ವಸುಂಧರಾ ನೋಡಿದ ಸಿನೆಮಾ: ಶಕುಂತಲಾ ದೇವಿ

 ‘ನಾಲ್ಕೊಂದ್ಲ ನಾಲ್ಕು ನಾಲ್ಕೆರಡ್ಲ ಎಂಟು..’

-ವಸುಂಧರಾ ಕದಲೂರು

ಮೇಲಿನಂತೆ ಲೆಕ್ಕದ ಗಂಟು ಸರಳವಾಗಿದ್ದರೆ ಪ್ರತೀವರ್ಷದ  ಪರೀಕ್ಷೆಗಳಲ್ಲಿ ಹಲವು ಮಂದಿ ನಪಾಸಾಗುವ ಪ್ರಶ್ನೆಯೇ ಇರುತ್ತಿರಲಿಲ್ಲ. ಆದರೆ ಗಣಿತ ಹಾಗೂ ವ್ಯಾಕರಣಗಳು ಇಂದಿಗೂ ಹಲವಾರು ಮಂದಿಯ ಶೈಕ್ಷಣಿಕ ನಾಗಾಲೋಟದ  ದಾರಿಯ ಹರ್ಡಲ್ಸ್ಗಳಾಗಿಯೇ ಉಳಿದಿವೆ.

ಈ ಪೀಠಿಕೆ ಏಕೆಂದರೆ, ‘ಮಾನವ ಕಂಪ್ಯೂಟರ್’ ಎಂದೇ ಜಗದ್ವಿಖ್ಯಾತರಾದ ಶಕುಂತಲಾ ದೇವಿ ಅವರ ಬಯೋಪಿಕ್ ಸಿನೆಮಾ ನೋಡಲು ನಿನ್ನೆ ಸಂಜೆ ಮಕ್ಕಳನ್ನೂ ನನ್ನೊಡನೆ ಕೂರಿಸಿಕೊಂಡೆ.

ಅಮೆಝಾನ್ ಪ್ರೈಮಿನಲ್ಲಿ ಬಿತ್ತರವಾದ ಚಿತ್ರ ಒಳ್ಳೆಯ ಕ್ಲಾರಿಟಿಯಲ್ಲಿತ್ತು. ವಿದ್ಯಾ ಹಾಗೂ ಸಾನ್ಯಾರ ಹಾಗೂ ಉಳಿದವರ ನಟನೆಯೂ ಚೆಂದವಿತ್ತು. ನಮ್ಮ ಕನ್ನಡದ ಪ್ರಕಾಶ್ ಬೆಳವಾಡಿ ನಟಿಸಿದ್ದಾರೆಂಬ ಖುಷಿ ಹಾಗೂ ಆ ಕಾಲದ ‘ಅಜೇಯ’ ಕನ್ನಡ ಪತ್ರಿಕೆ ಮತ್ತು ಅಲ್ಲಲ್ಲಿ ತೋರುವ ಒಂದಷ್ಟು ಹಳೆಯ ಕನ್ನಡ ಪತ್ರಿಕೆಗಳ ತುಣುಕುಗಳನ್ನು ನೋಡಿ ಬಹಳ ಖುಶಿಯಾಗುತ್ತಿತ್ತು.

ಹಲವರಿಗೆ ಕಬ್ಬಿಣದ ಕಡಲೆಯಾಗಿರುವ ‘ಗಣಿತ’ದ ಸಮಸ್ಯೆಗಳನ್ನು ಲೀಲಾಜಾಲವಾಗಿ ಬಿಡಿಸುತ್ತಲೇ ಆ ಮೂಲಕ ತಮ್ಮ ಅದ್ಭುತ ಸಾಮರ್ಥ್ಯದ ಕಾರಣಕ್ಕಾಗಿ ಜಗತ್ತಿನ ಗಮನ ಸೆಳೆದ ಶಕುಂತಲಾ ದೇವಿಯವರು ಯಾವತ್ತಿಗೂ ಅಚ್ಚರಿಯ ವ್ಯಕ್ತಿಯೇ..!

ಮನೆವಾರ್ತೆಯೊಳಗೆ ಮುಳುಗೇಳುವ, ಸಾಮಾನ್ಯ ಕೂಡುವ ಕಳೆಯುವ ಲೆಕ್ಕವನ್ನೂ ಮಾಡಿಕೊಳ್ಳಲಾರದ ಅದಕ್ಕೂ ಮಿಗಿಲಾಗಿ ನಾಕಾಣೆ ಮೊತ್ತವನ್ನೂ ಕೈಯಲ್ಲಿ ಹಿಡಿದು ನೋಡಿರದ ಹಲವು ಸಾವಿರ ಮಂದಿ ಹೆಣ್ಣು ಮಕ್ಕಳಿರುವ ಈ ನೆಲದಲ್ಲಿ ‘ಶಕುಂತಲಾ ದೇವಿ’ ಎಂದರೆ ಸುಮ್ಮನೆಯೇ..?

ಶಕುಂತಲಾ ದೇವಿ ೧೯೨೯ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ ನಮ್ಮ ಕನ್ನಡದ ಹುಡುಗಿ..! ಸಣ್ಣಪುಟ್ಟ ಐಂದ್ರಜಾಲಿಕ ಚಮಾತ್ಕಾರಗಳನ್ನು ಮಾಡುವ ವೃತ್ತಿಯಲ್ಲಿದ್ದ ತಂದೆಯಿಂದ ಬಾಲ್ಯದಲ್ಲಿ ಕೆಲವು ಸಾಮಾನ್ಯ ಚಮತ್ಕಾರಿ ತರಬೇತಿ ಪಡೆದ ಶಕುಂತಲಾ ದೇವಿ ಅವರಿಗೆ ಗಣಿತದ ಮೇಲಿದ್ದ ಅಸಾಧಾರಣ ಸಾಮರ್ಥ್ಯ ಕೇವಲ ಚಮಾತ್ಕಾರವಲ್ಲ. ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನುರಿತ ತಜ್ಞರಿಂದ ಹಾಗೂ ಕಂಪ್ಯೂಟರ್, ಕ್ಯಾಲ್ಕ್ಯುಲೇಟರ್ಗಳಿಂದ ಅವರ ಸಾಮರ್ಥ್ಯದ ಸತ್ಯತೆ ನಿರಂತರ ಸಾಬೀತಾಗಿದೆ.

ಯಾವುದೇ ಪ್ರಾಯೋಗಿಕ ವಿದ್ಯಾಭ್ಯಾಸ ಇಲ್ಲದೆ ಬಾಲ್ಯದಿಂದಲೂ ಗಣಿತದ ಸಮಸ್ಯೆಗಳನ್ನು ಬಿಡಿಸುವಲ್ಲಿ ಆಸಕ್ತಿ ತೋರುತ್ತಿದ್ದ ಶಕುಂತಲಾ ದೇವಿಯವರ ಬದುಕನ್ನು ಆಧರಿಸಿದ ಸಿನೆಮಾದ ಮೂಲಕ ನಿರ್ದೇಶಕರು ಏನನ್ನು ಸ್ಪಷ್ಟಪಡಿಸಲು ಹೋಗಿದ್ದಾರೆ ಎಂಬುದು ಸಿನೆಮಾ ನೋಡಿಯಾದ ಮೇಲೆ ಗೊಂದಲವಾಗಿ ಉಳಿಯುತ್ತದೆ.

ಬಯೋಪಿಕ್ ಸಿನೆಮಾಗಳು ಎಂದರೆ ನೋಡುಗರಿಗೆ ಒಂದು ನಿರೀಕ್ಷೆ ಇರುತ್ತದೆ. ಅದರಲ್ಲೂ ನಮ್ಮ ಆಸುಪಾಸಿನ ಜ಼ಮಾನಗಳಲ್ಲೇ ಬದುಕಿರುವವರನ್ನು ಕುರಿತಾಗಿ ಜನರಿಗೆ ಸಾಕಷ್ಟು ಮಾಹಿತಿ ಇದ್ದೇ ಇರುತ್ತದೆ.

ತೆಲುಗಿನ ‘ಮಹಾನಟಿ’ ಸಿನೆಮಾ; ಹಿಂದಿಯ ‘ಬಾಗ್ ಮಿಲ್ಕಾ ಬಾಗ್’; ಇಂಗ್ಲೀಶಿನಲ್ಲಿ ತಯಾರಾದ ‘ಗಾಂಧಿ’ ಇವೆಲ್ಲಾ ಅತ್ಯುತ್ತಮ ಬಯೋಪಿಕ್ ಗೆ ಕೆಲವು ಉದಾಹರಣೆಗಳಷ್ಟೇ.

ಈ ಮಾದರಿಗಳ ನಿರೀಕ್ಷೆಯಲ್ಲಿ ‘ಶಕುಂತಲಾ ದೇವಿ’ ಸಿನೆಮಾ ನೋಡಬಹುದೇ?  ಏಕೆಂದರೆ, ಯೂಟ್ಯೂಬ್, ವಿಕಿಪೀಡಿಯಾಗಳಲ್ಲಿ ಶಕುಂತಲಾ ದೇವಿಯವರ ಬಗ್ಗೆ ಇರುವ  ವೀಡಿಯೋಗಳು, ಚಿತ್ರಗಳು, ಲೇಖನಗಳು ನಮಗೆ ಸಾಕಷ್ಟು ನಿಖರ ಮಾಹಿತಿ ನೀಡುತ್ತವೆ.

ನಿರ್ದೇಶಕರು ಇದರ ಹೊರತಾಗಿ ಏನನ್ನು ತೆರೆಯ ಮೇಲೆ ತೋರಿಸಬಹುದು ಎನ್ನುವ ಕುತೂಹಲ ಸಹಜವಾಗಿರುತ್ತದೆ.

ಬದಲಾಗುತ್ತಿರುವ ಜಗತ್ತು, ಬದಲಾಗುತ್ತಿರುವ ಭಾರತ ದೊತೆಗೆ ಇಂದಿನ ಫಿಫ್ತ್ ಜನರೇಶನ್ನಿನ ಮಕ್ಕಳಿಗೆ ಹೆಮ್ಮೆಯ ಸಾಧಕಿಯನ್ನು ಕುರಿತು ಪರಿಚಯಿಸುವಾಗ, ಸಾಧಾರಣ ಪರಿಸರದಿಂದ ಬಂದು ತಮ್ಮ ಅಸಾಧಾರಣ ಬುದ್ಧಿಮತ್ತೆಯ ಮೂಲಕ ಜಗತ್ತನ್ನು ಅಚ್ಚರಿಗೊಳಿಸಿದ ಹಾಗೆಯೇ ಹೆಚ್ಚು ಬೆಳಕಿಗೆ ಬಾರದ ಶಕುಂತಲಾ ದೇವಿಯವರ ಹಲವಾರು ವಿಚಾರಗಳು, ನೇರವಂತಿಕೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅವರಿಗಿದ್ದ ಆಸಕ್ತಿ ಪರಿಣತಿಗಳನ್ನು ಕುರಿತು ಮತ್ತಷ್ಟು ಪರಿಣಾಮಕಾರಿಯಾಗಿ ಚಿತ್ರ ನಿರ್ಮಿಸಬಹುದಿತ್ತು ಎನಿಸುತ್ತದೆ.

ಮಗಳ ಬರಹಗಳನ್ನು ಆಧರಿಸಿ ಮಗಳ ಕಣ್ಣಿನ ಮೂಲಕ ತಾಯಿಯನ್ನು ಚಿತ್ರಿಸುವ ಬದಲು ತಾಯಿಯ ಸಾಧನೆಗಳ ಕುರಿತಂತೆ ಶಕುಂತಲಾ ದೇವಿಯವರ ಸಮಕಾಲೀನರ ಅಭಿಪ್ರಾಯ, ಲೇಖನ, ವಿಡಿಯೋ, ಸಾಧನೆಗಳ ದಾಖಲೆಗಳನ್ನು ಆಧರಿಸಿ ಸಿನೆಮಾ ಮಾಡಬೇಕಿತ್ತು ಎನಿಸುತ್ತದೆ.

ಭಾವುಕತೆ- ಭಾವತೀವ್ರತೆ ಹೊರತುಪಡಿಸಿ ಸಿನೆಮಾ ಆಗುವುದೇ ಇಲ್ಲ. ಹಾಗೆ ಮಾಡಿದರೆ ಅದು ಒಂದು ಸಾಕ್ಷ್ಯಚಿತ್ರವಾಗುತ್ತದೆ ಎನ್ನುವ ಭಯ / ಶಂಕೆ ನಿರ್ದೇಶಕರಿಗೆ ಇರಬಹುದು.

ಆದರೆ ಸಾಧಾರಣ ನೋಡುಗರ ಮನಸ್ಸಿನಲ್ಲಿ ‘ಶಕುಂತಲಾ ದೇವಿ’ ಎಂಬ ಗಣಿತಜ್ಞೆಯ ಜೀವನವನ್ನು ಸಿನೆಮಾ ಮೂಲಕ ತೋರಿಸಲು ಹೋಗಿ ಆಕೆಯ ಜೀವನದ ಕೆಲವು ಘಟನೆಗಳನ್ನಷ್ಟೇ ದೊಡ್ಡದು ಮಾಡಲು ಹೋಗಿ ಮತ್ತಷ್ಟು ಸಮಸ್ಯಾತ್ಮಕವಾಗಿ ಸಿನೆಮಾ ಮಾಡಿದಂತಿದೆ.

ಕರೋನಾ ಕಾರಣದಿಂದ ಕಂಪ್ಯೂಟರ್ ಗಳ ಮುಂದೆ ಕೂತು ಕಲಿಯುತ್ತಿರುವ(?) ಮಕ್ಕಳಿಗೆ ಕಂಪ್ಯೂಟರ್ ಜ಼ಮಾನದ ಆರಂಭದಲ್ಲೇ ಕಂಪ್ಯೂಟರನ್ನೂ ಸೋಲಿಸಿ, ವಿಶ್ವವೇ ಬೆರಗುಗೊಳ್ಳುವಂತೆ ಮಾಡಿದ ಗಣಿತಜ್ಞೆ ಕುರಿತು ಕುತೂಹಲ ಕೆರಳಿಸುವ, ಗಣಿತದ ಸಮಸ್ಯೆಗಳನ್ನು ಕುರಿತು ಬಹಳ ಸರಳ ತಂತ್ರಗಳ ಮೂಲಕ  ವಿಶದೀಕರಿಸುವಂತಹ ವಿಚಾರಗಳನ್ನು ಹೆಚ್ಚು ಒಳಗೊಂಡ ಸದಭಿರುಚಿಯ ಕಲಾತ್ಮಕ ಸಿನೆಮಾ ‘ಶಕುಂತಲಾ ದೇವಿ’ ಆಗಬೇಕಿತ್ತು.

ಆದರೆ ಸಿನೆಮಾದಲ್ಲಿ ಶಕುಂತಲಾ ದೇವಿಯವರ ಸ್ವಾವಲಂಬನೆ, ದಿಟ್ಟತನ, ನೇರವಂತಿಕೆಯ ಸ್ವಭಾವಗಳ ಜೊತೆಗೆ ಅವರಿಗೆ ಸಂಬಂಧಿಸಿದ ವಿವಾದಾತ್ಮಕ ವಿಷಯಗಳಿಗೇ ಹೆಚ್ಚು ಗಮನಕೊಟ್ಟು ಆಕೆಯ ‘ವೈಯಕ್ತಿಕ’ ಬದುಕಿನ ಚಿತ್ರಣಕ್ಕೇ ಹೆಚ್ಚು ಪರಿಶ್ರಮಿಸಿದಂತಿದೆ.

ಹಾಗಾದರೆ,  ಈ ದೇಶದ ಅಸಾಧಾರಣ ಪ್ರತಿಭೆಯ ಹೆಣ್ಣುಮಗಳ ಜೀವನವನ್ನು ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಸಹ ಕೆಲವು ಚೌಕಟ್ಟಿನೊಳಗೇ ನೋಡುವುದಾದರೆ… ಇನ್ನು ಸಾಧಾರಣ ಹೆಣ್ಣನ್ನು ನೋಡುವ ಬಗೆಯು ಬದಲಾಗುವುದು ಯಾವಾಗ?! ಎಂಬ ಪ್ರಶ್ನೆ ಸಿನೆಮಾ ನೋಡಿಯಾದ ಮೇಲೆ ಕಾಡುತ್ತಿದೆ.

ಹಾಗಾದರೆ ಸಿನೆಮಾ ಚೆನ್ನಾಗಿತ್ತಾ? ಎಂದು ಕೇಳಿದರೆ ಏನು ಹೇಳಲಿ!  ಮಕ್ಕಳು ಸಿನೆಮಾ ಶುರುವಾದ ಸ್ವಲ್ಪ ಹೊತ್ತಿನಲ್ಲೇ ಎದ್ದು ಹೋದರು. ನಾನು ಮಾತ್ರ ಕುಳಿತು ಪೂರ್ಣ ನೋಡಿದೆ.

‍ಲೇಖಕರು avadhi

August 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಮೋಹನ್

    ಅಮ್ಮನ ನೋಡಲು ಹೋಗಿ ಮಗಳ ನೋಡಿದಂತಾಯ್ತು

    ಪ್ರತಿಕ್ರಿಯೆ
  2. ಎಂ.ಜಿ.ತಿಲೋತ್ತಮೆ

    ನಿಜ …ಲೇಖನದಲ್ಲಿ ನಿಮ್ಮ ಸ್ಪಷ್ಠೀಕರಣ ಇಷ್ಟವಾಯಿತು

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಎಂ.ಜಿ.ತಿಲೋತ್ತಮೆCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: