ಶೋಕ ಗೋರಿಯ ಹೊತ್ತು..

ಸಂತೋಷ್ ಅನಂತಪುರ

ತಬ್ಬಿಕೊಂಡು ಸಂತೈಸುವ, ತಲೆ ನೇವರಿಸಿ ಸಮಾಧಾನಿಸುವ, ಬೆನ್ನು ಸವರಿ ಧೈರ್ಯ ತುಂಬುವ, ಬೆಚ್ಚಗಿನ ಸ್ಪರ್ಶ ನೀಡುವ ಅನುಭೂತಿಗಳಾವುದೂ ಒದಗಿ ಬಾರದ ಸಮಯವಿದು. ಶುಭಾಶಯ ವಿನಿಮಯ ಮಾಡಿಕೊಂಡದ್ದಕ್ಕಿಂತಲೂ ಅಧಿಕ ಸಂತಾಪಗಳನ್ನು ನಾವಿಂದು ಹಂಚಿಕೊಂಡಿದ್ದೇವೆ. ಇವರೇ ಎಂದಿಲ್ಲದ, ಯಾರು ಬೇಕಾದರೂ ಆಗಿಬರಬಹುದಾದ ಇಂತಹ ಕ್ಷಣ ಇನ್ನೆಷ್ಟು ಹೊತ್ತು?  ಹೊತ್ತೇ ಕಳೆದು ಹೋಗದಿರುವ ಈ ಹೊತ್ತಲ್ಲಿ ಇನ್ನೆಷ್ಟು ನೋವುಗಳನ್ನು ಹೆತ್ತು ಹೊತ್ತು ಬಾಳು ಸಾಗಬೇಕಿದೆ? ಕಷ್ಟ-ಸಂಕಷ್ಟಗಳ ಆಟ ಮತ್ತದರ ಕಾಟ ಒಂದೇ ಎರಡೇ? ಯಾರಿಗೆ ಯಾರ ಹೆಗಲು ಆಗಿಬರುತ್ತದೋ ಎಂದರಿಯದೇ ಹೋಗುವ ಹೊತ್ತಿನ ಕರಾಮತ್ತು.. ಜೊತೆಗೆ ಪದೇಪದೇ ಕೇಳಿಬರುವ- ‘ಇನ್ನಿಲ್ಲ.. ಇನ್ನಿಲ್ಲ.. ಇನ್ನಿಲ್ಲ..’- ಸುದ್ದಿಗಳು.

ಕನಸುಗಳೇ ಮಾಸಿ ಹೋಗುತ್ತಿರುವ ಈ ದುರ್ಭರ ಸಮಯದಲ್ಲಿ ರೆಪ್ಪೆ ಮುಚ್ಚಿದರೆ ಸಾಕು ಹೊಂಚು ಹಾಕಿ ಬರುವುದು: ಸ್ವಪ್ನಗಳು ಬೆಚ್ಚಿ ಬೀಳಿಸುತ್ತವೆ. ಅಂತಹ ಕ್ಷಣದಲ್ಲಿ ಬೇಕಿರುವುದು-ಮಾತು. ಮಾತುಗಳು ಉರುಳಬೇಕು, ಹೊರಳಬೇಕು. ಉರುಳಿ ಹೊರಳಿ ಹರಳುಗಟ್ಟಬೇಕು. ಮನಮುಟ್ಟುವ, ಹೃದಯ ತಟ್ಟುವ ಮಾತುಗಳ ಮಣಿಸರವನ್ನು ಪೋಣಿಸಬೇಕು. ನಮ್ಮವರಲ್ಲಿ ಮತ್ತು ನಮ್ಮವರಲ್ಲದವರಲ್ಲೂ ಆಡ ಆಡುತ್ತಲೇ ಇರಬೇಕು. ಖುಷಿಯನ್ನು ಹಂಚಿ ನೋವನ್ನು ಮರೆಸುವ ಶಕ್ತಿ ಪ್ರೀತಿ ತುಂಬಿದ ಸಹೃದಯ ಮಾತುಗಳಿಗಿವೆ.

ಹಾಗಾಗಿ ಈ ಹೊತ್ತಲ್ಲಿ ಎಲ್ಲರೂ ಮಾತನಾಡಬೇಕು… ಮಾತನಾಡಿ. ಭಾವನೆಗಳನ್ನು ಹಂಚಿಕೊಂಡು ಹಗುರವಾಗಿ ಜೊತೆಗೆ ಇನ್ನೊಬ್ಬರನ್ನೂ ಹಗುರಗೊಳಿಸಿ. ಹಗುರವಾಗುವುದು, ಹಗುರಗೊಳಿಸುವುದು ಯಾವುದೇ ಕಾಲದಲ್ಲೂ ಬೇಕಾಗಿರುವ ಬಹುದೊಡ್ಡ ಕಾರ್ಯ. ಅದರಲ್ಲೂ ಈಗಿನ ಸಮಯದಲ್ಲಿ ಮಾತಿನ ಮಂಟಪದೊಳಗೆ ಭಾವನೆಯ ಬೆಳಕನ್ನು ಹಚ್ಚಬೇಕು. 

ಟಿ.ವಿ ತೆರೆದುಕೊಂಡರೆ ಸಾಕು ಸುಡುಗಾಡಲ್ಲಿ ಉರಿಯುವ ಬೆಂಕಿಯ ಕೆನ್ನಾಲೆಗಳು ಎತ್ತರೆತ್ತರಕ್ಕೆ ಚಾಚುತ್ತಲೇ.. ಒಂದರ ಹಿಂದೆ ಒಂದರಂತೆ ಉಸಿರ ನಿಲ್ಲಿಸಿದ ದೇಹಗಳು ಚಿತೆಯನ್ನು ಏರುತ್ತಲೇ ಇವೆ. ಹುಳಗಳು ಸತ್ತು ಬೀಳುವಂತೆ ಜನರು ಉಸಿರನ್ನು ಚೆಲ್ಲುತ್ತಿದ್ದಾರೆ. ಕಟ್ಟಿಗೆ ತುಂಡುಗಳು ತಾ ಮೇಲು, ನಾ ಮೇಲು ಎಂದು ಶವಗಳ ಮೇಲೇರಿ ಮಲಗುತ್ತಿವೆ. ಭೀಕರವಾಗಿ ಹಸಿದಿರುವ ಅಗ್ನಿಯು ತನ್ನ ಕೆನ್ನಾಲಿಗೆಯನ್ನು ಹೊರಕ್ಕೆ ಚಾಚಿ ಸಾಧ್ಯವಾದಷ್ಟು ಮಟ್ಟಿಗೆ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದೆ. ಎಡೆಬಿಡದೆ ಚಿತಾಗಾರಗಳಲ್ಲಿ ನಡೆಯುತ್ತಿರುವ ದಹನವನ್ನು ಕಂಡರೆ ಅಗ್ನಿಯು ತನ್ನ ಹಸಿವನ್ನು ನೀಗಿಸಿಕೊಂಡ ಖಾಂಡವ ದಹನವನ್ನು ನೆನಪಿಸುತ್ತಿದೆ.. ಲೋಕದ ಇತರ ಭಾಗಗಳಲ್ಲಿ ಅಗ್ನಿಯು ಆಪೋಶನಗೈದ ಬಗೆಯೂ ನೆನಪಾಗುತ್ತಿದೆ.

ಹೀಗಿರಲು ಅಳಿದ ಮೇಲೆ ಉಳಿವವರಾದರೂ ಯಾರು? ಪತ್ರಿಕೆಯ ಪುಟಪುಟಗಳಲ್ಲೂ ದುರಂತ ಸುದ್ದಿಗಳೇ ಬಹುಪಾಲು. ಪ್ರಭುತ್ವದ ಕಣ್ಣೊರೆಸುವ ತಂತ್ರದಿಂದ ತೊಡಗಿ ವ್ಯವಸ್ಥೆಯ ಒದ್ದಾಟದವರೆಗಿನ ಸುದ್ಧಿಗಳದ್ದೇ ಮಹಾಪೂರ. ಅಕ್ಷರ-ಶಬ್ದಗಳಿಗೇ ಬೇಸತ್ತು ಹೋಗುವಷ್ಟು ತುಂಬಿಕೊಂಡ ನೋವಿನ ಸುದ್ದಿಗಳಿಂದ ಪುಟಗಳು ಮುಚ್ಚಲ್ಪಟ್ಟಿವೆ. ಒಂದೊಮ್ಮೆ ಸತ್ಯವೆಂದು ಕಂಡದ್ದೆಲ್ಲವೂ ಮಿಥ್ಯವಾಗುತ್ತಿರುವ ಗಳಿಗೆಯಲ್ಲಿ ಇಂದು ನಾವಿದ್ದೇವೆ.

ಸುಖಾಸುಮ್ಮನೆ ಆಯಸ್ಸಿನ ಎರಡು ವರ್ಷವು ಯಾರದ್ದೋ ತಪ್ಪಿಗೆ ಕಳೆದು ಹೋಯಿತಲ್ಲ. ಇನ್ನೆಷ್ಟು ವರ್ಷ? ಎಷ್ಟು ದೊಡ್ಡ ನಷ್ಟ, ಎಂತಹ ಕಷ್ಟ. ಮಾಡಿ ಮುಗಿಸಲೇಬೇಕಾದ ತುರ್ತು ಕಾರ್ಯಗಳು ಒಂದು ಕಡೆ. ಆತ್ಮಸ್ಥೈರ್ಯ ಕುಸಿದ ಮನಸ್ಸುಗಳನ್ನು ಕಟ್ಟುವ ತುರ್ತು… ಆಪ್ತೆಷ್ಟರ ಯೋಗ ಕ್ಷೇಮವನ್ನು ವಿಚಾರಿಸಿ, ಮಾನಸಿಕಾವಸ್ಥೆಯನ್ನು ಹಿಗ್ಗಿಸುವ ಜರೂರತ್ತು ಇನ್ನೊಂದೆಡೆ. ಅಂತಃಕರಣದ ಕಾಳಜಿಯು ನೊಂದವರತ್ತ ಹರಿಯಬೇಕಿದೆ. ಒತ್ತಡ, ಬೇನೆಗಳನ್ನು ಸಹಿಸಿಕೊಳ್ಳುತ್ತಲೇ ನಿತ್ಯದ ಜವಾಬ್ದಾರಿಯನ್ನೂ ನಿರ್ವಹಿಸಿ ಪೂರೈಸಬೇಕಿದೆ.

ಕೊನೆಯ ಭರವಸೆಯೇನೋ ಎಂಬಂತೆ ಸ್ನೇಹಿತರು, ಆಪ್ತರು, ಪರಿಚಿತರು, ಅಪರಿಚಿತರಿಂದ ಕರೆಗಳ ಮೇಲೆ ಕರೆಗಳು. ಅತ್ತ ಕಡೆಯಿಂದ ನಡುಗುವ ಕಂಠಗಳಿಂದ ಮಾತೇ ಹೊರಡುವುದಿಲ್ಲ. ಪ್ರಯತ್ನ ಪೂರ್ವಕ ಮೆಲು ದನಿಯಲ್ಲಿ ಕಷ್ಟ ಪಟ್ಟು ಹೊಮ್ಮುವ ಶಬ್ದಗಳು… ಭಾವನೆಯನ್ನು ವ್ಯಕ್ತಪಡಿಸಲೂ ಪಡುವ ಅವ್ಯಕ್ತ ವೇದನೆ… ಹಾಸಿಗೆ, ಆಕ್ಸಿಜನ್, ಐ.ಸಿ.ಯು, ವೆಂಟಿಲೇಟರ್, ರೆಮಿಡಿಸಿವರ್ಗಳಿಗಾಗಿ ಅಂಗಾಲಾಚುವಿಕೆಯನ್ನು ಕೇಳಿದ್ದೇ ಗಂಟಲ ಪಸೆ ಒಣಗಿ ಎದೆ ನಡುಗಲು ತೊಡಗುತ್ತದೆ. ಅಸಹಾಯಕತನದ ಸಾಥ್ ಬೇರೆ ಜೊತೆಗೆ. ಕೇಳಿದ ಸಹಾಯಗಳಲ್ಲಿ ಒಂದೋ ಎರಡೋ ನಡೆಯಿತೆಂದರೆ ಅದೇ ಮಹತ್ಕಾರ್ಯ. ಅವರವರಿಂದ ಮಾಡಿಸಬೇಕೆಂದಿರುವುದನ್ನು ಕರ್ಮವು ಫಲಿಸುವಂತೆ ಮಾಡುತ್ತದೆ. ಮಾಡಲಾಗಲಿಲ್ಲವಲ್ಲ ಎಂಬ ವೇದನೆಯು ಹಿಂಡಿ ಹಿಪ್ಪೆ ಮಾಡುತ್ತದೆ. ನಾಲಗೆ ಉರುಳುವುದನ್ನೇ ಮರೆತು ಕುಳಿತಿದೆ.

ಒದಗಿಸಿದ ವ್ಯವಸ್ಥೆಯಲ್ಲಿ ಚೇತರಿಕೆ ಕಂಡುಬರುತ್ತಿದ್ದಂತೆಯೇ ಲೆಕ್ಕಾಚಾರದಲ್ಲಿ ಅದೇನೋ ಎಡವಟ್ಟು. ಸಿಗಬೇಕಾದಲ್ಲಿ ಸಿಗಬೇಕಾದ ಉಪಚಾರಗಳು ದೊರೆಯುತ್ತಿಲ್ಲ. ಹಾಗಿದ್ದೂ ಕಷ್ಟಪಟ್ಟು ದೊರಕಿಸಿಕೊಟ್ಟದ್ದಕ್ಕೆ ತುಸು ಸಮಾಧಾನ. ಹಾಗಂದುಕೊಂಡು ವಿಶ್ರಾಮದ ಉಸಿರು ಬಿಡುತ್ತಿರುವಾಗ ಒಂದೇ ಸಮನೆ ಮೊಬೈಲಿನ ಚೀರಾಟ. ಕರೆಯನ್ನು ಸ್ವೀಕರಿಸಲೋ ಬೇಡವೋ ಎನ್ನುವ ದ್ವಂದ್ವದ ಜೊತೆಗೆ ಆಘಾತವನ್ನು ಮೊದಲಿಗೆ ಸಹಿಸಬೇಕಿರುವ ಕರ್ಮ. ಧೈರ್ಯದಿಂದ ಕರೆಯನ್ನು ಎತ್ತಿಕೊಂಡರೆ ಅತ್ತ ಕಡೆಯಿಂದ ಅಳುವ ದನಿ- ‘ಇಷ್ಟು ಸಹಾಯ ಮಾಡಿದ್ದೀಯ… ವೆಂಟಿಲೇಟರನ್ನು ಒದಗಿಸಿ ಪ್ರಾಣ ಉಳಿಸಿಬಿಡು’- ಯಾಚನೆ. ವೆಂಟಿಲೇಟರ್ ಗೆ ಹೋದರೆ ಉಳಿಯುವ ಸಾಧ್ಯತೆ ಬಹಳ ಕ್ಷೀಣವೆಂಬ ಅರಿವಿದ್ದರೂ ಭರವಸೆಯು ಕಂತಿರುವುದಿಲ್ಲವಲ್ಲ.. ಹಾಗಾಗಿ ಭಿನ್ನಹಕೆ ಮೊರೆ ಹೋಗುವ ಬಾಯಿ.

ಹಲವು ಅಪರಿಚಿತ ಸಂಖ್ಯೆಗಳು ಮೊಬೈಲಿನಲ್ಲಿ ಪ್ರದರ್ಶಿತಗೊಳ್ಳುತ್ತಲೇ ಇರುತ್ತವೆ. ಒಂದಿನಿತೂ ಬಿಡುವು ಪಡೆಯದ ಮೊಬೈಲ್ ಕೀರುತ್ತಲೇ ಇರುವ ಹೊತ್ತಲ್ಲಿ ಕರೆಯನ್ನು ಸ್ವೀಕರಿಸಲು ಕೈಗಳಲ್ಲಿ ನಡುಕ. ಹೇಳಲಾಗದ ಯಾತನೆಯೊಂದು ನಾಭಿಯಿಂದ ಮೇಲೆಕ್ಕೇರಿದ್ದೇ ಕರೆಯನ್ನು ಸ್ವೀಕರಿಸುವ ಧೈರ್ಯ ಉಡುಗಿ ಹೋಗಿರುತ್ತದೆ. ಕರೆಯನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂಬ ಪ್ರಶ್ನೆ ಸುತ್ತಲಿನ ಮುಖಗಳಲ್ಲಿ. ನಿಸ್ತೇಜ ಕಣ್ಣುಗಳು ಹೇಳುವುದನ್ನು ಅರ್ಥ ಮಾಡಿಕೊಂಡಂತಿಲ್ಲ ಅವುಗಳು. ಮತ್ತೆ ಮತ್ತೆ ಹುಬ್ಬುಗಳನ್ನು ಗಂಟಿಕ್ಕಿಸಿ ಕಣ್ಣುಗಳನ್ನು ಕಿರಿದಾಗಿಸಿ, ಮೋರೆ ತುಂಬಾ ಪ್ರಶ್ನಾರ್ಥಕ ಚಿಹ್ನೆಗಳನ್ನು ಹೊತ್ತು ಉತ್ತರಕ್ಕಾಗಿ ಇದಿರು ನೋಡುವ ಕಾಯಕ ನಿತ್ಯದ್ದು. ಅದಾಗಲೇ ಹಣೆತುಂಬಾ ಚಿಂತೆಯ ಗೆರೆಗಳು ಎದ್ದು ಕುಳಿತಿರಲು ಕಾಲವೇ ವೃದ್ಧಾಪ್ಯವನ್ನು ಹೊದ್ದು ನಿಂತಂತೆ ಭಾಸವಾಗುತ್ತಿದೆ.

‘ಠಣ್’ ಎಂಬ ಸದ್ದಿನೊಂದಿಗೆ ವಾಟ್ಸ್ಅಪ್ ಸಂದೇಶ ಮೊಬೈಲ್ ಪರದೆಯಲ್ಲಿ ಫಳಕ್ಕನೆ ಮಿಂಚಿ ಮರೆಯಾಗುತ್ತದೆ. ತೆರೆದು ನೋಡಲೂ ಭಯ. ಕರೆಯನ್ನು ತೆಗೆದುಕೊಳ್ಳುವಾಗ ಇರುವ ಭೀತಿಗಿಂತಲೂ ಹೆಚ್ಚಿನ ಆತಂಕದ ಸ್ಥಿತಿಯ ನಿರ್ಮಾಣವದು. ಗಟ್ಟಿ ಮನಸ್ಸು ಮಾಡಿ ವಾಟ್ಸ್ಅಪ್ ತೆರೆದು ನೋಡಿದರೆ- ‘ನೋಮೋರ್…’ ಶಬ್ದಗಳು ಅಣಕಿಸುವಂತೆ ನೋಡುತ್ತಿರುತ್ತವೆ. ಅಷ್ಟರವರೆಗೆ ಬಿಗಿ ಹಿಡಿದಿಟ್ಟ ಭಾವನೆಗಳಷ್ಟೂ ಅಲ್ಲೋಲ ಕಲ್ಲೋಲ. ಮನದೊಳಗೆ ಸರಿದು ಹೋಗುವ ಸರದಿ ಇನ್ಯಾರದ್ದೋ ಎಂಬ ಭಯ. ಹೊಟ್ಟೆ ತೊಳಸಿದಂತಹ ವಿಚಿತ್ರ ಅನುಭವ. ಎಂತಹದು ಸ್ಥಿತಿ…

‘ಅತ್ತ ದರಿ ಇತ್ತ ಪುಲಿ’ -ಮನೆಯೊಳಗಿದ್ದರೆ ಬಡತನ ಕೊಲ್ಲುತ್ತದೆ. ಹೊರಗಡಿಯಿಟ್ಟರೆ ಕರೋನಾ ವೈರಸ್ ಕೊಂದು ಬಿಡುತ್ತದೆ. ಯಾವ ಸಾವು ನ್ಯಾಯ? ಬಡತನವೇ ಇಷ್ಟವಾಗಲಿ. ಕಷ್ಟಾನೋ ಸುಖಾನೋ, ಒಪ್ಪತ್ತಿನ ಕೂಳಾದರೂ ಸರಿ ಜೀವವಿರುವುದರಿಂದ ನಾಳೆಯ ಬೆಳಗನ್ನಾದರೂ ನೋಡಬಹುದು. ಭರವಸೆಯನ್ನು ಹೊತ್ತ ದಿನಗಳಿಗಾಗಿ ಕಾಯಬಹುದು.

ಒಂದೊಮ್ಮೆ ಬಡತನವು ಜೀವವನ್ನೇ ತಿಂದಿತೆಂದಾದರೆ ಅಂತಿಮ ಯಾತ್ರೆಯಲ್ಲಿ ಕೆಲವಾದರೂ ಪ್ರೀತಿ ಪಾತ್ರರಿರುತ್ತಾರೆ. ನೆಮ್ಮದಿಯ ವಿದಾಯವಾದರೂ ಸಿಗುತ್ತದೆ. ರೀತಿ ನೀತಿಯಂತೆ ಕಳುಹಿಸಿಕೊಟ್ಟೆವಲ್ಲ ಎಂಬ ಸಮಾಧಾನವೂ ಇರುತ್ತದೆ. ಆದರೆ ಈಗ ಹೊರಗಡಿ ಇಟ್ಟೆವೆಂದರೆ ಕಾಲುಗಳನ್ನೇ ಹಗ್ಗದಿಂದ ಕಟ್ಟಿ ಬೆರಳಿಗೆ ಟ್ಯಾಗ್ ಸಿಕ್ಕಿಸಿಟ್ಟಿರುತ್ತಾರೆ. ಸರದಿ ಬಂದಾಗ ಚಟ್ಟಕ್ಕೇರಿಸಿ ಬಿಡುತ್ತಾರೆ. ನೆಮ್ಮದಿಯ ವಿದಾಯವಂತೂ ದೂರ ದೂರದ ಮಾತು. ಜೊತೆಗೆ ಅರೆಬರೆ ಸತ್ತು ಕರಕಲಾಗುವ ಯೋಗವೂ. ಆಯ್ಕೆ ನಮ್ಮದು.

ಹರೆಯದ ಮಕ್ಕಳನ್ನು ಕಳಕೊಂಡ ಮುಸ್ಸಂಜೆಯ ಹೊಸ್ತಿಲಲ್ಲಿರುವ ಪೋಷಕರು, ಅನಾಥರಾದ ಮಕ್ಕಳು,  ಆಪ್ತೆಷ್ಟರ ಕಳಕೊಂಡ ಜೀವಜೀವಗಳ ನೋವುಗಳಿಗೆಲ್ಲಿದೆ ಪರಿಹಾರ? ಕಾಲಕ್ಕೂ ನೋವನ್ನು ಮಾಸಲಾಗದಿರುವ ಕಷ್ಟ. ಯಾರ ಪಾಲಿಗೆ ಬೇನೆ ಎಷ್ಟೆಷ್ಟು? ನೋಡಿದವರದೆಷ್ಟು? ಎದೆಗೂಡು ಉರಿವ ರಭಸಕ್ಕೆ ದೇಹ ಸುಡುತ್ತಲಿದೆ. ಮರುಕ ಸಂಕಟದ ಅನುಭವ ಹೆಚ್ಚಾಗುತ್ತಲೇ ಹೋಗುತ್ತಿದೆ.. ಮಿಡಿದ ಕಂಬನಿ, ಅತ್ತು ಗೋಳಾಡಿದ ಚಿತ್ರ…

ಹೀಗೆ ಅಸಂಖ್ಯ ವೇದನೆಯನ್ನು ಕಟ್ಟಿಕೊಂಡ ಮುಖಗಳು ಸಾಲು ಸಾಲಾಗಿ ಕಣ್ಣಮುಂದೆ ಹಾದು ಹೋಗುತ್ತಿದ್ದರೆ ಕಂಬನಿಯ ಪಸೆ ಬತ್ತಿದ ಕಣ್ಣುಗಳಲ್ಲಿ ಒಡೆಯುತ್ತಿಲ್ಲ. ಸಂತಾಪಗಳನ್ನಷ್ಟೇ ಹೊತ್ತುಕೊಂಡಿರುವ ಪ್ರಸಕ್ತ ಕಾಲವು ಶೋಕವೊಂದೇ ತನ್ನ ಗುರಿಯೆಂದು ಹುಚ್ಚುಗಟ್ಟಿ ಓಡುತ್ತಿದೆ. ಕಡಿವಾಣ ಹಾಕಬೇಕಲ್ಲ.

‍ಲೇಖಕರು Avadhi

May 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಯಥಾಸ್ಥಿತಿಯನ್ನು ಹೃದಯವೇ ಸ್ಥಬ್ಧ ವಾಗುವಂತೆ ಚಿತ್ರಿಸಿದ್ದೀರಲ್ಲ ಸಂತೋಷ್?!
    ಪಾದಗಳು ಶೂನ್ಯ!

    ಪ್ರತಿಕ್ರಿಯೆ
    • ವಿವೇಕಾನಂದ ಕಾಮತ್

      ಹೊರಗಿನ ವಿದ್ಯಮಾನಗಳು ನಿಜಕ್ಕೂ ನಮ್ಮನ್ನು ಶೋಕದ ಗೋರಿಯೊಳಗೆ ಹುದುಗಿಸುತ್ತಿದೆ…
      ಈಗಿನ ಪರಿಸ್ಥಿತಿಗೆ ಮತ್ತು ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ ಈ ಲೇಖನ.

      ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ವಿವೇಕಾನಂದ ಕಾಮತ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: