ಭವತ್ಕೇಶ ಪಾಶ ಪ್ರಪಂಚದೊಳಗೆ…

ಚಂದ್ರಶೇಖರ ಹೆಗಡೆ

ರಸ್ತೆಯುದ್ದಕ್ಕೂ ಚಾಚಿಕೊಂಡ ಮರದ ಕೊಂಬೆಗಳನ್ನು ಅತಿಯಾಯಿತೆಂದು ಕತ್ತರಿಸುವ ನಾವು, ಎಲ್ಲೆಂದರಲ್ಲಿ ವಿಸ್ತರಿಸಿಕೊಂಡಿರುವ ನಮ್ಮದೇ ಕಬಂಧ ಬಾಹುಗಳನ್ನು ಕಡಿದುಕೊಳ್ಳಲು ಸಿದ್ಧರಿಲ್ಲ. ಈ ಕತ್ತರಿಸದೇ ಮುಜುಗರ ತರುವ ವಿಷಯವೇಕೆ ಮುನ್ನಲೆಗೆ ಬಂತು ಎನ್ನುವಿರಾದರೆ ಬನ್ನಿ ಭವತ್ಕೇಶ ಪಾಶ ಪ್ರಪಂಚಕ್ಕೆ ಹೋಗೋಣ.

ಹೇಗೆಂದರೆ ಹಾಗೆ ಬೆಳೆದು ಆಲದ ಮರದ ಬಿಳಲುಗಳಂತೆ ಕಿವಿಯ ಮೇಲೆ ಇಳಿಬಿದ್ದ ಕೇಶರಾಶಿಯನ್ನು ಹದ್ದುಬಸ್ತಿನಲ್ಲಿಡಲೇಬೇಕೆಂದು ಬಂದ ನನಗೆ, ಕ್ಷೌರಶಾಲೆಯೊಳಗೆ ಚಕಿತಗೊಳಿಸುವ ಕೇಶವಿನ್ಯಾಸ ಹಾಗೂ ಬಗೆ ಬಗೆಯ ಶೈಲಿಗಳ ಮಹಾದರ್ಶನವೇ ಸಂಭವಿಸಿ ಹೋಯಿತು! ಇದೇನು ಕ್ಷೌರದಂಗಡಿಯನ್ನು ಕ್ಷೌರಶಾಲೆ ಎಂದು ಸಂಬೋಧಿಸುತ್ತಿದ್ದಾನಲ್ಲ ಎಂದು ಹುಬ್ಬೇರಿಸದಿರಿ.

ನೆನಪಿರಲಿ ನಿಮಗೆ. ಅವಕಾಶ ದೊರೆತರೆ ಬಯಸಿದೆಡೆಗೆಲ್ಲಾ ತಲೆಯೆತ್ತುವುದೊಂದನ್ನೇ ಅಭ್ಯಾಸ ಮಾಡಿಕೊಂಡಿರುವ ನಾವು, ಅವನು ಹೇಳಿದಷ್ಟು ಹೊತ್ತು ತಲೆಬಾಗಿ ಕುಳಿತುಕೊಳ್ಳುವುದು ಕ್ಷೌರಿಕನೆಂಬ ಗುರುವಿನ ಶಾಲೆಯೊಳಗೆ ಮಾತ್ರ. ಪಂಪಭಾರತದ ‘ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್’ ಎನ್ನುವ ಹಾಗೆ ನಾನೂ ಸರದಿಗಾಗಿ ಕಾಯುತ್ತಿದ್ದೆ.

ಕ್ಷೌರಶಾಲೆಯೊಳಗೆ ಬಾಲನೊಬ್ಬ ಹಠವಿಡಿದು ಕಣ್ಣೀರುಗರೆಯುತ್ತಿದ್ದ ದೃಶ್ಯ ಕಂಡು, ಕುತೂಹಲದಿಂದ ಏನಾಯಿತೆಂದು ವಿಚಾರಿಸಿದೆ. ಅವನ ತಂದೆಯ ಅಭೀಪ್ಸೆಗೆ ವಿರೋಧವಾಗಿ ಹೆಬ್ಬುಲಿ ಕೇಶ ವಿನ್ಯಾಸವೇ ತನಗಾಗಬೇಕೆಂದು ಹಂಬಲಿಸಿದ್ದನ್ನು ಕಂಡು ಅವಾಕ್ಕಾದೆ. ಹಾಗೆಂದರೇನು ಎಂದು ಅಲ್ಲಿದ್ದವರನ್ನು ಕೇಳಿ ಮಾಹಿತಿ ಪಡೆದ ನಂತರ, ಹೆಬ್ಬುಲಿ ಸಿನೇಮಾದ ತಾತ್ವಿಕ ದರ್ಶನವು ಮನದೊಳಗೆ ತೂರುವುದು ಬಿಟ್ಟು ಈ ಭ್ರಾಂತಿಸೂನುಗಳ ತಲೆಯ ಮೇಲೆ ಬಂದು ಕೂತಿದೆಯಲ್ಲ ಎಂಬ ವಿಷಾದ ಹಾಗೂ ಅಚ್ಚರಿಗಳೆರಡೂ ಧಾವಿಸಿ ಬಂದವು.

ಚಡಪಡಿಸಿದೆ ತಡವಾಗಿ ಬರುವ ಸರದಿ ಹಾಗೂ ಅವಾಂತರದ ಇಂತಹ ವರದಿಗಾಗಿ. ಮಗದೊಬ್ಬ ತರುಣ ಕ್ಷೌರ ಸಿಂಹಾಸನದ ಮೇಲೆ ಕುಳಿತು, ಮೊಬೈಲಿನಿಂದ ತನ್ನನ್ನು ಚಾರ್ಜ್ ಮಾಡಿಕೊಳ್ಳುತ್ತಿದ್ದಾನೆಂಬಂತೆ ಕರಣಗಳಿಗೆರಡು ಶ್ರವಣಸಾಧನಗಳನ್ನು ಧರಿಸಿಕೊಂಡು ತನ್ನದೇ ಲೀಲಾವಿನೋದದಲ್ಲಿ ತಲ್ಲೀನನಾಗಿದ್ದ. ಇತ್ತ ಕ್ಷೌರಿಕ ತನ್ನ ಸಾಧನಗಳೊಂದಿಗೆ ತಲೆಯ ಮೇಲೆ ಹೊರಳಿ ಬಿದ್ದು ಹಾವಿನ ಮರಿಗಳಂತೆ ಸುರುಳಿ ಸುತ್ತಿ ಬೀಳುತ್ತಿದ್ದ ಕೇಶವನ್ನು ಹೊರತುಪಡಿಸಿ ಹಿಂದಲೆಯಲ್ಲಿ ಮಾತ್ರ ಆಳಕ್ಕಿಳಿದು ಕೇಶಫಸಲಿನ ಕಟಾವು ಮಾಡುತ್ತಿದ್ದುದನ್ನು ಕಂಡು ಮೊದಲು ಮೇಲಿನಿಂದ ರಾಶಿಯನ್ನು ತೆಗೆಯಬಾರದೇ ಎಂದು ಸಲಹೆ ನೀಡಿದೆ.

ತಕ್ಷಣವೇ ಆ ತರುಣ ಸಿಂಹಾಸನವನ್ನು ೧೮೦ ಡಿಗ್ರಿಯಲ್ಲಿ ತಿರುಗಿಸಿ ದುರುಗುಟ್ಟಿ ‘ನನ್ನಿಷ್ಟ ಸುಮ್ಮನೇ ಕೂಡ್ರಿ’ ಎಂದುಬಿಟ್ಟ. ಕ್ಷೌರಿಕನೇ ಅವನನ್ನು ಸಮಾಧಾನ ಮಾಡಿ ‘ಸರ್ ಇದೆಲ್ಲಾ ಲೋಕಲ್ ಸ್ಟೈಲ್. ಎಣಿಕೆ ಮಾಡಿ ಲೆಕ್ಕ ತಪ್ಪದಂತೆ ಕೇಶಗಳನ್ನೆಳೆಯುವ ಹಿಂಸೆ ನಮ್ಮದು. ಏನೂ ಮಾಡುವ ಹಾಗಿಲ್ಲ’ ಎಂದು ನನಗೆ ಸಮಜಾಯಿಷಿ ನೀಡಿದ್ದನ್ನು ಕೇಳಿ ‘ಓಹೋ ಇದೂ ಒಂದು ಶೈಲಿಯೇ…’ ಎಂದು ತೆಪ್ಪಗಾದೆ. ಕ್ಷೌರಶಾಲೆಯಲ್ಲಿಯೂ ಮಾತು ಬೆಳ್ಳಿ ಮೌನ ಬಂಗಾರವೆಂಬುದು ದಿಟವಾಯಿತಲ್ಲ ಎಂದು ನನ್ನೊಳಗೆ ಸಂಶೋಧನೆ ಮಾಡಿಕೊಂಡು ಸಮಾಧಾನಿಯಾದೆ.

ಸಿನೇಮಾಗಳು ಯುವಶಕ್ತಿಯ ತಲೆಗಳನ್ನಾಳುವ ಹೊಸಪರಂಪರೆಯ ವಿರಾಟ ಸ್ವರೂಪವನ್ನು ಮನಗಂಡು ಕ್ಷೌರಿಕನ ಕೈಯ್ಯೊಳಗೆ ತಲೆ ಕೊಟ್ಟೆ. ಕಟ್ಟತೇವ ನಾವು ಕಟ್ಟತೇವ ಕಟ್ಟೇ ಕಟ್ಟತೇವ ಎಂದು ಸತೀಶ ಕುಲಕರ್ಣಿಯವರು ಹಾಡಿದಂತೆ ನಾಡನ್ನು ಕಟ್ಟುವ ಯುವಶಕ್ತಿಯ ಉಲ್ಲಾಸವನ್ನು ಇಮ್ಮಡಿಗೊಳಿಸುವಂತಹ ಪರಂಪರೆಯೊಂದನ್ನು ಮುನ್ನಲೆಗೆ ತರುವುದನ್ನು ಬಿಟ್ಟು, ಕೇಶವಿನ್ಯಾಸ, ವಸ್ತ್ರಾಭರಣ ಮುಂತಾದ ಭೌತಿಕತೆಗಳ ವಿಜೃಂಭಣೆಯಂತಹ ಕಣ್ಕಟ್ಟಿನ ತಂತ್ರಗಳನ್ನು ಪ್ರಜ್ಞಾಪೂರ್ವಕವಾಗಿ ಬದಿಗೆ ಸರಿಸಬೇಕಾಗಿದೆ ಸಿನೇಮಾ ಲೋಕ ಎಂದೆನಿಸಿತು ನನಗೆ.

ಮನದಂಗಳದಲ್ಲಿ ವಿಹಾರಗೈದೆ. ಬಾಪೂಜಿ ಹಾಗೂ ಅವರೊಡನೆ ಬಂದ ಮಧ್ಯರಾತ್ರಿಯ ಸ್ವಾತಂತ್ರ‍್ಯದ ನೆನಪಾಯಿತು. ಕ್ಷೌರಶಾಲೆಯಲ್ಲಿ ಹಗಲಿನಲ್ಲಿ ಮಾತನಾಡಲೂ ಹೆದರುವಂತಹ ವಾಕ್ ಸ್ವಾತಂತ್ರ‍್ಯಕ್ಕೂ ಮಧ್ಯರಾತ್ರಿ ಗಾಂಧೀಜಿ ಬಯಸಿದ ಬಿಡುಗಡೆಗೂ ಎತ್ತಣಿಂದೆತ್ತ ಸಂಬಂಧವಯ್ಯವೆಂದು ಹಳಹಳಿಸಿದೆ. ಈ ಎಲ್ಲ ಸಂಕಟಗಳನ್ನರಿತು ಶೈಲಿಗಳ ಗೋಜು-ಗೊಡವೆಗಳಿಲ್ಲದೆ ತಮ್ಮದೇಯಾದ ಕೇಶಮುಕ್ತತೆಯನ್ನು ಸರಳಜೀವನಕ್ಕಾಗಿ ಗಾಂಧೀಜಿ ಅಪ್ಪಿಕೊಂಡಿರಬೇಕೆನ್ನಿಸಿತು. ಅಂದ ಮೇಲೆ ಮೋಹನದಾಸರೂ ಈ ಕೇಶಪಾಶ ಪ್ರಪಂಚದೊಳಗಿನ ಜೀವ ಎಂಬುದನ್ನು ಮರೆಯುವಂತಿಲ್ಲ. ಆದಿಕವಿ ಪಂಪ ತನ್ನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಭವತ್ಕೇಶ ಪಾಶ ಪ್ರಪಂಚವನ್ನು ಕುರಿತು ಹೀಗೆ ಹಾಡುತ್ತಾನೆ-
ಇದಱೊಳ್
ಶ್ವೇತಾತಪತ್ರ ಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ
ಪುದಿದು ಅೞ್ಕಡಾಡಿತ್ತು
ಅಡಂಗಿತ್ತು ಇದರೊಳ್ ಕುರುರಾಜಾನ್ವಯಂ
ಮತ್ಪ್ರತಾಪಕ್ಕೆ ಇದರಿಂದಂ ನೋಡು
ಅಗುರ್ವು ಉರ್ವಿದುದು
ಇದುವೆ ಮಹಾಭಾರತಕ್ಕಾದಿಯಾಯ್ತು
ಅಬ್ಜದಳಾಕ್ಷಿ ಪೇೞ
ಸಾಮಾನ್ಯಮೆ ಬಗೆಯೆ ಭವತ್ ಕೇಶಪಾಶ ಪ್ರಪಂಚಂ

ರಾಜಾಧಿರಾಜರ ಸಮಸ್ತಲೋಕವನ್ನೆಲ್ಲಾ ತನ್ನಲ್ಲಿ ಅಡಗಿಸಿಕೊಂಡಿರುವ ಈ ಕೇಶಪಾಶ ಪ್ರಪಂಚವೇನೂ ಸಾಮಾನ್ಯವಾದುದಲ್ಲ. ದಶದಿಶಾಮಂಡಲ. ರಾಜಚಕ್ರ, ಕುರುರಾಜ ಹಾಗೂ ಪಾಂಡವರ ಪ್ರತಾಪಗಳನ್ನು ಒಳಗೊಂಡು ಮಹಾಭಾರತಕ್ಕಾದಿಯಾದ ದ್ರೌಪದಿಯ ಸಿರಿಮುಡಿಯನ್ನು ಕುರಿತು ವ್ಯಕ್ತಪಡಿಸುವ ಪಂಪನ ಈ ಪದ್ಯ ಆಧುನಿಕ ಕೇಶಪುರಾಣದೊಂದಿಗೆ ಅಷ್ಟೇ ಅರ್ಥಪೂರ್ಣವಾಗಿ ಸಮನ್ವಯವನ್ನು ಹೇಗೆ ಸಾಧಿಸಬಲ್ಲದೆಂಬುದನ್ನು ಗಮನಿಸಿ.

ದ್ರೌಪದಿಯ ಸಿರಿಮುಡಿಯೊಳಗೆ ಕುರುಕುಲದ ಭವಿತವ್ಯ ಅಡಗಿ ಕುಳಿತಂತೆ, ತಿರುಪತಿಯ ತಿರುಮಲೇಶನಿಗೆ ಅರ್ಪಿಸುವ ಯಾರ ಮುಡಿಯಲ್ಲಿ ಅದಾವ ಸಾಮ್ರಾಜ್ಯದ ಏಳುಬೀಳುಗಳಡಗಿವೆಯೋ ಯಾರಿಗೆ ಗೊತ್ತು ?. ಕ್ಷೌರಶಾಲೆಯೊಳಗೆ ಕುಳಿತುಕೊಂಡೇ ಮನದ ಪುಷ್ಪಕವಿಮಾನವನ್ನೇರಿ ಹೀಗೆ ತಿರುಪತಿಯತ್ತ ಹೊರಳಿದೆ. ತಿರುಪತಿಯ ಶ್ರೀನಿವಾಸನಿಗೆ ಮುಡಿ ಕೊಡುವ ಪದ್ಧತಿ ಇಂದು ಸಾವಿರಾರು ಕೋಟಿಯ ಕೇಶೋದ್ಯಮದ ಬೆಳವಣಿಗೆಗೆ ಕಾರಣವಾಗಿದೆ ಎಂದರೆ ನೀವು ನಂಬಲೇಬೇಕು. ಗೊತ್ತಿರಲಿ ನಿಮಗೆ, ವಾರ್ಷಿಕವಾಗಿ ೨೫೦ ಕೋಟಿಯಷ್ಟು ವಹಿವಾಟನ್ನು ಹೊಂದಿರುವ ಈ ಕೇಶೋದ್ಯಮವು ಸಾವಿರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ.

ಕೊಪ್ಪಳದ ಭಾಗ್ಯನಗರದಲ್ಲಿ ಸುಮಾರು ೨೦ ವರ್ಷಗಳಿಂದ ನಡೆಯುತ್ತಿರುವ ಈ ಕೇಶಶುದ್ಧೀಕರಣದ ಕಾಯಕವು ೩೦೦ ಕೇಶ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಕಾರಣವಾಗಿರುವುದರಲ್ಲಿ ಕೇಶಪಾಶ ಪ್ರಪಂಚದ ಕೈಚಳಕವಿದೆಯೆಂಬುದನ್ನು ನೆನಪಿಡಬೇಕು. ಇಲ್ಲಿ ಸಂಸ್ಕರಣಗೊಂಡ ಶುದ್ಧ ಕೇಶರಾಶಿ ಬರ್ಮಾದ ಮೂಲಕ ಚೀನಾಕ್ಕೆ ತೆರಳಿ ಕೇಶಕಿರೀಟಕ್ಕಾಗಿ ಬಳಕೆಯಾಗುತ್ತದೆ ಎಂಬುದನ್ನು ತಿಳಿದು ವಿಸ್ಮಯಗೊಂಡೆ. ಅಂದರೆ ಮೊಬೈಲ್ ಆದಿಯಾಗಿ ಸಕಲ ಎಲೆಕ್ಟ್ರಾನಿಕ್ ಸಾಧನಗಳಲ್ಲದೇ ಮಕ್ಕಳ ಆಟಿಕೆಗಳನ್ನೂ ಭಾರತದಲ್ಲಿ ತಂದು ಸುರಿದು ಆಟವಾಡುತ್ತಿರುವ ಚೀನಾ ದೇಶವು ಸಾಲದ್ದಕ್ಕೆ ಭಾರತೀಯರ ತಲೆಯ ಮೇಲೆ ನಮ್ಮದೇ ಕೇಶಗಳಿಂದ ತಯಾರಾದ ಕೃತಕ ಕೇಶ ಕಿರೀಟಗಳನ್ನಿಟ್ಟು ವ್ಯಂಗ್ಯವಾಡುತ್ತಿದೆಯಲ್ಲ ಎಂದೆನಿಸಿತು ನನಗೆ. ಹೀಗೆ ಸಾವಿರಾರು ಒಡಲುಗಳಿಗೂ ಈ ಕೇಶ ಪ್ರಪಂಚ ಆಸರೆಯನ್ನೊದಗಿಸಲು ಕಾರಣನಾದ ಕೇಶವನಿಗೂ ನಮನಗಳನ್ನು ನಾವು ಸಲ್ಲಿಸಲೇಬೇಕು.

ನನ್ನ ಮನೆಯಂಗಳದಲ್ಲಿ ಕೇಶ ಆಯುವವನೊಬ್ಬ ವಾರದಲ್ಲೆರಡು ಬಾರಿ ಹಾಜರಿರುತ್ತಾನೆ. ಅವನು ಕಾಣಸಿಕೊಳ್ಳುತ್ತಿದ್ದಂತೆಯೇ ಸಾಕಿಗೂ ಅವನಿಗೂ ವಾಗ್ಯುದ್ದವೇ ನಡೆದು ಹೋಗುತ್ತದೆ. ಅವನು ತನ್ನ ಹೆಗಲ ಮೇಲೆ ಹೊತ್ತ ಸಾಮಾನು ಸರಂಜಾಮುಗಳನ್ನೇ ಅಸ್ತ್ರ ಮಾಡಿಕೊಂಡು ಯುದ್ಧವನ್ನಾರಂಭಿಸಿದರೆ, ಸಾಕಿ ತನ್ನಲ್ಲಿರುವ ಕೇಶದೆಳೆಗಳನ್ನೇ ಬಾಣಗಳನ್ನಾಗಿ ಹೂಡಿ ಮಹಾಭಾರತವನ್ನಾರಂಭಿಸುತ್ತಾಳೆ. ಕೇಶರಾಶಿಗೆ ತಕ್ಕಷ್ಟು ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಪಾತ್ರೆ ಪಗಡೆಗಳ ವಿನಿಮಯ ಮಾತ್ರ ಮಾಡುವೆನೆಂಬ ಹಠ ಅವನದಾದರೆ, ಇರುವ ಕೇಶರಾಶಿಗೂ ಮಿಗಿಲಾದ ಬೆಲೆಯುಳ್ಳ ಪರಿಕರಗಳನ್ನು ಪಡೆದೇ ತೀರಬೇಕೆಂಬುದು ಸಾಕಿಯ ವಾದ.

ಶುಭೋದಯದ ಹೊತ್ತಿನಲ್ಲಿ ಮನೆಯಂಗಳದಲ್ಲಿ ಅನುರಣಿಸುವ ಈ ಸುಪ್ರಭಾತವನ್ನು ಕೇಳಲಾಗದೇ ಒಳಗೆ ಅವಿತುಕೊಳ್ಳುವ ಪ್ರಸಂಗವಂತೂ ಸಾಕಿಯ ಪ್ರತಿಜ್ಞೆ ಈಡೇರುವವರೆಗೂ ಆಗಾಗ ಎದುರಾಗುತ್ತಲೇ ಇರುತ್ತದೆ. ಕೊನೆಗೂ ಸಾಕಿ ಹಾಕಿದ ಕೇಶಕಾರಣದ ಪಟ್ಟುಗಳಿಗೆ ಮಣಿದು ಪಾತ್ರೆ ಪಗಡೆಗಳನ್ನೆಲ್ಲಾ ಕೊಟ್ಟು ಹೋಗುತ್ತಿದ್ದವನು ಇಂದು ಹೆಚ್ಚು ಕಳೆದುಕೊಂಡೆ ಎಂಬ ಸಂಕಟದ ಸುಪ್ರಭಾತವನ್ನು ಉಲಿಯುತ್ತಲೇ ಸಾಗುತ್ತಿದ್ದ ಎನ್ನುವುದು ಮಾತ್ರ ಸುಳ್ಳಲ್ಲ. ಪ್ರಯೋಜನಕ್ಕೆ ಬಾರದ ಯಕಃಶ್ಚಿತ ಕೇಶರಾಶಿಗೂ ಇಷ್ಟೊಂದು ಬೆಲೆಯೇ ಎಂದು ನಿಕಷಿಸಿದ್ದೆ. ಇದ ಕಂಡು ಸಾಕಿಯನ್ನು ಕೇಳಿದ್ದೆ ‘ಇವರೇಕೆ ನಮ್ಮ ಕೇಶದ ಹಿಂದೆ ಬಿದ್ದಿದ್ದಾರೆ ಹೀಗೆʼ ಎಂದು. ಮಾರಿ ಲಾಭ ಮಾಡಿಕೊಳ್ತಾರೆ ಎಂದು ಉತ್ತರಿಸಿದ ಸಾಕಿಯ ಮಾತುಗಳಿಂದ ಮುಂದುವರೆದ ನಾನು ಮೇಲಿನ ಕೇಶೋದ್ಯಮದ ಸಂಗತಿಗಳನ್ನು ಹೆಕ್ಕಿ ತೆಗೆದೆ. ಅಂದರೆ ಪಾಕಶಾಲೆಯ ಪಾತ್ರೆಗಳಿಗೂ ಕೇಶಪಾಶದ ಎಳೆಗಳು ಸುತ್ತಿಕೊಂಡಿವೆ ಎಂದಂತಾಯಿತು.

ಬೇಂದ್ರೆಯವರು ತಮ್ಮ ಮುಗಿಲ ಮಾರಿಗೆ ಕವಿತೆಯಲ್ಲಿ ಹೆಣ್ಣೊಂದರ ಬಯಕೆಗಳನ್ನು ಕಟ್ಟಿಕೊಡುವಾಗ ರಾತ್ರಿಯನ್ನು ‘ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ’ ಎಂದು ಬಣ್ಣಿಸುತ್ತಾರೆ. ಇಲ್ಲಿ ಇರುಳಿನ ಪ್ರತಿಮೆಯಾಗಿ ನಿಲ್ಲುವ ಹೆರಳು ಕೂಡ ಅಂತರಂಗ ಹಾಗೂ ಬಹಿರಂಗದ ವ್ಯೂಮವನ್ನೇ ತನ್ನೊಡಲೊಳಗೆ ಬಾಚಿಕೊಂಡಿರುವುದನ್ನು ಅಲ್ಲಗಳೆಯಲಾಗದು. ಕೇಶರಾಶಿಯೊಂದು ಕವಿಯ ಭುವನದೊಳಗೆ ಚಾಚಿಕೊಂಡಿರುವ ಹರವು ಅಗಾಧವಾದದ್ದು. ನಲ್ವಾಡುಗಳ ಕವಿ ಬೆಟಗೇರಿ ಕೃಷ್ಣಶರ್ಮರವರ ನಾಜೂಕದ ನಾರಿ ಕವಿತೆಯಲ್ಲಂತೂ ಭುವಿಗಿಳಿಯಬಹುದಾದ ಹೆರಳಿನ ಸ್ವರೂಪವನ್ನು ದೃಶ್ಯಕಾವ್ಯವನ್ನಾಗಿ ಕಟ್ಟಿಕೊಡುತ್ತಾರೆ.

‘ನಿಡುಗೂದಲೆಸಳಿನಾ ತಲಿ ಎಡಕ ಬೈತಲಿ
ಎರಡು ಕಡೆ ಹೆಳಲು
ಬೆನ್ನಗುಂಟ ಇಳೀಬಿದ್ದು ಸೊಂಟದಾಟಿ ಹೋಗಿ
ತಟ್ಟತಾವೋ ಮೊಣಕಾಲು
ಎಂದು ಹಾಡಿ ನಾರಿಯ ಹೆರಳಿನ ಶೃಂಗಾರವನ್ನು ಸಹಜವಾದ ಆಡು ಭಾಷೆಯಲ್ಲಿ ಹಿಡಿದಿಡುತ್ತಾರೆ. ಅಂದು ಮೊಣಕಾಲಿನವರೆಗೂ ಇಳಿಬೀಳುವ ಕೇಶರಾಶಿ ಸ್ತ್ರೀಯರ ಸಹಜತೆಯಾಗಿರಬೇಕು. ಬದಲಾದ ಆಧುನಿಕ ಜಗತ್ತಿನಲ್ಲಿ ಇಂತಹ ಕೇಶರಾಶಿಯನ್ನು ಜಾಹಿರಾತುಗಳಲ್ಲಿ ಮಾತ್ರ ಕಾಣುವಂತಾಗಿದೆ. ಕೇಶಾಲಂಕಾರಕ್ಕಾಗಿಯೇ ಆನಂದಕಂದರು ಮೂರು ಪದ್ಯಗಳನ್ನು ಮೀಸಲಾಗಿಟ್ಟಿರುವದು ನಾರಿಯ ಸಿರಿಮುಡಿಗೆ ಸಂದ ಮಗದೊಂದು ಜಯವೆಂದೇ ಹೇಳಬಹುದು. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಮಾನಿನಿಯ ಕೇಶರಾಶಿಗೆ ಮರುಳಾಗಿ
ಲಲನೆಯರ ಬೆನ್ನಿನೆಡೆ
ಹಾವಿನೊಲು ಜೋಲ್ವ ಜಡೆ
ಅತ್ತಿತ್ತ ಹರಿದ ಜಡೆ!
ಚೇಳ್ ಕೊಂಡಿಯಂತಹ ಜಡೆ
ಮೋಟು ಜಡೆ, ಚೋಟು ಜಡೆ
ಚಿಕ್ಕವರ ಚಿನ್ನ ಜಡೆ!
ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬಡವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ
ಗಂಟು ಜಡೆ!
ಎಂಬ ಜಡೆ ಹೆಸರಿನ ಕವಿತೆಯನ್ನೇ ಸಮರ್ಪಿಸಿರುವುದು ಅನನ್ಯವಾಗಿದೆ. ಕವಿಯು ಪ್ರಾಚೀನಕಾಲದಿಂದ ಇಲ್ಲಿಯವರೆಗೆ ಜಡೆಯು ಬೆಳೆದು ಬಂದ ಬಗೆಯನ್ನು ಮಾರ್ಮಿಕವಾಗಿ ಹೆಣೆದಿದ್ದಾರೆ. ದಿಗಂಬರವೇ ದಿವ್ಯಾಂಬರ ವೆಂದು ಹೊರಟ ಅಕ್ಕನಿಗೂ ಆಸರೆಯಾದದ್ದು ಈ ಕೇಶಾಂಬರವೇ ಎಂಬುದನ್ನು ಮರೆಯಲಾಗದು. ಅಕ್ಕನಂತಹ ದಾರ್ಶನಿಕರೂ ಈ ಕೇಶಪಾಶ ಪ್ರಪಂಚದೊಳಗಿನಿಂದಲೇ ಹಬ್ಬಿದವರು.

ಕೆ.ಎಸ್.ನರಸಿಂಹಸ್ವಾಮಿಯವರ ಪದ್ಯವೊಂದು ಹೀಗಿದೆ- ‘ಅವಳೊಮ್ಮೆ ಹೆರಳ ಕೆದರಿ, ಕಪ್ಪುಗುರುಳುನು ಬೆನ್ನ ಮೇಲೆಲ್ಲ ಹರಡಿದರೆ ದೂರದ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ ಜೋಗ ಜಲಪಾತಕ್ಕೆ ಕಾರ್ಮೋಡ ಲೇಪಿಸಿದಂತಿತ್ತು’ ಎಂಬ ಸಾಲುಗಳು ಕೇಶಾಲಂಕಾರದ ಮೀಮಾಂಸೆಯನ್ನು ಇನ್ನಿಲ್ಲದಂತೆ ಬಿಚ್ಚಿಡುತ್ತವೆ. ಕೆಲವರಿಗೆ ಬೇಡವೆಂದರೂ ನೀಳಕೇಶ ತಲೆಯ ಮೇಲೆ ಶಿವನ ಜಡೆಯಂತೆ ಹೆಣೆದುಕೊಂಡು ಹಬ್ಬಿ ತೊಂದರೆಯನ್ನುಂಟು ಮಾಡಿದರೆ, ಇನ್ನು ಕೆಲವರಿಗೆ ಬೇಕೆಂದರೂ ಚಿಗುರದೇ ಸತಾಯಿಸುತ್ತವೆ.

ಜಾನಪದವೂ ಈ ಹೆರಳನ್ನು ಆರಾಧಿಸದೇ ಬಿಟ್ಟಿಲ್ಲ. ‘ಎಡಬಲದಿ ಎರಡು ಗುಡ್ಡ ನಡುವೆ ಹಾದಿ’ ಎಂಬ ಒಗಟನ್ನು ಕೇಶವನ್ನಾಧರಿಸಿಯೇ ಕಟ್ಟಿರುವುದು ಇದಕ್ಕೊಂದು ನಿದರ್ಶನ. ಇವು ಜಗತ್ತಿನ ಅನಧಿಕೃತ ಶಾಸಕರಾದ ಕವಿಗಳೂ ಕೂಡ ಕೇಶಪಾಶ ಪ್ರಪಂಚದೊಳಗೆ ಹೇಗೆ ಲೀನವಾದವರು ಎಂಬುದಕ್ಕೆ ಕೆಲವು ನಿದರ್ಶನಗಳಷ್ಟೇ. ಇತ್ತೀಚೆಗೆ ಜಗತ್ತಿನ ಅತ್ಯಂತ ಉದ್ದದ ಕೇಶದೊಡತಿಯೆಂದು ಗಿನ್ನೆಸ್ ದಾಖಲೆ ಬರೆದ ಯುವತಿಯೊಬ್ಬಳು ತಲೆಯ ಮೇಲಿನ ಕಿರೀಟದಂತೆ ಕಾಪಿಟ್ಟುಕೊಂಡು ಬಂದಿದ್ದ ತನ್ನ ಹೆರಳನ್ನು ಕತ್ತರಿಸಿಕೊಳ್ಳುವ ವಿಡಿಯೋ ಜಾಲತಾಣದಲ್ಲಿ ಹರಿದಾಡಿ ಆಕೆಗಿಂತ ಹೆಚ್ಚಾಗಿ ಈ ಘಟನೆಯನ್ನು ನೋಡಿದ ಸಹೃದಯರಲ್ಲಿಯೇ ಅತ್ಯಂತ ವಿಷಾದವನ್ನುಂಟು ಮಾಡಿತ್ತು. ನೀಳಜಡೆ ಸ್ತ್ರೀಯರ ಒಯ್ಯಾರಕ್ಕೊಂದು ಒಣಪನ್ನು ತಂದು ಕೆಲವರಲ್ಲಿ ಅಹಂಕಾರಕ್ಕೆ ಕಾರಣವಾದರೆ ಮತ್ತೆ ಕೆಲವರಲ್ಲಿ ಅಸೂಯೆಯನ್ನು ತಂದಿಡುತ್ತದೆ.

ವರ್ತಮಾನದಲ್ಲಿ ಕೊರೊನಾ ತಂದಿಟ್ಟ ಅವಾಂತರಗಳಲ್ಲಿ ಈ ಕೇಶಕಬಳಿಕೆಯೂ ಒಂದು. ಜೀವದ ಮೇಲೆ ಮಾತ್ರ ಕಣ್ಣಿಟ್ಟು ಬೇಟೆಯಾಡುತ್ತಿದ್ದ ಕೊರೊನಾ, ಈಗ ತನ್ನಿಂದ ತಪ್ಪಿಸಿಕೊಂಡು ಬದುಕುಳಿದವರ ಕೇಶರಾಶಿಯನ್ನಾದರೂ ನುಂಗಿ ನೀರು ಕುಡಿಯುತ್ತೇನೆಂದು ಹವಣಿಸುತ್ತಿದೆಯಂತೆ.
ಕೇಶಾಲಂಕಾರವೂ ಕೂಡ ಒಂದು ಕೌಶಲ್ಯೋದ್ಯಮದ ರೂಪು ಪಡೆಯುತ್ತಿರುವ ಈ ಹೊತ್ತಿನಲ್ಲಿ ಧಾರವಾಹಿ-ಚಲನಚಿತ್ರಗಳ ಹೆಸರಿನಲ್ಲೋ, ಅವುಗಳೊಳಗಿನ ನಾಯಕ ನಾಯಕಿಯರ ನಾಮದಲ್ಲೋ ಬಗೆ ಬಗೆಯ ಕೇಶಾಲಂಕಾರದ ಶೈಲಿಗಳು ಹುಟ್ಟಿಕೊಳ್ಳುತ್ತಿರುವುದು ಕಾಲನ ಮಹಾ ಮಹಿಮೆಗಳಲ್ಲೊಂದು.

ಯಲ್ಲಮ್ಮನ ಆರಾಧಕರಾದ ಜೋಗಿತಿಯರಂತೂ ಹುತ್ತಗಟ್ಟಿದ ಮಾರುದ್ದದ ಜಡೆಗಳನ್ನು ಹೊತ್ತು ಸಾಗಲು ಹೆಗಲಿಗೊಂದು ಕೈಚೀಲವನ್ನೇ ತೂಗುಹಾಕಿಕೊಂಡಿರುತ್ತಾರೆ. ಸರಕಾರದ ಜಾಗೃತಿಯ ಫಲವಾಗಿ ಇಂದೇನೋ ಅಂತಹ ಭಯಂಕರ ಜಟಾಧಾರಿಗಳ ಸಂಖ್ಯೆ ಇಳಿಮುಖವಾಗಿದೆ. ಜಟಾಜೂಟವನ್ನೇ ಆಭರಣಗಳೆಂಬಂತೆ ಅಲಂಕರಿಸಿಕೊಂಡ ಶಿವನ ಸಿರಿಮುಡಿಯಲ್ಲಿರುವುದು, ದೇವಲೋಕದಲ್ಲಿದ್ದುಕೊಂಡೇ ಆಗಾಗ ಭೂಲೋಕದಲ್ಲಿ ದಂಗೆಯೇಳುವ ಗಂಗೆ; ಸಕಲ ಜೀವಿಗಳಿಗೆಲ್ಲಾ ಜೀವ ತುಂಬುವ ತುಂಗೆ. ಅದಕ್ಕೆ ‘ಜಲವೇ ಸಕಲ ಕುಲಕೆ ತಾಯಲ್ಲವೇ’ ಎಂದು ಕನಕದಾಸರು ಮನದುಂಬಿ ಹಾಡುತ್ತಾರೆ.

ನಾನು ಹೋದ ಕ್ಷೌರಶಾಲೆಯೊಳಗೆ ಕೇಶಾಲಂಕಾರವೇ ಕ್ಲೇಶಾಲಂಕಾರವಾಗಿ ಪರಿಣಮಿಸಿದ್ದನ್ನು ಕಂಡು ನಮಗಿದರ ಗೊಡವೆಯಿಲ್ಲವೆಂದು ಬೆನ್ಙು ಚಪ್ಪರಿಸಿಕೊಂಡೆ. ಕೆಲವರದು ಗೋವು ಚಪ್ಪರಿಸಿದಂತಿರುವ ಹುಲ್ಲುಗಾವಲು; ಮತ್ತೋರ್ವರದು ದಿಟ್ಟಿಸಿದರೆ ಕಳೆದುಹೋಗುವ ದಟ್ಟಾರಣ್ಯ; ಮಗದೊಬ್ಬರದು ಬೆಕ್ಕು ನೆಕ್ಕಿದ ನಂತರ ಮಿರಮಿರನೆ ಹೊಳೆಯುವ ಹಾಲಿನ ಪಾತ್ರೆ, ಇನ್ನೊಬ್ಬರದು ಅಲ್ಲೊಂದು ಇಲ್ಲೊಂದು ಇಲಿಗಳು ಹರಿದು ತಿಂದಂತಿರುವ ನಾಗರಪಂಚಮಿಗೆಂದು ಬೆಳೆಸಿದ ತಿಳಿಹಳದಿಯ ಗೋಧಿಯ ಹುಲ್ಲು, ಮತ್ತೊಬ್ಬರದು ಎಲ್ಲೆಂದರಲ್ಲಿ ತಲೆಯನ್ನೇ ಸೀಳಿದಂತೆ ಎಳೆದಿರುವ ವಕ್ರರೇಖಾಕೃತಿಗಳ ಬೀಡು;

ಇನ್ನು ಕೆಲವರದು ತಲೆಯನ್ನೇ ಕ್ಯಾನವಾಸನ್ನಾಗಿ ಮಾಡಿಕೊಂಡು ಕೂದಲ ಕುಂಚದಿಂದ ಬಿಡಿಸಿದ ಕಲಾಕೃತಿಗಳ ನೆಲೆವೀಡು; ಇನ್ನೋರ್ವರದು ಮಧ್ಯ ಕೇಶವಿಲ್ಲದೇ ಸಲಿಲದರ್ಪಣದಂತಿರುವ ಅಚ್ಚೋದ ಸರೋವರದ ಸುತ್ತ ಬೆಳೆದ ಶ್ವೇತಕೇಶದ ಹುಲ್ಲುಗಾವಲು, ಹೀಗೆ ಆಧುನಿಕ ಯುಗದಲ್ಲಿ ತರಹೇವಾರಿ ಕೇಶಾಲಂಕರದ ಕೌಶಲದ ಮಾದರಿಗಳು ಜಾತಿ, ಮತ, ಪಂಥ, ಲಿಂಗ, ವರ್ಗಗಳ, ಹಂಗಿಗೊಳಗಾಗದೇ ವಿಜೃಂಭಿಸುತ್ತಿರುವುದು ವಿಶಿಷ್ಟವಾದ ಸಂಗತಿಯೇ ಸರಿ. ಹಾಗೆಂದು ಇದೇ ಮಾತನ್ನು ನಮ್ಮ ತಲೆಯೊಳಗಿರುವ ಮೆದುಳಿಗೆ ಅನ್ವಯಿಸಿ ಹೇಳಲಾಗದು! ಈ ವೈವಿಧ್ಯಮಯ ಶೈಲಿಗಳಲ್ಲಿ ಕೆಲವು ನಾವೇ ಬಯಸಿ ಬಗೆದುಕೊಂಡ ಕೃತಕ ವಿನ್ಯಾಸಗಳಾದರೆ, ಮತ್ತೆ ಕೆಲವು ಪ್ರಕೃತಿಯೇ ಹಿರಿಯತನದ ಸಂಕೇತವಾಗಿ ನಮ್ಮ ತಲೆಯ ಮೇಲೆ ನೈಸರ್ಗಿಕವಾಗಿ ಹೇರಿದವುಗಳು.

ಲೋಕೋ ಭಿನ್ನ ರುಚಿಃ ಎನ್ನುವ ಹಾಗೆ ಕೇಶರಾಶಿ ಹೇರಳವಾಗಿರುವವರು ಕತ್ತರಿಸಿ ಕೊರೆದು ಇದ್ದೂ ಇಲ್ಲದಂತಹ ಕೇಶವಿನ್ಯಾಸವನ್ನು ರೂಪಿಸಿಕೊಂಡರೆ, ಕೇಶವಿಲ್ಲದವರು ಚಿಕಿತ್ಸೆ ಪಡೆದಾದರೂ ಸರಿ ಕೇಶಕಸಿ ಮಾಡಿಸಿಕೊಂಡು, ದಟ್ಟಾರಣ್ಯದಂತೆ ಕಾಣುವ ಶೈಲಿಗಳನ್ನು ರೂಢಿಸಿಕೊಳ್ಳಲು ಪರದಾಡುವುದನ್ನು ನಾನು ಕಂಡಿದ್ದೇನೆ. ನಮ್ಮ ಸೌಂದರ್ಯಮೀಮಾಂಸೆಯನ್ನೇ ತಮ್ಮ ಹೂಡಿಕೆಗಾಗಿ ಬಳಸಿಕೊಳ್ಳುವ ವೈದ್ಯಕೀಯ ಕ್ಷೇತ್ರವೂ ಕೇಶಕಸಿಯಂತಹ ವ್ಯರ್ಥ ಪ್ರಯತ್ನಗಳ ಸುತ್ತ ನಾವು ಗಿರಕಿ ಹೊಡೆಯುವಂತೆ ಮಾಡುತ್ತಿದೆ. ಇದನ್ನೇ ಗೋಪಾಲಕೃಷ್ಣ ಅಡಿಗರು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನವೆಂದರು.

ಈ ಸಂಗತಿಗಳನ್ನಾಧರಿಸಿಯೇ ‘ಕೂದಲಿದ್ದವರು ಹೇಗೆ ಬಾಚಿಕೊಂಡರೂ ನಡೆಯುತ್ತದೆ’ ಎಂಬ ನಾಣ್ಣುಡಿಯು ಈಗಲೂ ಜನಪದರ ಬಾಯಲ್ಲಿ ಆಗೀಗ ನಲಿಯುತ್ತಲೇ ಇರುತ್ತದೆ. ಇದನ್ನು ಭೋಗವನ್ನು ಹೀಗಳೆಯುವ ರೂಪಕವಾಗಿಯೂ ಬಳಸುವುದನ್ನು ಗಮನಿಸಬೇಕು.
ಪೂರ್ವಸೂರಿಗಳು ಕವಿಸಮಯವನ್ನಾಗಿ ದೇವಲೋಕದ ಕಾಮನಬಿಲ್ಲನ್ನು ತಂದು ತಮ್ಮೊಲವಿನ ಒಡತಿಗೆ ಮುಡಿಸುವ ಸಂಭ್ರಮವನ್ನು ಕಾವ್ಯದಲ್ಲಿ ತಮ್ಮದಾಗಿಸಿಕೊಂಡಿದ್ದರೆ, ಇಂದು ಅಪರಾವತಾರಿಗಳು, ಕಾಮನಬಿಲ್ಲನ್ನು ತರದಿದ್ದರೆ ಏನಾಯಿತು ಅದರ ಏಳು ಕೃತಕ ವರ್ಣಗಳನ್ನಾದರೂ ತಮ್ಮ ಕೇಶಗಳಿಗಂಟಿಸಿಕೊಂಡು ಮೆರೆಯುವ ಸಾಹಸದಿಂದಲೇ ಉಕ್ಕಿಹರಿಯುತ್ತಾರೆ.

ಬೇಡವೆಂದರೂ ಉಕ್ಕಿ ಹರಿಯುವ ನೀಳಕೇಶರಾಶಿಯನ್ನು ಹೇಗೆ ಹದುಬಸ್ತಿನಲ್ಲಿಡುವುದು ಎಂದು ಮಹಿಳಾಮಣಿಯರು ಚಿಂತೆಗೊಳಗಾದರೆ, ಪುರುಷರೂಪರು, ತಮಗಿರುವ ವಾಮನರೂಪದ ಕೇಶರಾಶಿಯನ್ನೇ ಸಮೃದ್ಧ ಫಸಲನ್ನಾಗಿಸಿ, ರಬ್ಬರ್, ರಿಬ್ಬನ್, ಹೇರ್ ಬ್ಯಾಂಡನ್ನು ನಾವೇಕೆ ಧರಿಸಬಾರದೆಂದು ಸ್ಪರ್ಧೆಗಿಳಿಯುವುದನ್ನು ಕಂಡು ವಿಸ್ಮಯಗೊಂಡಿದ್ದೇನೆ! ಯಾರಿಗೆ ಯಾವುದಿಲ್ಲವೋ ಸದಾ ಅದರದ್ದೇ ಚಿಂತೆ ಮನುಷ್ಯನಿಗೆನ್ನುವುದಕ್ಕೇ ಇದೊಂದು ಉದಾಹರಣೆ. ಕೇಶಪ್ರಿಯರು ವಯಸ್ಸನ್ನು ಬಚ್ಚಿಟ್ಟುಕೊಳ್ಳಲು ಮಾಡುವ ಅಚ್ಚರಿಗಳ ಕೇಶಾಲಂಕಾರದ ಆಡಂಬರವನ್ನು ನೋಡಿಯೇ ತಣಿಯಬೇಕು. ಮೆಹಂದಿ, ಕೃತಕ ರಾಸಾಯನಿಕ ಕಪ್ಪು ಬಣ್ಣಗಳು, ಶಾಂಪೂ, ಕಡಲೆಹಿಟ್ಟು, ನಿಂಬೆಹಣ್ಣು, ಅರಳೆಣ್ಣೆ, ಕೊಬ್ಬರಿಯೆಣ್ಣೆ, ಲವಳಸರ (ಅಲೊವೆರಾ) ಹೀಗೆ ಬಗೆ ಬಗೆಯ ಸುಗಂಧಭರಿತ ಚರ್ವಣಗಳೆಲ್ಲವೂ ಕೇಶಗಳ ನಿಜ ವಯಸ್ಸನ್ನು ಮುಚ್ಷಿಡಲು ಬಳಸುವ ಅದ್ಭುತ ಮದ್ದುಗಳೇ. ಕೇಶಗಳ ಆರೋಗ್ಯವೂ ಅಷ್ಟೇ ಮುಖ್ಯವೆಂದವರಿಗೆ ತರಹೇವಾರಿ ಪ್ರಸಾದನ ಸಾಧನಗಳು ಮಾರುಕಟ್ಟೆಯೊಳಗೆ ಕೈಬೀಸಿ ಕರೆಯುತ್ತವೆ.

ಬದುಕಿನ ತಾಪದೊಳಗೆ ಬೆಂದ ಕೇಶಗಳು ತಮ್ಮ ತಾರುಣ್ಯದ ಕಪ್ಪನ್ನು ಕಳೆದುಕೊಂಡು ಬೆಳ್ಳಿಯ ಎಳೆಗಳಂತಾಗಿ ಬೆಳಗುವುದರ ಆನಂದವನ್ನು ಸ್ವೀಕರಿಸುವುದನ್ಜು ಬಿಟ್ಟು, ಕೇಶಗಳಿಂದ ಹೊರಡುವ ಪ್ರಬುದ್ಧತೆಯ ಬೆಳಕಿಗೆ ವಿಮುಖವಾಗಿ ಕಪ್ಪು ತಮಂಧದ ಕಡೆಗೆ ಹೊರಳುತ್ತಿರುವುದರಲ್ಲಿ ಯಾವ ಜಿಜ್ಞಾಸೆಯಿದೆಯೋ ಗೊತ್ತಿಲ್ಲ. ಕವಿ ಚಂದ್ರಶೇಖರ ಪಾಟೀಲರು ತಮ್ಮ ಸೀನಿಯಾರಿಟಿ ಕುರಿತ ಪ್ರಬಂಧವೊಂದರಲ್ಲಿ ಬಿಳಿಗೂದಲು ಕೂಡ ಹೇಗೆ ಹಿರಿಯತನದ ಸಂಕೇತವಾಗಬಲ್ಲದು ಎಂಬುದನ್ನು ಚರ್ಚಿಸುತ್ತಾರೆ.

ಮನುಷ್ಯನ ಇಂತಹ ಮಾನಸಿಕ ದೌರ್ಬಲ್ಯಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ನಮ್ಮ ಮಾರುಕಟ್ಟೆಗಳು ದಿನಕ್ಕೊಂದರಂತೆ ಕೇಶಾಲಂಕಾರಕ್ಕೆಂದೇ ಕೋರ್ಸಗಳನ್ನು, ವೈವಿಧ್ಯಮಯ ಪದಾರ್ಥಗಳನ್ನು ಸೃಷ್ಟಿಸುತ್ತಿರುವುದು ನಿಗೂಢ ರಹಸ್ಯವೇನಲ್ಲ. ಸತ್ಯಂ ಶಿವಂ ಸುಂದರಂ ಆಗಬೇಕಾಗಿದ್ದ ಕೇಶಾಲಂಕಾರವೇ ಕ್ಲೇಶಾಲಂಕಾರವಾಗಿ ಬದಲಾಗುತ್ತಿರುವುದು ವಿಪರ್ಯಾಸವೇ ಸರಿ. ಇಂತಹ ಒಗ್ಗದ ಕೇಶಾಲಂಕಾರಕ್ಕಾಗಿಯೇ ದಿನಗಟ್ಟಲೇ ಪ್ರಯೋಗ ನಿರತರಾಗುವ ಫ್ಯಾಶನ್ ಲೋಕದ ಬೆಡಗಿಯರಿಗಿದು ಸಂಕ್ರಮಣದ ಕಾಲಘಟ್ಟ. ಕೇಶವಿನ್ಯಾಸವೂ ಕೂಡ ಕೌಶಲ್ಯವಾಗಿ, ಉದ್ಯಮವಾಗಿ, ಸ್ಥಾನಪಡೆಯುತ್ತಿರುವುದು ನಮ್ಮನ್ನಾಳುವ ಕೇಶರಾಣಿಯರಿಗೆ ಸಂದ ಜಯವೆಂದೇ ಹೇಳಬೇಕು.

ಹುಟ್ಟಿನಿಂದಲೇ ಜೊತೆಯಾಗಿ ಬರುವ ಕೇಶಗಳಿಗದೆಷ್ಟು ಗೌರವ ಅಂತೀರಿ. ಬಾಚಿದ್ದೇ ಬಾಚಿದ್ದು; ತೀಡಿದ್ದೇ ತೀಡಿದ್ದು; ಎಣ್ಣೆಯೊಳಗದ್ದಿ ಎರೆದಿದ್ದೇ ಎರೆದದ್ದು; ಕೃಷ್ಣಾವತಾರದ ಜಡೆಯನ್ನು ಹಾಕಿ ಫೋಟೋ ತೆಗೆಸಿದ್ದೇ ತೆಗೆಸಿದ್ದು. ಇದು ಕೆಲಸಮಯದವರೆಗೆ ಮಾತ್ರ. ಕೇಶರಾಶಿಯ ಸಲ್ಲದ ಆಟಾಟೋಪ ಹೆಚ್ಚಾದರೆ, ಅದಕ್ಕಾಗಿಯೇ ಜವಳ ತೆಗೆಯುವ ವಿಶೇಷ ಕಾರ್ಯಕ್ರಮವೊಂದು ನೆರವೇರಿಬಿಡುತ್ತದೆ ಸಾಮಾಜಿಕ ಸಮಾರಂಭವಾಗಿ.

‘ನಿಮ್ಮ ಯಾವ ಕಾಯಕದಲ್ಲಿಯೂ ಯಕಃಶ್ವಿತ ಪಾತ್ರವಿರದ ಈ ಕೇಶ ರಾಶಿಗೇ ಇಷ್ಟೊಂದು ಗೌರವ ಸಲ್ಲಬೇಕಾದರೆ, ಒಡಲು ವಹಿಸಿದ ವಿಭಿನ್ನ ಕರ್ತವ್ಯಗಳನ್ನು ಸದ್ದಿಲ್ಲದೇ ಸಂಪನ್ನಗೊಳಿಸುವ ನಮಗಿನ್ನೆಂತಹ ಗೌರವ ಸಲ್ಲಬೇಕಲ್ಲವೇ ಮನುಷ್ಯರಾಗಿ ಚಿಂತಿಸಿ’ ಎಂದು ನಮ್ಮ ದೇಹದ ಉಳಿದ ಅಂಗಗಳು ಬುದ್ಧಿವಾದ ಹೇಳಿದರೇನು ಮಾಡುವುದು ? ಇಂತಹ ಸಂದಿಗ್ಧತೆಯ ಸಂಕಟದಿಂದ ಮುಕ್ತನಾಗಲು ನಾನು ಬಸವಣ್ಣನವರ ‘ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನ ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ’ ಎಂದು ಹಾಡಿ ನ್ಯಾಯಕ್ಕಾಗಿ ದನಿಯೆತ್ತಿದ ಅಂಗಾಂಗಳನ್ನು ಸಮಾಧಾನಪಡಿಸಿದರಾಯಿತೆಂದುಕೊಂಡಿರುವೆ. ಇಷ್ಡಕ್ಕೇ ಸುಮ್ಮನಾದರೆ ಪರವಾಗಿಲ್ಲ.

ಈ ವಚನದಲ್ಲಿಯೂ ಕೇಶರಾಶಿಯನ್ನು ಹೊತ್ತ ಶಿರವನ್ನೇ ಹೊನ್ನ ಕಳಶವಾಗಿ ಹಾಡಿರುವುದರ ಅಂಗರಾಜಕಾರಣದ ವಿರುದ್ಧ ಅತೃಪ್ತ ಅಂಗಗಳು ಹೋರಾಟಕ್ಕಿಳಿದರೆ, ಊದುವುದನ್ನು ಕೊಟ್ಟು ಬಾರಿಸುವುದನ್ನು ತೆಗೆದುಕೊಂಡಂತಾಯಿತೇ ಬಾಳು ಎಂದು ಪರಿತಪಿಸುವುದೊಂದೇ ನನಗುಳಿದ ಹಾದಿ. ಅಂದ ಮೇಲೆ ಈ ಭುವನದ ಸರ್ವರೂ ಈ ಕೇಶ ಪಾಶ ಪ್ರಪಂಚದೊಳಗೆ ಬಂಧಿಯಾದವರೆ ಎಂಬ ಆದಿಕವಿ ಪಂಪನ ಮಾತು ಅದೆಷ್ಟು ಸತ್ಯವಲ್ಲವೇ ?

‍ಲೇಖಕರು Admin

September 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಬಸನಗೌಡ ಗೌಡರ ಗುಳೇದಗುಡ್ಡ

    ಕೇಶ ಪುರಾಣದ ವೈವಿಧ್ಯಮಯ ಜಲಕುಗಳು ನನಗೆ ದೇಶ ಸುತ್ತಿ ಬಂದಂತೆ ಅನುಭವ ನೀಡಿದವು ಗುರುಗಳೆ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಬಸನಗೌಡ ಗೌಡರ ಗುಳೇದಗುಡ್ಡCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: