ಪ್ರದರ್ಶನವಾಗಿ ಗೆದ್ದು, ಕಲೆಯಾಗಿ ಸೋತಿರುವ ‘ಅಯೋಧ್ಯಾ ಕಾಂಡ’

ಹೆಚ್ ಎಸ್ ರೇಣುಕಾರಾಧ್ಯ

ಅಧಿಕಾರ ದಾಹದ ಏಕೈಕ ಕಾರಣಕ್ಕಾಗಿ ಅರಮನೆಗಳಲ್ಲಿ ಬಂಧು- ಬಾಂದವರ ಮಧ್ಯೆಯೇ ನಡೆಯುವ ಜಗಳ, ಮತ್ಸರ, ಕುದಿಯುವ ಅಸಹನೆ ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ ಸಾರ್ವಕಾಲಿಕವಾದವು. ಇಂತಹ ಸಾರ್ವಕಾಲಿಕ ಸತ್ಯಗಳನ್ನು ಕಣ್ಣ ಮುಂದೆ ಕಟ್ಟಿಕೊಡುವ ಕಾವ್ಯ ವಾಲ್ಮೀಕಿ ರಾಮಾಯಣ. ಆ ವಾಲ್ಮೀಕಿ ರಾಮಾಯಣದ “ಆಯೋಧ್ಯ ಕಾಂಡ” ವನ್ನು ಕನ್ನಡ ರಂಗಭೂಮಿಯ ಉತ್ತಮ ನಿರ್ದೇಶಕರಲ್ಲಿ ಒಬ್ಬರಾದ ಸಮುದಾಯದ ಪ್ರಸನ್ನ ಅವರು ಪ್ರದರ್ಶನದ ರೂಪವನ್ನೇ ಮುಖ್ಯವಾಗಿ ಇಟ್ಟುಕೊಂಡು ರಂಗದ ಮೇಲೆ ತಂದಿದ್ದಾರೆ.

5ನೇ ತಾರೀಖಿನಿಂದ 8 ರವರೆಗೆ ಮೈಸೂರಿನ ಕಲಾ ಮಂದಿರದ ಆವರಣದಲ್ಲಿನ ಕಿರು ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು. ಶುಕ್ರವಾರ ಸಂಜೆ ಈ ಹೊಸ ನಾಟಕವನ್ನು ನಾನು ನೋಡಿದೆ.

ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ನಾಟಕಗಳಲ್ಲಿ ಪ್ರದರ್ಶನದ ವಿಚಾರದಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಪ್ರದರ್ಶನದ ನಾಟಕ “ಅಯೋಧ್ಯಾ ಕಾಂಡ.”

ರಾಮ ತನ್ನ ತಂದೆಯ ವಚನ ಪರಿಪಾಲನೆಗಾಗಿ, ಅಧಿಕಾರ ತೊರೆದು ಕಾಡಿಗೆ ಹೊರಡುವ ಪ್ರಸಂಗದ ಹಿಂದೆ ದಶರಥನ ಮಡದಿಯಲ್ಲಿರುವ ಸವತಿ ಮತ್ಸರ, ಜಳಗ, ಒಬ್ಬರನ್ನ ಕಂಡರೆ ಒಬ್ಬರಿಗಾಗದ ಅಸಹನೆ, ಮಮತೆಯ ಸುಳಿಯಾಗಿದ್ದ ಮಂಥರೆಯಲ್ಲಿನ ರಾಜಕಾರಣದ ಜಾಣ್ಮೆ, ಕೈಕೆಯಲ್ಲಿನ ತಾಯಿಯ ಸ್ವಾರ್ಥತನ, ಮತ್ತು ತನ್ನ ಮಗನಿಗೇ ಅಧಿಕಾರ ಕೊಡಿಸುವಲ್ಲಿ ಆಕೆ ತಳೆಯುವ ದಿಟ್ಟ ನಿಲುವು, ಇತ್ತ ಕೈಕೆಯಿ ಮೇಲಿನ ಅತೀವ ಪ್ರೇಮ, ಹಾಗೂ ಮಾತುಕೊಟ್ಟು, ಉಳಿಸಿಕೊಳ್ಳಲು ಧರ್ಮ ಸಂಕಟ , ರಾಮ ವಾತ್ಸಲ್ಯದ ತೀವ್ರತೆ , ಜೊತೆಗೆ ಅಸಹಾಯಕತೆ ಇವೆಲ್ಲದರ ಒಟ್ಟಂದವಾದ ದಶರಥ. ಇಷ್ಟೆಲ್ಲಾ ತನ್ನ ಹಿಂದೆ ನಡೆಯುತ್ತಿದ್ದರೂ ಆ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ತಂದೆ ವಚನ ಭ್ರಷ್ಟನಾಗಬಾರದು ಎಂಬ ಏಕೈಕ ಉದ್ದೇಶದಿಂದ ತನ್ನ ಚಿಕ್ಕಮ್ಮನ ಇಚ್ಛೆಯಂತೆ ರಾಜ್ಯಾಧಿಕಾರವನ್ನು ತಿರಸ್ಕರಿಸಿ ರಾಮ ಕಾಡಿಗೆ ಹೊರಡುತ್ತಾನೆ. ಇದು ವಾಲ್ಮೀಕಿ ರಾಮಾಯಣದಲ್ಲಿ ವಾಲ್ಮೀಕಿ ಕಟ್ಟಿಕೊಟ್ಟಿರುವ ಕತೆ.

ಕತೆಯನ್ನು ಕೊಂಚವೂ ಬದಲಾಯಿಸದೆ ಯಥಾವತ್ ಅದೇ ಕತೆಯನ್ನೆ ಪ್ರಸನ್ನರು ರಂಗದ ಮೇಲೆ ಜನಪದ ಕಲೆಯಾದ ದೊಡ್ಡಾಟದ ರೂಪದಲ್ಲಿ ಆಡು ಭಾಷೆಯ ಸಂಭಾಷಣೆಯೊಂದಿಗೆ ಅತ್ಯಂತ ಪ್ರತಿಭಾವಂತ ಪರಿಣತ, ಅತ್ಯುತ್ತಮವಾಗಿ ಹಾಡಬಲ್ಲ ನಟಿ/ ನಟರ ಮೂಲಕ ಇಡೀ ಆಯೋಧ್ಯಾ ಕಾಂಡದ ಕತೆಗೆ ರಂಗದ ಮೇಲೆ ಜೀವ ಕೊಟ್ಟಿದ್ದಾರೆ.

ಇಲ್ಲಿನ ಪ್ರತಿಯೊಂದು ದೃಶ್ಯವೂ ಪ್ರತಿಭಾವಂತ ನಟರ ಕಾರಣಕ್ಕೆ ವ್ಹಾವ್ ಅನ್ನಿಸಿಕೊಳ್ಳುತ್ತದೆ. ನಾಟಕ ನೋಡುತ್ತಿದ್ದರೆ ವಾಲ್ಮೀಕಿ ಹಾಡಿದನೆಂದರೆ ಕಲಿಯುಗ ತ್ರೇತಾಯುಗವಾಯಿತೇನೋ, ದಶರಥ, ಮಂಥರೆ, ಕೈಕೆ ಮತ್ತೆ ಮರುಜೀವ ಹೊತ್ತು ಬಂದರೇನೋ ಅನ್ನಿಸಿಬಿಡುತ್ತದೆ.

ಕುವೆಂಪು ಅವರ ರಾಮಾಯಣ ದರ್ಶನಂ ಮಂಥರೆ ಇಲ್ಲೆ ನಮ್ಮ ಕಣ್ಣ ಮುಂದೆಯೇ ಈಗಲೇ ಇಲ್ಲೇ ಇದಾಳಲ್ಲ ಅನ್ನಿಸಿಬಿಡುವಂತೆ ತನ್ನ ಅತ್ಯುತ್ತಮ ನಟನೆಯಿಂದ ಇಡೀ ಪ್ರೇಕ್ಷಾಗೃಹವನ್ನು ಮಂಥರೆಯ ಪಾತ್ರಧಾರಿಣಿ (ಪದ್ಮಶ್ರೀ, ಮೂಲತಃ ಮೈಸೂರಿನ ಅಶೋಕ್ ಪುರಂ ನವರು ಸದ್ಯ ಈಗ ದೆಹಲಿಯ NSD ಯಲ್ಲಿ ಇದ್ದಾರೆ. ದೆಹಲಿಯಲ್ಲಿ ಇರುವ ಈ ಕನ್ನಡ ರಂಗಭೂಮಿಯ ಈ ಪ್ರತಿಭೆಯ ನಟನೆಯನ್ನು ನೋಡಿಯೇ ಅನುಭವಿಸಬೇಕು) ರಂಗಕ್ಕೆ ಬಂದ ಕ್ಷಣವೇ ಸಮ್ಮೋಹನ ಮಾಡಿ ಬಿಡುತ್ತಾರೆ. ನಾಟಕದ ಕಡೆಗೆ ಪ್ರೇಕ್ಷಕರು ಕೈಕೆ ಮತ್ತು ಮಂಥರೆಯ ಅಭಿಮಾನಿಯಾಗೋದು 100% ಸುಳ್ಳಲ್ಲ.

ಮಂಥರೆ, ಕೈಕೆ, ದಶರಥ, ಭರತ, ಸೇವಕಿ ಈ ಐದೇ ಪಾತ್ರಗಳಿಂದ ಹತ್ತಿರ ಹತ್ತಿರ ಎರಡು ಗಂಟೆಯ ಈ ಶೋ ಪ್ರೇಕ್ಷಕರನ್ನು ತಮ್ಮ ಸಹಜ ನಟನೆ ಮತ್ತು ಹಾಡುಗಾರಿಕೆಯಿಂದ ಸೆಳೆದುಬಿಡುತ್ತಾರೆ.

ಪ್ರಸನ್ನರು ಒಬ್ಬ ನಿರ್ದೇಶಕನಾಗಿ ಪ್ರದರ್ಶನ ಮತ್ತು ಸ್ಕ್ರಿಪ್ಟ್ ನ ಕಾರಣಕ್ಕಾಗಿ ಇಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ರಾಮನ ಹೆಸರಿನಲ್ಲೇ ಕೋಮುವಾದ ಹುಚ್ಚೆದ್ದು ಕುಣಿಯುತ್ತಿರುವ ಈ ಹೊತ್ತಲ್ಲಿ ರಾಮಾಯಣದ ಕತೆ, ವಸ್ತು, ರೂಪಕ ನಿಜಕ್ಕೂ ಏನಾದರೂ ಇವತ್ತಿಗೆ ಪರಿಣಾಮಕಾರಿಯೇ ಅಂದರೆ ಖಂಡಿತಾ ಏನೂ ಇಲ್ಲ.

ವಾಲ್ಮೀಕಿಯ ರಾಮ ರೂಪಕ ಇವತ್ತು ಸತ್ತಿದೆ. ಮತ್ತೆ ಮತ್ತೆ ಅದನ್ನು ಬಳಸುವುದರಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಏನಾದರೂ ಬದಲಾವಣೆ ಸಾಧ್ಯವೇ? ಅಂದರೆ ಖಂಡಿತಾ ಸಾಧ್ಯವಿಲ್ಲ. ಹಳೆಯ ರೂಪಕಗಳನ್ನು ಸಂಘ ಮತ್ತು ಕೋಮುವಾದಿಗಳು ಮತ್ತೆ ಮತ್ತೆ ತಮಗೆ ಬೇಕಾದಂತೆ ಬಳಸಿ ಬಳಸಿ ಅದನ್ನು ಜನಮನದಲ್ಲಿ ಬಿತ್ತಿರುವುದರಿಂದ ಇವತ್ತು ಸೃಜನಶೀಲನಾದ ಲೇಖಕ, ಕಲಾವಿದ, ನಟ, ನಿರ್ದೇಶಕ ಮತ್ತೆ ಅದೇ ಹಳೆಯ ರೂಪಕಕ್ಕೆ ಮರಳಿ ಹೊಸದೇನೊನ್ನೋ ಕೊಡುತ್ತೇನೆ ಎನ್ನುವುದು ಆತನ ಶ್ರಮದ, ಸೃಜನಶೀಲತೆಯ ಸೋಲನ್ನಷ್ಟೆ ಕಾಣಬಹುದೇ ಹೊರತು ಹೊಸತೇನನ್ನು ಕಾಣಲಾಗದು ಅನ್ನಿಸುತ್ತೆ.

ಪ್ರಸನ್ನರು ಅಯೋಧ್ಯಾ ಕಾಂಡದಲ್ಲಿ ರಾಮನನ್ನು ರಂಗದ ಮೇಲೆ ತರುವುದಿಲ್ಲ. ಅದಕ್ಕೆ ಅವರು ಕೊಡುವ ಕಾರಣ, ರಾಮ ಅಧಿಕಾರ ಮೋಹಿಯಲ್ಲ ಅಂತ. ನಿಜ ಆದರೆ ಇವತ್ತು ರಾಮನ ಹೆಸರಿನಲ್ಲಿ ಅಧಿಕಾರ ದಾಹ ಕಾಣುತ್ತಿದ್ದೇವೆ. ಹಾಗಾಗಿ ರಾಮ ಎಂಬುವ ರೂಪಕ ಕ್ಲೀಷೆಯಾಗಿ ಹೋಗಿದೆ. ಕ್ಲೀಷೆಯಾದದ್ದನ್ನು ಅಥವಾ ಸತ್ತ ರೂಪಕಕ್ಕೆ ಜೀವತುಂಬುವುದು ವ್ಯರ್ಥದ ಕೆಲಸ. ಮೂವತ್ತು ನಲ್ವತ್ತು ವರ್ಷಗಳ ಹಿಂದೆ ಪ್ರಸನ್ನರು ಇಲ್ಲಿ ಕಟ್ಟಿರುವ ರಾಮನನ್ನು ನಾವು ಒಪ್ಪಬಹುದಿತ್ತೇನೋ? ಆದರೆ ಇವತ್ತಿಗೆ ಇಲ್ಲಿನ ರಾಮ, ನಾಟಕದಲ್ಲಿ ಹೇಗೆ ತೆರೆಮರೆಯಲ್ಲಿ ಇರುತ್ತಾನೋ ಇವತ್ತೂ ಹಾಗೆ ಆಗಿ ಹೋಗಿದ್ದಾನೆ…

ಒಬ್ಬ ನಿರ್ದೇಶಕನಾಗಿ ಪಾತ್ರಗಳ ಆಯ್ಕೆ, ನಿರೂಪಣೆ, ಪ್ರದರ್ಶನ, ನಟರಿಂದ ಹಳೆಯ ಪ್ರಸನ್ನರು ಇಲ್ಲಿ ಮತ್ತೆ ಜೀವಂತವಾಗಿದ್ದಾರೆ, ಆದರೆ ಇವತ್ತಿಗೆ ಕಲೆಯ ಉದ್ದೇಶವೇನು ಎನ್ನುವ ವಿಚಾರದಲ್ಲಿ ಪ್ರಸನ್ನರ ಸೋಲು ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು.

ಇಂತಹ ಅದ್ಭುತ ಪ್ರದರ್ಶನವನ್ನು ಕಾಣಲು ಕಾರಣರಾದ ಗೆಳೆಯರಾದ ರಾಜೇಶ್ ಬಸವಣ್ಣರಿಗೆ ಅನಂತ ಧನ್ಯವಾದಗಳು.

ದಶರಥ : ರಂಗಾಯಣದ ಹಿರಿಯ ನಟ ಪ್ರಶಾಂತ್ ಹಿರೇಮಠ
ಮಂಥರೆ ಪಾತ್ರಧಾರಿ : ಪದ್ಮಶ್ರೀ ಸಿ.ಆರ್. NSD ಕಲಾವಿದೆ.
ಕೈಕೆ : ರಾಜ್ಯಲಕ್ಷ್ಮಿ
ಭರತ : ವಿಶ್ವಾಸ್ ಕೃಷ್ಣ
ನಿರ್ದೇಶನ : ಪ್ರಸನ್ನ

‍ಲೇಖಕರು Admin

May 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. narayan raichur

    doseya aatmakathe a.na.prahlaadarayarinda vivaragalondige prakatavaagide. palgonda yellarigoo abhinanadanegalu. maru pradarshakkagi kaayuvante maadide.
    musorinalli ayodhya kaanda praygagonda bageeyoo tiliyitu. addo bengaloorige barabahudu noduva.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ narayan raichurCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: