’ಮಗನ ಪುಸ್ತಕದಲ್ಲಿ ನಕ್ಕ ನಕ್ಷತ್ರಗಳು’ – ಸ್ಮಿತಾ ಅಮೃತರಾಜ್

ತ್ರೀ ಸ್ಟಾರ್ ಮಹಿಮೆ

– ಸ್ಮಿತಾ ಅಮೃತರಾಜ್

ಸಾಮಾನ್ಯವಾಗಿ ಶಾಲೆ ಸೇರೋಕೆ ಮುಂಚೆಯೇ ಹೆತ್ತವರಿಗೆ ಮಕ್ಕಳ ಅಕ್ಷರಭ್ಯಾಸದ ಮೇಲೆ ವಿಪರೀತ ವ್ಯಾಮೋಹ ಹುಟ್ಟಿಬಿಡುತ್ತದೆ. ಇನ್ನು ಬಳಪ ಸರಿಯಾಗಿ ಹಿಡಿಯಲು ಬಾರದ ಕಂದನ ಎಳೆ ಕೈಗಳ ಬಗ್ಗೆ ಅಗಾಧ ನಿರೀಕ್ಷೆಗಳನ್ನು ಕಟ್ಟಿಕ್ಕೊಂಡು ಮುಂದೊಂದು ದಿನ ನನ್ನ ಮಗ ಅಪ್ರತಿಮ ಸಾಧಕನಾಗಿ ಬಿಡುತ್ತಾನೇನೋ ಅನ್ನೋ ಅದಮ್ಯ ಆಸೆಗಳನ್ನು ಹೊತ್ತುಕೊಳ್ಳುತ್ತಾರೆ.ಏನೇ ಅಂದರೂ ಬಹುಷ: ಇದಕ್ಕೆ ಯಾವ ಹೆತ್ತವರೂ ಹೊರತಾಗಿಲ್ಲ ಅನ್ನಿಸುತ್ತೆ.
ಮಗು ಅದೇನೋ ಗೀಚಲು ಶುರುವಿಕ್ಕಿದ್ದೇ ತಡ,ನನ್ನ ಮಗ ಮಹಾನ್ ಚುರುಕು ಅಂತೆಣಿಸಿ ಅವುಗಳಿಗೆ ಸ್ಲೇಟು,ಬಳಪ ಅಂದರೇನೆಂಬುದು ಅಂತ ತಿಳುವಳಿಕೆ ಹುಟ್ಟೋ ಮೊದಲೇ ಮಕ್ಕಳ ಕಣ್ಣೆದುರು ಎಲ್ಲವೂ ರೆಡಿಯಾಗಿಬಿಡುತ್ತದೆ.ಇನ್ನು ಶಾಲೆಯಲ್ಲಿ ಟೀಚರ್ಗಳೋ ಮಕ್ಕಳು ಕಲಿತ ಅರೆ ಬರೆ ಅಕ್ಷರಗಳನ್ನು ತಿದ್ದಿ ತೀಡಿ ದುಂಡಗೆಗೊಳಿಸಲು ತಮ್ಮ ಕಲಿತ ಬುದ್ದಿಯನ್ನೆಲ್ಲಾ ಸಾಮ ದಾನ ದಂಡಗಳ ಮುಖೇನ ಪ್ರಯೋಗಿಸುತ್ತಲೇ ಇರುತ್ತಾರೆ.ಸ್ಲೇಟಿನಲ್ಲಿ ಮೂರು ಗೆರೆ ಎಳೆದು ದುಂಡಗೆ ಬರೆಯಲು ಹೇಳುತ್ತಾ ಮತ್ತೆ ಬಳಪ ಬಿಟ್ಟು ಪೆನ್ಸಿಲ್,ತದನಂತರ ಪೆನ್ನ್ ಹೀಗೆ ಹಂತ ಹಂತವಾಗಿ ಕೈ ಬರಹವನ್ನು ಕೋಪಿ ಪುಸ್ತಕದಲ್ಲಿ ಒಪ್ಪಗೊಳಿಸುವ ಅಕ್ಷರದ ಯಾತ್ರೆ ಶುರುವಾಗುತ್ತೆ.
ಹಾಗೆ ನೋಡಿದರೆ ಹೆಚ್ಚಿನ ಹೆತ್ತವರು, ಮಕ್ಕಳು ಎಲ್ಲರೂ ಆರಂಭಶೂರರೇ.ಮೊದಮೊದಲಿಗೆ ಮಕ್ಕಳಿಗೆ ಕಲಿಸಿಕೊಡುವಾಗಿನ ಆಸ್ಥೆ ಕೊನೇ ತನಕ ನಿಲ್ಲುವುದಿಲ್ಲ.ಮಕ್ಕಳೂ ಅಷ್ಟೇ ಹೊಸ ಪುಸ್ತಕ ನೋಡಿದಾಗಿನ ಸಂಭ್ರಮದಲ್ಲಿ ಎರಡು ಪುಟ ಇನ್ನಿಲ್ಲದಂತೆ ಶ್ರದ್ಧೆವಹಿಸಿ ಬರೆದದ್ದಷ್ಟೇ ಗೊತ್ತು.ಆಮೇಲೆ ಬರ್ತಾ ಬರ್ತಾ ರಾಯನ ಕುದುರೆ ಕತ್ತೆ ಅಂತ ಕೋಪಿ ಪುಸ್ತಕವೂ ಕೈ ಬರಹವೂ ಯದ್ವಾತದ್ವಾ ಆಗಿಬಿಡುತ್ತದೆ.ನನ್ನ ಮಗನೂ ಅಷ್ಟೆ,ಪೆನ್ನು ಹಿಡಿಯಲು ಗೊತ್ತಾದದ್ದೊಂದೇ ಗೊತ್ತು.ಸಿಕ್ಕ ಸಿಕ್ಕ ಪೇಪರಿನ ತುಂಬೆಲ್ಲಾ ಏನೆಲ್ಲಾ ಗೀಚುತ್ತಿದ್ದ. ಅದು ನೆಲದ ಮೇಲೆ,ಗೋಡೆಯ ಮೇಲೆ,ಕೊನೆಕೊನೆಗೆ ಅವನ ಅಕ್ಕನ ನೋಟ್ ಪುಸ್ತಕದ ಒಳಗೂ ಅವನ ಕೈ ಬರಹದ ನೈಪುಣ್ಯತೆಯನ್ನು ಪ್ರದಶರ್ಿಸುತ್ತಿದ್ದ.ನನಗೋ ಇವನ್ನೆಲ್ಲಾ ಕಂಡು ಕೋಪ ಉಕ್ಕಿದರೂ ಒಳಗೆಲ್ಲೋ ಏನೋ ಹಿಗ್ಗು.ಓಹ್! ನನ್ನ ಮಗನಿಗೆ ಅಕ್ಷರದ ಒಲವು ಈಗಲೇ ಹತ್ತಿಬಿಟ್ಟಿದೆ ಅಂತ ಅವನ ಮೇಲಿನ ಅಕ್ಕರೆ ಇನ್ನೂ ಹೆಚ್ಚಾಗಿ, ಅವ ಇನ್ನೂ ತೀರಾ ಚಿಕ್ಕವನಾಗಿರುವಾಗಲೇ ಅಕ್ಷರಭ್ಯಾಸ ಮಾಡಿಸಿ ಮೊದಲಿಗೆ ಕನ್ನಡದ ಅಕ್ಷರಗಳನ್ನು ಕಲಿಸುವ ಹೊಸ ಸಾಹಸಕ್ಕೆ ಇಳಿದೆವು.ತಮಾಷೆಯೆಂದರೆ ಅವನಿಗೆ ನಾವು ಹೇಳಿ ಕೊಡುವ ವರ್ಣಮಾಲೆ,ಕಾಗುಣಿತಗಳತ್ತ ಒಲವಿಲ್ಲ.ಅದನ್ನು ಕಲಿಯುವತ್ತ ಅವನು ಆಸಕ್ತಿಯೂ ತೋರಲಿಲ್ಲ.ಅವನದೇನಿದ್ದರೂ ಯಾವುದೋ ಹೊಸ ಲಿಪಿಯ ಅವಿಷ್ಕಾರ.ದಿನವಿಡೀ ಸಿಕ್ಕಾಪಟ್ಟೆ ಅದೇನೋ ಅರ್ಥವಾಗದ ಭಾಷೆಯಲ್ಲಿ,ಆದರೆ ನೋಡಲು ಚೆಂದ ಕಾಣುವ ರೀತಿಯಲ್ಲಿ ಮಾತ್ರ ಗೀಚುತ್ತಿದ್ದದಂತೂ ಹೌದು.ಇಂದಿಗೂ ಕೂಡ ಅವನ ಅಕ್ಷರಗಳ ನಡುವೆ ಯಾವುದೋ ಹೊಸ ಲಿಪಿಯೊಂದು ಹಾದು ಹೋದಂತಾಗುತ್ತದೆ.ಈಗ ಹೀಗೆ ಅವನು ಸೊಟ್ಟ ಸೊಟ್ಟಗೆ ಅಕ್ಷರ ಮಾಡಿಕೊಂಡು ಬರೆಯುವಾಗ ಮಾತ್ರ ಎಲ್ಲಿಲ್ಲದ ಸಿಟ್ಟು ಅಮರಿಕೊಂಡು ನನ್ನ ತಾಳ್ಮೆಯ ಪರೀಕ್ಷೆಯಾಗಿ ಬಿಡುತ್ತದೆ.ಹಾಗಂತ ನನಗೇನೂ ಸುಂದರವಾಗಿ ಮುತ್ತು ಪೋಣಿಸಿದಂತೆ ಬರೆಯಲು ಬರುವುದಿಲ್ಲವಾದರೂ,ಓದಲು ಬಲ್ಲವರಿಗೆಲ್ಲಾ ಕನ್ನಡಕ ಏರಿಸದೇ ಸುಲಭ ಸಾಧ್ಯವಾಗಿ ನನ್ನ ಬರಹವನ್ನು ಓದಬಹುದು ಅಂತ, ನನ್ನ ಮಗ ನನ್ನ ಅಕ್ಷರಗಳ ಬಗ್ಗೆ ತಕರಾರು ಎತ್ತುವ ಮೊದಲೇ ನಾನು ಸಮಜಾಯಿಷಿ ಕೊಡುತ್ತಿರುವೆ.

ಅಂದು ಕನ್ನಡ ಟೀಚರ್ ಕೈಯಿಂದ ಸ್ಕೇಲಿನಲ್ಲಿ ನನ್ನ ಕೈ ಬೆರಳ ಗಂಟಿಗೆ ಎಷ್ಟು ಬಾರಿ ಪೆಟ್ಟು ಬಿದ್ದಿದೆಯೋ ದೇವನೇ ಬಲ್ಲ. ಆದರೂ ಆ ಎಳೆ ಬೆರಳುಗಳು ಮುರಿಯದೇ ಇದನ್ನೆಲ್ಲಾ ನನಗೆ ಇಂದು ಬರೆಯಲು ಸಾಧ್ಯವಾದದ್ದು ಮಾತ್ರ ಇಂದಿಗೂ ವಿಸ್ಮಯ ಮೂಡಿಸಿ ನಗು ತರಿಸುತ್ತದೆ. ನನ್ನ ತರಗತಿಯ ಹುಡುಗಿ ಪುಷ್ಪ ಬರೆಯಲು ಎಡ ಕೈಯನ್ನು ಬಳಸುತ್ತಿದ್ದರೂ ಅವಳ ಅಕ್ಷರ ಎಷ್ಟು ಚೆಂದ ಮತ್ತು ಸ್ಪುಟವಾಗಿತ್ತು ಅಂದರೆ ಕನ್ನಡ ಟೀಚರ್ಗೂ ಅವಳಷ್ಟು ಚೆಂದಕ್ಕೆ ಮಾಡಿ ಬರೆಯಲು ಬರುತ್ತಿರಲಿಲ್ಲ.ಆದರೆ ಕಲಿಯುವುದರಲ್ಲಿ ಮಾತ್ರ ತುಂಬಾ ಹಿಂದೆ ಇದ್ದಳು.ಅವಳ ಕಲಿಕೆಗೂ ಕೈ ಬರಹಕ್ಕೂ ಎಂದೂ ತಾಳೆಯಾಗುತ್ತಿರಲಿಲ್ಲ. ಹಾಗಾಗಿ ಅಕ್ಷರ ಚೆಂದ ಇದ್ದವರೆಲ್ಲಾ ಓದೋದರಲ್ಲಿ ಜಾಣರು ಅಂತ ನನ್ನ ಕಿವಿಗೆ ಎರಕ ಹೊಯ್ದ ನುಡಿಗಳು ಮೊದಲ ಬಾರಿಗೆ ಸುಳ್ಳು ಅಂತ ಅನ್ನಿಸಿಬಿಟ್ಟಿತ್ತು.ಅದರ ಜೊತೆಗೆ ಅಕ್ಷರ ಚೆಂದ ಇಲ್ಲದವರೂ ಕಲಿಯುವುದರಲ್ಲಿ ಹುಷಾರು ಇರುತ್ತಾರೆಂಬುದು ಕೂಡ ಮನದಟ್ಟು ಮಾಡಿಕೊಂಡು ಸಮಧಾನ ಪಟ್ಟುಕೊಂಡಿದ್ದೆ.
ಮಕ್ಕಳಿಗೆ ಹತ್ತನೆ ತರಗತಿಯವರೆಗೂ ಅಕ್ಷರ ದುಂಡಗೆ ಆಗಲಿ ಅಂತ ಕೋಪಿ ಬರೆಯಲು ಕಡ್ಡಾಯವಾಗಿ ಕೊಡುತ್ತಾರೆ.ಆದರೆ ವಸ್ತು ಸ್ಥಿತಿ ಏನೆಂದರೆ ನಾವೆಲ್ಲಾ ಅದನ್ನು ಎಷ್ಟು ಕಾಟಾಚಾರಕ್ಕೆ ಬರೆಯುತ್ತಿದ್ದೇವೆಂಬುದರ ಬಗ್ಗೆ ಒಬ್ಬೊಬ್ಬರನ್ನು ಕೇಳಿದರೂ ಒಂದೊಂದು ಅನಿಸಿಕೆ ವ್ಯಕ್ತವಾಗಬಹುದು. 9ನೇ ತರಗತಿಯಲ್ಲಿ ಕನ್ನಡ ಮೇಡಂ ಎಷ್ಟು ಪಾಪ ಇದ್ರು ಅಂದ್ರೆ, ಅವರು ಮೊದಲ ಬೆಂಚಿನಿಂದ ಸಾಲಾಗಿ ಕೋಪಿ ಪುಸ್ತಕ ನೋಡ್ತಾ ಬರುವಾಗ ನಾವುಗಳು ಆಗ ತಾನೇ ಚೀಲದಿಂದ ಕೋಪಿ ಪುಸ್ತಕ ಹೊರ ತೆರೆದು ಆರಾಮವಾಗಿ ಮೂರು ಗೆರೆಯ ಕೋಪಿಯನ್ನು ಅಚ್ಚುಕಟ್ಟಾಗಿ ಬರೆದು ಮುಗಿಸಿ ಭೇಷ್! ಅನ್ನಿಸಿಕೊಳ್ಳುತ್ತಿದ್ದೆವು.
ಅಕ್ಷರಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಹೇಳುವುದನ್ನು ಕೇಳಿದ್ದೇವೆ.ವ್ಯಕ್ತಿತ್ವಕ್ಕೂ ಅಕ್ಷರಕ್ಕೂ ಸಂಬಂಧ ಇದೆ ಅಂತ ಸಂಶೋಧನೆಗಳು ಕೂಡ ದೃಢ ಪಟ್ಟಿವೆಯೆಂದು ವರದಿಗಳು ಬಿತ್ತರಿಸುತ್ತವೆ.ಆದರೂ ಇದಕ್ಕೆ ಅಪವಾದವೆಂಬಂತೆ ಕೆಲವು ಮಹಾನ್ ಸಾಧಕರ, ಸಾಹಿತಿಗಳ ಅಕ್ಷರಗಳು ನೀಟಾಗಿಲ್ಲವೆಂಬುದು ಗೊತ್ತಾದ ಮೇಲೆ ಈ ಅಕ್ಷರ, ವ್ಯಕ್ತಿತ್ವ,ಸಂಶೋಧನೆಗಳಿಗೆಲ್ಲಾ ವಿನಾಕಾರಣ ವಿಶೇಷ ಅರ್ಥದ ಲೇಪ ಹಚ್ಚುವುದು ವ್ಯರ್ಥ ಅಂತನ್ನಿಸುತ್ತದೆ.ಇನ್ನೂ ಈಗ ಮೊದಲಿನಂತಿಲ್ಲ.ಕಂಪ್ಯೂಟರ್ ಬಳಕೆ ಶುರುವಾದ ನಂತರ ಎಲ್ಲರ ಅಕ್ಷರಗಳೂ ಒಂದೇ ತೆರನಾಗಿ ಗೋಚರಿಸುತ್ತವೆ.ಮತ್ತೆ ಬರಹಗಾರರ ವಿಷಯಕ್ಕೆ ಬಂದರೆ ಈಗ ಯಾರೂ ಪುಟಗಟ್ಟಲೆ ಹಾಳೆ ,ಪೆನ್ನು ಹಿಡಿದುಕೊಂಡು ಬರೆಯುತ್ತಾ ತಿದ್ದುತ್ತಾ ಹರಿಯುತ್ತಾ ವೃಥಾ ಸಮಯ ಹಾಳು ಮಾಡಿಕೊಳ್ಳಲಾರರು.ನಾವು ಬರವಣಿಗೆಗೆ ಕೀಲಿಮಣೆಯನ್ನೇ ಉಪಯೋಗಿಸುವುದು ಅಂತ ಹೆಚ್ಚಿನ ಬರಹಗಾರರ ಅಂಬೋಣ.ಈ ಹಿಂದೆ ನಮ್ಮ ಕೃತಿಕಾರರೆಲ್ಲಾ ಹೇಗೆ ಲೆಕ್ಕವಿಲ್ಲದಷ್ಟು ಪುಟಗಟ್ಟಲೆ ದೊಡ್ಡ ದೊಡ್ಡ ಹೊತ್ತಗೆಗಳನ್ನು,ಗ್ರಂಥಗಳನ್ನು ರಚಿಸಿದರೋ ಎಂಬುದನ್ನು ನೆನೆಯುವುದೇ ಈಗ ಸೋಜಿಗದ ಸಂಗತಿ.ಬದಲಾದ ಕಾಲಘಟ್ಟದಲ್ಲಿ ತಂತ್ರಜ್ನಾನ ಹೇಗೆ ನಮ್ಮನ್ನು ಅಚ್ಚರಿಯೆಡೆಗೆ ನೂಕಿ ಬಿಡುತ್ತದೆ ಎಂಬುದಕ್ಕೆ ಈಗ ಬರಹವೂ ಕೂಡ ಸಾಕ್ಷಿಯಾಗಿ ನಿಲ್ಲುತ್ತದೆ.ಅದರ ನಡುವೆ ಕೀಲಿ ಮಣೆಯ ಉಪಯೋಗ ಗೊತ್ತಿದ್ದರೂ ಕೂಡ ಪೆನ್ನು ಹಿಡಿದು ಬಿಳಿಯ ಹಾಳೆಗಳ ಮೇಲೆ ಬರೆಯುವಾಗ ದಕ್ಕುವ ಸೃಜನಶೀಲತೆ ಮತ್ತು ಕೈ ಬರಹದಲ್ಲಿ ಬರೆದಾದನಂತರ ಸಿಗುವ ತೃಪ್ತಿ ಮತ್ತು ನಿರಾಳತೆ ಕೀಲಿ ಮಣೆ ಕುಟ್ಟಿ ಬರೆಯುವುದರಲ್ಲಿ ಸಿಗಲಾರದು ಎಂಬುದು ಕೂಡ ಒಂದಷ್ಟು ಜನರ ಉವಾಚ.
ನನ್ನ ಮಗನ ಕೋಳಿ ಕಾಲು ಅಕ್ಷರಕ್ಕೆ ರೋಸಿ ಹೋಗಿ ಅವನ ಮೇಲೆ ಸುಖಾ ಸುಮ್ಮಗೆ ರೇಗಾಡುತ್ತಿರಬೇಕಾದರೆ, ಆತ್ಮೀಯರೊಬ್ಬರು ಅವನಿಗೆ ಮನೆಯಲ್ಲಿ ಕೋಪಿ ಪುಸ್ತಕ ತಂದು ಬರೆಯಿಸಿ ಅಂತ ಸಲಹೆಕೊಟ್ಟರು.ಶಾಲೆಯಲ್ಲಿ ಬರೆಯುವ ಕೋಪಿಯ ಪುಟಗಳಲ್ಲಿ ಟೀಚರ್ ಅಂದವಾಗಿ ಕೆಂಪು ಶಾಯಿಯಲ್ಲಿ ಅಂದವಾಗಿ ಬರೆ ಅಂದವಾಗಿ ಬರೆ ಅಂತ ಪ್ರತಿ ಪುಟದಲ್ಲೂ ನೋಡಿ ಬೇಸತ್ತಿದ್ದ ನಾನು ನಿಜಕ್ಕೂ ಅಂಧಳಾಗಿಬಿಡುವೆನಾ..? ಅಂತ ಭಯ ಹುಟ್ಟಿ ಹೋಗಿತ್ತು.ಈಗ ನೋಡಿದರೆ ನೋಟ್ ಪುಸ್ತಕ ಅಲ್ಲದಿದ್ದರೂ ಕೋಪಿ ಪುಸ್ತಕದಲ್ಲಿ ತುಸು ಚೆಂದಕ್ಕೆ ಮಾಡಿ ಬರೆದದ್ದು ನೋಡಿ ನನಗೆ ಆಶ್ಚರ್ಯ ಮತ್ತು ಸಂತಸ ಏಕಕಾಲದಲ್ಲಿ ಉಂಟಾಗಿ ,ಜಾಣ ಮರಿ..ಎಷ್ಟು ಚೆಂದಕ್ಕೆ ಮಾಡಿ ಬರೆಯೋಕೆ ಬರುತ್ತೆ ನೋಡು ಅಂತ ಹೊಗಳಿದ್ದೇ ತಡ, ತನ್ನ ಕೋಪಿ ಪುಸ್ತಕದ ಪುಟಗಳನ್ನೆಲ್ಲಾ ನನ್ನ ಮುಂದೆ ತಿರುವುತ್ತಾ, ನೋಡು..! ನಿನ್ನೆ ಸ್ವಲ್ಪ ಚೆಂದ ಬರೆದಿದ್ದಕ್ಕೆ ಒಂದು ಸ್ಟಾರ್ ಕೊಟ್ಟಿದ್ದಾರೆ ಮಿಸ್ಸ್.ಇವತ್ತು ಎರಡು ಸ್ಟಾರ್ ಸಿಕ್ಕಿದೆ.ನಾಳೆ ನೋಡು,ವಿನಯ್ನಂತೆ ನಾನೂ ಕೂಡ ತ್ರೀ ಸ್ಟಾರ್ ತಗೊಳ್ಳುವೆ ಅಂತ ಕೋಪಿ ಪುಸ್ತಕದಲ್ಲಿ ಮತ್ತೂ ತಲೆ ಹುದುಗಿಸಿ ಮತ್ತಷ್ಟು ಚೆಂದಕ್ಕೆ ಮಾಡಿ ಬರೆಯುವುದ ಕಂಡಾಗ, ಎಲಾ! ತ್ರೀ ಸ್ಟಾರ್ ಮಹಿಮೆಯೇ..?! ಅಂತ ನನ್ನ ಕಣ್ಣಲ್ಲಿ ಸಾವಿರ ನಕ್ಷತ್ರ ಹೊಳಪು.ಆವೊತ್ತು ಕೈಗಂಟಿಗೆ ಸ್ಕೂಲಿನಲ್ಲಿ ಸಿಕ್ಕ ಪೆಟ್ಟಿಗಿಂತಲೂ ತ್ರೀ ಸ್ಟಾರ್ ಪರಿಣಾಮಕಾರಿಯೇ..?ಯೋಚಿಸುತ್ತಿರುವೆ.ಹೌದಲ್ಲಾ..?!.
 

‍ಲೇಖಕರು G

April 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. vasudeva nadig

    lahari sundara mattu prominant aagide..kavitegalhinda hosa hasa bhinna praakaarakke smitha horalhittiruva suuchane santasadaayaka mattu svaagatarha…

    ಪ್ರತಿಕ್ರಿಯೆ
  2. Anil Talikoti

    ಬಡಿತಕ್ಕಿಂತ ಬಹುಮಾನ ಒಳ್ಳೆಯದೆಂಬ ಸಂದೇಶ ಚೆನ್ನಾಗಿದೆ

    ಪ್ರತಿಕ್ರಿಯೆ
  3. anand rugvedi

    ‘ಪೆನ್ನು ಹಿಡಿದು ಬಿಳಿಯ ಹಾಳೆಗಳ ಮೇಲೆ ಬರೆಯುವಾಗ ದಕ್ಕುವ ಸೃಜನಶೀಲತೆ ಮತ್ತು ಕೈ ಬರಹದಲ್ಲಿ ಬರೆದಾದನಂತರ ಸಿಗುವ ತೃಪ್ತಿ ಮತ್ತು ನಿರಾಳತೆ ಕೀಲಿ ಮಣೆ ಕುಟ್ಟಿ ಬರೆಯುವುದರಲ್ಲಿ ಸಿಗಲಾರದು’ ಎಂಬುದು ನನ್ನ ಅಭಿಮತ ಕೂಡ. ಅಕ್ಷರ ರೂಪಿನ ಬಗೆಗಿನ ಈ ಬರಹ ಮತ್ತು ಭಾವ ಆತ್ಮೀಯವೆನ್ನಿಸುತ್ತದೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ sangeetha ravirajCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: