ಸಂಧ್ಯಾ ರಾಣಿ ಕಾಲಂ : ’ಯಾಕೋ ನಾನು ಮತ್ತೆ ಬೆಚ್ಚಿ ಬಿದ್ದಿದ್ದೆ…’

‘Innocence is a virtue’, Yes. ’But is it overrated?’, ‘Defnitely Yes’. ಮುಗ್ಧತೆ ಒಂದು ಅಪರೂಪದ ಸುಂದರ ಗುಣ, ಇದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ವೈಭವೀಕರಿಸಲಾಗಿದೆಯೇ ಎಂದು ಕೇಳಿದಾಗ, ನಿಜ ಎನ್ನಲೇ ಬೇಕಾಗುತ್ತದೆ.
ಮುಗ್ಧತೆ ಒಂದು ಸಹಜ ಪರಿಮಳದಂತೆ, ಅದರ ಸೊಗಸಿರುವುದೇ ಅದರ ಸಹಜತೆಯಲ್ಲಿ, ಆದರೆ ಅದನ್ನು ಬಲವಂತವಾಗಿ ಆರೋಪಿಸಿಕೊಂಡಾಗ ಅದು ಲೇಪಿಸಿಕೊಂಡ ಪರಿಮಳದಂತೆ ಕೃತಕ ಮತ್ತು ಕ್ಷಣಿಕ.
ಒಮ್ಮೆ ನಾವೆಲ್ಲ ಚೆನ್ನೈಗೆ ಹೋಗಿದ್ದೆವು, ಅಲ್ಲಿ ಸಮುದ್ರ ನೋಡಲು ಹೋದೆವು. ಅದುವರೆಗೂ ಅಪ್ಪನ ತೋಳುಗಳಲ್ಲಿ ಮಲಗಿದ್ದ ನನ್ನ ಅಣ್ಣನ ಮಗಳು ಎದ್ದ ತಕ್ಷಣ ಸಮುದ್ರ ನೋಡಿ ಇಷ್ಟಗಲ ಕಣ್ಣು ಬಿಟ್ಟು, ಬಾಯಿಯನ್ನು ’ಆ’ ಎಂದು ತೆಗೆದು ಮಾತೇ ಇಲ್ಲದೆ ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಆ ಬೆರಗಿಗೆ ಮತ್ತು ವಿಶ್ವ ಸುಂದರಿಯರು ಗೆದ್ದ ತಕ್ಷಣ ಕಣ್ಣರಳಿಸಿ, ಎರಡೂ ಕೈಗಳನ್ನು ಬಾಯಿಗಿಟ್ಟುಕೊಂಡು ನಗುತ್ತಾರಲ್ಲ ಆ ನಗುವಿಗೆ ಇರುವ ವ್ಯತ್ಯಾಸ ಇದು. ವಿಶ್ವಸುಂದರಿಯರಿಗೆ ನಡಿಗೆ, ಉಡುಗೆ, ತೊಡುಗೆಯ ಅಭ್ಯಾಸದ ಜೊತೆ ಗೆದ್ದಾಗ ತೋರಿಸಬೇಕಾದ ಮುಖಭಾವದ ಅಭ್ಯಾಸ ಸಹ ಹೇಳಿಕೊಡ್ತಾರೇನೋ ಅನ್ನುವ ಸಣ್ಣ ಗುಮಾನಿ ಇದೆ ನನಗೆ! ಮೊದಲನೆಯ ದೃಶ್ಯದಲ್ಲಿ ಅದು ಸಹಜ ಹಾಗಾಗಿ ಸುಂದರ, ಎರಡನೆಯದರಲ್ಲಿ ಅದು ಕೇವಲ ಕ್ಯಾಮೆರಾ ಕಣ್ಣಿಗಾಗಿ ಕಡ ತಂದ ಮುಗ್ಧತೆ, ಹಾಗಾಗಿ ಅದು ಕೃತಕ.
ಒಂದು ವಯಸ್ಸಿನವರೆಗೂ ಮಕ್ಕಳಲ್ಲಿ ಸಹಜವಾಗೆ ಒಂದು ಮುಗ್ಧತೆ ಇರುತ್ತದೆ, ಬೆಳೆಯುತ್ತಾ ಬೆಳೆಯುತ್ತಾ ಹೋದಂತೆ ಪ್ರಪಂಚ ತನ್ನ ಪರಿಚಯ ಮಾಡಿಕೊಡುತ್ತಾ ಹೋಗುತ್ತದೆ. ಅದು ಬೆಳವಣಿಗೆಯ ಸಹಜ ನಿಯಮ. ಆದರೆ ವಯಸ್ಸಾದರೂ ನಾನು ಇನ್ನೂ ಮುಗ್ಧ ಅಥವಾ ಮುಗ್ಧೆ ಎಂದು ಸಾಬೀತು ಪಡಿಸಲು ಹೆಣಗಾಡುವುದೇ ಅನೈಸರ್ಗಿಕ ಅನ್ನಿಸಿಬಿಡುತ್ತದೆ ನನಗೆ.
ಈ ಘಟನೆ ಇಲ್ಲಿ ಪ್ರಸ್ತುತವೋ ಇಲ್ಲವೋ ಗೊತ್ತಿಲ್ಲ, ಆದರೆ ನನಗೆ ಈ ಮುಗ್ಧತೆಯ ಬಲವಂತದ ಹೊದಿಕೆ ಹಾಸ್ಯಾಸ್ಪದ ಅನ್ನಿಸಿದ ಘಟನೆ ಇದು. ಬಾಲಿವುಡ್ಡಿನಲ್ಲಿ ಅಪಾರ ಹೆಸರು ಮಾಡಿದ್ದ ದಕ್ಷಿಣದ ಒಬ್ಬ ನಟಿ ಮದುವೆಯಾಗಿ, ಮಕ್ಕಳಿದ್ದ ಒಬ್ಬ ನಿರ್ಮಾಪಕನನ್ನು ಪ್ರೀತಿಸಿದ್ದಳು. ಮನೆ, ಮಡದಿ, ಮಕ್ಕಳನ್ನು ಬಿಟ್ಟು ಇವಳನ್ನು ಮದುವೆಯಾಗಲು ಆತ ಹಿಂದೆ ಮುಂದೆ ನೋಡುತ್ತಿದ್ದ. ಅಷ್ಟರಲ್ಲಿ ಈಕೆ ಗರ್ಭಿಣಿ ಅಂತ ಗೊತ್ತಾಗಿ, ಕಡೆಗೂ ಆತ ಮೊದಲನೆಯ ಪತ್ನಿಯನ್ನು ಬಿಟ್ಟು ಇವಳನ್ನು ಮದುವೆಯಾದ. ಇರಲಿ ಅದು ಅವರವರ ವೈಯಕ್ತಿಕ ವಿಚಾರ, ಮನೆಗೆ ಒಂದು ಕಾಂಪೌಂಡ್ ಕಟ್ಟಬಹುದು, ಆದರೆ ಹೃದಯಕ್ಕೆ ಬೇಲಿ ಹಾಕಿ ನಿಲ್ಲಿಸೋರು ಯಾರು? ಸಹಜವಾಗೇ ಮೊದಲ ಹೆಂಡತಿ ನೊಂದಿದ್ದಳು. ಮಗುವನ್ನು ಮುಂದೆ ಮಾಡಿಟ್ಟುಕೊಂಡು ಈಕೆ ನನ್ನ ಮನೆ ಮುರಿದಳು ಅಂತ ಅರೋಪ ಮಾಡಿದ್ದಳು. ಈ ನಟಿಮಣಿ ಸುಮ್ಮನಿದ್ದರೂ ಆಗಿತ್ತು. ’ಅಯ್ಯೋ ನಾನು ಗರ್ಭಿಣಿ ಅಂತ ನನಗೆ ಗೊತ್ತೇ ಆಗಲಿಲ್ಲ. ಯಾಕೋ ಋತುಚಕ್ರ ನಿಧಾನ ಆಗಿದೆ ಅಂತ ಅಂದುಕೊಂಡಿದ್ದೆ’ ಅಂತ ಕಣ್ಣರಳಿಸಿ, ಮುಗ್ಧತೆಯ ನಟನೆ ಮಾಡುತ್ತ ಉಲಿದಳು. ಆಗ ಅವಳಿಗೆ ನಲವತ್ತರ ಹತ್ತಿರ ವಯಸ್ಸು. ಮೌನಕ್ಕಿಂತ ಮಾತು ನಾಚಿಕೆಗೇಡಿ ಆದ ಸಂದರ್ಭ ಅದು. ಅದನ್ನು ಕೇಳಿದ ಮೊದಲ ಪತ್ನಿ ’ಇರಬಹುದು, ಮೆನೋಪಾಸ್ ಅಂದುಕೊಂಡಿದ್ದಳೇನೋ…’ ಎಂದು ಹೇಳಿ ಇವಳ ಮುಗ್ಧತೆಯ ಹುಸಿಮುಸುಕು ಹರಿದು ಹಾಕಿದ್ದಳು!
ಇರಲಿ, ಮುಗ್ಧತೆಯ ತೋರಿಕೆ, ಆವಾಹನೆ ಕೆಲವರಿಗೆ ಪ್ರಿಯವಾಗಿರಬಹುದು. ಆದರೆ ನನ್ನ ತಕರಾರಿವುದು ’ಮುಗ್ಧತೆಯೇ ಒಳ್ಳೆಯತನ’ ಎಂದು ಹೇಳುವುದರ ಬಗ್ಗೆ. ಈಗಿನ ದಿನಮಾನ, ಕಾಲಮಾನ ಮನೆಯ ಚೌಕಟ್ಟನ್ನು ದಾಟಲೇಬೇಕಾದ, ಪ್ರಪಂಚದ ಜೊತೆಜೊತೆ ನಡೆಯಲೇ ಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಓದಲೆಂದು ಮಕ್ಕಳು ಮನೆಬಿಟ್ಟು ಹೊರಗೆ ಬಂದಾಗ, ಅಥವಾ ಓದು ಮುಗಿಸಿ ಕೆಲಸಕ್ಕೆಂದು ಪ್ರಪಂಚಕ್ಕೆ ಹೆಜ್ಜೆ ಇಟ್ಟಾಗ ಬದುಕು ಒಂದೊಂದಾಗಿ ವಾಸ್ತವದ ಪಾಠ ಕಲಿಸುತ್ತಾ ಹೋಗುತ್ತದೆ. ಹಳ್ಳಿಯಿಂದ ಮೊದಲ ದಿನ ಕಾಲೇಜಿನಲ್ಲಿ ಅಡಿ ಇಟ್ಟಾಗ ಇರುವ ಮುಗ್ಧತೆ ಮೊದಲ ಆರು ತಿಂಗಳಲ್ಲಿ ಇಂಚಿಂಚಾಗಿ ಬದುಕಿನ ಅನುಭವದ ಮೂಸೆಗೆ ಬಿದ್ದು ಪ್ರಾಪಂಚಿಕತೆಯ ಪಾಠವಾಗಿ ಬದಲಾಗುತ್ತಾ ಹೋಗುತ್ತದೆ. ಅದು ಬೆಳವಣಿಗೆ, ಮುಗ್ಧತೆ ಕಳೆಯಿತು ಎಂದರೆ ಅದು ದುಷ್ಟತನವೇ ಆಗಬೇಕಿಲ್ಲ, ಬುದ್ಧಿವಂತಿಕೆ ಯಾಕಾಗಬಾರದು?
ಇನ್ನೊಂದು ಮಾತು, ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಮುಗ್ಧತೆಯೇ ಆಭರಣ ಎನ್ನುವ ರೊಮ್ಯಾಂಟಿಕ್ ಕಲ್ಪನೆ ಕುರಿತು. ೫೦-೬೦ ವರ್ಷಗಳ ಹಿಂದಿನ ಬದುಕೇ ಬೇರೆ, ಈಗಿನ ಬದುಕಿನ ಸವಾಲು ಸಾದ್ಯತೆಗಳೇ ಬೇರೆ. ಆಗ ಹೆಣ್ಣು ಮಕ್ಕಳೇ ಯಾಕೆ, ಗಂಡು ಮಕ್ಕಳಲ್ಲೂ ಮುಗ್ಧತೆ ಹಾಗೇ ಇತ್ತು. ಸಂಪರ್ಕ ಸಾಧನಗಳು, ಸಂವಹನ ಸಾಧನಗಳು ಆವಿಷ್ಕಾರಗೊಂಡಂತೆಲ್ಲಾ ಜಗತ್ತು ಕಿರಿದಾಗುತ್ತಾ ಹೋಯಿತು. ಜನರು ಮನೆ ಹೊಸಿಲು ದಾಟಿ ಜಗತ್ತಿಗೆ ಹೋಗುವುದರಿಂದ ಮೊದಲಾದ ಬದಲಾವಣೆ ಇಂದು ಜಗತ್ತೇ ಹೊಸಿಲು ದಾಟಿ ಮನೆ ಒಳಗೆ ಬರುವಂತೆ ಮಾಡಿದೆ. ಈಗಿನ ಸ್ಥಿತಿಯಲ್ಲಿ ಇನ್ನೂ ಹುಟ್ಟದ ಮಗು ಮಾತ್ರ ಮುಗ್ಧತೆ ಉಳಿಸಿಕೊಳ್ಳಲು ಸಾಧ್ಯ. ೫-೬ ವರ್ಷದ ಮಕ್ಕಳು ಇಂದು ಇಂಟರ್ನೆಟ್ ಬಳಸುತ್ತಿದ್ದಾರೆ, ಬೇಕಿರುವ ಬೇಕಿಲ್ಲದ ಎಲ್ಲಾ ವಿಚಾರಗಳೂ ರಿಮೋಟ್ ಗುಂಡಿ ಒತ್ತಿದರೆ ಸಾಕು ಬಂದು ಬೀಳುತ್ತಿವೆ, ಇಂದು ಸಿನಿಮಾಗಳಲ್ಲಿ ಪ್ರೇಮಿಗಳು ಜೊತೆ ಇರುವಾಗ ಎರಡು ಹೂವುಗಳನ್ನು ತೋರಿಸುವುದಿಲ್ಲ, ೮-೯ ವರ್ಷದ ಮಕ್ಕಳು ಡೈವೋರ್ಸ್ ಬಗ್ಗೆ ಮಾತನಾಡುತ್ತವೆ. ಎಲ್ಲಿದೆ ಮುಗ್ಧತೆ?

ಆದರೆ ಮುಗ್ಧತೆ ಕಳೆದುಕೊಂಡ ಮಾತ್ರಕ್ಕೆ ಅವರು ದುಷ್ಟರೇ ಯಾಕಾಗಬೇಕು? ಇದು ನನ್ನ ಪ್ರಶ್ನೆ. ’ಓದಿಕೊಂಡರೆ ಗಂಡಸರು ಹೆಂಗಸರಾಗಿಬಿಡುತ್ತಾರೆ, ಹೆಂಗಸರು ಗಂಡಸರಾಗಿಬಿಡುತ್ತಾರೆ’ ಎಂದು ಅದ್ಭುತವಾಗಿ ಕಥೆ ಹೆಣೆಯುವ ಲೇಖಕರು ಹೇಳಿದಾಗ ನಾನು ಬೆಚ್ಚಿಬಿದ್ದಿದ್ದೇನೆ. ಇವರ ಹೆಣ್ತನ ಮತ್ತು ಗಂಡಸ್ತನದ ಕಲ್ಪನೆಗಳೇನಿರಬಹುದು ಎಂದು ಚಿಂತಿಸುತ್ತೇನೆ. ಯಾಕೆ ಹೆಣ್ಣುಮಕ್ಕಳು ಓದಬಾರದು? ಯಾಕೆ ಹೀಗೆ ಬಲವಂತವಾಗಿ ಮುಗ್ಧತೆ ಶ್ರೇಷ್ಠ ಅನ್ನುವ ಪಾಠ ಭೋದಿಸಲಾಗುತ್ತಿದೆ ನಮಗೆ? ಬಳೆ, ಹೂವು, ಕುಂಕುಮಗಳು ಬಾಹ್ಯ ಅಲಂಕಾರಗಳು ಅಷ್ಟೆ, ಅವು ವ್ಯಕ್ತಿತ್ವದ ಮಾನದಂಡಗಳಲ್ಲ. ಇವ್ಯಾವುದನ್ನೂ ಹಚ್ಚಿಕೊಳ್ಳದ, ತೊಟ್ಟುಕೊಳ್ಳದ ಹೆಣ್ಣಿನ ಮನಸ್ಸಿನಲ್ಲಿ ಒಂದು ಹೆಣ್ತನ ಇರುವುದಿಲ್ಲ ಎನ್ನುವ ಕಲ್ಪನೆಯೇ ವಿಪರೀತ. ಇವೆಲ್ಲಾ ಇದ್ದ ಕಾಲದಲ್ಲಿ ಎಲ್ಲಾ ಹೆಂಗಸರೂ ಒಳ್ಳೆಯವರು ಅಂತ ನಿರ್ಣಯಕ್ಕೆ ಬರುವುದು ಎಷ್ಟು ಹಾಸ್ಯಾಸ್ಪದ ಆಗಿರುತ್ತದೋ ಇದೂ ಹಾಗೆಯೇ. ತ್ರೇತಾಯುಗದಲ್ಲಿ ಸೀತೆಯೂ ಇದ್ದಳೂ, ಕೈಕೇಯಿಯೂ ಇದ್ದಳು, ಮಂಥರೆಯೂ ಇದ್ದಳು, ಮಂಡೋದರಿ ಮತ್ತು ಅಹಲ್ಯೆಯರೂ ಇದ್ದರು.
ಸ್ವಲ್ಪ ಯೋಚಿಸಿ. ಒಂದು ಮುಗ್ಧ ಹೆಣ್ಣಿನ ಸಿದ್ಧ ಮಾದರಿಯ ಹಾಗೆ ಇಂದು ಹೆಣ್ಣು ಇದ್ದರೆ ಈಗಿನ ಸಮಾಜದಲ್ಲಿ ಒಂದು ದಿನ ಬದುಕಲು ಸಾಧ್ಯವಾ? ಅಸಲಿಗೆ ಹಾಗೆ ಯಾಕಿರಬೇಕು? ಮುಗ್ಧತೆ ಯಾಕೆ ಒಳ್ಳೆಯತನವಾಗಿ ಪ್ರತಿಬಿಂಬಿತವಾಗಬೇಕು? ಹೆಣ್ಣಿನಲ್ಲಿನ ಜಾಣತನ, ಮುನ್ನುಗ್ಗುವ ಗುಣ, ಸಾಧಿಸುವ ಛಲ, ಗುರಿ ಇಟ್ಟುಕೊಂಡು ಅದಕ್ಕಾಗಿ ತಪಿಸುವ ದೀಕ್ಷೆ ಇದೆಲ್ಲಾ ಯಾಕೆ ಹೆಣ್ತನದ ವಿರುದ್ಧ ಅನ್ನಿಸಬೇಕು? ಹೀಗೆ ಹಣೆಪಟ್ಟಿ ಕಟ್ಟಿ ಕಟ್ಟಿ, ಹೆಣ್ಣು ಬುದ್ಧಿವಂತಳಾಗಿರುವುದರ ಬದಲು ವಿಧೇಯಳಾಗಿದ್ದರೆ ಅವಳಿಗೂ ಸುಖ, ಸಂಸಾರಕ್ಕೂ ಹಿತ ಎಂದು ಹೇಳುವುದರ ಮೂಲಕ ಎಂತಹ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ? ಮತ್ತು ಹೀಗೆ ಹೇಳುವುದರ ಮೂಲಕ ಮನೆಯ ಹೊಸಿಲು ದಾಟಿ ಪ್ರಪಂಚಕ್ಕೆ ಅಡಿ ಇಟ್ಟ ಹೆಣ್ಣಿನ ಮನದಲ್ಲಿ ಯಾವ ಗಿಲ್ಟ್ ಹುಟ್ಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ?
ಅದಕ್ಕಿಂತ ಹೆಚ್ಚಾಗಿ ಹೀಗೆ ಮುಗ್ಧತೆಯೇ ಸೌಂದರ್ಯ ಎಂದು ಸ್ಥಾಪಿಸುವುದರ ಮೂಲಕ ಮುಗ್ಧತೆಯನ್ನು ನಟಿಸಿಯಾದರೂ ಸೈ ಅನ್ನಿಸಿಕೊಳ್ಳುವ ಹುಂಬ ಹಂಬಲಕ್ಕೆ ಹಲವಾರು ಹೆಣ್ಣುಗಳು ಬಿದ್ದಿದ್ದಾರೆ ಎನ್ನುವುದು ನಮ್ಮ ವ್ಯವಸ್ಥೆಯ ದುರಂತ.
ಹೋದ ವರ್ಷ ನಮ್ಮೆಲ್ಲರ ಮನಸನ್ನೂ ಅಲ್ಲಾಡಿಸಿದ ಒಂದು ಘಟನೆ ಇಲ್ಲೇ, ನಮ್ಮ ನಡುವಲ್ಲೇ ನಡೆಯಿತು. ನಟನೊಬ್ಬ ಸಿಕ್ಕಾಪಟ್ಟೆ ಕುಡಿದು, ಡ್ರೈವರ್ ಕಾರು ಓಡಿಸುತ್ತಿದ್ದಾಗಲೇ ತನ್ನ ಹೆಂಡತಿಯ ಮೇಲೆ ರಾಕ್ಷಸನಂತೆ ಧಾಳಿ ಮಾಡಿದ್ದ. ಹೊಡೆದು – ಬಡಿದು, ಸಿಗರೇಟಿನಿಂದ ಅವಳ ಮೈಕೈ ಸುಟ್ಟು, ಕಿವಿ ಕಚ್ಚಿ ನಾಗರೀಕ ಸಮಾಜವೇ ತಲೆತಗ್ಗಿಸುವ ಮಟ್ಟಿಗೆ ನಡೆದುಕೊಂಡ. ಅದಕ್ಕೆ ಕಾರಣ ಅವನ ಜೀವನದಲ್ಲಿದ್ದ ಇನ್ನೊಬ್ಬ ಹೆಣ್ಣು, ಅವನ ಸಹನಟಿ ಎಂದು ಗುಲ್ಲಾಯಿತು. ಘಟಾನುಘಟಿಗಳೆಲ್ಲಾ ಸೇರಿ, ಸಭೆ ನಡೆಸಿ, ಆ ಹೆಣ್ಣಿಗೆ ಕನ್ನಡ ಚಿತ್ರೋದ್ಯಮದಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಘೋಷಿಸಿ ಅವಳನ್ನು ದೂರ ಇಟ್ಟುಬಿಟ್ಟರು. ಸರಿ ರಾಜಿ ಕಬೂಲಿ ಎಲ್ಲಾ ಆಗಿ, ಹೆಂಡತಿ ಆ ಕೇಸ್ ವಾಪಸ್ ತೆಗೆದುಕೊಂಡಳು. ಗಂಡ ಮತ್ತೆ ಶ್ರೀರಾಮಚಂದ್ರನಾದ.
ಈಗ ಮತ್ತೊಂದು ರಿಯಾಲಿಟಿ ಶೋ ನಡೀತಾ ಇದೆ. ಅದರಲ್ಲಿ ಆ ನಟಿ ಸಹ ಭಾಗವಹಿಸಿದ್ದಾಳೆ. ೩೦ ಕ್ಕೂ ಮೀರಿದ ವಯಸ್ಸಿನ ಆಕೆ ಮೊದಲ ದಿನದಿಂದಲೇ ೧೬ ವರ್ಷದ ಮುಗ್ಧೆಯ ಹಾಗೆ ನಡೆದುಕೊಳ್ಳುತ್ತಾ ಬಂದಳು. ಜನ ಇನ್ನಿಲ್ಲದಂತೆ ಆಕೆಯನ್ನು ಒಪ್ಪಿಕೊಂಡುಬಿಟ್ಟರು. ಜೊತೆಗಿದ್ದವರನ್ನು, ಜೊತೆಯಾದವರನ್ನು ಆಕೆ ಉಪಯೋಗಿಸಿಕೊಳ್ಳುತ್ತಾ ಹೋದಳು. ಎಲ್ಲರಿಗೂ ಅವಳ ಮುಗ್ಧತೆ ಅಥವಾ ಆಕೆ ಆರೋಪಿಸಿಕೊಂಡ ಮುಗ್ಧತೆ ಮುದ್ದು ಅನ್ನಿಸುತ್ತಿತ್ತು. ಜನ ಅವಳಿಂದ ಒಂದು ಸಂಸಾರ ಮುರಿದದ್ದನ್ನು ಮರೆತೇ ಬಿಟ್ಟರು. ಅಂದರೆ ಅವಳ ಸೋ ಕಾಲ್ಡ್ ಮುಗ್ದತನದ ಮುಂದೆ ಅವಳ ಬದುಕಿನ ಗುಣ ಅವಗುಣ ಎರಡೂ ನಗಣ್ಯ ಆಗಿಹೋದವು.
ಅದೇ ಕಾರ್ಯಕ್ರಮದಲ್ಲಿ ಇನ್ನೊಬ್ಬಳಿದ್ದಳು. ೪೦ರ ಹೆಣ್ಣು, ಗಂಡನಿಂದ ಬೇರೆಯಾದವಳು, ಒಂಟಿಯಾಗಿ ಮಗುವನ್ನು ಬೆಳೆಸುತ್ತಿರುವವಳು. ಅವಳು ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದಳು, ಸ್ವಲ್ಪ ಜಗಳಗಂಟಿಯೂ ಹೌದು. ಆದರೆ ಅವಳು ಪಾರದರ್ಶಕ ವ್ಯಕ್ತಿತ್ವದವಳು. ಅವಳು ಸುಮಾರು ಜನರಿಗೆ ಇಷ್ಟವಾಗಲೇ ಇಲ್ಲ. ಅವಳ ಒರಟುತನ ಒಂಟಿತನದ ಫಲ ಅನ್ನುವುದು ಮರೆತುಹೋಗಿ ಎಲ್ಲರಿಗೂ ಅವಳ ಸ್ವಭಾವ ಒಂಟಿತನದ ಕಾರಣ ಎನ್ನುವಂತೆ ಕಾಣತೊಡಗಿತು. ಇಲ್ಲಿ ನನಗೆ ಆ ಪ್ರಶ್ನೆ ಬಂದದ್ದು. ಮುಗ್ಧತೆ ಮತ್ತು ಒಳ್ಳೆಯತನ ಎರಡೂ ಬೇರೆ ಬೇರೆ ಅಲ್ಲವಾ ಅಂತ. ಇವಳು ಜಗಳಗಂಟಿ ಅನ್ನುವುದು ಇವಳ ತಪ್ಪು ಎಂದರೆ ಅದು ಓಕೆ, ಆದರೆ ’ಆ ಇನ್ನೊಬ್ಬಳು ಪಾಪ ಎಷ್ಟು ಇನ್ನೋಸೆಂಟ್, ಇವಳು ಅಲ್ಲ. ಅದಕ್ಕೇ ಇವಳು ಕೆಟ್ಟವಳು’ ಎನ್ನುವ ಮಾನದಂಡ ಎಷ್ಟರ ಮಟ್ಟಿಗೆ ಸರಿ?
ನನಗೆ ಪರಿಚಯದ ಒಂದು ಕುಟುಂಬ, ಇಬ್ಬರು ಸೊಸೆಯಂದಿರು. ಒಬ್ಬಾಕೆ ಮನೆ ನಡೆಸುತ್ತಾಳೆ, ಇನ್ನೊಬ್ಬಳು ಹೊರಗೆ ಹೋಗಿ ದುಡಿಯುತ್ತಾಳೆ. ಈಗಿನ ಉದ್ಯೋಗ ವ್ಯವಸ್ಥೆ ಸವಾಲೆಸೆಯುವ ಟಾರ್ಗೆಟ್. ಡೆಡ್ ಲೈನ್ ಗಳ ನಡುವಿನ ಕೆಲಸ. ಮನೆ, ಸಂಸಾರ ಎರಡನ್ನೂ ಹೊಂದಿಸುವುದರಲ್ಲಿ ಹಣ್ಣಾಗಿ ಹೋಗಿರುತ್ತಳೆ. ಆದರೆ ಎಲ್ಲರ ಕಣ್ಣಲ್ಲೂ ಮನೆಯಲ್ಲಿರುವ ಸೊಸೆ ’ಪಾಪದವಳು’ ಏನೂ ಗೊತ್ತಾಗೊಲ್ಲ. ಇವಳಾದರೆ ’ಅವಳಿಗೇನು, ಕೈತುಂಬಾ ದುಡೀತಾಳೆ… ಜಾಣೆ’. ಜಾಣೆ ಎಂಬ ಪದಕ್ಕಿರುವ ಒತ್ತು, ಸಣ್ಣ ಲೇವಡಿ, ಅಸೂಯೆ … ಯಾವ ಮೌಲ್ಯವನ್ನು ಸಪೋರ್ಟ್ ಮಾಡುತ್ತಿದ್ದೇವೆ ನಾವು?
ಅದಕ್ಕೇ ಹೇಳಿದ್ದು ನಾನು, ಮುಗ್ಧತೆ ಒಂದು over rated virtue. ಅದನ್ನು ವೈಭವೀಕರಿಸುತ್ತಾ ನಾವು ಜಾಣತನವನ್ನು ತುಳಿಯುತ್ತಾ, ಪ್ರತಿರೋಧಿಸುತ್ತಾ ಇದ್ದೇವೆ. ಹೀಗಾಗಿ ಮುಗ್ಧತೆಯ ನಟನೆ ಕೆಲವು ಹೆಂಗಸರ ಸಮಸ್ಯೆಗಳಿಗೆ ಸುಲಭ ಪರಿಹಾರ ಆಗಿಬಿಡುತ್ತದೆ.
ಆತ್ಮವಿಶ್ವಾಸ ಇದ್ದು ಸ್ವತಂತ್ರವಾಗಿ ಕೆಲಸ ಮಾಡುವ ಜಾಣ ಹೆಣ್ಣುಗಳು ಕಲ್ಲುಗಳಾಗಿರುವುದಿಲ್ಲ. ಪ್ರೀತಿಯ ಒಂದು ಸ್ಪರ್ಶ, ಪ್ರಶಂಸೆಯ ಒಂದು ಮಾತು, ಮನೆಯಲ್ಲಿನ ಮೆಚ್ಚಿಗೆ ಅವರಿಗೂ ಜೀವಸೆಲೆಯೇ. ಇಂದು ನಮ್ಮ ನಡುವೆ ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಕೊಂಡಿರುವ ಎಷ್ಟು ಹೆಣ್ಣು ಮಕ್ಕಳಿದ್ದಾರೆ, ಎನ್ ಜಿ ವೋ ಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳೆಷ್ಟಿದ್ದಾರೆ, ರಾತ್ರಿ ಗಡಿಯಾರ ಢಣ್ ಢಣ್ ಎಂದು ಯಕ್ಷಗಾನ ನಡೆಸಿದ ಮೇಲೂ ಮನೆಯ ಹೊರಗೆ ಓಡಾಡುತ್ತಾ ಊರಿಂದ ಓಡಿ ಬಂದ ಯಾವುದೋ ಹುಡುಗನ ಪುನರ್ವಸತಿ, ಕಾರಣವೇ ಇಲ್ಲದೆ ಪೋಲೀಸರು ಕರೆದುಕೊಂಡು ಹೋಗಿ ಕೂರಿಸಿಟ್ಟುಕೊಂಡ ಹುಡುಗನ ಬಿಡುಗಡೆ, ಮನೆಯಲ್ಲಿ ಬಾಸುಂಡೆ ಏಟು ತಿಂದು ಇನ್ನು ಅಲ್ಲಿದ್ದರೆ ಸತ್ತೇ ಬಿಡುತ್ತೇನೆ ಎಂದು ಹೊರಗೆ ಬಂದ ಹೆಣ್ಣಿಗೆ ಒಂದು ನೆರಳು …. ಹೀಗೆ ನಾನಾ ಕಾರಣಕ್ಕಾಗಿ ಕೆಲಸ ಮಾಡುತ್ತಿರುವ ನನ್ನ ಆ ಎಲ್ಲಾ ಗೆಳತಿಯರು ಬುದ್ಧಿವಂತೆಯರೇ, ನಿಮ್ಮ ಸಿದ್ಧಮಾದರಿಯಲ್ಲಿರುವಂತೆ ಪ್ರಪಂಚವನ್ನು ಬೆರಗುಗಣ್ಣುಗಳಿಂದ ನೋಡುವ ಅತಿ ಮುಗ್ಧರಲ್ಲ. ಹಾಗೆಂದು ಅವರನ್ನು ಮೆಚ್ಚಿಕೊಳ್ಳದೆ ಇರಲು ಸಾಧ್ಯವೇ?
ನಾನು ತುಂಬಾ ಗೌರವಿಸುತ್ತಿದ್ದ, ತುಂಬಾ ಓದಿಕೊಂಡಿದ್ದ ಒಬ್ಬರು, ’ ನನ್ನ ಹೆಂಡತಿ ಮನೆ ಬಿಟ್ಟು ಹೊರಗೆ ಹೆಜ್ಜೆ ಇಡಬೇಕಾದರೆ ನಾನು ಜೊತೆಗೆ ಇರಲೇಬೇಕು, ಅವಳ ಆ ಮುಗ್ಧತೆಯ ಮುಂದೆ ಯಾವ ಸಾಧನೆ ದೊಡ್ಡದು ಹೇಳು’ ಎಂದು ಕೇಳಿದ್ದರು. ಯಾಕೋ ನಾನು ಮತ್ತೆ ಬೆಚ್ಚಿ ಬಿದ್ದಿದ್ದೆ.

‍ಲೇಖಕರು avadhi

June 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. Rj

    One can simply read this just to feel something..
    Nothing to comment here.
    Simple.Genuine.Readable.
    Thank you.
    -Rj

    ಪ್ರತಿಕ್ರಿಯೆ
  2. lalitha siddabasavaiah

    ಪ್ರಿಯ ಸಂಧ್ಯಾ , ತುಂಬ ಸಮಯೋಚಿತ ಲೇಖನ ಇದು. ಓದಿ ಮನಸ್ಸು ನಿರಾಳವಾಯಿತು, ನನ್ನಂತೆ ಇತರರೂ ಯೋಚಿಸುತ್ತಾರೆ ಅಂತ ಗೊತ್ತಾದಾಗ ಆಗುವ ನಿರಾಳ! ಹೀಗೆಯೆ ಅಲಂಕಾರ ಮಾಡಿಕೊಳ್ಳುವ ಹೆಣ್ಣುಮಕ್ಕಳ ಬಗ್ಗೆಯೂ ಅಸಹನೆಯಿದೆ. ಅವಳು ತುಂಬಾ ಫ್ಯಾಷನ್ನು ಅಂತ ಹೀಯಾಳಿಸಿ ಲಕ್ಷಣವಾಗಿ ಅಲಂಕರಿಸಿಕೊಳ್ಳುವ ಕಲೆಯಿರುವ ಹೆಣ್ಣುಮಕ್ಕಳ ಚೇತೋಹಾರಿ ಗುಣವನ್ನೆ ಅವಗುಣವನ್ನಾಗಿ ಮಾಡಿಬಿಡುವ ಧ್ವಂಸಕ ಬುದ್ಧಿಯೂ ಹಲವಾರು ಜನದಲ್ಲಿದೆ.ಕಪಿಗಳಂತಿರುವುದು ಮುಗ್ಧತೆಯ ಒಂದು ಭಾಗ ಅನ್ನೋ ಮನೋಭಾವವೂ ಇದೆ. ನಮ್ಮ ಸ್ಕೂಲು ದಿನಗಳಲ್ಲಿ ಮಂಗನಂತಿರುತ್ತಿದ್ದ ನಾವು ಇಂಥಾ ಮಾತು ಕೇಳಿ ನಾವು ಬಹಾಳ ಗ್ರೇಟ್ ಅಂತ ತಿಳ್ಕೊಂಡು ನಮ್ಮೊಂದಿಗೆ ಓದುತ್ತಿದ್ದ ಲಕ್ಷಣವಾಗಿ ಶಿಸ್ತಾಗಿ ಶಾಲೆಗೆ ಬರುತ್ತಿದ್ದ ಚಂದ್ರಾ ಎನ್ನುವ ಹುಡುಗಿಯನ್ನು ಸುಮ್ಮ ಸುಮ್ಮನೆ ಆಡಿಕೊಂಡು ದೂರ ಇಟ್ಟಿದ್ದೆವು.ವಾಸ್ತವವಾಗಿ ತುಂಬ ಬುದ್ಧಿವಂತೆ ಅವಳು. ಈಗ ಅಷ್ಟಿಲ್ಲವಾದರೂ ಲಕ್ಷಣವಾಗಿ ಅಲಂಕರಿಸಿಕೊಳ್ಳುವ ಹೆಣ್ಣುಮಕ್ಕಳ ಬಗ್ಗೆ ಒಂದು ಅಸಹನೆಯಂತು ಒಳಗೊಳಗೆ ಇರುತ್ತದೆ. ಸಂಧ್ಯಾ ಇದರ ಬಗ್ಗೆಯೂ ಬರೆಯಿರಿ, ಸುಮ್ಮನೆ ಒಂದು ಕೋರಿಕೆ ಅಷ್ಟೆ. ಲೇಖಕಿಗೆ ವಸ್ತು ನಿರ್ದೇಶನ ಮಾಡುವ ಧಾರ್ಷ್ಟ್ಯ ಅಲ್ಲ ಕಣ್ರೀ .

    ಪ್ರತಿಕ್ರಿಯೆ
  3. Badarinath Palavalli

    ತುಂಬಾ ಆಳ ಅರ್ಥಗಳಿರುವ ಬರಹ. ಮುಗ್ಧತೆಯೂ ನಟನೆಯಾದ್ರೆ ಇನ್ನೂ ನಿಜಕ್ಕೆ ಎಲ್ಲಿ ಬೆಲೆ ಇದೆ. ಮುಗ್ಧತೆಯ ವಿವಿಧ ಮಜಲುಗಳನ್ನು ಚೆನ್ನಾಗಿ ನಿರೂಪಿಸಿದ್ದೀರಾ.

    ಪ್ರತಿಕ್ರಿಯೆ
  4. suseela

    Dear Sandhya,
    Again I appreciate ur analysation.I also have the same feelings about the subjects u wrote. Ur choosing of the topics are very nice. Very nice article sandhya.

    ಪ್ರತಿಕ್ರಿಯೆ
  5. Vijeta M

    ಈ ಲೇಖನ ಓದಿ ನನಗೆ ಆದ ಆನಂದ ಅಪಾರ. ಏನೋ ಒಂದು ತರದಲ್ಲಿ ಮನಸ್ಸು ಖುಷಿಯಾಯಿತು. ನನಗು ಯಾವಾಗಲು ಹೀಗೆ ಅನ್ಸೋದು, ಅದನ್ನ ಇವ್ರು ಎಷ್ಟು ಚನ್ನಾಗಿ ಇಲ್ಲಿ ವ್ಯಕ್ತಪಡಿಸಿದ್ದಾರೆ ಅಂದರೆ ನಾನು ಹತ್ತು ಹಲವು ಜನಕ್ಕೆ ಇದನ್ನು ಓದಲು ಲಿಂಕ್ ಪಾಸ್ ಮಾಡಿದ್ದೆ.. ಸಂಧ್ಯಾ ನೀವು ನಿಜವಾಗಲು ಗ್ರೇಟ್.. ನನ್ನ ಸುತ್ತಮುತ್ತಲು ಎಲ್ಲ ಹೀಗೆ ಯೋಚನೆ ಮಾಡೋದು, ಸ್ವಲ್ಪ ಒಳ್ಳೆ ತರ ಡ್ರೆಸ್ ಮಾಡ್ಕೊಂಡ್ರೆ ಅವ್ಳು ತುಂಬಾ ಫಾರ್ವರ್ಡ್ ಅವಳಿಗೆ ಒಂಚೂರು ಸೂಕ್ಷ್ಮ ಅನ್ನೋದೇ ಗೊತ್ತಿಲ್ಲ, ಸಿಕ್ಕಾಪಟ್ಟೆ ಜೋರು ಅಂತಾರೆ.. ಆದರೆ ಅವಳೆಂಥ ಜಾಣೆ ಅವಳಿಗೆಷ್ಟು ಜವಾಬ್ದಾರಿ, ಮನೆಯ ಹೊರಗೂ ಒಳಗೂ ಹೇಗೆ ಎಲ್ಲ ನೊಡ್ಕೊಳತಾಳೆ ಅನ್ನೋ ಕಲ್ಪನೆ ಈ ಜನಕ್ಕೆ ಕಮ್ಮಿ. ಏನೇ ಅನ್ನಿ ಮುಗ್ದತೆ ನೆ ಬೇರೆ ಜಾಣ್ಮೆ , ಸಾಧನೆ , ಧೈರ್ಯ ಮತ್ತು ಜವಾಬ್ದಾರಿಗಳೇ ಬೇರೆ.

    ಪ್ರತಿಕ್ರಿಯೆ
  6. Sarala

    ಮುಗ್ದತೆಯ ಸೋಗು ಹಾಕೋ ಹೆಂಗಸರಿಗೆ ಇತರರ, ಅದರಲ್ಲೂ ಗಂಡಸರ ಅನುಕಂಪ, ಸಹಾಯ ಎಲ್ಲ ಸಿಕ್ಕತ್ತೆ ಅನ್ನೋ ಬುದ್ದಿವಂತಿಕೆ ಮಾತ್ರ ಚೆನ್ನಾಗಿರತ್ತೆ. ಆತ್ಮವಿಶ್ವಾಸ, ಧೈರ್ಯ ಇರೋ ಹೆಣ್ಣು ಮಕ್ಕಳು ಸ್ವಲ್ಪ ತಾತ್ಸಾರಕ್ಕೆ ಒಳಗಾಗುತ್ತಾರೆ ಅಂತ ನನಗೇ ಅನುಭವಕ್ಕೆ ಬಂದಿದೆ.

    ಪ್ರತಿಕ್ರಿಯೆ
  7. Shwetha Hosabale

    Very nice…ನಿಮ್ಮ ಆಲೋಚನೆಯ ಧಾಟಿ ವಿಶ್ಲೇಷಣೆಯ ರೀತಿ ತುಂಬಾ ಇಷ್ಟ ಆಗತ್ತೆ…”ಯಾವುದನ್ನೇ ಆಗಲಿ ನಾವು ತೀವ್ರವಾಗಿ ಮೆಚ್ಚಿಕೊಳ್ಳುವುದು ಅಲ್ಲಿ ನಮ್ಮ ಅನುಭವಗಳು ಸಮರ್ಥವಾಗಿ ವ್ಯಕ್ತವಾಗಿವೆ ಅನ್ನೋ ಕಾರಣಕ್ಕೆ” ಅಂಥ ನಿನ್ನೆ ವಿವೇಕ್ ಶಾನಭಾಗ್ ರ ಲೇಖನದಲ್ಲಿ ಓದಿದ್ದೆ. ಅದೆಷ್ಟು ನಿಜ ಅಂಥ ನಿಮ್ಮ ಲೇಖನ ಓದಿದಾಗೆಲ್ಲಾ ಅನಿಸ್ತಾ ಇರತ್ತೆ. ಏನೇನೋ ಅನಿಸತ್ತೆ…ಕಾಡತ್ತೆ…ಆದ್ರೆ ಬರೆಯೋಕೆ ಆಗಿರಲ್ಲ…ಅಂಥ ಭಾವಗಳು ಯೋಚನೆಗಳಿಗೆಲ್ಲ ಸಮರ್ಥವಾದ ಅಭಿವ್ಯಕ್ತಿ ಕೊಟ್ಟು ಧ್ವನಿಯಾಕ್ತಿರೋದಕ್ಕೆ ಖುಷಿ ನೀಡ್ತಿರೋದಕ್ಕೆ ತುಂಬಾ ಥ್ಯಾಂಕ್ಸ್:-)
    ಆದ್ರೆ ಮುಗ್ದತೆಗೆ ಸಂಬಂಧಿಸಿದಂತೆ ರಿಯಾಲಿಟಿ ಶೋನ ಹೋಲಿಕೆಯ ವಿವರಣೆಯನ್ನು ಒಟ್ಟಾರೆ ಒಪ್ಪಿಕೊಳ್ಳಬಹುದಾದರೂ, ಅನುಕೂಲಕ್ಕೆ ತಕ್ಕಂತೆ ಮಾತಾಡುವ ಸಮಯಸಾಧಕತನವನ್ನ ಹಲವು ಬಾರಿ ಗಮನಿಸಿರುವುದರಿಂದ ಪಾರದರ್ಶಕ ವ್ಯಕ್ತಿತ್ವದವಳು ಅಂಥ ನೀವು ಯಾರ ಬಗ್ಗೆ ಹೇಳ್ತಿದ್ದೀರೋ ಅದನ್ನು ಒಪ್ಪಿಕೊಳ್ಳೋದಕ್ಕೆ ಕಷ್ಟ;

    ಪ್ರತಿಕ್ರಿಯೆ
  8. Sowmya

    Very true Sandhya, the vicious nature in some women behind the so called innocent facade can shake you up thoroughly. It can make you sit up and take stock of your own gullibility. It has been my personal experience.

    ಪ್ರತಿಕ್ರಿಯೆ
  9. ಜೋಗಿ

    The innocent and the beautiful Have no enemy but time ಅಂತ ಯೇಟ್ಸ್ ಹೇಳಿದ್ದು ನೆನಪಾಯ್ತು.

    ಪ್ರತಿಕ್ರಿಯೆ
  10. ಕಾವ್ಯಶ್ರೀ

    ಒಳ್ಳೆಯ ಲೇಖನ ಸಂಧ್ಯಾ! ಮುಗ್ಧತೆಯ ಮೊಗವಾಡ ತೊಟ್ಟವರು, ಅದನ್ನೇ ಬಂಡವಾಳ ಮಾಡಿಕೊಂಡವರು, ಅದಕ್ಕೇ ಮಣೆ ಹಾಕುವವರು… ಇಂತಹವರೆಲ್ಲಾ ನಮ್ಮ ಸುತ್ತಮುತ್ತ ಇನ್ನೂ ಇದ್ದಾರಲ್ಲಾ ಅನ್ನುವುದೇ ನನಗೆ ಸೋಜಿಗದ ವಿಷಯ. ಬದುಕಿನ ಹಾದಿಯಲ್ಲಿ ಇಂತಹ ಹಲವಾರು ಸನ್ನಿವೇಶಗಳನ್ನು ಎದುರುಗೊಂಡಿದ್ದೇನೆ. ಆದರೆ ಮಂತ್ರಕ್ಕೆ ಮಾವಿನಕಾಯಿ ಉದುರೋದಿಲ್ಲ ಅಲ್ವಾ… ಸ್ವಸಾಮರ್ಥ್ಯದಿಂದಲೇ ಜೀವನದಲ್ಲಿ ಮುನ್ನಡೆಯಲು ಸಾಧ್ಯ!

    ಪ್ರತಿಕ್ರಿಯೆ
  11. Anonymous

    sandya medam,
    mugdhate ennuva padakke nimma lekanadinda hosa artha bandirabahudu andukondiddene. mugdhate ennuva padavannu ella dikkinalli chennagi avalokisiddiri…odida mele nanu omme i vicharavagi alochisuvantagide…

    ಪ್ರತಿಕ್ರಿಯೆ
  12. sugunamahesh

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸಂಧ್ಯಕ್ಕ ನಿಜಕ್ಕೂ ನಾನು ಇದೇ ರೀತಿ ಯೋಚಿಸುತ್ತಲಿದ್ದೆ… ಮುಗ್ಧತೆಯನ್ನು ಪ್ರದರ್ಶಿಸಿ ಜನರಲ್ಲಿ ಒಲವು ಮೂಡಿಸಿಕೊಳ್ಳುವವರು ತುಂಬಾ ಜನರಿದ್ದಾರೆ.

    ಪ್ರತಿಕ್ರಿಯೆ
  13. Geeta Hegde

    ಸ೦ಧ್ಯಾ ಮೇಡಮ್,
    ತು೦ಬಾ ಅರ್ಥಗರ್ಭಿತವಾದ ಲೇಖನ.ಆ ರಿಯಾಲಿಟಿ ಶೊ ನೋಡಬೇಕಿದ್ರೆ ನಾನೂ ಇದೇ ರೀತಿ ಅ೦ದುಕೊ೦ಡಿದ್ದೆ,ಆ ಪರಭಾಷಾ ನಟಿ ಏಕೋ ಅತಿಯಾಡುತ್ತಿದ್ದಾಳೆ ಎ೦ದು. ಅದೇ ನಮ್ಮದೇ ನೆಲದ ನಟಿಯ ಬಗ್ಗೆ ಸಹಾನುಭೂತಿಯಾಗಿತ್ತು ಕೂಡ. ಹಿ೦ದಿ ಸಿನಿಮ ’ಪಾ’ ದಲ್ಲಿ ಅರು೦ಧತಿ ನಾಗ್ ಒ೦ದು ಮಾತು ಹೇಳುತ್ತಾಳೆ, ’ಒಬ್ಬ ಒ೦ಟಿ ತಾಯಿಯ ಹ್ರದಯ ಬೇರೆ ಎಲ್ಲರ ಬಗ್ಗೆ ಗಟ್ಟಿಯಾಗಿರುತ್ತದೆ, ಅದು ಮ್ರದುವಾಗುವುದಿದ್ದರೆ ತನ್ನ ಮಗುವಿಗಾಗಿ ಮಾತ್ರ.’

    ಪ್ರತಿಕ್ರಿಯೆ
  14. ಸತೀಶ್ ನಾಯ್ಕ್

    ಶಾಪಿಂಗ್ ಮಾಲ್ ನಲ್ಲಿ ಕೆಲಸ ಮಾಡುವ ಒಂದು ಹುಡುಗಿ.. ದಿನಕ್ಕೆ ಕಮ್ಮಿ ಎಂದರೂ ಮುನ್ನೂರು ಜನರ ಬಳಿ ಮಾತಾಡಬೇಕು.. ವ್ಯವಹರಿಸಬೇಕು.. ವಿವರಿಸಬೇಕು.. ಮುಗ್ಧತೆಯ ಜೊತೆ ಜೊತೆಗೆ ಆವರಿಸಿಕೊಂಡ ಅವಳಲ್ಲಿನ ಮೌನ.. ಅವಳ ಕೆಲಸಕ್ಕೆ ಪ್ರಯೋಜನವಿಲ್ಲ. ಮಾತಾಡಬೇಕು ಅದು ಅವಳ ಕೆಲಸ.. ಕರ್ತವ್ಯ. ಆ ಹುಡುಗಿ ಮನೆಗೆ ಬಂದ ಒಡನೆ ಪ್ರಪಂಚಕ್ಕೂ ತನಗೂ ಸಂಬಂಧವೇ ಇಲ್ಲದ ಹಾಗೆ ತನ್ನ ವ್ಯಾವಹಾರಿಕ ವರ್ತನೆಗಳಿಗೆ ಕದವಿಕ್ಕಿ ಬೇಗ ಜಡಿದು ಕೊಳ್ಳುತ್ತಾಳೆ ಮತ್ತದನ್ನ ಅವಳು ತೆರೆಯೋದು ಅದೇ ಶಾಪಿಂಗ್ ಮಾಲಿನಲ್ಲಿಯೇ.. ತೆರೆದ ಶಾಪಿಂಗ್ ಮಾಲಿನಂತೆಯೇ ಹಾಗೆ ತೆರೆದುಕೊಂಡ ಅವಳ ವ್ಯಾವಹಾರಿಕ ವ್ಯಕ್ತಿತ್ವವಷ್ಟೇ ಜಗತ್ತಿಗೆ ಬೇಕಾದದ್ದು. ಮನೆಯಲ್ಲಿ ಅವಳ ಮಾತು ಖಾಲಿಯಾಗುತ್ತದೆ. ಅವಳ ಅದೇ ಮೌನ ಖಯಾಲಿಯಾಗಿರುತ್ತದೆ. ತನ್ನ ಮನೆಯವರ ಬಳಿಯೂ ಅವಳು ಹಾಗೊಂದು ಮೌನವನ್ನ ಕಾಯ್ದುಕೊಂಡಿರುತ್ತಾಳೆ.. ಅವಳ ಮುಗ್ಧತೆ ಜಾಗರೂಕವಾಗ್ತದೆ. ಮತ್ತು ಅದಷ್ಟೇ ಅವಳಿಗೆ ಖುಷಿ ಕೊಡುವ ತನ್ನ ತನವಾಗಿರುತ್ತದೆ.
    ಅದೇ ಹುಡುಗಿಯ ಬಗ್ಗೆ ಆ ಹುಡುಗಿಯ ಸ್ವಂತದವರು.. ಪರಿಚಯದವರು.. ಊರಿನವರು ಅಂದುಕೊಳ್ಳೋದು ಹುಡುಗಿ ಪ್ಯಾಂಟು ಶರ್ಟು ಉಡೋದು ಶುರುವಾಯ್ತು. ಇಂಗ್ಲಿಷ್ ಕಲಿತಳು.. ದಿನಾ ಸಾವಿರಾರು ಜನ ಬಂದು ಹೋಗೋ ಜಾಗ.. ಮಾತು ಕಲಿತಳು. ಅಷ್ಟೇ ಹುಡುಗಿ ಬದಲಾದಳು ಅನ್ನೋ ನಿರ್ಧಾರ ತಗೊಳ್ಳೋದು ಅನಾಯಾಸ.
    ನಮ್ಮಲ್ಲಿ ಹಲವರ ಮುಖಗಳು ಕೇವಲ ವ್ಯಾವಹಾರಿಕ ಪ್ರಪಂಚದಲ್ಲಷ್ಟೇ ಪರಿಚಿತವಾದ್ದರಿಂದ ಆ ಮುಖಗಳ ಹಿಂದಿನ ಮುಗ್ಧತೆ ಅದೆಷ್ಟು ಜನಕ್ಕೆ ಕಾಣುವುದೋ ಕಾಣೆ..!! ನಮ್ಮ ಪ್ರಪಂಚ ಮುಗ್ಧತೆಯನ್ನ ಹೀಗೂ ಅಳೆಯುತ್ತದೆ. ಇಂಥಾ ಪ್ರಪಂಚದಲ್ಲಿ ನಮ್ಮ ಮುಗ್ಧತೆಯನ್ನ ಉಳಿಸಿಕೊಳ್ಳೋದು.. ತೋರಿಸಿಕೊಳ್ಳೋದು ಎರಡೂ ಕಷ್ಟವೇ.
    ಬಹಳ ಇಷ್ಟವಾಯ್ತು ನಿಮ್ಮ ಲೇಖನ. ಮುಗ್ಧವಾಗಿ ನಟಿಸೋದಕ್ಕಿಂತ ಮುಗ್ಧವಾಗಿ ಬದುಕೋದೇ ಸುಲಭ. 🙂

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Geeta HegdeCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: