟಿಯಲ್ಲಿ ಬೆಳೆದುಬಂದ ಮನೋಧರ್ಮ ಈ ಜೀವನವನ್ನು ಮುಖ್ಯವಾಗಿ ಆನಂದಜನ್ಯವೆಂದು ಬಗೆಯುತ್ತದೆ.” – ಈ ಸಾಲುಗಳು ನನ್ನ ಬರಹದಲ್ಲಿ ಸರಿಯಾದ ರೀತಿ ಕಂಡಿಲ್ಲ! ಕ್ಷಮಿಸಿ!

    ಪ್ರತಿಕ್ರಿಯೆ
  4. Rashmi

    chennagi baredidira..most of the time Ananthmurthygala barahagalu confuse maadi haakutte, sulabhakke dakkuvudilla…

    ಪ್ರತಿಕ್ರಿಯೆ
  5. Anil

    ಸಂಯುಕ್ತಾ ಅವರೆ,
    ಇದೀಗ ನಿಮ್ಮ ಲೇಖನ ಓದಿದೆ.
    ಇದೊಂದು ಯೋಚನೆಗೆ ಹಚ್ಚುವ ಉತ್ಕೃಷ್ಟ ಬರಹ. ಅನಂತಮೂರ್ತಿ ಅವರ ‘ಭಾರತೀಯ ಸಂಸ್ಕೃತಿ ಮತ್ತು ಲೇಖಕ’ ಹಾಗೂ ತೇಜಸ್ವಿ ಅವರ ‘‘ಕರ್ನಾಟಕ ಸಂಸ್ಕೃತಿ ವಿಶ್ಲೇಷಣೆ’ ಓದಿಲ್ಲವಾದರೂ ನಿಮ್ಮ ಬರಹದಿಂದ ಅದನ್ನು ಸ್ವಲ್ಪ ಅಳೆಯಬಹುದು ಅಂದುಕೊಂಡಿದ್ದೆನೆ. ನನ್ನ ಮಟ್ಟಿಗೆ ಹೇಳುವದಾದರೆ ಅನಂತಮೂರ್ತಿಯವರ ಚಿಂತನೆ,ವಿಮರ್ಶೆ ಅತ್ಯಂತ ತೂಕದ್ದು -ಪ್ರಾಯಶ ಅವರ ಕಥೆ,ಕಾದಂಬರಿಗಳಿಗಿಂತ ಸ್ವಲ್ಪ ಹೆಚ್ಚೆನೋ. ಮಹಾನ ಚಿಂತಕರಿಬ್ಬರೂ ‘ಇದಂ ಇಥ್ಥಂ’ ಬೇರೇನಿಲ್ಲಾ ಎಂದೇನು ಖಂಡಿತ ಹೇಳಿರಲಾರರು. ಸ್ಥೂಲವಾಗಿ ಮೂರ್ತಿಯವರ ಹೇಳಿಕೆ ನೋಡುವದಾದರೆ ೧) ಭಾರತೀಯ ಲೇಖಕರ ಮೇಲೆ ‘ಭಾರತೀಯ ಸಂಸ್ಕೃತಿ’ಯ ಸಂಬಂಧ ಅಲ್ಲಗಳೆಯಲಾಗದ್ದು. ೨) ಕ್ರಿಸ್ತ ಧರ್ಮದ ಪಾಪಜನ್ಯ ದೃಷ್ಟಿ -ಹಿಂದು ಧರ್ಮದ ಆನಂದೋಬ್ರಹ್ಮ ದೃಷ್ಟಿ – ಇಲ್ಲೂ ಜಾಸ್ತಿ ಗೊಂದಲಗಳೆನಿಲ್ಲ. ೩)ಯಾವುದೇ ಸಂಸ್ಕೃತಿ ಅಥವಾ ಧರ್ಮ ಸಂಪೂರ್ಣತೆಯನ್ನು ಹೊಂದಿರುವುದಿಲ್ಲ. ಗಟ್ಟಿಗೂ-ಟೊಳ್ಳಿಗೂ ಸಹಜ ಸಂಬಂಧವಿದೆ. ಒಂದನ್ನು ಇನ್ನೊಂದರಿಂದ ಪ್ರಕ್ಯೇಕಿಸಿ ಪರೀಕ್ಷಿಸುವುದು ಅಸಾಧ್ಯ” ನಿಸ್ಸಂದೇಹವಾಗಿಯೂ ನಿಜ. ೪)ಬಹುಪ್ರಭೇದಗಳಿಂದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ನಮ್ಮ ಭಾವ-ಸ್ವಭಾವಗಳು ಮೂಲದ ಒಳಿತಿನ ಕಾಳಜಿಗೆ ತುಡಿಯುತ್ತವೆ – ಈ ತುಡಿತದ ತರಂಗಗಳ ಆವರ್ತನಗಳು,ಅಲೆಯಳತೆಗಳು ಕಾಲಕಾಲಕ್ಕೆ ಬೇರೆ ಬೇರೆಯಾಗಿ ತೊರ್ಪಡಿಸಿಕೊಳ್ಳುವದು ಆಲೋಚನೆಯ ರೀತಿ,ಕ್ರಮಗಳು ಬೇರೆಯಾಗುವದು ಕೂಡಾ ಸರಿಯಾದ ನಿಲುವೆ. ೫) ದ್ವಿವಾದಗಳ ಛಾಯೆ, ಗುರುಹಿರಿಯರ ಭಕ್ತಿ ‘right on the money’ 6) ‘ನಮ್ಮ ವೇದ, ಉಪನಿಷತ್ತುಗಳು ಹೇಳಲಾಗದ ಅಂಶವೇ ಇಲ್ಲ’ ಎಂಬ ಗ್ರಹಿಕೆ ಅದರಿಂದ ಕಮ್ಮಿ ಯಾಗುವ ವೈಚಾರಿಕತೆ ಇದು ಕೂಡಾ ನೂರಕ್ಕೆ ನೂರು ಸತ್ಯವೇನೋ ಅನಿಸುತ್ತದೆ. ಈ ನಿಲವುಗಳಲ್ಲಿ ಯಾವದೆ ಸಂದೇಹಗಳು, ದ್ವಂದ್ವಗಳು ನನಗಂತೂ ಗೋಚರಿಸುತ್ತಿಲ್ಲಾ in fact ನನಗೂ ಹೀಗೆ ಅನಿಸಿದಿದ್ದೆ ಕೆಲವೊಮ್ಮೆ.ಈ ನಿಟ್ಟಿನಿಂದ ನೋಡಿದಾಗ ನನಗೆ ಯು.ಆರ್.ವಿ ಅವರು ಕುವೆಂಪು,ಬೇಂದ್ರೆ,ಅಡಿಗರ ಬಗ್ಗೆ ಃಎಳಿದ್ದು ನಿಜ ಎನಿಸುತ್ತವೆ.ಈ ಪುಸ್ತಿಕೆ ದಶಕಗಳ ಹಿಂದೆ ಬರೆದಿದ್ದರಿಂದ ಆ ಕಾಲಘಟ್ಟಕ್ಕೆ ಸರಿಹೊಂದುವ ವಿಚಾರಗಳಿವು. ಈಗೀಗ ಅನೇಕರು ಭಾರತದಾಚೆ ತಮ್ಮ ಜೀವನ ಕಳೆಯುವದರಿಂದ ‘ಭಾರತೀಯ ಸಂಸ್ಕೃತಿ’ ಯ ಪ್ರಭಾವ ಆ ಲೇಖಕರ ಮೇಲೆ ಹೇಗೆ ಆಗಿದೆ ಎನ್ನುವದು ಆಸಕ್ತಿಕರ ವಿಚಾರವಾಗಬಹುದು. I really enjoed your article and waiting for more.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಪು. ಸೂ . ಲಕ್ಷ್ಮೀನಾರಾಯಣ ರಾವ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: