ಬಿ ವಿ ಭಾರತಿ ಕೇಳಿದ್ದು: ನಾನು ಮತ್ತು ಶಬನಾ ಈಗ ಅದೆಷ್ಟೊಂದು ಬದಲಾಗಿದ್ದೇವೆ ಗೊತ್ತೇ?

ಬಿ ವಿ ಭಾರತಿ

ಆಗ, ಅಂದರೆ ಹಿಂದೆ,
ಅಂದರೆ ಬಹಳ ಹಿಂದೆ
ಸೀರೆಯುಡುವ ವಯಸ್ಸಿಗೆ ಕಾಲಿಟ್ಟಾಗ
ಗರಿಗರಿ ಗಂಜಿ ಹಾಕಿದ
ಹತ್ತಿಯ ಸೀರೆಗಳೆಂದರೆ
ಮೋಹ ಹುಟ್ಟಲು ಕಾರಣ
ಶಬಾನಾಳೆಂದರೆ ನೀವು ನಂಬಬೇಕು!
ಅವಳ ಎದೆಸೆಟೆಸಿ ನಡೆವ ಗತ್ತು
ಚಟಪಟ ಹೆಜ್ಜೆ ಹಾಕುವ ಶೈಲಿ
ತೀರಾ ಸುಂದರಿಯಲ್ಲದ ಹೆಚ್ಚುವರಿ ‘ಅರ್ಹತೆ’
ಅವಳಲ್ಲಿನ ಆತ್ಮವಿಶ್ವಾಸದ
ಜೊತೆಜೊತೆಗೆ ಹತ್ತಿಯ ಗರಿಗರಿ ಸೀರೆ
ಅತ್ತಿತ್ತ ಅಲುಗಾಡದ ಗೆರೆಕೊರೆದಂಥ ನೆರಿಗೆ
ಸೆರಗನ್ನು ಅಲಕ್ಷ್ಯದಿಂದ ಹೊದೆವ ರೀತಿ…
ಕಾಟನ್ ಸೀರೆಯ ಮೇಲಿನ ಮೋಹಕ್ಕೆ
ಇಷ್ಟು ಕಾರಣ ಸಾಲದೇ!

ಹಾಗಾಗಿಯೇ ಇದ್ದಬದ್ದ ಹಣ ಸೇರಿಸಿ
ಕಾಟನ್ ಸೀರೆಗಳನ್ನು ಕೊಂಡು
ಮೈದಾ ಹಿಟ್ಟಿನಿಂದ ಗಂಜಿ ತಯಾರಿಸಿ
ಸೀರೆಗಳನ್ನದ್ದಿ ಒಣ ಹಾಕಿ ಸಂಜೆಯಾಗುವುದರಲ್ಲಿ
ರಟ್ಟಾದ ಸೀರೆಗೆ
ಇಸ್ತ್ರಿ ಭಾಗ್ಯ ಕರುಣಿಸಿ
ಹ್ಯಾಂಗರಿಗೆ ನೇತು ಹಾಕುವಾಗಲೇ
ಕಣ್ಣೆದುರು ಶಬಾನಾ
ಗತ್ತಿನಿಂದ ಗಸ್ತು ಹೊಡೆಯಲಾರಂಭಿಸುತ್ತಿದ್ದಳು!

ಮತ್ತೆ ಯಾವತ್ತೋ ಅದನ್ನುಡುವ
ಅವಕಾಶಕ್ಕಾಗಿ ಕಾದು
ಇದ್ದ ಮೂರು ರವಿಕೆಯಲ್ಲಿ
ಇದ್ದಿದ್ದರಲ್ಲಿ ಸರಿಹೊಂದುವ ಒಂದನ್ನು ಧರಿಸಿ
ಉಡುವ ಸಂಭ್ರಮದ ತಯಾರಿಯಲ್ಲಿರುವಾಗಲೇ
ಅಲ್ಲಲ್ಲಿ ಅಂಟಿದ್ದ ಗಂಟುಗಂಟು ಗಂಜಿ
ಗಮನಕ್ಕೆ ಬರುತ್ತಿದ್ದುದು ಮತ್ತು
ಇದಕ್ಕಿಂತ ದೊಡ್ಡ ದುಃಸ್ವಪ್ನವೆಂದರೆ
ನೆರಿಗೆ ತೆಗೆಯಲು ಹೊರಟಾಗ
ಅದು ಕೊಡುತ್ತಿದ್ದ ಕಾಟ!
ಯಾವ ನೆರಿಗೆಯೂ
ಹೇಳಿದ ಮಾತು ಕೇಳದೇ
ಹಠಮಾರಿಯಾಗಿ ತನ್ನಷ್ಟಕ್ಕೆ ತಾನು
ಒರಟೊರಟಾಗಿ ನಿಂತು
ಬಾಗಿ ನಿಂತು ಎರಡು ಬೆರಳಿನಿಂದ ತೀಡಿ
ನೇರ್ಪಾಗಿಸುವ ಎಲ್ಲ ಪ್ರಯತ್ನವನ್ನು
ಹಾಳುಗೆಡವಿ ಮುಖದಿರುವಿದಾಗ,
ಸೊಂಟದ ಬಳಿ ಸೆಕೆಗೆ
ಹಾಕಿದ್ದ ಗಂಜಿ ಕರಗಿದಂತಾಗಿ
ಕೊನೆಗೆ ಸೀರೆಯನ್ನು ಬಿಚ್ಚಿ ಬಿಸುಟು
ಕೈಗೆ ಸಿಕ್ಕಿದ ಚೂಡಿದಾರ್ ಧರಿಸಿ ಓಡುವಾಗ
ಶಬನಾಳ ಮೇಲೆ ಸಿಟ್ಟೇರುತ್ತಿತ್ತು –
ಇವಳು ಮಾತ್ರ ಅಷ್ಟು ಚೆಂದಕ್ಕೆ
ಕಾಟನ್ ಸೀರೆ ಧರಿಸುತ್ತಾಳೆ ಮಳ್ಳಿ ಎಂದು!

ಕಾಲದ ತಿರುಗಣೆಯಲ್ಲಿ ಸಿಲುಕಿದ
ನಾನು ಮತ್ತು ಶಬನಾ
ಈಗ ಅದೆಷ್ಟೊಂದು ಬದಲಾಗಿದ್ದೇವೆ ಗೊತ್ತೇ?
ಎದೆ ಸೆಟೆಸಿ ಚಟಪಟಿಸುತ್ತಿದ್ದ
ಶಬನಾಳ ಕುತ್ತಿಗೆಯಲ್ಲೀಗ
ಅಸಂಖ್ಯಾತ ಸುಕ್ಕು, ಮೆತ್ತಗಾಗಿದ್ದಾಳೆ
ಮತ್ತು
ಗರಿಮುರಿ ಸೀರೆಗಳನ್ನು ಮೋಹಿಸುತ್ತಿದ್ದ ನಾನು
ಮೃದು ಲಿನೆನ್ ಸೀರೆಯ
ಕಡು ಮೋಹಕ್ಕೆ ಬಿದ್ದಿದ್ದೇನೆ
ನನಗೀಗ ಸೀರೆ ಗರಿಮುರಿಯದಕ್ಕಿಂತ
ಎದೆಗಪ್ಪುವಷ್ಟು ಮೃದುವಾದದ್ದೇ ಹಿತ,
ಪ್ರೀತಿಯೂ ಹಾಗೆಯೇ….

‍ಲೇಖಕರು avadhi

July 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Akshata krishnmurthy

    ಇಷ್ಟವಾದ ಗರಿಗರಿ ಕವಿತೆ.ಭಾರತಿ ಮ್ಯಾಡಂ

    ಪ್ರತಿಕ್ರಿಯೆ
  2. T S SHRAVANA KUMARI

    ಭಾರತಿಯವರ ಪ್ರಸ್ತುತಿಗಳು ಯಾವಾಗಲೂ ಚಂದ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Prajna MattihalliCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: