ಶಿವು ಹೇಳ್ತಾರೆ ’ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು’

ನಿಮಗೆಲ್ಲರಿಗೂ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು
1525547_4429757159012_2888601162213294549_n
ಶಿವು ಕೆ ಎ 
ಇವತ್ತು ನಮ್ಮಂಥ ನಿಮ್ಮಂಥ ಸಾವಿರಾರು ಲಕ್ಷಾಂತರ ಛಾಯಾಗ್ರಾಹಕರ ದಿನವಾದ್ದರಿಂದ ಇವತ್ತು ನಿಮ್ಮೊಂದಿಗೆ ನನ್ನ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳಬೇಕೆನಿಸಿತು.
ಒಂದು ಹೊಟ್ಟೆಬಿರಿಯ ಪುಷ್ಕಳ ಬೋಜನ, ಎರಡು ಚಲನಚಿತ್ರಗಳನ್ನು ನೋಡಿದ ಮೇಲೆ ಮೂರನೆಯದು ಬೇಡ ಸಾಕು, ಒಂದು ಲಾಂಗ್ ಡ್ರೈವ್ ಹೋಗಿ ಬರುತ್ತಿರುವಂತೆ ಇನ್ನೂ ಸಾಕು ಮನೆಗೆ ಹೋಗೋಣ, ಒಂದೆರಡು ಟಿವಿ ಸೀರಿಯಲ್ ನೋಡಿದ ನಂತರ ಇನ್ನು ಸಾಕು, ಒಂದು ಪುಸ್ತಕವನ್ನು ಫೂರ್ತಿ ಓದಿದ ಮೇಲೆ ಸಿಗುವ ತೃಪ್ತಿ ಮತ್ತು ನೆಮ್ಮದಿ ಸಮಾಧಾನ, ದಿನಪತ್ರಿಕೆ ವಸೂಲಿ ಕೆಲಸಕ್ಕೆ ಹೋದಾಗ ಗುರಿ ತಲುಪಿದ ಮೇಲೆ ಇನ್ನು ಉಳಿದದ್ದನ್ನು ನಾಳೆ ನೋಡಿಕೊಳ್ಳೋಣ ಎನ್ನುವ ಸಮಾಧಾನ, ಪತ್ರಿಕೆಗೋ, ಬ್ಲಾಗಿಗೋ ಅಥವ ಫೇಸ್‍ಬುಕ್‍ಗೋ ಬರೆದು ಮುಗಿಸಿದ ನಂತರದ ನೆಮ್ಮದಿ, ಸಮಾಧಾನ ಮತ್ತು ತೃಪ್ತಿ, ಸಿಕ್ಕ ಗೆಳೆಯರೊಂದಿಗೆ ಒಂದಷ್ಟು ಹೊತ್ತು ಹರಟೆ, ಮಾತುಕತೆ ತಿಳುವಳಿಕೆಗಳು…ಅದರಿಂದ ಸಿಗುವ ಸಮಾಧಾನ, ಅಪರೂಪದ, ದೂರದ ಗೆಳೆಯ ಫೋನಿನಲ್ಲಿ ಮಾತಿಗೆ ಸಿಕ್ಕಾಗ ತುಂಬಾ ಮಾತಾಡಿ, ಅನುಭವಗಳನ್ನು ನೆನಪುಗಳನ್ನು ಹಂಚಿಕೊಳ್ಳುವಾಗ ಸಿಗುವ ಖುಷಿ ನೆಮ್ಮದಿ, ಸಮಾಧಾನ,…ಶ್ರೀಮತಿಯೊಂದಿಗೆ ರಾಜಾಜಿನಗರದ ಬೆಣ್ಣೆದೋಸೆ, ಮಲ್ಲೇಶ್ವರ ಸಿಟಿಅರ್ ನ ಮಸಾಲೆ ದೋಸೆ, ರಸ್ತೆ ಬದಿಯಲ್ಲಿ ಉತ್ತರಪ್ರದೇಶ ಹುಡುಗರು ನಗುನಗುತ್ತಾ ಕೊಡುವ ಪಾನಿಪುರಿ, ದೇವಯ್ಯ ಪಾರ್ಕ್ ಮೆಟ್ರೋ ರೈಲು ಸ್ಟೇಷನ್ ಕೆಳಗಿರುವ ಬದ್ರಿ ಕ್ಯಾಂಟೀನಿನ ಈರುಳ್ಳಿ ದೋಸೆ, ರೈಸ್ ಬಾತ್‍ಗಳು, ನನ್ನ ಶ್ರೀಮತಿ ಮಾಡುವ ಬೆಸ್ಟ್ ಮೆಂತ್ಯ ಬಾತ್, ರಾಗಿ ಮುದ್ದೆಯ ಜೊತೆಗೆ ಉರುಳಿಕಾಯಿ, ಬೇಳೆ ಹಾಕಿ ಮಾಡಿದ ಬಸ್ಸಾರು, ಚಕ್ಕೋತ, ಕಿಲಕಿರಲೆ, ಪಾಲಕ್,..ಸೊಪ್ಪುಗಳನ್ನು ಚೆನ್ನಾಗಿ ಬಸೆದು ಅದಕ್ಕೆ ಸ್ವಲ್ಪ ತೊಗರಿ ಬೇಳೆ ಹಾಕಿ, ಕೊನೆಯಲ್ಲಿ ಕಡಿಮೆ ಎಣ್ಣೆಯನ್ನು ಹಾಕಿ ಮಾಡುವ ಸೊಪ್ಪಿನ ಸಾರು, ಟಮೋಟೊಬಾತ್, ವೆಜಿಟೇಬಲ್ ಪಲಾವ್, ದೇವಯ್ಯ ಪಾರ್ಕ್ ಮೆಟ್ರೋ ಕೆಳಗಿನ ಅಯ್ಯರ್ ಕಾಫಿ, ಲಕ್ಷಿನಾರಾಯಣಪುರದಲ್ಲಿರುವ ದಕ್ಷಿಣ ಕನ್ನಡ ಹೋಟಲ್ಲಿನವರ ಕಾಫಿ, ಸಂಜೆ ಹೊತ್ತಿನ ಮಲ್ಲೇಶ್ವರಂ ರೈಲು ನಿಲ್ದಾಣದ ಪ್ಲಾಟ್‍ಫಾರಂನ ಮುಕ್ಕಾಲುಗಂಟೆಯ ಶ್ರೀಮತಿಯೊಂದಿಗಿನ ವಾಕಿಂಗ್, ಅಪರೂಪಕ್ಕೆ ವಾಕಿಂಗ್ ಮುಗಿಸಿ ರೈಲು ನಿಲ್ದಾಣದ ಹಿಂಭಾಗದಲ್ಲಿರುವ ರಾಘವೇಂದ್ರ ಸ್ಟೋರ‍್ ಪುಟ್ಟ ಹೋಟಲ್ಲಿನ ಉಪ್ಪಿಟ್ಟು, ಕೇಸರಿಬಾತ್, ಶ್ಯಾವಿಗೆ ಬಾತ್, ಇಡ್ಲಿ ವಡೆ, ಬಿಸಿ ಬಿಸಿ ಕಾಫಿ, ಮನೆಯಲ್ಲಿ ಮಾಡುವ ಪುಟ್ಟದಾದ ವ್ಯಾಯಾಮಗಳನ್ನು ಮಾಡಿದ ನಂತರದ ತೃಪ್ತಿ, ವಾರವೆಲ್ಲಾ ದುಡಿದು ಶನಿವಾರ ರಾತ್ರಿ ಸ್ವರ್ಗ ಸುಖದಂತ ನಿದ್ರೆ ಮಾಡುವ ಸಾಪ್ಟ್‍ವೇರಿಗಳಂತೆ ಒಂದು ರಾತ್ರಿ ಎರಡು ಹಗಲೂ ಪೂರ್ತಿ ಮದುವೆ ಫೋಟೊಗ್ರಫಿ ಕೆಲಸದಲ್ಲಿದ್ದು ಮುಗಿದ ಮೇಲೆ ಮನೆಗೆ ಬಂದು ಅವರಂತೇ ಮೈಮರೆತು ಮಾಡುವ ದೇವಲೋಕದಂತ ನಿದ್ರೆ…ಇನ್ನೂ ಅನೇಕ ನಿತ್ಯಬದುಕಿನ ಜೀವನದಲ್ಲಿ ತೃಪ್ತಿ, ಆಗಾಗ ಸಂತೃಪ್ತಿ, ಸಮಾಧಾನಗಳು ಒಂದೆರಡಲ್ಲ. ಅದರಿಂದ ನಾನು ಕೂಡ ಖುಷಿಖುಷಿಯಾಗಿ ಆ ಕ್ಷಣಗಳನ್ನು ಅನುಭವಿಸುತ್ತಾ ಸಂತೋಷ ಮತ್ತು ನೆಮ್ಮದಿಯಿಂದಿರುತ್ತೇನೆ.
10983164_10200725855465712_4200949579746168803_n
ಆದ್ರೆ ಅದ್ಯಾಕೋ ಇವುಗಳಿಂದ ಪಡೆದ ಇವೆಲ್ಲವುಗಳು ಫೋಟೊಗ್ರಫಿಯಲ್ಲಿ ಸಿಗುವುದೇ ಇಲ್ಲ. ಯಾಕೇ ಅಂತ ಈಗಲೂ ಗೊತ್ತಿಲ್ಲ. ಸಾಮಾನ್ಯ ಮದುವೆ ಫೋಟೊಗ್ರಫಿ, ಕ್ಯಾಂಡಿಡ್ ಮದುವೆ ಫೋಟೊಗ್ರಫಿ, ಪುಟ್ಟ ಮಕ್ಕಳ ಫೋಟೊಗ್ರಫಿ, ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೊಗ್ರಫಿ, ಕಲಾತ್ಮಕ ಪ್ರಕಾರಗಳಾದ, ಪಿಕ್ಟೋರಿಯಲ್, ವನ್ಯಜೀವಿ, ಕೀಟಜಗತ್ತು, ಪಕ್ಷಿಗಳ ಛಾಯಾಗ್ರಾಹಣ, ಹೀಗೆ ಯಾವುದೇ ವಿಭಾಗಗಳಲ್ಲಿ ನಾನು ಫೋಟೊಗ್ರಫಿ ಮಾಡುವಾಗ, ಮಾಡಿ ಮುಗಿಸಿದ ಮೇಲು ಕೂಡ ಯಾಕೋ ನನಗೆ ತೃಪ್ತಿಯೆನಿಸುವುದಿಲ್ಲ. ಸಮಾಧಾನವಾಗುವುದಿಲ್ಲ. ಯಾಕೆ ಅಂತ ಈಗಲೂ ಗೊತ್ತಿಲ್ಲ.ಒಂದು ಉದಾಹರಣೆಯನ್ನು ಕೊಡುತ್ತೇನೆ. ಒಂದು ವಾರದ ಹಿಂದೆ ಒಂದು ಪೋಸ್ಟ್ ವೆಡ್ಡಿಂಗ್ ಫೋಟೊಗ್ರಫಿಯನ್ನು ನಂದಿ ಬೆಟ್ಟದಲ್ಲಿ ಮಾಡಿದ್ದೆ. ಅದರ ಹಿಂದಿನ ದಿನ ರಾತ್ರಿಯೆಲ್ಲಾ ನನಗೆ ಯಾವ್ಯಾವ ರೀತಿಯಲ್ಲಿ ನಾನು ಫೋಟೊಗ್ರಫಿ ಮಾಡಬೇಕೆನ್ನುವ ಕನಸು. ಕನಸಿನಲ್ಲಿ ಅವರಿಬ್ಬರೂ ರಾಜಕುಮಾರ ಮತ್ತು ರಾಜಕುಮಾರಿ. ವಿಧವಿಧವಾದ ಕೋನಗಳಲ್ಲಿ ಅವರಿಬ್ಬರ ಫೋಟೊಗಳನ್ನು ವಿಭಿನ್ನವಾದ ನೆರಳು ಬೆಳಕು, ಹಿಮದ ವಾತಾವರಣ…ಹಸಿರು ವಾತಾವರಣ ಹೀಗೆ ಅನೇಕ ವಿಧಾನದಲ್ಲಿ ಫೋಟೊ ಕ್ಲಿಕ್ಕಿಸುತ್ತಿರುವ ಕನಸು. ಮುಂಜಾನೆ ನಾಲ್ಕು ಗಂಟೆ ಎದ್ದು, ಸ್ನಾನ ಮುಗಿಸಿ ಕ್ಯಾಮೆರ ಪರಿಕರಗಳನ್ನೆಲ್ಲಾ ಪರೀಕ್ಷಿಸಿ, ನಂತರ ದಿನಪತ್ರಿಕೆ ವಿತರಣೆ ಕೆಲಸ ಹೋಗಿ ಅದನ್ನು ಆರುವರೆಗೆ ಮುಗಿಸಿ ಮನೆಗೆ ಬರುವ ಹೊತ್ತಿಗೆ ನನ್ನ ಶ್ರೀಮತಿ ಹೇಮ ಸಿದ್ದವಾಗಿದ್ದಳು. ಸರಿಯಾಗಿ ಏಳುಗಂಟೆಗೆ ಪೂರ್ತಿ ತಯಾರಾಗಿದ್ದೆವು. ನಂದಿಬೆಟ್ಟದಲ್ಲಿ ಹತ್ತುಗಂಟೆಯಿಂದ ನನ್ನ ಫೋಟೊಗ್ರಫಿ ಶುರುವಾಯ್ತು. ಸತತವಾಗಿ ಮೂರು ಗಂಟೆ ಅನೇಕ ವಿಧಾನಗಳಲ್ಲಿ, ಕೋನಗಳಲ್ಲಿ ಫೋಟೊಗ್ರಫಿಯನ್ನು ಮಾಡಿದರೂ ಅದ್ಯಾಕೋ ಸಮಾಧಾನವಾಗಲಿಲ್ಲ. ನನ್ನನ್ನು ಬಿಟ್ಟು ಉಳಿದವರೆಲ್ಲರೂ ಸುಸ್ತಾಗಿದ್ದರು. “ನೋಡಿ ಇದುವರೆಗೆ ನಾನು ಕ್ಲಿಕ್ಕಿಸಿದ ಫೋಟೊಗಳು ಯಾವುದೂ ನನಗೆ ಸಮಾಧಾನವಿಲ್ಲ. ಒಂದೂ ಫೋಟೋ ಕೂಡ ಸರಿಯಾಗಿ ಬಂದಿಲ್ಲ. ಈಗ ನಿಮಗೆ ಹೆಚ್ಚು ಸಮಯವಿಲ್ಲ, ಕೇವಲ ಒಂದು ಗಂಟೆಯಷ್ಟೆ ಉಳಿದಿದೆ. ಅಷ್ಟರೊಳಗೆ ನಿಮ್ಮ ಊಟ, ಮೇಕಪ್, ಎಲ್ಲವನ್ನು ಮುಗಿಸಿ ಸಿದ್ದರಾಗಬೇಕು ಎಂದಿದ್ದೆ. ಬೆಳಗಿನ ಅರ್ಧದಿನದ ಫೋಟೊಗ್ರಫಿಯನ್ನು ಅನಂದಿಸಿದ್ದ ಅವರು ನನ್ನ ಮಾತು ಕೇಳಿ ಸ್ವಲ್ಪ ಗಾಬರಿಗೊಂಡಿದ್ದಂತೂ ನಿಜ. ಮತ್ತೆ ಹೆಚ್ಚೇನಿಲ್ಲ ಒಂದು ಗಂಟೆ ತಡವಾಗಿ ಸಿದ್ಧರಾದರು.
10367730_4780870216619_4485354238903860037_n
ನನಗೇ ನನ್ನದೇ ಚಿಂತೆ. ಸೂರ್ಯನ ಬೆಳಕಿನ ಹಿತವಾದ ಬೆಳಕಿನ ಸಮಯದಲ್ಲಿ ಇರುವ ಮೇಕಪ್ ಮಾಡಿಕೊಂಡು ಸಮಯವನ್ನು ಹಾಳುಮಾಡುತ್ತಿದ್ದಾರಲ್ಲ…ಎನ್ನುವ ಕೋಪ ನನಗಾಗಿತ್ತು. ಕೊನೆಗೂ ಸಿದ್ಧರಾಗಿ ಸಂಜೆಯ ಹಿತಬೆಳಕಿನ ಫೋಟೊಗ್ರಫಿ ದಂಪತಿಗಳು ಸಿದ್ಧರಾಗಿಬಿಟ್ಟರಲ್ಲ. ನಾನು ಮಾಡಿಸಿದ ಪ್ರಯೋಗಗಳು ಒಂದೆರಡಲ್ಲ…ಅದೆಲ್ಲವೂ ಅವರಿಗೆ ತುಂಬಾ ಇಷ್ಟವಾಗಿತ್ತು. ಇಡೀ ದಿನ ಅಷ್ಟೆಲ್ಲ ಮಾಡಿದರೂ ಕೂಡ ನನಗೆ ಯಾಕೋ ಇನ್ನೂ ಸಮಾಧಾನ ಮತ್ತು ತೃಪ್ತಿ ಸಿಗಲೇ ಇಲ್ಲ. ಏಕೆಂದರೆ ನಾನು ಏನನ್ನು ಕ್ಲಿಕ್ಕಿಸಿದರೂ ನನ್ನ ಕ್ಯಾಮೆರದ ಹಿಂಭಾಗದ ಪರದೆಯಲ್ಲಿ ನನಗೆ ಸಮಾಧಾನವಾಗುವಂತೆ ಕಾಣುತ್ತಿರಲೇ ಇಲ್ಲ. ಇನ್ನೂ ಏನೋ ಬೇಕಿದೆ, ಯಾವುದೋ ಕೊರತೆಯಿದೆ, ಇಲ್ಲಿ ಇದು ಇರಬಾರದಿತ್ತು, ಅಲ್ಲಿ ಅದು ಇರಬೇಕಿತ್ತು, ಸ್ವಲ್ಪದರಲ್ಲಿ ಅವರ ಅತ್ಯುತ್ತಮವಾದ ಭಾವನೆಯೊಂದು ಅಡ್ಡ ಬಂದ ಕಾರಿನಿಂದ ತಪ್ಪಿ ಹೋಯಿತಲ್ಲ..ಅವರಿಂದ ಸಿಕ್ಕ ಅನಿರೀಕ್ಷಿತ ಭಾವನೆಯೊಂದು ಸೂರ್ಯನ ಬೆಳಕಿಲ್ಲದೆ ತಾಂತ್ರಿಕವಾಗಿ ವಿಫಲವಾಯಿತಲ್ಲ…ಹೀಗೆ ಒಂದಾ ಎರಡ…ನೂರಾರು ಅಸಮಧಾನಗಳು! ಅತೃಪ್ತಿಗಳು! ಹಾಗೆ ನೋಡಿದರೆ ಇದೊಂದೇ ಅಲ್ಲ. ಪುಟ್ಟ ಮಕ್ಕಳ ಫೋಟೊಗ್ರಫಿ, ಸಾಮಾನ್ಯ ಮದುವೆ ಫೋಟೊಗ್ರಫಿಯಲ್ಲಿ, ಮದುವೆಯ ಕ್ಯಾಂಡಿಡ್ ಫೋಟೊಗ್ರಪಿಯಲ್ಲಿಯೂ ಕೂಡ[ಬೇರೆಯವರ ಪ್ರಕಾರ, ನನಗೆ ಫೋಸುಗಳನ್ನು ಕೊಟ್ಟ ಜೋಡಿಗಳು, ಮಕ್ಕಳು, ಅವರ ಪೋಷಕರು, ಎಲ್ಲರಿಗೂ ತುಂಬಾ ಇಷ್ಟವಾಗಿ ತೃಪ್ತಿಯಾಗಿ ಸಾಕೆನಿಸಿದರೂ]ಮುಗಿಸಿದ ಮೇಲು ಕೂಡ ಯಾಕೋ ನನಗೆ ತೃಪ್ತಿಯೆನಿಸುವುದಿಲ್ಲ. ಸಮಾಧಾನವಾಗುವುದಿಲ್ಲ.ಕಲಾತ್ಮಕ ಪ್ರಕಾರಗಳಾದ, ಪಿಕ್ಟೋರಿಯಲ್, ವನ್ಯಜೀವಿ, ಕೀಟಜಗತ್ತು, ಪಕ್ಷಿಗಳ ಛಾಯಾಗ್ರಾಹಣ, ಹೀಗೆ ಯಾವುದೇ ವಿಭಾಗಗಳಲ್ಲಿ ನಾನು ಫೋಟೊಗ್ರಫಿ ಮಾಡುವಾಗಲೂ ಹೀಗೆ ಆಗುತ್ತಿರುತ್ತದೆ. ಒಂದು ಪಕ್ಷಿಯ ಫೋಟೊಗ್ರಫಿಗೆ ಹೋದಾಗ ಮೊದಲಿಗೆ ಆ ಪಕ್ಷಿ ನನ್ನ ಕ್ಯಾಮೆರಕ್ಕೆ ಒಂದು ಒಳ್ಳೆಯ ಪೋಸು ಕೊಟ್ಟರೆ ಸಾಕು, ಅದೊಂದು ದಾಖಲೆಯಾದರೆ ಸಾಕು ಅನ್ನಿಸುತ್ತದೆ. ಅದು ಸಿಗುತ್ತಿದ್ದಂತೆ ಇದೇ ಚಿತ್ರ ಬ್ಯಾಕ್ ಲೈಟಿನಲ್ಲಿ ಮೂರನೇ ಆಯಾಮದಲ್ಲಿ ಸಿಗಬಾರದಿತ್ತಾ ಅನಿಸುತ್ತದೆ. ಅದು ಸಿಕ್ಕಿದ ಮೇಲೆ ಅದು ಚಿಟ್ಟೆ, ದುಂಬಿ, ಮಿಡತೆ, ಕಪ್ಪೆಮರಿ,..ಇಂಥಹ ಯಾವುದಾದರೂ ಆಹಾರವನ್ನು ಹಿಡಿದುತಂದು ನನ್ನ ಕ್ಯಾಮೆರಕ್ಕೆ ಪೋಸು ಕೊಡಲಿ ಅನ್ನಿಸುತ್ತೆ. ಅದು ಆಗಿಬಿಟ್ಟರೆ, ಜೋಡಿ ಹಕ್ಕಿಗಳು ಆಹಾರದ ಜೊತೆಗೆ ಬಂದು ಮದುವೆ ಗಂಡುಹೆಣ್ಣಿನಂತೆ ನುಲಿಯಬಾರದಾ ಅನ್ನಿಸುತ್ತೆ. ಅದೂ ಸಿಕ್ಕಿಬಿಟ್ಟರೆ ಹಾರಿಕೊಂಡು ಬರುವಾಗ ಅಥವ ಬಾಯಲ್ಲಿ ಆಹಾರವನ್ನು ಹಿಡಿದು ಹಾರುವಾಗ ತಾಂತ್ರಿಕವಾಗಿ ಉತ್ತಮವಾದ ಅತ್ಯುತ್ತಮವೆನಿಸುವ ಪ್ಲೈಟ್ ಫೋಟೊ ಕ್ಲಿಕ್ಕಿಸಬಾರದ ಅನ್ನಿಸುತ್ತೆ……ಮತ್ತೆ ಕೀಟಗಳ ಚಿಟ್ಟೆಗಳ ಫೋಟೊಗ್ರಫಿ ಮಾಡುವಾಗಲೂ ಅಷ್ಟೆ. ಇವತ್ತು ಯಾವುದಾದರೂ ಒಂದು ಹುಳುವಿನ ಪೋಟೊ ಕ್ಲಿಕ್ಕಿಸಲೇ ಬೇಕು ಅಂದು ಹೊರಟಿರುತ್ತೇನೆ. ಒಂದೆರಡು ಕೀಟಗಳ ಫೋಟೊಗ್ರಫಿ ಮಾಡಿದ ನಂತರ, ಉತ್ತಮವಾದ ನೆರಳು ಬೆಳಕಿನ ಹಿನ್ನೆಲೆಯಲ್ಲಿ ಒಂದು ಅಪರೂಪದ ಕೀಟವೊಂದು ಹಾರಿಬಂದು ಕುಳಿತು ಫೋಸು ಕೊಡಬಾರದೇ ಎನ್ನಿಸುತ್ತದೆ.
ಅದು ಸಿಕ್ಕ ಮೇಲೆ, ಚಿಟ್ಟೆಗಳ, ರಾಬರ್ ಪ್ಲೈಗಳ, ನೊಣಗಳ ಬಗ್ಸುಗಳ, ಮೇಟಿಂಗ್ ಸಿಗಬಾರದೇ ಅನ್ನಿಸುತ್ತೆ. ಅದು ಸಿಕ್ಕಮೇಲೆ, ಮೊಟ್ಟೆಗಳಿಂದ ಹೊರಬರುತ್ತಿರುವ ಮರಿಗಳ ಫೋಟೊಗಳು, ಪ್ರಾರ್ಥನ ಕೀಟವೊಂದು ಚಿಟ್ಟೆಯನ್ನು ಹಿಡಿದು ತಿನ್ನುವುದು, ಅಪರೂಪದ ಕಪ್ಪೆಯೊಂದು ಉದ್ದ ನಾಲಿಗೆಯಲ್ಲಿ ಬೇಟೆಯನ್ನು ಹಿಡಿಯುವುದು, ಜೇಡವೊಂದು ತನ್ನದೇ ಜಾತಿಯ ಜೇಡವನ್ನು ಹಿಡಿದು ವಿಷದ ಇಂಜೆಕ್ಷನ್ ಕೊಡುವುದು, ಪ್ಯೂಪದಿಂದ ಹೊರಬರುತ್ತಿರುವ ಚಿಟ್ಟೆ, ಪ್ಯೂಪ ಆಗುವ ಸನ್ನಿವೇಶಗಳು,…ಹೀಗೆ ನೂರಾರು ಸನ್ನಿವೇಶಗಳೆಲ್ಲವೂ ನನ್ನ ಕ್ಯಾಮೆರ ಮುಂದೆ ಸಿನಿಮಾ ದೃಶ್ಯಗಳಂತೆ ಬಂದು ಫೋಸ್ ಕೊಟ್ಟು ನಾನು ಫೋಟೊ ಕ್ಲಿಕ್ಕಿಸುವಂತಾಗಬೇಕು…ಇಂಥಹ ಮುಗಿಯದ ಕರಗದ, ಮತ್ತೆ ಮತ್ತೆ ಹುಟ್ಟುವ ಹೊಸ ಹೊಸ ಆಸೆಗಳಿಂದಾಗಿ ಯಾಕೋ ಇವೆಲ್ಲ ಫೋಟೊಗ್ರಫಿಯನ್ನು ಮಾಡಿದರೂ ಇನ್ನೂ ಹೊಸದೇನನ್ನೋ ಮಾಡಬೇಕೆನ್ನುವ ಕಾತುರದಿಂದಾಗಿ ಇದುವರೆಗೆ ಮಾಡಿದವುಗಳಿಂದ ತೃಪ್ತಿಯಿಲ್ಲ, ಸಂತೃಪ್ತಿಯಂತೂ ಇಲ್ಲವೇ ಇಲ್ಲ. ಇವೆಲ್ಲವುಗಳಿಗೆ ಪೂರಕವಾಗಿ ನನ್ನ ಕ್ಯಾಮೆರದ ಹಿಂದಿನ ಪರದೆಯೂ ಕೂಡ ಅದ್ಯಾಕೋ ನಾನು ಕ್ಲಿಕ್ಕಿಸಿದ ಯಾವ ಫೋಟೊವನ್ನು ಕೂಡ ನನಗೆ ಇಷ್ಟವಾಗುವಂತೆ ತೋರಿಸುವುದೇ ಇಲ್ಲ. ಅಷ್ಟು ದುಬಾರಿಯಾದ ಮತ್ತು ಅತ್ಯುತ್ತಮವಾದ ಕ್ಯಾಮೆರ ಮತ್ತು ಲೆನ್ಸುಗಳನ್ನು ಬಳಸಿ ಫೋಟೊಗ್ರಫಿ ಮಾಡಿದ್ದರೂ ಕೂಡ ಯಾಕೋ ಕ್ಯಾಮೆರ ಹಿಂದಿನ ಪರದೆಯಲ್ಲಿ ಪ್ರತಿ ಕ್ಷಣದ ಕ್ಲಿಕ್ಕಿನ ನಂತರ ಕಾಣುವ ಚಿತ್ರಗಳಂತೂ ನನಗೇ ಎಂದೂ ಸಮಾಧಾನವನ್ನು ಕೊಡುವುದೇ ಇಲ್ಲ. ಒಂದಲ್ಲ ಒಂದು ತಪ್ಪುಗಳು, ಕೊರತೆಗಳು ಎದ್ದು ಕಾಣತೊಡಗುತ್ತವೆ. ಅದರಿಂದಾಗಿ ನನಗೆ ಬೇಕಾಗಿರುವುದು ಸಿಕ್ಕಿಲ್ಲವೆನ್ನುವ ಕಾರಣದಿಂದಾಗಿ ಅದ್ಯಾಕೋ ನನಗೆ ಗೊತ್ತಿಲ್ಲದಂತೆ ಮದುವೆ ಇನ್ನಿತರ ಸನ್ನಿವೇಶಗಳಲ್ಲಿ ಮತ್ತೆ ಮತ್ತೆ ಪ್ರಯತ್ನ, ಮರಳಿ ಯತ್ನ..ಹೀಗೆ ಕ್ಯಾಮೆರಕ್ಕೆ ಪೋಸು ಕೊಡುವವರಿಗೆ ಅವರು ಸಾಕಪ್ಪ ಸಾಕು ಎನ್ನುವಷ್ಟರ ಮಟ್ಟಿಗೆ ಬೇಸರ ತರಿಸಿಬಿಟ್ಟಿರುತ್ತೇನೆ. ಅವರಿಗೆ ತೃಪ್ತಿಯಾದರೂ ನನಗೆ ಇನ್ಯಾವುದೋ ಒಂದು ಪ್ರಯೋಗ ಮಿಸ್ ಆಗೋಯ್ತಲ್ಲ ಎನ್ನುವ ಕೊರಗು ದೊಡ್ಡದಾಗಿರುತ್ತದೆ.
ಎಲ್ಲಾ ಮುಗಿದು ಮನೆಗೆ ಬಂದು ಒಂದು ದೊಡ್ಡ ನಿದ್ರೆಯನ್ನು ಮಾಡಿ ಎದ್ದು ಅಥವ ಮರುದಿನ ಕ್ಲಿಕ್ಕಿಸಿದ, ಚಿಟ್ಟೆ, ಕೀಟ, ಪಕ್ಷಿ, ಪ್ರಾಣಿ, ಮದುವೆ ವದು-ವರ, ಪುಟ್ಟ ಮಗು, ಪಿಕ್ಟೋರಿಯಲ್ ಫೋಟೊಗ್ರಫಿ,…ಹೀಗೆ ಆವತ್ತು ಕ್ಲಿಕ್ಕಿಸಿದವನ್ನು ಕಂಪ್ಯೂಟರಿಗೆ ಸಾಗಿಸಿ ನಿದಾನವಾಗಿ ಒಂದೊಂದನ್ನೇ ನೋಡುತ್ತಿದ್ದರೆ, ಕ್ಲಿಕ್ಕಿಸಿದಾಗ ಆಗುತ್ತಿದ್ದ ಅಸಮಾಧಾನಗಳು, ಅತೃಪ್ತಿಗಳಲ್ಲೇ ಮಾಯಾವಾಗಿ ನಾನಂದುಕೊಂಡಿದ್ದಕ್ಕಿಂತ ಇನ್ನೂ ಚೆನ್ನಾಗಿ ಮೂಡಿ ಬಂದಿರುತ್ತವೆ. ಅಲ್ಲಿ ಚೆನ್ನಾಗಿ ಕಾಣದೇ ಇಲ್ಲಿ ಕಂಪ್ಯೂಟರಿನಲ್ಲಿ ತಾಂತ್ರಿಕವಾಗಿ, ದೊಡ್ಡದಾಗಿ, ಎಲ್ಲ ವಿಧದಲ್ಲೂ ಚೆನ್ನಾಗಿ ಕಾಣುವುದು ಏಕೆ ಎನ್ನುವುದು ನನಗೇ ಈಗಲೂ ಗೊತ್ತಾಗುತ್ತಿಲ್ಲ. ಒಟ್ಟಾರೆ ಎಲ್ಲೋ ಕಲ್ಪಿಸಿಕೊಂಡಿದ್ದು, ಕನಸು ಕಂಡಿದ್ದು, ಪ್ರಯೋಗ ಮಾಡಿದ್ದು ಎಲ್ಲವೂ ಚೆನ್ನಾಗಿವೆ ಬಂದಿವೆಯಲ್ಲ, ಕೆಲವಂತೂ ನನ್ನ ನಿರೀಕ್ಷೆಗೂ ಮೀರಿ ಚೆನ್ನಾಗಿ ಬಂದಿವೆಯಲ್ಲ…ಎನಿಸತೊಡಗುತ್ತದೆ. ಇಂದಿನ ಹೊಸ ಹೊಸ ಮೊಬೈಲುಗಳಲ್ಲಿ, ಹೊಸ ಹೊಸ ಕ್ಯಾಮೆರಗಳಲ್ಲಿ ಕ್ಲಿಕ್ಕಿಸಿದ ಪ್ರತಿಯೊಂದು ಫೋಟೊಗಳು, ಸೆಲ್ಫಿಗಳು ಅಕ್ಷಣಕ್ಕೆ ನೋಡುಗನ ಕಣ್ಣಿಗೆ ೩ಡಿ ಪರಿಣಾಮದಿಂದಾಗಿ ಅದ್ಬುತವೆನಿಸಿ ಪ್ರತಿಯೊಬ್ಬರಿಗೂ ತೃಪ್ತಿ ಸಂತೋಷವನ್ನು ಕೊಡುತ್ತವೆ. ಆದರೆ ನನಗೆ ನನ್ನ ಹೊಸ ಮೊಬೈಲು ಅಥವ ಹೊಸ ಕ್ಯಾಮೆರಗಳು ತೃಪ್ತಿ ಮತ್ತು ಸಮಾಧಾನವನ್ನು ಕೊಡುವುದು ಕೆಲವು ದಿನಗಳ ಮಟ್ಟಿಗಷ್ಟೆ. ದಿನಕಳೆದಂತೆ ಅವು ಕ್ಲಿಕ್ಕಿಸಿದ ಫೋಟೊಗಳಲ್ಲಿ ಒಂದಲ್ಲ ಒಂದು ತಪ್ಪುಗಳು ಎದ್ದು ಕಾಣತೊಡಗುತ್ತವೆ. ಇದೆಲ್ಲ ಯಾಕಾಗುತ್ತದೆ ಎನ್ನುವ ನನ್ನ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.ಹಾಗೆ ನೋಡಿದರೆ ನಾನು ಮಾಡುವ ಎಲ್ಲಾ ಫೋಟೊಗ್ರಫಿಯಲ್ಲಿಯೂ ಕೂಡ ಈಗಲೂ ಅಲ್ಪ ತೃಪ್ತನಾಗಿಯೇ ಬಾಳುತ್ತಿದ್ದೇನೆ…!
ಇದೆಲ್ಲ ನನ್ನ ಫೋಟೊಗ್ರಫಿಯ ಹಳವಂಡಗಳು, ವೈಯಕ್ತಿಕ ಅಭಿಪ್ರಾಯಗಳು….ಇರಲಿ ಬಿಡಿ ಮತ್ತೊಮ್ಮೆ ನಿಮಗೆಲ್ಲರಿಗೂ ವಿಶ್ವ ಛಾಯಾಗ್ರಾಹಣ ದಿನದ ಶುಭಾಶಯಗಳು.

 

‍ಲೇಖಕರು G

August 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Palahalli VishwanathCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: