ವಿಷ್ಣು ನಾಯ್ಕರ ಪ್ರೀತಿಗೆ ಶರಣಾಗಿದ್ದು ‘ಹೆಣಮನೆಯ ಕಾವಲಿಗ’

ಹೆಣಮನೆಯ ಕಾವಲಿಗ

ನಾನು ಚಿಕ್ಕವಳಿರುವಾಗ ಏನಾದರೂ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡು ತೀರಾ ಎಳಸಾಗಿ ಆಡಿದಾಗಲೆಲ್ಲ ಅಮ್ಮ ನಗುತ್ತ, “ಹೊಂಯ್ಗೆ ಸೋಕ್ತೀನ್ರೋ… ಕಣ್ ಮುಚ್ಕಣ್ರೋ…” ಅಂದ ಹಾಗಾಯ್ತು ಎನ್ನುತ್ತ ಯಾವಾಗಲೂ ಒಂದು ಕಥೆ ಹೇಳುತ್ತಿದ್ದರು.

ನಮ್ಮ ಜಿಲ್ಲೆಯ ತೀರಾ ಹಿಂದುಳಿದ ಜನಾಂಗಗಳಲ್ಲಿ ಹಾಲಕ್ಕಿ ಒಕ್ಕಲಿಗ ಜನಾಂಗವೂ ಒಂದು.

ಹೆಚ್ಚಿನ ಹಿಂದುಳಿದ ಜನಾಂಗಗಳು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿ ಅಷ್ಟೋ ಇಷ್ಟೋ ಅನುಕೂಲತೆಗಳನ್ನು ಕಂಡಿದ್ದರೂ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಬೇಕೆನ್ನುವ ಈ ಹಾಲಕ್ಕಿಗಳ ಒತ್ತಾಸೆ ಇನ್ನೂ ಈಡೇರಿಲ್ಲ. ಹೀಗಾಗಿ ಬಡತನ ಇನ್ನೂ ತಾಂಡವವಾಡುತ್ತಲೇ ಇದೆ.

ಇಂತಹುದ್ದೇ ಒಬ್ಬ ಹಾಲಕ್ಕಿ ಒಕ್ಕಲಿಗನ ಮನೆ. ಎರಡು ದಿನಗಳಿಂದ ತಿನ್ನಲು ಏನೂ ಇಲ್ಲ. ಮಕ್ಕಳ ಹೆಂಡತಿ ಉಪವಾಸದಿಂದ ಕಂಗೆಟ್ಟಿದ್ದಾರೆ. ಹೀಗಾಗಿ ಯಾರದ್ದಾದರು ಮನೆಯ ಕಳ್ಳತನ ಮಾಡಿಯಾದರೂ ಹಣ ಹೊಂದಿಸಿ ಮಕ್ಕಳ ಹಸಿವು ತೀರಿಸಬೇಕೆಂದು ಆತ ಯೋಚಿಸಿದ.

ಇವತ್ತಿಗೂ ಹಾಲಕ್ಕಿ ಒಕ್ಕಲಿಗರಿಗೆ ಕಳ್ಳತನ, ಮೋಸ ಅಷ್ಟೇನೂ ಆಗಿಬರದ ವಿಷಯಗಳು. ಆದರೂ ಮನೆಯ ದೈನೇಸಿತನ ನೋಡಲಾಗದೇ ಊರೊಳಗಿನ ದೊಡ್ಡವರ ಮನೆಯ ಕಳ್ಳತನ ಮಾಡಲು ಮನಸಾಗದೇ ಪಕ್ಕದ ಊರಿಗೆ ತೆರಳಿದನಂತೆ. ಆತ ವೃತ್ತಿಪರ ಕಳ್ಳನಲ್ಲ. ಹೀಗಾಗಿ ಏನನ್ನು ಕದಿಯುವುದು ಎಂಬುದು ಆತನಿಗೆ ಗೊತ್ತಿಲ್ಲ. ಆದರೂ ಸುಭ ಎಂದರೆ ಹಿತ್ತಲ ಬಾಗಿಲಿನಿಂದ ಒಳಗೆ ಹೋದರೆ ಒಂದಿಷ್ಟು ಪಾತ್ರೆ ಪಗಡೆ ಸಿಕ್ಕಾವು. ಅವುಗಳನ್ನು ಮಾರಿದರೆ ಎರಡು ದಿನಗಳ ಊಟಕ್ಕೆ ಆಗಬಹುದು ಎಂದು ಯೊಚಿಸಿದ.

ಉಪಯೋಗಿಸಿದ ಪಾತ್ರೆಗಳಾದರೆ ತಮ್ಮದೇ ಮನೆಯದ್ದೆಂದು ಸುಲಭವಾಗಿ ಮಾರಬಹುದು ಎಂಬುದು ಆತನ ಅನಿಸಿಕೆಯೂ ಇದ್ದೀತು. ಹೀಗಾಗಿ ದಾರಿಯಲ್ಲಿ ಸಿಕ್ಕಿದ ಒಂದಿಷ್ಟು ಮರಳನ್ನು ತನ್ನ ಕಚ್ಚೆ ಪಂಜೆಯ ತುದಿಯಲ್ಲಿ ಗಂಟು ಹಾಕಿಕೊಂಡ. ಅಂತೂ ಯಾವ ಶಬ್ಧವೂ ಆಗದಂತೆ ಒಂದು ಮನೆಯ ಹಿಂದಿನ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯೂ ಆದ. ಇನ್ನು ಪಾತ್ರೆಗಳೆಲ್ಲಿವೆ ಎಂದು ಹುಡುಕಬೇಕು. ಕಚ್ಚೆ ಪಂಜೆಯಲ್ಲಿ ಕಟ್ಟಿಕೊಂಡಿದ್ದ ಮರಳನ್ನು ಎಸೆದರೆ ಪಾತ್ರೆಗಳ ಮೇಲೆ ಬಿದ್ದ ಮರಳು ಸಪ್ಪಳ ಮಾಡುತ್ತದೆ, ಮತ್ತು ಸುಲಭವಾಗಿ ಪಾತ್ರೆಗಳು ಇರುವ ಸ್ಥಳ ಗುರುತಿಸಿ ಅದನ್ನು ಎತ್ತಿಕೊಂಡು ಬರಬಹುದು ಎಂಬ ಆಲೋಚನೆಯಲ್ಲಿ ಇನ್ನೇನು ಮರಳನ್ನು ಎಸೆಯಬೇಕು, ಅಷ್ಟರಲ್ಲಿ ಅವನ ತಲೆಯೊಳಗೊಂದು ಆಲೋಚನೆ ಮೂಡಿತು.

ಒಂದುವೇಳೆ ಅಡುಗೆ ಕೋಣೆಯಲ್ಲಿ ಯಾರಾದರೂ ಮಲಗಿದ್ದರೆ? ಅಕಸ್ಮಾತ್ ಅವರಿಗೆ ನಿದ್ರೆ ಬರದೇ ಕಣ್ಣು ಬಿಟ್ಟುಕೊಂಡಿದ್ದರೆ? ತಾನು ಸೋಕಿದ ಮರಳು ಅವರ ಕಣ್ಣೊಳಗೆ ಬಿದ್ದು ಕಣ್ಣು ಹಾಳಾಗಿ ಹೋಗುವುದಿಲ್ಲವೇ? “ಗುಜ್ಜು ಸೋಕ್ತೀನ್ರೋ ಕಣ್ ಮುಚ್ಕಣ್ರೋ…” ಎಂದು ಹಿಂದೆ ಮುಂದೆ ಯೋಚಿಸದೇ ದೊಡ್ಡದಾಗಿ ಹೇಳಿಯೇ ಬಿಟ್ಟನಂತೆ.

ಅಮ್ಮ ಇಷ್ಟು ಹೇಳಿ ಕಥೆ ಮುಗಿಸಿದರೆ ನಾನು “ಮುಂದೇನಾಯ್ತಮ್ಮಾ..?’ ಎಂದು ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದೆ. “ಕಳ್ಳತನಕ್ಕೆ ಬಂದವನು ಅಂತಾ ಗೊತ್ತಾಗಿ ಅವನಿಗೆ ಸರಿಯಾಗಿ ಹೊಡೆದು ಪೋಲಿಸರಿಗೆ ಕೊಟ್ಟಿರ್ತಾರೆ.” ಅಮ್ಮ ಹೇಳುತ್ತಿದ್ದರೆ ನನಗೆ ಕಸಿವಿಸಿ. “ಮುಂದೇ ಏನಾಯ್ತಮ್ಮಾ…? ಪೋಲಿಸರು ಆತನನ್ನು ಜೈಲಿಗೇ ಹಾಕ್ತಾರಾ? ” ಮತ್ತೆ ಮತ್ತೆ ಕೇಳುತ್ತಿದ್ದೆ. ‘ಅದೊಂದು ಕಥೆನೆ ಮಾರಾಯ್ತಿ. ಅದಕ್ಯಾಕೆ ಅಷ್ಟು ಟೆನ್ಶನ್ ಮಾಡ್ಕೊಳ್ತಿ?’ ಅಮ್ಮ ರೇಗುತ್ತಿದ್ದರೂ ನನಗೆ ಆ ಗೌಡ ಏನಾದ ಎಂದು ತಿಳಿದು ಕೊಳ್ಳಲೇಬೇಕಿತ್ತು.

ಹಸಿವೆ ತಾಳಲಾರದೇ ಕಳ್ಳತನ ಮಾಡಿದರೆ ಹೊಡೆದು ಬಡಿದು ಜೈಲಿಗೆ ಹಾಕೋದು ತಪ್ಪು ಎನ್ನಿಸುತ್ತಿತ್ತು. ಆದರೆ ಅಮ್ಮ ಅದು ಹಾಲಕ್ಕಿಗಳ ಮುಗ್ಧತೆ ತೋರಿಸೋದಕ್ಕೆ ಇರುವ ಕಥೆ. ಕಳ್ಳತನಕ್ಕೆ ಬಂದಿದ್ದರೂ ಬೇರೆಯವರ ಕಣ್ಣು ಹಾಳಾಗಬಾರದು ಎಂಬ ಆತನ ಒಳ್ಳೆಯತನವನ್ನು ಗಮನಿಸು ಎನ್ನುತ್ತಿದ್ದರು.

ಇಂತಹುದ್ದೊಂದು ತೀರಾ ಮುಗ್ಧರ ಒಡನಾಟದಲ್ಲಿ ಜೀವನ ಪೂರ್ತಿ ಇದ್ದಂತಹ ವಿಷ್ಣು ನಾಯ್ಕರು ‘ಹತ್ತೇ ಹತ್ತು ಕೆಂಪು ಗರಿಗರಿ ನೋಟು’ ಎಂಬ ಕವನದಲ್ಲಿ ಅವರ ಮುಗ್ಧತೆಯನ್ನೂ, ಒಡಿದಿರು ಎನ್ನಿಸಿಕೊಂಡ ಸುತ್ತಲಿನ ಮುಂದುವರಿದ ಜನಾಂಗ ಅವರನ್ನು ಹೇಗೆ ಸುಲಿಗೆ ಮಾಡುತ್ತಿದೆ ಎಂಬುದನ್ನು ತೀರಾ ಪ್ರಖರವಾದ ಕಥನ ಕಾವ್ಯದ ಮೂಲಕ ತೆರೆದಿಟ್ಟಿದ್ದಾರೆ.

ಸುಮಾರು ಹದಿನೆಂಟು- ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆಗತಾನೇ ಎಲ್ಲ ಹುಚ್ಚಾಟಗಳನ್ನು ಮುಗಿಸಿ, ಕೊನೆಗೂ ನನ್ನ ಕ್ಷೇತ್ರ ಸಾಹಿತ್ಯವೇ ಎಂದುಕೊಂಡು ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯವನ್ನು ಆಯ್ದುಕೊಂಡು ಬಿ. ಎ ಗೆ ಪ್ರವೇಶ ಪಡೆದಿದ್ದೆ. ದ್ವಿತಿಯ ಪಿ.ಯು.ಸಿಯ ವಿಜ್ಞಾನ ವಿಭಾಗದಲ್ಲಿ ಕುಳಿತು ಅರ್ಥವಾಗದ ಇಕ್ವೇಶನ್‍ಗಳನ್ನು ಕಲಿಸುವಾಗಲೆಲ್ಲ ನೋಟ್‍ಬುಕ್‍ನ ಹಿಂಬದಿಯಲ್ಲಿ ಗೀಚುತ್ತಿದ್ದ ಕವನ ಎಂದು ನಾನು ನಂಬಿದ ಒಂದರ ಕೆಳಗೊಂದು ಬರೆದ ಸಾಲುಗಳನ್ನೆಲ್ಲ ಒಪ್ಪವಾಗಿಸು ಕಾಲ ಸನ್ನಿಹಿತವಾಗಿತ್ತು.

ಮಗ ಇಂಜಿನಿಯರ್, ಮಗಳು ಡಾಕ್ಟರ್ ಆಗಲಿ ಎಂದು ಆಸೆಪಡುತ್ತಿದ್ದ ಅಪ್ಪ ತನ್ನ ನಿರಾಸೆಯನ್ನು ನುಂಗಿಕೊಂಡಿದ್ದರು. ‘ನೀವೇ ಮಾಡಿದ್ದು. ಅವಳಿಗೆ ಮೂರನೇ ಕ್ಲಾಸಿಗೇ ಪುಸ್ತಕ ಓದುವ ಗೀಳು ಹತ್ತಿಸಿದ್ದು.’ ಅಮ್ಮ ಮಾಮೂಲಿಯಾಗಿ ಗೊಣಗುಟ್ಟಿದ್ದರು.

‘ಹೌದು, ನಾನೇ ಮಾಡಿದ್ದು, ನಾಲ್ಕನೇ ಕ್ಲಾಸಿಗೇ ಕುವೆಂಪು, ಮಾಸ್ತಿ, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿಯವರನ್ನೆಲ್ಲ ಓದಿ ಮುಗಿಸಿದವಳ ಆಸಕ್ತಿ ಯಾವ ಕಡೆ ಇದೆ ಎಂದು ಗುರುತಿಸದೇ ಸೈನ್ಸ್ ಗೆ ಹಾಕಿದ್ದೇ ನಾನು ಮಾಡಿದ್ದ ತಪ್ಪು.’ ಅಪ್ಪ ಅಪೋಲಾಜೈಸ್ ಮಾಡಿಕೊಂಡಿದ್ದರು.

ಅಲ್ಲಿಗೆ ದೇಶಕ್ಕೆ ಒಬ್ಬ ವಿಜ್ಞಾನಿಯ ಕೊಡುಗೆ ನಿಂತಂತಾಯಿತು. ಆ ಸಮಯಕ್ಕೆ ಸರಿಯಾಗಿ ಅಂಕೋಲಾದಲ್ಲಿ ವಿಷ್ಣು ನಾಯ್ಕರು ಕಾವ್ಯ ಕಮ್ಮಟವೊಂದನ್ನು ಆಯೋಜಿಸಿದ್ದರು. ನಾವೆಲ್ಲ ಕವಿಗಳ ಫೋಸುಕೊಟ್ಟು ಅಲ್ಲಿ ಹೋಗಿ ಕುಳಿತಿದ್ದೆವು. ಆಗಲೇ ವಿಷ್ಣು ನಾಯ್ಕರನ್ನು ನೋಡಿದ್ದು. ನಿಧಾನವಾಗಿ ಪ್ರತಿ ಅಕ್ಷರವೂ ಅರ್ಥವಾಗುವಂತೆ ಮಾತನಾಡುವ ಅವರ ವಿಶಿಷ್ಟ ಶೈಲಿಯನ್ನು ಗಮನಿಸಿದ್ದು.

ಅಲ್ಲಿಂದ ಆಚೆಗೆ ಇಲ್ಲಿಯವರೆಗೂ ಒಂದು ರೀತಿಯಲ್ಲಿ ನಾನು ಪರಿಮಳದಂಗಳದ ಅವರ ಮನೆಯ ಮಗಳೇ. ಕೆಲವೊಮ್ಮೆ ನಾವು ನಾವೇ ಇದ್ದಾಗ ಅವರ ವಿಶಿಷ್ಟ ಶೈಲಿಯನ್ನು ಅನುಕರಿಸಿ ನಕ್ಕದ್ದಿದೆ. ಆದರೆ ಇವತ್ತಿಗೂ ಅವರ ಮಿತ ಪದಗಳ ಬಳಕೆ, ಅದು ಕವನ ಕಟ್ಟುವಿಕೆಯಲ್ಲಿರಬಹುದು ಅಥವಾ ಮಾತುಗಾರಿಕೆಯಲ್ಲೂ ಆಗಿರಬಹುದು, ಅದೊಂದು ಸೋಜಿಗವೇ.

Photo: Kemmannu.com

ಹಾಗೆ ನೋಡಿದರೆ ವಿಷ್ಣು ನಾಯ್ಕರು ಬಂಡಾಯ ಕವಿ ಎಂಬುದು ನಿಜ. ಆದರೆ ಎಲ್ಲಿಯೂ ತಿರಾ ಹಸಿಹಸಿಯಾಗಿ ಹೊಡಿ, ಬಡಿ, ತದಕು ಎನ್ನುವ ಮಾತನಾಡುವುದಿಲ್ಲ. ಎಂದಿನಂತೆ ತಮ್ಮ ತೂಕಬದ್ಧವಾದ ಮಾತುಗಳ ಮೂಲಕವೇ ಹೇಳಬೇಕಾದ ಮಾತನ್ನು ಹೇಳಿ ಚಾಬೂಕಿನ ತೆಳ್ಳಗಿನ ಎಳೆ ತಾಗಿಸಿ ಚುರುಗುಡುವಂತೆ ಮಾಡಿ ತಾವು ನಿಸೂರಾಗುತ್ತಾರೆ.

ಹಾಲಕ್ಕಿ ಗೌಡತಿಯ ಎದೆಹಾಲು ಕುಡಿದು ಬೆಳೆದವನು ತಾನು ಎಂದುಕೊಳ್ಳುವ ವಿಷ್ಣು ನಾಯ್ಕರಿಗೆ ಆ ಜನಾಂಗದ ಎಲ್ಲಾ ಒಳಸುಳಿಗಳೂ ಗೊತ್ತಿವೆ. ಅಂತಹ ಮುಗ್ಧ ಜನಾಂಗ ಎಲ್ಲೆಲ್ಲಿ ಹೇಗ್ಹೇಗೆ ವಂಚನೆಗೆ ಒಳಗಾಗುತ್ತಾರೆ ಎಂಬ ಅರಿವಿದೆ. ಹೀಗಾಗಿ ಅವರು ಹಾಲಕ್ಕಿಗಳ ಮೇಲೆ ಬರೆವ ಕವಿತೆಗಳಲ್ಲಿ ಆ ಜನಾಂಗದ ಆಡು ಮಾತು, ತಲ್ಲಣಗಳು ತೀರಾ ಸಹಜ ಎಂಬಂತೆಯೇ ಚಿತ್ರಿತವಾಗುತ್ತವೆ.

ಅದೂ ಹೇಳಬೇಕಾದುದನ್ನು ಇಷ್ಟೇ ಎಂದು ಹಸಿ ಗೋಡೆಗೆ ಹರಳು ಒಗೆದಂತೆ. ಮೇಲಿನ ಕವಿತೆಯನ್ನೇ ಉದಾಹಣೆಯಾಗಿ ತೆಗೆದುಕೊಂಡರೆ ನೋಟು ಅಮಾನ್ಯಿಕರಣದಿಮದ ತಲ್ಲಣಗೊಂಡ ನುಗ್ಲಜ್ಜಿ ಎಂಬ ಹಾಲಕ್ಕಿ ಹೆಂಗಸು ಆಪತ್ಕಾಲಕ್ಕಿರಲೆಂದು ದಿನದಿನಕ್ಕೇ ಸಾಲದ ದುಡಿಮೆಯಲ್ಲೂ ಹಣ ಉಳಿಸಿ ಹತ್ತೇ ಹತ್ತು ಕೆಂಪು ನೋಟುಗಳನ್ನು, ಕುಡುಕ ಗಂಡನೋ, ದುಂದು ವೆಚ್ಛದ ಮಗನೋ ಕಾಣದಿರಲೆಂದು ಅಕ್ಕಿ ಮಡಿಕೆಯಲ್ಲಿಟ್ಟು ಜೋಪಾನ ಮಾಡಿದವಳಿಗೆ ನಾಳೆಯಿಂದ ಈ ಕೆಂಪು ನೋಟುಗಳೆಲ್ಲ ಚಲಾವಣೆಯಲ್ಲಿ ಇರಲಾರದು ಎಂಬ ಸುದ್ದಿ ಎಂತಹ ಆಘಾತಕಾರಿ.

ಬ್ಯಾಂಕು ವ್ಯವಹಾರ ಗೊತ್ತಿರದ ಆಕೆ ಸೀದಾ ಒಡೆಯನ ಮನೆಗೆ ಹೊದರೆ ಕೆಂಪು ನೋಟು ಇಟ್ಟುಕೊಳ್ಳುವುದೇ ಮಹಾಪರಾಧ ಎಂಬಂತೆ ಭಯ ಹುಟ್ಟಿಸಿ, ಆದರೂ ಉಪಕಾರ ಮಾಡಿದವಳಂತೆ ಹತ್ತು ಹಸಿರು ನೋಟನ್ನು ಕೊಟ್ಟು ಹತ್ತು ಸಾವಿರದ ಬದಲು ಹತ್ತು ನೂರನ್ನು ತೆಗೆದುಕೊಂಡು ಹೋಗುವಾಗ ಆಕೆಗೆ ಹೇಗಾಗಿರಬೇಡ?

ನಾವೆಲ್ಲ ನೋಟು ಅಮಾನ್ಯಕರಣ ವಿರೋಧಿಸಿ ಕವನ ಬರೆದಿದ್ದೇವೆ. ಬಿಡುಬೀಸಾಗಿ, ಹಸಿಹಸಿ ಕೊಚ್ಚು ಕೊಲ್ಲುವ ಮಾತಾಡಿ ಬೊಬ್ಬಿರಿದಿದ್ದೇವೆ. ಆದರೆ ವಿಷ್ಣು ನಾಯ್ಕರು ತಮ್ಮ ಕವಿತೆಯಲ್ಲಿ ನುಗ್ಲಜ್ಜಿಯ ಕಥೆಯೊಂದನ್ನು ಎಲ್ಲಿಯೂ ಆಕ್ರೋಶವಿಲ್ಲದೇ ಹೇಳಿ ಸುಮ್ಮನಾಗಿಬಿಟ್ಟಿದ್ದಾರೆ. ಓದಿದವರಿಗೆ ಮಾತ್ರ ಆ ಕಥೆಯಲ್ಲಿನ ತಣ್ಣನೆಯ ಮೋಸ ಎದೆಯೊಳಗೆ ಹೆಪ್ಪುಗಟ್ಟಿ ಹೊಗೆಯಾಡುತ್ತದೆ. ಬರ್ನಿಂಗ್ ಐಸ್ ತರಹ.

ಅಂದು ಅಂಕೋಲಾದ ಜಿ. ಸಿ ಕಾಲೇಜಿನ ಸಭಾಂಗಣದಲ್ಲಿ ಒಂದು ಕಾರ್ಯಕ್ರಮ. ಕಲಬುರ್ಗಿ ಸರ್ ಉಪನ್ಯಾಸ. ಕಾರ್ಯಕ್ರಮ ಪ್ರಾರಂಭವಾಗಿ ಬಿಡುತ್ತದೇನೋ ಎಂದು ನಾನು ಗಡಬಡಿಸಿ ಬಂದಿದ್ದೆ. ಆದರೆ ಪ್ರಾಚಾರ್ಯರ ಕೊಠಡಿಯಲ್ಲಿ ಕಲಬುರ್ಗಿ ಸರ್ ಕುಳಿತಿದ್ದರು.

‘ನಮಸ್ಕಾರ’ ಎಂದೆ ನಮಸ್ಕಾರ ಎಂದವರೇ ತಮ್ಮದೇ ಯಾವುದೋ ಯೋಚನೆಯಲ್ಲಿ ತಲ್ಲೀನವಾದರು. ನಾನು ಅವರೆದುರು ಕುಳಿತ ಒಂದಿಷ್ಟು ಜನರೊಡನೆ ಕುಳಿತೆ. ಸರಿಯಾದ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭಿಸಬೇಕು. ಐದು- ಹತ್ತು ನಿಮಿಷವಾಯಿತು. ಯಾಕೆ ತಡವಾಗ್ತಿದೆ? ಸಂಘಟಕರ ಮುಖದಲ್ಲಿ ಸಣ್ಣ ಕಳವಳ, ಸೇರಿದವರಲ್ಲಿ ಅಚ್ಚರಿ. ಒಮ್ಮೆಲೆ ಕಲಬುರ್ಗಿ ಸರ್, “ಅರೆ, ಶ್ರೀದೇವಿ ನೀನ್ಯಾವಗ ಬಂದಿ? ಬಂದವಳು ಮಾತಾಡಿಸಬೇಕೋ ಇಲ್ವೋ? ನಿಂಗ ಕಾಯ್ಕೊಂಡು ಕೂತಿದ್ದೆ. ತಡಾ ಆಗ್ಲಿಕ್ ಹತ್ತೇದ…ನಡಿರಿ ನಡಿರಿ…” ಎಂದು ಎದ್ದರು.

‘ಅರೆ, ನಾನಾಗಲೇ ಮಾತನಾಡಿಸಿದೆನಲ್ಲ?’ ನನಗೆ ಅಚ್ಚರಿಯಾದರೂ ಸರ್ ನನಗೋಸ್ಕರ ಕಾದಿದ್ದು ಎಂಬ ಖುಷಿಗೆ ಧನ್ಯಳಾಗಿ ಹೋಗಿದ್ದೆ. ಅಂತಹ ಗುರುಗಳ ಹಣೆಗೆ ಬಿದ್ದ ಗುಂಡು ಎಷ್ಟೋ ದಿನ ನನ್ನ ಬಾಯಿ ಮುಚ್ಚಿಬಿಟ್ಟಿತ್ತು. ಮೊನ್ನೆ ಮೊನ್ನೆ ನಡೆದ ಗೌರಿ ಕೊಲೆ ಎಲ್ಲವೂ ನಮ್ಮನ್ನು ಎಷ್ಟೊಂದು ಹೈರಾಣಾಗಿಸಿದೆಯೋ ವಿಷ್ಣು ನಾಯ್ಕರನ್ನೂ ಬಾಧಿಸಿದೆ. ನಾವೆಲ್ಲ ಕಿರುಚಾಡಿ ಬೊಬ್ಬೆಯಿಟ್ಟು ಹಾಹಾಕಾರ ಹಾಕಿದರೆ ವಿಷ್ಣು ನಾಯ್ಕರು ಕೆಲವೇ ಶಬ್ಧಗಳಲ್ಲಿ ನಮ್ಮ ಹಾಹಾಕಾರವನ್ನೆಲ್ಲ ಹಿಡಿದಿಟ್ಟಿದ್ದಾರೆ. ನಾವೆಲ್ಲ ಪೇಜುಗಟ್ಟಲೆ ಬರೆದು ಪಿಂಡಿ ಕಟ್ಟಿದರೆ,

ನೀನು ಮಾಡಿದ್ದಷ್ಟೇ ಬುದ್ಧನನ್ನು ಹಿಡಕೊಂಡೆ
ಬದ್ಧತೆಯ ಬಿಡದಲೇ ಬಂಡಿಯನು ಎಳೆದೊಯ್ದೆ

ಎಂದು ಎರಡೇ ಸಾಲಿನಲ್ಲಿ ಗೌರಿಯ ಬದುಕನ್ನು ಹಿಡಿದಿಟ್ಟಿದ್ದಾರೆ. ಕವಿ ತನ್ನ ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸದೇ ಹೋದರೆ ಆತ ಅದೆಷ್ಟೇ ಚಂದದ ಕವಿತೆ ಬರೆದರೂ ಅದು ಬರಿ ಬೂಟಾಟಿಕೆ ಎನ್ನಿಸಿಕೊಳ್ಳುತ್ತದೆ. ಚಂದದ ಕವನ ಬರೆಯುವ, ಕಥೆಗಳಲ್ಲಿ ಸಂವೇದನೆಗಳನ್ನು ನೀರಂತೆ ಹರಿಸುವ ಕೆಲವು ಸಾಹಿತಿಗಳು ಸಮಾಜದ ಆಗು ಹೋಗುಗಳಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮದೇ ಲೋಕದಲ್ಲಿ ಮುಳುಗಿರುವಾಗ

ಮನುಷ್ಯನ ಕೊಲಬಹುದಣ್ಣ
ಸಿದ್ಧಾಂತ ಕೊಲಲುಂಟೇ
ಬುಲೆಟ್ಟಿಗೆಷ್ಟರ ಸಕುತಿ ಸೀಳಿ ಹಾರುವುದಷ್ಟೇ

ಎಂದು ಕಲಬುರ್ಗಿಯವರ ಸಾವನ್ನು ವಿರೋಧಿಸುತ್ತಾರೆ. ಹೀಗಾಗಿಯೇ ಅಲ್ಲಿಂದ ಇಲ್ಲಿ ಮಠ, ಅಣ್ಣ ಬಸವ, ದೇವರಾಗಿದ್ದೆ ನಾ ಮುಂತಾದ ಕವಿತೆಗಳು ಜಗ್ಗಿ ಹಿಡಿದು ನಮ್ಮನ್ನು ಓದಿಸಿಕೊಳ್ಳುತ್ತವೆ,

ಕೆಲವು ದಿನಗಳ ಹಿಂದೆ ಕಾರವಾರದ ಜಿಲ್ಲಾ ಗ್ರಂಥಾಲಯಕ್ಕೆ ಹೋಗಿದ್ದೆ. ಅದೇ ಸಮಯಕ್ಕೆ ವಿಷ್ಣು ನಾಯ್ಕರೂ ಅಲ್ಲಿ ಬಂದರು. ನನ್ನ ಮಗಳಂತೆ ಯಾವಾಗಲೂ ನನ್ನ ಜೊತೆಯೇ ಇರುವ ನನ್ನ ಹಳೆಯ ವಿದ್ಯಾರ್ಥಿನಿ ಅಕ್ಷತಾ ಇದ್ದಳು. ಅವಳಿಗೋ ತನ್ನ ಪುಸ್ತಕದಲ್ಲಿ ಬರುವ ವಿಷ್ಣು ನಾಯ್ಕರು ಎದುರಿಗೇ ಸಿಕ್ಕ ಸಂಭ್ರಮ. ಅವಳ ಸಂಭ್ರಮವನ್ನು ಹಾಗೇ ಮೊಬೈಲ್‍ನಲ್ಲಿ ಹಿಡಿದಿಟ್ಟೆ.

ವಿಷ್ಣು ನಾಯ್ಕರ ಜೊತೆ ನಿಲ್ಲಿಸಿ ಫೋಟೊ ತೆಗೆದು. ನಂತರ ನಾವು ಯಾವುದೋ ವಿಷಯ ಚರ್ಚಿಸುವಾಗ ಅಕ್ಷತಾ ನಮ್ಮಿಬ್ಬರ ಫೋಟೊ ತೆಗೆದು ತಂದು ತೋರಿಸಿದಳು. “ನೋಡು, ನೋಡು…ನಾನೇ ಚಂದ ಬಂದಿದ್ದೀನಿ ನಿನಗಿಂತ…” ಎನ್ನುತ್ತ ಪುಟ್ಟ ಮಕ್ಕಳ ಹಾಗೆ ಹೇಳಿದರು. ಹೌದು ಸರ್ ನಿಮ್ಮ ಗತ್ತು ಗೈರತ್ತು ನನಗೆಲ್ಲಿ ಬರಬೇಕು ಎಂದುಕೊಂಡೆ ಮನದಲ್ಲೇ. ಅವರ ಹಾಗೆ ಕಡಿಮೆ ಶಬ್ಧಗಳಲ್ಲಿ ಬಹಳಷ್ಟನ್ನು ಹಿಡಿದಿಡಲು ಸಾಧ್ಯವಾದರೆ ನನಗಷ್ಟೇ ಸಾಕು ಎನ್ನಿಸಿದ್ದೂ ಸುಳ್ಳಲ್ಲ.

ಇಲ್ಲಿನ ಕವಿತೆಗಳನ್ನು ಓದುವಾಗ ಮತ್ತೆ ಮತ್ತೆ ಕಣ್ಣೆದುರಿಗೆ ಬಂದು ನಿಲ್ಲುವುದು ಕವಿತಕ್ಕ. ‘ಬಾರೇ ಮುಗ್ವೆ, ಒಂದ್ ಫೋಟೋಕ್ ನಿಲ್ಲು ನನ್ ಸಂಗಡ..’ ಎನ್ನುತ್ತ ಕೆಲವೇ ದಿನಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ಫೋಟೋ ತೆಗೆಸಿಕೊಂಡ ಕವಿತಕ್ಕ ತಿಂಗಳೊಳಗಾಗಿ ನಮ್ಮನ್ನೆಲ್ಲ ಬಿಟ್ಟು ಬಹುದೂರ ಹೊರಟು ಹೋಗಿದ್ದನ್ನು ಸಹಿಸಿಕೊಳ್ಳುವ ಶಕ್ತಿ ನಮಗೇ ಇಲ್ಲದಿರುವಾಗ, ತಮ್ಮೆಲ್ಲ ಬರೆಹಗಳ, ಪ್ರಕಾಶನದ, ಬದುಕಿನ ಜೀವಾಳವೇ ಆಗಿದ್ದ ವಿಷ್ಣು ನಾಯ್ಕರ ಸ್ಥಿತಿ ಏನಾಗಿರಬೇಡ?

ಅಂದು ಬೆಳಿಗ್ಗೆ ಬೆಳಿಗ್ಗೆ ಕವಿತಕ್ಕ ತೀರಿಕೊಂಡರು ಎಂಬ ಮೆಸೆಜ್ ತಲುಪಿದಾಗ ನಾನು ಹಾರೈಸಿದ್ದು ಸುದ್ದಿ ಸುಳ್ಳಾಗಿರಲಿ ಎಂದೇ. ನಮ್ಮ ಏರಿಯಾದಲ್ಲೇ ಇರುವ ಶ್ರೀಧರ ನಾಯಕರಿಗೆ ಫೋನ್ ಮಾಡಿದ್ದೆ. “ಇರು ಸುದ್ದಿ ಕನ್ಫರ್ಮ ಮಾಡ್ಕೊಳ್ಳೋಣ ಎಂದವರು ಸ್ವಲ್ಪ ಸಮಯ ಬಿಟ್ಟು “ಹೊರಡೋಣ…. ಬೇಗ ಬಾ” ಅಂದಿದ್ದರು. ಅಂಬಾರಕೊಡ್ಲಿಗೆ ಹೋದರೆ ಮಲಗಿಯೇ ಇದ್ದಂತೆ ಕಾಣುವ ಕವಿತಕ್ಕ, ಪಕ್ಕದಲ್ಲಿ ಕುಸಿದು ಕುಳಿತ ವಿಷ್ಣು ನಾಯ್ಕರು.

ಅತ್ತು ಅತ್ತು ಸೊರಗಿದ್ದ ವಿಷ್ಣು ನಾಯ್ಕರು ನನ್ನನ್ನು ಕಂಡಿದ್ದೇ ಮತ್ತೆ ಬಿಕ್ಕಿದ್ದರು. “ಒಂದು ಸೇವೆನೂ ಮಾಡಿಸಿಕೊಳ್ಳಲಿಲ್ಲ. ಥಟ್ ಅಂತಾ ಹೋಗೇ ಬಿಟ್ಟಳು. ಆಸ್ಪತ್ರೆಗೆ ತಗೊಂಡು ಹೋಗುವವರೆಗೂ ನಿಲ್ಲಲಿಲ್ಲ” ಬಿಕ್ಕಳಿಕೆಯ ಮಧ್ಯೆ ತುಂಡು ತುಂಡು ಮಾತು. ಸುತ್ತಲಿನ ಹಾಲಕ್ಕಿ ಕುಟುಂಬಗಳಿಗೆ, ಮನೆಯ ಸದಸ್ಯರಿಗೆ ಕೋಳುಗಂಬದಂತೆ ಆಧಾರಸ್ಥಂಬವಾಗಿದ್ದ ಕವಿತಕ್ಕನ ಕುರಿತು ಐದು ಕವಿತೆಗಳಿವೆ. ಒಂದೊಂದು ಕವನವೂ ಒಂದೊಂದು ವಿಶಿಷ್ಟತೆಯಲ್ಲಿ ಗಮನ ಸೆಳೆಯುತ್ತದೆ.

ಕವಿತಕ್ಕ ದೂರವಾದ ಮೇಲೆ ಪರಿಮಳದಂಗಳಕ್ಕೆ ಹೋದದ್ದೇ ಕಡಿಮೆ. ಅವರ ಪುಸ್ತಕ ಬಿಡುಗಡೆಗೆ ಹೋಗಿದ್ದರೂ ವಿಷ್ಣು ನಾಯ್ಕ ಸರ್ ರನ್ನು ಮಾತನಾಡಿಸಲಾಗದೇ ಗಡಿಬಿಡಿಯಿಂದ ಬಂದಿದ್ದೆ. ಹೀಗಾಗಿ ಒಮ್ಮೆ ಮಾತನಾಡಿಸಲೇಬೇಕು ಎಂಬಂತೆ ಒಂದು ನೆಪ ಹಿಡಿದು ಮನೆಗೆ ಹೋದೆ. ಎಂದಿನ ಆತ್ಮೀಯತೆ, ಪ್ರೀತಿ, ಕಾಳಜಿ. ಆದರೆ ಮನೆಗೆ ಹೋದ ತಕ್ಷಣ ಬಂದು ಒಂದಿಷ್ಟು ರೇಗಿ, ಸಮಾಧಾನ ಮಾಡಿ ತಲೆಯ ಮೇಲೆ ಕೈಯ್ಯಾಡಿಸುವ ಕವಿತಕ್ಕನ ಕೊರತೆ ಎದ್ದು ಕಾಣಿಸಿತು.

ಒಂದಿಷ್ಟು ಅವರ ಬಗ್ಗೆ ಮಾತಾಡಿ ಹೊರಡುವಾಗ “ಇದು ದಂಪತಿಗಳಿಗಿಬ್ಬರಿಗೂ..” ಎನ್ನುತ್ತ ಕವನ ಸಂಕಲನವನ್ನು ಪ್ರವೀರ್ ಕೈಗಿತ್ತರು. ಹಿಂದೊಮ್ಮೆ , “ಗಂಡಸರ ಬಗ್ಗೆ ಎಷ್ಟೆಲ್ಲ ಬೈದು ಬರಿತೀಯೆ ಮಾರಾಯ್ತಿ. ಪಾಪ, ಪ್ರವೀರ ನೀ ಬರೆದದ್ದನ್ನೆಲ್ಲ ಓದದೇ ಇದ್ದುದಕ್ಕೆ ಸಮಾ ಆಗದೆ..’ ಎನ್ನುತ್ತ ನಕ್ಕಿದ್ದರು.

ಈಗಲೂ ಪುಸ್ತಕ ಕೈಗಿತ್ತು ಮೊದಲ ಪುಟ ತೋರಿಸಿದರು. ಹೊಸ ತಲೆಮಾರಿನ ಎಲ್ಲ ಕವಿಗಳಿಗೆ ಅರ್ಪಿಸಿರುವ ಕವನ ಸಂಕಲನ ಇದು. ‘ಅಂದ್ರೆ ಇದು ನನಗೂ ಅರ್ಪಣೆ ಆಗದೆ..?’ ಮಾಮೂಲಿ ತುಂಟತನದಲ್ಲಿ ಕೇಳಿದ್ದೆ. ಅವರ ಮುಖದಲ್ಲಿ ಮತ್ತದೇ ಮಾಸದ ಮುಗುಳ್ನಗು. ಆ ಮುಗುಳ್ನಗೆಯಲ್ಲಿ

ನಿಸ್ಸಂದೇಹ ಇದು ಗೊತ್ತಿದೆ ನನಗೆ
ಹೊಣೆ ಹೊತ್ತ ಹೊಂತಗಾರರು ನೀವು
ನನ್ನ ನಂಬಿಕೆಯ ನಾಳೆ ದಿನ

ಎಂಬ ಸಾಲು ಕಾಣಿಸಿದಂತಾಯ್ತು. ‘ಆಲಸಿ ಮಾಡಬೇಡ. ಸರಿಯಾಗಿ ಬರಿ.’ ಎಂದವರ ಮಾತಿನಲ್ಲಿ ಮತ್ತದೇ ತಂದೆ ಪ್ರೀತಿ.

‍ಲೇಖಕರು avadhi

February 18, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. JAYASHRI ABBIGERI

    ಅಬ್ಬಾ!!! ಅದೆಷ್ಟು ಚೆನ್ನಾಗಿ ಬರೆದಿದ್ದೀರಿ ಶ್ರೀ.
    ಭಾವನೆಗಳ ಓಘವನ್ನು ಸೃಷ್ಟಿಸುವ ಕಲೆ ತಮಗೆ ಕರಗತವಾಗಿದೆ..ಸಮೃದ್ಧ ಸುಂದರ ಬರಹ
    ಅಭಿನಂದನೆಗಳು

    ಪ್ರತಿಕ್ರಿಯೆ
    • Sujatha lakshmipura

      ಅದ್ಬುತ ಬರವಣಿಗೆ… ಶ್ರಿದೇವಿ ಅವರ ಪುಸ್ತಕ ಪರಿಚಯದ ಬಗೆ ನವೀನವಾಗಿದೆ.ಹೀಗೂ ಪುಸ್ರಕ ಪರಿಚಯ ಮಾಡಬಹುದಾ ಎಂಬ ಅಚ್ಚರಿ. ಸ್ವಾನುಭವದ ಮೂಲಕ ಕವಿ,ಕಾವ್ಯ ಪ್ರವೇಸಿಸುತ್ತಲೇ ಕವಿಯ ವ್ಯಕ್ತಿತ್ವದ ಚಿತ್ರ ಬಿಡಿಸುತ್ತಲ್ಲೆ ಕವಿತೆಗಳ ಬಿಡಿ ಬಿಡಿ ಸಾಲುಗಳ ರುಚಿ ತೋರಿಸಿ,ವಸ್ತು ಜಗತ್ತಿಗೆ ಹೊರಬಂದು ತನ್ನ ಅನುಭವಗಳ ಮೂಸೆಯಿಂದ ಮತ್ತೆ ಕವಿತೆಗಳ ಅನಾವರಣಕ್ಕೆ ನಿಲ್ಲುವುದು -ಹೀಗೆ ಅನುಭವ,ಕವಿ,ಕವಿತೆ ಒಂದರೊಳಗೊಂದು ಹೆಣೆದುಕೊಳ್ಳುತ್ತಲೇ ತೆರೆದುಕೊಳ್ಳುವ ಈ ಬಗೆಯ ಬರವಣಿಗೆ ನನ್ನಲ್ಲಿ ಬೆರಗು ಮೂಡಿಸಿದೆ. ಹನಿಯಲ್ಲಿ ಕಡಲ ತೋರುವ, ಪುಸ್ತಕದ ಓದಿಗೆ ಎಳಸುವ ನಿಮ್ಮ ಬರಹಕ್ಕೆ ಧನ್ಯವಾದಗಳು.

      ಪ್ರತಿಕ್ರಿಯೆ
  2. Sangeeta Kalmane

    ಪ್ರತಿಯೊಂದು ನೆನಪಿಸಿಕೊಂಡು ಬರೆಯುವ ಶೈಲಿ ಸೂಪರ್. ಬರಹದಲ್ಲಿ ನಿಮ್ಮೊಂದಿಗೆ ನಮ್ಮನ್ನು ಕರೆದೊಯ್ಯುತ್ತೀರಾ.

    ಪ್ರತಿಕ್ರಿಯೆ
  3. ಧನಪಾಲ ನೆಲವಾಗಿಲು

    ಪುಸ್ತಕ ವಿಶ್ಲೇಷಣೆಯ ನಿಮ್ಮ ಪರಿ ಅನನ್ಯ. ಓದುಗರನ್ನು ಪುಸ್ತಕ ಓದುವಂತೆ ಪ್ರೇರೇಪಿಸುತ್ತದೆ. ತಾವಾಗಿ ಕಥೆಯೋ, ಕವಿತೆಯೋ ಬರೆಯುವುದು ದೊಡ್ಡ ಸಂಗತಿಯಲ್ಲ. ಅನ್ಯರ ಬರಹಗಳನ್ನು ಓದಿ, ಅದರಲ್ಲಿನ ಒಳಿತನ್ನು ಎತ್ತಿ ತೋರಿಸಿ ಅವರನ್ನು ಪ್ರೋತ್ಸಾಹಿಸುವ ನಿಮ್ಮ ಕಾರ್ಯ ಶ್ಲಾಘನೀಯ.

    ಧನ್ಯವಾದಗಳು ಶ್ರೀದೇವಿ ಮೇಡಮ್.

    ಪ್ರತಿಕ್ರಿಯೆ
  4. Noorulla Thyamagondlu

    ತುಂಬ ಚೆಂದದ ಬರಹ, ಇಷ್ಟವಾಯಿತು.

    ಪ್ರತಿಕ್ರಿಯೆ
  5. Shivalingappa Sajjanshettar

    ವಿಷ್ಣು ನಾಯ್ಕರ ” ಹೆಣಮನೆಯ ಕಾವಲಿಗ ” , ಒಳ್ಳೆಯ ವಿಮರ್ಶೆ. ಅಮ್ಮ ಹೇಳುವ ಕಥೆಯಲ್ಲಿ ಹಾಲಕ್ಕಿ ಒಕ್ಕಲಿಗರ ಮುಗ್ಧತೆ ಎದ್ದು ಕಾಣುತ್ತದೆ. ಹೆಂಡತಿ ಮಕ್ಕಳ ಹಸಿವ ನೀಗಿಸಲು ಅದಾಗೇ ಬಿಡುಗಡೆಗೊಂಡ ಕೈದಿಯೊಬ್ಬ ಚರ್ಚಿನಲ್ಲಿನ ಮೊಂಬತ್ತಿ (candlestick) ಗಳನ್ನು ಕದ್ದು ಮಾರಲು ಹೋಗಿ ಮತ್ತೆ ಜೈಲು ಪಾಲಾಗುವ ಬಡವ ಮತ್ತು ಮುಗ್ಧನ ಕಥೆಯಂತಿದೆ ಹಾಲಕ್ಕಿ ಒಕ್ಕಲಿಗ ಕಳುವು ಮಾಡುವ ಪ್ರಸಂಗ. ” ಗುಜ್ಜು ಸೋಕ್ತಿನ್ರೋ ಕಣ್ ಮುಚ್ಕಣ್ರೋ ” ಎಂಬ ಆತನ ಮಾತುಗಳಲ್ಲಿ ಅವನ ಮಾನವೀತೆಯನ್ನು ಕಾಣಬಹುದು. ಇನ್ನು ಹಾಲಕ್ಕಿ ಗೌಡತಿಯ ಹಾಲು ಕುಡಿದು ಬೆಳೆದವನು ನಾನು ಎಂಬ ವಿಷ್ಣು ನಾಯ್ಕರ ಮಾತಿನಲ್ಲಿ ಆ ಜನಾಂಗದಲ್ಲಿ ತಾವೂ ಒಬ್ಬರು ಎಂಬ ನುಡಿ ವಿಷ್ಣು ನಾಯ್ಕರ ಆ ಜನಾಂಗದ ಕುರಿತ ಗೌರವ ಹೆಚ್ಚಿದೆ. ವಿಷ್ಣುನಾಯ್ಕರ ಸರಳ ಸಾಹಿತ್ಯದಲ್ಲಿ ಮೂಡಿಬರುವ ಕವನಗಳು ಗೂಡಾರ್ಥವನ್ನು ಹೊಂದಿದ್ದರೂ ಸಂಕ್ಷಿಪ್ತವಾಗಿ ಓದುಗರ ಮನ ತಟ್ಟುತ್ತವೆ.
    ಅಂಕೋಲೆಯ ಜಿ ಸಿ ಕಾಲೇಜು ಸಭಾಂಗಣದಲ್ಲಿ ಕಲ್ಬುರ್ಗಿ ಸರ್ ಮತ್ತು ವಿಷ್ಣುನಾಯಕ್ ಸರ್ ದಿವ್ಯದ್ವಯರನ್ನು ದರ್ಶಿಸುವ ಸುಸಂದರ್ಭ ಒಂದರ್ಥದಲ್ಲಿ ತಮ್ಮ ಸಾಹಿತ್ಯ ಕೃಷಿಗೆ ಪ್ರೋತ್ಸಾಹದ ನೀರೆರದಂತಾಗಿದೆ. ಭವಿಷ್ಯ ಜೀವನಕ್ಕೆ ಜತನ ಮಾಡಿಟ್ಟುಕೊಂಡ ನುಗ್ಲಜ್ಜಿಯ ಪುಡಿಗಾಸು ನೋಟು ಅಮಾನ್ಯೀಕರಣದ ಭೂತ ಚೇಷ್ಟೆಗೆ ಸಿಲುಕಿ ನಲುಗುವ ಅಜ್ಜಿಯ ಮನಸ್ಸು ನಿಜಕ್ಕೂ ಅನಾಥ ಪ್ರಜ್ಞೆ ಸೃಷ್ಟಿಸಿ ಬಿಡುತ್ತದೆ. ಬಂಡಾಯ ಕವಿ ವಿಷ್ಣು ನಾಯ್ಕರ ಸಾಹಿತ್ಯದ ಸರಳತೆ ” ಕಲಬುರ್ಗಿ ” , ” ಗೌರಿ ಲಂಕೇಶ” ರ ಹತ್ಯೆಯ ಕುರಿತಾದ ಕವನದ ಸಾಲುಗಳಲ್ಲಿ ಬಿಂಬಿತವಾಗಿದೆ.ಇನ್ನು ವಿಷ್ಣುನಾಯಕರ ಸಾಹಿತ್ಯ ಜೀವನದ ಆಧಾರ ಸ್ತಂಭ ಮತ್ತು ಹಾಲಕ್ಕಿಗರ ಕೋಳುಗಂಭದಂತಿದ್ದ ಕವಿತಕ್ಕರ ಅಗಲಿಕೆ ತೆಂಗಿನ ಗಿಡಕ್ಕೆ ಸಿಡಿಲು ಬಡಿದಂತಾಗುತ್ತದೆ.ಆದರೂ ಬತ್ತದ ಸ್ಪೂರ್ತಿಯ ಸೆಲೆಯಂತಿರುವ ಅವರ ವ್ಯಕ್ತಿತ್ವ ಅವರ ವಿಶಾಲ ಮನಸ್ಸಿಗೆ ಹಿಡಿದ ಕೈಗನ್ನಡಿ. ” ಕಾವ್ಯಗುರು” ಶ್ರೀ ವಿಷ್ಣುನಾಯ್ಕರ ಕುರಿತಾದ ತಮ್ಮ ನುಡಿಗಳನ್ನು ಓದುತ್ತಿದ್ದರೆ ಅವರೂ ನಮ್ಮೊಳಗೊಂದಾಗಿಬಿಡುತ್ತಾರೆ.ತುಂಬಾ ಮನ ತಟ್ಟಿದ ವಿಮರ್ಶೆ.

    ಪ್ರತಿಕ್ರಿಯೆ
    • Shreedevi keremane

      Thank you sir.

      ನಿಮ್ಮ ಮಾತುಗಳು ಬರೆಯಲು ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿದೆ

      ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Gubbachchi SathishCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: