ಸಂಪಾದಕರು ಕೊನೆಯ ಪ್ರಶ್ನೆ ಕೇಳಿದರು ‘‘ಸಾರ್…ಈ ಕೊಲೆಯ ಕುರಿತಂತೆ ಏನು ಹೇಳುತ್ತೀರಿ…?’’

b m basheer

ಬಿ ಎಂ ಬಷೀರ್

ಜ್ಞಾನಪೀಠ ಪ್ರಶಸ್ತಿ ವಿಜೇತರೂ, ಅಕಾಡೆಮಿಗಳ ಹಲವು ಗೌರವಗಳನ್ನು ತನ್ನದಾಗಿಸಿಕೊಂಡವರೂ ಆಗಿರುವ ಹಿರಿಯ ಕಾದಂಬರಿಕಾರ, ಚಿಂತಕ ಸದಾಶಿವರಾಯರು ಅಂದಿನ ದಿನಪತ್ರಿಕೆಯ ಮುಖ್ಯ ಸುದ್ದಿಯನ್ನು ಮೂರನೇಯ ಬಾರಿ ಓದುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲೂ ಒಂದೇ ತಲೆಬರಹ. ಎಂಟು ಕಾಲಂ ಸುದ್ದಿ. ‘‘ಖ್ಯಾತ ಚಿಂತಕ, ಲೇಖಕ ಎಂ.ಎಂ. ಕೊಟ್ರಪ್ಪ ಹತ್ಯೆ’’. ಈಗಾಗಲೇ ಹತ್ತಾರು ಫೋನುಗಳು ಆ ಕುರಿತಂತೆಯೇ ಬಂದಿವೆ.ಅವರು ಹೆಚ್ಚು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಎಲ್ಲ ಕರೆಗಳಿಗೂ ಚುಟುಕಾಗಿಯೇ ಉತ್ತರಿಸಿ, ಫೋನನ್ನು ಕತ್ತರಿಸುತ್ತಿದ್ದರು.

‘‘ಈ ಪತ್ರಿಕೆಗಳು ಸುಮ್ಮನೆ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತಾ ಇವೆ…ಇಲ್ಲವಾದರೆ ಈತನ ಇಷ್ಟು ದೊಡ್ಡ ಫೋಟೋ ಛಾಪಿಸುವ ಅಗತ್ಯವಿತ್ತೆ….’’ ಎಂದು ಅವರು ಗೊಣಗಿಕೊಂಡದ್ದು ಐದನೇ ಬಾರಿ. ‘‘ಇತ್ತೀಚೆಗೆ ಪತ್ರಿಕೆ ತುಂಬಾ ಕೊಲೆಗಳೇ ಕೊಲೆಗಳು….’’ ಎಂದು ಮತ್ತೊಮ್ಮೆ ಗೊಣಗಿಕೊಂಡರು.

 

‘‘ಸದಾ ವಿವಾದಾತ್ಮಕ ಹೇಳಿಕೆ ನೀಡುವುದು, ಸಂಶೋಧನೆಯ ಹೆಸರಿನಲ್ಲಿ ವಿವಾದಗಳನ್ನು ಬರೆಯುವುದು, ಸೃಷ್ಟಿಸೂದು ಕೊಟ್ರಪ್ಪನಿಗೆ ಒಂದು ಚಟ ಆಗಿತ್ತು…ಕಲೆಯನ್ನು ಕಲೆಯಾಗಿ ನೋಡಿ ಬರೆಯುವವರ ಕುರಿತಂತೆ ಒಂದು ಕೊಂಕು ಇಟ್ಟುಕೊಂಡಿದ್ದರು…’’ ತನ್ನ ತೀರಾ ಖಾಸಗಿ ಗೆಳೆಯರೊಂದಿಗೆ ಮಾತ್ರ ಇದನ್ನು ಹಂಚಿ ಕೊಂಡಿದ್ದರು ‘‘ಆದರೂ ಆತನ ಬರವಣಿಗೆಯಲ್ಲಿ ಪ್ರಾಮಾಣಿಕತೆಯಿತ್ತು…’’ ಎಂದೂ ಕೊನೆಗೆ ಸೇರಿಸಿದ್ದರು.

ಮೊಬೈಲ್ ಮತ್ತೆ ರಿಂಗಣಿಸಿತು. ‘ಸಮಾಜವಾಣಿ’ಯ ಸಂಪಾದಕರಿರಬೇಕು, ಅಭಿಪ್ರಾಯ ಕೇಳುವುದಕ್ಕೆ. ಎತ್ತಿಕೊಂಡರು ‘‘ಕೊಟ್ರಪ್ಪ ಅವರ ಸಾವು ಸಂಶೋಧನಾ ಲೋಕಕ್ಕೆ ಆಗಿರುವ ಅತಿ ದೊಡ್ಡ ನಷ್ಟ. ನನಗೆ ತುಂಬಾ ಆತ್ಮೀಯರಾಗಿದ್ದರು. ನನ್ನ ‘ಭುವನಾಭಿರಾಮ’ಕಾದಂಬರಿಯ ಬಗ್ಗೆ ವಾರದ ಹಿಂದೆ ಫೋನ್‌ನಲ್ಲಿ ಅರ್ಧಗಂಟೆ ಮಾತನಾಡಿದ್ದರು. ಅವರಿಗೆ ಆ ಕಾದಂಬರಿ ತುಂಬಾ ಇಷ್ಟವಾಗಿತ್ತು.’’ ಸಾಹಿತ್ಯ ಲೋಕದ ಸ್ವೋಪಜ್ಞತೆ…ಆನುಷಂಗಿಕ…ಅನುಸಂಧಾನ… ಹೀಗೆ ಒಂದಿಷ್ಟು ಪಾರಿಭಾಷಿಕ ಶಬ್ದಗಳನ್ನಿಟ್ಟು ಪತ್ರಕರ್ತನ ಜೊತೆಗೆ ಸಂಕೀರ್ಣವಾಗಿ, ತೂಕದ ಮಾತುಗಳನ್ನಾಡಿದರು.

ಸಂಪಾದಕರು ಕೊನೆಯ ಪ್ರಶ್ನೆ ಕೇಳಿದರು ‘‘ಸಾರ್…ಈ ಕೊಲೆಯ ಕುರಿತಂತೆ ಏನು ಹೇಳುತ್ತೀರಿ…?’’

ಸದಾಶಿವರಾಯರು ಸಣ್ಣಗೆ ಕೆಮ್ಮಿದರು. ಪೋನ್‌ನಲ್ಲಿ ಸಣ್ಣದೊಂದು ಡಿಸ್ಟರ್ಬೆನ್ಸ್…‘‘ನೀವು ಮಾತನಾಡುತ್ತಿರುವುದು ಸರಿಯಾಗಿ ಕೇಳಿಸುತ್ತಾ ಇಲ್ಲ…ಇನ್ನೊಮ್ಮೆ ಕೇಳಿ…’’ ಎಂದರು.

ಸಂಪಾದಕರು ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಜೋರಾಗಿ ಕೇಳಿದರು.

‘‘ನೋಡಿ…ಹಿಂಸೆಯನ್ನು ಗಾಂಧೀಜಿ ವಿರೋಧಿಸಿದ್ದರು. ಹಿಂಸೆಯೆನ್ನುವುದು ವರ್ತಮಾನದ ವಾಸ್ತವಿಕ ತಳಹದಿಯಲ್ಲಿ ಬೇರೆ ಬೇರೆ ರೂಪಗಳನ್ನು, ವ್ಯಾಖ್ಯಾನಗಳನ್ನು ಪಡೆದುಕೊಳ್ಳುತ್ತಿರುವುದು….’’

ಸಂಪಾದಕರು ಅರ್ಥವಾಗದೆ ಮತ್ತೊಮ್ಮೆ ಪ್ರಶ್ನಿಸಿದರು ‘‘ಸಾರ್…ಈ ಕೊಲೆಯ ಕುರಿತಂತೆ ನಿಮ್ಮ ಅಭಿಪ್ರಾಯವೇನು…?’’

ಸದಾಶಿವರಾಯರು ಮತ್ತೆ ಸಣ್ಣಗೆ ಕೆಮ್ಮಿದರು. ‘‘ಸಾಹಿತಿಗಳು ಕೊಲೆಯ ಬಗ್ಗೆ ಏನು ಮಾತನಾಡುವುದು…? ಪೊಲೀಸರು ಅದರ ಕುರಿತಂತೆ ಮಾತನಾಡಬೇಕು. ನಮ್ಮ ಕೆಲಸ ಬರೆಯುವುದು. ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು…ಆದರೆ ಹಿಂಸೆ ಸಲ್ಲ ಎನ್ನುವುದನ್ನು ನಾನು ಗಟ್ಟಿಯಾಗಿ ಹೇಳಲು ಇಷ್ಟ ಪಡುತ್ತೇನೆ….’’ ಎಂದು ಫೋನ್ ಕತ್ತರಿಸಿದರು.

ಕೆಲವು ಇಂಗ್ಲಿಷ್ ಪತ್ರಿಕೆಗಳ, ಚಾನೆಲ್‌ಗಳ ಜೊತೆಗೆ ರಾಯರು ಸುದೀರ್ಘವಾಗಿ ಮಾತನಾಡಿದರು. ಕೊಟ್ರಪ್ಪ ಅವರ ವಿಮರ್ಶೆಯ ಹಿರಿಮೆಯನ್ನು ಕೊಂಡಾಡಿದರು. ತನ್ನ‘ಭುವನಾಭಿರಾಮ’ ಕಾದಂಬರಿಯ ಕುರಿತಂತೆ ಕೊಟ್ರಪ್ಪ ಅವರಿಗೆ ಇದ್ದ ಅಗಾಧ ಪ್ರೀತಿಯನ್ನು ಹಂಚಿಕೊಂಡರು. ಇತ್ತೀಚೆಗಷ್ಟೇ ಒಂದೇ ವೇದಿಕೆಯನ್ನು ಇಬ್ಬರೂ ಹಂಚಿಕೊಂಡದ್ದು ನೆನಪಿಸಿಕೊಂಡರು. ‘ಸಮಾಜ ಸೌಜನ್ಯವನ್ನು, ಸೌಹಾರ್ದವನ್ನು ಮರೆಯುತ್ತಿರುವುದರ ಬಗ್ಗೆ’ದುಃಖ ವ್ಯಕ್ತಪಡಿಸಿದರು. ‘ಕೊಟ್ರಪ್ಪ ಅವರು ಇನ್ನೂ ಇರಬೇಕಾಗಿತ್ತು, ಅವರ ಸಾವು ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ’ ಎಂದರು.

ಸದಾಶಿವರ ರಾಯರು ಗೊಂದಲದಲ್ಲಿದ್ದರು. ತಾನೀಗ ಯಾವ ರೀತಿ ಮಾತನಾಡಬೇಕು ಎನ್ನುವುದರ ಬಗ್ಗೆಯೇ ಅವರಿಗೆ ಸ್ಪಷ್ಟವಿರಲಿಲ್ಲ. ಇನ್ನೂ ಒಂದಿಷ್ಟು ಗಟ್ಟಿಯಾಗಿ ಮಾತನಾಡೋಣವೆ? ಆದರೆ ಸಾಹಿತ್ಯ ಲೋಕ ಕೊಟ್ರಪ್ಪ ಅವರ ಸಾವನ್ನು ನಿಜಕ್ಕೂ ಗಂಭೀರವಾಗಿ ತೆಗೆದುಕೊಂಡಿದೆಯೆ? ಅಥವಾ ಕೊಲೆಯ ರೋಚಕತೆಯನ್ನು ಅವರು ಆರಾಧಿಸುತ್ತಿದ್ದಾರೆಯೆ? ಮಾಧ್ಯಮಗಳು ಆಸಕ್ತಿವಹಿಸುತ್ತಿರುವುದನ್ನು ನೋಡಿದರೆ ಸಾಹಿತ್ಯ ವಲಯ ಗಂಭೀರವಾಗಿ ತೆಗೆದುಕೊಂಡಿರಲೂ ಸಾಕು. ಅಥವಾ ಮಾಧ್ಯಮಗಳೇ ಇದನ್ನೊಂದು ದೊಡ್ಡ ಸುದ್ದಿ ಮಾಡಲು ಹವಣಿಸುತ್ತಿವೆಯೆ? ಕೊಟ್ರಪ್ಪ ಅವರಿಗೆ ಮಾಧ್ಯಮಗಳ ಜೊತೆಗೆ ಅಷ್ಟೇನು ಒಳ್ಳೆಯ ಸಂಬಂಧವಿದ್ದಿರಲಿಲ್ಲ. ಆದರೂ ಮಾಧ್ಯಮಗಳೇಕೆ ಇಷ್ಟು ಆಸಕ್ತಿಯಿಂದ ಕೊಲೆಯ ಹಿಂದೆ ಬಿದ್ದಿವೆ? ಬಹುಶಃ ಕೊಲೆಯ ರೋಚಕತೆಯೇ ಅಂತಹದು.ಕೊಟ್ರಪ್ಪನಿಗೆ ಎರಡು ಬಾರಿ ಲಘು ಹೃದಯಾಘಾತವಾಗಿತ್ತು. ಒಂದು ವೇಳೆ ಹೃದಯಾಘಾತದಿಂದ ಸತ್ತಿದ್ದರೆ ಇವರೆಲ್ಲ ಇಷ್ಟು ಗದ್ದಲ ಎಬ್ಬಿಸುತ್ತಿದ್ದರೆ? ಅವನ ಎಲ್ಲ ಸಂಶೋಧನೆಗಳು, ಕೃತಿಗಳು ನನ್ನ ಒಂದು ‘ಭುವನಾಭಿರಾಮ’ ಕಾದಂಬರಿಗೆ ಸರಿಗಟ್ಟ ಬಲ್ಲುದೆ? ಮೂರು ತಿಂಗಳ ಹಿಂದೆ ನನಗೆ ಯಾರೋ ಜೀವ ಬೆದರಿಕೆ ಒಡ್ಡಿದ್ದನ್ನು ಪತ್ರಿಕೆಗಳೆಲ್ಲ ಒಳಪುಟಗಳಲ್ಲಿ ‘ಸಿಂಗಲ್ ಸುದ್ದಿ’ಯಾಗಿ ಛಾಪಿಸಿದ್ದರು. ಬಹುಶಃ ಕೊಟ್ರಪ್ಪ ಪತ್ರಿಕೆಯೊಳಗೆ ಗುಟ್ಟಾಗಿ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿರಬೇಕು. ಅಥವಾ ಅವನ ಜಾತಿಯೂ ಈ ಮಟ್ಟಿನ ಪ್ರಚಾರಕ್ಕೆ ಕಾರಣವಾಗಿರಬಹುದು. ಜಾತಿಯವರೆಲ್ಲ ಒಂದಾಗಿರಬೇಕು. ಇಷ್ಟು ಕಾಳಜಿ ನನ್ನ ಜಾತಿಯವರಿಗೆ ಎಲ್ಲಿರಬೇಕು? ಏನಿದ್ದರೂ ಒಳಜಗಳದೊಳಗೆ ಸತ್ತು ಹೋಗಿದ್ದಾರೆ. ‘ಭುವನಾಭಿರಾಮ’ ಕಾದಂಬರಿಗೆ ಪ್ರಶಸ್ತಿ ಬರುವುದನ್ನು ತಡೆಯಲು ನನ್ನ ಜಾತಿಯ ಸಾಹಿತಿಗಳೇ ಅದೆಷ್ಟು ರಾಜಕೀಯ ಮಾಡಿದ್ದರು? ಸೀದಾ ಎದ್ದು ಮಲಗುವ ಕೋಣೆಗೆ ಹೋದರು. ಗೋಡೆಗೆ ಅಂಟಿಸಿರುವ ತನ್ನ ಪ್ರಶಸ್ತಿಯ ಫಲಕಕಳನ್ನೊಮ್ಮೆ ನೋಡಿದರು. ಜೊತೆಗೆ ಗೋಡೆಯಲ್ಲಿ ತೂಗುತ್ತಿರುವ ಚಿನ್ನದ ಪದಕ. 30 ಗ್ರಾಂ ಚಿನ್ನದಿಂದ ಮಾಡಿದ ಪದಕ. ಸ್ವಲ್ಪ ಹಾಗೆಯೇ ದಿಟ್ಟಿಸಿ, ಸುಸ್ತಾದವರಂತೆ ಹೋಗಿ ಮಂಚಕ್ಕೆ ಒರಗಿದರು.

ಮತ್ತೆ ಮೊಬೈಲ್ ರಿಂಗಣಿಸಿತು. ಎತ್ತುವುದೋ? ಬೇಡವೋ? ಎನ್‌ಡಿ ಟಿವಿಯವರಿಂದ ಇನ್ನೂ ಫೋನ್ ಬಂದಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಒಬ್ಬ ನನ್ನದೇ ಶಿಷ್ಯ. ಅವನ ಕಾಲ್ ಆಗಿರಲೂ ಬಹುದು ಎಂದು ಎತ್ತಿದರು. ‘‘ಸಾರ್…ನಾವು ಸಾರ್…ಜನಪರ ಸಂಘರ್ಷ ಸಮಿತಿಯವರು. ಕೊಟ್ರಪ್ಪ ಅವರ ಕೊಲೆಯನ್ನು ಖಂಡಿಸಿ, ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿ, ಇದು ಅಭಿವ್ಯಕ್ತಿಯ ಮೇಲೆ ನಡೆದಿರುವ ಭಾರೀ ಹಲ್ಲೆ ಎಂದು ಟೀಕಿಸಿ ಇವತ್ತು ಸಂಜೆ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ. ನೀವು ಬರಲೇ ಬೇಕು ಸಾರ್…’’

ಸದಾಶಿವರಾಯರು ಹೇಳಿದರು ‘‘ಕೊಟ್ರಪ್ಪ ಅವರ ಕೊಲೆಯ ಸುದ್ದಿ ಕೇಳಿದ ಹೊತ್ತಿನಿಂದ ನನ್ನ ಆರೋಗ್ಯ ಸ್ವಲ್ಪ ಸರಿಯಿಲ್ಲ. ಯಾಕೋ ಎದೆಯೊಳಗೆ ಸಣ್ಣ ನೋವು….ಮತ್ತೆ ನೋಡಿ…ಸಾಹಿತ್ಯ ಮತ್ತು ರಾಜಕೀಯವನ್ನು ನಾವು ಬೇರೆ ಬೇರೆ ಮಾಡಿ ನೋಡಬೇಕು.ಮುಖ್ಯವಾಗಿ ಕೊಲೆ ಯಾಕೆ ನಡೆದಿದೆ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ ನಂತರವೇ ಪ್ರತಿಭಟನೆ ನಡೆಸಿದರೆ ಚೆನ್ನ. ಮೊದಲು ಪೊಲೀಸರು ಅವರ ಕೆಲಸ ಮಾಡಲು ನಾವು ಅವಕಾಶ ನೀಡೋಣ. ನಾವು ತೀರ್ಪುಕೊಡುವುದು ಬೇಡ. ನಾವು ಸಂಘಪರಿವಾರದವರ ತರಹ ವರ್ತಿಸಬಾರದು ನೋಡಿ….ನಮ್ಮಿಂದ ಅವರು ಕಲಿಯಬೇಕು. ನಾವು ಸಹನೆಯನ್ನು ಪಾಲಿಸಬೇಕು. ಕಾನೂನು ವ್ಯವಸ್ಥೆ ಸುಗಮವಾಗುವುದಕ್ಕೆ ಅವಕಾಶ ನೀಡಬೇಕು….ನಿಮ್ಮ ಕಾಳಜಿ ನನಗೆ ತುಂಬಾ ಖುಷಿ ಕೊಟ್ಟಿದೆ….ನೋಡಿ…ನಾನು ಬರುತ್ತಿದ್ದೆ…ಆದರೆ ಆರೋಗ್ಯ…’’

‘‘ಪರವಾಗಿಲ್ಲ ಸಾರ್. ನಿಮ್ಮ ನೈತಿಕ ಬೆಂಬಲ ನಮ್ಮ ಜೊತೆಗಿದ್ದರೆಸಾಕು….’’

‘‘ಖಂಡಿತ. ಒಮ್ಮೆ ಮನೆಗೆ ಬನ್ನಿ ನೀವು. ತುಂಬಾ ಮಾತನಾಡಲಿಕ್ಕಿದೆ. ನನ್ನ ಭುವನಾಭಿರಾಮ ಕಾದಂಬರಿ ಸಿಕ್ಕಿದೆಯಲ್ಲ ನಿಮಗೆ…ಕೊಟ್ರಪ್ಪ ಆ ಕಾದಂಬರಿಯನ್ನು ತುಂಬಾ ಹಚ್ಚಿಕೊಂಡಿದ್ದರು. ಆ ಕಾದಂಬರಿಯನ್ನು ಅವರು ಇಷ್ಟ ಪಟ್ಟಿದ್ದರು ಎನ್ನುವ ಕಾರಣಕ್ಕಾಗಿಯೇ ನಾನು ಈಗ ಇಷ್ಟ ಪಡುತ್ತಿದ್ದೇನೆ…’’ ಸದಾಶಿವರಾಯರ ಕಂಠ ಗದ್ಗದವಾಯಿತು. ತುಸು  ಹೊತ್ತು ಮೌನ.
‘‘ನೋಡಿ ನನಗೆ ಮಾತನಾಡಲು ತುಂಬಾ ಕಷ್ಟವಾಗುತ್ತಿದೆ. ಇನ್ನೊಮ್ಮೆ ಸಿಗೋಣ’’ ಎಂದು ಸದಾಶಿವರಾಯರು ಫೋನ್ ಕತ್ತರಿಸಿದರು. ಸ್ವಲ್ಪ ಹೊತ್ತು ದಿಂಬಿಗೆ ತಲೆಯಾನಿಸಿ ಕಣ್ಮುಚ್ಚಿದರು. ಕೊಟ್ರಪ್ಪನ ನಗು ಕಣ್ಣ ಮುಂದೆ ಬಂತು.
‘‘ಮಗುವಿನ ಹಾಗೆ ನಗುತ್ತಾನೆ ಬೋ…ಮಗ. ಒಳಗೆ ಇರುವ ಕೊಂಕು ಗೊತ್ತಾಗುವುದೇ ಇಲ್ಲ.ಎಲ್ಲಿಂದ ಕಲಿತುಕೊಂಡು ಬಂದಿದ್ದಾನೋ…’’ ವಾರದ ಹಿಂದೆ ತನ್ನ ಆತ್ಮೀಯರ ಜೊತೆಗೆ ಕೊಟ್ರಪ್ಪ ಕುರಿತು ಹಂಚಿಕೊಂಡಿದ್ದರು.
‘‘ಆದರೂ ಬರೆದದ್ದಕ್ಕಾಗಿ ಒಬ್ಬನನ್ನು ಕೊಂದು ಹಾಕುವುದೆಂದರೆ?’’ ಮಲಗಿದಲ್ಲೇ ತನಗೆ ತಾನೆ ಗೊಣಗಿಕೊಂಡರು.

ಆಸ್ತಿಕಲಹ ಕೊಲೆಗೆ ಕಾರಣವಾಗಿರಬಹುದೆ? ಸರಕಾರದಿಂದ ಯಾವುದಾದರೂ ಖಾಲಿ ಸೈಟ್ ಪಡೆದುಕೊಂಡಿದ್ದಾನೆಯೆ? ಬೆಂಗಳೂರಿನಲ್ಲಿ ಸೈಟ್ ಮಾರುವ ವಿಷಯದಲ್ಲಿ ಯಾವುದಾದರೂ ಮಾಫಿಯಾವನ್ನು ಎದುರು ಹಾಕಿಕೊಂಡಿರಬಹುದೆ? ಎಂದೂ ಯೋಚಿಸಿದ್ದರು. ಆದರೆ ಅವನ ಹೆಸರಲ್ಲಿ ಯಾವ ಸೈಟೂ ಇಲ್ಲ ಎನ್ನುವುದು ವರ್ಷದ ಹಿಂದೆಯೇ ಸದಾಶಿವರಾಯರಿಗೆ ಗೊತ್ತಿತ್ತು. ಅದು ಭುವನಾಭಿರಾಮಯ ಕಾದಂಬರಿ ಪ್ರಿಂಟಿಗೆ ಹೋದ ಹೊತ್ತು. ಅದೇ ವರ್ಷ ಒಂದು ವೇದಿಕೆಯಲ್ಲಿ ಕುಶಲೋಪರಿ ಮಾತನಾಡುವಾಗ ಸದಾಶಿವರಾಯರು ಕೇಳಿದ್ದರು ‘‘ನೋಡಿ…ಈ ಮುಖ್ಯಮಂತ್ರಿಗಳು ಸಮಾಜವಾದಿ. ಒಂದಿಷ್ಟು ತತ್ವ ಸಿದ್ಧಾಂತದ ಮೇಲೆ ನಂಬಿಕೆಯಿಟ್ಟವರು. ಸಮಾಜವಾದಿ ಬರಹಗಾರರ ಮೇಲೆ ತುಂಬಾ ಪ್ರೀತಿಯಿದೆ. ನಾನು ಬೇಕಾದರೆ ಅವರಲ್ಲಿ ಮಾತನಾಡಿ ಬೆಂಗಳೂರಿನಲ್ಲಿ ಒಂದು ಸೈಟ್ ತೆಗೆಸಿಕೊಡುವೆ…ಮಕ್ಕಳಿಗಾದೀತು…ನಮ್ಮಿಂದ ಅವರಿಗೆ ಇನ್ನೇನು ಕೊಡಲು ಸಾಧ್ಯ.ಸಾಹಿತ್ಯ, ಬರಹ, ಹೋರಾಟ ಎಂದು ಬದುಕನ್ನೆಲ್ಲ ಹೀಗೇ ಕಳೆದಿದ್ದೇವೆ. ನಿಮಗೆ ಇಬ್ಬರು ಹೆಣ್ಣು ಮಕ್ಕಳು ಬೇರೆ…’’

ಕೊಟ್ರಪ್ಪ ಮಗುವಿನಂತೆ ನಕ್ಕಿದ್ದರು. ಯಾವ ಉತ್ತರವನ್ನೂ ಕೊಡಲಿಲ್ಲ. ‘‘ಒಳಗೊಳಗೇ ಆಸೆಯಿದೆ. ಬಾಯಿ ಬಿಟ್ಟು ಕೇಳಲು ಈತನ ಈಗೋ ಬಿಡುವುದಿಲ್ಲ’’ ಸದಾಶಿವರ ರಾಯರು ಒಳಗೊಳಗೆ ಮಸೆದುಕೊಂಡಿದ್ದರು.

‘‘ಏನು ಮುಖ್ಯಮಂತ್ರಿ ಜೊತೆ ಮಾತನಾಡಲ?’’ ಮತ್ತೊಮ್ಮೆ ಕೇಳಿದ್ದರು ಸದಾಶಿವರಾಯರು.

‘‘ರಾಯರೇ…ಈಗ ಇರುವುದರಲ್ಲಿ ನಾನು ಸುಖವಾಗಿದ್ದೇನೆ…ಹೆಣ್ಣು ಮಕ್ಕಳು ನನಗಿಂತ ಗಟ್ಟಿಯಾಗಿದ್ದಾರೆ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದಾರೆ. ನನ್ನ ಪುಸ್ತಕಗಳೂ ನನಗೆ ತುಂಬಾ ತೃಪ್ತಿಕೊಟ್ಟಿವೆ. ಈ ಸೈಟು ಎಲ್ಲ ಇಟ್ಟುಕೊಂಡು ನಾನೇನು ಮಾಡಲಿ. ಅದರಲ್ಲೂ ಮುಖ್ಯಮಂತ್ರಿಯಿಂದ ದೊರಕುವ ಏನೂ ನನಗೆ ಬೇಡ…ನಿಮ್ಮ ಕಾಳಜಿಗೆ ಕೃತಜ್ಞತೆಗಳು…’’ಸದಾಶಿವರಾಯರು ಒಳಗೇ ಕುದ್ದು ಹೋಗಿದ್ದರು.

ಮನೆಯಲ್ಲೂ ಏನೂ ತಕರಾರು ಇರುವ ಹಾಗೆ ಕಾಣುವುದಿಲ್ಲ. ಅವರ ಸಂಶೋಧನೆ ಕೆಲವು ಮಠಾಧೀಶರನ್ನು, ಕೆಲವು ಧಾರ್ಮಿಕ ರಾಜಕೀಯ ಶಕ್ತಿಗಳನ್ನು ಕೆರಳಿಸಿದ್ದು, ಅವರ ಅಸ್ತಿತ್ವವನ್ನೇ ಅಲುಗಾಡಿಸಿದ್ದು ನಿಜ. ಆದರೂ ಕೊಂದು ಹಾಕುವುದೆಂದರೆ?
‘ಸಂಜೆ ಟೌನ್ ಹಾಲ್ ಮುಂದೆ ನಡೆಯುವ ಪ್ರತಿಭಟನೆಗೆ ಹೋದರೆ ಹೇಗೆ?’ ಎಂದು ಯೋಚಿಸಿದರು.
‘ಬೇಡ. ಒಂದಿಷ್ಟು ಕಾದು ನೋಡೋಣ…’ ತನಗೆ ತಾನೆ ಹೇಳಿಕೊಂಡರು. ಯಾಕೋ ಗಂಟಲು ಕಟ್ಟಿದಂತಾಯಿತು. ಎದ್ದು ಕೂತರು. ಶತಪತ ಅತ್ತಿಂದಿತ್ತ ನಡೆದಾಡತೊಡಗಿದರು.

ಅಷ್ಟರಲ್ಲಿ ಅವರ ಗಮನ ತನ್ನ ಅಕಾಡೆಮಿ ಪ್ರಶಸ್ತಿಯ ಪದಕದ ಕಡೆ ಹರಿಯಿತು. ಆವರೆಗೆ ಗಮನಕ್ಕೆ ಬಾರದ ಏನೋ ಆ ಪದಕದಲ್ಲಿ ಕಂಡಂತಾಯಿತು. ಹತ್ತಿರ ಹೋದರು. ಪದಕದ ಸುತ್ತ ಅದೇನೋ ಕೆಂಪಾಗಿ ಕೆನೆಕಟ್ಟಿದೆ. ‘ಆಗ ನೋಡಿದಾಗ ನನ್ನ ಗಮನಕ್ಕೆ ಬಂದಿರಲಿಲ್ಲವಲ್ಲ.ಏನಿದು?’ ಎಂದು ಗೊಣಗುತ್ತಾ ಮತ್ತೊಮ್ಮೆ ಕಣ್ಣ ಬಳಿ ತಂದರು.
‘‘೩೦ ಗ್ರಾಮ್‌ನ ಪ್ಯೂರ್ ಚಿನ್ನ’’ ಎಂದು ಪತ್ನಿ ಉಜ್ಜಿ ನೋಡಿ ಹೇಳಿದ್ದಳು. ಬಣ್ಣ ಹೋಗುವ ಸಾಧ್ಯತೆಯೇ ಇಲ್ಲ. ಆದರೂ ಇದೇನಿದು? ಮೆಲ್ಲಗೆ ಆ ಕೆಂಪು ಪದರವನ್ನು ಮುಟ್ಟಿದರು. ಕೆಂಪು ಕೈಗೆ ಅಂಟಿಕೊಂಡಿತು. ಅರೆ! ಕೈಯಿಂದ ಉಜ್ಜಿದರೆ ಕೈಗೇ ಅಂಟಿಕೊಳ್ಳುತ್ತಿದೆ. ಮುಟ್ಟಿದ ಬೆರಳೂ ಕೆಂಪಾಗಿ ಬಿಟ್ಟಿದೆ. ಮೂಗಿನ ಬಳಿ ತಂದರು.
‘ಮೈ ಗಾಡ್!’ ರಕ್ತದ ವಾಸನೆ!

ಕೈಯಲ್ಲಿದ್ದ ಪದಕ ಕೈಯಿಂದ ಜಾರಿ ಬಿತ್ತು. ಬಾಗಿ ಎತ್ತಿಕೊಂಡರು. ಇದು ಹೇಗೆ ಇದರ ಮೇಲೆ ರಕ್ತ ಅಂಟಿಕೊಂಡಿದೆ? ಸದಾಶಿವರಾಯರಿಗೆ ಅರ್ಥವಾಗಲಿಲ್ಲ. ಪದಕದೊಂದಿಗೆ ಬಚ್ಚಲು ಮನೆಗೆ ತೆರಳಿದರು. ನೀರು ಸುರಿದು ಅದನ್ನು ಉಜ್ಜಿತೆಗೆಯುವ ಪ್ರಯತ್ನ ಮಾಡಿದರು. ಇಲ್ಲ. ಪದಕದಿಂದ ಬಣ್ಣವನ್ನು ಅಳಿಸಲು ಆಗುತ್ತಿಲ್ಲ. ಬದಲಿಗೆ ಕೈಗೂ ಆ ರಕ್ತದ ಬಣ್ಣ ಅಂಟಿಕೊಳ್ಳುತ್ತಿದೆ. ಮತ್ತೆ ಕೋಣೆಗೆ ಬಂದರು. ಬಿಳಿ ಬಟ್ಟೆಯಿಂದ ಉಜ್ಜ ತೊಡಗಿದರು.ಬಟ್ಟೆ ಕೆಂಪಾಯಿತೇ ಹೊರತು, ಬಣ್ಣ ಅಳಿಯಲಿಲ್ಲ. ಅರೆ! ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿದೆ.ಕೆಂಪಾದ ಕೈಯನ್ನು ಮುಗಿನ ಬಳಿ ತಂದರು. ಹೌದು. ರಕ್ತದ್ದೇ ವಾಸನೆ. ಈಗ ಮೊದಲಿಗಿಂತಲೂ ಹೆಚ್ಚಿದೆ. ಹೊಟ್ಟೆ ತೊಳಸಿದಂತಾಯಿತು. ನಿಧಾನಕ್ಕೆ ವಾಸನೆ ಇಡೀ ಕೋಣೆಯನ್ನು ಆವರಿಸಿಕೊಳ್ಳುತ್ತಿದೆಯೆ? ಗಾಬರಿಯಿಂದ ಪದಕವನ್ನು ಮಂಚದ ಮೇಲಿಟ್ಟು,ಕೋಣೆಯಿಂದ ಹೊರ ಬಂದರು.

ಹೊರಗೆ ಸ್ವಲ್ಪ ಪರವಾಗಿಲ್ಲ. ಅಥವಾ ಇದೆಲ್ಲ ನನ್ನ ಕಲ್ಪನೆಯೇ? ಮತ್ತೆ ಕೈಯನ್ನು ನೋಡಿದರು. ಕೈ ಕೆಂಪಾಗಿಯೇ ಇದೆ. ಮರಳಿ ಕೋಣೆ ಹೊಕ್ಕರು. ಓಹ್. ವಾಸನೆ ಹೆಚ್ಚುತ್ತಿದೆ.ಪದಕದ ಮೇಲಿನ ರಕ್ತ ಹಾಗೆಯೇ ಇದೆ. ಅಷ್ಟರಲ್ಲಿ ಫೋನ್ ರಿಂಗಣಿಸತೊಡಗಿತು. ಎನ್‌ಡಿ ಟಿವಿಯವರಿರಬಹುದೆ? ಎತ್ತಿಕೊಂಡರು. ಆ ಕಡೆಯಿಂದ ಸಮಕಾಲೀನ ಸಾಹಿತಿ, ಸ್ನೇಹಿತ  ಅನಂತ ಸುಬ್ಬರಾಯರು…‘‘ನಿಮಗೆ ಗೊತ್ತಾಯಿತಾ?’’

‘‘ಎಂತ…?’’ ಕೇಳಿದರು.

‘‘ಅದೇ ಕೊಟ್ರಪ್ಪನವರ ಕೊಲೆಯನ್ನು ಖಂಡಿಸಿ ದಿಲ್ಲಿಯ ಪ್ರಪುಲ್ಲ ದೇಸಾಯಿಯವರು ತಮ್ಮ ಜ್ಞಾನಪೀಠ ಪ್ರಶಸ್ತಿಯನ್ನು ವಾಪಾಸ್ ಮಾಡಿದರಂತೆ…’’

ಸದಾಶಿವರಾಯರು ಸಿಡಿದರು ‘‘ನೋಡಿ…ಜ್ಞಾನಪೀಠ ಪ್ರಶಸ್ತಿ ನೀಡುವುದು ಒಂದು ಖಾಸಗಿ ಸಂಸ್ಥೆ. ಅದು ಸರಕಾರವಲ್ಲ. ಅವರು ತಪ್ಪು ಗುರಿ ಇಡುತ್ತಿದ್ದಾರೆ. ನಾನು ಅವರಿಗೆ ಫೋನ್ ಮಾಡಿ ಹೇಳುವೆ. ಇದು ಅಪ್ರಬುದ್ಧ, ಅವಿವೇಕದ ನಿರ್ಧಾರ.  ಸುಮ್ಮನೆ ಪ್ರಚಾರದ ಖಯಾಲಿ ಆ ದೇಸಾಯಿಗೆ. ನನ್ನ ಜೊತೆಗೆ ಸ್ಪರ್ಧಿಸುವ ಹೊಸ ದಾರಿಯನ್ನು ಆರಿಸಿಕೊಂಡಿದ್ದಾನೆ ಆತ. ಮೊದಲಿಂದಲೂ ಅವನಿಗೆ ನನ್ನನ್ನು ಕಂಡರೆ ಅಷ್ಟಕ್ಕಷ್ಟೇ….’’ಎಂದು ಫೋನ್‌ನ್ನು ಕತ್ತರಿಸಿದರು.

ದೇಸಾಯಿ ಪ್ರಶಸ್ತಿಯನ್ನು ಹಿಂದಿರುಗಿಸಿದನೆ? ಎಷ್ಟು ದೊಡ್ಡ ನಿರ್ಧಾರ! ಅಷ್ಟೂ ಮೊತ್ತವನ್ನೂ,ಆ ಚಿನ್ನದ ಪದಕವನ್ನೂ ವಾಪಾಸ್ ಮಾಡಿರಬಹುದೆ? ಛೆ, ನಾನೇ ಮೊದಲು ಇದನ್ನು ಮಾಡಬೇಕಾಗಿತ್ತು. ಇನ್ನು ಮರಳಿಸಿದರೆ, ಆತನನ್ನು ಹಿಂಬಾಲಿಸಿದಂತಾಗುತ್ತದೆ. ಅವನು ಈಗ ಮುಸಿ ಮುಸಿ ನಗುತ್ತಿರಬಹುದು. ಪ್ರಫುಲ್ಲ ದೇಸಾಯಿಗೆ ಫೋನ್ ಮಾಡಿದರೆ ಹೇಗೆ?ನಿರ್ಧಾರವನ್ನು ಬದಲಿಸಲು ಹೇಳಿದರೆ? ಹಾಗೆ ಹೇಳಿದರೆ ಅವನು ಇನ್ನಷ್ಟು ಗಟ್ಟಿಯಾಗಬಹುದು. ಅಥವಾ ‘ಕೊಟ್ರಪ್ಪನ ಕೊಲೆಗೆ ಸಾಹಿತ್ಯದ ಜೊತೆಗೆ ಸಂಬಂಧವಿಲ್ಲ.ಬೇರೆ ಖಾಸಗಿ ಕಾರಣಗಳೂ ಇರಬಹುದು’ ಎಂದು ದೇಸಾಯಿಗೆ ಹೇಳಿದರೆ? ಆಗಲೂ ಅವನು ಪ್ರಶಸ್ತಿ ವಾಪಸ್ ಕೊಡಬಹುದೆ? ಅಥವಾ ಅದನ್ನು ಕರ್ನಾಟಕದ ಲೇಖಕರ ಜೊತೆಗೆ ಹಂಚಿಕೊಂಡು ನನ್ನ ವಿರುದ್ಧ ಸಾಹಿತಿಗಳನ್ನು ಎತ್ತಿ ಕಟ್ಟಿದರೆ? ಮೊದಲೇ ಅವನಿಗೆ ನನ್ನನ್ನು ಕಂಡರೆ ಆಗುವುದಿಲ್ಲ. ಅವನಿಗೆ ಜ್ಞಾನಪೀಠ ಪ್ರಶಸ್ತಿ ತಡವಾಗಿ ಬರಲು ನಾನು ಕಾರಣ ಎಂದು ಸುಳ್ಳು ಸುಳ್ಳೇ ಎಲ್ಲರೊಂದಿಗೂ ಹೇಳಿಕೊಂಡಿದ್ದ. ಅರೆ! ಇದೇನಿದು. ವಾಸನೆ ಇನ್ನಷ್ಟು ಗಾಢವಾಗುತ್ತಿದೆ. ಇದು ಬರೇ ರಕ್ತದ ವಾಸನೆ ಅಂತನಿಸುತ್ತಿಲ್ಲ. ವಾಸನೆ ಬರುತ್ತಿರುವುದು ಪದಕದಿಂದ ಎಂದು ನಾನು ಸುಖಾಸುಮ್ಮನೆ ನಂಬಿದ್ದೆ. ಎಲ್ಲೋ ಇಲಿ ಸತ್ತು ಬಿದ್ದಿದೆ. ಅದರ ಕೊಳೆತ ವಾಸನೆ. ರಾಯರು ಕಿಟಕಿಗಳನ್ನೆಲ್ಲ ತೆರೆದಿಟ್ಟರು. ವಾಸನೆ ಹೊರಗಿನದಲ್ಲ,ಒಳಗಿನದು ಎಂದು ಸ್ಪಷ್ಟವಾಯಿತು. ಎಲ್ಲೋ ಏನೋ ಸತ್ತು ಬಿದ್ದಿದೆ. ನಿನ್ನೆ ರಾತ್ರಿ ಇದ್ದ ಬೆಕ್ಕು ಕಾಣಿಸುತ್ತಿಲ್ಲ. ಅದುವೇ ಸತ್ತು ಗಿತ್ತು ಹೋಗಿದೆಯೋ? ಮಂಚದಡಿಯಲ್ಲಿ, ಕಪಾಟಿನ ಹಿಂದೆ,ಶೋಕೇಸ್ ಕೆಳಗೆ ಹೀಗೆ ಹುಡುಕತೊಡಗಿದರು. ಊಹುಂ…ಏನು ಕಾಣುತ್ತಿಲ್ಲ. ಪತ್ನಿ ಗುಡಿಸಿ,ಒರೆಸಿ ಅಚ್ಚುಕಟ್ಟಾಗಿ ಇಟ್ಟು, ದೇವಸ್ಥಾನಕ್ಕೆ ಹೋಗಿದ್ದಾಳೆ. ಇಲಿ ಸತ್ತಿದ್ದರೆ ಅವಳ ಗಮನಕ್ಕೆ ಬಂದೇ ಬರುತ್ತಿತ್ತು. ಆದರೆ ವಾಸನೆ ಈಗ ಇನ್ನೂ ಹೆಚ್ಚುತ್ತಾ ಹೋಗುತ್ತಿರುವುದು ಸತ್ಯ.ಪದಕವನ್ನೇ ನೋಡಿದರು. ಕೈಯಿಂದ ಮುಟ್ಟಲು ಭಯವಾಯಿತು. ಅಷ್ಟರಲ್ಲಿ ಕಾಲಿಂಗ್ ಬೆಲ್ ರಿಂಗಣಿಸಿತು. ಓ…ದೇವಸ್ಥಾನಕ್ಕೆ ಹೋದ ಪತ್ನಿ ಶ್ಯಾಮಲಾ ಮರಳಿ ಬಂದಿರಬೇಕು. ಈ ಪದಕವನ್ನು ಏನು ಮಾಡಲಿ? ಅವಳು ನೋಡಿ ಭಯಭೀತಳಾದರೆ….ಹೊರಗೆ ಸುದ್ದಿಯಾದರೆ…ಪದಕವನ್ನು ಬಟ್ಟೆಯಲ್ಲಿ ಮುಚ್ಚಿ, ಬೀರಿನ ಒಳಗೆ ಬಚ್ಚಿಟ್ಟರು.ಬೆವರೊರೆಸಿಕೊಳ್ಳುತ್ತಾ ಬಾಗಿಲೆಡೆಗೆ ಧಾವಿಸಿದರು.

‘‘ಏನ್ರಿ…ನೀವು…ತುಂಬಾ ಸುಸ್ತಾಗಿದ್ದೀರಿ. ಕೊಟ್ರಪ್ಪ ಅವರ ಕೊಲೆಯ ಸುದ್ದಿ ಕೇಳಿದ ಬಳಿಕ ನೀವು ಅಸ್ವಸ್ಥರಾಗಿದ್ದೀರಿ. ಮಲಕ್ಕೋ ಬಾರದೆ? ಅಮೆರಿಕದಿಂದ ಮಗ, ಮಗಳು ಈಗಷ್ಟೇ ಫೋನ್ ಮಾಡಿದ್ದರು. ಕೊಟ್ರಪ್ಪ ಕೊಲೆ ಸುದ್ದಿ ಕೇಳಿ ಅವರು ಕಂಗಾಲಾಗಿದ್ದಾರೆ. ಅಪ್ಪನಿಗೆ ಸ್ವಲ್ಪ ಎಚ್ಚರವಾಗಿರಲು ಹೇಳು..ಎಂದಿದ್ದಾರೆ. ಅನಗತ್ಯ ವಿವಾದಕ್ಕೆ ಸಿಲುಕಿಕೊಳ್ಳುವುದು ಬೇಡ ಎಂದು ಮಗಳು ಎಚ್ಚರಿಸಿದ್ದಾಳೆ…’’ ಎನ್ನುತ್ತಾ ಅಡುಗೆ ಮನೆಗೆ ತೆರಳಿದರು. ತನ್ನ ಕೋಣೆಗೆ ಹೋಗಿ ಮಲಗಿಕೊಳ್ಳಲು ರಾಯರಿಗೆ ಭಯ. ಬಾಲ್ಕನಿಗೆ ಹೋಗಿ ಕುಳಿತುಕೊಂಡರೆ ಅನ್ನಿಸಿತು. ಕೋಣೆಗೆ ಒತ್ತಿಕೊಂಡೇ ಬಾಲ್ಕನಿಯಿತ್ತು. ‘‘ಇದೇನ್ರಿ…ಏನೋ ವಾಸನೆ…’’ ಪತ್ನಿಯ ಕೂಗಿಗೆ ರಾಯರು ಬೆಚ್ಚಿ ಬಿದ್ದರು. ‘‘ಹೌದು ವಾಸನೆ. ಏನೋ ಇಲಿ ಸತ್ತು ಬಿದ್ದಿರಬೇಕು…’’ರಾಯರು ಉತ್ತರಿಸಿದರು.

‘‘ಇಲಿಯೆ? ಇಲಿ ಎಲ್ಲಿಂದ? ಬೆಳಗ್ಗೆ ಇಡೀ ಮನೆಯನ್ನು ಗುಡಿಸಿ, ಒರೆಸಿದ್ದೇನೆ… ಬೆಳಗ್ಗೆ ಇಲ್ಲದ ದುರ್ವಾಸನೆ ಈಗ ಎಲ್ಲಿಂದ?’’ ಎನ್ನುತ್ತಾ ಶ್ಯಾಮಲಾ ಅಲ್ಲಿ ಇಲ್ಲಿ ತಡಕಾಡತೊಡಗಿದರು.

‘‘ಹೊರಗಡೆಯಿಂದ ಇರಬಹುದೆ?’’ ಶ್ಯಾಮಲಾ ಅವರು ಮತ್ತೆ ಕೇಳಿದರು.

‘‘ಇರಬಹುದು ಇರಬಹುದು…’’ ರಾಯರು ಚುಟುಕಾಗಿ ಉತ್ತರಿಸಿದರು. ‘‘ಕಿಟಕಿಯೆಲ್ಲ ಯಾಕೆ ತೆರೆದಿದ್ದೀರಿ. ಎಲ್ಲ ಮುಚ್ಚಿ ಬಿಟ್ಟರೆ ಹೇಗೆ?’’ ಶ್ಯಾಮಲಾ ಕೇಳಿದರು.

‘‘ಬೇಡ ಬೇಡ…ಸ್ವಲ್ಪ ಗಾಳಿ ಬೆಳಕು ಬರಲಿ….ಇಲ್ಲೇ ಒಳಗೇ ಏನೋ ಸತ್ತು ಬಿದ್ದಿರುವ ಹಾಗಿದೆ….ಅದಕ್ಕಾಗಿಯೇ ನಾನು ಕಿಟಕಿ ತೆರೆದೆ…’’ ಶ್ಯಾಮಲಾ ಹೊರ-ಒಳಗೆ ದುರ್ವಾಸನೆಯ ಮೂಲ ಹುಡುಕುತ್ತಾ ಓಡಾಡ ತೊಡಗಿದರು. ‘‘ರೀ…ನಿಮ್ಮ ಕೋಣೆಯಿಂದಲೇ ದುರ್ವಾಸನೆ ಬರುತ್ತಿರುವುದು…ಅದೇನೋ…ನೋಡಿ…’’ ಪತ್ನಿ ಹೇಳಿದಳು.

ತಕ್ಷಣ ರಾಯರು ಎಂದು ತನ್ನ ಕೋಣೆಗೆ ಹೋದರು. ನೋಡಿದರೆ ಪತ್ನಿ ಸತ್ತ ಇಲಿಗಾಗಿ ಹುಡುಕುತ್ತಿದ್ದಳು. ಏನೂ ಇಲ್ಲ. ಕಾಪಾಟು, ಬೀರು…ಹೀಗೆ ತಡಕಾಡ ತೊಡಗಿದರು. ಪತ್ನಿ ಎಲ್ಲಿ ಬೀರನ್ನು ತೆರೆಯುತ್ತಾಳೋ ಎಂದು ಭಯವಾಯಿತು. ‘‘ನೋಡು…ನೀನು ಹೊರಗೆ ಹುಡುಕು.ಕೋಣೆಯ ಬೀರನ್ನು ನಾನು ನೋಡುತ್ತೇನೆ…’’ ಎಂದರು.

ಇದ್ದಕ್ಕಿದ್ದಂತೆಯೇ ಶ್ಯಾಮಲಾ ಅವರಿಗೆ ಹೊಟ್ಟೆ ತೊಳೆಸಿದಂತಾಗಿ, ನೇರ ಬಾತ್‌ರೂಂಗೆ ಹೋಗಿ ಬಸ ಬಸ ಕಾರ ತೊಡಗಿದರು. ರಾಯರು ಬೀರನ್ನು ತೆರೆದರು. ಅಬ್ಬಾ! ದುರ್ವಾಸನೆ ತಡೆದುಕೊಳ್ಳಲಾಗುತ್ತಿಲ್ಲ. ಇನ್ನಷ್ಟು ಬಟ್ಟೆಗಳಲ್ಲಿ ಪದಕವನ್ನು ಮುಚ್ಚಿಟ್ಟರು. ‘‘ಏನಿದು ಈ ಥರ.ದುರ್ವಾಸನೆ ಒಂದು ವೇಳೆ ನನ್ನ ಕಲ್ಪನೆಯೇ ಆಗಿದ್ದರೆ ಪತ್ನಿಗೆ ಹೇಗೆ ವಾಸನೆ ಗೊತ್ತಾಯಿತು.
ಬಾತ್‌ರೂಂನಿಂದ ಸುಸ್ತಾಗಿ ಹೊರಗೆ ಬಂದ ಶ್ಯಾಮಲಾ ತನಗೆ ತಾನೇ ಗೊಣಗುತ್ತಾ ಮತ್ತೆ ವಾಸನೆಯ ಮೂಲವನ್ನು ಹುಡುಕತೊಡಗಿದರು.

ರಾಯರು ಬೀರಿಗೆ ಬೀಗ ಹಾಕಿ, ಬಾಲ್ಕನಿಯ ಬಾಗಿಲು ತೆರೆದು ಅಲ್ಲಿರುವ ಆರಾಮ ಕುರ್ಚಿಯಲ್ಲಿ ಒರಗಿದರು. ತಡೆಯಲಾಗುತ್ತಿಲ್ಲ. ಹೊರಗಿನ ತಣ್ಣಗಿನ ಗಾಳಿಗೆ ಅವರು ಹಾಗೆಯೇ ಸಣ್ಣ ನಿದ್ದೆಗೆ ಶರಣಾದರು.

ಅರೆಬರೆ ನಿದ್ರೆ. ವಿಚಿತ್ರ ಕನಸುಗಳು. ಕೊಟ್ರಪ್ಪನ ಹೆಣವನ್ನು ತಾನು ಬೀರಿನೊಳಗೆ ಬಚ್ಚಿಟ್ಟುಕೊಂಡ ಹಾಗೆ. ಪೊಲೀಸರು ಮನೆಯನ್ನಿಡೀ ತಪಾಸಣೆ ಮಾಡುತ್ತಿದ್ದ ಹಾಗೆ.ದೇಸಾಯಿ ಪತ್ರಿಕಾಗೋಷ್ಠಿ ಕರೆದು ತನ್ನ ವಿರುದ್ಧ ಕೊಲೆ ಆರೋಪ ಮಾಡುತ್ತಿರುವ ಹಾಗೆ.ಜನಪರ ಸಂಘರ್ಷ ಸಮಿತಿಯವರು ತನ್ನ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿರುವ ಹಾಗೆ….ಕೊಲಾಜ್ ಪೇಟಿಂಗ್ ಥರ…!

ಥಟ್ಟನೆ ಎಚ್ಚರ. ಗಡಿಯಾರದಲ್ಲಿ ಮಧ್ಯಾಹ್ನ ಮೂರು ಗಂಟೆ. ಓಹ್…ತುಂಬಾ ಹೊತ್ತು ಮಲಗಿದೆ ಅನ್ನಿಸಿತು ರಾಯರಿಗೆ.

‘‘ಈ ವಾಸನೆಯ ಜೊತೆಗೆ ಊಟ  ಮಾಡುವುದಾದರೂ ಹೇಗೆ…’’ ಒಳಗೆ ಪತ್ನಿಯ ಗೊಣಗು.ವಾಸನೆ ನಿಂತಿಲ್ಲ. ಕಂಡ ಕನಸುಗಳನ್ನೊಮ್ಮೆ ನೆನೆದುಕೊಂಡರು. ವಾಸನೆ ಬೀರೊಳಗಿಂದ ಬರುತ್ತಿಲ್ಲ ಅನ್ನಿಸಿತು…ಅದು ತನ್ನೊಳಗಿಂದಲೇ ಬರುತ್ತಿದೆ. ರಾತ್ರಿ ಪತ್ನಿಗೆ ಜೊತೆಯಲ್ಲಿ ಮಲಗುವಾಗ ಅದು ಗೊತ್ತಾಗಿಯೇ ಗೊತ್ತಾಗಿ ಬಿಡುತ್ತದೆ ಎಂದು ಒಳಗೇ ಕಂಪಿಸಿದರು. ಜೀವನವಿಡೀ ಈ ವಾಸನೆಯ ಜೊತೆ ಅವಳು ತಾನೇ ಹೇಗೆ ಬದುಕಿಯಾಳು? ಅಥವಾ ನಾನಾದರೂ ಬದುಕೋದು ಹೇಗೆ? ಏನಾಯಿತೋ…ರಾಯರು ಎದ್ದರು. ಬೀರಿನ ಬೀಗ ತೆರೆದು, ಬಟ್ಟೆಯಲ್ಲಿ ಮುಚ್ಚಿಟ್ಟ ಪದಕವನ್ನು ಕೈಗೆತ್ತಿಕೊಂಡರು. ನೇರ ಬಾಲ್ಕನಿಗೆ ಬಂದವರೇ ಬಾಲ್ಕನಿಯಾಚೆಗಿರುವ ಮೋರಿಯೆಡೆಗೆ ಆ ಪದಕವನ್ನು ಎಸೆದು ಬಿಟ್ಟರು.

ಹಾಗೆ ಎಸೆದವರು ‘ಅಬ್ಬಾ’ ಎನ್ನುತ್ತಾ ಆರಾಮ ಕುರ್ಚಿಗೆ ಕುಸಿದರು. ಅದೇನೋ ದೊಡ್ಡದೊಂದು ಭಾರ ಎದೆಯಿಂದ ಇಳಿದಂತೆ. ತಕ್ಷಣ ತನ್ನ ಮೊಬೈಲ್‌ನ್ನು ಕೈಗೆ ತೆಗೆದುಕೊಂಡು, ಪ್ರಗತಿ ಪರ ಸಂಘರ್ಷ ಸಮಿತಿಗೆ ಫೋನಾಯಿಸಿದರು ‘‘ನೋಡ್ರಿ…ಸಂಜೆ ನಾನು ಪ್ರತಿಭಟನೆಗೆ ಬಂದೇ ಬರುವೆ. ಅದೇನಾದರೂ ಸರಿ…ಕೊಟ್ರಪ್ಪ ಅವರಿಗೆ ನ್ಯಾಯ ಸಿಗಲೇಬೇಕು…ನಿಮ್ಮ ಹೋರಾಟದ ಜೊತೆಗೆ ನಾನಿದ್ದೇ ಇರುವೆ….’’ ಎಂದು ಒಂದೇ ಉಸಿರಿಗೆ ಹೇಳಿ, ಫೋನ್ ಸ್ವಿಚ್ಡ್ ಆಫ್ ಮಾಡಿದರು.

ಅಷ್ಟರಲ್ಲಿ ಒಳಗಿನಿಂದ ಪತ್ನಿ ಕೂಗಿ ಹೇಳಿದರು ‘‘ಅರೆ…ಕೇಳಿದ್ರಾ….ಈಗ ಸ್ವಲ್ಪ ವಾಸನೆ ಕಡಿಮೆಯಾದ ಹಾಗೆ ಇದೆ ಅಲ್ವಾ?’’

‘‘ಹೌದು. ವಾಸನೆ ಕಡಿಮೆಯಾಗಿದೆ’’ ರಾಯರು ಉತ್ತರಿಸಿ ನಿರಾಳವಾದರು.

‍ಲೇಖಕರು admin

December 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. kvtirumalesh

    ಶ್ರೀ ಬಷೀರ್ ಅವರೇ
    ನಿಮ್ಮ ಕತೆ ಕಾಲಕ್ಕೆ ಹಿಡಿದ ಕನ್ನಡಿಯಂತೆ ಇದೆ–ಇದೂ ಒಂದು ಪ್ರತಿಭಟನೆಯೇ. ಚೆನ್ನಾಗಿದೆ.

    ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ
    • ಬಿ. ಎಮ್. ಬಶೀರ್

      ವಂದನೆಗಳು ಸರ್
      ಬಿ. ಎಮ್. ಬಶೀರ್

      ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ kvtirumaleshCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: