ಮರಾಠಿ ಸಭೆಯಲ್ಲಿ ಕನ್ನಡದಲ್ಲಿ ಮಾತಾಡಿ ಮನಗೆದ್ದ ಸಿದ್ದಲಿಂಗಯ್ಯ

ಮಮತಾ ರಾವ್

ಡಾ.ಸಿದ್ಧಲಿಂಗಯ್ಯನವರನ್ನು ನಾನು ಮೊತ್ತಮೊದಲ ಬಾರಿ ಕಂಡದ್ದು ಮುಂಬಯಿಯ ಸಭಾಂಗಣವೊಂದರಲ್ಲಿ; ಮೇ, ೨೦೧೫ ರಂದು ಮರಾಠಿ ದಲಿತ ಕವಿ ನಾಮದೇವ ಢಸಾಳೆಯ ಹೆಸರಿನಲ್ಲಿ ಶಬ್ಧ ಪ್ರಕಾಶನ ಸಂಸ್ಥೆಯು ನೀಡುವ ‘ಶಬ್ಧ ಸಾಹಿತ್ಯ ಪುರಸ್ಕಾರ-೨೦೧೫’ ಸ್ವೀಕರಿಸಲು ಆಗಮಿಸಿದ್ದಾಗ. ತುಂಡು ತೋಳಿನ ಸಾಧಾರಣ ಶರ್ಟು ಹಾಗು ಕಪ್ಪು ಪ್ಯಾಂಟು,ಕಾಲಲ್ಲಿ ಚಪ್ಪಲಿ, ಕುರುಚಲು ಗಡ್ಡದ ಕುಳ್ಳಗಿನ ವ್ಯಕ್ತಿ ಅಲ್ಲಿ ನೆರೆದಿರುವ ಜಬ್ಬ-ಪೈಜಾಮದ ಬಣ್ಣ-ಬಣ್ಣದ ಉಡುಗೆ-ತೊಡುಗೆ ತೊಟ್ಟವರಲ್ಲಿ ಅತ್ಯಂತ ಸಾಮಾನ್ಯ ಸಭಿಕರಾಗಿ ಕಾಣಿಸಿದ್ದರೆ ಆಶ್ಚರ್ಯವೇನಿಲ್ಲ.

ನನಗೆ ಕಂಡುಬಂದಂತೆ ಅಲ್ಲಿ ಬಂದವರಲ್ಲಿ ಸಾಮಾಜಿಕ-ರಾಜಕೀಯ ವಿಷಯಗಳನ್ನಾಧರಿಸಿ ವಸ್ತುನಿಷ್ಠ ಡಾಕ್ಯುಮೆಂಟರಿ ಫಿಲ್ಮ್ಗಳನ್ನು ಮಾಡುತ್ತಿರುವ ಶ್ರೀಯುತ ಆನಂದ್ ಪಟವರ್ಧನ್, ಅವರೊಂದಿಗೆ ಹಲವಾರು ಚಿರಪರಿಚಿತ ಮರಾಠಿ ರಂಗಭೂಮಿ-ಚಲನಚಿತ್ರ ಕಲಾವಿದರು, ಸಾಹಿತಿಗಳು, ಕವಿ ಅಸಾದ್ ಜೈದಿ, ಎಲ್ಲಕ್ಕಿಂತ ಮುಖ್ಯವಾಗಿ ಕಬೀರ್ ಕಲಾ ಮಂಚದ ಸದಸ್ಯರು (ಗುಜರಾತಿನ ೨೦೦೨ ದಂಗೆಯ ನಂತರ ಸ್ಥಾಪಿತಗೊಂಡ ಬಂಡಾಯ ಸಂಘವಿದು-ಕಾಲೇಜು ವಿದ್ಯಾರ್ಥಿಗಳು, ದಲಿತರು, ರೈತರು, ದೌರ್ಜನ್ಯಕ್ಕೊಳಗಾದ ತುಳಿತಕ್ಕೊಳಗಾದವರೆಲ್ಲ ಇದರ ಸದಸ್ಯರು.

ರೈತರ ಆತ್ಮಹತ್ಯೆ, ಸ್ತ್ರೀ ಭ್ರೂಣಹತ್ಯೆ, ಭ್ರಷ್ಟಾಚಾರ, ದಲಿತರ ಹತ್ಯೆಯ ಕುರಿತು ಬಂಡಾಯ ಕವಿತೆಗಳನ್ನು ಹಳ್ಳಿ-ಹಳ್ಳಿಗಳಲ್ಲಿ ಹಾಡುತ್ತಾ ಜನಜಾಗೃತಿ ಮಾಡುವ ಈ ಸಂಸ್ಥೆ ನಕ್ಸಲ್ ಸಂಪರ್ಕವನ್ನಿಟ್ಟುಕೊಂಡಿದೆ ಎನ್ನುವ ಅಪವಾದಕ್ಕೆ ಸಿಲುಕಿ ಸತ್ತೆಯ ಕೆಂಗಣ್ಣಿಗೆ ಬಲಿಯಾಗಿದೆ.) ಇವರೆಲ್ಲರಿಗೂ ಕನ್ನಡದ ಬಂಡಾಯ ಕವಿಯ ಮೇಲಿರುವ ಅಗಾಧ ಪ್ರೀತಿ-ಅಭಿಮಾನದ ಸಾಕ್ಷಾತ್ಕಾರ ಅಲ್ಲಿ ನನಗಾಯಿತು. ಬಹುಷ ಭೈರಪ್ಪನವರ ನಂತರ ಮರಾಠಿ ಮನಸ್ಸು ಕವಿ ಸಿದ್ದಲಿಂಗಯ್ಯನವರನ್ನು ಮನಸಾ ಮೆಚ್ಚಿ ಸ್ವೀಕರಿಸಿದ್ದು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು.

ಸುಮಾರು ಇಪ್ಪತ್ತು ಲಕ್ಷ ಕನ್ನಡಿಗರಿರುವ ಸ್ಥಳ ಮುಂಬಯಿ ಎಂದು ಇಲ್ಲಿನ ಕನ್ನಡಿಗರು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಿಕೊಳ್ಳುತ್ತಿದ್ದರೂ ಮರಾಠಿ ನೆಲದಲ್ಲಿ ಕನ್ನಡದ ಕವಿಯೊಬ್ಬರಿಗೆ ಪ್ರಶಸ್ತಿಯನ್ನಿತ್ತು ಸನ್ಮಾನಿಸುವ ಸಮಾರಂಭಕ್ಕೆ ಮಾತ್ರ ಯಾರೂ ಬಂದಿರಲಿಲ್ಲ. ಅಂದು ಉಪಸ್ಥಿತರಿದ್ದವರು ಕರ್ನಾಟಕ ಸಂಘದ ಪದಾಧಿಕಾರಿಗಳನ್ನು ಕೂಡಿ ಕೇವಲ ನಾಲ್ಕೇ ನಾಲ್ಕು ಮಂದಿ ಕನ್ನಡಿಗರು. ಸಭಾಂಗಣದಲ್ಲಿದ್ದವರಲ್ಲಿ ಬಹುತೇಕ ಜನರು ಮರಾಠಿ ಭಾಷಿಕರು. ಅವರಿಗೆ ಅರ್ಥವಾಗುವಂತೆ ಇಂಗ್ಲೀಷಿನಲ್ಲಿ ಮಾತನಾಡುವ ಅವಕಾಶವಿದ್ದರೂ ನಮ್ಮ ಕವಿವರ್ಯರು ಕನ್ನಡದಲ್ಲಿಯೇ ತಮ್ಮ ಭಾಷಣವನ್ನು ಮಾಡಿದ್ದು ಕೇಳಿ ನನ್ನ ಹೃದಯ ತುಂಬಿಬಂತು.

ಯಾವುದೇ ಏರಿಳಿತವಿಲ್ಲದ ಅವರ ಹೃದಯದಾಳದಿಂದ ಹೊರಬಂದ ಮೃದುಮಾತುಗಳು ಒಂದುಚೂರೂ ಅರ್ಥವಾಗದಿದ್ದರೂ ಇಡಿಯ ಸಭಾಂಗಣ ನಿಶ್ಯಬ್ಧವಾಗಿ ಆಲಿಸುತ್ತಿತ್ತು. ಕವಿಯ ಮನದ ಮಾತು ಅವರ ಭಾವನೆಗಳು ಕೇಳುಗರ ಹೃದಯದ ಬಾಗಿಲನ್ನು ತಟ್ಟುತ್ತಿತ್ತು. ಭಾಷೆಗೆ ಗಡಿಯಿಲ್ಲ ಬಂಧನವಿಲ್ಲ ಎನ್ನುವುದು ಪರಮಸತ್ಯ.ಅವರ ಮಾತುಗಳನ್ನು ಮರಾಠಿಯಲ್ಲಿ ಪ್ರಸ್ತುತ ಪಡಿಸುವ ಸುವರ್ಣಾವಕಾಶ ನನ್ನದಾಗಿತ್ತು.

ಅವರ ಅಂದಿನ ಭಾಷಣದ ತುಣುಕು:

ನಾಮದೇವ ಡಸಾಳೆಯ ಅವರ ಹೆಸರಿನಲ್ಲಿ ನೀಡಲಾಗುವ ೨೦೧೫ ರ ಸಾಲಿನ ಶಬ್ಧ ಸಾಹಿತ್ಯ ಪುರಸ್ಕಾರವನ್ನು ನನಗೆ ನೀಡಲಾಗಿದೆ. ತುಂಬಾ ಸಂತೋಷದ ವಿಷಯ. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕವಿ ಅಸದ್ ಜೈದಿ, ಮ. ಸು. ಪಾಟೀಲ, ನನ್ನೊಂದಿಗೆ ಪ್ರಶಸ್ತಿ ಪಡೆದಂತಹ ಇತರ ಗಣ್ಯರು, ಶಬ್ಧ ಪ್ರಕಾಶನದ ಪ್ರಕಾಶಕರು, ಸಭೆಯಲ್ಲಿ ನೆರೆದಿರುವ ಗಣ್ಯರು, ನನ್ನ ಕನ್ನಡ ಮಿತ್ರರು ಎಲ್ಲರಿಗೂ ನನ್ನ ವಂದನೆಗಳು.

ಬದುಕಿನಲ್ಲಿ ಕಂಡುಂಡ ದುಃಖದಿಂದ, ನೋವಿನಿಂದ, ತೊಂದರೆ, ಕಷ್ಟಗಳಿಂದಾಗಿ ನಾನು ಕವಿಯಾದೆ. ನನ್ನ ಬಾಲ್ಯದಿಂದಲೇ ನನ್ನ ಸುತ್ತಮುತ್ತಲಿನ ಸಮಾಜದಲ್ಲಿ ಕಂಡುಬರುತ್ತಿದ್ದ ಸಂಗತಿಗಳು ನನ್ನನ್ನು ವಿಚಲಿತಗೊಳಿಸುತ್ತಿದ್ದವು. ನಾನು ಸುಮಾರು ೫-೬ ವರ್ಷದವನಿದ್ದಾಗ ನಡೆದ ಘಟನೆ. ಗದ್ದೆಯಲ್ಲಿ ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ ಅಲ್ಲಿ ಇಬ್ಬರನ್ನು ಎತ್ತಿನ ಜಾಗದಲ್ಲಿ ನೊಗಕ್ಕೆ ಕಟ್ಟಿ ಚಾಟಿಯೇಟು ಕೊಡುತ್ತಾ ಹೊಲ ಉಳುತ್ತಿರುವ ದೃಶ್ಯವನ್ನು ಕಂಡೆ.

ಮೊದಲಿಗೆ ಬಾಲಸಹಜ ಕುತೂಹಲವಾಯಿತು; ತಮಾಷೆಯೆನಿಸಿತು. ಆದರೆ ಗಮನವಿಟ್ಟು ನೋಡಿದಾಗ ಅದರಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬರು ನನ್ನ ತಂದೆ ಎನ್ನುವುದು ಕಂಡು ಗಾಬರಿಯಾಯಿತು; ವ್ಯಥೆಯೂ ಆಯಿತು. ಇಲ್ಲಿ ಏನೋ ತಪ್ಪಾಗುತ್ತಿದೆ ಎನ್ನುವ ಗೊಂದಲವಾಯಿತು. ಸಂಜೆ ಮನೆಯಲ್ಲಿ ತಂದೆಯವರ ಹೆಗಲಿಗೆ ಎಣ್ಣೆ ಹಚ್ಚುತ್ತಾ ಕಣ್ಣೀರಿಡುತ್ತಿದ್ದ ತಾಯಿಯವರನ್ನು ನೋಡಿದ ಮೇಲಂತೂ ಇದು ತಪ್ಪು ಎನ್ನುವುದು ದೃಢವಾಯಿತು. ಮನುಷ್ಯ ಎತ್ತುಗಳಾಗುವುದು ಸರಿಯಲ್ಲ; ಪ್ರಾಣಿಗಳ ಕೆಲಸವನ್ನು ಮನುಷ್ಯರು ಯಾಕೆ ಮಾಡಬೇಕು ಎನ್ನುವುದೇ ಪ್ರಶ್ನೆಯಾಯಿತು. ಈ ಘಟನೆ ನನ್ನನ್ನು ಬೇರೆ ದಿಕ್ಕಿನಲ್ಲಿ ವಿಚಾರ ಮಾಡಲು ಪ್ರೇರಣೆ ನೀಡಿತು.

ಮುಂದೆ ನಾವು ಬೆಂಗಳೂರಿಗೆ ಬಂದೆವು. ಅಲ್ಲಿ ನನ್ನಮ್ಮ ಕಸಗುಡಿಸುವ ಕೆಲಸ ಮಾಡಿದರೆ ನನ್ನ ತಂದೆಯವರು ಹಮಾಲಿ ಕೆಲಸ ಮಾಡುತ್ತಿದ್ದರು. ಮನೆ ತುಂಬಾನೆ ಚಿಕ್ಕದಾಗಿತ್ತು. ಯಾರಾದರೂ ಮನೆಗೆ ನೆಂಟರು ಬಂದರೆ ನಾನು ಮನೆಯಿಂದ ಹೊರಗೆ ಬೀಳಬೇಕಾಗುತ್ತಿತ್ತು. ಒಮ್ಮೆ ಹೀಗೆ ಹೊರಬಿದ್ದವ ನಡೆಯುತ್ತಾ ನಡೆಯುತ್ತಾ ಮುಂದಕ್ಕೆ ಹೋದಾಗ ಅಲ್ಲೇ ತಿರುವಿನಲ್ಲಿ ಒಂದು ಸ್ಮಶಾನ ಕಂಡಿತು. ಅದು ವಿಶಾಲವಾಗಿತ್ತು; ಸ್ವಚ್ಛವಾಗಿತ್ತು; ಶಾಂತವಾಗಿತ್ತು ಮತ್ತು ಅಲ್ಲಲ್ಲ ಹೂಗಳಿಂದ ಶೃಂಗರಿಸಿದ ಕಾರಣ ಸುಂದರವೂ ಆಗಿ ಕಂಡು ಬಂತು. ನನಗೆ ಆ ಜಾಗ ತುಂಬಾನೆ ಇಷ್ಟವಾಯಿತು. ನಾನು ದಿನಾ ಅಲ್ಲೇ ಬಂದು ಕಾಲ ಕಳೆಯಲಾರಂಭಿಸಿದೆ.

ಪ್ರಾರಂಭದಲ್ಲಿ ನಾನು ನನ್ನ ಬಹುತೇಕ ಕವಿತೆಗಳನ್ನು ಇಲ್ಲೇ ಕುಳಿತು ಬರೆದದ್ದು. ಜನ ಸತ್ತ ಮೇಲೆ ಸ್ಮಶಾನಕ್ಕೆ ಬಂದರೆ ನಾನು ಜೀವಿತಾವಧಿಯಲ್ಲೇ ಸ್ಮಶಾನದಲ್ಲಿದ್ದೆ. ಬೆಂಗಳೂರು ನಗರದಲ್ಲಿ ರೌಡಿಸಂ, ಕೊಲೆ-ಲೂಟಿ ಮಾಡುವವರನ್ನು ನೋಡಿದಾಗ ಇದೊಂದು ಬೇರೆ ರೀತಿಯ ಅನಾಗರೀಕತೆ ಅಂತ ನನಗನ್ನಿಸಿತು. ಇಲ್ಲಿ ನಾಗರೀಕತೆ ಇಲ್ಲವಾಗಿದೆ; ಸಂಸ್ಕೃತಿ ನಷ್ಟವಾಗಿದೆ ಎನ್ನುವ ವಿಚಾರ ತಿಳಿಯಿತು. ಇದೇ ಸಮಯ ಡಾ. ಅಂಬೇಡ್ಕರ್ ಅವರ ವಿಚಾರಧಾರೆಗೆ ಪರಿಚಿತನಾದೆ. ೧೨ನೆಯ ವಯಸ್ಸಿನಲ್ಲೇ ಬಾವುಟ ಹಿಡಿದು ರಿಪಬ್ಲಿಕನ್ ಪಾರ್ಟಿಯ ಚಳುವಳಿಯಲ್ಲಿ ಭಾಗವಹಿಸುತ್ತಿದ್ದೆ. ಸಮಾಜದಲ್ಲಿ ಬದಲಾವಣೆಯ ಅಗತ್ಯವಿದೆ ಎನ್ನುವುದು ನನಗೆ ಸ್ಪಷ್ಟವಾಗಿತ್ತು. ಇದೇ ವೇಳೇಯಲ್ಲಿ ಮಾರ್ಕ್ಸ್ ವಾದದ ಪರಿಚಯವೂ ನನಗಾಯಿತು.

ಅಸಮಾನತೆ ಎನ್ನುವುದು ಕೇವಲ ದಲಿತರ ಕುರಿತಾದ ಪ್ರಶ್ನೆಯಲ್ಲ. ಎಲ್ಲಾ ಜಾತಿ, ವರ್ಗ, ಧರ್ಮಗಳಲ್ಲಿ ಅಸಮಾನತೆಯಿದೆ. ಬಡವರಲ್ಲಿ ಮಾತ್ರವಲ್ಲ, ಸ್ತ್ರೀಯರಲ್ಲಿ, ಕಾರ್ಮಿಕರಲ್ಲಿ ಶ್ರಮಿಕರಲ್ಲಿ ಎಲ್ಲೆಲ್ಲಿಯೂ ಶೋಷಣೆ ಇದೆ ಎನ್ನುವುದು ಕಂಡು ಬಂತು. ಅಂಬೇಡ್ಕರ ಹಾಗೂ ಮಾರ್ಕ್ಸ್ ವಾದದ ಪ್ರಭಾವ ನನ್ನ ಕವಿತೆಗಳಲ್ಲಿ ಎದ್ದುಕಾಣುತ್ತದೆ. ನನ್ನ ಮೇಲೆ ಪ್ರಾಣಘಾತ ಹಲ್ಲೆಯೂ ಆಯಿತು.

ಓದು ಮುಂದುವರಿಸಿ ಬಿ.ಎ., ಎಂ.ಎ. ಪದವಿ ಪಡೆದೆ. ನಾನು ಮೂಲತಃ ನಾಸ್ತಿಕ. ಆದರೂ ಪಿಎಚ್.ಡಿಗಾಗಿ ‘ಗ್ರಾಮ ದೇವತೆಗಳು’ ವಿಷಯವನ್ನು ಆಯ್ಕೆ ಮಾಡಿದೆ. ಗ್ರಾಮಗಳಲ್ಲಿ ದೇವರು ಮೈಮೇಲೆ ಬಂದಾಗ ನಡೆಯುವ ಪ್ರಶ್ನೋತ್ತರ ನನಗೆ ತುಂಬಾ ಕುತೂಹಲವೆನಿಸುತ್ತಿತ್ತು. ಒಮ್ಮೆ ಹೀಗೆ ಪ್ರಶ್ನೋತ್ತರ ನಡೆಯುತ್ತಿದ್ದಾಗ ಯಜಮಾನ-ದೇವಿ ಇಷ್ಟು ದಿನ ಎಲ್ಲೋಗಿದ್ದೆ?
ದೇವಿ- ಏನು? ನನಗೆ ನಿನ್ನದು ಒಂದೇ ಊರೇನು? ನನಗೆ ಹದಿನಾಲ್ಕು ಲೋಕ ಸುತ್ತಲಿಕ್ಕಿದೆ.
ಯಜಮಾನ- ನನ್ನ ಕಷ್ಟ ನಿನಗೆ ಗೊತ್ತಾಗಲಿಲ್ಲವೇ?
ದೇವಿ- ನಾನೇನು ಸುಖದಲ್ಲಿದೇನೆ ಅಂತ ಅಂದುಕೊಂಡೆಯೇನು?
ನನಗೆ ಬಹಳ ವಿಚಿತ್ರ ಅನಿಸಿತು. ಮನುಷ್ಯ ಮಾತ್ರನಲ್ಲ ದೇವರಿಗೂ ಕಷ್ಟ ತಪ್ಪಿದ್ದಲ್ಲ ಎನ್ನುವುದು ಅಂದು ನನಗೆ ಸ್ಪಷ್ಟವಾಯಿತು. ಸುಖ ಎನ್ನುವುದು ಎಲ್ಲರಿಗೂ ಸಮನಾಗಿ ದೊರಕಬೇಕು ಎನ್ನುವ ದೃಷ್ಟಿಕೋನವನ್ನಿಟ್ಟುಕೊಂಡೇ ನಾನು ಕವಿತೆಗಳನ್ನು ಬರೆಯುತ್ತಾ ಬಂದಿದ್ದೇನೆ. ದಲಿತರ, ಕಾರ್ಮಿಕರ ಹೋರಾಟದಲ್ಲಿ ನನ್ನ ಕವಿತೆಗಳನ್ನು ಹಾಡುತ್ತಾರೆ ಎಂದು ತಿಳಿದು ನನಗೆ ಹೆಮ್ಮೆಯೆನಿಸುತ್ತದೆ.

ನಾಮದೇವ ಡಸಾಳ ಅವರು ಭೋಪಾಳದಲ್ಲಿದ್ದಾಗ ನಾನು ಎರಡು ಸಲ ಭೇಟಿಯಾಗಿದ್ದೆ. ಅವರ ಮನೆಗೆ ಹೋಗಿ ಉಂಡು ಬಂದಿದ್ದೇನೆ. ಅವರ ಕವಿತೆಗಳು ನನಗೆ ತುಂಬಾ ಪ್ರಿಯವಾದುವು. ಅವರ ಹೆಸರಿನಲ್ಲಿ ನನಗೆ ಪ್ರಶಸ್ತಿ ನೀಡಿದ್ದು ನಿಜವಾಗಿಯೂ ನನಗೆ ಬಹಳ ಖುಷಿಕೊಟ್ಟಿದೆ. ದಲಿತರಿಗಾಗಿ ಪ್ರತ್ಯೇಕ ಹೋರಾಟದ ಅಗತ್ಯವಿಲ್ಲ. ನಿರ್ಗತಿಕರ, ಶ್ರಮಿಕರ, ಮಹಿಳೆಯರ ಹೀಗೆ ಎಲ್ಲರ ವಿಮೋಚನೆಯಲ್ಲಿ ದಲಿತರ ವಿಮೋಚನೆ ಅಡಗಿದೆ. ಹೋರಾಟವೆನ್ನುವುದು ಕೇವಲ ಜಾತಿಗೆ ಸೀಮಿತವಾಗಿರಬಾರದು. ಅದು ಎಲ್ಲಾ ಜಾತಿಯ ಬಡವರ, ಶೋಷಿತರ ಹೋರಾಟವಾಗಬೇಕು.

ನನಗೆ ವಿಂದಾ ಕರಂದೀಕರ್, ಕೋಲ್ಹಾಟಕರ್, ದಿಲೀಪ ಚಿತ್ರೆ, ದಯಾ ಪವಾರ ಮುಂತಾದವರ ವೈಯಕ್ತಿಕ ಪರಿಚಯವಿತ್ತು. ನಮ್ಮ ವರಕವಿ ದ.ರಾ.ಬೇಂದ್ರೆಯವರ ಮನೆಮಾತು ಮರಾಠಿ. ಆದರೂ ಅವರು ಬರೆದದ್ದು ಕನ್ನಡದಲ್ಲಿ. ಕನ್ನಡ-ಮರಾಠಿ ಭಾಷೆಯ ಬಾಂಧವಯ ಬಹಳ ಪ್ರಾಚೀನವಾದುದು. ಇಂದು ಮರಾಠಿ ನೆಲದಲ್ಲಿ ನನ್ನನ್ನು ಗೌರವಿಸಿದ್ದಕ್ಕಾಗಿ ನಾನು ಋಣಿಯಾಗಿದ್ದೇನೆ.

‍ಲೇಖಕರು Avadhi

June 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಸಮಾನತೆಯ ಸಮಾಜಕ್ಕಾಗಿ, ಜನರೊಲುಮೆಗಾಗಿ ಹಂಬಲಿಸಿದ
    ಮತ್ತೀಗ ಅಗಲಿದ ಜನರ ಕವಿಗೆ ನಮನ.
    ಅವರ ಹೃದಯದುಲಿಯನ್ನು ನಮ್ಮ ಮುಂಬೈ ಜನಮಾನಸಕ್ಕೆ ತಲುಪಿಸಿದ ಮಳೆಯಾಗಿದೆ ಹೃದಯ ತುಂಬಿ ನಲ್ಮೆ ; ಅಭಿನಂದನೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Shyamala MadhavCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: