ಫೇಸ್ ಬುಕ್, ವಾಟ್ಸ್ ಅಪ್ ಗಳನ್ನು ಅದರ ಪಾಡಿಗೆ ಬಿಟ್ಟುಬಿಡೋಣ ಅನ್ನಿಸಿದ್ದು ಸುಳ್ಳಲ್ಲ..

ಸಂತೋಷ್ ಕುಮಾರ್ ಎಲ್ ಎಂ

ಮೂರ್ಮೂರು ತಿಂಗಳಿಗೆ ರಿಪೇರಿಯಾಗಿ ಅಪ್ಪ ರೆಡಿ ಮಾಡುತ್ತಿದ್ದ ಯಾವುದೋ ಒಂದು ರೇಡಿಯೋವೊಂದನ್ನು ಬಿಟ್ಟರೆ, ಶಾಲೆಗೆ ಹೋಗುವಾಗಲೂ ನಮ್ಮ ಓದಿಗೆ ಅಂಥಾ ಅಡಚಣೆಯನ್ನುಂಟು ಮಾಡಬಲ್ಲ ಯಾವುದೇ ವಸ್ತು ಅಂತ ಯಾವುದೂ ಇದ್ದಿರಲಿಲ್ಲ.

ಇಂಜಿನಿಯರಿಂಗಿಗೆ ಬಂದಾಗಲೂ ಅಷ್ಟೇ, ಇಂಜಿನಿಯರಿಂಗ್ ಮುಗಿಯುವ ಹೊತ್ತಿಗೆ ಕೊಂಡ ಟಿವಿಯೊಂದನ್ನು ಬಿಟ್ಟರೆ ಮುಂಚಿನಿಂದಲೂ ಅಂಥಾ ಅಡಚಣೆಗೆ ಯಾವ ಎಲೆಕ್ಟ್ರಾನಿಕ್ ವಸ್ತು ಇದ್ದಿರಲಿಲ್ಲವೆಂಬುದು ನಮ್ಮ ಪಾಲಿಗೆ ಬೇಸರದ ವಿಷಯವೂ ಹೌದು, ಜತೆಗೆ ನಂತರದಲ್ಲಿ ಅನ್ನಿಸಿದ ವರವೆನ್ನಿಸಿದ ವಿಷಯವೂ ಹೌದು.

ಹೀಗಾಗಿ ಏನನ್ನಾದರೂ ಓದಲೇಬೇಕು ಎಂಬ ಹಪಾಹಪಿಯಿದ್ದರೆ ಕಿಟಕಿ ಕದವನ್ನು ಮುಚ್ಚಿ ಕುಳಿತರೆ ಊಟ ತಿಂಡಿಗಳ ಪರಿವೆಯೇ ಇಲ್ಲದೆ ಆ ಕೆಲಸ ಮುಗಿಯುವವರೆಗೆ ಮಗ್ನವಾಗಿರುತ್ತಿದ್ದೆ ಎಂಬುದು ನನಗೆ ನಾನೇ ಬೆನ್ನು ತಟ್ಟಿಕೊಳ್ಳುವ ವಿಷಯವೂ ಹೌದು. ಅದೇ ಕಾರಣಕ್ಕೆ ಇಂಜಿನಿಯರಿಂಗಿನ ಒಂದಷ್ಟು ಕಬ್ಬಿಣದ ಕಡಲೆಯಂಥ ಸಬ್ಜೆಕ್ಟುಗಳನ್ನು ಕಲಿತೆ ಅನ್ನುವುದೂ ಹೌದು.

ಇದ್ದಕ್ಕಿದ್ದ ಹಾಗೆ ಈ ಮನೋಭಾವ ಬದಲಾಗಿ ಹೋಯ್ತು. ಇದು ತೀರಾ ಇತ್ತೀಚೆಗೆ ಎನಿಸುವಷ್ಟು ಈ ವಾಟ್ಸಪ್ಪು, ಫೇಸ್ಬುಕ್ಕು ಬಂದಾಗಿನಿಂದ ಬದಲಾಗಿದೆ. ಅಂದುಕೊಂಡ ಯಾವುದೇ ವಿಷಯವನ್ನು ಕೈಗೆತ್ತಿಕೊಂಡಾಗಲೂ ಮಧ್ಯೆ ಯಾವುದೇ ನೋಟಿಫಿಕೇಷನ್ ಇಲ್ಲದೆಯೂ ಮೊಬೈಲನ್ನೊಮ್ಮೆ ಅನ್ಲಾಕ್ ಮಾಡಿ ನೋಡುವ, ಸುಖಾಸುಮ್ಮನೆ ಪ್ರತೀ ಬಾರಿ ನೋಡುವಾಗಲೂ ಹತ್ತು ನಿಮಿಷ ಕನಿಷ್ಠ ಸಮಯ ವ್ಯಯ ಮಾಡುವ ಪರಿಪಾಠದಿಂದಾಗಿ ದಿನದ ಅತಿದೊಡ್ಡ ಸಮಯವನ್ನು ಇವುಗಳೊಳಗೇ ಕಳೆದುಬಿಡುತ್ತಿದ್ದೀನೇನೋ ಅನ್ನುವ ಭೀತಿ ಶುರುವಾಗಿದೆ. ಅದರಿಂದ ಹೊರಬರಲು ಪ್ರಯತ್ನ ನಡೆಸುತ್ತಲೇ ಇದ್ದೇನೆ.

ಗೆಳೆಯ ಪ್ರಶಾಂತ್ ಸಾಗರ್ ಕೊಟ್ಟ ಯಶವಂತ ಚಿತ್ತಾಲರ “ಶಿಕಾರಿ” ಕಾದಂಬರಿಯನ್ನು ಓದಬೇಕು ಎನ್ನುವ ಉಮೇದಿನಿಂದಲೇ ಇಲ್ಲಿಗೆ ಸಾಗಿಸಿತಂದೆ. ಒಂದೆರಡು ಬಾರಿ “ಓದಿದಿರಾ” ಎಂಬ ಪ್ರಶಾಂತ’ರ ಮಾತಿಗೆ “ಇಲ್ಲ, ಬಿಡುವು ಸಿಕ್ಕಾಗ” ಎನ್ನುವ ಹಾರಿಕೆಯ ಮಾತನ್ನೂ ಕೊಟ್ಟೆ. ಒಂದಷ್ಟು ಕೆಲಸಗಳನ್ನು ಮೈಮೇಲೆ ಎಳೆದುಕೊಂಡಿದ್ದರೂ, ಉಳಿದ ಸಮಯದಲ್ಲಿ ಇದನ್ನು ಓದಬಹುದಿತ್ತು. ಆದರೆ ಈ ಮೊಬೈಲನ್ನು ಸುಖಾಸುಮ್ಮನೆ ಇಣುಕುವ ಪ್ರವೃತ್ತಿಯಿಂದಾಗಿ ಈ ಉಳಿದ ಸಮಯವೆಲ್ಲ ಅರಿವಿಗೆ ಬಾರದೆ ಸರಿದುಹೋಗುತ್ತಿದೆ. ಪ್ರಶಾಂತ್ ಕೂಡ ಈ ಬಗ್ಗೆ ಕೇಳುವುದನ್ನೇ ಬಿಟ್ಟರು.

ಕ್ರಿಸ್ಮಸ್ಸಿಗೆ ನಾಲ್ಕು ದಿನವಿದ್ದೂ ಓದಲಾಗಲಿಲ್ಲ. ಮೊನ್ನೆಯೂ ಹೊಸವರ್ಷದ ವಾರಂತ್ಯದಲ್ಲಿ ಓದಬೇಕು ಎಂದುಕೊಂಡಿದ್ದು ಎರಡು ದಿನ ಕಳೆದು ಹೋದಾಗಲೇ ನನ್ನ ಮೇಲೆ ಬೇಸರ ತರಿಸಿತ್ತು. ಇಂದು ಭಾನುವಾರ ಮನಸ್ಸು ಮಾಡಿದವನೇ ಬೆಳಗ್ಗೆಯಿಂದ ಮೊಬೈಲಿನಲ್ಲಿ ಹೆಚ್ಚು ಸಮಯ ಕಳೆಯದೇ “ಶಿಕಾರಿ” ಶುರು ಮಾಡಿದವನೇ ಒಂದೇ ದಿನದಲ್ಲಿ ಇಡೀ ಕಾದಂಬರಿಯನ್ನು ಓದಿ ಮುಗಿಸಿದೆ. ಆ ಕಾದಂಬರಿಯ ವಿಷಯವೂ ಅಂಥದ್ದೇ. ಶುರು ಮಾಡಿದ್ದಷ್ಟೇ ನನ್ನ ಕೆಲಸ. ತಾನಾಗೇ ನನ್ನನ್ನು ಓದಿಸಿಕೊಂಡಿತು. ಕಡೆಗೆ ಮಧ್ಯರಾತ್ರಿ ಒಂದೂವರೆಗೆ ಮುಗಿಸಿದಾಗ ಏನೋ ಒಂದು ಖುಶಿ.

ಜತೆಗೆ ಮೊಬೈಲನ್ನು(ಅದರೊಳಗಿನ ಫೇಸ್ಬುಕ್ಕು, ವಾಟ್ಸಪ್ಪುಗಳನ್ನು) ಅವುಗಳ ಪಾಡಿಗೆ ಅವನ್ನು ಬಿಡೋಣ ಅನ್ನಿಸಿದ್ದು ಸುಳ್ಳಲ್ಲ. ಅದರೊಳಗೇ ಉಳಿಯುವುದಕ್ಕಿಂತ ಆದಷ್ಟು ಕಡಿಮೆ ಸಮಯ ಕೊಟ್ಟರೆ ಉಳಿದ ಕೆಲಸಗಳತ್ತ ನಿಶ್ಚಿಂತೆಯಿಂದ ಗಮನಹರಿಸಬಹುದೆಂಬ ಜ್ಞಾನೋದಯದೊಂದಿಗೆ..

‍ಲೇಖಕರು Admin

January 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ದಿವ್ಯ ಆಂಜನಪ್ಪ

    ನಿಜ.. ಸಮಾಜದ ಈಗಿನ ವಯಸ್ಸು ಆಯಸ್ಸು ಇಂಡರ್ನೆಟ್ನಲ್ಲೇ ಮುಳುಗಿ ಕಳೆಯುತ್ತಿದೆ. ಬಹು ಬೇಗನೆ ಕಿನ್ನತೆಯು ಆವರಿಸುವಷ್ಟರ ಮಟ್ಟಿಗೆ ಫೇಸ್ ಬುಕ್ ನೊಂದಿಗೆ ಮನಸ್ಸುಗಳು ಸೂಕ್ಷ್ಮಗೊಂಡಿವೆ. ಸಕಾಲಕ್ಕೆ ಸುಂದರ ವ್ಯಾಖ್ಯಾನ … ಧನ್ಯವಾದಗಳು ಸರ್ 🙂

    ಆದರೂ ಮನಸ್ಸಿದಂತೆ ಮಾರ್ಗವೆಂಬಂತೆ. ನಾವು ಮತ್ತು ನಮ್ಮ ವ್ಯಕ್ತಿತ್ವವು ನಮ್ಮ ಅಭಿರುಚಿ, ಅಗತ್ಯ ಅನಿವಾರ್ಯತೆಗಳಂತೆ ಎಂಬುದನ್ನು ಮರೆಯುವಂತಿಲ್ಲ. ರೂಢಿಸಿಕೊಂಡಂತೆ ಭಕ್ತಿ!. 😉
    ಬಹಳಷ್ಟ ರೂಪಗಳಲ್ಲಿ ಈ ಮಾಧ್ಯಮಗಳು ಸಹಕಾರಿಯಾಗಿದ್ದು ಮನುಷ್ಯನ ಒಂಟಿತನ, ಕಿನ್ನತೆಯಂತ ಸಮಸ್ಯೆಗಳಿಗೆ ಉತ್ತರವೂ ಆಗಿದೆ. ಅತೀ ಪ್ರೀತಿಗೆ ಅಮೃತವೂ ವಿಷವೇ ಅಲ್ಲವೇ?. ಹಿತ ಮಿತವಾಗಿದ್ದರೆ ಎಲ್ಲವೂ ನಮ್ಮ ಒಳ್ಳೆಯದಕ್ಕಾಗಿಯೇ ಇರುವುದು.

    ನಿಮ್ಮ ಅಭಿಪ್ರಾಯದಂತೆ ಯುವ ಜನತೆಯನ್ನು ಹಿಡಿದಿಟ್ಟಿರುವ ಈ ಫೇಸ್ ಬುಕ್ ( ವಾಟ್ಸ್ ಆಪ್ ಕೂಡ) ಹಿಂದೆಂದೂ ಇಲ್ಲದ ಹೊಸತನಗಳನ್ನು ಹೊತ್ತಿದ್ದೇ ಅದರ ಶಕ್ತಿಯಾಗಿದೆ. ಹೊಸತನಕ್ಕೆ ತೆರೆದುಕೊಳ್ಳಲು ಹಂಬಲಿಸುವ ಮನಗಳು ಈ ಯುವ ಹೃದಯಗಳಲ್ಲಿಯೇ ಹೆಚ್ಚೆಚ್ಚು ಮಿಡಿಯುತ್ತವೆ ಎಂದೇ ಹೇಳಬಹುದು. ಧನ್ಯವಾದಗಳು ಸರ್ 🙂

    ಪ್ರತಿಕ್ರಿಯೆ
  2. ಶಮ, ನಂದಿಬೆಟ್ಟ

    ಸುಮಾರು ಹದಿನೈದು ದಿನಗಳ ಮಟ್ಟಿಗೆ ನನ್ನ WhatsApp account ಡಿಲೀಟ್ ಮಾಡಿದ್ದೆ. ಸುಮ್ಮನೇ ಪ್ರಾಯೋಗಿಕವಾಗಿ. ನಿಜ ಹೇಳಬೇಕೆಂದರೆ ಯಾವುದೇ ತೊಂದರೆ ಆಗಲಿಲ್ಲ. ಅದಿಲ್ಲದಿದ್ದರೂ ಮೊದಲಿನಷ್ಟೇ ಖುಷಿಯಿಂದ, ನಿರಾಳದಿಂದ ಬದುಕಿದ್ದೆ. ಚಾಟ್ ನಿರಂತರ ಮಾಡುತ್ತಿದ್ದೆನಾದರೂ WhatsApp ಇಲ್ಲ, ಚಾಟ್ ಇಲ್ಲ ಅನ್ನೋ ಕಾರಣಕ್ಕೆ ಯಾವ ಸ್ನೇಹವೂ ಕಡಿಯಲಿಲ್ಲ. ಫೇಸ್ ಬುಕ್ ಲಾಗಿನ್ ಆಗದೇ 15 ದಿನಗಳು ಕಳೆದವು. ಅವುಗಳ ಪಾಡಿಗೆ ಅವನ್ನು ಬಿಟ್ಟು ಖುಷಿಯಾಗಿರಬಲ್ಲೆ ಅನ್ನೋ ವಿಶ್ವಾಸ ನಂಗೆ ಹಮ್ಮೆ ಖುಷಿ ಎರಡನ್ನೂ ಕೊಟ್ಟಿತು.

    ಪ್ರತಿಕ್ರಿಯೆ
  3. ಚಂದ್ರಪ್ರಭಾ ಬಿ.

    ಈ ಬಗೆಯ ಆಲೊೋಚನೆಗಳು ಉಂಟಾಗುವುದರಿಂದ ಮಾತ್ರ ಸಹಜ ಜೀವನ ಸಾಧ್ಯ. ನೆಮ್ಮದಿಯ ಹುಡುಕಾಟದಲ್ಲಿ ತೊಡಗುವ ಂ ಮುನ್ನ ವಾಟ್ಸಪ್ಪು ಇತ್ಯಾದಿಗಳನ್ನೆಲ್ಲ ಹೊರಗಿಡುವುದೇ ಯೋಗ್ಯ ಮಾರ್ಗ… ಥ್ಯಾಂಕ್ಯುೂ ಸಂತೋಷ.

    ಪ್ರತಿಕ್ರಿಯೆ
  4. Ananya tushiraa

    Nija nimma abhipraaya sir, ariveye illade anagarhyavaagi samaya hoguvade hechchu illi. Jagattinondige nantu beseyuttave embudu nijavadaruu..jagatte ave aagibittiruva hedarike kaadiddide. Intha prayoga aageega arogyakke tumba olleyadu..

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಶಮ, ನಂದಿಬೆಟ್ಟCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: