‘ಬೆಳದಿಂಗಳ ಬಾಲೆ’ಗೆ 25

ಗೊರೂರ ಶಿವೇಶ

1970 ರ ಉತ್ತರಾರ್ಧ ಹಾಗೂ 1980ರ ಪೂರ್ವಾರ್ಧದ ದಿನಗಳು ದೂರದರ್ಶನ ಇನ್ನೂ ವ್ಯಾಪಕವಾಗಿ ಹರಡಿರಲಿಲ್ಲ .ಓದುಗರು ಅದರಲ್ಲೂ ಸ್ತ್ರೀಯರು ಪತ್ರಿಕೆಗಳಲ್ಲಿನ ಧಾರವಾಹಿಗಳಿಗೆ ಮತ್ತು ಸರ್ಕ್ಯುಲೇಟಿಂಗ್ ಲೈಬ್ರರಿಗಳಲ್ಲಿ ಕಾದಂಬರಿಗಳಿಗೆ ಮುಗಿ ಬೀಳುತ್ತಿದ್ದ ಸಂದರ್ಭ. ತರಾಸು, ಟಿಕೆ ರಾಮರಾವ್ ಕಾದಂಬರಿಗಳಿಗಿಂತ ಉಷಾ ನವರತ್ನರಾಮ್, ಹೆಚ್ ವಿ ರಾಧಾದೇವಿ, ಅಶ್ವಿನಿಯವರ ಕಾದಂಬರಿಗಳಿಗೆ ಬೇಡಿಕೆ. ಉಷಾ ನವರತ್ನರಾಂ ರವರ ಹೊಂಬಿಸಿಲು ,ಪ್ರೀತಿಸಿ ನೋಡು, ರಾಧಾ ದೇವಿಯವರ ಅನುರಾಗ ಅರಳಿತು, ಅಶ್ವಿನಿಯವರ ಮೃಗತೃಷ್ಣ ಕಾದಂಬರಿ ಕಾಮನಬಿಲ್ಲು ಆಗಿ ಬೆಸುಗೆ ,ಕಪ್ಪು ನಾಯಿ ಚಲನಚಿತ್ರವಾಗಿ ಈ ಲೇಖಕಿಯರು ತ್ರಿವೇಣಿ ವಾಣಿ ನಂತರದ ಕಾಲಘಟ್ಟದಲ್ಲಿ ಪ್ರಖ್ಯಾತವಾಗುತ್ತಿದ್ದ ಸಂದರ್ಭ. 

ಇದೇ ಸಂದರ್ಭದಲ್ಲಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಅಂಧಕಾರದಲ್ಲಿ ಸೂರ್ಯ ದೈನಿಕ ಧಾರವಾಹಿಯಾಗಿ ಬರಲಾರಂಭಿಸಿತು.  ತೆಲುಗು ಮೂಲದ ಈ ಕಾದಂಬರಿಯ ಲೇಖಕ ಯಂಡಮೂರಿ ವೀರೇಂದ್ರನಾಥ್. ಅದನ್ನು ರವಿಬೆಳಗೆರೆಯವರು ಕನ್ನಡಕ್ಕೆ ಅನುವಾದಿಸಿದರು. ಅನೇಕ ವೈಜ್ಞಾನಿಕ ವಿಚಾರಗಳನ್ನು ಒಳಗೊಂಡ ಕಾದಂಬರಿ ಕುತೂಹಲಕರವಾಗಿ ಮೂಡಿಬಂದಿತ್ತು. ಇದಾದ ಕೆಲವೇ ದಿನಗಳಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ‘ತುಳಸಿದಳ’ ಎಂಬ ಕಾದಂಬರಿ ಧಾರವಾಹಿಯಾಗಿ ಬಂದ ಎರಡು-ಮೂರು ವಾರಗಳಲ್ಲಿ ಅದೆಷ್ಟು ಮೋಡಿ ಮಾಡಿತೆಂದರೆ ನಮ್ಮ ಚಿಕ್ಕಪ್ಪನವರ ಮನೆಗೆ ಬರುತ್ತಿದ್ದ ಪ್ರಜಾಮತ ಪತ್ರಿಕೆಗಾಗಿ ಕಿತ್ತಾಟ ಆರಂಭವಾಗುತ್ತಿತ್ತು.

ಕೆಲವೇ ಗಂಟೆಗಳ ಕಡದ ರೂಪದಲ್ಲಿ ಬರುತ್ತಿದ್ದ ಆ ಪತ್ರಿಕೆಯನ್ನು ಕೆಲವೇ ಗಂಟೆಗಳಲ್ಲಿ ಓದಿ ಹಿಂದಿರುಗಿಸ ಬೇಕಾದ ಕಾರಣದಿಂದಾಗಿ ಒಟ್ಟಿಗೆ ನಾಲ್ಕೈದು ಜನರು ತಲೆಗೆ ತಲೆ ತಾಗಿಸಿ ಓದುತ್ತಿದ್ದ ಸಂದರ್ಭ. ಕೆಲವರು ಬೇಗಬೇಗನೆ ಓದಿ ಮುಗಿಸಿ ಪುಟ್ಟ ಮಗಚಲು ಹೋದಾಗ ಇನ್ನೂ ಪೂರ್ತಿ ಗೊಳಿಸಿದವರು ತಕರಾರು ತೆಗೆದು ಸಣ್ಣ ಮಟ್ಟದ ಘರ್ಷಣೆಯೂ  ನಡೆಯುತ್ತಿತ್ತು .

ತುಳಸಿ ಎಂಬ ಪುಟ್ಟ ಬಾಲಕಿ ಯ ಹೆಸರಿನಲ್ಲಿದ್ದ ಅಪಾರ ಆಸ್ತಿ, ಆಸ್ತಿಗಾಗಿ ಕಣ್ಣು ಹಾಕಿದ ಎರಡು ತಂಡಗಳು, ತುಳಸಿಯನ್ನು ಕೊಲ್ಲಲು ಒಂದು ತಂಡ ಮಾಟ ಮಂತ್ರ ವನ್ನು, ಇನ್ನೊಂದು ತಂಡ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡು  ಪುಟ್ಟ ಬಾಲಕಿಯ ಮೇಲೆ ಮಾಡುವ ಪ್ರಯೋಗಗಳು ಇಡೀ ಕಾದಂಬರಿಯ ವಸ್ತು. ಮಾಟ -ಮಂತ್ರ ,ವಿಜ್ಞಾನದ ಮುಖಾಮುಖಿಯಾದ ಈ ಧಾರವಾಹಿ ಅದರ ರೋಚಕತೆ, ಕಾಶ್ಮೋರ ತಂತ್ರದ  ಪ್ರಯೋಗ ಓದುಗರಿಗೆ ಗುಂಗನ್ನು ಹಿಡಿಸಿ ಪ್ರಜಾ ಮತವನ್ನು ಕಾಯುವಂತೆ ಮಾಡಿತ್ತು. ಇದರ ಮುಂದಿನ ಭಾಗವೇ ತುಳಸಿ.

ಇದು ಸಹ ಅಷ್ಟೇ ಯಶಸ್ಸನ್ನು ಸಾಧಿಸಿದಾಗ ಉಳಿದ ವಾರಪತ್ರಿಕೆಗಳು ಎಂಡಮೂರಿ ವೀರೇಂದ್ರನಾಥರ ಕಾದಂಬರಿಗಳಿಗೆ ಪೈಪೋಟಿ ನಡೆಸಿದ ಪರಿಣಾಮ ಸುಧಾ ತರಂಗ ಪತ್ರಿಕೆಗಳಲ್ಲೂ ಅವರ ಕಾದಂಬರಿಗಳು ಧಾರವಾಹಿಯಾಗಿ ಪ್ರಕಟವಾದವು ಪರಿಣಾಮ ಕನ್ನಡ ಅನುವಾದಕರಾದ  ವಂಶಿ ,ರಾಜಾ ಚೆಂಡೂರ್ ,ಯತಿರಾಜ ವೀರಾಂಬುಧಿ ,ಬೇಲೂರು ಕೃಷ್ಣಕುಮಾರ್ರಂತಹ ಅನುವಾದಕರು ಪ್ರಸಿದ್ಧಿ ಪಡೆದರು.

ಯಂಡಮೂರಿ  ವೀರೇಂದ್ರನಾಥ್ ಅವರ ಕಾದಂಬರಿಗಳನ್ನು ಪಡೆಯಲಾಗದವರು ಇತರೆ ತೆಲುಗು ಕಾದಂಬರಿಕಾರರಾದ ಮಲ್ಲಾದಿ ವೆಂಕಟಕೃಷ್ಣಮೂರ್ತಿ, ರಾಮದೇವರ ಸೂರ್ಯ ಮೋಹನರಾವ್ ಕಾದಂಬರಿಗಳನ್ನು ಕನ್ನಡಕ್ಕೆ ತಂದರು . ಮಲ್ಲಾದಿ ವೆಂಕಟ ಕೃಷ್ಣಮೂರ್ತಿಯವರ ಎರಡು ಕಾದಂಬರಿಗಳು ಗಣೇಶನ ಮದುವೆ, ಗೌರಿ ಗಣೇಶ ಚಲನಚಿತ್ರವಾಗಿಯೂ ಜನಪ್ರಿಯಗೊಂಡವು.  ಆದರೆ ಕಾದಂಬರಿಯಾಗಿ ಜನಪ್ರಿಯಗೊಂಡ ತುಳಸಿದಳ ಚಲನಚಿತ್ರವಾಗಿ ವೈಫಲ್ಯವನ್ನು ಸಾಧಿಸಿದ್ದು ವಿಶೇಷ.


ಏಕಕಾಲಕ್ಕೆ ಜನಪ್ರಿಯ ಕನ್ನಡ ವಾರಪತ್ರಿಕೆಗಳಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರ ಪ್ರಕಟಗೊಳ್ಳುತ್ತಿದ್ದ ಕಾರಣ ಎಸ್ ಪಿ ಬಾಲಸುಬ್ರಹ್ಮಣ್ಯಂ ರೀತಿ ಯಂಡಮೂರಿವೀರೇಂದ್ರನಾಥ್ ತೆಲುಗುನಷ್ಟೇ ಕನ್ನಡದಲ್ಲಿ ಜನಪ್ರಿಯತೆಯನ್ನು ಸಾಧಿಸಿದರು. ಅವರ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಪ್ರಕಟಗೊಂಡ ಅವರ ಮತ್ತೊಂದು ಕಾದಂಬರಿ ‘ಬೆಳದಿಂಗಳ ಬಾಲೆ’ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಕಾದಂಬರಿ ಸಂದರ್ಭಕ್ಕೆ ಜನರನ್ನು ಮಂತ್ರಮುಗ್ಧರನ್ನಾಗಿಸಿತ್ತು

ರೇವಂತ್ ಎಂಬ ಅಂತರಾಷ್ಟ್ರೀಯ ಚೆಸ್ ಗ್ರಾಂಡ್ ಮಾಸ್ಟರ್ ಪ್ರಶಸ್ತಿ ಗೆದ್ದರೂ ಕ್ರಿಕೆಟ್ ಪ್ರಧಾನವಾಗಿರುವ ಭಾರತದಲ್ಲಿ ಚೆಸ್ ಆಟಕ್ಕೆ ಅವನಿಗೆ ಸಿಗದ ಮಾನ್ಯತೆ ಯಿಂದಾಗಿ ನಿರಾಶೆಗೊಂಡ ಸಂದರ್ಭ .ಆತನಿಗೆ ಬರುವ ಯುವತಿಯ ಮಧುರ ದನಿಯ ದೂರವಾಣಿ ಕರೆ ಅಭಿನಂದನೆಯನ್ನು ಸಲ್ಲಿಸುವುದರ ಜೊತೆಗೆ ಅವನಿಗಾಗಿರುವ ನಿರಾಸೆಯನ್ನು ಹೋಗಲಾಡಿಸಲು ಸಾಂತ್ವನ ಹೇಳುತ್ತದೆ. ಪರಿಚಯವನ್ನು ಮಾಡಿಕೊಳ್ಳುವ ಉಮೇದಿನಿಂದ ಹೆಸರನ್ನು ಕೇಳಿದಾಗ ಆಕೆ ನೇರವಾಗಿ ಹೆಸರನ್ನು ಹೇಳದೆ ಪದಬಂಧದ ರೂಪದಲ್ಲಿ ತಿಳಿಸಿ ಹೆಸರನ್ನು ಕಂಡುಹಿಡಿಯುವ ಚಾಲೆಂಜ್ ನೀಡುತ್ತಾಳೆ. 

ಹೀಗೆ ಅವರಿಬ್ಬರ ನಡುವೆ ಉಂಟಾಗುವ ಅನುರಾಗದ ಪಂದ್ಯ ಒಂದು ತಿಂಗಳಿನ ಅಂತ್ಯದೊಳಗೆ ತನ್ನ ಹೆಸರು ಹಾಗೂ ವಿಳಾಸವನ್ನು ಪತ್ತೆ ಹಚ್ಚುವ ಸ್ಪರ್ಧೆಯಾಗಿ ಮಾರ್ಪಡುತ್ತದೆ . ಪಂದ್ಯದಲ್ಲಿ ಗೆಲುವನ್ನು ಸಾಧಿಸುವ ನಿಟ್ಟಿನಲ್ಲಿ ರೇವಂತ್ ಬಳಸುವ ಜಾಣ್ಮೆ ,ಚಾಕಚಕ್ಯತೆ ಯಶಸ್ಸು ದಕ್ಕಿತ್ತು ಎನ್ನುವಾಗ ಕೊನೆಯ ನ ನಿಮಿಷದ ವೈಫಲ್ಯ.. ಇಡೀ ಕಾದಂಬರಿಯನ್ನು ಲವಲವಿಕೆಯಿಂದ ಕುತೂಹಲಕಾರಿಯಾಗಿ ಬೆಳೆಸುತ್ತ ಸಾಗುತ್ತದೆ .

ಅಲ್ಲಿ ಬರುವ ಪೈಥಾಗೊರಸನ ಪ್ರಮೇಯ,  ಟ್ರಿಗ್ನಾಮೆಟ್ರಿ ತಂತ್ರಗಳು ..ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಓದಿರಬಹುದಾದ ಆ ತತ್ವ ಪ್ರಮೇಯಗಳನ್ನು ನೆನಪಿಸುತ್ತದೆ. ಕೊನೆಗೆ ರೇವಂತ್ ಆ ಪಂದ್ಯವನ್ನು ಗೆಲ್ಲುವನೇ?  ನಾಯಕ-ನಾಯಕಿಯರು ಒಂದಾಗುವರೇ? ಎಂಬ ಅಂಶ ಚಿತ್ರದ ಕ್ಲೈಮ್ಯಾಕ್ಸ್ .ಧಾರವಾಹಿಯನ್ನು ಓದುವಾಗ ಕೊನೆ ಯಾವ ರೀತಿ ಮುಕ್ತಾಯವಾಗುತ್ತದೆ ಎಂಬುದರ ಅರಿವಿಲ್ಲದೆ  ಚಡಪಡಿಸುತ್ತಿದ್ದ ನನಗೆ ನನ್ನ ಚಿಕ್ಕಪ್ಪನ ಮಗ ಪಟ್ಟಾಭಿ ಮೂಲಕ ಅವರ ಪಕ್ಕದ ಮನೆಯ ತೆಲುಗು ಆಂಟಿ ತೆಲುಗಿನಲ್ಲಿ ಆ ಕಾದಂಬರಿಯನ್ನು ಮೊದಲೇ ಓದಿದ ಪರಿಣಾಮ ನನಗೂ ಲೀಕ್ ಆಗಿತ್ತು. ತುಂಬಾ ಕಾವ್ಯಾತ್ಮಕವಾಗಿ ಮೂಡಿಬಂದ ಕಾದಂಬರಿ ಅಂತ್ಯದ ಹ್ಯಾಂಗೋವರ್ನಿಂದ ಬಿಡುಗಡೆ ಹೊಂದಲು ಒಂದೆರಡು ವಾರವೇ ಬೇಕಾಗಿತ್ತು. 

ಮುಂದೆ ಈ ಕಾದಂಬರಿ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತದೆ ಎಂಬ ಚಿತ್ರದ ಜಾಹೀರಾತು ಮತ್ತೊಮ್ಮೆ ಕುತೂಹಲ ತೆರಳುವಂತೆ ಮಾಡಿತ್ತು.ಯಂಡಮೂರಿ ವೀರೇಂದ್ರನಾಥರ ಅನೇಕ ಕಾದಂಬರಿಗಳು ಅಷ್ಟರಲ್ಲಾಗಲೇ ಚಲನಚಿತ್ರ ವಾಗಿದ್ದರೂ ಯಾವುವು ಅಂತಹ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿರಲಿಲ್ಲ. ಆ ಕಾಲದ ತೆಲುಗಿನ ಪ್ರಖ್ಯಾತ ನಟ ಚಿರಂಜೀವಿ ಹಾಕಿಕೊಂಡು ಸ್ವತಃ ಯಂಡಮೂರಿ ‌ ನಿರ್ದೇಶಿಸಿದ ಸ್ಟುವರ್ಟ್ ಪುರಂ ಪೊಲೀಸ್ ಸ್ಟೇಷನ್ ಕೂಡ ಅಂತಹ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲಿಲ್ಲ. ಇತರ ಯಾವುದೇ ಭಾಷೆಗಳಲ್ಲೂ ಮಾಡದ ಸಾಹಸವನ್ನು ಸುನಿಲ್ ಕುಮಾರ್ ದೇಸಾಯಿಯವರು ಕನ್ನಡದಲ್ಲಿ ಮಾಡಿದ್ದರು.

ತರ್ಕ, ನಿಷ್ಕರ್ಷ  ಮುಂತಾದ ಅರ್ಕಾವತ್ತು ಚಿತ್ರಗಳಿಗೆ  ಪ್ರಸಿದ್ಧಿ ಹೊಂದಿದ್ದ ಇಂಜಿನಿಯರಿಂಗ್ ಪದವಿ ಪಡೆದಿದ್ದ ದೇಸಾಯಿಯವರರು ಈ ಚಿತ್ರವನ್ನು ಹೇಗೆ ನಿರ್ದೇಶಿಸುತ್ತಾರೆ ಎಂಬ ವಿಚಿತ್ರ ಕುತೂಹಲ ನನ್ನಲ್ಲಿತ್ತು.  ಚಿತ್ರದುದ್ದಕ್ಕೂ ನಾಯಕಿಯ ನೇರ ಪರಿಚಯ ಮತ್ತು ತೆರೆಯ ಮೇಲೆ ಆಕೆಯ ಪ್ರಸ್ತುತಿ ಆಗದ ಸಿನಿಮಾ ಹೇಗೆ ಮೂಡಿ ಬಂದೀತು? ಎಂಬುದು ನಮ್ಮ ಕುತೂಹಲ .ಚಿತ್ರದ ನಾಯಕನಾಗಿ ನಾಲ್ಕು ಭಾಷೆಗಳಲ್ಲಿ ಪ್ರಸಿದ್ಧಿಯಾಗಿದ್ದ ಕಮಲಾ ಹಾಸನ್  ಆರಂಭದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ ಅವರ ದುಬಾರಿ ಸಂಭಾವನೆ ಕಾರಣದಿಂದಾಗಿ ಅನಂತ್ ನಾಗ್ ರವರಿಗೆ  ಅಪಾತ್ರ ದೊರೆಯಿತು ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. 

ಚಿತ್ರದ ಚಿತ್ರೀಕರಣದ ಸುದ್ದಿ ಬರುತ್ತಿದ್ದ ಬರುತ್ತಿದ್ದರೂ ಬಿಡುಗಡೆಯಾಗಿದ್ದು ತುಂಬಾ ತಡವಾಗಿ .ಅಂತೂ ಇಂತೂ ಚಿತ್ರ 1995ರ ಗಣೇಶ ಹಬ್ಬದ ಆಸುಪಾಸಿನಲ್ಲಿ ಚಿತ್ರ ಬಿಡುಗಡೆಯಾದ ನೆನಪು . ಮೊದಲ ದಿನವೇ ನೋಡಲೇಬೇಕೆಂಬ ಉಮೇದಿನಿಂದ ಜೊತೆಗೆ ಪತ್ನಿಯನ್ನು ಜೊತೆ ಮಾಡಿಕೊಂಡು ನಮ್ಮೂರಿಂದ ಹೊರಟಾಗ ,ಸುದ್ದಿ ತಾಯಿಯ ಕಿವಿಗೆ ಬಿದ್ದು ಆಕೆ ತನ್ನ ಅತ್ತೆತನವನ್ನು  ಚಲಾಯಿಸಿ ಮನೆಯಲ್ಲಿ  ಘರ್ಷಣೆ ನಡೆದು ಅಕ್ಕನ ಮಕ್ಕಳ ಮಧ್ಯಪ್ರವೇಶದಿಂದ ಅಂತೂ ಅವರೆಲ್ಲರೂ ಒಟ್ಟಾಗಿ ಕೊನೆಯ ಗಳಿಗೆಯಲ್ಲಿ ಸಿನಿಮಾಕ್ಕೆ ಹೊರಟ ನೆನಪು ಹಸಿಯಾಗಿದೆ.  

ಕಾದಂಬರಿಯ ಪ್ರಸಿದ್ಧಿಯಿಂದಾಗಿ ಟಿಕೆಟ್ ಸಿಗುತ್ತದೆಯೋ ?ಇಲ್ಲವೋ ?ಎಂದು ಚಿತ್ರಮಂದಿರದೊಳಗೆ ಕಾಲಿರಿಸಿದರೆ ಚಿತ್ರದ ಮುಂದೆ ಅಂತಹ ಜನಸಂದಣಿಯೇ ಇಲ್ಲ. ಅರೇ ಅಂತಹ ಪ್ರಸಿದ್ಧ ಕಾದಂಬರಿಗೆ ಇಂತಹ ನೀರಸಾತ್ಮಕ ಪ್ರತಿಕ್ರಿಯೆಯೇ? ಎನಿಸಿತು. ಸಹ್ಯಾದ್ರಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಚಿತ್ರಕ್ಕೆ ಮೊದಲ ದಿನವೇ ಸಾಧಾರಣ ಎನ್ನುವ ಜನಸಂದಣಿ ನೋಡಿದಾಗ ಈ ಕ್ಷಣಕ್ಕೆ ಯೋಚಿಸಿದರೆ ಆ ಕಾಲಕ್ಕೆ ಅಪರೂಪವೆನಿಸುವ  ಪರಸ್ಪರ ಎದುರಾಗದ ನಾಯಕ-ನಾಯಕಿ.

ಇಡೀ ಚಿತ್ರವೇ ಸಂಭಾಷಣೆಯ ಮೇಲೆ ಚಲಿಸುವ ಜೊತೆಗೆ ವಿಜ್ಞಾನ ,ಗಣಿತಗಳ ಪ್ರಮೇಯ, ವ್ಯಾಖ್ಯಾನಗಳ ಮೂಲಕ ಮುಂದುವರೆಯುವ ಚಿತ್ರ ಆ ಕಾಲಕ್ಕೆ ಅಂದಿನ ಸಿನಿಮಾ ವೀಕ್ಷಕರಿಗೆ ಸಾಕಷ್ಟು ರುಚಿಸಿರಲಾರದು ಎನಿಸದಿರದು. ಚಿತ್ರದುದ್ದಕ್ಕೂ ಮೂಡುವ ಟೆಲಿಫೋನ್ ರಿಂಗಣ, ಹಿನ್ನೆಲೆಯಲ್ಲಿ ಮೂಡಿಬಂದ ಮಂಜುಳಾ ಗುರುರಾಜ್ ಅವರ ಮಂತ್ರಮುಗ್ಧಗೊಳಿಸುವ ಧ್ವನಿ, ಅನಂತ್ ನಾಗ್ ರವರ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆ.

ಚಿತ್ರ ಬಿಡುಗಡೆಯಾದ ಒಂದೆರಡು ವಾರಕ್ಕೆ ಹಾಸನದ ಥಿಯೇಟರ್ನಿಂದ ಮಾಯವಾಗಿದ್ದು ನಿರಾಸೆಯನ್ನುಂಟು ಮಾಡಿತ್ತು. ಮಲ್ಟಿಪ್ಲೆಕ್ಸ್  ಚಿತ್ರಮಂದಿರಗಳ ಸಂದರ್ಭದಲ್ಲಿ ಬಿಡುಗಡೆಯಾಗಿದ್ದರೆ ಆ ಚಿತ್ರ ಅಪಾರ ಯಶಸ್ಸನ್ನು ಪಡೆಯುತ್ತಿತ್ತು ಎಂಬುದಂತೂ ನಿಜ. ತಮಿಳು ತೆಲುಗಿನ ಯಾವ ನಿರ್ದೇಶಕರು ಪ್ರಯತ್ನಪಡದ ಈ ಕಥಾವಸ್ತುವನ್ನು ನಿಭಾಯಿಸಿ ಸುನಿಲ್ ಕುಮಾರ್ ದೇಸಾಯಿ ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದರು .ತನ್ನ ಧ್ವನಿಗಾಗಿ ಮಂಜುಳ ಗುರುರಾಜರವರಿಗೆ ಹಾಗೂ ಚಿತ್ರಕ್ಕೆ  ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ  ಆ ವರ್ಷ ಸಂದಿತು.

ವಿಶೇಷವೆಂದರೆ ಇದೇ ಚಿತ್ರಕತೆ ಮಾರ್ಪಡಿಸಿ ತಮಿಳಿನಲ್ಲಿ ಕಾದಲ್ ಕೋಟೆ ಆಗಿ ನಂತರ ಕನ್ನಡಕ್ಕೆ ರಿಮೇಕ್ ಆಗಿ ಯಾರೆನೀನುಚೆಲುವೆ ಹೆಸರಿನಲ್ಲಿ ರವಿಚಂದ್ರನ್ ನಾಯಕತ್ವದಲ್ಲಿ ಚಿತ್ರೀಕರಣಗೊಂಡು ಬಿಡುಗಡೆಯಾಗಿ ನೂರು ದಿನ ಯಶಸ್ವಿ ಪ್ರದರ್ಶನ ಕಂಡಿದ್ದಲ್ಲದೇ ಗಲ್ಲಾ ಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡಿತು .ಮುಂದೆ ಸುನಿಲ್ ಕುಮಾರ್ ದೇಸಾಯಿ ಅನೇಕ ಚಿತ್ರಗಳನ್ನು ನಿರ್ದೇಶಿಸಿದರೂ ಅವರ ಎಲ್ಲಾ ಚಿತ್ರಗಳಲಿ ಇದು ನನ್ನ  ಆಲ್ ಟೈಮ್ ಫೇವರಿಟ್ ಚಿತ್ರ .

ಚಿತ್ರ ಬಿಡುಗಡೆಯಾದಾಗ ಯಶಸ್ಸು ಸಾಧಿಸ ದ್ದರೂ ಕಾಲಾಂತರದ ಪರೀಕ್ಷೆಯಲ್ಲಿ ಪ್ರೇಕ್ಷಕರ ಮನ ಗೆದ್ದು ನಿಲ್ಲುವ ಚಿತ್ರಗಳಿಗೆ ಕಲ್ಟ್ ಕ್ಲಾಸಿಕ್ ಸಿನಿಮಾಗಳೆಂದು  ಹೆಸರು. ಅಂತಹ ಸಿನಿಮಾಗಳ ಸಾಲಿಗೆ ಬಹುನಿರೀಕ್ಷೆಯ  ನಂತರ ವೈಫಲ್ಯ ಕಂಡು ಮುಂದೆ ಕ್ಲಾಸಿಕ್ ಪಟ್ಟ ಪಡೆದ ಮುತ್ತಿನ ಹಾರ ಚಿತ್ರದ ಜೊತೆಗೆ ಈ ಚಿತ್ರವನ್ನು ಸೇರಿಸಬಹುದು .ಈ ಚಿತ್ರ ಬಿಡುಗಡೆ  25 ವರ್ಷಗಳು ಸಂದಿವೆ.  ಯೂಟ್ಯೂಬ್ ನಲ್ಲಿ ಲಭ್ಯವಿರುವ ಚಿತ್ರವನ್ನು ನೋಡಿದರೆ ಖಂಡಿತಾ ಅದು ನಿಮ್ಮನ್ನು ನಿರಾಸೆಗೊಳಿಸಲಾರದು

‍ಲೇಖಕರು Avadhi

September 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. T S SHRAVANA KUMARI

    ನಾನೂ ಬೆಳದಿಂಗಳ ಬಾಲೆಗಾಗಿ ಹೀಗೇ ಒದ್ದಾಡಿದವಳೇ. ಸವಿನೆನಪು ಮರುಕಳಿಸಿತು.

    ಪ್ರತಿಕ್ರಿಯೆ
  2. Vasundhara k m

    ನನ್ನ ನೆಚ್ಚಿನ ಚಲನಚಿತ್ರ.. ಬರಹ ಚೆಂದಿದೆ.

    ಪ್ರತಿಕ್ರಿಯೆ
  3. Gorurshivesh

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ GorurshiveshCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: