ಬಾಡೂಟ ಮಾಡಿದ್ರೆ ತಪ್ಪೇನು?

ಸಾಹಿತ್ಯ ಪರಿಷತ್ ಭವನದಲ್ಲಿ ‘ಕೊರಬಾಡು ಮೇಳ’ ನಡೆಸಿದರೆ ತಪ್ಪೇನು..

ನಾಗರಾಜ್ ಹೆತ್ತೂರು

‘ಚಲನೆಯನ್ನು ಒಪ್ಪಿಕೊಳ್ಳದ ಧರ್ಮ ಅಥವಾ ವ್ಯಕ್ತಿ ಇದ್ದೂ ಸತ್ತಂತೆ’ ಇದನ್ನು ಬುದ್ದ ಯಾವತ್ತೋ ಹೇಳಿದ್ದಾನೆ. ಚಲನೆ ಎಂದರೆ ನಿಂತ ನೀರಾಗದೆ ಸದಾ ನಿರಂತರವಾಗಿರುವುದು. ಈ ಕಾರಣಕ್ಕಾಗಿ ನಮ್ಮ ಚಿತ್ರ ಕಲಾವಿದರಾದ ಕೆಟಿ ಶಿವಪ್ರಸಾದ್ ಸದಾ ಹೇಳುತ್ತಿರುತ್ತಾರೆ ಚಲನೆ ಇಲ್ಲದ ಧರ್ಮ ಅಥವಾ ವ್ಯವಸ್ಥೆ ಸತ್ತು ಕೊಳೆತು ನಾರುತ್ತಿರುತ್ತವೆ ಅದರಿಂದ ಹೊರಗೆ ಬನ್ನಿ ಎಂದು.

ಈ ಮಾತನ್ನು ನೆನಪಿಸಿಕೊಳ್ಳಲು ಕಾರಣವಿಷ್ಟೆ. ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಕಳೆದ ವಾರ ನಡೆದ ಜಾನಪದ ಜಿಲ್ಲಾ ಪರಿಷತ್ ಘಟಕ ಉದ್ಘಾಟನೆ ಸಂಬಂಧ ಜಿಲ್ಲಾ ಪರಿಷತ್ ಆವರಣದಲ್ಲಿ ಹಂದಿ ಮಾಂಸ ಹಾಗೂ ಇತರೆ ಖಾದ್ಯಗಳನ್ನು ಬೇಯಿಸಿ ಪ್ರದರ್ಶನ ಮತ್ತು ಮಾರಾಟ ಮಾಡಿದ ಬಗ್ಗೆ ಚರ್ಚೆ-ವಾಗ್ವಾದ ನಡೆಯುತ್ತಿದೆ. ಕೆಲವರು ಅಯ್ಯೊಯ್ಯೋ…. ಸಾಹಿತ್ಯ ಪರಿಷತ್ ಭನದ ಮೈಲಿಗೆಯಾಯಿತು ಇನ್ನು ಸಾಹಿತ್ಯ ಪರಿಷತ್ ಬಾರ್ ,ಬಾರ್ ಅಂಡ್ ರೆಸ್ಟೋರೆಂಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಬಾಡೋಟಕ್ಕೆ ಎಡೆ ಮಾಡಿಕೊಟ್ಟಿದ್ದು ಮಹಾಪಾಪ ಎಂದು ಬೊಬ್ಬೆ ಹಾಕುತ್ತಿದ್ದಾರೆ.

ಹಾಗೆ ನೋಡಿದರೆ ರಾಜ್ಯಮಟ್ಟದಲ್ಲೇ ಇದೊಂದು ದೊಡ್ಡ ಬೆಳವಣಿಗೆ. ಈಗಾಗಲೇ ಈ ಬೆಳವಣಿಗೆ ಬಗ್ಗೆ ಹಂದಿ ಮಾಂಸದೂಟ ಅಲ್ಲದೇ ದನದ ಮಾಂಸಕ್ಕೂ ಅವಕಾಶ ಮಾಡಿಕೊಡಬೇಕಿತ್ತು. ಸಂಘಟಕರು ದನದ ಮಾಂಸ ದೂರ ಇಟ್ಟಿದ್ದರ ಬಗ್ಗೆ ಅಕ್ಷೇಪಣೆ ಎತ್ತಿದ್ದೆವು. ಬಹುಶಃ ಸಂಘಟಕರು `ಕೊರಬಾಡು’ ಹೆಸರು ಕೇಳಿಯೇ ಯಾಕಪ್ಪಾ ಬೇಕು ಈ ದಲಿತರ-ಮುಸ್ಲಿಂ-ಕ್ರಿಶ್ಚಿಯನ್ನರ ಸಹವಾಸ ಎಂದು ಸುಮ್ಮನಾಗಿರಬಹುದು.

ಕಾರಣ, ಇತರೆ ಮಾಂಸ ತಿಂದಂತೆ , ಕರಿದಂತೆ ದನದ ಮಾಂಸಕ್ಕೆ ಅವಕಾಶ ಮಾಡಿಕೊಟ್ಟರೆ ರಣ-ರಾದ್ಧಾಂತ ಆಗುವದೋ ಎಂದು ಕಸಾಪ ಅಧ್ಯಕ್ಷರು ಹಾಗೂ ಸಂಘಟಕರು ಈ ಬಗ್ಗೆ ವಿವರಣೆ ನೀಡಲು ಹೋಗಿಲ್ಲ. ಹಾಗೊಂದು ವೇಳೆ ಅವಕಾಶ ಮಾಡಿಕೊಟ್ಟರೆ ಈಗಲೂ ನಾವು ಮಾಡಿಯೇ ಸಿದ್ದ ಎನ್ನುತ್ತಿದ್ದಾರೆ ದಲಿತ-ಮುಸ್ಲಿಂ- ಕ್ರಿಶ್ಚಿಯನ್ ಮುಖಂಡರು.ಜತೆಗೆ ಸಾಹಿತ್ಯ ವಲಯದಿಂದಲೂ `ಆಗಲಿ ಬಿಡಿ ಸಾಹಿತ್ಯ ಪರಿಷತ್ ಭವನದಲ್ಲಿ ಕೊರಬಾಡು ಮೇಳ ನಡೆಯಲಿ’ ಎನ್ನುತ್ತಿದ್ದಾರೆ. ಅವಕಾಶ ನೀಡುವುದು ಅವರಿಗೆ ಬಿಟ್ಟ ವಿಚಾರ.

ದನದ ಮಾಂಸ ದೂರ ಇಟ್ಟಿದ್ದರ ಬಗ್ಗೆ ನಮ್ಮ ಆಕ್ಷೇಪ ಹೊರತಾಗಿ ಉಳಿದಂತೆ ಈ ಬೆಳವಣಿಗೆಯನ್ನು ದಲಿತ ಸಾಹಿತ್ಯ ಪರಿಷತ್ತು ಪ್ರೋತ್ಸಾಹಿಸುತ್ತದೆ. ಹಾಗೆ ಪರಿಷತ್ತಿನಲ್ಲಿ ಆಹಾರ ಮೇಳಕ್ಕೆ ಅವಕಾಶ ಮಾಡಿಕೊಡುವುದಾದರೆ ಎಲ್ಲರಿಗೂ ಅವಕಾಶ ಕೊಡಬೇಕು ಕೊಡದಿದ್ದರೆ ಯಾವುದಕ್ಕೂ ಕೊಡಬಾರದು ಎಂಬುದಕ್ಕೆ ನಾವೂ ಕೂಡ ಬದ್ದವಾಗಿದ್ದೇವೆ.

ಇದರ ಹೊರತಾಗಿ ನೋಡುವುದಾದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯರಾದ ನಾವು ಅಪಾರ ಗೌರವ ಇಟ್ಟುಕೊಂಡಿರುವ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡರು ` ಸಾಹಿತ್ಯ ಪರಿಷತ್ ಏನು ಶಂಕರ ಮಠ ಅಲ್ಲ ಎಂದಿದ್ದಾರೆ’ ಜತೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ… ಹೀಗೆ ಏನೆಲ್ಲಾ ಆಕ್ಷೇಪಣೆ ಎತ್ತಿದ್ದಾರೆ.

ಮೊದಲನೆಯದಾಗಿ ತಿಮ್ಮೇಗೌಡರ ಈ ಪ್ರಯತ್ನಕ್ಕೆ ಬೆಂಬಲ ಇದೆ. ಹಾಗೆಯೇ ಅವರ ಏಕಪಕ್ಷಿಯ ನಿರ್ಧಾರಕ್ಕೆ ದಿಕ್ಕಾರವೂ ಇದೆ. ಆದರೆ ಜಾನಪದದ ಹೆಸರಲ್ಲಿ ಒಂದು ವರ್ಗವನ್ನು ಸಂತುಷ್ಟಗೊಳಿಸುವ ಮಾರ್ಗಕ್ಕೆ ಇಳಿದಿದ್ದು ಮಾತ್ರ ನಿಜಕ್ಕೂ ನಿರೀಕ್ಷಿಸಿರಲಿಲ್ಲ. ಕಾರಣ ದನದ ಮಾಂಸವನ್ನು ಜಾನಪದೀಯ ಅಂಶದಿಂದ ಕೈಬಿಟ್ಟಿದ್ದು. ಯಾಕೆ ಕೊರಬಾಡು ಜನಪದ ಆಹಾರ ಎಂದು ನಿಮಗೆ ಅನ್ನಿಸಲಿಲ್ಲವೇ..? ಒಂದು ಮಾತು ಕೇಳಬಹುದಿತ್ತಲ್ಲವೇ..?

ಸಸ್ಯಾಹಾರ (ಹುಲ್ಲು) ತಿನ್ನುವ ದನಕ್ಕಿಂತ ಕಕ್ಕಸ್ಸು ತಿನ್ನುವ ಹಂದಿ, ಕೋಳಿ ಮಾತ್ರವೇ ನಿಮಗೆ ಶ್ರೇಷ್ಟ ಎನಿಸಿತೇ..? ಜತೆಗೆ ದನದ ಮಾಂಸ (ಕೊರಬಾಡು) ದಲಿತರಿಗೆ ಅದರದೇ ಆದ ಹಿನ್ನಲೆಯಿದೆ. ಇಂದಿಗೂ ಕೊರಬಾಡನ್ನು ಚಪ್ಪರಿಸಿ ತಿನ್ನುವ ಮಂದಿ ಇದ್ದಾರೆ. ಹೀಗಿರುವಾಗ ದಲಿತರು- ಮುಸ್ಲಿಂ-ಕ್ರಿಶ್ಚಿಯ್ನನ್ನರು ಸೇರಿದಂತೆ ಬಹುಸಂಖ್ಯಾತರ ಪ್ರಮುಖ ಆಹಾರವನ್ನು ಪರಿಗಣಿಸದೆ ನಿಮಗೆ ಬೇಕಾದ ಚಪ್ಪರಿಸುವ ಆಹಾರ ಮಾಡಿಕೊಂಡು ಬಹುಸಂಖ್ಯಾತರಿಗೆ ಮತ್ತು ಆ ಆಹಾರಕ್ಕೆ ಅವಮಾನ ಮಾಡಿದ್ದೀರಿ..?

ಯಾಕೆ ಕೊರಬಾಡು ತಿಂದು ಎಷ್ಟು ಜನರು ಜಾನಪದ ಗಾಯಕರಾಗಿದ್ದಾರೆ ಗೊತ್ತಿಲ್ಲವೇ..? ಜಾನಪದೀಯ ಗುಣ ಬಂದಿರುವುದೇ ಈ ಕೊರಬಾಡು ತಿಂದು ಗಟ್ಟಿಮುಟ್ಟಾದ ದಲಿತರು. ಮುಸ್ಲಿಂರಲ್ಲಿ . ಎಂಥಂತಹವು ದೊಡ್ಡ ಗಾಯಕರಿದ್ದಾರೆ. ಸಾಹಿತಿಗಳಿದ್ದಾರೆ. ತಮಟೆ ಹೊಡೆಯುವರಿದ್ದಾರೆ… ಜಾನಪದ ವಲಯದಲಿದ್ದಾರೆ ಇದು ನಿಮಗೆ ಅರ್ಥವಾಗಲಿಲ್ಲವೇ..? ಹೋಗಲಿ ಈಗಿನ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಾನಂದೂರು ಕೆಂಪಯ್ಯ ನವರಿಗೆ ಜಾನಪದೀಯ ಆಹಾರ ಯಾವುದಿಷ್ಟ ಎಂದು ಒಮ್ಮೆ ಕೇಳಿ. ಅವರೇ ಹೇಳುತ್ತಾರೆ. ಹಾಗೇ ನೀವು ಉಪಯೋಗಿಸುವ ಕೊರಬಾಡು ಜಾನಪದ ಆಹಾರ ಹೌದೇ ಅಲ್ಲವೇ ಎಂದು ಒಮ್ಮೆ ಕೇಳಿ..? ಅವರೇ ಉತ್ತರಿಸುತ್ತಾರೆ.

ನೀವು ತೆಗೆದುಕೊಂಡ ಏಕಪಕ್ಷೀಯ ತೀರ್ಮಾನಕ್ಕೆ ನಮ್ಮ ದಿಕ್ಕಾರವಿರಲಿ ಹಾಗೆ ನೀವು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ ಎಂದಿದ್ದಿರಿ..? ದಲಿತರ ಬಹುಸಂಖ್ಯಾತರ ಭಾವನೆಗಳಿಗೂ ನೀವು ಸ್ವಲ್ಪ ಗೌರವ ಕೊಟ್ಟರೆ ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುವುದು ಎಂಬುದು ನಮ್ಮ ಅಭಿಪ್ರಾಯ. ಹಾಗೆಯೇ ನೀವು ಬಹುಸಂಖ್ಯಾತರ ಆಹಾರಕ್ಕೆ ಗೌರವವನ್ನೂ ಕೊಟ್ಟಿಲ್ಲ ಎಂಬ ಕಾರಣಕ್ಕೆ ನಾವೆಲ್ಲ ನಿಮಗೆ ದಿಕ್ಕಾರ ಹೇಳುತ್ತೇವೆ

ಉಳಿದಂತೆ ನೀವು ಸಾಹಿತ್ಯ ಪರಿಷತ್ ಭವನ ಶಂಕರಮಠ ಅಲ್ಲ ಎಂದು ಹೇಳಿದ್ದೀರಿ..? ನಿಜಕ್ಕೂ ಒಳ್ಳೆಯ ಹೇಳಿಕೆ. ಕಾರಣ ಸಾಹಿತ್ಯವನ್ನು ಮಡಿ ಮೈಲಿಗೆಗೆ ಒಡ್ಡುವ ಸೋ ಕಾಲ್ಡ್ ಸಾಹಿತಿಗಳ ಬಾಲಿಶ ಹೇಳಿಕೆ ನೋಡಿದರೆ ನಿಜಕ್ಕೂ ನಗು ಬರುತ್ತದೆ. ಇವರೆಲ್ಲಾ ಸಮಾನತೆಯ ಬಗ್ಗೆ ಮಾತನಾಡುತ್ತಾರೆ. ಮಡಿ-ಮೈಲಿಗೆ,-ಜಾತಿ ಹೋಗಲಿ ಎನ್ನುತ್ತಾರೆ.

ಸಾಹಿತ್ಯ ಪರಿಷತ್ ಎಂಬುದು ಏನು ಸ್ವರ್ಗದಿಂದ ಇಳಿದಿದ್ದಲ್ಲ. ದೇವರು ನಿರ್ಮಿಸಿದ್ದಲ್ಲ ಮನುಷ್ಯನೇ ಮಾಡಿಕೊಂಡಿದ್ದು. ಹಾಗೆ ನೋಡಿದರೆ ಸಾಹಿತ್ಯ ಪರಿಷತ್ಗೂ ದಲಿತರಿಗೂ ಆಗಿಯೇ ಬುರತ್ತಿರಲಿಲ್ಲ. ದಲಿತರೂ ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ದೊಡ್ಡ ದೊಡ್ಡ ಕವಿಗಳಾಗಿ, ಸಾಹಿತಿಗಳಾದ ನಂತರ ನಿಧಾನವಾಗಿ ಪರಿಷತ್ ಕಡೆ ಬರಲಾರಂಭಿಸಿದ್ದು. ಹಾಗೆಂದು ಸಾಹಿತ್ಯ ಪರಿಷತ್ ದಲಿತರಿಗೆ, ಮುಸ್ಲಿಂಗೆ ಕ್ರಿಶ್ಚಿಯ್ನನರಿಗೆ ಅವಕಾಶ ಇಲ್ಲ ಎಂದರೆ ಆಗುತ್ತದೆಯೇ..?

ಸಾಹಿತ್ಯ ಪರಿಷತ್ ನಲ್ಲಿ ದಿಗ್ಗಜರೆನಿಸಿಕೊಂಡ ಜ್ಞಾನಪೀಠಿಗಳಲ್ಲಿ ಮಹಾನ್ ಸಾಹಿತಿ ಕುವೆಂಪು ಕೂಡ ಮಾಂಸಾಹಾರ ಸೇವನೆ ಮಾಡುತ್ತಿದ್ದವರೇ..? ರಾಮಾಯಣ ಬರೆದ ವಾಲ್ಮೀಕಿ ಕೂಡಾ ಮಾಂಸಾಹಾರಿ. ನಮ್ಮ ಸಿದ್ದಲಿಂಗಯ್ಯ , ದೇವನೂರು ಮಹಾದೇವ ಇವರೆಲ್ಲಾ ಕೊರಬಾಡನ್ನು ಇವತ್ತೂ ಚಪ್ಪರಿಸಿ ತಿನ್ನುವ ಮಂದಿ. ಇಂತಹ ಸಂದರ್ಭದಲ್ಲಿ ಮಡಿ-ಮೈಲಿಗೆ ನೆಪದಲ್ಲಿ ಸುಮ್ಮನೆ ಟೀಕೆ ಮಾಡಿಕೊಂಡು ಕಾಲಾಹರಣ ಯಾಕೆ ಮಾಡುತ್ತೀರೀ..? ಅದರ ಬದಲು ಒಳ್ಳೆಯ ಸಾಹಿತ್ಯ ರಚಿಸಿ. ಗದ್ಯ ಬರೆಯಿರಿ ನಿಮ್ಮ ಬೇಳೆ ಕಾಳು ಆಗ ಗೊತ್ತಾಗುತ್ತದೆ.

ಹಾಗೆ ನನ್ನದೊಂದು ಪ್ರಶ್ನೆ..? ಯಾವುದೇ ಸಮ್ಮೆಳನ ನಡೆಸಿ ಮುಗಿಸಿದ ಖುಷಿಗೆ ಇದೇ ಕವಿಗಳು, ಸಾಹಿತಿಗಳು ಎನಿಸಿಕೊಂಡವರು ರಾತ್ರಿ ಮಾಡುವ ಬಾಡೂಟ, ಗುಂಡು ಮೇಜಿನ ಪರಿಷತ್ ನಲ್ಲಿ ಯಾರ್ಯಾರು ಪಾಲ್ಗೊಂಡು, ಮೇಲೇಳಲಾಗಗದಷ್ಟು ಕುಡಿದು ಚಿತ್ತ ಆಗುತ್ತಾರೆ ಏನೇನು ಒದರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಸಮ್ಮೇಳನದ ಹೆಸರಲ್ಲಿ ಕುಡಿದು-ತಿಂದು ತೇಗುವುದೂ ತಪ್ಪಲ್ಲವೇ..?

ಹೀಗಿರುವಾಗ ಜಾನಪದೀಯ ತಳಹದಿಯಲ್ಲಿ ನಮ್ಮ ಆಹಾರವನ್ನು ಮಾಡಿ ತಿಂದಿದ್ದರಲ್ಲಿ ತಪ್ಪೇನಿಲ್ಲ ಅಲ್ಲವೇ..? ಹಾಗೆ ವಿರೋಧಿಸುವವರು ಒಂದು ಮಾತು ಹೇಳುತ್ತಾರೆ ಸಾಹಿತ್ಯ ಪರಿಷತ್ ಭವನದಲ್ಲಿ ಮಾಡಬಾರದಿತ್ತು ಅದಕ್ಕೇ ಬೇರೆಯಾದ ಜಾಗ ಇದೆ ಎಂದು. ಅಲ್ಲಾ ಸ್ವಾಮಿ ಈ ಪವಿತ್ರ -ಅಪವಿತ್ರ ಈ ಭಾವನೆಗಳು ನಾವೇ ಮಾಡಿಕೊಂಡಿರುವಂತಹ ಕ್ರಿಯೆಗಳು ಹೀಗಿರುವಾಗ ಸಾಹಿತ್ಯ ಪರಿಷತ್ ಭವದಲ್ಲಿ ಬಾಡೂಟ ಬೇಯಿಸಿ ಮೈಲಿಗೆ ಏನಾಗಿಲ್ಲ. ಹಾಗೊಂದು ವೇಳೆ ಮೈಲೆಗೆ ಆಯಿತೆಂದರೆ ಗೋವಿನ ಸಗಣಿಯಿಂದ ಸಾರಿಸಿ ಸ್ವಚ್ಛಗೊಳಿಸೋಣ ಆದರೆ ಮನಸ್ಸಿನ ಮೈಲಿಗೆಯನ್ನು ಯಾವುದರಿಂದ ಸ್ವಚ್ಛಗೊಳಸಲು ಸಾಧ್ಯ ಹೇಳಿ..

ಹಿಂದೆ ದೇವಸ್ಥಾನಗಳಿಗೆ ದಲಿತರನ್ನು ಕೂಡುತ್ತಿರಲಿಲ್ಲ. ಕಾರಣ, ಬ್ರಾಹಣ್ಯ ಹಾಗೂ ವರ್ಣ ವ್ಯವಸ್ಥೆ ಇಂಥಹವರು ಇದನ್ನೇ ತಿನ್ನಬೇಕು. ದೇವಸ್ಥಾನದ ಸುತ್ತಮುತ್ತ ಇಷ್ಟು ಕಿ. ಮೀ. ಆವರಣದಲ್ಲಿ ಇಂಥಹುದನ್ನು ಮಾಡಬಾರದು.. ಇಂಥಹುದನ್ನು ಮಾಡಬೇಕು.. ಇಂತಹ ಹತ್ತಾರು ಕಟ್ಟುಪಾಡುಗಳನ್ನು ಹಾಕಿ ಎಲ್ಲದಕ್ಕೂ ಗೆರೆ ಹಾಕಿ ಸೀಮಿತ ಮಾಡಿ ವಂಚನೆ ಮಾಡಿಕೊಂಡೆ ಬಂದಿದ್ದಾರೆ. ಹಾಗೂ ಮಾಡುತ್ತಲೇ ಇರುವುದನ್ನು ಸಮಾಜದಲ್ಲಿ ನಿತ್ಯ ನೋಡುತ್ತಲೇ ಇದ್ದೇವೆ. ಈ ನಿಟ್ಟಿನಲ್ಲಿ ಹಾಸನ ಜಿಲ್ಲಾ ಜಾನಪದ ಪರಿಷತ್ ಹಾಸನದ ಸಾಹಿತ್ಯ ಪರಿಷತ್ ಭವನದಲ್ಲಿ ಇಂತಹುದೊಂದು ಬಾಡಿನ ಸವಿ ರುಚಿ ಏರ್ಪಡಿಸಿ ಹೊಸ ಬೆಳವಣಿಗೆ ಹುಟ್ಟು ಹಾಕಿದೆ ಹಾಗೆ ಇಂತಹ ಬೆಳವಣಿಗೆಗಳು ರಾಜ್ಯವ್ಯಾಪಿ ನಡೆಯಲಿ ಎಂಬುದು ನಮ್ಮ ಆಶಯ… ಕೊರಬಾಡು ಸಹ ಸಿಗುವಂತಾಗಲಿ…

ಕೆ.ಟಿ ಶಿವಪ್ರಸಾದ್

ಅಂತರಾಷ್ಟ್ರೀಯ ಚಿತ್ರ ಕಲಾವಿದರು, ಹಾಸನ

`ದೇಹಕ್ಕೆ ಯಾವ ವಸ್ತು ಪುಷ್ಟಿ ಕೊಡುತ್ತದೋ ಅದು ಆಹಾರ ಎನಿಸಿಕೊಳ್ಳುತ್ತದೆ. ಅದು ಮಾಂಸಾಹಾರ, ಸಸ್ಯಾಹಾರ ಯಾವುದಾದರೂ ಆಗಿರಬಹುದು. ಬುದ್ದ ಕೂಡ ಮಾಂಸಾಹಾರ ಸೇವಿಸುತ್ತಿದ್ದ. ನಾನು ಕೂಡ ದನದ ಮಾಂಸ, ಇಲಿ, ಉಡ ಎಲ್ಲವನ್ನೂ ತಿಂದಿದ್ದೇನೆ. ಈಗಲೂ ತಿನ್ನುತ್ತೇನೆ. ದನದ ಮಾಂಸಕ್ಕೂ ಅವಕಾಶ ಕೊಡಬೇಕಿತ್ತು. ಸಾಹಿತ್ಯ ಪರಿಷತ್ ಭವನದಲ್ಲಿ ಮಾಂಸಾಹಾರ ಮಾಡುತ್ತಿದ್ದಾರೆ ಎಂಬುದೇ ಒಳ್ಳೆ ಬೆಳವಣಿಗೆ. ಕೊರಬಾಡನ್ನು ಸೇರಿಸಿಕೊಳ್ಳಲಿ, ಹಾಗೆ ಪರಿಷತ್ ಬೈಲಾ ದಲ್ಲಿ ಅವಕಾಶ ಇಲ್ಲ ಎಂದರೆ ಕೊಡಬಾರದು ಕೊಟ್ಟರೆ ಎಲ್ಲ ಮಾಂಸಕ್ಕೂ ಕೊಡಬೇಕು. ಈ ಬೆಳವಣಿಗೆ ರಾಜ್ಯವ್ಯಾಪಿ ನಡೆಯಲಿ, ನಮ್ಮೆಲ್ಲರ ಬೆಂಬಲವಿದೆ. ಎಲ್ಲಾ ಆಹಾರವನ್ನೂ ಗೌರವಿಸಬೇಕು’

 

 

 

‍ಲೇಖಕರು avadhi

March 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

39 ಪ್ರತಿಕ್ರಿಯೆಗಳು

  1. bharathi

    ಮಾಡಬಹುದು ಮಾಡಬಹುದು! ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯ ಬಿಟ್ಟು ಕೊರಬಾಡು ಮೇಳ ಮಾಡಬಹುದು. ಚಿತ್ರಕಲಾ ಪರಿಷತ್ತಿನಲ್ಲಿ ಬಿರಿಯಾನಿ ಮೇಳ ಮಾಡಬಹುದು. ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಿಕೋಳಿ ಸಾರು-ಮುದ್ದೆ ಮೇಳವೂ ಮಾಡಬಹುದು. ಟೌನ್ ಹಾಲ್‌ನಲ್ಲಿ ಬಾತ್ರೂಮ್ accessories ಮೇಳ ಮಾಡಬಹುದು. ಮಡಿ ಮೈಲಿಗೆ ವಿಷಯ ಅತ್ಲಾಗೆ ಒದ್ದು ಓಡಿಸಿ ಬಿಡಿ. ಮುಂದಿನ ದಿನಗಳಲ್ಲಿ ಸ್ಮಶಾನದಲ್ಲಿ ಮದುವೆ … ಪಾರ್ಲಿಮೆಂಟಿನಲ್ಲಿ ತಿಥಿ …ರಾಷ್ಟ್ರಪತಿ ಭವನದಲ್ಲಿ ಸೀರೆ ಎಕ್ಸಿಬಿಷನ್ … ಎಲ್ಲ ಮಾಡಬಹುದು …:)

    ಪ್ರತಿಕ್ರಿಯೆ
  2. bharathi

    madi mailige vishya ondu side ge sarisi bidi. aadre yava jaaga yavdakke antha idyo adanna madbeku thaane? kraanthikaari thara maathadteevi antha heli eneno mathaadidre hege?

    ಪ್ರತಿಕ್ರಿಯೆ
  3. raveendra S R

    ತಪ್ಪೇನಿಲ್ರೀ.. ಮಾಡಿ ಮಾಡಿ… ಆದ್ರೆ ಮಾಂಸ ತಿನ್ನೋರು ಕೂಡ ಶನಿವಾರ ತಿನ್ನಲ್ಲ, ಸೋಮವಾರ ತಿನ್ನಲ್ಲ, ದೇವರ ಹೆಸರಲ್ಲಿ ತಿನ್ನಲ್ಲ, ವ್ರತದಲ್ಲಿರೋವಾಗ ತಿನ್ನಲ್ಲ, ಶಬರಿಮಲೆಗೆ ಹೋಗೋವಾಗ ತಿನ್ನಲ್ಲ. ಯುಗಾದಿ ದಿನ ತಿನ್ನಲ್ಲ ಅಂತ ಕಟ್ಟುಪಾಡು ಹಾಕ್ಕೋತಿರಲ್ಲ ಯಾಕೆ.. ಮಾಂಸ ಕೇವಲ ಒಂದು ಆಹಾರ ಅಷ್ಟೇ ಆಗಿದ್ರೆ ಯಾವತ್ತು ಬೇಕಿದ್ರೂ ತಿನ್ನಬಹುದಾಗಿತ್ತಲ್ಲ. ನಿಮ್ಮಲ್ಲೇ ಆ ಕುರಿತು ಪಾಪಪ್ರಜ್ಞೆ, ಕೀಳರಿಮೆ ಇದೆ. ಕೆಟಿ ಶಿವಪ್ರಸಾದ್ ಅವರು ಒಂದು ಕಡೆ ಬುದ್ದ ಬುದ್ಧ ಅಂತಾರೆ. ಮತ್ತೊಂದು ಕಡೆ ಕೊರಬಾಡು ಅಂತಾರೆ. ಬುದ್ಧ ಮಾಂಸಾಹಾರದ ಬಗ್ಗೆ ಹೇಳಿದ್ದು ಅವರಿಗೆ ಪಥ್ಯ ಆಗಲ್ಲ. ಬಹಳ ಸಂತೋಷ. ಇದನ್ನು ವಿರೋಧಿಸಿದರೆ ಅದಕ್ಕೆ ಬೇರೆ ಬೇರೆ ಅರ್ಥಗಳನ್ನು ನೀವು ಕೊಡುವುದು ಗೊತ್ತೇ ಇರುವುದರಿಂದ ನಿಮ್ಮ ಮಾತನ್ನು ನೆಗ್ಲೆಕ್ಟ್ ಮಾಡಿಕೊಂಡಿರುವುದೇ ವಾಸಿ. ಚೆನ್ನಾಗಿ ಹೇಳಿದಿರಿ ಭಾರತಿಯವರೇ. ಸಾಹಿತ್ಯ ಪರಿಷತ್ತಿನ ಪಕ್ಕದಲ್ಲಿ ಮಟನ್ ಸ್ಟಾಲ್ ಯಾಕಿಡಬಾರದು.. ಪುಸ್ತಕ ಬಿಡುಗಡೆ ಮಾಡೋರು ಬೆಳಗ್ಗೆ ಇಡ್ಲಿ ಉಪ್ಪಿಟ್ಟು ಕೊಡೋ ಬದಲು ಪಂದಿಕರಿ- ಅಕ್ಕಿ ರೊಟ್ಟಿ, ಕಾಲ್ ಸೂಪ್ ಮುದ್ದೆ ಕೊಡಲು ಶುರು ಮಾಡಬಹುದು.. ಝೈ ಭುವನೇಶ್ವರಿ.

    ಪ್ರತಿಕ್ರಿಯೆ
  4. hethur nagaraj

    ರವೀಂದ್ರ ಅವರೇ ಕೆ.ಟಿ ಆಗಲಿ ಬುದ್ದ ಆಗಲಿ ಮಾಂಸಾಹಾರ ತಿನ್ನಬೇಡಿ ಎಂದಿಲ್ಲ. ಬುದ್ದ ಕೂಡ ಮಾಂಸಾಹಾರ ತಿನ್ನುತ್ತಿದ್ದ. ಬುದ್ದ ಗುರು ಪ್ರತಿ ದಿನ ಒಬ್ಬರ ಮನೆ ಮುಂದೆ ನಿಂತು ಭಿಕ್ಷೆ ಕೇಳುತ್ತಿದ್ದ. ಅದು ಯಾವುದೇ ಆಹಾರವಾದರೂ ಸರಿಯೇ.. ಬುದ್ದ ಕೂಡ ಕೊಳೆತ ಮಾಂಸ ತಿಂದು ತೀರಿಕೊಂಡಿದ್ದು. ಈಗಿನ ಬುದ್ದಿಸ್ಟ್ ಧರ್ಮ ಉಳಿವಿಗಾಗಿ ಕೆಲ ಕಠಿಣ ಕಟ್ಟುಪಾಡು ಮಾಡಿಕೊಂಡಿದ್ದಾರೆ. ಬುದ್ದನನ್ನು ಓದಿಕೊಳ್ಳಿ.
    ಹಾಗೆ ನಮ್ಮ ಉದ್ದೇಶ ಇಷ್ಟೆ. ಸಾಹಿತ್ಯ ಪರಿಷತ್ ಆವರಣದಲ್ಲಿ ಒಂದು ಆಹಾರಕ್ಕೆ ಮಾತ್ರ ಕೊಡದೆ ಎಲ್ಲ ಆಹಾರಕ್ಕೂ ಅವಕಾಶ ಮಾಡಿಕೊಡಿ.ಕೇವಲ ಮೇಲ್ಜಾತಿಯ ಆಹಾರಕ್ಕೆ ಮಾತ್ರ ಪ್ರಾಧಾನ್ಯತೆ ಕೊಡಬೇಕಿ ಇತರೆ ಕೆಳಜಾತಿಯ ಆಹಾರಕ್ಕೂ ಆಧ್ಯತೆ ನೀಡಿ. ಕೊಡದಿದ್ದರೆ ಯಾವ ಆಹಾರಕ್ಕೂ ಕೊಡಬಾರದು. ಮಾಂಸಾಹಾರದಲ್ಲೂ ಭಿನ್ನಭಾವ ಬೇಡ. ಹೀಗೆ ಕೇಳಿದ್ದು ತಪ್ಪೇ..? ಇದು ನಮ್ಮ ಸ್ಪಷ್ಟ ಅಭಿಪ್ರಾಯ. ಕೆ.ಟಿ ಹೇಳಿದಂತೆ ಪರಿಷತ್ ಬ್ಯಲಾದಲ್ಲಿ ಕೊಡಬಾರದು ಎಂದಿದ್ದರೆ ಯಾರಿಗೂ ಬೇಡ ಅದನ್ನು ಪ್ರಶ್ನಿಸುವ ಅಧಿಕಾರ ನಮಗೂ ಇಲ್ಲ ಏನಂತೀರಿ..? ನಿಮ್ಮ ಪ್ರತಿಕ್ರಿಯೆ ನೋಡಿದರೆ ಮಡಿ ಮ್ಐಲಿಗೆ ಕಲ್ಪನೆಯಿಂದ ನೀವೆಲ್ಲಾ ಹೊರಬಾರದಂತಹವರಾಗಿದ್ದೀರಿ ಎನಿಸುತ್ತಿದೆ. ಇನ್ನು ಸಮಾನತೆ ಎಲ್ಲಿಂದ ಬರುತ್ತದೆ…! ನಿಮ್ಮೊಂದಿಗೆ ಎಂಥಹಾ ವಾದ ಅಲ್ಲವೇ..?

    ಪ್ರತಿಕ್ರಿಯೆ
  5. VG

    ಪ್ರಪಂಚದಲ್ಲಿ 90%(ಅಥವ ಅದಕ್ಕೂ ಹೆಚ್ಚು) ಜನ ಮಾಂಸಹಾರಿಗಳು. ಬಹುತೇಕ ಬೌದ್ಧರೂ ಮಾಂಸಹಾರಿಗಳು. ದಲೈಲಾಮರೂ ಸಸ್ಯಹಾರಿಯಲ್ಲ.

    ಪ್ರತಿಕ್ರಿಯೆ
  6. venkatesh

    ನಾಗರಾಜ್ ಹೆತ್ತೂರು ರವರೆ , ರವಿಂದ್ರರಿಗೆ ನೀಡಿರುವ ನಿಮ್ಮ ಪ್ರತಿಕ್ರಿಯೆ ನೋಡಿದ್ರೆ , ಮಡಿ ಮೈಲಿಗೆ ಬಿಟ್ಟರೆ ಪೂರ್ಣ ಸಮಾನತೆಯನ್ನ ಸಾಧಿಸಬಹುದು ಅಂತ ಬರೆದಿದ್ದೀರ, ಅಲ್ಲರಿ ಮಡಿ ಮೈಲಿಗೆ ಅನ್ನೋದು ಅವರವರ ಸ್ವಂತದ ಅಚಾರ/ವಿಚಾರ. ಅದು ಕಟ್ಕೊಂಡು ನೀವು ಏನ್ ಮಾಡಬೇಕು?. ಆಹಾರದ ವಿಷಯದಲ್ಲಿ ನಿಮ್ಮ ಅಭಿಪ್ರಾಯ ಏನು ಇದೆಯೋ ಅದನ್ನ ಹೇಳಿ , ಅಷ್ಟೇ ಸಾಕು. ಅದೂ ಅಲ್ದೆ ನಿಮ್ಮ ಪ್ರಕಾರ ಮಡಿ ಮೈಲಿಗೆ ಮಾಡೋರು ಎಲ್ಲರೂ ಪ್ರಯೋಜನಕ್ಕೆ ಬರದವರು , ಅದನ್ನ ಬಿಟ್ಟೋರು ಎಲ್ಲರೂ ಮಹಾ ಸಾಧಕರು/ಪ್ರಾರ್ಥ ಸ್ಮರಣೀಯರು ಅಂತ ಅರ್ಥನಾ?.
    ನಿಮ್ಮ ಪ್ರತಿಕ್ರಿಯೆಯಲ್ಲಿ ವ್ಯಂಗ್ಯದ ‘ಅತಿರೇಕ’ವಿದೆಯೇ ಹೊರತು, ನಿಮ್ಮ ಅಭಿಪ್ರಾಯದ ವಿರೋಧವನ್ನ ಸ್ವೀಕರಿಸುವಷ್ಟು ತಾಳ್ಮೆಯಿಲ್ಲ.

    ಪ್ರತಿಕ್ರಿಯೆ
    • hethur nagaraj

      ವೆಂಕಟೇಶ್ ಸರ್ ನಾನು ವ್ಯಂಗ್ಯ ಮಾಡಿಲ್ಲ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಜನ ಜಾತಿ ಬಿಡುತ್ತೇವೆ ಎಂದರು ವ್ಯವಸ್ಥೆ ಬಿಡುವುದಿಲ್ಲ ಅನ್ನುವುದು ಗೊತ್ತಿದೆ. ಅಂತಹ ಮನಸ್ಥಿತಿಗಳು ನಮ್ಮೊಳಗೇ ಇವೆ ಎನ್ನುವುದೂ ತಿಳಿದಿದೆ. ಆ ಅರಿವು ನಮಗಿದೆ. ಒಬ್ಬರ ಮಡಿ -ಮ್ಐಲಿಗೆ ಇನ್ನೊಬ್ಬರ ಮನಸ್ಸಿಗೆ ಘಾಸಿ ಮಾಡದಿದ್ದರೆ ಒಳ್ಳಯದಲ್ಲವೇ..? ಎ

      ಪ್ರತಿಕ್ರಿಯೆ
      • hethur nagaraj

        ಹಾಗೆ ಮತ್ತೊಂದು ವಿಚಾರ,ಈ ವಿಚಾರದ ಬಗ್ಗೆ ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ನಮ್ಮ ಜಿಲ್ಲೆಯ ಸಾಹಿತಿ ರೂಪ ಹಾಸನ್ ಇಡೀ ಜ್ಐನ ಸಮುದಾಯದ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅವರು ಹೇಳಿದ್ದಿಷ್ಟು `ಪರಿಷತ್ ಆವರಣದಲ್ಲಿ ಮಾಂಸಹಾರ ಮಾಡಿದ್ದರಲ್ಲಿ ತಪ್ಪೇನು..?’ ಎಂದು.
        ಇದನ್ನೆ ಸಮಾಜವಿರೋಧಿ ಹೇಳಿಕೆ ಎಂದು ಅವರ ಮೇಲೆ ಆರೋಪಗಳ ಸುರಿಮಳೆ ಮಾಡುತ್ತಿದ್ದಾರೆ. ಮಾಂಸಾಹಾರ ಮಾಡಿದ್ದನ್ನೇ ಒಪ್ಪಿಕೊಳ್ಳದ ಈ ಸಮಾಜ ಇನ್ನು ಕೊರಬಾಡನ್ನು ಬಿಡುತ್ತಾರಾ ಸ್ವಾಮಿ..? ನೋಡಿ ಹೀಗಿದೆ ನಮ್ಮ ವ್ಯವಸ್ಥೆ ಮತ್ತು ಜನರು. ಅದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ ರೂಪ ಹಾಸನ್ ಮಾಡಬಾರದ ಅಪರಾಧ ಮಾಡಿದ್ದಾರೆಂದು ಹಾಸನದಲ್ಲಿ ಚರ್ಚೆ ನಡೆಯುತ್ತಿದೆ ಈಗ ಹೇಳಿ ಇದಕ್ಕೆ ಏನೆನ್ನಬೇಕು..?

        ಪ್ರತಿಕ್ರಿಯೆ
        • prasad raxidi

          “ಆಹಾರ ತನ್ನದು ಮಾತು ಪರರದ್ದು” (ಗಾದೆ) ಜನಪದರ ಈ ವಿವೇಕ ನಮಗೆ ಬಂದರೆ ಯಾವ ಆಹಾರವೂ ಮೇಲೂ ಅಲ್ಲ ಕೀಳೂ ಅಲ್ಲವೆಂಬ ಅರಿವು ಬಂದೀತು. ಸಾಹಿತ್ಯ ಪರಿಷತ್ ಆವರಣದಲ್ಲಿ ಮಾಂಸ ತಿನ್ನಬಾರದೆಂಬ ವಿಚಾರ ಹಾಸ್ಯಾಸ್ಪದ… ರೂಪಾ ಹೇಳಿದ್ದರಲ್ಲಿ ತಪ್ಪೇನಿದೆ…ಅತ್ಯಂತ ಪ್ರಗತಿಪರವಾಗಿದ್ದ ಹಾಸನದ ಪತ್ರಿಕೋಧ್ಯಮ (ಏಲ್ಲ ಕಡೆಯೂ) ಇಂದು ತಲಪಿರುವ ಸ್ಥಿತಿ ಇದು..

          ಪ್ರತಿಕ್ರಿಯೆ
  7. raveendra s r

    ಸಂತೋಷ. ನಾನು ಬುದ್ಧನನ್ನು ಎಷ್ಟು ಬೇಕೋ ಅಷ್ಟು ಓದಿಕೊಂಡಿದ್ದೇನೆ. ನನಗೆ ಬುದ್ಧನ ವಿಚಾರಧಾರೆ ಮುಖ್ಯವೇ ವಿನಹಃ ಆತನು ಸಸ್ಯಾಹಾರಿಯೋ ಮಾಂಸಾಹಾರಿಯೋ ಅನ್ನುವುದು ಅಲ್ಲ. ಟಿಬೆಟ್ಟಿಗೆ ನಾನು ಕೂಡ ಹೋಗಿ ಬಂದಿದ್ದೇನೆ. ಅಲ್ಲಿ ಸಸ್ಯಾಹಾರಿಗಳೂ ಇದ್ದಾರೆ ಮಾಂಸಾಹಾರಿಗಳೂ ಇದ್ದಾರೆ. ಅದು ಅವರವರ ಅಭಿರುಚಿಗೆ ಬಿಟ್ಟಿರುವುದು. ಆದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಎಲ್ಲೂ ಮಾಂಸಾಹಾರ ಮಾಡುವ ಪದ್ಧತಿ ಇಲ್ಲ. ಮದುವೆಯಲ್ಲಿ ಬಾಡೂಟ ಎಂಬ ಪ್ರತ್ಯೇಕ ಊಟವೇ ಇರುತ್ತದೆಯೇ ಹೊರತು, ಎಲ್ಲರನ್ನೂ ಕರೆದ ದಿನ ಸಸ್ಯಾಹಾರವನ್ನೇ ಮಾಡುತ್ತಾರೆ. ಸಾಹಿತ್ಯ ಸಮ್ಮಿಲನಗಳಲ್ಲಿ ಏನು ಚರ್ಚಿತ ಆಗಬೇಕು ಅನ್ನುವುದೇ ಬರುವ ರಸಿಕರಿಗೆ ಮುಖ್ಯ. ಊಟ ಏನು ಅನ್ನುವುದು ಅಲ್ಲ. ಅದನ್ನು ಮುಗಿಸಿದ ನಂತರ ಖಾಸಗಿಯಾಗಿ ಕುಡಿಯುವುದು ಮಾಂಸ ತಿನ್ನುವುದು ಮಾಡಿದರೆ ಅದರಲ್ಲೇನು ತಪ್ಪು ಹುಡುಕುತ್ತೀರಿ. ಬುದ್ಧನ ಆಹಾರಪದ್ಧತಿಯ ಕುರಿತೇ ಸಕಷ್ಟು ವಿರೋಧಭಾಸಗಳಿವೆ. ಇದನ್ನು ಆಸಕ್ತರು ಓದಬಹುದು. http://en.wikipedia.org/wiki/Buddhist_vegetarianism

    ಪ್ರತಿಕ್ರಿಯೆ
  8. raveendra s r

    ಈ ವಿಚಾರದ ಬಗ್ಗೆ ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ನಮ್ಮ ಜಿಲ್ಲೆಯ ಸಾಹಿತಿ ರೂಪ ಹಾಸನ್ ಇಡೀ ಜ್ಐನ ಸಮುದಾಯದ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅವರು ಹೇಳಿದ್ದಿಷ್ಟು `ಪರಿಷತ್ ಆವರಣದಲ್ಲಿ ಮಾಂಸಹಾರ ಮಾಡಿದ್ದರಲ್ಲಿ ತಪ್ಪೇನು..?’ ಎಂದು. ಈ ಮಾತಿನ ಅರ್ಥ ಇಷ್ಟೇಯ. ನೀವು ಮಾಂಸಾಹಾರ ಮಾಡಿ ಒಂದು ಜನಸಮುದಾಯವನ್ನೇ ಕೆರಳಿಸಬಹುದು. ಆದರೆ ನೀವು ಮಾಂಸಾಹಾರದ ಬಗ್ಗೆ ಮಾತಾಡಿದ್ದನ್ನು, ಮಾಂಸಾಹಾರ ಮಾಡುವುದನ್ನು ನೋಡಿಕೊಂಡು ಒಂದಿಡೀ ಸಮುದಾಯ ಸುಮ್ಮನಿರಬೇಕು. ಇದು ದಬ್ಬಾಳಿಕೆ ಅಲ್ಲವೇ ಹೆತ್ತೂರ್.

    ಪ್ರತಿಕ್ರಿಯೆ
  9. venkatesh

    ನಾಗರಾಜ್ ರವರೆ , ನಿಮ್ಮ ‘ ಒಬ್ಬರ ಮಡಿ -ಮ್ಐಲಿಗೆ ಇನ್ನೊಬ್ಬರ ಮನಸ್ಸಿಗೆ ಘಾಸಿ ಮಾಡದಿದ್ದರೆ ಒಳ್ಳಯದಲ್ಲವೇ..?’ ಈ ನುಡಿಗೆ ನನ್ನದೂ ಸಹಮತವಿದೆ. ಆದರೆ ಇಲ್ಲಿ ಒಂದು ವಿಚಾರ ಮಾಡಬೇಕು. ಸಾಮಾನ್ಯವಾಗಿ ಸಸ್ಯಾಹಾರಿಗಳು ಸಸ್ಯ ಮತ್ತು ಮಾಂಸ ಆಹಾರಗಳನ್ನು ಒಟ್ಟಾಗಿ ಮಾಡಿದರೆ ಅವರು ತಿನ್ನುವುದಿಲ್ಲ. ಆ ದೃಷ್ಟಿಯಲ್ಲಿ ನೋಡಿದರೆ ಅವರನ್ನು ಸಮ್ಮೇಳನದಲ್ಲಿ ಉಪವಾಸ ಹಾಕಿದಂತಾಗುವದಿಲ್ಲವೇ? ಇದಕ್ಕೆ ನಿಮ್ಮ ಅಭಿಪ್ರಾಯವೇನು? ಇಲ್ಲಿ ‘ಮಡಿ ಮೈಲಿಗೆ’ಯ ವಿಚಾರ ಬರದೆ ಒಂದು ಮಾನಸಿಕ ಹೊಯ್ದಾಟದ ತಲ್ಲಣವಿದೆ. ಇದನ್ನು ತಾವು ತಿಳಿಯಬಲ್ಲಿರಿ ಅಂತ ಭಾವಿಸಿದ್ದೇನೆ. ಅಲ್ಲದೆ ಮಾಂಸಾಹಾರ ಬೇಕು ಎನ್ನುವವರು ಅದನ್ನು ಪ್ರತ್ಯೇಕವಾಗಿ ಇನ್ನೊಂದು ಆವರಣದಲ್ಲಿ ಏರ್ಪಾಟು ಮಾಡಿದರೆ ತಪ್ಪೇನಿಲ್ಲ ಅನ್ನುವುದು ನನ್ನ ಅನಿಸಿಕೆ(ಇದನ್ನು ನಾನು ಸರ್ವಸಮ್ಮತ ದೃಷ್ಟಿಯಿಂದ ಹೇಳಿದ್ದೇನೆ ಹೊರತು , ಕೇವಲ ಮಡಿ ಮೈಲಿಗೆಯ ದೃಷ್ಟಿಯಿಂದ ಹೇಳಿದ್ದೇನೆ ಅಂತ ಸರ್ವಥಾ ಭಾವಿಸಬಾರದು).

    ಪ್ರತಿಕ್ರಿಯೆ
  10. ಎಚ್. ಸುಂದರ ರಾವ್

    ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮಾತ್ರ ಏನು, ಎಲ್ಲ ಕಡೆಯೂ ಜನ ಇಲಿ ತಿನ್ನಬೇಕು. ಅದನ್ನ ಬೆಳೆಸುವುದು ಬಹಳ ಸುಲಭ! ಖರ್ಚೇ ಇಲ್ಲ! ಪೂರ್ವ ಸಿದ್ಧತೆಯಾಗಿ ಇಲಿ ಪಾಷಾಣ ತಯಾರಿಕರಿಗೆ ಗಲ್ಲು ಶಿಕ್ಷೆ ಜಾರಿಗೆ ತರಬಹುದು. ಇದು ಖಂಡಿತ ಭಾರತದ ಆಹಾರ ಸಮಸ್ಯೆಗೆ ಅತ್ಯುತ್ತಮ ಪರಿಹಾರ. ಇಲಿಗಳ ಜೊತೆಗೆ ಹೆಗ್ಗಣಗಳನ್ನೂ ಸೇರಿಸಿಕೊಳ್ಳಬಹುದು. ಆದರೆ ಅದಕ್ಕೆ ರಾಜಕಾರಣಿಗಳ ಅಕ್ಷೇಪಣೆ ಬರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು. (ಇಲಿ, ಹೆಗ್ಗಣಗಳು ಇದನ್ನು ಓದುವುದಿಲ್ಲ ಎಂಬ ಧೈರ್ಯದಿಂದ ಹೀಗೆ ಬರೆದಿದ್ದೇನೆ. ಅವಕ್ಕೇನಾದರೂ ಗೊತ್ತಾದರೆ ನನ್ನನ್ನು ಪರಚದೆ ಬಿಟ್ಟಾವೇ?)

    ಪ್ರತಿಕ್ರಿಯೆ
  11. ಸತ್ಯನಾರಾಯಣ

    ಸಾಹಿತ್ಯ ಪರಿಷತ್ತೇ ಆಗಲಿ, ಇನ್ಯಾವುದೇ ಪರಿಷತ್ತೇ ಆಗಲೀ, ಅದರ ಆವರಣದಲ್ಲಿ ಆಹಾರ ಪದಾರ್ಥಗಳನ್ನು ಸೇವಿಸಲು ಅನುಮತಿ ಕೊಟ್ಟಿದೆ ಎಂದ ಮೇಲೆ ಮನುಷ್ಯರು ತಿನ್ನಬಹುದಾದ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನಬಹುದು ಎಂದೇ ಅರ್ಥ. ಉಪ್ಪಿಟ್ಟು, ಕೇಸರಿಬಾತ್, ಮಜ್ಜಿಗೆಹುಳಿ ತಿನ್ನಬಹುದು ಎಂದ ಮೇಲೆ ಮೀನು ಮಾಂಸ ಕೋಳಿಸಾರು ಎಲ್ಲಾ ತಿನ್ನಬಹುದು ಎಂದೇ ಅರ್ಥ. ಮಾಂಸಹಾರವೆಂದ ಮೇಲೆ ಪಂದಿಕರಿ, ಕೊರಬಾಡು ಇವುಗಳೂ ತಿನ್ನಬಹುದಾದ ಆಹಾರ ಪದಾರ್ಥಗಳೇ ಆದ್ದರಿಂದ ಅವುಗಳಿಗೂ ಅವಕಾಶ ಇರಲೇ ಬೇಕು.
    ಸಾಹಿತ್ಯ ಪರಿಷತ್ತು ಆವರಣದಲ್ಲಿ ಸಾಹಿತ್ಯ ಬಿಟ್ಟು ಬೇರೆ ಏನೂ ಇರಬಾರದು; ಆಹಾರಪದಾರ್ಥಗಳನ್ನು ಸೇವಿಸಬಾರದು ಎಂದಾದರೆ, ಯಾವ ಉಪ್ಪಿಟ್ಟಿಗೂ ಅಲ್ಲಿ ಸ್ಥಾನವಿರಬಾರದು. ಹಸಿವಾದವರು ಹತ್ತಿರದ ಹೋಟೆಲ್ಲುಗಳಲ್ಲಿ ತಮಗೆ ಬೇಕಾದ ಏನನ್ನು ಬೇಕಾದರೂ ತಿಂದು ಬರುತ್ತಾರೆ.
    ಕೊನೆಯ ಮಾತು: ಹೊಟ್ಟೆಯೊಳಗೆ ಏನಿದ್ದರೂ ಮಡಿ-ಮೈಲಿಗೆ ವಿಚಾರ ಬರುವುದಿಲ್ಲ!

    ಪ್ರತಿಕ್ರಿಯೆ
    • hethur nagaraj

      ವೆಂಕಟೇಶ್ ಅವರೆ ನೀವು ಕೆಳಿರುವ ಪ್ರಶ್ನೆ ಸರಿಯಾಗಿದೆ. ನಮ್ಮ ಹಾಸನದ ಕಡೆಯೂ ದಲಿತರನ್ನು ಮದುವೆಯ ಸರತಿಯಲ್ಲಿ ಊಟಕ್ಕೆ ಕೂರಿಸದ ಕಾರಣ ದೊಡ್ಡ ದೊಡ್ಡ ಹೋರಾಟಗಲಾಗಿವೆ. ಇದು ಎಲ್ಲಡೆಯೂ ಇದೆ. ಮೊದಲನೆಯದಾಗಿ ನಿಮ್ಮ ಪ್ರಶ್ನೆಗೆ ಸ್ಪಷ್ಟ ಉತ್ತರ ಸತ್ಯ ನಾರಾಯಣ ಅವರ ಪ್ರತಿಕ್ರಿಯೆಯಲ್ಲಿದೆ ಎಂದು ಭಾವಿಸುತ್ತೇನೆ.ಅವರ ಕೊನೆಯ ಮಾತು ಎಲ್ಲವನ್ನೂ ಹೇಳುತ್ತದೆ. ಹಾಗೆ ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನಗಳಲ್ಲಿ ಯಾಕೆ ಮಾಂಸಾಹಾರ ಮಾಡುವುದಿಲ್ಲ ಎಂದರೆ ನಮ್ಮ ಜನರನ್ನು ಸುಧಾರಿಸಲು ಸಾಧ್ಯವಾ ಒಮ್ಮೆ ಊಹಿಸಿ. ಮಾಂಸಾಹಾರ ಮಾಡುವ ದುಡ್ಡಿನಲ್ಲಿ ಒಂದು ಸಮ್ಮೇಳನ ಮಾಡಬಹುದು ಅಲ್ಲವೇ..? ಸುಮ್ಮನೆ ಊಹಿಸಿಕೊಳ್ಳಿ ಜನ ಹೇಗೆ ಹೇಗೆ ಕಚ್ಚಾಡಬಹುದು ಎಂದು.. ಹೊಡೆದಾಡ ಬಹುದು ಎಂದು.. ಅಷ್ಟೆ ಮತ್ತೇನಿಲ್ಲ. ಹಾಗೊಮದು ವೇಳೆ ಮಾಂಸಾಹಾರ ಮಾಡಿದರೆ ನಾವು ಸಮ್ಮೇಳನಕ್ಕೆ ಜನರನ್ನು ಕರೆಯುವುದೇ ಬೇಡ… ಅಲ್ಲವಾ ಸಾರ್..

      ಪ್ರತಿಕ್ರಿಯೆ
    • hethur nagaraj

      y sir writen by me (hettur negaraj), k.t shivaprasa avara pratikriye hakiruvudu.

      ಪ್ರತಿಕ್ರಿಯೆ
  12. Adithya

    ಮಡಿ ಮಾಡುವವರು ಬ್ಲಾಗ್ ಮಾಡುವ ಮೊದಲು ಕೀ-ಬೋರ್ಡ್ಗೆ ನೀರು ಸುರಿದು ಮಾಡುತ್ತಾರೋ ಹೇಗೆ? ಮತ್ತಿನ್ಯಾರೋ ಇಲಿ ತಿನ್ನಲಿ ಅಂತಾರೆ ಹಾಗೆ ಅಕ್ಕಿ ರೇಟ್ ಹೆಚ್ಚಾಯ್ತು ಅಂತ ಅವರೂ ಯಾಕೆ ಪಾರ್ಥೇನಿಯಂ ಮೇಯ್ದು ತೋರಿಸಬಾರದು. ಅವರವರ ರುಚಿ ಅವರವರ ಹೊಟ್ಟೆ. ಪರಿಷತ್ ಸಂವಿಧಾನದ ತಳದಲ್ಲೇ ಕಾರ್ಯವಹಿಸೋದು ಪರಿಷತ್ ಕಟ್ಟೆ ಮೇಲೆ ಸಂವಿಧಾನ ಎನೇನು ತಿನ್ನ ಬಹುದು ಅಂತ ಸೂಚಿಸಿದೆಯೋ ಅದನ್ನೆಲ್ಲಾ ಆಪೋಶಿಸ ಬಹುದು. ಮತ್ತಿನ್ಯಾರೋ ಇನ್ನ್ನೇನೋ ತಿಂದರು ಅಂತ ಕೊರಗುವ ಸಮಾಜ ಅದಿನ್ನ್ಯಾವ ಪರಿ ಮತ ಚಲಾಯಿಸುತ್ತೋ, ಅಯ್ಯೋ ರಾಮ.

    ಪ್ರತಿಕ್ರಿಯೆ
  13. vasanthn

    ಸಾಹಿತ್ಯ ಪರಿಷತ್ತು ಆವರಣದಲ್ಲಿ ಸಾಹಿತ್ಯ ಬಿಟ್ಟು ಬೇರೆ ಏನೂ ಇರಬಾರದು; ಆಹಾರಪದಾರ್ಥಗಳನ್ನು ಸೇವಿಸಬಾರದು ಎಂದಾದರೆ, ಯಾವ ಉಪ್ಪಿಟ್ಟಿಗೂ ಅಲ್ಲಿ ಸ್ಥಾನವಿರಬಾರದು. ಹಸಿವಾದವರು ಹತ್ತಿರದ ಹೋಟೆಲ್ಲುಗಳಲ್ಲಿ ತಮಗೆ ಬೇಕಾದ ಏನನ್ನು ಬೇಕಾದರೂ ತಿಂದು ಬರುತ್ತಾರೆ.I indorse Satyanarayan’s views. Yes, If the Parishath allow for consuming vegetarian food why not non-vegetarian food. What is wrong there. We should not humiliate others just because of their different food culture. Otherwise stop serving all kinds of food inside the Hall.

    ಪ್ರತಿಕ್ರಿಯೆ
  14. Sunil Rao

    e barahakke nagabeko alabeko tileetilla…
    naavu janagale haagallave, maaduvudannondu bittu innella maadutteve…
    ishte charche mattu vyaakhyaanagalu kannadada ulivigaagi maatadiddare, atleast upayogavaadaroo aaguttitteno..

    ಪ್ರತಿಕ್ರಿಯೆ
    • Adithya

      ಲ್ಯಾಟಿನ್ ಲಿಪಿಯಲ್ಲಿ ಬರೀತಿರಲ್ಲ, ಮೊದಲು ಕನ್ನಡ ಲಿಪಿ ಉಳಿಸಿ. ನಂತರ ವಿಷಯ ಪಲ್ಲಟ ಮಾಡಿ, I know it’s very hard for you to disentangle the truth from the lies.

      ಪ್ರತಿಕ್ರಿಯೆ
      • sunil Rao

        Dear Mr. Aditya
        ayyo en maadli saar…naanu badava, nan maneli computer illa, nanna blackberry mobile li kannada type maadak aagalla…
        yaava lipi elli ulisabeku annodanna kannada odi baredu swalpa mattige tilidukondiruve endu bhaavisuve….
        thanks for a free suggession 🙂

        ಪ್ರತಿಕ್ರಿಯೆ
        • Adithya

          I’ve another piece of advice for you,
          ಯಾಕಂದ್ರೆ ಸಜೆಶನ್ ನಿಮ್ಮಿಂದ ಪ್ರಾರಂಭವಾಗಿದ್ದು, ಕನ್ನಡದ ಉಳಿವಿಗಾಗಿ ಹೆಚ್ಚು ದುಡಿಮೆಮಾಡಿ ಕನ್ನಡ ಬರೆಯ ಬಹುದಾದ ನವೀನ ಮಾದರಿಯ ತಂತ್ರಾಂಶವುಳ್ಳ ಕಂಪ್ಯೂಟರ್ ಕೊಳ್ಳಿರಿ, ಇಲ್ಲ ಗೂಗಲ್ ಮೊರೆ ಹೋಗಿ, ನಿಮಗೆ ಒಳ್ಳೆಯದಾಗಲಿ.

          ಪ್ರತಿಕ್ರಿಯೆ
  15. -ರವಿ ಮೂರ್ನಾಡು ,ಕ್ಯಾಮರೂನ್

    ಸಾಹಿತ್ಯ ಕ್ಷೇತ್ರದಲ್ಲಿ ಬೇಕಾದಷ್ಟು ವೈರುಧ್ಯಗಳು ನಡೆಯುತ್ತಿರುವುದು ಖೇಧಕರ. ಸಮಾಜದಲ್ಲಿ ಅತ್ಯುನ್ನತ ಗೌರವ ಪಡೆದ ಸಾಹಿತ್ಯದ ಮುಖವಾಣಿಯಲ್ಲಿ ರಾಜಕೀಯ ಉಂಟು, ಜಾತಿ-ಮತ-ಬೇಧ -ಪಂಥಗಳು ಉಂಟು. ಸನ್ಮಾನ-ಪ್ರಶಸ್ತಿ ಕೊಟ್ಟು ಅಸಾಮಾನ್ಯ ಸಾಹಿತಿ ಅಂತ ಗೌರವಿಸಿ ಅವರನ್ನೇ ತಮ್ಮ ಚರ್ಚಾ-ಗೊಂದಲಗಳಿಗೆ ಉದಾಹರಣೆ ಕೊಟ್ಟು ದುರುಪಯೋಗಪಡಿಸಿಕೊಳ್ಳುವ ಸಾಹಿತ್ಯ ಸಂಘಟಕರ ಉತ್ಸಾಹ ನೋಡುವಾಗ ಸಾಹಿತ್ಯ ಏಕೆ, ಯಾರಿಗೆ ಮತ್ತು ಯಾವ ಉದ್ದೇಶಕ್ಕೆ ಅನ್ನುವ ಪ್ರಶ್ನೆ ಬರುತ್ತವೆ.
    ಇದೊಂದು ವಿಧದ ಸಾಹಿತ್ಯ ಅತ್ಯಾಚಾರ ಅನ್ನದೆ ಬೇರೆ ಚಿಂತನೆ ಹೊಳೆಯುವುದಿಲ್ಲ.
    ಸಾಹಿತ್ಯ ರಚನೆಕಾರರಲ್ಲೇ, ಹೊಟ್ಟೆಕಿಚ್ಚು, ಬೆಂಕಿ, ಕಾಲೆಳೆತ, ತುಳಿತ, ಶೋಷಣೆ, ಒಳ್ಳೆಯದಲ್ಲ. ಹೆಸರು ನೋಡಿ ಸಾಹಿತ್ಯ ಆಸ್ವಾಧನೆ ಮಾಡುವುದು ಮಾನವೀಯ ಮನಸ್ಸುಗಳ ಅಶಿಕ್ಷಿತ ಪಲ್ಲಟ ಎನ್ನಲಾಗುವುದು. ಸಾಹಿತ್ಯ ಎಲ್ಲರದ್ದೂ .ಎಲ್ಲರೂ ಒಟ್ಟುಗೂಡಿ ಪ್ರೋತ್ಸಾಹಿಸುವಂತಹದ್ದು. ಜಾತಿಯ ಹೆಸರೇಳಿ ,ನಗರ,ಪಟ್ಟಣ, ಊರು , ಪರಿಚಯಸ್ಥರು ,ಸೌಂಧರ್ಯದ ಮುಖ ನೋಡಿ ಪ್ರೋತ್ಸಾಹಿಸುವ ಗುಂಪುಗಳು ಕಟ್ಟಿಕೊಳ್ಳುವ ಬೇಧ ಪಕ್ರಿಯೇ ಸಾಹಿತ್ಯದಲ್ಲಿ ಸರಿಯಲ್ಲ ಮತ್ತು ಬೇಡ.
    ಇದು “ಎದೆಗೆ ಬಿದ್ದ ಬೆಂಕಿ “. ಮಾನ್ಯ ದೇವನೂರು ಮಹಾದೇವ ಸೇರಿದಂತೆ ಹಲವು ಸಾಹಿತ್ಯ ಮುತ್ಸದ್ಧಿಗಳನ್ನು ಬರಹದಲ್ಲಿ ಉಲ್ಲೇಖಿಸುವ ಅಗತ್ಯ ಇರಲಿಲ್ಲ. ಇದೊಂದು ರೀತಿಯ ಸಾಹಿತ್ಯ ಅವಮಾನ. ಇದನ್ನು ಪ್ರಕಟಿಸಬಾರದಿತ್ತು. ವಿದೇಶದಲ್ಲಿ ಕುಳಿತು ಇಂತಹ ಚರ್ಚೆ ಓದುವಾಗ ಎಲ್ಲೋ ಒಂದು ಸಾಹಿತ್ಯ ಜಿಗುಪ್ಸೆ ಮೂಡುತ್ತಿದೆ. ಸಾಹಿತ್ಯ ಏಕೆ ? ಊಟ ಮಾಡುವುದಕ್ಕಾಗಿಯೇ?
    ಸಾಹಿತ್ಯಕ್ಕೆ ಪಥ್ಯವಲ್ಲದ ಅಂತಹ ವಿಷಯಗಳಿಗೆ ಸಾಹಿತ್ಯದ ಯಾವುದೇ ವೇದಿಕೆಯಲ್ಲಿ ಅವಕಾಶ ಕೊಡಬಾರದು. ಅದು ಪತ್ರಿಕೆಯಾಗಿರಬಹುದು, “ಈ-ಮಾಧ್ಯಮ”ವಾಗಿರಬಹುದು, ಸಾಹಿತ್ಯ ಸಂಘಟನೆಗಳಾಗಿರಬಹುದು. ಇದು ಸಾಹಿತ್ಯವನ್ನು ಹಾದಿ ತಪ್ಪಿಸುವ ವಿಚಾರವಲ್ಲದೆ ಬೇರೇನೂ ಅಲ್ಲ.
    ಸಾಹಿತ್ಯದಲ್ಲಿ ಮಾಂಸ ಊಟದ ವಿಷಯಕ್ಕೆ ಜಗಳವಾಗಿದ್ದರೆ ಅದು ಅತ್ಯಂತ ಕೆಳಮಟ್ಟದ ವಾತಾವರಣಕ್ಕೆ ನಾಂದಿ. ಇದೊಂದು ಸಾಹಿತ್ಯಕ್ಕೆ ಹೊಸ ಮಾದರಿಯ ಗದ್ದಲವೆಬ್ಬಿಸಿದ ಗೊಂದಲ. ಸಾಹಿತ್ಯ ಚರ್ಚೆ ನಡೆಯಬೇಕಾಗಿದ್ದ ತಾಣ ಮನಸ್ಸಿನ ಸ್ವಾಸ್ಥ ರುಚಿಯನ್ನು ಬಿಟ್ಟು ನಾಲಗೆ ರುಚಿಗೆ ತಿರುಗಿಕೊಂಡಿದ್ದು ಅಸಮ್ಮತ. ಮಾನ್ಯ ರೂಪ ಹಾಸನ್ ಅವರು ಈ ವಿಷಯದಲ್ಲಿ ಮೌನ ವಹಿಸಬೇಕಿತ್ತು .

    ಪ್ರತಿಕ್ರಿಯೆ
    • rupa hasana

      maanya ravi avare,
      nimage nanna bagge iruva kalajige dhanyavaadagalu. modalige hinneleyannu spastapadisuttene. sahithya parishath khaali bayalinalli.[venkatesh avaru helidante,sasyaaharigalige ghasi aagadante, sasyaahaaravannu bere kade, mamsaahara bere kade idalaagittu.] adannu baadigege padedu, alli nadediddu maneyalle tayarisi tanda aahaaragala ‘jaanapada aahaara mela’. saahithya karyakrama alla. mamsaahaara maaratadindale prangana apavitravaytu endu kelavaru gullebisiddaru. e kuritu patrikeyondu 10 janara jotege nanna prathikriyeyannuu kelidaaga uttarisuvudu savjanyavallave? mavna kuda nanna vyakthitvakke masi baliyuttittu.ega estella prathirodhada madhye kuda. nanna niluvu sari ide, adannu atyanta ghanathe inda mandisiruve emba samaadhanavide.
      Rupa

      ಪ್ರತಿಕ್ರಿಯೆ
      • ರವಿ ಮೂರ್ನಾಡು ,ಕ್ಯಾಮರೂನ್

        ಧನ್ಯವಾದಗಳು ಮಾನ್ಯರೆ . ಉತ್ತಮ ಸೃಜನಶೀಲ ಕವಯತ್ರಿ ನೀವು. ಅತ್ಯುತ್ತಮ ಸಂವೇಧನಶೀಲ ಸೂಕ್ಷ್ಮತೆ ಗಮನಿಸಿದ್ದೇವೆ. ಅದ್ಬುತ ಕಾವ್ಯ ಆಸ್ವಾಧನೆಯನ್ನು ಕಾವ್ಯ ಓದುಗರ ಪರವಾಗಿ ನಿಮ್ಮಿಂದ ನಿರೀಕ್ಷಿಸುತ್ತೇವೆ. ಗೊಂದಲಕ್ಕೆ ಸಿಲುಕಿಕೊಳ್ಳಬಾರದು. ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ.

        ಪ್ರತಿಕ್ರಿಯೆ
  16. venkatesh

    ನಾಗರಾಜ್ ರವರೆ , ಸತ್ಯ ನಾರಾಯಣರ ಕೊನೆಯ ಮಾತಿನಿಂದ ತಾವು ಏನು ಅರ್ಥೈಸಿಕೊಂಡಿರಿ ಅಂತ ವಿಶದವಾಗಿ ತಿಳಿಸಿ. ನಿಜ ಹೇಳಬೇಕೆಂದರೆ ನನಗೆ ಅದು ಸ್ವಲ್ಪವು ಅರ್ಥ ಆಗ್ಲಿಲ್ಲ. ಅಲ್ಲದೆ ನಿಮ್ಮ ‘ ಮಾಂಸಾಹಾರ ಮಾಡುವ **** ಕರೆಯುವುದೇ ಬೇಡ’ ವಾಕ್ಯದಿಂದ ಸಮ್ಮೇಳನದ ಬಗ್ಗೆ ನಿಮ್ಮ ಖಚಿತವಾದ ಅಭಿಪ್ರಾಯ ಗೊತ್ತಾಗಲಿಲ್ಲ. ಇನ್ನು ಕೊನೆಯದಾಗಿ ಹೇಳುವುದಾದರೆ , ನಿಮ್ಮ ಸ್ವವಿಚಾರ ಮಂಡನೆಯಲಿ ದಾರ್ಶನಿಕರ(ಬುಧ್ಹ.. ಇತ್ಯಾದಿ) ಹೆಸರು ಎಳೆಯಬೇಡಿ. ನೀವು ಬುಧ್ಹ ಮಾಂಸಾಹಾರ ಮಾಡಿದಾನೆ ಅಂತ ಉದಾಹರಿಸಿದರೆ , ಇತರರು ಮಹಾವೀರ , ಶಂಕರ , ಮಧ್ವ , ಬಸವಣ್ಣ .. ಅವರು ಮಾಂಸಾಹಾರ ಮಾಡಿಲ್ಲ , ಹೀಗಾಗಿ ತಮ್ಮ ಅಭಿಪ್ರಾಯವೇ ಸರಿ ಅಂತ ವಾದಿಸುತ್ತಾರೆ.ಆಗ ಏನು ಹೇಳುತ್ತಿರಿ? ಅಲ್ಲದೆ , ಈ ಚರ್ಚೆ ಹೀಗೆ ಮುಂದುವರಿದರೆ ಯಾವ ತಾರ್ಕಿಕ ಅಂತ್ಯನ ಕಾಣುವದಿಲ್ಲ. ಇದು ಏತಕ್ಕೆ ಹೇಳಬೇಕಾಯಿತು ಅಂದರೆ , ಯಾವುದೇ ಒಂದು ವಿಚಾರ ಮಂಡನೆಯಲಿ ದಾರ್ಶನಿಕರ/ದೊಡ್ಡವರ ಮಾತುಗಳನ್ನೋ ಅಥವಾ ವಿಚಾರಗಳನ್ನೋ ಉದಾಹರಿಸಬೇಕೇ ಹೊರತು ಅವರ ವಯಕ್ತಿಕ ಸಂಗತಿಗಳನ್ನಲ್ಲ.

    ಪ್ರತಿಕ್ರಿಯೆ
  17. venkatesh

    ಸುನಿಲ್ ರವರೆ , ಕನ್ನಡದ ಬಗ್ಗೆ ಮಾತಾಡೋ ನೀವು ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿದ್ದರೆ ಸಮಂಜಸ ಅನಿಸುತಿತ್ತು. ಅದರೂ ಏನು ತಪ್ಪು ತಿಳಿಯುವದಿಲ್ಲ ಬಿಡಿ. ಇಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅಲ್ಲದೆ , ಅದನ್ನು ಪೋಷಿಸುವ ಜನರ ನಡುವೆ , ಎರಡು ಪಂಗಡಗಳಾಗಿ ಬಿರುಕು ಮೂಡಿದೆ ಅಂದರೆ ಅದನ್ನು ಸರಿ ಪಡಿಸುವುದು ಕರ್ತವ್ಯ ಅಂತ ತಿಳಿದಿದ್ದೇವೆ. ಅದಕ್ಕಾಗಿ ಈ ಚರ್ಚೆಯೆ ಹೊರತು ಸಮಯ ಹರಣಕ್ಕಲ್ಲ.

    ಪ್ರತಿಕ್ರಿಯೆ
    • sunil Rao

      Mr.Venkatesh sir…
      nanna pratikriyeyannu
      melina aditya avarige uttarisuva moolaka heliddene..
      naanu baredirodu nimage kannadadalliye arthavaaguttide endu naanu bhaavisiddene…
      nanna vaada ishte…saahityada kelasadalloo namage tinnodara baggeye gamanavaa??
      naanu baadoota beda athava vaangibath maatra maadi andilvalla..

      ಪ್ರತಿಕ್ರಿಯೆ
  18. Santhoshkumar LM

    ನನಗೆ ಅನಿಸಿದ್ದೊಂದೇ… “ಸಾವಿನ ಮನೆಗೆ ಹೋದವರಿಗೆ ತಿನ್ನಲು ಏನು ಕೊಟ್ಟರು?” ಎಂಬ ಪ್ರಶ್ನೆಗೆ ಉತ್ತರವಿದ್ದರೂ, ಅದಕ್ಕೆ ಉತ್ತರಿಸಲಾಗದೇ ಮನಸ್ಸಿನಲ್ಲಿ ಮೂಡುವ ಪ್ರಶ್ನೆ,ಭಾವನೆಗಳೇ ಈ ಪ್ರಶ್ನೆಗೆ ಉತ್ತರವಾಗಿ ಮೂಡುತ್ತಿದೆ.ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಸಾಹಿತ್ಯದ ಬಗ್ಗೆ ಬಿಟ್ಟು ಬೇರೆಯೆಲ್ಲದರ ಬಗ್ಗೆ ಮಾತನಾಡುವುದು ಎಷ್ಟು ಸರಿ!!

    ಪ್ರತಿಕ್ರಿಯೆ
  19. hethur nagaraj

    ರೂಪ ಮೇಡಂ ಅವರ ಮಾತು ನಿಜಕ್ಕೂ ಸತ್ಯ. ಕೆಲವರು ತಮ್ಮ ಹಿತಾಸಕ್ತಿಗಳನ್ನು ಬೇಯಿಸಿಕೊಳ್ಳಲು ಆವರಣ ಬಳಸಿಕೊಂಡರು. ಅಲ್ಲಿ ಬೇರೆ ಮಾಂಸ ದೂರ ಇಟ್ಟರು. ಇಲ್ಲಿ ಸಾಹಿತ್ಯಕ್ಕೆ ಸಂಬಂಧ ಇಲ್ಲವೇ ಇಲ್ಲ. ಪರಿಷತ್ ಭವನದಲ್ಲಿ ಹಂದಿಯೂಟ ಬೇಕಿತ್ತೆ ಎಂದು ಕೆಲವರು ಪ್ರಶ್ನೆ ಎತ್ತಿದರು. ರೂಪ ಮೇಡಂ ಅದರಲ್ಲೇನಿದೆ ತಪ್ಪು ಎಂದರು. ಅವರ ವಿರುದ್ಧ ಸಮಯ ಸಾಧಿಸುತ್ತಿದ್ದವರು ವ್ಯಯಕ್ತಿಕ ಜಿದ್ದಿನಿಂದ ಜ್ಐನ ಸಮಾಜದ ಮಹಿಳೆಯಿಂದ ಹೀಗೊಂದು ಹೇಳಿಕೆ ಎಂದು ಬರೆದರು. ಅದು ಬೇರೆ ರೂಪ ಪಡೆದುಕೊಂಡು ಅವರ ಸಮಾಜದಿಂದ ಕ್ಷಮೆ ಕೇಳಿಸುವ ಬೆದರಿಕೆ. ಅಲ್ಲಾ ಸ್ವಾಮಿ ನಮಗೆ ಪ್ರಶ್ನಿಸುವ ಅಧಿಕಾರ, ಪ್ರತಿಕ್ರಿಯಿಸುವ ಅಧಿಕಾರವೂ ಇಲ್ಲವೇ..? ಇದರಲ್ಲೂ ಮ್ಐಲಿಗೆ ಹುಡುಕುವರಿಗೆ ಏನೆನ್ನಬೇಕು..? ಯಾಕೆ ಇತರೆ ವರ್ಗದ ಮಾಂಸ ದೂರ ಇಟ್ಟಿರಿ ಎಂದು ಕಳಿದ್ದು ತಪ್ಪೇ ಅಥವಾ ರೂಪಾ ಮೇಡಂ ಅದರಲ್ಲೇನಿದೆ ತಪ್ಪು..? ಎಂದಿದ್ದನ್ನೇ ಅಪರಾಧ ೆನ್ನುವುದಾದರೆ ಇದನ್ನು ಪ್ರಜಾಪ್ರಭುತ್ವ ಎನ್ನಬೇಕೋ.. ಅಭಿವ್ಯಕ್ತಿ ಹರಣ ಎನ್ನಬೇಕೋ ತಿಳಿಯುತ್ತಿಲ್ಲ. ದನದ ಮಾಂಸ ಎಂದಿದಕ್ಕೆ ಇಷ್ಟೊಂದು ಕೆರಳುವ ಮಹೋದಯರು ಇನ್ನು ಆ ಆವರಣದಲ್ಲಿ ಬಿಡುತ್ತಾರಾ ಸ್ವಾಮಿ… ಕೊನೆಯದಾಗಿ ಈ ಬಗ್ಗೆ ಮಾತನಾಡಿ ಅಥವಾ ಬರೆದು ಓ ಕೀ ಬೋರ್ಡ್ , ಮಾನಿಟರ್ ಗೆ ಮ್ಐಲಿಗೆ ಆಗಿತಲ್ಲಾ ಎಂದು ಮನಸಿನಲ್ಲಿ ಅಂದುಕೊಳ್ಳದಿದ್ದರೆ ನಮಗೆ ಅದೇ ಪುಣ್ಯ…. ರೂಪಾ ಮೇಡಂ ಗೆ ಎಲ್ಲರ ಸಹಕಾರ ಸಹಕಾರ ಇರಲಿ.

    ಪ್ರತಿಕ್ರಿಯೆ
  20. Adithya

    ಅಮೆರಿಕಾದ ಪ್ರಮುಖ ಕೊರಬಾಡು ಬರ್ಗರ್ ಅಂಗಡಿಯೊಂದು ಭಾರತದಲ್ಲಿ ಎರಡು ಮುಖ್ಯ ಪಂಗಡಗಳಿಗೆ ಹೆದರಿ ಎರಡೂ ಪಂಗಡಗಳು ಮುಟ್ಟದ ಮಾಂಸಾಹಾರವನ್ನು ಮಾರಾಟ ಮಾಡುವುದಿಲ್ಲ. ಈ ಕಂಪೆನಿ ಭಾರತದಲ್ಲಿ ಬಂಡವಾಳ ಹೂಡಿದ್ದು ಮಾತ್ರ ಅಮೆರಿಕನ್ನರಿಗೆ ಬಡಿಸಿದ ಕೊರಬಾಡೂಟದ ಲಾಭವನ್ನೇ ಈ ಕಂಪೆನಿಯ ಬಸವನಗುಡಿ ಶಾಖೆಗೆ ಮುಗಿಬೀಳುವವರ ಪೈಕಿ ಗೋಹತ್ಯೆ ನಿಷೇದಕ್ಕೆ ಆಗ್ರಹಿಸುವವರು ಮತ್ತು ಅವರ ಮಕ್ಕಳೇ ಹೆಚ್ಚು. ಇಂತಹ ವಿಚಿತ್ರ ಭಾರತದಲ್ಲಿ ಮಾತ್ರ ನೋಡಬಹುದೇನೋ.

    ಪ್ರತಿಕ್ರಿಯೆ
  21. Adithya

    ಈಗ ಹೇಗಿದ್ದಿಯೋ ಅದೇ ಸರಿ ಈ ಪೋಸ್ಟ್ ಸರಿಯಿಲ್ಲ ಅನ್ನೋದು ಹಿಟ್ & ರನ್ ಇದ್ದಾಗೆ. ಸಾಹಿತ್ಯ ಪರಿಷತ್ನಲ್ಲಿ ಆಹಾರ ತಿನ್ನದೇ ಪುಸ್ತಕ ತಿನ್ನ್ನಲಾಗುವುದಿಲ್ಲ. ಇಂತಹ ವಿಷಯದಲ್ಲಿ ಏನಾದರು! ತಾರ್ಕಿಕ ಅಂತ್ಯ ಕಂಡುಕೊಂಡರೆ!? ಅಂದೇ ನಮ್ಮ ದೇಶದ ಬಿಲಿಯನ್ ಸಮಸ್ಯೆಗಳಿಗೂ ಉತ್ತರ ಸಿಗುತ್ತದೆ. ಹೀಗಾಗಿಯೇ ನಾವೆಂದೆಂದಿಗೂ ಅಭಿವೃದ್ದಿಶೀಲ ರಾಷ್ಟ್ರವಾಗಿಯೇ ಉಳಿದಿದ್ದೇವೆ.

    ಪ್ರತಿಕ್ರಿಯೆ
  22. ಪಂಡಿತಾರಾಧ್ಯ ಮೈಸೂರು

    ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆದ ಆಹಾರ ಮೇಳದಲ್ಲಿ ಮಾಂಸಾಹಾರವೂ ಇದ್ದುದರ ವಿರುದ್ಧ ಸ್ಥಳೀಯ ಪತ್ರಿಕೆಗಳಲ್ಲಿ ಚರ್ಚೆಯಾಗಿ ಹೊರಗಿನವರ ಆರಿವಿಗೇ ಬರದೆಹೋಗಬಹುದಾಗಿದ್ದ ಘಟನೆಯೊಂದು ಸ್ಥಳೀಯ ಪತ್ರಿಕೆಗಳ ಅಂತರಜಾಲ ಆವೃತ್ತಿ ಮತ್ತು ಜಾಲಚರಿಗಳಿಂದ ಸಾರ್ವಜನಿಕರ ಗಮನಕ್ಕೆ ಬಂದುದಲ್ಲದೆ ಒಂದೇ ದಿನದಲ್ಲಿ ಮೂವತ್ತಕ್ಕೂ ಹೆಚ್ಚು ಪ್ರತಿಕ್ರಿಯೆಗಳ ಪ್ರಕಟಣೆ ಸಾಧ್ಯವಾಗಿರುವುದು ಗಮನಾರ್ಹ ಸಂಗತಿ. ಕೆಲವು ಕಾಲದ ಹಿಂದೆ ಗೋಹತ್ಯೆ ಕುರಿತು ಸಾವರ್ಕರ್ ಅವರ ವಿಚಾರಗಳನ್ನು ನಾನು ಪ್ರಕಟಿಸಿದಾಗಲೂ ಇಂಥ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆವುಗಳಲ್ಲಿಯೂ ವೈಚಾರಿಕತೆಯ ಅಂಶ ಕಡಿಮೆ ಇತ್ತು. ಈಗ ಕೂಡ ಪರಿಸ್ಥಿತಿ ಉತ್ತಮವಾಗಿಲ್ಲ.
    ಸಾಹಿತ್ಯ ಪರಿಷತ್ತಿನಂಥ ಸಾರ್ವಜನಿಕ ಸ್ಥಳದಲ್ಲಿ ಆಹಾರ ಮೇಳ ನಡೆದಾಗ ಅಲ್ಲಿ ವಿವಿಧ ಆಹಾರಗಳಿಗೆ ಪ್ರತ್ಯೇಕ ವ್ಯವಸ್ಥೆ ಇದ್ದರೂ ಮಾಂಸಾಹಾರದ ಬಗ್ಗೆ ಸಸ್ಯಾಹಾರಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದು, ಮತ್ತು ಸಾಹಿತ್ಯ ಪರಿಷತ್ತಿನ ಆವರಣ ಬಳಕೆಯಾದುದರ ಬಗ್ಗೆ ಆಕ್ಷೇಪಿಸಿರುವುದು ಸರಿಯಲ್ಲ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಜೈನ ಯುಗ, ವೀರಶೈವ ಯುಗ, ವೈದಿಕ ಯುಗ ಎಂದು ವರ್ಗೀಕರಿಸಿರುವುದರ ಹಿಂದೆ ಸಸ್ಯಾಹಾರಿಗಳ ಆಹಾರ ಕ್ರಮವೇ ಶ್ರೇಷ್ಠ ಎಂಬ ನಂಬಿಕೆ ಇದ್ದುದು ಸ್ಪಷ್ಟವಾಗಿದೆ. ಆಧುನಿಕ ಯುಗದಲ್ಲಿ ಸಾಹಿತ್ಯ ಮತಧರ್ಮದ ಚೌಕಟ್ಟಿನಿಂದ ಮುಕ್ತವಾಗಿ ಬೇರೆಯವರ ಆಹಾರ ಕ್ರಮವೂ ನನ್ನದರಷ್ಟೇ ಮೌಲಿಕವಾದದುದು ಗೌರವಾರ್ಹವಾದುದು ಎಂಬ ಅರಿವು ಇನ್ನೂ ಮೂಡದಿರುವುದು ಚಿಂತಾಜನಕವಾಗಿದೆ. ಕೆಲವು ಪ್ರತಿಕ್ರಿಯೆಗಳು ಹಾಸ್ಯದ ಮುಖವಾಡ ತೊಟ್ಟರೂ ತಮ್ಮ ಅವೈಚಾರಿಕತೆಯನ್ನು ಮುಚ್ಚಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ನಾನು ಸಸ್ಯಾಹಾರಿ. ಆದರೆ ಇನ್ನೊಬ್ಬರ ಆಹಾರಕ್ರಮವನ್ನು ಆಗೌರವದಿಂದ ನೋಡಲು ನನಗೆ ಯಾವ ಹಕ್ಕೂ ಇಲ್ಲ. ನನಗೆ ಇಷ್ಟವಾಗದಿದ್ದರೆ ನಾನು ದುರವಿರಬಹುದು.
    ಈಗ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರತಿನಿಧಿಗಳಿಗೆಂದು ತಯಾರಿಸಿರುವ ಸಸ್ಯಾಹಾರದ ವಿವರ ಕುರಿತ ವರದಿಗಳಿಂದ ಪ್ರತಿನಿಧಿಗಳಿಗೇ ಊಟ ಸಿಗುತ್ತಿಲ್ಲ. ಇನ್ನು ಮಾಂಸಾಹಾರವೂ ಆರಂಭವಾದರೆ ಸಾಹಿತ್ಯ ಸಮ್ಮೇಳನ ಸಂಪೂರ್ಣವಾಗಿ ಆಹಾರ ಮೇಳವೇ ಆದರೆ ಅಶ್ಚರ್ಯವಿಲ್ಲ. ಆದ್ದರಿಂದ ಸಮ್ಮೇಳನದ ಭಾಗವಾಗಿ ಅಹಾರ ಪೂರೈಸುವುದನ್ನು ನಿಲ್ಲಿಸಿ ಸಮ್ಮೇಳನದ ಸಮೀಪ ಆಹಾರ ದೊರೆಯುವ ವ್ಯವಸ್ಥೆಗೆ ಸಹಾಯಧನ ಕೊಟ್ಟು ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಿದರೆ ಅಸಕ್ತರು ತಮಗಿಷ್ಟವಾದ ಆಹಾರ ಪಡೆದು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಆಗ ಯಾರೂ ಮತ್ತೊಬ್ಬರ ಆಹಾರ ಕ್ರಮವನ್ನು ಕೀಳಾಗಿ ಕಾಣುವುದು ತಪ್ಪುತ್ತದೆ.ಸಾಹಿತ್ಯ ಪರಿಷತ್ತು ಸಮ್ಮೇಳನ ನಡೆಸುವಾಗ ಎಲ್ಲರಿಗೂ ಉಚಿತವಾಗಿ ಆಹಾರ ತಯಾರಿಕೆ ಮತ್ತು ವಿತರಣೆಗೆ ಸಾಂಪ್ರದಾಯಿಕ ಮಠ, ದೇವಸ್ಥಾನಗಳನ್ನೇ ಅಶ್ರಯಿಸುವುದೂ ತಪ್ಪಬೇಕು. ಆದನ್ನು ದಾಸೋಹ, ಪ್ರಸಾದ ಇತ್ಯಾದಿ ಮತಧರ್ಮೀಯ ಪರಿಭಾಷೆಯಲ್ಲಿ ಕರೆಯುವುದು ತಪ್ಪಬೇಕು. ವಿಜಾಪುರದಲ್ಲಿ ನಡೆದ ಸಮ್ಮೇಳನದಲ್ಲಿ ಮಠಾಧೀಶರು ವೇದಿಕೆಯ ಮೇಲೆ ದಿವ್ಯಸಾನ್ನಿಧ್ಯ ವಹಿಸುವರಿಂದ ಬಿಡುಗಡೆ ಪಡೆದಂತೆ ಅಹಾರ ವಿತರಣೆಯೂ ಧಾರ್ಮಿಕ ಸಂಬಂಧಗಳಿಂದ ಬಿಡುಗಡೆ ಪಡೆಯಬೇಕು.

    ಪ್ರತಿಕ್ರಿಯೆ
  23. Rj

    ಆಹಾ! ಎಷ್ಟು ಸೊಗಸಾಗಿ ವಿವರಿಸಿದ್ದೀರಿ.
    ಬಿಟ್ರೆ,ಕಮೋಡ್ ಮೇಲೆ ಕೂತ್ಕೊಂಡು ಊಟ ಯಾಕೆ ಮಾಡಬಾರದು?ಅಂತ ಕೇಳಿದರೂ ಕೇಳಿದರೇ!
    ಸ್ವಾತಂತ್ರ್ಯವೆನ್ನುವದು ಸ್ವೇಚ್ಛೆಯಾಗಿ ಮಾರ್ಪಾಡಾಗುವದು ಹೀಗೆಯೇ ಅನಿಸುತ್ತೆ.
    ಇಂಥ ವಿಷಯಗಳಿಗೆಲ್ಲ ಚರ್ಚೆ ಬೇರೆ ಕೇಡು.
    -Rj

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ bharathiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: