ಮಮತಾ ಅರಸೀಕೆರೆ ಹೊಸ ಕವಿತೆ- ಯಾರಾದರೂ ಹೇಳಿ

ಮಮತಾ ಅರಸೀಕೆರೆ

ಆಕೆ ಅಲ್ಲಿ ಕಾಲಿಟ್ಟ ನಂತರ ವೇಶ್ಯೆಯಾದಳಾ?
ವೇಶ್ಯೆಯಾಗಲೆಂದೇ ಅಲ್ಲಿ ಕಾಲಿಟ್ಟಳ?
ಯಾರು ಹೇಳುತ್ತೀರಿ, ಬನ್ನಿ
ಸಾಲುಗಟ್ಟಿ ನಿಲ್ಲಿ, ಕೆಲವರಾದರೂ
ಅವಳ ಮನೆಯ ಮುಂದೆ ಎಡತಾಕುವ ಹಾಗೆ
ಸಾಲುಗಟ್ಟಿ ನಿಂತು ನಿಮ್ಮ
ಆಮಿಷಗಳನ್ನು ತೀರಿಸಿಕೊಂಡು
ಹೊರಬರುವ ಧಾವಂತವಿರುತ್ತದಲ್ಲಾ!
ಆ ಬಗೆ

ಒತ್ತರಿಸಿ ದಾಳಿಯಿಕ್ಕಿದ ಆಲೋಚನೆಗೆ ಒಮ್ಮೆ
ಎದೆಗೂಡು ಥರಥರಗುಟ್ಟಿತು ನನಗೆ
ಮಿಡತೆಗಳ ಲಕ್ಷಗಟ್ಟಲೆ ಹಿಂಡು ಮೈಮುತ್ತಿದಂತೆ
ಒಳಹಸಿರೆಲ್ಲ ಒಣಪೊರಕೆಯಾಗಿ
ಮರಳುಗಾಡಿನ ದೊಡ್ಡದಿಬ್ಬಗಳೆಲ್ಲ
ಸುಂಟರಗಾಳಿಗೆ ತೂರಿ ಮೆದುಳನ್ನು
ಹೊಕ್ಕಂತೆ ಸುದೀರ್ಘ ಆರ್ಭಟವಾಗಿ
ಪೊದೆಯೊಂದರ ಒಳಗೆ ತಣ್ಣಗೆ ತೂರಿದ ಹಾವು
ಇದ್ದೂ ಇಲ್ಲದಂತೆ ಮೂಡಿಸಿದ ಸಂಚಲನವಾಗಿ
ಕೇಳಿಸಿತ್ತು, ಕಣ್ಣಿಗೆ ಕಂಡಿತ್ತು ಯೋನಿಯ
ನಿಟ್ಟುಸಿರಿನಂತೆ
ಹೇಳಿ ನಿಮಗೇನನ್ನಿಸಿತ್ತು

‘ಜೀವಮಾನದ ಕಷ್ಟ ಪರಿಹರಿಸಿಕೊಳ್ಳುವ
ಒಲಂಪಿಕ್ಸ್ ನ ಆಭರಣ, ಸರಬರಾಜಿನ ತಾಣ’
ಬಿಲಿಯನ್‍ಗಳಷ್ಟು ವ್ಯಾಪಾರ ಲೆಕ್ಕಾಚಾರದ ಆಡುಂಬೊಲ
ನೇರ ಪ್ರಸಾರಕ್ಕೆ ಹಕ್ಕು ಬೇಡುವ ರೋಚಕ ಕ್ರೀಡೆ
ಸವದತ್ತಿ, ಚಂದ್ರಗುತ್ತಿಯ ಬೆತ್ತಲೆ ಸೇವೆ,
ರಾಜಮಹಾರಾಜರ ರಣೋತ್ಸವ ವಸಂತೋತ್ಸವದ ಭೋಗ
ಬಿಸಿ ಹಸಿಯಾಗಿಯೇ ಕರಗುವ ಹೆಮ್ಮೆಯ ಪ್ರತೀಕ
ಕೆಂಪುದೀಪದ ಹಾಡಹಗಲಿನ ತಾಪ
ಸೂಚ್ಯವಾಗದಿರಿ, ಜೀವಕಾಳಜಿಗಾದರೂ ಸೂಕ್ಷ್ಮವಾಗಿ
ಮಾರುಕಟ್ಟೆಯ ಕೋಟ್ಯಾಂತರ ವ್ಯವಹಾರಕ್ಕೆ
ಹೊಕ್ಕ ಗಳಿಗೆಯೋ, ಪಕ್ಕಾದ ಸಮಯವೋ
ನೀವವಳನ್ನು ಅಟ್ಟಾಡಿಸಿದ ಶುಭಮಹೂರ್ತವೋ
ಹೇಳಿ ಯಾವ ಉಪಗ್ರಹ ಹಾರಿಸಲಾಗಿತ್ತು
ಅಂದು ಯಾವ ಯುದ್ಧದ ಸಿದ್ದತೆಗಾಗಿ
ಅಣುಬಾಂಬು ಸಜ್ಜಾಗಿತ್ತು

ಕುತೂಹಲವಿಲ್ಲವೇ ನಿಮಗೆ ಆಕೆ ಏನಾಗಿದ್ದಳು,
ಎಲ್ಲಿದ್ದಳು, ವೇಶ್ಯೆಯಾಗುವ ಮುನ್ನ ಯಾವ ಕನಸಿಗೆ
ವಾರಸುದಾರಳಾಗಿದ್ದಳು, ತನ್ನ ರೆಕ್ಕೆಯ ಅಂಚುಗಳನ್ನು
ಎಲ್ಲೆಲ್ಲಿ ವಿಸ್ತರಿಸಿದ್ದಳು, ಆಸೆ ಆಗಸದ ಚುಕ್ಕಿಯಾಗಿದ್ದಳು
ಅವಳು ನಿಮ್ಮದೇ ಮನೆಯಂಗಳದ ಕೂಸಾಗಿದ್ದಳು

ಆಗಿರಬಹುದು ಅವ್ವ, ಅಕ್ಕ, ಜೀವದ ಗೆಳತಿ
ಹೆಂಡತಿ ಬೇಡ ಬಿಡಿ ಒಬ್ಬರಾದರೂ ಎಣಿಸಿದಿರೆ?
ಆಕೆ ಜಗತ್ತಿನ ತಾಯಾಗಿದ್ದಳು.

‍ಲೇಖಕರು nalike

August 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Jahanara kolur

    ಅನೇಕ ಆಯಾಮಗಳ ಬಿಚ್ಚಿಡುವ ಕವಿತೆ. ಪುರುಷ ಸಮಾಜದಲ್ಲಿ ಧೈರ್ಯವಾಗಿ ನಿಂತ ಗಟ್ಟಿಗಿಯ ಪ್ರಶ್ನೆಗಳು.. ಅಭಿನಂದನೆಗಳು

    ಪ್ರತಿಕ್ರಿಯೆ
  2. Kotresh T A M Kotri

    ಇನ್ನಷ್ಟು ಧ್ವನಿಪೂರ್ಣವಾಗಿ ಕವಿತೆ ಕಟ್ಟಬಹುದಿತ್ತು

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Jahanara kolurCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: