ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೫

(ಭಾಗ ೪ ಇಲ್ಲಿದೆ)

ಲಿಂಗಭಕ್ತನ ವಿವಾಹದಲ್ಲಿ ಶಿವಗಣಂಗಳಿಗೆ
ವಿಭೂತಿ ವೀಳೆಯವ ಕೊಟ್ಟು ಆರೋಗಣೆಯ ಮಾಡಿಸಿ
ಶಿವಗಣಂಗಳು ಸಾಕ್ಷಿಯಾಗಿ ಪ್ರಸಾದವನಿಕ್ಕುವುದೇ ಸದಾಚಾರವಲ್ಲದೆ,
ವಾರ ತಿಥಿ ಸುಮುಹೂರ್ತವೆಂಬ ಲೌಕಿಕದ ಕರ್ಮವ ಮಾಡಿದಡೆ
ನಿಮ್ಮ ಸದ್ಭಕ್ತರಿಗೆ ದೂರವಯ್ಯಾ ಕೂಡಲಚನ್ನಸಂಗಮದೇವಾ.
-ಚನ್ನಬಸವಣ್ಣ
ಎಂದು ಚನ್ನಬಸವಣ್ಣನವರು ಅನಿಶ್ಚಿತ ಹೇಳಿಕೆಗಳ ಪಂಚಾಂಗವನ್ನು ತಿರಸ್ಕರಿಸುತ್ತ ವೈಚಾರಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿದ್ದಾರೆ. ‘ಗುರು ಕೊಂಡು ಮಾರಿದ ಈ ಲಿಂಗ ಬಿದ್ದಡೆ ಸಮಾಧಿಯುಂಟೆ?’ ಎಂದು ಮೂಢನಂಬಿಕೆಗಳನ್ನು ಅಲ್ಲಗಳೆದಿದ್ದಾರೆ.
ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ-ವ್ಯತೀಪಾತದಿಂದ ವೆಗ್ಗಳ,
ಸೂಕ್ಷ್ಮ ಶಿವಪಥವನರಿದಂಗೆ
ಹೋಮ-ನೇಮ-ಜಪ-ತಪದಿಂದ ವೆಗ್ಗಳ,
ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ.
-ಬಸವಣ್ಣ
ಎಂದು ಬಸವಣ್ಣನವರು ವೈದಿಕದ ಎಲ್ಲ ಅಂಗಾಂಗಗಳನ್ನು ನಿಷ್ಕ್ರಿಯಗೊಳಿಸುತ್ತಾರೆ.ಶಿವಪಥವನು ಅರಿಯುವುದು ಎಲ್ಲಕ್ಕಿಂತ ಹೆಚ್ಚಿನದು ಎಂದು ಹೇಳುತ್ತಾರೆ.’ಅಷ್ಟಮಿನವಮಿ ಎಂಬ ಕಲ್ಪತವೇಕೊ ಶರಣಂಗೆ?’ ಎಂದುಪ್ರಶ್ನಿಸುತ್ತಾರೆ. ‘ವೇದಶಾಸ್ತ್ರದವರ ಹಿರಿಯರೆನ್ನೆ, ಮಾಯಾಭ್ರಾಂತಿ ಕವಿದ ಗೀತಜ್ಞರ (ಭಗವದ್ಗೀತಾ ತಜ್ಞರ) ಹಿರಿಯರೆನ್ನೆ’ ಎಂದು ಘೋಷಿಸುತ್ತಾರೆ.
 
 
ಪುಣ್ಯ ಪಾಪವೆಂಬ ಉಭಯಕರ್ಮವನಾರು ಬಲ್ಲರಯ್ಯಾ?
ಇವನಾರುಂಬರು?
ಕಾಯ ತಾನುಂಬಡೆ ಕಾಯ ತಾ ಮಣ್ಣು,
ಜೀವ ತಾನುಂಬಡೆ ಜೀವ ತಾ ಬಯಲು,
ಈ ಉಭಯ ನಿರ್ಣಯವ ಕೂಡಲಸಂಗಮದೇವಾ
ನಿಮ್ಮ ಶರಣ ಬಲ್ಲ.
-ಬಸವಣ್ಣ

ಕರ್ಮಸಿದ್ಧಾಂತದ ಪುಣ್ಯ ಪಾಪಗಳನ್ನು ಹೀಗೆ ಬಸವಣ್ಣವರು ತಿರಸ್ಕರಿಸಿದ್ದಾರೆ.ಇವು ದೇಹಕ್ಕಾಗಲೀ ಜೀವಕ್ಕಾಗಲೀ ಅಂಟಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಮಣ್ಣಾಗುವ ದೇಹಕ್ಕೆ ಮತ್ತು ಬಯಲಾಗುವ ಜೀವಕ್ಕೆ ಪುನರ್ಜನ್ಮವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ‘ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂದು ಹೇಳುವ ಮೂಲಕ ಸ್ವರ್ಗ ನರಕಗಳನ್ನು ಅಲ್ಲಗಳೆದಿದ್ದಾರೆ. ‘ಕೂಡಲ ಸಂಗನ ಶರಣರು ಅಚ್ಚ ಲಿಂಗೈಕ್ಯರು’ ಎಂದು ತಿಳಿಸಿ ಮೋಕ್ಷವನ್ನು ಅಲ್ಲಗಳೆದಿದ್ದಾರೆ. ‘ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ, ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ ಕರ್ಮ ಹರಿಯದೊಡಾ ಪೂಜೆಯದೇಕೊ’ ಎನ್ನುತ್ತ ಮಾನವನ ಅಭ್ಯುದಯಕ್ಕೆ ಮಾರಕವಾಗಿರುವ ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ.ಕರ್ಮಸಿದ್ಧಾಂತವು ಬಹಳ ದುಷ್ಟ ತಂತ್ರವಾಗಿದೆ.ಸಂಚಿತ ಕರ್ಮ, ಪ್ರಾರಬ್ಧ ಕರ್ಮ ಮತ್ತು ಆಗಾಮಿ ಕರ್ಮದ ಬಲೆಗಳಲ್ಲಿ ಸಿಲುಕಿಸುವುದರ ಮೂಲಕ ವ್ಯಕ್ತಿಯ ಪೂರ್ವಾಪರಗಳೊಂದಿಗೆ ಭವಿಷ್ಯ ಹೇಳುವ ದುಷ್ಕರ್ಮಿಗಳು ಎಲ್ಲ ರೀತಿಯ ಐಶಾರಾಮಿ ಜೀವನ ಸಾಗಿಸುತ್ತಾರೆ.
ವೈದಿಕ ಧರ್ಮ ಇಂಥ ಕರ್ಮಸಿದ್ಧಾಂತದ ಮೇಲೆ ನಿಂತಿದ್ದನ್ನು ಬಸವಣ್ಣನವರು ಚನ್ನಾಗಿ ಗುರುತಿಸಿದ್ದಾರೆ. ಬಸವಣ್ಣನವರ ಭಕ್ತಿ ಸಾಮ್ರಾಜ್ಯ ಸರ್ವಸಮತ್ವದ ಮೇಲೆ ನಿಂತಿದೆ. ಅಂದರೆ ಅಲ್ಲಿ ಅಸ್ಪೃಶ್ಯತೆ ಇಲ್ಲ, ಜಾತಿಭೇದವಿಲ್ಲ, ಕಾಯಕಭೇದವಿಲ್ಲ, ಲಿಂಗಭೇದವಿಲ್ಲ, ವರ್ಣ ಮತ್ತು ವರ್ಗಭೇದಗಳಿಲ್ಲ. ಇಂಥ ಭಕ್ತಿ ಸಾಮ್ರಾಜ್ಯದ ಸಮಾಜಕ್ಕೆ ಬಸವಣ್ಣನವರು ಶರಣಸಂಕುಲವೆಂದು ಕರೆದರು. ಶರಣರು ಸರ್ವಸಮಾನತೆಯ ವಕ್ತಾರರಾಗಿ ‘ನುಡಿದಂತೆ ನಡೆದು’ ಬದುಕಿ ತೋರಿಸಿದರು. ‘ಜಾತಿಸಂಕರವಾದ ಬಳಿಕ ಕುಲವನರಸುವರೆ’ ಎಂದು ಬಸವಣ್ಣನವರು ಪ್ರಶ್ನಿಸಿದರು. ಶೂದ್ರರಿಗೆ ಯಾತನಾಮಯವಾಗಿರುವ ‘ವರ್ಣವ್ಯವಸ್ಥೆ’ ಮನುವಾದಿಗಳಿಗೆ ಐಶಾರಾಮಿ ವ್ಯವಸ್ಥೆಯಾಗಿದೆ.
ಈ ವರ್ಣವ್ಯವಸ್ಥೆಯು ಕರ್ಮಸಿದ್ಧಾಂತದ ಮೇಲೆ ನಿಂತ ಕಾರಣ ಕರ್ಮಸಿದ್ಧಾಂತದ ತಾಯಿಬೇರನ್ನು ಕೊಚ್ಚಿಹಾಕದೆ ವರ್ಣವ್ಯವಸ್ಥೆಯನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ. ಬಹುಜನರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಶೋಷಣೆಯ ಮೂಲವಾದ ಕರ್ಮಸಿದ್ಧಾಂತವು ಮೂಢನಂಬಿಕೆಯ ಆಗರವಾಗಿದೆ; ಭೇದಭಾವದ ಗಂಗೋತ್ರಿಯಾಗಿದೆ.ಈ ಕರ್ಮಸಿದ್ಧಾಂತವು ಲೋಕಕ್ಕೆ ಪುಣ್ಯ, ಮೋಕ್ಷ ಮತ್ತು ಸ್ವರ್ಗದ ಆಸೆ ಹಚ್ಚಿಸಿದೆ.ಪಾಪ, ನರಕ ಮತ್ತು ದುಃಖದಿಂದ ಕೂಡಿದ ಪುನರ್ಜನ್ಮದ ಭಯ ಹುಟ್ಟಿಸಿದೆ.’ಭಯವೇ ಧರ್ಮದ

ಚಿತ್ರ : ಪುಂಡಲೀಕ ಕಲ್ಲಿಗನೂರು

ಮೂಲ’ ಎನ್ನುವಂತೆ ಧರ್ಮದ ರೂಪು ರೇಷೆಗಳನ್ನು ಸೃಷ್ಟಿಸಲು ಸಹಕಾರಿಯಾಗಿದೆ. ಮಾನವನ ಸುಖ ಮತ್ತು ದುಃಖಗಳು ಪೂರ್ವ ನಿರ್ಧಾರಿತ ಎಂಬ ಭ್ರಮೆಯನ್ನುಸೃಷ್ಟಿಸಿದೆ. ‘ಇದುಶುಭ ಗಳಿಗೆ, ಇದು ಕೆಟ್ಟ ಗಳಿಗೆ’ ಎಂದು ಕಾಲ ನಿರ್ಣಯ ಮಾಡಿದೆ. ನಮ್ಮ ಹಸ್ತರೇಖೆಗಳು ನಮ್ಮನ್ನು ಭವಿಷ್ಯದ ಕಡೆಗೆ ಒಯ್ಯುವ ದಾರಿಪಟ ಎಂಬನಂಬಿಕೆಗೆ ಕಾರಣವಾಗಿವೆ. ಜನ್ಮ ಜನ್ಮಾಂತರಗಳಲ್ಲಿ ರಾಶಿಯಾಗುತ್ತ ಬಿದ್ದಿರುವಸಂಚಿತ ಕರ್ಮ, ನಿಕಟಪೂರ್ವ ಜನ್ಮದಪ್ರಾರಬ್ಧ ಕರ್ಮ ಮತ್ತು ಮುಂಬರುವ ಜನ್ಮದಲ್ಲಿ ಬರುವ ಆಗಾಮಿ ಕರ್ಮಗಳ ಸುಳ್ಳು ಸೃಷ್ಟಿಯ ಮೂಲಕ ಮಾನವ ಸಮಾಜ ಎಂದೆಂದೂ ಬದಲಾಗದೆ ಮನೋರೋಗಿಗಳ ತಾಣವಾಗುವಂತೆ ನೋಡಿಕೊಂಡಿದೆ.
ಲಿಂಗವ ಪೂಜಿಸಿ ಫಲವೇನಯ್ಯಾ
ಸಮರತಿ, ಸಮಕಳೆ, ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?
-ಬಸವಣ್ಣ
 
ಬಸವಣ್ಣನವರು ತಿಳಿಸಿದ ಇಷ್ಟಲಿಂಗ ಪೂಜೆ ಎಲ್ಲ ಅನಿಷ್ಟಗಳಿಗೆ ಮಾರಕವಾಗಿದೆ. ಇದೊಂದು ಅರಿವಿನ ಮಾರ್ಗವಾಗಿದೆ. ಮನುಷ್ಯರನ್ನು ಎಲ್ಲ ರೀತಿಯ ಮೂಢನಂಬಿಕೆಗಳಿಂದ ಹೊರತಂದು ಎಲ್ಲರೀತಿಯ ಸಮಾನತೆಯ ಕಡೆಗೆ ಒಯ್ಯುವಂಥದ್ದಾಗಿದೆ. ‘ಪುರುಷರು ಮೇಲು ಮತ್ತು ಸ್ತ್ರೀಯರು ಕೀಳು’ ಎಂಬ ಲಿಂಗಭೇದ ಮಾಡದೆ ಇರುವುದು (ಸಮರತಿ), ‘ಬ್ರಹ್ಮ ಕಳೆ’, ‘ಕ್ಷಾತ್ರಕಳೆ’ ಎಂದು ವರ್ಣಭೇದ ಮಾಡದೆ ಇರುವುದು (ಸಮಕಳೆ), ಮತ್ತು ‘ಬಡವ’ಮತ್ತು’ಶ್ರೀಮಂತ’ ಎಂಬ ವರ್ಗಭೇದ ಮಾಡದೆ ಇರುವುದು (ಸಮಸುಖ) ಲಿಂಗಪೂಜಾ ಫಲವಾಗಿದೆ. ಅಲ್ಲದೆ ನದಿಯೊಳಗೆ ನದಿ ಬೆರೆಸಿದಂತೆ ಸಕಲಜೀವಾತ್ಮರೊಂದಿಗೆ ಒಂದಾಗಿ ಬದುಕುವ ಅರಿವು ಕೂಡ ಇಷ್ಟಲಿಂಗಪೂಜಾ ಫಲವೇ ಆಗಿದೆ. ಹೀಗೆ ಜಾತಿ, ವರ್ಣ, ವರ್ಗ ಮತ್ತು ಲಿಂಗಭೇದಗಳನ್ನು ಅಲ್ಲಗಳೆದು ಸಮತಾವಾದಿ ಸಮಾಜವನ್ನು ಸ್ಥಾಪಿಸುವುದೇ ಬಸವಧರ್ಮದ ಗುರಿಯಾಗಿದೆ. ಬಸವಧರ್ಮ ಎಂದರೆ ಸಮಾನತೆಯ ತತ್ತ್ವಜ್ಞಾನದಿಂದ ಕೂಡಿದ ಜೀವನವಿಧಾನ.
‘ಫಲಾಪೇಕ್ಷೆ ಇಲ್ಲದೆ ಕರ್ಮಮಾಡು’ ಎಂದು ಭಗವದ್ಗೀತೆ ಹೇಳುತ್ತದೆ. ಆದರೆ ಫಲಾಪೇಕ್ಷೆ ಇಲ್ಲದೆ ಲಿಂಗಪೂಜೆಯನ್ನೂ ಮಾಡಬೇಡ ಎಂದು ದುಡಿಯುವ ವರ್ಗದ ನಾಯಕ ಬಸವಣ್ಣನವರು ತಿಳಿಸುತ್ತಾರೆ. ‘ಲಿಂಗವ ಪೂಜಿಸಿ ಫಲವೇನಯ್ಯಾ’ ಎಂಬುದು ಬಸವಣ್ಣನವರು ಲಿಂಗವಂತರಿಗೆ ಹಾಕಿದ ಪ್ರಶ್ನೆಯಾಗಿದೆ. ಬಸವಣ್ಣನವರು ಲಿಂಗಪೂಜಾ ಫಲವನ್ನು ಬಯಸುತ್ತಾರೆ. ಈ ಪೂಜಾ ಫಲವು ಭೌತಿಕವಾದುದಲ್ಲ, ಅರಿವಿಗೆ ಸಂಬಂಧಿಸಿದುದು. ಲಿಂಗಪೂಜಾ ಫಲವೆಂಬ ಅರಿವು ನಮ್ಮ ಒಳಲೋಕ ಮತ್ತು ಹೊರಲೋಕವನ್ನು ಒಂದಾಗಿಸುವಂಥದ್ದು. ಸಕಲ ಜೀವಾತ್ಮರ ಬಗ್ಗೆ ಸಮಾನತೆಯ ಭಾವ ತಾಳುವಂಥ ಅರಿವನ್ನು ಪಡೆಯುವುದೇ ಇಷ್ಟಲಿಂಗ ಪೂಜಾಫಲ.
ದೇವರ ಸಂಕೇತವಾದ ಇಷ್ಟಲಿಂಗದ ಪೂಜೆ ಎಂಬ ಶಿವಯೋಗದಿಂದ ‘ದೊರೆಯುವ’ಪರಮಾತ್ಮಮತ್ತುನಮ್ಮ ಅಂಗದಲ್ಲಿರುವ ಜೀವಾತ್ಮ ಒಂದಾಗಬೇಕು.ಆಗ ಜೀವಾತ್ಮನ ದೃಷ್ಟಿ ಪರಮಾತನ ದೃಷ್ಟಿಯಾಗುತ್ತದೆ.ಆ ದೃಷ್ಟಿ ಸರ್ವರೀತಿಯ ಸಮಭಾವದಿಂದ ತುಂಬಿರುತ್ತದೆ.ಇದನ್ನು ಸಾಧಿಸಲಿಕ್ಕಾಗಿಯೇ ಇಷ್ಟಲಿಂಗ ಪೂಜೆ ಅಥವಾ ಶಿವಯೋಗದ ಸಾಧನೆ ಮಾಡುವುದು ಅವಶ್ಯವಾಗಿದೆ.ಹೀಗೆ ಸಾಧನೆ ಮಾಡಿದವರು ತಮ್ಮ ಆತ್ಮದಲ್ಲಿರುವ ಘನವನ್ನು ಅರಿತುಕೊಳ್ಳುತ್ತಾರೆ.
ಲಿಂಗಾಂಗ ಸಾಮರಸ್ಯವನ್ನು ಸಾಧಿಸಬೇಕಾದರೆ, ಹೀಗೆ ಜೀವಾತ್ಮನು ಸಮಭಾವದ ಮೂಲಕ ಜಂಗಮಾತ್ಮನಾದಮೇಲೆ ಪರಮಾತ್ಮನ ಜೊತೆ ಒಂದಾಗುವ ಯೋಗ್ಯತೆಯನ್ನು ಪಡೆಯಲು ಸಾಧ್ಯವಾಗುತ್ತದೆ.ಈ ರಹಸ್ಯವನ್ನು ಅರಿತು ಸಾಧಿಸುವುದೇ ಶಿವಯೋಗವೆಂಬ ಇಷ್ಟಲಿಂಗ ಪೂಜೆಯ ಫಲವಾಗಿದೆ.
ವ್ಯಕ್ತಿಯಾಗಿರುವ ಜೀವಾತ್ಮನು, ಸಾಮಾಜೀಕರಣಗೊಂಡು ಜಂಗಮಾತ್ಮನಾಗಲು ಸಮರತಿ, ಸಮಕಳೆ ಮತ್ತು ಸಮಸುಖದ ಅರಿವನ್ನು ಪಡೆಯಬೇಕು.ಆಗ ಆತನು ತನ್ನೊಳಿಗಿನ ಪರಮಾತ್ಮನನ್ನು ಅರಿಯಲು ಸಾಧ್ಯವಾಗುವುದು.ಹೀಗೆ ಒಳಗಿನ ಮೂಲಕ ಹೊರಗಿನದನ್ನು ಮತ್ತು ಹೊರಗಿನ ಮೂಲಕ ಒಳಗಿನದನ್ನು ನಿರಂತರವಾಗಿ ಅರಿಯುತ್ತ ವ್ಯಕ್ತಿತ್ವ ವಿಕಸನಗೊಂಡು ವಿಶ್ವಮಾನವರಾಗುವುದೇ ಶರಣರ ಗುರಿಯಾಗಿತ್ತು. ಹೀಗೆ ಈ ಲಿಂಗತತ್ತ್ವವು ಮನಸ್ಸನ್ನು ಒಂದಾಗಿಸುವ ತತ್ತ್ವವಾಗಿದೆ.ಲೇಸನ್ನೇ ಬಯಸುವ ಶರಣರು ನದಿಯೊಳಗೆ ನದಿ ಬೆರೆತಂತೆ ಇಡೀ ಮಾನವಕುಲದೊಂದಿಗೆ ಬೆರೆಯುತ್ತಾರೆ.ಎಲ್ಲವೂ ಇಷ್ಟಲಿಂಗದಲ್ಲೇ ಇರುವುದರಿಂದ ಇಷ್ಟಲಿಂಗ ಪೂಜೆ ಎಂಬುದು ವಿಶ್ವದ ಪೂಜೆ ಆಗುತ್ತದೆ.ಈ ಕ್ರಮದೊಂದಿಗೆ ಶರಣರು ಎಲ್ಲ ಧರ್ಮಗಳವರೊಂದಿಗೆ ಬೆರೆತು ಮಾನವಕುಲವನ್ನು ಒಂದಾಗಿಸುವ ಶಕ್ತಿಯನ್ನು ಪಡೆಯುತ್ತಾರೆ.ಮಾನವ ಕುಲವನ್ನು ಒಂದಾಗಿಸುವಲ್ಲಿ ಅಡ್ಡ ಬರುವ ಎಲ್ಲವನ್ನೂ ಬಸವಣ್ಣನವರು ಎದುರಿಸಲು ಸಿದ್ಧವಾಗುತ್ತಾರೆ.
ಲಿಂಗಭೇದ, ವರ್ಣಭೇದ, ಜಾತಿಭೇದ, ವರ್ಗಭೇದ, ಕೋಮುವಾದ ಮತ್ತು ಉಗ್ರವಾದದಿಂದಾಗಿ 21ನೇ ಶತಮಾನದ ಜಗತ್ತು ನರಳುತ್ತಿದೆ. ಬಸವಣ್ಣನವರು ಹೇಳಿದಂತೆ ಮನುಷ್ಯರು ನದಿಯೊಳಗೆ ನದಿ ಕೂಡಿದ ಹಾಗೆ ಒಂದಾಗುವುದರಿಂದ ಮಾತ್ರ ಈ ಎಲ್ಲ ದುರಂತಗಳಿಂದ ಪಾರಾಗಲು ಸಾಧ್ಯ.
ಚಿತ್ರ : ಪುಂಡಲೀಕ ಕಲ್ಲಿಗನೂರು
ವೇದಕ್ಕ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನಬಾರನೆತ್ತುವೆ, ಆಗಮದ ಮೂಗ ಕೊಯಿವೆ,
ನೋಡಯ್ಯಾ ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ.
-ಬಸವಣ್ಣ
ಎಂದು ಬಸವಣ್ಣನವರು ಹಳೆಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ತಿರಸ್ಕರಿಸಿದ್ದರಿಂದಲೆ ನವಸಮಾಜದ ನಿರ್ಮಾಣ ಮಾಡಲು ಸಾಧ್ಯವಾಯಿತು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಈ ವ್ಯವಸ್ಥೆಯನ್ನು ಆರಂಭದಲ್ಲೇ ಕೊಚ್ಚಿ ಹಾಕಿದವು.
ಶರಣ ಸಂಸ್ಕೃತಿ ವಚನಗಳಲ್ಲಿ ಜೀವಂತವಿರುವುದು ಸಮಾಧಾನದ ಸಂಗತಿ. ಅದನ್ನು ಬದುಕಿಗೆ ಅಳವಡಿಸಿಕೊಳ್ಳುವುದರ ಮೂಲಕ ಜನಸಮುದಾಯವನ್ನು ವೈದಿಕ ಸಂಸ್ಕೃತಿಯಿಂದ ಮತ್ತು ಅದಕ್ಕೆ ಪೂರಕವಾಗಿರುವ ಸಾಮ್ರಾಜ್ಯಶಾಹಿ ಸಂಸ್ಕೃತಿಯಿಂದ ವಿಮೋಚನೆಗೊಳಿಸುವುದು ತುರ್ತು ಅವಶ್ಯಕತೆಯಾಗಿದೆ.
 
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣವನು.
‘ಸಂಬೋಳಿ’, ‘ಸಂಬೋಳಿ’ ಎನ್ನುತ್ತ ಇಂಬಿನಲ್ಲಿ ಇದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು.
-ಬಸವಣ್ಣ
ಬಸವಣ್ಣನವರು ಅಸ್ಪೃಶ್ಯರ ಜೊತೆ ಒಂದಾಗುವ ಕ್ರಮವಿದು. ಅವರು ಈ ವಚನದಲ್ಲಿ ಬಳಸಿದ ‘ಹೊರಗಣವನು’, ‘ಸಂಬೋಳಿ’, ‘ಇಂಬು’ (ದೂರ), ‘ಅನಾಮಿಕ’ಪದಗಳು ಅಸ್ಪೃಶ್ಯನನ್ನು ಸೂಚಿಸುತ್ತವೆ. ‘ತಾನೂ ಅಸ್ಪೃಶ್ಯ’ ಎಂದು ಬಸವಣ್ಣನವರು ಒತ್ತಿ ಹೇಳಿದ್ದಾರೆ. ಅಲ್ಲದೆ ಬೂಟಾಟಿಕೆಯ ಭಕ್ತರು ಸ್ಥಾವರ ಲಿಂಗದೇವರ ಮಂದಿರದಲ್ಲಿ ಸಲಿಗೆ ವಂತರಾಗಿ ಇದ್ದುದಕ್ಕೆ ‘ಮಹಿಮರು’ ಎಂದು ವ್ಯಂಗ್ಯವಾಡಿದ್ದಾರೆ. ಗುಡಿಯ ಒಳಗಡೆ ಪ್ರವೇಶ ಸಿಗದ ಅಸ್ಪೃಶ್ಯರ ಜೊತೆಗೆ ಹೊರಗಡೆ ನಿಂತು ಒಳಗಿದ್ದವರಿಗೆ ಎಚ್ಚರಿಸುತ್ತಿದ್ದಾರೆ.(‘ಸಂಬೋಳಿ’ಪದಕ್ಕೆ’ಎಚ್ಚರ’ ಎಂಬ ಅರ್ಥವೂ ಇದೆ.)
ಮುಂದುವರೆಯುತ್ತದೆ…

‍ಲೇಖಕರು avadhi

June 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

32 ಪ್ರತಿಕ್ರಿಯೆಗಳು

  1. Annapoorna

    ರಂಜಾನ್ ಸರ್, “ಆನು ದೇವಾ ಹೊರಗಣವನು” ವಚನವನ್ನು “ಬಸವಣ್ಣನವರು ಅಸ್ಪೃಶ್ಯರ ಜೊತೆ ಒಂದಾಗುವ ಕ್ರಮವಿದು” ಎಂದು ಅರ್ಥೈಸಿದ್ದೀರಿ. ಆದರೆ ನೀವೇ ಹೇಳಿರುವ ಹಾಗೆ ಸಂಬೋಳಿ ಎಂದರೆ ಎಚ್ಚರ, ಹಾಗೂ ಇಂಬು ಎಂದರೆ ದೂರ. ಇದರಿಂದ ವಚನದ ಅರ್ಥ ತಾನು ಲಿಂಗಾರ್ಚನೆ ಹಾಗೂ ಲಿಂಗಾರ್ಚನೆ ಮಾಡುವವರಿಂದ ಎಚ್ಚರದಿಂದ ದೂರವಿದ್ದೇನೆ ಅಂತಾಗುತ್ತದೆ. ಅಂದರೆ, ಇದು ಬಸವಣ್ಣನವರು ಲಿಂಗಾರ್ಚನೆಯ ವಿಷಯದಲ್ಲಿ ಮಾಡಿದ ಟೀಕೆ. ಲಿಂಗಾರ್ಚನೆ ಜನಪ್ರಿಯವಾಗಿದ್ದ ಕಾಲದಲ್ಲಿ ಬಸವಣ್ಣನವರು ಇದ್ದದ್ದು. ಆ ಕಾಲದಲ್ಲಿ ಅನೇಕರು ಲಿಂಗಾರ್ಚನೆ ಮಾಡಿ ಮಹಿಮರೆಂದು ಲೋಕದಲ್ಲಿ ಹೆಸರುಗಳಿಸಿದ್ದರು. ತಾನು ಅಂತಹವರಿಗೆ ಹೋಲಿಸಿದರೆ ಲಿಂಗಾರ್ಚನೆ ಮಾಡುವವನೂ ಅಲ್ಲ, ತನಗೆ ಅವರುಗಳಿರುವ ಹೆಸರು/ಖ್ಯಾತಿಯೂ ಇಲ್ಲ, ಕೂಡಲಸಂಗಮದೇವರ ಹೆಸರು ಹೇಳಿ ಇರುವ ಸಾಮಾನ್ಯ ತಾನು ಅಂತ ಬಸವಣ್ಣನವರು ತಮ್ಮ ವಿನಯವನ್ನು ಮೆರೆದಿದ್ದಾರೆ ಈ ವಚನದಲ್ಲಿ. ಲಿಂಗಾರ್ಚನೆಯೂ ಅದರಿಂದ ಬರುವ ಪ್ರಸಿದ್ಧಿಯೂ ತನ್ನ ಅಧ್ಯಾತ್ಮಿಕ ಸಾಧನೆಗೆ ಬಾಧಕ ಎಂದು ಬಸವಣ್ಣನವರು ಬಹುಬೇಗನೆ ಕಂಡುಕೊಂಡಿದ್ದರಿಂದ ಅವರಿಗೆ ಆ ವಿಷಯದಲ್ಲಿ ಎಚ್ಚರವಿದೆ ಹಾಗೂ ಅವರು ಪ್ರಜ್ಞಾಪೂರ್ವಕವಾಗಿ ಅಧ್ಯಾತ್ಮಿಕ ಸಾಧನೆಗೆ ಬಾಧಕವಾಗುವ ಎಲ್ಲದರಿಂದಲೂ ದೂರವುಳಿದಿದ್ದಾರೆ. ಈ ವಚನಕ್ಕೆ ಪೂರಕವಾಗಿ ಬಸವಣ್ಣನವರ ಅನೇಕ ವಚನಗಳಿವೆ:
    ಆಡುವುದಳವಟ್ಟಿತ್ತು-ಹಾಡುವುದಳವಟ್ಟಿತ್ತು.
    ಅರ್ಚನೆಯಳವಟ್ಟಿತ್ತು-ಪೂಜನೆಯಳವಟ್ಟಿತ್ತು.
    ನಿತ್ಯಲಿಂಗಾರ್ಚನೆಯು ಮುನ್ನವೇ ಅಳವಟ್ಟಿತ್ತು!
    ಕೂಡಲಸಂಗನ ಶರಣರು ಬಂದರೆ
    ಏಗುವುದೇಬೇಸನೆಂಬುದೊಪ್ಪಚ್ಚಿಯಳವಡದು!!
    ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇ ಬೇಕು.
    ದಕ್ಕ ನುಂಗಿದಂತೆ ಬೆರೆದುಕೊಂಡಿರಬೇಡ.
    ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದರೆ,
    ಬೇಡಿದ ಪದವಿಯನೀವ ಕೂಡಲಸಂಗಮದೇವ.
    ಮಾಡಿ, ನೀಡಿ, ಲಿಂಗವ ಪೂಜಿಸಿಹೆವೆಂಬವರು
    ನೀವೆಲ್ಲ ಕೇಳಿರಣ್ಣ;
    ಹಾಗದ ಕೆರಹ ಹೊರಗೆ ಕಳೆದು
    ದೇಗುಲಕ್ಕೆ ಹೋಗಿ,
    ನಮಸ್ಕಾರವ ಮಾಡುವನಂತೆ,
    ತನ್ನ ಕೆರಹಿನ ಧ್ಯಾನವಲ್ಲದೆ,
    ದೇವರ ಧ್ಯಾನವಿಲ್ಲ;
    ಧನವನಿರಿಸದಿರಾ ! ಇರಿಸಿದರೆ ಭವ ಬಪ್ಪುದು ತಪ್ಪದು!
    ಕೂಡಲಸಂಗನ ಶರಣರಿಗೆ ಸವೆಸಲೇಬೇಕು.

    ಪ್ರತಿಕ್ರಿಯೆ
    • Ramjan Darga

      ಲಿಂಗಗಳಲ್ಲಿ ಸ್ಥಾವರಲಿಂಗ ಮತ್ತು ಇಷ್ಟಲಿಂಗ ಪ್ರಮುಖವಾದುವು. ಸ್ಥಾವರಲಿಂಗಗಳು ಗುಡಿಗುಂಡಾರಗಳಲ್ಲಿ ಇರುತ್ತವೆ. ಇಷ್ಟಲಿಂಗಗಳು ಲಿಂಗವಂತರ ಎದೆಯ ಮೇಲೆ ಇರುತ್ತವೆ. ‘ಆನು ದೇವಾ ಹೊರಗಣವನು’ ವಚನ ‘ಲಿಂಗಾರ್ಚನೆ ಮಾಡುವ ಮಹಿಮರೆಲ್ಲ ಒಳಗ್ಯದಾರೆ ಸಲುಗೆಯಿಂದ’ಎಂದು ಆರಂಭವಾಗುತ್ತದೆ. ಬಸವಣ್ಣನವರು ಸ್ಥಾವರಲಿಂಗ ಕುರಿತು ಹೇಳಿದ್ದು ಸ್ಪಷ್ವವಾಗಿದೆ. ‘ಸ್ಥಾವರ ಪ್ರತಿಷ್ಠೆ ನಾಯಕ ನರಕ’ ಎಂದು ಕೂಡ ಅವರು ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ. ಹೀಗೆ ಅವರು ‘ಲಿಂಗ’ ಎಂದು ಬರೆದದ್ದನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುವುದು ಅವಶ್ಯವಾಗಿದೆ.

      ಪ್ರತಿಕ್ರಿಯೆ
  2. Annapoorna

    ರಂಜಾನ್ ಸರ್, ಈ ಕೆಳಗಿನ ವಚನದ ಅರ್ಥವೇನು ಅಂತ ಸ್ವಲ್ಪ ವಿವರಿಸುತ್ತೀರಾ?
    ಪಂಡಿತನಾಗಲಿ ಮೂರ್ಖನಾಗಲಿ
    ಸಂಚಿತಕರ್ಮ ಉಂಡಲ್ಲದೆ ಬಿಡದು.
    ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದು-
    ಎಂದು ಶ್ರುತಿ ಸಾರುತ್ತೈದಾವೆ-
    ನೋಡಾ, ತಾನಾವ ಲೋಕದೊಳಗಿದ್ದರೆಯು ಬಿಡದು.
    ಕರ್ಮಫಲಗೂಡಿ ಕೂಡಲಸಂಗಮದೇವಂಗೆ
    ಆತ್ಮನೈವೇದ್ಯವ ಮಾಡಿದವನೇ ಧನ್ಯನು!

    ಪ್ರತಿಕ್ರಿಯೆ
    • T.R.Chandrasekhara

      The argument presented here by AP against Darga`s thesis is not tenable. We find many internal contradictory views in the vachanas by vachanakaras. It does not mean that vachanakaras were not against KARMA paradigm. We have to see the whole philosophy of Basava and Others. They have raised many questions on the vedas, karma theory, rebirth, pollution etc. Other wise Basava would not not said that `BADUKA SAVEYA BAYASUVENU’. Akka has rejecteed the very existance of the concept and the practice of SUTHAKA(POLLUTION). Nuliya Cahndayya says that I want `WAGE’ for my work. He uses the term `COOLI’. The KAYAKA philosophy is the unique thing propagated by vachanakaras maily to reject the KARMA philosophy of Barhaminism. The vachanakaras have gone to the extent of rejecting the help of gods in their life and livelihood. Ladhe Somanna says that my work is with me. When I fell ill, or when I feel unhealthy, I myself have to take care of these things. There is no need of god for curing diseases.
      We should not pick one vachana here or one line there to repudiate the philosophy of Basava and his fellow sadhakas.
      TRC

      ಪ್ರತಿಕ್ರಿಯೆ
      • ವಿಜಯ್

        @ ಅನ್ನಪೂರ್ಣ
        ದಯವಿಟ್ಟು ಆಟದ ನಿಯಮಗಳನ್ನು ಗಮನಿಸಿ..ಒಂದು ವರ್ಗದವರನ್ನು ತೆಗಳಲು ಮಾತ್ರ ಈಗ ಸಿಕ್ಕ ೨೨೦೦೦ ಆಸುಪಾಸಿನ ವಚನಗಳಿಂದ ‘ಚೆರ್ರಿ ಪಿಕ್’ ಮಾಡಬಹುದು. ತಪ್ಪನ್ನು ಪ್ರಶ್ನಿಸಲು, ಆ ವರ್ಗದ ಪರವಾಗಿ ಏನೋ ಒಂದು ನಾಲ್ಕಾರು ವಚನ ಸಿಕ್ಕಿ ಬಿಡ್ತು ಎನ್ನುವ ಖುಷಿಯಲ್ಲಿ ಅವುಗಳನ್ನು ಮುಂದಿಡಬಾರದು. ಥರ್ಡ ಅಂಪೈರ್ ಗಳಾದ ವಿಧ್ವಾಂಸ ರಿಗೆ ನಿಮ್ಮ ಈ ‘ಕ್ಷುಲ್ಲಕ’ತನದಿಂದ ಸಿಟ್ಟು ತರಿಸಬಾರದು!

        ಪ್ರತಿಕ್ರಿಯೆ
      • Annapoorna

        ಪ್ರಿಯ ಚಂದ್ರಶೇಖರ,
        ಈ ಕೆಳಗಿನ ವಚನಗಳನ್ನು ಗಮನಿಸಿ:
        ೧)
        ಆಸತ್ತೆನಲಸಿದೆನೆಂದರೆ ಮಾಣದು,
        ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು,
        ಏವೆನೇವೆನೆಂದರೆ ಮಾಣದು-
        ಕಾಯದ ಕರ್ಮದ ಫಲಭೋಗವು.
        ಕೂಡಲಸಂಗನ ಶರಣರು ಬಂದು
        “ಹೋ ಹೋ ಅಂಜದಿರಂಜದಿರು” ಎಂದರಾನು ಬದುಕುವೆನು.
        ೨)
        ಕಬ್ಬುನ ಪರುಷವೇದಿಯಾದರೇನು ?!
        ಕಬ್ಬುನ ಹೊನ್ನಾಗದೊಡೆ ಪರುಷವದೇಕೋ ?
        ಮನೆಯೊಳಗೆ ಕತ್ತಲೆ ಹರಿಯದೊಡೆ
        ಆ ಜ್ಯೋತಿಯದೇಕೋ ?
        ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
        ಕರ್ಮ ಹರಿಯದೊಡೆ ಆ ಪೂಜೆಯದೇಕೋ ?
        ಕರ್ಮದ ಫಲ ಹಾಗೂ ಕರ್ಮ ಹರಿಯುವುದರ ಬಗ್ಗೆ ಬಸವಣ್ಣನವರು ಮಹತ್ವವಾದ ವಿಚಾರಗಳನ್ನು ಎತ್ತಿದ್ದಾರೆ ಇಲ್ಲಿ! ಆದುದರಿಂದ ವಚನಕಾರರಿಗೆ ಕರ್ಮ, ಕರ್ಮಫಲ, ಮೊದಲಾದ ಸಂಬಂಧಿತ ವಿಷಯಗಳ ಬಗ್ಗೆ ಬಹಳ ಸಂಕೀರ್ಣವಾದ ಅಭಿಪ್ರಾಯ ಹಾಗೂ ಧೋರಣೆಗಲಳಿದ್ದವು. ನಮ್ಮ ಮಾನ್ಯ ರಂಜಾನ್ ದರ್ಗಾ ಅವರ “ಮಾನವನ ಅಭ್ಯುದಯಕ್ಕೆ ಮಾರಕವಾಗಿರುವ ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ” ಎಂಬ ತೀರ್ಮಾನ ತುಂಬಾ ಸಂಕುಚಿತವಾದದ್ದು.

        ಪ್ರತಿಕ್ರಿಯೆ
        • Ramjan Darga

          ಕರ್ಮ ಸಿದ್ಧಾಂತ ಕುರಿತು ಶ್ರುತಿಗಳು ಸಾರುವುದನ್ನು ಬಸವಣ್ಣನವರು ತಿಳಿಸಿದ್ದಾರೆ. ಹೀಗೆ ಸಾರಿದ್ದರಿಂದಲೇ ಕರ್ಮ ಸಿದ್ಧಾಂತ ಜನರ ಮೆದುಳು ಹೊಕ್ಕಿತು. ಈ ಮೂಢ ನಂಬಿಕೆಯನ್ನು ತೆಗೆದು ಹಾಕುವ ಕ್ರಮವನ್ನು ಬಸವಣ್ಣನವರು ಸೂಚಿಸಿದ್ದಾರೆ. ಕರ್ಮವು ನಂಬಿದವರ ತಲೆಗಳನ್ನು ಬಿಟ್ಟರೆ ಬೇರೆಲ್ಲೂ ಇಲ್ಲ. ಅಂಥ ಮೂಢನಂಬಿಕೆಗಳನ್ನು ಕಳೆದುಕೊಳ್ಳಬೇಕೆಂದರೆ, ಅವುಗಳನ್ನು ಲಿಂಗಕ್ಕೆ ಅರ್ಪಿಸಬೇಕು. ಅಂದರೆ ಇಂಥ ಮೂಢನಂಬಿಕೆಗಳಿಂದ ಹೊರಬರುವುದಕ್ಕಾಗಿ ಇಷ್ಟಲಿಂಗ ತತ್ತ್ವವನ್ನು ಅರಿಯಬೇಕು.

          ಪ್ರತಿಕ್ರಿಯೆ
    • ishwar

      ನೀವು ಬ್ಲಾಗ್ ಬರೆಯುತ್ತೀರಾ ಅವಧಿಯಲ್ಲಿ ನಿಮ್ಮ ಬರಹ ಅತ್ಯುತಮವಾಗಿದೆ.

      ಪ್ರತಿಕ್ರಿಯೆ
      • Annapoorna

        ಇದು ಯಾರಿಗೆ ಕೇಳಿದ ಪ್ರಶ್ನೆ? ನನಗೋ ರಂಜಾನ್ ಅವರಿಗೋ? ನನಗಾದರೆ ಇದೋ ಉತ್ತರ: ನಾನು ಬ್ಲಾಗ್ ಬರೆದಿಲ್ಲ.

        ಪ್ರತಿಕ್ರಿಯೆ
    • Ramjan Darga

      ಪಂಡಿತನಾಗಲಿ ಮೂರ್ಖನಾಗಲಿ ಸಂಚಿತ ಕರ್ಮ ಉಂಡಲ್ಲದೆ ಬಿಡದು, ಪ್ರಾರಬ್ಧ ಕರ್ಮ ಭೋಗಿಸಿದಲ್ಲದೆ ಹೋಗದು ಎಂದು ಶ್ರುತಿಗಳು ಸಾರುತ್ತಿವೆ. ಹೀಗಾಗಿ ಜನಮನದಲ್ಲಿ ತುಂಬಿಕೊಂಡಿವೆ. ಕೂಡಲಸಂಗಮದೇವಂಗೆ ಆತ್ಮನೈವೇದ್ಯ ಮಾಡಿದಾಗ ಈ ಕರ್ಮಗಳು ಓಡಿಹೋಗುತ್ತವೆ ಎಂದು ಸಾಮಾಜಿಕ ಮನೋವಿಜ್ಞಾನಿಯೂ ಆಗಿದ್ದ ಬಸವಣ್ಣನವರು ತಿಳಿಸಿದ್ದಾರೆ.

      ಪ್ರತಿಕ್ರಿಯೆ
  3. ವಿಜಯ್

    [ ಆದರೆ ನಂತರದ ಕಾಲಮಾನದಲ್ಲಿ, ಅದರಲ್ಲೂ ಆಧುನಿಕ ಯುಗದಲ್ಲಂತೂ ಎಲ್ಲ ಧರ್ಮಜಾತಿವರ್ಗದವರಲ್ಲೂ ಪುರೋಹಿತಶಾಹಿಗಳೀದ್ದಾರೆ. ವಚನೋತ್ತರ ಯುಗದಲ್ಲಿ ಬದಲಾದ ರಾಜಕೀಯ ಧಾರ್ಮಿಕ ಸನ್ನಿವೇಶದಲ್ಲಿ ಎಲ್ಲಾ ಜಾತಿಗಳಲ್ಲೂ, ಈ ಪುರೋಹಿತಶಾಹಿ ಎಂಬುದು ಹುಟ್ಟಿಕೊಂಡಿದೆ. ದಲಿತಶೂದ್ರ ಹಿಂದುಳಿದವರೂ ಮಾತ್ರ ಏಕೆ, ಶರಣ ಸಂಪ್ರದಾಯದ ಲಿಂಗಾಯಿತರಲ್ಲೂ ಪುರೊಹಿತಶಾಹಿ ಮನೋಭಾವದವರಿದ್ದಾರೆ. ಇಸ್ಲಾಂ-ಕ್ರಿಶ್ಚಿಯಾನಿಟಿಯಲ್ಲೂ ಪುರೋಹಿತಶಾಹಿಯಿದೆ.]
    ತಾವು (ನೀವಲ್ಲ ಮತ್ತೆ! )ಮೊಸರನ್ನು ತಿಂದು ಕೈಯನ್ನು ಬೇರೆಯವರ ಬಾಯಿಗೆ ಒರೆಸುವ ಕಾರ್ಯವನ್ನು ಈಗಾದರೂ ನಿಲ್ಲಿಸಬಹುದಲ್ಲವೆ? ಇನ್ನೊಂದು ಆಶ್ಚರ್ಯ ಏನೆಂದರೆ ಬಸವಣ್ಣನವರು ಮಾಡಿದ ಕ್ರಾಂತಿ ಅಷ್ಟು ಬೇಗ ಅವಸಾನ ಕಾಣಲು ಕಾರಣವೇನು? ಹೋಗಲಿ ಬಿಡಿ..ಅದಕ್ಕೂ ಬ್ರಾಹ್ಮಣರೇ ಕಾರಣರಾಗಿರಬಹುದು. ಈಗ ಈ ಪ್ರಜಾಪ್ರಭುತ್ವದ ಕಾಲದಲ್ಲಿ, ಶರಣ ತತ್ವಗಳಲ್ಲಿ ಅತ್ಯುನ್ನತ ನಂಬಿಕೆಗಳನ್ನಿರಿಸಿಕೊಂಡವರು ಮತ ನಿರಸನ (ಮಾನ್ಯ ಕಲ್ಬುರ್ಗಿಯವರ ಶಬ್ದವಿದು..ಬಸವಣ್ಣನವರು ಮಾಡಿಸಿದ್ದು ಮತಾಂತರ ಅಲ್ಲವಂತೆ, ಮತ ನಿರಸನವಂತೆ) ಮಾಡಿ, ಎಲ್ಲರೂ ಒಂದೇ ಚತ್ರಿಯಡಿಯಲ್ಲಿ ಬರಬಾರದೇಕೆ? ಬ್ರಾಹ್ಮಣರನ್ನು ಅವರಷ್ಟಕ್ಕವರು ಅಸ್ಪ್ರಶ್ಯರಾಗಿರಲು ಬಿಟ್ಟು. ಈಗಲೂ ಅದಕ್ಕೆನಾದರು ಬ್ರಾಹ್ಮಣರು ಅಡ್ಡಿಪಡಿಸುತ್ತಿದ್ದಾರೆಯೆ?
    [ತಿನ್ನುವ ಅನ್ನದಲ್ಲಿ ಭೇದ (ಅಕ್ಕಿ ರಾಗಿ), ದೇಹದ ಭಾಗಗಳ್ಲಲಿ ಭೇದ (ಎಡ ಬಲ), ಬಳಸುವ ಭಾಷೆಗಳಲ್ಲಿ ಭೇದ (ಸಂಸ್ಕೃತ-ಕನ್ನಡ) ದಿಕ್ಕುಗಳಲ್ಲಿ ಭೇದ (ದಕ್ಷಿಣ ಪಶ್ಚಿಮ ಅಶುಭ ಹಾಗೂ ಪೂರ್ವ ಉತ್ತರ ಶ್ರೇಷ್ಠ) ಹೀಗೆ ಮೇಲು ಕೀಳು ಎಂಬ ಅರಿವನ್ನು ಹುಟ್ಟು ಹಾಕಿದವರು ಪುರೋಹಿತಶಾಹಿಗಳು ಎಂದು ನಾನು ಹೇಳಿದ ಮಾತ್ರಕ್ಕೆ ಅದನ್ನು ಬ್ರಾಹ್ಮಣರಿಗೇ ಏಕೆ ಅನ್ವಯಿಸಿಕೊಳ್ಳಬೇಕು?]
    ಅಂದ ಮೇಲೆ ‘ಬ್ರಾಹ್ಮಣರು ಮತ್ತು ಇತರ ಮೇಲ್ವರ್ಗದವರು’ ಎಂದು ಬಳಸುವದನ್ನು ಬಿಡಬೇಕು..ಒಂದೋ ಮೇಲ್ವರ್ಗದರು ಅನ್ನಿ ಅಥವಾ ಇಂತ ವರ್ಗದವರೇ ಹೀಗೆ ಮಾಡಿದರು ಅಂತ ಸ್ಪಷ್ಟವಾಗಿ ಹೇಳಲು ಪ್ರಾರಂಭಿಸಿ. ಈ ಪುರೋಹಿತಶಾಹಿ, ವೈದಿಕಶಾಹಿಯ ಶಬ್ದಗಳನ್ನು ವಿಷಯ ಮೈಮೇಲೆ ಬಂದಾಗ ಪಲಾಯನಕ್ಕಾಗಿ ಬಳಸಬೇಡಿ. ಒಂದು ವೇಳೆ ಬ್ರಾಹ್ಮಣರೇ ಇದಕ್ಕೆಲ್ಲ ಕಾರಣರಾಗಿದ್ದರೆ ಆಗಿನ ಸಮಾಜದ ಉಳಿದ ವರ್ಗದವರೇನಾದರೂ ಸುಮ್ಮನುಳಿದು ಕತ್ತೆ ಕಾಯುತ್ತಿದ್ದರೆ? ಬ್ರಾಹ್ಮಣರಲ್ಲದ ರಾಜರೇನು ಮಾಡುತ್ತಿದ್ದರು? ಅವರೆಲ್ಲರಿಗೂ ಲಾಭವಿತ್ತೆಂದಲ್ಲವೆ ಈ ವ್ಯವಸ್ಥೆಯನ್ನು ಅವರು ಪೋಷಿಸಿದ್ದು? ಕೆಡಿಸಲು ಬ್ರಾಹ್ಮಣ..ಸರಿ ಮಾಡಲು ಕೂಡ ಬ್ರಾಹ್ಮಣ ಬಸವಣ್ಣನೇ ಬೇಕಾದನೆ? (ಬಸವಣ್ಣ ಆಗಮಿಕ ಶೈವ ಬ್ರಾಹ್ಮಣನಂತೆ..ಶಂಕರಾಚಾರ್ಯನಂತೆ ವೈದಿಕ ಶೈವ ಬ್ರಾಹ್ಮಣನಲ್ಲವಂತೆ..ಕ್ರೆಡಿಟ್ ಸಲ್ಲಬೇಕಾದವರಿಗೆ ಸಲ್ಲಲಿ ಮತ್ತೆ! )
    [ನಮ್ಮಲ್ಲಿ ಒಬ್ಬರು, ರಾಮ ಕೃಷ್ಣ ವ್ಯಾಸ ವಾಲ್ಮೀಕಿ ಕನಕದಾಸ ಮೊದಲಾದವರು ಬ್ರಾಹ್ಮಣೇತರರಾಗಿದ್ದರೂ ಅವರಿಗೆ ನಮ್ಮ ಸಮಾಜ ಅತ್ಯುನ್ನತ ಸ್ಥಾನ ಕೊಟ್ಟಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದರು………….ನಾನು ಶ್ರೇಷ್ಠ, ನಾನು ನೀಡಿದರೆ ಮಾತ್ರ ಅದು ಅತ್ಯುನ್ನತ ಸ್ಥಾನ ಎಂಬ ಅಹಮಿಕೆ ಕಾಣುವುದಿಲ್ಲವೆ? ಅದರ ಬದಲು ಅವರಿಗೆ ಅರ್ಹತೆಯಿಂದಲೇ ಆ ಸ್ಥಾನ ಬಂದಿದೆ ಎಂದು ಹೇಳಬಹುದಲ್ಲವೆ?]
    ನಾನೂ ಕೂಡ ಅದನ್ನೇ ಹೇಳಿದ್ದು ಈ ಮುಂಚಿನ ಪ್ರತಿಕ್ರಿಯೆಯಲ್ಲಿ “ಮೇಲೇರುವುದು ಪ್ರತಿ ಒಬ್ಬ (ಗಮನಿಸಿ ‘ಪ್ರತಿ’) ಮನುಷ್ಯನಿಗೆ ವೈಯುಕ್ತಿಕ ಸಾಧನೆಯೆ..ಹಾಗಾಗಿಯೇ ವ್ಯಾಸ, ಸಾಂಖ್ಯ, ಅಗಸ್ತ್ಯರು ಗೌರವಾನ್ವಿತರಾದದ್ದು.” ಎಂದು.
    ನಾವು ಕೊಟ್ಟಿದ್ದೇವೆ ಎಂದು ಯಾವಾಗ ಹೇಳಿಕೊಳ್ಳಬೇಕಾಗುತ್ತದೆ? ನಮ್ಮ ‘ಸಮಾಜ ಸುಧಾರಕರು’ ಎಲ್ಲರನ್ನೂ ತುಳಿದು ಬಿಟ್ಟಿದ್ದಾರೆ ಎಂದು ಬೊಬ್ಬೆ ಹೊಡೆಯತೊಡಗಿದಾಗ ಮಾತ್ರ. ಗೌರವ ಕೊಟ್ಟರೂ ಗೂಬೆ ಕೂರಿಸುತ್ತೀರಿ..ಗೌರವ ಕೊಡಲಿಲ್ಲಾಂದ್ರೆ ಬಿಡಿ..ಕೇಳೋದೇ ಬೇಡ. ಅಂತರ್ಜಾಲದಲ್ಲಿ ಒಂದು ಚರ್ಚೆ ನೋಡಿದ್ದೆ ನಾನು..ಒಬ್ಬರನ್ನು (ಲೇಖಕಿ ಅವರು) ಮತ್ತೊಬ್ಬ ವ್ಯಕ್ತಿ ತರಾಟೆಗೆ ತೆಗೆದುಕೊಂಡಿದ್ದ ಎಲ್ಲಾ ರೀತಿಯ ‘ಸಂವೇದನಾಶೀಲ’ ಶಬ್ದಪ್ರಯೋಗಗಳನ್ನು ಉಪಯೋಗಿಸಿ ‘ನೀವು ಬ್ರಾಹ್ಮಣರು,,ಕೆಳಜಾತಿಯವರನ್ನ ಮುಟ್ಟಿಸಿಕೊಳ್ಳಲ್ಲ.ಕರ್ಮಠರು, ಮನುವಾದಿಗಳು’ ಇತ್ಯಾದಿ. ಉತ್ತರವಾಗಿ ಲೇಖಕಿ ಹೇಳಿದ್ದು ತಮ್ಮ ಮನೆಯಲ್ಲಿ ಎಷ್ಟೋ ವರ್ಷಗಳಿಂದ ಕೆಲಸ ಮಾಡುವ ಆಳು ಕೂಡ ತಮ್ಮ ಜೊತೆನೆ ಊಟ ಮಾಡ್ತಾನೆ ಅಂತ. ಅದಕ್ಕೆ ಆ ವ್ಯಕ್ತಿಯ ಉತ್ತರ ಏನು ಗೊತ್ತೆ? ‘ಒಹೊ..ಅದನ್ನೇ ದೊಡ್ಡ ವಿಷಯ ಅಂತ ಹೇಳಿಕೊಳ್ಳೊಕೆ ಬಂದು ಬಿಟ್ರಿ!..ಇಷ್ಟು ವರ್ಷ ಮಾಡಿದ ಪಾಪವನ್ನು ತೊಳೊಕೊತ್ತಿದ್ದೀರಿ..ಅಷ್ಟೆ’ ..ಏನಂತೀರಾ ಇಂತವರಿಗೆ?
    [ ಆಧುನಿಕ ಯುಗದ ಜಾತಿವ್ಯವಸ್ಥೆಯಲ್ಲಿ ಯಾವ ಜಾತಿಯವನು ಏನು ಬೇಕಾದರೂ ವೃತ್ತಿ ಕೈಗೊಳ್ಳಬಹುದು. ಬ್ರಾಹ್ಮಣ ಕೃಷಿಕನಾಗಿದ್ದಾನೆ, ಶೂದ್ರ ಭೂಮಾಲಿಕನಾಗಿದ್ದಾನೆ. ಅಂದ ಮಾತ್ರಕ್ಕೆ ಇತಿಹಾಸದಲ್ಲಿ ದಲಿತ ಶುದ್ರರು ಶೋಷಣೆಗೆ ಒಳಗಾಗಿರಲಿಲ್ಲ ಎಂದು ಅರ್ಥವೆ? ]
    ಈಗ ಎಲ್ಲರಿಗೂ ಅವಕಾಶವಿದೆ ತಾನೆ? ಅಂದಮೇಲೆ ಶರಣರು ಹೇಳಿದ ಕಾಯಕದಿಂದ ಮೇಲೆ ಬರುವುದೇಕೆ ನಮಗೆ ಮರೆತು ಹೋಗಿದೆ?.. ಹಿಂದಿನವರು ಮಾಡಿದ ಕರ್ಮವನ್ನು ವಿವಿಧ ರೀತಿಯಿಂದ ಜ್ಞಾಪಿಸುತ್ತ, ಅದನ್ನು ಈಗಿನವರ ಮೇಲೆ ಹೊರಿಸುತ್ತ, ಅದರ ‘ಫಲ’ ವನ್ನು ಇನ್ನೊಂದೆರಡು ಶತಮಾನ ತಿನ್ನೋಣ ಎನ್ನುವ ಆಶೆಯನ್ನು ಬಿಡೋಣ ಎನ್ನುವ ಬುದ್ದಿಯೇಕೆ ನಮ್ಮಲ್ಲಿ ಬೆಳೆಯುತ್ತಿಲ್ಲ? ಬ್ರಾಹ್ಮಣರನ್ನು ತಿದ್ದುವ ಕೆಲಸ ಮಾಡುವುದಕ್ಕಿಂತ ‘ಶೋಷಿತ’ ರನ್ನು ತಿದ್ದಿ..ಉಡುಪಿಗೆ ಹೋಗಬೇಡಿ, ಕುಕ್ಕೆಗೆ ಹೋಗಬೇಡಿ..ವೈದಿಕ ಬ್ರಾಹ್ಮಣರಿದ್ದಾರೆ ಅಲ್ಲೆಲ್ಲ..ತುಂಬಾ ಅಪಾಯಕಾರಿ ಜನ ಅವರು ಎಂದು ತಿಳುವಳಿಕೆ ಕೊಡುವ..ಶರಣ ಧರ್ಮ ಸ್ಥಾಪಿಸಿ..ಸುಖ ಸಮೃದ್ದಿ ಕಾಣುವ. ಪೇಜಾವರರ ಚಿಂತೆ ಬಿಟ್ಟು.ಅವರ ಪೀಠದ ಮೇಲೆ ಕೂಡುವ ಆಸೆ ಬಿಟ್ಟು..ತಮ್ಮದೇ ಸಿಂಹಾಸನ ರೆಡಿ ಮಾಡಿಕೊಳ್ಳುವ ಎಂದೇಕೆ ಎನಿಸುತ್ತಿಲ್ಲ?

    ಪ್ರತಿಕ್ರಿಯೆ
    • shivakumara

      ವಿಜಯ ಸರ್ ಅವರೆ ಸ್ವಾಮಿ ವಿವೇಕಾನಂದರ “ನೀಚರೂ ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದು ಧಮ೵ದ ಸಾರ ೆಮದು ಬೋಧೀಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲಿ, ಅಥವಾ ಅವರ ತಾತ ಮುತ್ತಾತರಂದಿರಾಗಲಿ ಕಳೆದ ನಾನೂರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ನೋಡಿಲ್ಲ. ಮೂಢಾಚಾರಗಳನ್ನು ಅನುಸರಿಸಿ ಹೀನ ಸ್ಥಿತಿಗೆ ಬರುತ್ತಾರೆ ಕಲಿಯುಗದಲ್ಲಿ ಬ್ರಾಹ್ಮಣ ವೇ್ಷದಲ್ಲಿರುವ ೀ ರಾಕ್ಷಸರಿಂದ ಮುಗ್ಧ ಜನರನ್ನು ಆ ದೇವರೇ ಕಾಪಾಡಬೇಕು.” (ಬ್ರಾಹ್ಮಣ್ಯದ ತಂತ್ರಗಳು-ಜಹೋನಾ ಪುಟ 110) ಈ ಮಾತನ್ನು ಗಮನಿಸಿರಿ.

      ಪ್ರತಿಕ್ರಿಯೆ
  4. Annapoorna

    ಪ್ರಿಯ ಸತ್ಯನಾರಾಯಣ, ನಾನು ಕೇಳಿದ ಪ್ರಶ್ನೆ ಯಾವುದು? “ವರ್ಣಾನಾಂ ಗುರುಃ ನಮ್ಮ ಕೂಡಲ ಸಂಗನ ಶರಣರು” ಎಂದು ಹೇಳುವುದರ ಮೂಲಕ ವರ್ಣಸಮಾಜವನ್ನು ಒಪ್ಪಿಕೊಂಡಿದ್ದಾರಲ್ಲ ವಚನಕಾರರು! ಅವರ ತಕರಾರು ಇದ್ದದ್ದು ವರ್ಣಸಮಾಜಕ್ಕೆ ಗುರು ಬ್ರಾಹ್ಮಣೋ ಅಥವಾ ಶರಣರೋ ಎಂಬುದರ ಬಗ್ಗೆ. ತಾವು ಹೇಳಿದ ಹಾಗೆ ವರ್ಣ ಎಂಬುದನ್ನು ಅಕ್ಷರ ಎಂದು ಅರ್ಥೈಸಿಕೊಂಡರೆ ಈ ವಚನಕ್ಕೆ ತಾವು ಆರೋಪಿಸಿರುವ ಸಾಮಾಜಿಕ ಮಹತ್ವ ಕಳೆದುಹೋಗುತ್ತದೆ. ಇದಕ್ಕೇನಂತೀರಿ ಎಂಬುದು ನನ್ನ ಪ್ರಶ್ನೆ.
    ನನಗೆ ವಾಚ್ಯಾರ್ಥವೂ ಸಮ್ಮತ ಧ್ವನ್ಯಾರ್ಥವೂ ಸಮ್ಮತ. ವಾಚ್ಯಾರ್ಥದಲ್ಲಿ ಓದಿಕೊಂಡರೆ ವಚನಕಾರರು ವರ್ನಸಮಾಜವನ್ನು ಒಪ್ಪಿಕೊಂಡಿದ್ದರು ಎಂದಾಗುತ್ತದೆ. ತಾವು ಸೂಚಿಸಿದ ಧ್ವನ್ಯಾರ್ಥದಲ್ಲಿ ಓದಿಕೊಂಡರೆ ವಚನ ಸಾಮಾಜಿಕ ಮಹತ್ವ ಕಳೆದುಕೊಳ್ಳುತ್ತದೆ. ಇದು ನನ್ನ ಮುಖ್ಯ ತಕರಾರು.
    ಪುರೋಹಿತಶಾಹಿ ಬಗ್ಗೆ ಅನಗತ್ಯ ವಿಷಯಾಂತರ ಬೇಡ. ನಾನು ತಮ್ಮನ್ನು ಕೇಳಿದ್ದು ಬಸವಣ್ಣ ಹಾಗೂ ಮತ್ತಿತರ ವಚನಕಾರರು ವಚನಗಳಲ್ಲಿ ಯಾರನ್ನು ಪುರೋಹಿತಶಾಹಿ ಅಥವಾ ವಿಪ್ರ ಎಂದು ಕರೆದಿದ್ದಾರೆ ಅವರು ಹಾರುವರಲ್ಲವೇ ಅಂತ. ವಚನಕಾರರ ದೃಷ್ಟಿಯಲ್ಲಿ ಅವರ ಕಾಲದ ಸಮಾಜದಲ್ಲಿ ಯಾರು ಪುರೋಹಿತಶಾಹಿ ಆಗಿದ್ದರು ಅಂತ ಹೇಳಿ.
    “ತಮ್ಮಂತೆಯೇ ಇದ್ದ ಮನುಷ್ಯರನ್ನು, ತಲೆ, ಕೈ, ಹೊಟ್ಟೆ, ಕಾಲುಗಳಿಂದೆಲ್ಲಾ ಹುಟ್ಟಿಸಿ, ಅವರಲ್ಲಿಯೇ ಮೇಲು-ಕೀಳಿ ಎಂಬ ಭೇದವನ್ನು ಆರೋಪಿಸಿದ್ದಲ್ಲದೆ, ಅವ್ಯಾವುದಕ್ಕೂ ಸೇರದ ಒಂದು ದೊಡ್ಡ ಸಮುದಾಯವನ್ನೇ ಅಸ್ಪೃಷ್ಯರನ್ನಾಗಿಸಿ ಊರ ಹೊರಗಟ್ಟಿದ್ದು, ಅದನ್ನು ಜನ್ಮಜನ್ಮಾಂತರಕ್ಕೂ ಆರೋಪಿಸಿದ್ದು ಪುರೋಹಿತಶಾಹಿಯಲ್ಲದೆ ಮತ್ತೇನು?” ಶೂದ್ರರು ಕುಂಡಿಯಿಂದ ಹುಟ್ಟಿದವರು ಅಂತ ತಮ್ಮ ಹಾಗೆ ಅವಧಿಯಲ್ಲಿ ಈ ಹಿಂದೆ ಒಬ್ಬರು ಅಭಿಪ್ರಾಯ ಪಟ್ಟಿದ್ದರು. ಆದರೆ ಶೂದ್ರರನ್ನು ಒಮ್ಮೆ ವಿಚಾರಿಸಿ ಕೇಳಿ ನೋಡಿ ಅವರುಗಳು ತಾವು ಕುಂಡಿಯಿಂದ ಹುಟ್ಟಿದವರೆಂದು ತಿಳಿದಿದ್ದಾರೆಯೇ ಅಂತ! ಶೂದ್ರರ ಮೌಖಿಕ ಸಾಹಿತ್ಯದಲ್ಲಿ ಶೂದ್ರರ ಉಗಮದ ಬಗ್ಗೆ (ಕುಂಡಿ/ಕಾಲು/ಕೈ/ ಇತ್ಯಾದಿಗಳಿಂದ) ಪ್ರಸ್ತಾಪ ಇದೆಯೇ ಅಂತ ಶೋಧಿಸಿ ನೋಡಿದ್ದೀರಾ? ನನಗೆ ತಿಳಿದ ಮಟ್ಟಿಗೆ ಬುದ್ಧಿ ಇರುವ ಯಾವನೂ (ಶೂದ್ರನಾಗಲಿ ಬ್ರಾಹ್ಮಣನಾಗಲಿ) ಶೂದ್ರರ ಉಗಮ ಕುಂಡಿಯಿಂದ ಆಗಿದ್ದು ಅಂತ ಭಾವಿಸಿಲ್ಲ. ಇಂತಹ ಹಾಸ್ಯಾಸ್ಪದ ಕತೆ ಹೇಳಿದರೆ ನಗುತ್ತಾರೆ. ಅಕಸ್ಮಾತ್ ಪುರೋಹಿತರು ಇಂತಹ ಕತೆಯನ್ನು ಸತ್ಯ ಎಂದು ನಂಬಿದ್ದರೆಂದು ತಿಳಿದರೂ, ಶೂದ್ರರಿಗೆ ನಂಬಿಕೆ ಇಲ್ಲದ ಮೇಲೆ ಅವರು ಶೂದ್ರರ ಮೇಲೆ ಅದನ್ನು ಹೇಗೆ ಹೇರಲು ಸಾಧ್ಯ?!!
    “ನಮ್ಮಲ್ಲಿ ಒಬ್ಬರು, ರಾಮ ಕೃಷ್ಣ ವ್ಯಾಸ ವಾಲ್ಮೀಕಿ ಕನಕದಾಸ ಮೊದಲಾದವರು ಬ್ರಾಹ್ಮಣೇತರರಾಗಿದ್ದರೂ ಅವರಿಗೆ ನಮ್ಮ ಸಮಾಜ ಅತ್ಯುನ್ನತ ಸ್ಥಾನ ಕೊಟ್ಟಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದರು” ಇರಬಹುದು. ಮೊನ್ನೆ ಒಬ್ಬ ಕನ್ನಡ ಸಾಹಿತಿ ಚಿಂತಕ ಮಹಾಶಯ ಲಂಡನ್ನಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಕನ್ನಡಕ್ಕೆ ಪ್ರತಿಷ್ಠೆ ತಂದೆ ಎಂದು ಹೇಳಿದರು. ಅಂದರೇನರ್ಥ? ಇವರಿಲ್ಲದಿದ್ದರೆ ಕನ್ನಡಕ್ಕೆ ಪ್ರತಿಷ್ಠೆಯೇ ಇಲ್ಲವೇ? ಇವರು ವಿದೇಶಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಕನ್ನಡಕ್ಕೆ ಪ್ರತಿಷ್ಠೆ ಬರುವಷ್ಟು ಬಡವೇ ಕನ್ನಡ??
    “ಶುದ್ಧ ಸತ್ಯ(ಋತ)ವನ್ನು ಪ್ರತಿಪಾದಿಸುವ ವೇದೋಪನಿಷತ್ತಿನ ಬಗ್ಗೆ ನಾನು ಹೇಳಿದ್ದೇನೆಯೇ ಹೊರತು, ಇಡೀ ವೇದಗಳ ಬಗ್ಗೆ ತಕರಾರು ಇರಲಿಲ್ಲ ಎಂದು ನಾನು ಹೇಳಿಲ್ಲ.” ಈ ತರಹದ ಕೂದಲು ಮುರಿಯುವಿಕೆ ಬೇಡ. ವೇದೋಪನಿಷತ್ ಬಗ್ಗೆ ಅಧಿಕಾರವಾಣಿಯಿಂದ ಹೀಗೆಲ್ಲ ಹೇಳುತ್ತೀರಲ್ಲ, ಸರಿ, ಶುದ್ಧ ಸತ್ಯ ಪ್ರತಿಪಾದಿಸುವ ವೇದ ಮಂತ್ರಗಳು ಯಾವುವು ಶುದ್ಧ ಸತ್ಯ ಪ್ರತಿಪಾದಿಸದ ವೇದ ಮಂತ್ರಗಳು ಯಾವುವು ಅಂತ ದಯವಿಟ್ಟು ಹೇಳಿ. ಒಂದೆರಡು ಮಂತ್ರಗಳನ್ನು ಉಲ್ಲೇಖಿಸಿ ಇಡೀ ವೇದಗಳ ಬಗ್ಗೆ ಬೀಸು ಹೇಳಿಕೆ ಕೊಡುವುದು ಬೇಡ.

    ಪ್ರತಿಕ್ರಿಯೆ
    • Anonymous

      ನೀವು ಬ್ಲಾಗ್ ಬರೆಯುತ್ತೀರಾ ಅವಧಿಯಲ್ಲಿ ನಿಮ್ಮ ಬರಹ ಅತ್ಯುತಮವಾಗಿದೆ.

      ಪ್ರತಿಕ್ರಿಯೆ
    • shivakumara

      ಅನ್ನಪೂಣ೵ ಮೇಡಂ ಅವರೆ ಋಗ್ವೇದದ ಪುರು್ಷ ಸೂಕ್ತವನ್ನು ನೋಡಿ ಯಾರು ಯಾವುದರಿಂದ ಹುಟ್ಟಿದ್ದಾರೆ ಎನ್ನುವುದು ನಿಮಗೆ ಮನವರಿಕೆ ಆಗುತ್ತದೆ.

      ಪ್ರತಿಕ್ರಿಯೆ
  5. Annapoorna

    ದರ್ಗಾ ಸರ್, ನಮ್ಮ ಅಲ್ಲಮನೇ ಹೇಳಿದ್ದಾನಲ್ಲ “ಕಾಲಕ್ಕಂಜಿ ಭಕ್ತನಾದಡೆ ಕರ್ಮ ತಿನ್ನದೆ ಮಾಬುದೇ” ಅದಕ್ಕೆನಂತೀರಿ?
    ಕಳ್ಳಗಂಜಿ ಕಾಡ ಹೊಕ್ಕಡೆ
    ಹುಲಿ ತಿನ್ನದೆ ಮಾಬುದೇ ?
    ಹುಲಿಗಂಜಿ ಹುತ್ತವ ಹೊಕ್ಕಡೆ
    ಸರ್ಪ ತಿನ್ನದೆ ಮಾಬುದೇ ?
    ಕಾಲಕ್ಕಂಜಿ ಭಕ್ತನಾದಡೆ ಕರ್ಮ ತಿನ್ನದೆ ಮಾಬುದೇ ?
    ಇಂತೀ ಮೃತ್ಯುವಿನ ಬಾಯ ತುತ್ತಾದ
    ವೇಷಡಂಬಕರನೇನೆಂಬೆ – ಗುಹೇಶ್ವರ !

    ಪ್ರತಿಕ್ರಿಯೆ
    • Ramjan Darga

      ಲಿಂಗವಂತ ಧರ್ಮದಲ್ಲಿ ಭಕ್ತನಾಗುವುದು ಎಂದರೆ ಸಂಪೂರ್ಣವಾಗಿ ವೈದಿಕದ ಕರ್ಮಕಾಂಡದಿಂದ ಹೊರಬರುವುದು. ಸರ್ವಸಮತ್ವದಿಂದಿರೆ ಭಕ್ತಿ. ಸರ್ವಸಮತ್ವ ಎಂದರೆ ಅಸಮಾನತೆಯನ್ನು ಪ್ರತಿಪಾದಿಸುವ ಜಾತಿ,ವರ್ಣ,ವರ್ಗ,ಅಸ್ಪೃಶ್ಯತೆ ಮತ್ತು ಲಿಂಗಭೇದವನ್ನು ತೊಡೆದು ಹಾಕಿ ಜೀವಕಾರುಣ್ಯದಿಂದ ಬದುಕುವುದು. ‘ಸಮತೆ ಎಂಬುದೇ ಯೋಗ ನೋಡಾ’ ಹೀಗೆ ಭಕ್ತನಾದವನು ಸಮತೆ ಎಂಬ ಯೋಗವನ್ನು ಸಾಧನೆ ಮಾಡಬೇಕು. ಇಂಥ ಭಕ್ತಿಯ ಪರಿಕಲ್ಪನೆ ಇಲ್ಲದೆ, ಬರಿ ಕಾಲದ ಕಟ್ಟಳೆಯ ಭಯದ ಕಾರಣಕ್ಕಾಗಿ ಆಂತರ್ಯದಲ್ಲಿ ಯಾವ ಬದಲಾವಣೆ ಇಲ್ಲದೆ ಉಳಿದುಕೊಂಡಾಗ ತಲೆಯಲ್ಲಿ ತುಂಬಿಕೊಂಡಿರುವ ಕರ್ಮ ಸಿದ್ಧಾಂತ ಆ ವ್ಯಕ್ತಿಯ ತಲೆ ತಿನ್ನತೊಡಗುವುದು. ಅದೇ ಕಾರಣದಿಂದ ‘ಕಾಲಕ್ಕಂಜಿಭಕ್ತನಾದಡೆ ಕರ್ಮ ತಿನ್ನದೆ ಮಾಬುದೆ?’ಎಂದು ಅಲ್ಲಮಪ್ರಭುಗಳು ತಿಳಿಸಿದ್ದಾರೆ.

      ಪ್ರತಿಕ್ರಿಯೆ
  6. Annapoorna

    ವಚನಕಾರರನ್ನು ವೈಜ್ಞಾನಿಕ ಮನೋಭಾವವುಲ್ಲವರು ಎಂದು ಹೇಳುವ ರಂಜಾನ್ ದರ್ಗಾ ಮೊದಲಾದವರು ಬಸವಣ್ಣನವರ ವಚನವೊಂದರ ಈ ಸಾಲುಗಳನ್ನು ಗಮನಿಸಬೇಕು:
    ಸುಪ್ರಭಾತ ಸಮಯದಲ್ಲಿ
    ಅರ್ತಿಯಲ್ಲಿ ಲಿಂಗವ ನೆನೆದರೆ
    ತಪ್ಪುವುದು ಅಪಮೃತ್ಯು ಕಾಲಕರ್ಮಂಗಳಯ್ಯ!
    ಹಾಗೆ ಈ ವಚನವನ್ನೂ ಸಹ:
    ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ
    ಎನ್ನ ವಶವೇ ಅಯ್ಯ ?
    ನೀನಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯ.
    ಅಕಟಕಟಾ ಎನ್ನವನೆನ್ನವನೆನ್ನಯ್ಯ ಕೂಡಲಸಂಗಮದೇವಯ್ಯ.
    ಇದೂ ಕೂಡ ಗಮನ ಸೆಳೆಯುತ್ತದೆ:
    ಅರ್ಥರೇಖೆಯಿದ್ದಲ್ಲಿ ಫಲವೇನು
    ಆಯುಷ್ಯರೇಖೆಯಿಲ್ಲದನ್ನಕ ?

    ಪ್ರತಿಕ್ರಿಯೆ
    • Ramjan Darga

      ಒಬ್ಬನೇ ದೇವರು, ಒಂದೇ ಜಗತ್ತು ಮತ್ತು ಒಂದೇ ಮಾನವಕುಲದಲ್ಲಿ ಬಸವಣ್ಣನವರು ನಂಬಿಕೆಯುಳ್ಳವರಾಗಿದ್ದಾರೆ. ಸೃಷ್ಟಿ ಮತ್ತು ಸೃಷ್ಟಿಕರ್ತನ ಸಂಬಂಧವನ್ನು ಅವರು ಸೂಚಿಸುತ್ತಾರೆ. ಸೃಷ್ಟಿಕರ್ತನಿಂದ ಸೃಷ್ಟಿಯಾಗಿದೆ. ವಿಜ್ಞಾನವು ಸೃಷ್ಟಿಗೆ ಸಂಬಂಧಿಸಿದೆ. ಸೃಷ್ಟಿಕರ್ತ ವಿಜ್ಞಾನದ ಪರಿಧಿಗೆ ಬರುತ್ತಿದ್ದರೆ, ವಿಜ್ಞಾನ ಮಿಸ್ಸಿಂಗ್ ಲಿಂಕ್ ಮೇಲೆ ನಿಲ್ಲುತ್ತಿರಲಿಲ್ಲ. ಬಸವಣ್ಣನವರು ಸೃಷ್ಟಿಯನ್ನು ವೈಜ್ಞಾನಿಕ ಮನೋಭಾವದಿಂದ ನೋಡಿದ್ದಾರೆ. ಆ ಮೂಲಕ ದೇವರ ಮಹತ್ವವನ್ನು ಕಂಡುಕೊಂಡಿದ್ದಾರೆ. ಆದರೆ ಬಸವಣ್ಣವರ ದೇವರು ಇರುವುದೆಲ್ಲಿ? ಗುಡಿ ಗುಂಡಾರಗಳಲ್ಲಿ ಅಲ್ಲ, ಕಲ್ಲು, ಮಣ್ಣು, ಕಂಚು, ಕಾಷ್ಠಶಿಲ್ಪಗಳಲ್ಲಿ ಅಲ್ಲ. ಅವೆಲ್ಲ ಸೃಷ್ಟಿಕರ್ತನಿಂದ ಸೃಷ್ಟಿಯಾದವುಗಳು. ದೇವರು ಮನುಷ್ಯನನ್ನು ಸೃಷ್ಟಿಸಿದ ಮೇಲೆ ಮನುಷ್ಯರು ಸೃಷ್ಟಿಸಿದ ದೇವರುಗಳು ಅವು.
      ನಮ್ಮ ದೇಹವೇ ದೇಗುಲ. ಆದ್ದರಿಂದ ನಾವೆಲ್ಲ ಉಸಿರಾಡುವ ದೇಗುಲಗಳು.ಪಾತಾಳದಿಂದತ್ತತ್ತ ಶ್ರೀಚರಣವುಳ್ಳ ಹಾಗೂ ಬ್ರಹ್ಮಾಂಡದಿಂದತ್ತತ್ತ ಶ್ರೀಮುಕುಟವುಳ್ಳ ದೇವರು ನಮ್ಮೊಳಗೂ ಇದ್ದಾನೆ.ನಾವು ಅರಿಯಬೇಕಾಗಿರುವುದು ನಮ್ಮೊಳಗಿರುವ ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣನಾದ ದೇವನನ್ನು.ಇಂಥ ದೇವರು ಮಾನವನನ್ನು ಸೃಷ್ಟಿಸಿದ ಮೇಲೆ ತಾನೆ ವಿವಿಧ ಹೆಸರಿನ ದೇವರುಗಳೊಂದಿಗೆ ಧರ್ಮಗಳನ್ನು ಮಾನವ ಸೃಷ್ಟಿಸಿದ್ದು? ಜಗತ್ತಿನ ಯಾವ ಧರ್ಮಕ್ಕೂ 10 ಸಾವಿರ ವರ್ಷಗಳ ಇತಿಹಾಸವಿಲ್ಲ. ಆದರೆ ಮಾನವನ ಇತಿಹಾಸಕ್ಕೆ ಲಕ್ಷಾಂತರ ವರ್ಷಗಳಾಗಿವೆ. ಮಾನವಧರ್ಮ ಎಲ್ಲಕ್ಕಿಂತ ದೊಡ್ಡದು. ಅದು ದಯೆಯ ಮೇಲೆ ನಿಂತಿದೆ ಎಂದು ಬಸವಣ್ಣನವರು ತಿಳಿಸಿದ್ದಾರೆ. ದಯೆಯಿಲ್ಲ ಧರ್ಮ ಅದೇವುದುದಯ್ಯಾ ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. ‘ಅದು ಏವುದು’ ಅಂದರೆ ‘ಅದು ಏನು ಮಾಡುವುದು’ ಎಂದು ಅರ್ಥ. ಇದನ್ನೆಲ್ಲ ಅರ್ಥ ಮಾಡಿಕೊಳ್ಳದಿದ್ದರೆ ಧರ್ಮಗಳ ಹೆಸರಲ್ಲಿ ಜಾತಿವಾದಿಗಳು, ಕೋಮುವಾದಿಗಳು, ಭಯೋತ್ಪಾದಕರು ಮತ್ತು ಧರ್ಮಗಳ ಹೆಸರಲ್ಲಿ ನಿರಂತರ ಸುಲಿಗೆ ಮಾಡುವವರು ಹುಟ್ಟಿಕೊಳ್ಳುತ್ತಾರೆ.
      ಬಸವಣ್ಣನವರು ‘ಜೀವಜಾಲ’ ಪದದ ಸೃಷ್ಟಿಕರ್ತರು. ‘ಸಕಲ ಚರಾಚರವೆಲ್ಲ ಜೀವಜಾಲದಲ್ಲಿದೆ’ ಎಂದು ತಿಳಿಸಿದ್ದಾರೆ. ಚರದ ಜೊತೆ ಅಚರವೂ ಜೀವಜಾಲದಲ್ಲಿದೆ ಎಂಬುದನ್ನು 20ನೇ ಶತಮಾನದ ವಿಜ್ಞಾನಿಗಳು ಒಪ್ಪಿದ್ದಾರೆ. ಜೀವಜಾಲಕ್ಕೆ ಸಮಾನವಾದ ಲೈಫ್ ವೆಬ್ ಪದ ಸೃಷ್ಟಿಯಾಗಿದ್ದು 20ನೇ ಶತಮಾನದಲ್ಲಿ. ಜನಸಮುದಾಯ ತೋರಿಕೆಯ ದೇವರುಗಳನ್ದೇನು ಬಿಟ್ಟು ನಿಜದೇವರನ್ನು ನಂಬಲಿ. ನಿಜದೇವರನ್ನೂ ನಂಬದವರು ತಮ್ಮ ಆತ್ಮಸಾಕ್ಷಿಯನ್ನು ನಂಬಲಿ ಎಂಬುವುದು ಬಸವಣ್ಣನವರ ಆಶಯವಾಗಿದೆ.

      ಪ್ರತಿಕ್ರಿಯೆ
  7. Umesh

    ಸಂಚಿತಾದಿ ಕರ್ಮತ್ರಯಂಗಳು ಜೀವನಿಗಲ್ಲದೆ ಶಿವಸ್ವರುಪನಿಗೆ ಎಲ್ಲಿಹದು? ಆಡುವ ಗೊಂಬೆಯನು ಆಡಿಸುವಾತನಿಗಲ್ಲದೆ ಆಡುವ ಗೊಂಬೆಗೆ ಎಲ್ಲಿಹುದೋ ಸ್ವತಂತ್ರತೆಯು? ಕಪಿಲ ಸಿದ್ದಮಲ್ಲಯ್ಯ ಇದರರಿವು ಸ್ವತನ್ತ್ರನಿಗಲ್ಲದೆ ಅಸ್ವತಂತ್ರನೆಗೆಲ್ಲಿಹುದೋ?
    – “ವಚನ ಧರ್ಮಸಾರ” ದಿಂದ.
    This indicates Vachanakaraas believed in Karma Theory and tells one gets liberated once they understand the ultimate truth(ಇದರರಿವು ಸ್ವತನ್ತ್ರನಿಗಲ್ಲದೆ). This is also in accordance with the “Vedanta” philosophy which says if one understands the “Brahman” one goes beyond Karma?

    ಪ್ರತಿಕ್ರಿಯೆ
    • Ramjan Darga

      ಲಿಂಗಾಂಗಸಾಮರಸ್ಯವನ್ನು ಸಾಧಿಸಿದವನೇ ಶಿವಸ್ವರೂಪನು. ಆತನೆ ಶರಣ. ಶರಣರಿಗೆ ಸಂಚಿತ, ಪ್ರಾರಬ್ಧ ಮತ್ತು ಆಗಾಮಿ ಎಂಬ ಕರ್ಮತ್ರಯಗಳು ಇಲ್ಲ. ಜೀವರುಗಳು ತಮ್ಮ ತಲೆಯಲ್ಲಿ ಈ ಕರ್ಮತ್ರಯಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಿರುವುದರಿಂದ ಅವು ಅವರ ಜೊತೆ ಇರುತ್ತವೆ. ಇದಕ್ಕೆ ಬಸವಣ್ಣನವರು ‘ತದ್ರೂಪ’ ಎನ್ನುತ್ತಾರೆ. ಹಳೆಗನ್ನಡದಲ್ಲಿ ‘ಗೆತ್ತು’ ಎನ್ನುತ್ತಾರೆ. ಮನುಷ್ಯರು ಕರ್ಮಸಿದ್ಧಾಂತದ ಭ್ರಮೆಯಿಂದ ಹೊರಬರಬೇಕು ಎಂಬುದು ಶರಣರೆಲ್ಲರ ಆಶಯವಾಗಿದೆ. ನಾವೆಲ್ಲ ಅಸ್ವತಂತ್ರರು. ಜೀವವಿರುವವರೆಗೆ ಜೀವಂತವಾಗಿರುತ್ತೇವೆ.
      ಶರಣರ ಚಿಂತನೆಗೆ ದೊಡ್ಡ ಪರಂಪರೆ ಇದೆ. ಶೈವ, ಬೌದ್ಧ, ಜೈನ, ಲೋಕಾಯತ ಮತ್ತು ಉಪನಿಷತ್ತುಗಳ ಸಾರ ಕೂಡ ವಚನಗಳಲ್ಲಿದೆ. ಇವೆಲ್ಲವುಗಳ ವಿಮರ್ಶಾತ್ಮಕ ಹಿನ್ನೆಲೆಯಿಂದಲೇ ಬಸವಣ್ಣನವರು ಹೊಸದನ್ನು ಸಾಧಿಸಿದ್ದಾರೆ.

      ಪ್ರತಿಕ್ರಿಯೆ
  8. nagshetty

    sharanu sharanrthi, how strange? sharane annapurna what you want to prove through your discussion? i am afraid of your views.
    please specify, according to you what is the purpose of Basava and contemporary? what is the purpose of Elehute Panishment? what is importance of Varnantara vivah? are all the sharana’s were mad?
    please read the Vachana of madival machideva ” emage lingavuntu, emage lingavantarendu nudivaru, marali bhavi shaiva daivanagligerguva manga manvaranenbe, kalideva” it is evidence to prove Lingayat independent religion.
    i wish to bring your notice on the Vachana
    ವೇದಕ್ಕ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
    ತರ್ಕದ ಬೆನ್ನಬಾರನೆತ್ತುವೆ, ಆಗಮದ ಮೂಗ ಕೊಯಿವೆ,
    ನೋಡಯ್ಯಾ ಮಹಾದಾನಿ ಕೂಡಲಸಂಗಮದೇವಾ,
    ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ.
    and i also wish to tell you one small and very meaning full instance of majority and number game.
    i a village conclusions were took upon majority. the majority of the council were passed a resolution a person is died he is to be buried. carry the person to grave yard. but the person considered as died is himself arguing that i am not died please don’t move me to grave.
    don’t try to make vis varsa of inception of Lingayat religion and Guru Basava’s importance.
    firstly i expect answers tothe questions that which i raised in the beginning lines…

    ಪ್ರತಿಕ್ರಿಯೆ
    • Amaresh

      Purpose of Basavanna is obvious. He started a new adhyatmic tradition borrowing from Shaivaite practices. Vachanas have borrowed adhyatmic ideas and concepts from Vedas and Upanishads. Many vachanas quote lines from them.
      Elihute was unfortunate but it was a standard punishment of those times for those involved in treason. Bijjala was afraid that his ex minister Basavanna would use people to foster an uprising against him. It is like what Indira Gandhi did in emergency. She put many non politicians also behind bar.
      Varnantara Vivaha was not new although it was not very popular. Sharanas were interested in creating a new adhyatmic sect. Since they lacked numerical strength and were not popular in the beginning, they tried to secure their following by such practices. No where Basavanna or allama has said that varnantara Vivaha is necessary for someone to become a sharana. These things must not be overlooked.

      ಪ್ರತಿಕ್ರಿಯೆ
      • Ramjan Darga

        ಬಸವಾದಿ ಶರಣರು ಮಾಡಿದ್ದು ವರ್ಣಾಂತರ ವಿವಾಹವಲ್ಲ. ಹರಳಯ್ಯ ಮಧುವರಸರ ಮಕ್ಕಳು ಕೂಡ ವರ್ಣಾತೀತ ಮತ್ತು ಜಾತ್ಯತೀತವಾದ ಲಿಂಗವಂತ ಧರ್ಮವನ್ನು ಸ್ವೀಕರಿಸಿದ್ದರು. ಆದ್ದರಿಂದ ಅದು ಲಿಂಗವಂತರ ಮದುವೆ.
        ವೇದೋಪನಿಷತ್ತುಗಳು ಮಾನವ ಚರಿತ್ರೆಯ ಭಾಗಗಳಾಗಿವೆ. ಬಸವಣ್ಣನವರು ‘ಖಂಡನೆ ಮತ್ತು ಸ್ವೀಕಾರ’ದ ತಳಹದಿಯ ಮೇಲೆಯೆ ಹೊಸ ಸಿದ್ಧಾಂತವನ್ನು ರೂಪಿಸಿದ್ದಾರೆ.

        ಪ್ರತಿಕ್ರಿಯೆ
        • Amaresh

          “ಹರಳಯ್ಯ ಮಧುವರಸರ ಮಕ್ಕಳು ಕೂಡ ವರ್ಣಾತೀತ ಮತ್ತು ಜಾತ್ಯತೀತವಾದ ಲಿಂಗವಂತ ಧರ್ಮವನ್ನು ಸ್ವೀಕರಿಸಿದ್ದರು”
          ಓಹೋ! ಇದನ್ನು ಯಾರು ಹೇಳಿದರು ತಮಗೆ? ಬಾಲ್ಯ ವಿವಾಹವೇ ಪದ್ಧತಿ ಆಗಿದ್ದ ಆ ಕಾಲದಲ್ಲಿ ಹರಳಯ್ಯ ಮಧುವರಸರ ಮಕ್ಕಳು ಲಿಂಗವಂತ ಧರ್ಮವನ್ನು ಮನಸಾರೆ ಸ್ವೀಕರಿಸುವಷ್ಟು ಪ್ರೌಢರಾಗಿದ್ದರೋ? ಅಥವಾ ಹರಳಯ್ಯ ಮಧುವರಸರು ಲಿಂಗವಂತ ಧರ್ಮಕ್ಕೆ ಇನ್ನೂ ಬಾಲವಸ್ಥೆಯಲ್ಲಿದ್ದ ತಮ್ಮ ಮಕ್ಕಳನ್ನು ತಾವೇ ಮತಾಂತರಗೊಳಿಸಿದರೋ?

          ಪ್ರತಿಕ್ರಿಯೆ
  9. nagshetty

    ವೇದಶಾಸ್ತ್ರ ಆಗಮ ಪುರಾಣಂಗಳೆಲ್ಲವು
    ಕೋಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿ ಭೋ!
    ಅವ ಕುಟ್ಟಲೇಕೆ ಕುಸುಕಲೇಕೆ?
    ಅತ್ತಲಿತ್ತ ಹರಿವ ಮನದ ಶಿರವನರಿದಡೆ
    ಬಚ್ಚ ಬರಿಯ ಬಯಲು ಚೆನ್ನಮಲ್ಲಿಕಾರ್ಜುನ
    ಅಕ್ಕಮಹಾದೇವಿ
    ಇ ಮೇಲಿ ವಚನದಿಂದ ಶರಣರು/ ಶರಣಶರೆಣೆಯರು ದೇವರ ಸ್ವರೂಪವನ್ನು ಸ್ಪಷವಾಗಿ ಆಕಾರ ರಹಿತವಾದದ್ದೆಂದು ತಿಳಿಸಿದ್ದಾರೆ, ಆದರು ಕೆಲವರು ಶಿವನಮೂರ್ತಿಯ ಫೊಟೋ ಹಾಕಿದ ತಕ್ಷಣ ಅದನ್ನು ಇಷ್ಟಪಟ್ಟು ಹಾಗು ಒಂ ನಮ ಶಿವಾಯವೆಂದು ಬರೆಯುತ್ತಾರೆ, ಇದು ಶರಣರ ತತ್ವಗಳಿಗೆ ವಿರುದ್ದ,
    ವೇದವೆಂಬುದು ಓದಿನ ಮಾತು: ಶಾಸ್ತವೆಂಬುದು ಸಂತೆಯ ಸುದ್ದಿ,
    ಪುರಾಣವೆಂಬುದು ಪುಂಡರ ಗೋಷ್ಟಿ: ತರ್ಕವೆಂಬುದು ತಗರ ಹೋರಟೆ,
    ಭಕ್ತಿ ಎಂಬುದು ತೋರಿ ಉಂಬುವ ಲಾಭ
    ಗುಹೆಶ್ವರನೆಂಬುದು ಮೀರಿದ ಘನವು.
    ಅಲ್ಲಮ ಪ್ರಭು

    ಪ್ರತಿಕ್ರಿಯೆ
  10. nagshetty

    ಆದಿ ಬಸವಣ್ಣ, ಅನಾದಿ ಲಿಂಗವೆಂಬರು, ಹುಸಿ, ಹುಸಿ
    ಈ ನುಡಿಯ ಕೇಳಲಾಗದು.
    ಆದಿ ಲಿಂಗ, ಅನಾದಿ ಬಸವಣ್ಣನು.
    ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು.
    ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು.
    ಪ್ರಸಾದವು ಬಸವಣ್ಣನನುಕರಿಸಿಸಲಯಿತ್ತು.
    ಇಂತಿ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
    ಕೂಡಲಚನ್ನಸಂಗಮದೇವಾ.
    ಚೆನ್ನಬಸವಣ್ಣ
    ಪ೦ಚಾ೦ಗ ಕೇಳಿದವರು ಏನಾದರು?
    ಶ್ರೀ ಮತ್ಸಜ್ಜನ ಶುದ್ಧ ಶಿವಾಚಾರರಾಗಿ ಅಷ್ಟಾವರನವೆ ಅ೦ಗವಾಗಿ, ಪ೦ಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾ೦ಪ್ರಾದಾಯಕರೆ೦ದು ನುಡಿದು ನೆಡೆದರೆ ಭಕ್ತರೆ೦ಬೆ, ಪುರಾತನರೆ೦ಬೆ. ಅ೦ತಪ್ಪ ಭಕ್ತ೦ಗೆ ಈ ಮೂಜಗವೆಲ್ಲ ಸರಿಯಲ್ಲವೆ೦ಬೆ. ಆ ಭಕ್ತ೦ಗೆ ಶಿವನ ಗದ್ದುಗೆ ಕೈಲಸವಗಿಪ್ಪುದು ನೋಡಾ. ಈ ಶಿವಾಚಾರದ ಪಥವನರಿಯದೆ ಇರುಳು ಹಗಲು ಅನ೦ತ ಸೂತಕಪತಕ೦ಗಳೊಳಗೆ ಮುಳುಗಾಡಿ ಮತಿಗೆಟ್ಟು ಪ೦ಚಾ೦ಗವ ಬೊಗಳುವ ಭ್ರಷ್ಟಮಾದಿಗರ ಮಾತು ಅ೦ತಿರಲಿ.
    ಪ೦ಚಾ೦ಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು?
    ಪ೦ಚಾ೦ಗ ಕೇಳಿದ ಪ೦ಚಪಾ೦ಡವರು ದೇಶಭ್ರಷ್ಟರಾದರೇಕೆ?
    ಪ೦ಚಾ೦ಗ ಕೇಳಿದ ಶ್ರೀರಾಮನ ಹೆ೦ಡತಿ ರಾವಣಗೆ ಸೆರೆಯಾದಳೇಕೆ?
    ಪ೦ಚಾ೦ಗ ಕೇಳಿದ ಇ೦ದ್ರನ ಶರೀರವೆಲ್ಲ ಯೋನಿಮ೦ಡಲವೇಕಾಯಿತು?
    ಪ೦ಚಾ೦ಗ ಕೇಳಿದ ದ್ವಾರವತಿ ಪಟ್ಟಣದ ನಾರಾಯಣ ಹೆ೦ಡರು ಹೊಲೆಮದಿಗರನ್ನು ಕೂಡಿದರೇಕೆ?
    ಪ೦ಚಾ೦ಗ ಕೇಳಿದ ಸರಸ್ವತಿ ಮೂಗು ಹೋಯಿತೇಕೆ?
    ಪ೦ಚಾ೦ಗ ಕೇಳಿದ ಕಾಮ ಸುಟ್ಟು ಭಸ್ಮವದನೇಕೆ?
    ಪ೦ಚಾ೦ಗ ಕೇಳಿದ ಬ್ರಹ್ಮ ವಿಷ್ಣು ಇ೦ದ್ರ ಮೊದಲಾದ ಮೂವತ್ತುಮೂರು ಕೋಟಿದೇವರಗಳು ತಾರಕಾಸುರನಿ೦ದ ಬಾಧೆಯಾಗಿ ಕ೦ಗೆಟ್ಟು ಶಿವನ ಮೊರೆಯ ಹೊಕ್ಕರೇಕೆ?
    ಕುರುಡು ಕು೦ಟ ಹಲ್ಲುಮುರುಕ ಗುರುತಲ್ಪಕನ ಬಲವ ಕೇಳಲಾಗದು. ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂತ೯ ವ್ಯತಿಪಾತ ದಗ್ದವಾರವೆ೦ದು ಸ೦ಕಲ್ಪಿಸಿ ಬೊಗಳುವರ ಮಾತು ಕೇಳಲಾಗದು ಗುರುವಿನಾಜ್ಞೆಯಮೀರಿ ಸತ್ತರೆ ಹೊಲೆ, ಹಡೆದರೆ ಹೋಲೆ, ಮುಟ್ಟಾದರೆ ಹೊಲೆ, ಎ೦ದು ಸ೦ಕಲ್ಪಿಸಿಕೊ೦ಬವರಿ. ನಿಮ್ಮ ಮನೆ ಹೊಲೆಯದರೆ ನಿಮ್ಮಗುರುಕೊಟ್ಟ ಲಿ೦ಗವೇನಾಯಿತು? ವಿಭೂತಿ ಏನಯಿತು? ರುದ್ರಾಕ್ಷಿ ಏನಯಿತು? ಮ೦ತ್ರವೇನಾಯಿತು? ಪಾದೋದಕವೇನಾಯಿತು? ನಿಮ್ಮ ಶಿವಾಚಾರವೇನಾಯಿತು? ನೀವೇನಾದಿರಿ ಹೇಳಿರಣ್ಣಾ?
    ಅರಿಯದಿದ್ದರೆ ಕೇಳಿರಣ್ಣಾ. ನೀಮ್ಮ ಲಿ೦ಗ ಪೀತಲಿ೦ಗ; ನೀವು ಭೂತಪ್ರಾಣಿಗಳು. ನಿಮ್ಮ ಮನೆಯೊಳಗಾದ ಪದಾಥ೯ವೆಲ್ಲ ಹೆ೦ಡಕ೦ಡ ಅಶುದ್ದ ಕಿಲ್ಬಿಷವೆನಿಸಿತ್ತು.
    ಇದ ಕ೦ಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ, ಮದುವೆಯದ ಅನ೦ತ ಜನರ ಹೆ೦ಡಿರು ಮು೦ಡೆಯರಾಗಿ ಹೋದ ದೃಷ್ಟ್ರವಕ೦ಡು ಪ೦ಚಾ೦ಗವ ಕೇಳಿದವರಿಗೆ ನಾಯಿ ಮಲವ ಹ೦ದಿಕಿತ್ತು ಕೊ೦ಡು ತಿ೦ದ೦ತ್ತಾಯಿತ್ತು ಕಾಣಾ ನಿಸ್ಸ೦ಗ ನಿರಾಳ ನಿಜಲಿ೦ಗಪ್ರಭುವೆ. (ನಿರಾಲ೦ಬ ಪ್ರಭು
    ಬ್ರಾಹ್ಮ ಣನೆ ದೈವವೆಂದು ನಂಬಿದ ಕಾರಣ
    ಗೌತಮ ಮುನಿಗೆ ಗೋವಧೆಯಾಯಿತ್ತು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    ಬಲಿಗೆ ಬಂಧನವಾಯಿತ್ತು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    ಕರ್ಣನ ಕವಚ ಹೋಯಿತ್ತು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    ದಕ್ಷಂಗೆ ಕುರಿದಲೆಯಾಯಿತ್ತು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    ಪರುಶುರಾಮ ಸಮುದ್ರಕ್ಕೆ ಗುರಿಯಾದನು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    ನಾಗರ್ಜುನನ ತಲೆ ಹೋಯಿತ್ತು.
    ದೇವಾ, ಭಕ್ರನೆಂದು ನಂಬಿದ ಕಾರಣ
    ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು.
    ಬಸವಣ್ಣ
    all these above vachana’s are single persons statement like ” i am not died” of the instance

    ಪ್ರತಿಕ್ರಿಯೆ
    • Amaresh

      In the adhyatmic traditions of India, it is common for one sect condemn the practices of other sects. Here Basavanna, a Shaivaite has condemned some practices. If you look at vaishnava texts, they condemn practices of Shaivaites. So what can be concluded from this?

      ಪ್ರತಿಕ್ರಿಯೆ
      • Ramjan Darga

        ಹೀಗೆ ನಮ್ಮ ಆಧ್ಯಾತ್ಮಿಕ ಸಂಪ್ರದಾಯದಲ್ಲಿ ತಾತ್ವಿಕ ವಾದಗಳಿರುವುದು ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ಇದನ್ನು ಮುಂದುವರಿಸಿ ನಿಜದ ನಿಲವನ್ನು ಅರಿಯಲೇ ಬೇಕು.

        ಪ್ರತಿಕ್ರಿಯೆ
        • Amaresh

          ಆಹಾ! ಇತ್ತ ಆಧ್ಯಾತ್ಮಿಕ ಪಂಥಗಳ ನಡುವಿನ ಜಗಳಗಳನ್ನು ಪ್ರಜಾಪ್ರಭುತ್ವದ ಲಕ್ಷಣ ಅನ್ನುವುದು ಅತ್ತ ಲಿಂಗಾಯತ ಪಂಥವೊಂದೇ ಸರಿ ಅಂದು ಮಿಕ್ಕ ಪಂಥಗಳನ್ನು ಜರಿಯುವುದು. ಇದು ನೋಡಿ ದರ್ಗಾ ಅವರ ಸತ್ಯ ಮಾರ್ಗ!

          ಪ್ರತಿಕ್ರಿಯೆ
  11. Sanjay Makal

    The overall meaning of Annapoorna’s arguement is that not to blame Brahmins unneccessarily without any reason using refernces of Vachanas. As the allegations OR COMMENTS were made on Brahmins were far away from the truth. Let us see third umpire from various parts of the country. Please read the books of Dr.B.R.Ambedker,Swamy Vivekanand, Recently changed history of Shivaji Maharaj, Mathwa Andolan in Orissa, Chtrapati Shahu Maharaj of Kholapur, Jyotiba Phule, Periyar Ramaswami of Tamilnadu, Buddha movment, Narayanaguru of Kerala… o.k…leave about past many modern historians, western scholars… many organisations like DSS, BAMCEF, Sambaji Brigade, Bharat Mukti morcha….etc for whom they are blaming.
    You have expressed your anger about the people who commented on Pejavar Shri. I would like to ask you one question, why the people are not commenting on other Brahmin swamijis ?. They are not going to dalits or other community people, that is why people are not commenting. Ilkal Swamiji gave many mutts to SC/ST/OBC people. That is why SC/ST/OBC people are feeling that,if Pejavar swamiji is going to the slum why can’t he adopt them to their mutt, why he is not taking food with those people ? By seeing all these at least you tell me whether the people are wrong. Ramzan Darga is the only best example I quote, being a muslim, why he is not favouring Vedas, why he is accepting the philosophy of Basava. This itself shows his greatness of accepting the truth.
    You can shut the mouth of Ramzan Darga, Dr.T.R.Chandrasheker..etc. Is it not possible to shut the mouth of the world. Accepting the truth is not easy. It is the Basava who accepted the truth but condemned the barbarian acts in the society and in the community. As per Bhagavatgita chapter no 1, shlokas 41,42, 43, 44, 45,Varna sankara is ADHARMA. What you say about this? Sir Aurthor Miles say that Basava is the first free thinker of India. This means that comments passed on the basis of Vachana are in right direction.

    ಪ್ರತಿಕ್ರಿಯೆ

Trackbacks/Pingbacks

  1. ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೬ « ಅವಧಿ / avadhi - [...] ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೬ June 29, 2013 by Avadhikannada (ಭಾಗ ೫ ಕ್ಕೆ ಇಲ್ಲಿ…

ಇದಕ್ಕೆ ಪ್ರತಿಕ್ರಿಯೆ ನೀಡಿ Ramjan DargaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: