ಬಸ್ಸಿನಿಂದಿಳಿದ ಆ ಜೋಡಿಯ ಕಂಗಳು ಹೊಸದೇನನ್ನೊ ಕಾಣುವ ಪ್ರಯತ್ನದಲ್ಲಿವೆ…

ರಾಜೇಶ್ವರಿ ಲಕ್ಕಣ್ಣವರ

ಅದು ನಗರದ ಪ್ರಮುಖ ಸ್ಥಳ. ನೂರಾರು ಜನರು ಅಪರಿಚಿತರು ಅಲ್ಲಿ ಸೇರುತ್ತಾರೆ. ಅಲ್ಲಿ ಎಷ್ಟೋ ಜನ ಉದ್ಯೋಗ ಕಂಡುಕೊಂಡಿದ್ದಾರೆ. ಹಲವಾರು ಭಾವಗಳಿಗೆ ಆ ಸ್ಥಳ ಸಾಕ್ಷಿಯಾಗಿದೆ. ಅದು ಯಾವದು ಎಂದು ಯೋಚನೆ ಮಾಡುತ್ತಿರುವೀರಾ ಅದು ನಗರದ ಪ್ರಮುಖ ಬಸ್‍ಸ್ಟ್ಯಾಂಡ್. ಎಲ್ಲೆಲ್ಲಿಂದಲೋ ಬರುವ ಜನರಿಗೆ ನೆಲೆಯಾಗಿದೆ. ಹಲವಾರು ಜನರಿಗೆ ಆಸರೆ ನೀಡಿದೆ. ಕಂಡು ಕಾಣದಂತೆ ಕೆಲವೊಂದನ್ನು ತನ್ನ ಮಡಿಲಲ್ಲಿಯೆ ಅವಿತಿಸಿಕೊಂಡಿದೆ. ಹುಡುಕಲು ಹೊರಟರೆ ನೂರಾರು ಭಾವಗಳು ಕಣ್ಮುಂದೆ ಪೊರೆಯುತ್ತವೆ.

ಸೂರ್ಯ ಇನ್ನೂ ತನ್ನ ನಿದ್ದೆಯಿಂದ ಎಚ್ಚೆತ್ತುಕೊಳ್ಳುವ ಮುಂಚೆಯೇ ಬಸ್‍ಸ್ಟ್ಯಾಂಡ್‍ನಲ್ಲಿ ಆಗಲೇ ಕೆಲಸದ ತಯಾರಿಯು ಪ್ರಾರಂಭವಾಗಿರುತ್ತದೆ. ನಸುಕಿನಲ್ಲಿಯೆ ಸವಿನಿದ್ದೆಯಲ್ಲಿಯೇ ಊರಿಗೆ ಕಾಲಿಡುವ ಪ್ರಯಾಣಿಕರಿಗಾಗಿ, ಥಂಡಿಯನ್ನು ಹೋಗಲಾಡಿಸಲು, ಕಂಡಕ್ಟರ್, ಡ್ರೈವರ್‍ಗಳನ್ನು ವಿಚಾರಿಸುತ್ತ ಚಾಯ್ ಚಾಯ್ ಎಂದು ಕೂಗುತ್ತ ಚಾಯ್‍ವಾಲ ಒಬ್ಬ ಬಹುಬೇಗ ಪರಿಚಿತನಾಗುತ್ತಾನೆ. ಗಾಳಿಯಲ್ಲಿ, ಬಸ್ಸಿನಲ್ಲಿ ಬಂದಿರುವ ಕಾರಣಕ್ಕೆ ಮುರುಟಿರುವ ಕೈಗಳನ್ನು ಬೆಚ್ಚಗೆ ಮಾಡಿಕೊಳ್ಳಲು, ಚಾಯ್‍ವಾಲಾನ ಪೂರ್ವಾಗ್ರಹವನ್ನು ವಿಚಾರಿಸುತ್ತಾ ಇನ್ನೊಂದು ಟೀ ಕುಡಿದಾಗಲೇ ಸಮಾಧಾನ.

ಹೊತ್ತು ಸರಿಯುತ್ತಾ ಹೋದಂತೆ ಬಸ್‍ಸ್ಟ್ಯಾಂಡ್ ಮತ್ತಷ್ಟು ಕಳೆಗಟ್ಟುತ್ತಾ ಹೋಗುತ್ತದೆ. ಬಸ್ಸಿನಲ್ಲಿ ಬರುವ ಪೇಪರ್ ಬಂಡಲ್‍ಗಳನ್ನು ಇಳಿಸಿಕೊಳ್ಳುತ್ತಾ, ಅವುಗಳನ್ನು ಹೊಂದಿಸಿಕೊಳ್ಳುತ್ತಾ, ಎಲ್ಲೆಲ್ಲಿಗೆ ಎಷ್ಟೆಷ್ಟು ಕಳುಹಿಸಬೇಕೆಂದು ಅದನ್ನು ಪ್ಯಾಕ್ ಮಾಡುವುದರಲ್ಲಿ ಬ್ಯೂಸಿಯಾಗಿರುವ ಹುಡುಗರು. ಬೇಗ ಪೇಪರ್ ಹಾಕಿ ಶಾಲೆಗೆ, ಕಾಲೇಜಿಗೆ ಹೋಗಬೇಕೆನ್ನುವ ಅವಸರದಲ್ಲಿರುವ ಪೇಪರ್ ಹಂಚುವ ಹುಡುಗರು.

ಇನ್ನೊಂದೆಡೆ ಅಲ್ಲೇ ಇರುವ ಹೋಟೆಲ್ಲಿನಲ್ಲಿ ಸದ್ದಿಲ್ಲದೆ ಅಡುಗೆ ಕೆಲಸ ಪ್ರಾರಂಭವಾಗಿರುತ್ತದೆ. ಬಸ್ಸಿನಿಂದ ಇಳಿದ ಪ್ರಯಾಣಿಕ ಮಹಾಶಯ ಬರುವುದು ಇಲ್ಲಿಯೇ ಎಂದು ಹೋಟೆಲ್ ಮಾಲೀಕನಿಗೆ ಗೊತ್ತಿದೆ. ಬೇಗ ಬೇಗ ಮಾಡ್ರೋ ಎಂದು ತಮ್ಮ ಕೆಲಸಗಾರರಿಗೆ ಜೋರು ಮಾಡುತ್ತಿರುತ್ತಾನೆ. ಇವನ ಸಂಬಳಕ್ಕೆ ಇಷ್ಟು ಮಾಡುವುದೇ ಹೆಚ್ಚು ಎಂದು ಮನದಲ್ಲಿಯಯೇ ಕೆಲಸಗಾರ ಗೊಣಗಿಕೊಳ್ಳುತ್ತಿರುತ್ತಾನೆ. ಬಂದವರನ್ನು ಕೇವಲ ಟೀ ಕುಡಿಯಲು ಮಾತ್ರ ಬಿಡದೇ ತಿಂಡಿಯನ್ನು ತಿನ್ನಿಸಬೇಕೆಂಬುದು ಹೇಗೆ ಎಂದು ಮಾಣಿ ಯೋಚಿಸುತ್ತಿರುತ್ತಾನೆ.

ಎಂಟು ಗಂಟೆಯಾಗುತ್ತ ಬಂದ ಹಾಗೇ ಬಸ್‍ಸ್ಟ್ಯಾಂಡ್ ತುಂಬೆಲ್ಲ ತರ-ತರಹದ ಶಾಲಾ-ಕಾಲೇಜಿನ ಸಮವಸ್ತ್ರಗಳು, ಬ್ಯಾಗುಗಳನ್ನು ಹಾಕಿಕೊಂಡು ಒಂದು ಬಸ್ಸಿನಿಂದ ಇಳಿದು ಇನ್ನೊಂದು ಬಸ್ ಹತ್ತುವ ಆತುರದಲ್ಲಿರುವ ವಿದ್ಯಾರ್ಥಿಗಳು. ಮಣಭಾರದ ಬ್ಯಾಗನ್ನು ಬಸ್ಸಿನಲ್ಲಿ ಸೀಟ್ ಸಿಗದೆ ಹೊತ್ತುಕೊಂಡೇ ನಿಂತಿರುವ ಆ ವಿದ್ಯಾರ್ಥಿಯ ಬೇಸರ ಭಾವ ಕಂಡಕ್ಟರ್‍ನ ಮನ ಕಲಕುವಂತಿರುತ್ತದೆ.

ಒಂದು ಬಸ್ಸಿನಿಂದ ಇಳಿದ ಒಂದು ಜೋಡಿಯ ಕಂಗಳು ಹೊಸದೇನನ್ನೋ ಕಾಣುವ ಪ್ರಯತ್ನದಲ್ಲಿರುತ್ತವೆ. ತನ್ನ ಗೆಳೆಯ ಕೊಟ್ಟ ಅಡ್ರೆಸ್, ಫೋನ್ ನಂಬರ್‍ನ್ನು ನೆಚ್ಚಿಕೊಂಡು ಊರು ಬಿಟ್ಟು ಓಡಿ ಬಂದಿರುವ ಅವರು ಅಲ್ಲಿಯ ನೂರಾರು ಜನರ ನೋಟಗಳಿಗೆ ಪ್ರಶ್ನೆ ಆಗುತ್ತಿದ್ದಾರೆ. ತನ್ನ ಸ್ನೇಹಿತ ಕೊಟ್ಟಿರುವ ನಂಬರ್ ಸರಿ ಇರಲೆಂದು ಬೇಡಿಕೊಳ್ಳುತ್ತಾ ಕಾಯಿನ್ ಬಾಕ್ಸ್‍ನಿಂದ ಕಾಲ್ ಮಾಡುತ್ತಿರುತ್ತಾನೆ. ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾನೆ.
ಒಬ್ಬನೂ ತಮ್ಮೂರಿನ ಪರಿಚಿತ ಡ್ರೈವರ್‍ನ ಹತ್ತಿರ ತನಗೆ ಬರುವ ಅಲ್ಪ ಸಂಬಳದಲ್ಲಿಯೇ ಸ್ವಲ್ಪ ಭಾಗವನ್ನು ಅವನಿಗೆ ತೆಗೆದುಕೊಡುತ್ತಾ ಇದನ್ನು ತನ್ನ ಮನೆಗೆ ಮುಟ್ಟಿಸು ಎಂದು ಕೇಳಿಕೊಳ್ಳುತ್ತಿದ್ದಾನೆ.

ಅಲ್ಲಿಗೆ ವ್ಯಾಪಾರಕ್ಕೆಂದು ಬಂದು ನೂರಾರು ಜನ, ದಿನನಿತ್ಯದ ವ್ಯವಹಾರಗಳಿಗೆ ಒಂದೂರಿನಿಂದ ಮತ್ತೊಂದು ಊರಿಗೆ ಬರುವ ನೂರಾರು ಜನರಿಗೆ ಪರಿಚಿತರಿಗೆ, ಅಪರಿಚಿತರಿಗೆ ಬಸ್‍ಸ್ಟ್ಯಾಂಡೆ ಆಧಾರ. ಇಲ್ಲಿ ಪರಿಚಿತರು ಒಮ್ಮಿಂದೊಮ್ಮೆಲೆ ಅಪರಿಚಿತರಾಗುತ್ತಾರೆ. ಅಪರಿಚಿತರು ಮತ್ತಷ್ಟು ಆಪ್ತವಾಗಿ ಚಿರಪರಿಚಿತರಾಗುತ್ತಾರೆ. ಕಣ್ಣಲ್ಲಿಯೇ ಮಾತಾಡಿಕೊಳ್ಳುವ ಹಲವಾರು ಮನಸ್ಸುಗಳು ಇಲ್ಲಿವೆ.

ಅವರೆಂದಿಗೂ ಒಮ್ಮೆಯೂ ಬಾಯಿ ತೆರೆದು ಮಾತನಾಡುವುದಿಲ್ಲ. ಅದು ಸಾಧ್ಯವಿಲ್ಲವೆಂದೂ ಅವರಿಗೂ ತಿಳಿದಿದೆ. ಅಲ್ಲೆಲ್ಲೂ ಮೂಲೆಯಲ್ಲಿ ಮುಡಿ ತುಂಬಾ ಮಲ್ಲಿಗೆ, ಢಾಳಾಗಿ ಮೇಕಪ್ ಮಾಡಿಕೊಂಡು ನಿಂತವಳೊಂದಿಗೆ ದೂರದಿಂದಲೇ ಒಬ್ಬ ಕೈಯಿಂದಲೇ ವ್ಯವಹಾರ ಕುದುರಿಸುತ್ತಿದ್ದಾನೆ. ಅದು ಅವಳಿಗೆ ಒಪ್ಪಿಗೆಯಾದರೆ ಒಟ್ಟಿಗೆ ಹೊರಡುತ್ತಾರೆ. ಮತ್ತೊಂದ ಅರೆ ಘಳಿಗೆಯಲ್ಲಿ ಹೊಸ ವ್ಯಾಪಾರಕ್ಕೆ ಅವಳು ಬಂದು ಕಾಯತೊಡಗುತ್ತಾಳೆ.

ಇಳಿ ಸಂಜೆಯಾದಂತೆ ನಭವೆಲ್ಲ ಕಿತ್ತಳೆಯ ಬಣ್ಣದಲ್ಲಿ ಮಿಂದೇಳುತ್ತಿರುವಂತೆ ಮತ್ತೊಂದು ಹೊಸ ಪ್ರಪಂಚದಂತೆ ತೋರುತ್ತದೆ. ಕೆಲಸ ಮುಗಿಸಿ ಮನೆಗೆ ಹೋಗಲು ಆತುರ. ಲಾಸ್ಟ್ ಬಸ್‍ನ್ನು ತಪ್ಪಿಸಿಕೊಳ್ಳಬಾರದು ಎಂದು ತಮ್ಮೂರಿನ ಬಸ್ಸಿನ ಹಾದಿಯನ್ನು ಕಾಯುತ್ತ ಕುಳಿತಿರುವ ಹಲವಾರು ಜನರು.

ಸಮಯ ಮತ್ತಷ್ಟು ಸರಿಯುತ್ತದೆ. ಬಸ್‍ಸ್ಟ್ಯಾಂಡ್ ಮತ್ತೇ ಹೊಸ ಹಾದಿಯೊಂದಿಗೆ, ಹೊಸ ಜನಕ್ಕೆ ಕಾದು ಕುಳಿತಿದೆ ಮತ್ತಷ್ಟು ಹೊಸ ಭಾವವನ್ನು ಅವಿತಿಸಿಕೊಳ್ಳಲು ಕಾಯುತ್ತಿದೆ..ಹೊಸ ಭಾವವಗಳಿಗಾಗಿ..

‍ಲೇಖಕರು Avadhi GK

March 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ Suma KalasapuraCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: