ಪ್ರತಿಭಾ ನಂದಕುಮಾರ್ : ನಾನೇಕೆ ‘ಕಾಗದದ ಸಾಕ್ಷಿ’ ಮಾಡಿದೆ?

‘ಕಾಗದದ ಸಾಕ್ಷಿ’ ಮೇಕಿಂಗ್ ಕುರಿತು

ಪ್ರತಿಭಾ ನಂದಕುಮಾರ್

ಯಾವ ಪಕ್ಷದವರೇ ಆಗಿರಲಿ ಯಾರೇ ಆಗಿರಲಿ ಅನ್ಯಾಯವನ್ನು ಒಪ್ಪಲು ಸಾಧ್ಯವಿಲ್ಲ. ಅನ್ಯಾಯದ ಬಗ್ಗೆ ಸಾತ್ವಿಕ ಕೋಪ ಇಲ್ಲದಿದ್ದರೆ ವ್ಯಕ್ತಿ ಸತ್ತಂತೆ ಲೆಕ್ಕ.

ಅವತ್ತು ವಿನಾಕಾರಣ ಜಾಮಿಯಾ ಮಿಲಿಯಾ ಮಹಿಳಾ ವಿದ್ಯಾರ್ಥಿಗಳ ಗುಪ್ತಾಂಗಗಳ ಮೇಲೆ ಪೊಲೀಸರು ಲಾಠಿಯಿಂದ ಹೊಡೆದು ಅವರನ್ನು ಮಾರಣಾಂತಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನುವ ಸುದ್ಧಿಯನ್ನು ಓದಿ/ನೋಡಿ ಸಿಕ್ಕಾಪಟ್ಟೆ ಸಂಕಟವಾಯಿತು. ಎರಡು ತಿಂಗಳಿಂದ ಹಿರಿಯ ತಾಯಂದಿರು ಪ್ರತಿಭಟಿಸುತ್ತಿದ್ದರೂ ಅವರ ಬಗ್ಗೆ ನಮ್ಮ ದೇಶದ ನಾಯಕರು ಅವರ ಕಡೆಗೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿರುವುದು ಮತ್ತು ಮಹಿಳಾ ವಿದ್ಯಾರ್ಥಿಗಳನ್ನು ಹೊಡೆದರು ಅದರ ಬಗ್ಗೆ ಚಕಾರ ಎತ್ತದಿರುವುದು ದಿಗ್ಭ್ರಮೆ ಹುಟ್ಟಿಸಿದೆ. ಮನೆಯಲ್ಲಿ ತಾಯಿ ನೊಂದು ಅಳುತ್ತಿದ್ದರೆ ಅವಳ ಬಗ್ಗೆ ಅಲಕ್ಷಿಸುವ ಹಿರಿಮಗನ ಬಗ್ಗೆ ಏನು ಹೇಳುವುದು?!

ದೇಶದ ಸಕಲ ತಾಯಂದಿರ ಪರವಾಗಿ ನಾನು ಆ ರಾತ್ರಿ ಒಂದು ಕವನ ಬರೆದೆ. ನನ್ನ ದೃಷ್ಟಿ ಅದೊಂದೇ ಸಂಗತಿಯತ್ತ ಮಾತ್ರ ಇತ್ತು.

ಆ ಕವನವನ್ನು ವಿಡಿಯೋ ಮಾಡಿ ಹಾಕಬೇಕೆನ್ನುವ ಆಸೆ ಆಯಿತು. Rap ಮತ್ತು ಹಿಪ್ ಹಾಪ್ ಹುಟ್ಟಿದ್ದೇ ಆಕ್ರೋಶವನ್ನು ಅಸಹಾಯಕತೆಯನ್ನು ನೋವನ್ನು ಹಂಚಿಕೊಳ್ಳುವ ಸಲುವಾಗಿ. ಹಾಗಾಗಿ ನಾನು ಅದನ್ನು ರಾಪ್ ಮಾಡಬೇಕು ಅಂತ ತೀರ್ಮಾನಿಸಿದೆ.

ಮೊದಲು ಒಂದು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿದೆ. ರಾಪ್ ಮಾಡುವುದು ನನಗೇನು ಹೊಸತಲ್ಲ… ಮೂವತ್ತು ವರ್ಷಗಳ ಹಿಂದೆಯೇ ಒಂದು ರಾಪ್ ಮಾಡಿದ್ದೆ . ಆದರೆ ಅದು ತಮಾಷೆಗಾಗಿ ಮಾಡಿದ್ದಾಗಿತ್ತು. ಈ ಸಲ ವಿಷಯ ಗಂಭೀರವಾಗಿತ್ತು. ಮೊದಲು ಆಡಿಯೋ ರೆಕಾರ್ಡ್ ಮಾಡಿ ನಂತರ ಇಬ್ಬರು ಪ್ರೋಗ್ರಾಮರ್ ಗಳು ಅದಕ್ಕೆ ಸಂಗೀತ ಹಾಕಿದರು.  ಆಮೇಲೆ ವಿಡಿಯೋ ಶೂಟ್ ಮಾಡಿದೆವು. ಇದರ ಪೂರ್ಣ ಪರಿಕಲ್ಪನೆ, “ಹಾಡುವುದು”, ನಟನೆ ನಿರ್ದೇಶನ ನನ್ನದೇ.  ಎಡಿಟಿಂಗ್ ಕೂಡ ನಾನೇ ಕೂತು ಹೇಳಿ ಮಾಡಿಸಿದ್ದು.

ಅದನ್ನು ವಿಡಿಯೋ ಮಾಡುವಾಗ ಮೊದಲು ಬಂದ ಆಲೋಚನೆ ಎಂದಿನಂತೆ rap ಶೈಲಿಯಲ್ಲಿ ಸ್ವ್ಯಾಗ್ ನಲ್ಲಿ ಮಾಡುವುದು. ರೇಷ್ಮೆ ಸೀರೆ ಉಟ್ಟುಕೊಂಡು ಅಡಿಡಾಸ್ ಶೂ ಹಾಕಿ ಕೊಂಡು ಹಿಪ್ ಹಾಪ್ ಶೈಲಿಯಲ್ಲಿ ಮಾಡೋದು ಅಂದುಕೊಂಡೆ. ಆದರೆ ಹಾಗೆ ಮಾಡಿದಾಗ ಅದನ್ನು ಜನ ಒಂದು ಪಾರೋಡಿ – ವಿಡಂಬನೆ – ಎಂದುಕೊಳ್ಳುವ ಸಾಧ್ಯತೆ ಇತ್ತು.  ಅದಕ್ಕೆ ಸುಮ್ಮನೆ ನಾನೇ ಆಗಿ, ಹಿರಿಯ ಮಹಿಳೆಯೊಬ್ಬಳು ತನ್ನ ಅಳಲನ್ನು ತನಗೆ ತಾನೇ ಹೇಳಿಕೊಳ್ಳುತ್ತಿರುವ ಹಾಗೆ ಮಾಡಬೇಕೆಂದು ನಿರ್ಧರಿಸಿದೆ.  ಬೇಕಾದರೆ ಗೊಣಗಿಕೊಳ್ಳುತ್ತಿರುವ ಅನ್ನಿ. ಫೇಸ್ ಬುಕ್ ನಲ್ಲಿ ಟ್ರಾಲ್ ಮಾಡುತ್ತಿರುವ ಅನೇಕರು “ಈ ಮುದುಕಿಗೇನು ಬಂತು ಹಿಂಗೆ ರಸ್ತೆಯಲ್ಲಿ ಬೈದಾಡಿಕೊಂಡು ಓಡಾಡ್ತಿದೆ ” ಅಂತ ಟೀಕೆ ಮಾಡಿದಾಗ “ಓ.. ನನ್ನ ಉದ್ದೇಶ ಸಫಲವಾಯಿತು” ಅಂದುಕೊಂಡೆ.

ನಾನು ಇರುವ ಹಾಗೆಯೇ ಗಾಂಧೀ ಬಜಾರಿನಲ್ಲಿ ಹೇಳಿಕೊಳ್ಳುತ್ತಾ, ನಡೆಯುತ್ತಾ, ವ್ಯಾಪಾರಿಗಳ ಜೊತೆ ಮುಖಾಮುಖಿ ಆಗುತ್ತಾ, ಮ್ಯಾನಕ್ವಿನ್ ಗಳ ಜೊತೆ ಮಾತಾಡುತ್ತಾ, ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುತ್ತಾ ಶೂಟ್ ಮಾಡಿದೆವು. ಜೊತೆಗೆ ಇಬ್ಬರು ಹುಡುಗರಿದ್ದರು. ಒಬ್ಬ ಕ್ಯಾಮರಾಮನ್ ಮತ್ತೊಬ್ಬ ಭರತ್ ಮೂರ್ತಿ, ಫಿಲಂ ಮೇಕರ್ ಮತ್ತು ಗ್ರಾಫಿಕ್ ಆರ್ಟಿಸ್ಟ್, ನನ್ನ ಅಕ್ಕನ ಮಗ.  ನಾವು ಯಾವುದೇ ಪೂರ್ವ ಸಿದ್ಧತೆ ಇಲ್ಲದೇ  ಗೆರಿಲ್ಲಾ ಸ್ಟೈಲ್ ನಲ್ಲಿ ಶೂಟ್ ಮಾಡಿದೆವು. ಕಿತ್ತಳೆ ಹಣ್ಣು ಮಾರುವವನಿಗೆ ರಾಪ್ ಹೇಳುತ್ತಾ ಹಣ್ಣು ಖರೀದಿಸಿದಾಗ ಅವನು ಸ್ಪಾಂಟೇನಿಯಸ್ ಆಗಿ ಪ್ರತಿಕ್ರಿಯಿಸಿದ. ಹಾಗೆಯೇ ಎಲ್ಲರೂ. ಅಲ್ಲಿದ್ದ ಪೊಲೀಸ್ ಬೂತಿನಲ್ಲಿ ಇಣಿಕಿ ನೋಡಿ ಆ ಪೊಲೀಸ್ ಗೊಂಬೆಗೆ ದೂರು ಕೊಟ್ಟೆ. ಅಷ್ಟರಲ್ಲಿ ಅಲ್ಲಿಗೆ ಬಂದ ಮಹಿಳಾ ಪೋಲಿಸ್ “ಗೊಂಬೆಗೆ ಬೈದ್ರೂ ನಮಗೇ ಬೈದ ಥರ ಮೇಡಂ” ಅಂದಳು.  “ಕರೆಕ್ಟ್ ಮೇಡಂ… ಡೆಲ್ಲಿಯಲ್ಲಿ ಹುಡುಗಿಯರಿಗೆ ಹೊಡೆದರೂ  ನಮಗೇ  ಹೊಡೆದ ಥರ” ಅಂದೆ.

ಇಡೀ ಕವನದಲ್ಲಿ ನಾನು ಯಾರನ್ನೂ ಬೈದಿಲ್ಲ, ಯಾವ ಸುಳ್ಳು ಸುದ್ದಿ ಅಥವಾ ಚಿತ್ರವನ್ನೂ ಬಳಸಿಲ್ಲ. ತನ್ನ ಕರ್ತವ್ಯ ಮರೆತ ಮಗನ ಮೇಲೆ ಸಿಡುಕಿದಂತೆ ಇದೆ. ನನ್ನ ಉದ್ದೇಶ ಇದ್ದಿದ್ದು ಅದೇ.

ನಿರೀಕ್ಷಿಸಿದಂತೆ ಸೋಷಿಯಲ್ ಮಿಡಿಯಾನಲ್ಲಿ ಸಿಕ್ಕಾಪಟ್ಟೆ ಟೀಕಿಸಿ ಕಾಮೆಂಟ್ ಹಾಕಿದರು /ಹಾಕುತ್ತಿದ್ದಾರೆ. ಅದು ಸುಮ್ಮಸುಮ್ಮನೆ ಹಾಕುತ್ತಿರುವ ಕಾಮೆಂಟ್.  ಯಾಕಂದರೆ ಅವರಿಗೆ ಅದರ ಕಂಟೆಂಟ್ ಅರ್ಥವಾಗಿಲ್ಲ ಹಾಗಾಗಿ ಬಾಯಿಗೆ ಬಂದಂತೆ ಏನೇನೋ ಬರೆಯುತ್ತಿದ್ದಾರೆ. ಬೈದವರಷ್ಟೇ ಮೆಚ್ಚಿಕೊಂಡವರೂ  ಇದ್ದಾರೆ.

ಈ ಶೈಲಿಯ rap ತುಂಬಾ ವಿಶಿಷ್ಟ, ಇದುವರೆಗೆ ಯಾರೂ ಮಾಡಿಲ್ಲ, ಇದು rap ಗೆ ಬೇರೊಂದು ಆಯಾಮವನ್ನು ತಂದುಕೊಟ್ಟಿದೆ ಎಂದು ಕೆಲವರು ಹೇಳಿದರು. ಕನ್ನಡದಲ್ಲಂತೂ ಈ ವಿಷಯ ಕುರಿತ ಮೊದಲ rap ಎಂದರು.

ಕೆಲವರು ಕವನದ ಪದಗಳು ಗೊತ್ತಾಗುತ್ತಿಲ್ಲ ಅಂದಿದ್ದಕ್ಕೆ ಇಲ್ಲಿ ಅದರ ಪೂರ್ಣ ಪಾಠ.

ಕಾಗದದ ಸಾಕ್ಷಿ

ಸಾಕ್ಷಿ ಕೊಡಬೇಕು

ಇರುವುದರ

ಬದುಕಿರುವುದರ

ಇಲ್ಲೇ ಬದುಕುತ್ತಿರುವುದರ

ಇನ್ನೂ ಸತ್ತಿಲ್ಲದಿರುವುದರ

ಸಾಯುವ ಯೋಚನೆ

ಮಾಡಿಲ್ಲದಿರುವುದರ

 

ಬಾಡು ತಿನ್ನುವವರಿಗೆ ಬಾಳೆಲೆ ಊಟ

ಅದವರ ರಾಮಬಾಣ

ಅರ್ಥಮಾಡಿಕೊಳ್ಳಿ ಸ್ವಲ್ಪ

ಇದವರ ಕೊನೆಯ ಅಸ್ತ್ರ

ಬೇರೆ ದಾರಿ ಇಲ್ಲ ಶರಣು ವಿವಸ್ತ್ರ

 

ಬೀದಿ ದನಗಳು ಗೋವುಗಳ ಕಾಟ

ಉಚ್ಚೆ ಮೂತ್ರ ಸಂಘರ್ಷ ಏನು ಹಾರಾಟ

ಸಮ್ಮತ ಅಸಮ್ಮತ ಬಹಿಷ್ಕೃತ ತಿರಸ್ಕೃತ ಪುರಸ್ಕೃತ

ಇದು ಶಾಸ್ತ್ರೋಕ್ತ ಇದು ನಿಷಿದ್ಧ

ಇದು ಆಗಿಬರುತ್ತೆ ಇದಿಲ್ಲ

ಅಲ್ಲಾಸಿ ಇಲ್ಲಾಸಿ ಯಾವುದೋ

ಕೋಟೆ ಪಕ್ಕದ ಶಾಸನ ತೋರಿಸಿ

ಮೋಡಿ ಅಕ್ಷರಗಳ ತಾಳೆಗರಿಗಳ

ಶಾಸ್ತ್ರಾಧಾರ ಉಲ್ಲೇಖಿಸಿ

ಹಾಗಂತೆ ಹೀಗಂತೆ ವಿಶ್ಲೇಷಿಸಿ – ಕೊನೆಗೆ

 

ಸತ್ತ ಡಿಜಿಟಲ್ ಪ್ಲಾಟ್ ಫಾರ್ಮ್ ಗಳು

ತೆರೆಯದ ಗೂಗಲ್ ಮ್ಯಾಪ್ ಇಲ್ಲ ನೆಟ್ಟುವರ್ಕು

ಸಿಕ್ಕಿಕೊಂಡು ಚಕ್ರವ್ಯೂಹದೊಳಗೆ

ಮುಸುಕಿನೊಳಗಿನ ಗುದ್ದು

ಮುಚ್ಚಿ ಕೊಂಡ ಮುಖ ಚಿರಪರಿಚಿತ,

ಗುಟ್ಟಲ್ಲ

ಕಳಿಸಿದವರೂ ಹೊರಗಿನವರಲ್ಲ

ಹಿಟ್ಲರನ ನೆಂಟರೆ ಎಲ್ಲ

ಕಲೆ ಕಲಾವಿದ ಒಂದೇ

ಪುಡಾರಿ ಕುತಂತ್ರ ಒಂದೇ

ಜೋಡೆತ್ತುಗಳು ಕಷ್ಟಪಟ್ಟು

ಇಷ್ಟಪಟ್ಟು

ನೊಗಕ್ಕೆ ಸಿಕ್ಕಿಕೊಂಡು

ಎತ್ತು ಏರಿಗೆ ಕೋಣ ನೀರಿಗೆ

ದಿಕ್ಕೆಟ್ಟು

ಹೆಜ್ಜೆ ಇಟ್ಟಲೆಲ್ಲ ಜೋಡೆತ್ತು

ಕೆಟ್ಟು ಹೊಲ ಕಣ್ಣೀರಿಟ್ಟು

 

ಮುಸುಕುಧಾರಿಗಳ ದಂಡಪಾಣಿಗಳ

ಸುತ್ತಿಗೆ ಸರಪಳಿಗಳ ಬೂಟುಕಾಲುಗಳ

ಲಾಠಿ ಏಟುಗಳ ಅಶ್ರುಅನಿಲಗಳ ಶತ್ರು ರೋಷಗಳ

ಅರಕ್ಷಕ ಆತ್ಮದ್ರೋಹಿಗಳ ದೇಶಭ್ರಷ್ಟರ

ಮಡದಿ ಮಕ್ಕಳ ತೊರೆದವರ ತಾಯಂದಿರ ಮರೆತವರ

ಬಾಂಬಿಟ್ಟು ಸಿಪಾಯಿಗಳ ಸಿಡಿಸಿದವರ

ರೈಲಿಗೆ ಬೆಂಕಿ ಇಟ್ಟವರ ಮಕ್ಕಳಿಗೆ ವಿಷ ಕೊಟ್ಟವರ

ಅಧಿಕಾರದ ಮದ ಸರ್ಪ ಮತ್ಸರದ ಹಠ ತೊಟ್ಟವರ

ಅಧರ್ಮಕ್ಕೆ ಮಣಿದು  ಸತ್ಯಕ್ಕೆ ವಿಮುಖರಾಗಿ

ಬೀದಿಗಿಳಿದವರ ಕಡೆಗಣಿಸಿ

ಬೂಟುನೆಕ್ಕುವವರ ತಲೆ ಸವರಿ

ಮೇಯುವುದೇ ಕಾಯಕವಾದ

ಪೋಸ್ಟರ್ ಬಾಯ್ ಗಳ

 

ಉದ್ದ ಕತ್ತಿಗಳ ನೀಳ ರಾತ್ರಿ

ಮುರಿದ ಗಾಜುಗಳ ರಾತ್ರಿ

ಕುಡಿದವರ ಕೊಂದ ರಾತ್ರಿ

ಗೋಮಾಂಸ ತಿಂದವರ ಸುಟ್ಟ ರಾತ್ರಿ

ಸಲಿಂಗಿಗಳ ಸಾಯಿಸಿದ ರಾತ್ರಿ

ಪವಿತ್ರ ರಕ್ತ ಕಾಪಾಡಿದ ರಾತ್ರಿ

ಅನ್ಯಮತೀಯರ ರುಂಡ ಚೆಂಡಾಡಿದ ರಾತ್ರಿ

ಪ್ರಯೋಗಕ್ಕೆ  ಬಲಿಪಶುಗಳ ಕತ್ತರಿಸಿದ ರಾತ್ರಿ.

ಹೆಣ್ಣುಗಳ ಹರಣ ಮಾಡಿದ ರಾತ್ರಿ

ಗಂಡುಗಳ ಧಾರಣ ಮಾಡಿದ ರಾತ್ರಿ

ತಂತ್ರಗಳ ಬಲೆ ಯಂತ್ರ ಕಟ್ಟಿದ ರಾತ್ರಿ

ಕೊನೆಯ ಪರಿಹಾರದ ರಾತ್ರಿ.

ರಣರಂಗದಲ್ಲಿ ಹೋದ ಮಾನ

ಫ್ಯೂರರ್ ಬಂಕರಿನಲ್ಲಿ ಬಂದಿತೇ?

ಗಣತಂತ್ರದಲ್ಲಿ ಸರ್ವಾಧಿಕಾರದ ಮದ ಸರಿಯೇ?

ಅಪರಾಧ ಪರಂಪರೆ ಶೋಕಿಯ ಶಾಹುತನ

ಸತ್ತವರ ಪಾಪ ಬದುಕಿದವರ ಬಾಯಲ್ಲಿ

ಪ್ರಾಣ ಹೋಗುವ ಮುನ್ನ ಗುಟುಕು ಗಂಗಾಜಲ

ತ್ರಾಣವಿದ್ದೀತೇ ನುಂಗಲು ತಡೆದೀತೇ ಬ್ರಹ್ಮ ಕಪಾಲ?

 

ಉಳಿಯಲಿಲ್ಲ ಹಿಟ್ಲರ್ ನ ಅಸ್ಥಿಪಂಜರವು ಸಹ

ನಡೆಯಲಿಲ್ಲ ಅಂತ್ಯಕ್ರಿಯೆ ಮರ್ಯಾದೆ ಅಹ

ಸಾಯುವ ಮುನ್ನ ಮನುಷ್ಯನಂತೆ ಬದುಕಲಿಲ್ಲ

ಇವರಿಬ್ಬರೂ ಬುದ್ಧಿ ಕಲಿಯಲಿಲ್ಲ.

 

ಇದು ಮೊನೆಯ ಕುಣಿತ ಬೇರೆಯಲ್ಲ

ಓಡುತ್ತಿದೆ ಕುದುರೆ ಕತ್ತಿಯ ತುದಿಯಲ್ಲ

ಇಬ್ಬರ ಹಠದೆದುರು ಸೆಟೆದು ನಿಂತಿದೆ ಜಗ

“ಧರ್ಮ ಕ್ಷೇತ್ರೇ  ಕುರು ಕ್ಷೇತ್ರೇ”  ಮರೆತಾಯಿತು ಯುಗ

 

ಅರ್ಥವಾಗದು ಉದ್ದೇಶ ಪಥ್ಯವಾಗದು ಕಾರಣ

ಇದು ಮರದ ಮರೆಯಿಂದ ಬಿಟ್ಟ ಬಾಣ

ವಿವರಣೆಯ ಉದ್ಧರಣೆಯಲ್ಲಿ ಬೀಳದು ತೀರ್ಥ

ಕಂಡರಿಯದವರ ಟೀಕೆಗೆ ಬ್ಲಾಕ್ ಮಾಡಿ ಕೃತಾರ್ಥ

 

ನಮ್ಮವರು ಪರಕೀಯರು, ಕಾಣೆಯಾದರು

ನಿಮ್ಮ ತೀಟೆಗೆ ಬೀದಿಗಿಳಿದರು ಗುಂಡಿಗೆ ಬಲಿಯಾದರು

ಹಾಲಿನ ಋಣ ತೀರಿಸದ ಮಗ ಹಾಳಾದನೆಂದು ಶಪಿಸಿದರು

ಮನದ ಮಾತಾಡಿ ಬೀದಿಯಲ್ಲಿ ಮಾನ ಕಳೆದರು

 

ತಿನ್ನುವುದು ಸೇವಿಸುವುದು ಸ್ವೀಕರಿಸುವುದು

ಹೇಗೆ ಬೇಕಾದರೂ ವರ್ಣಿಸಬಹುದು

ಭುಜಿಸುವುದು ಭಜಿಸುವುದು ಭಂಜಿಸುವುದು

ಕೊನೆಗದನ್ನು ಹೊರಹಾಕಲೇಬೇಕು

ಕರಟಕ ಧಮನಕಗಳು ಹೊಂಚು ಹಾಕಿದ್ದು

ಸಿಸಿಟಿವಿಯಲ್ಲಿ ಸೆರೆಯಾಗಿ ಬೇಟೆ ತಪ್ಪಿತು

 

ಇನ್ನು ಅತಿಯಾಸೆ ಗತಿಗೇಡು ದಾರಿ ತಪ್ಪಬಹುದು

ಬಹುದಲ್ಲ ತಪ್ಪಾಯಿತು ಕೂಗುತ್ತಿವೆ

ಸೆಣೆಸುವುದು ಕಷ್ಟ ಇನ್ನು ಪಾಪಕೂಸುಗಳು

ಸವಿ ಜಗಿಯುವ ಹಲ್ಲು ಕಡಿದು ನಾಲಿಗೆಯ

 

ಮಾತಿಲ್ಲ ಕಿವಿಗೆ ಕರ್ಕಶ ಕೇಳುವುದಿಲ್ಲ

ಕಣ್ಣ ನೋಟ ಪಾಕಿಸ್ತಾನ, ಬಿರಿಯಾನಿ ಔತಣ,

ಮುಗಿದು ಆಟ, ಚೌಕಿ ಕತ್ತಲಾಗಿ, ನೆನಪಿದೆ ಮರೆತಿಲ್ಲ

ಡಿಟೆಂಷನ್ ಕ್ಯಾಂಪಿನಲ್ಲಿ ಮಾನ ಹರಣ

ಹಿಟ್ಲರನ ಮರಣ.

 

ಮಾತಾಡುವವರು

ಕೇಳಿಸಿಕೊಳ್ಳಲೂ ಬೇಕು ಮಗ

ಎದುರು ಕೂತವರ ಎದೆಯೊಳಗೆ

ಇಣಿಕಿ ನೋಡಬೇಕು

ಸ್ವಲ್ಪ ಸಡಿಲವಾಗಿ ಕಣ್ಣು ತೇಲಿಸಿ

ನೀಳ ಉಸಿರು ಬಿಟ್ಟು

ಅವರಿವರ ಮಾತಿಗೆ ಕಿವಿಗೊಟ್ಟು

ತಿಳಿದು ಹದ ಬಿಟ್ಟುಕೊಟ್ಟುಪಟ್ಟು

 

ನನ್ನ ಕುದುರೆ ನನ್ನ ಮೈದಾನ

ಎಂದು ರಚ್ಚೆ ಹಿಡಿದು

ಅಡ್ಡಬಂದವರ ತರಿದು

ಡೋಲೋತ್ಸವದ ಅಬ್ಬರದಲ್ಲಿ

ಅಧರ್ಮಕ್ಕೆ ಮಣೆ ಹಾಕಿ

ಅದಕೊಂದು ಹೆಸರಿಟ್ಟು

ಮತ್ತೆ ಮೆಚ್ಚಿಕೊಂಡಾಡುತ್ತಾ

ಮಾಡುತ್ತಾ ಮೋಡಿ ತಿಳಿಯದೇ ಜನ ನಾಡಿ

 

ಅಯ್ಯಾ ಎಲವೋಗಳ ನಡುವೆ

ಸ್ವರ್ಗ ನರಕಗಳು ಹೊಯ್ದಾಡುತ್ತಾ

ಅಜ್ಞಾನಿ ಕೇಳುತ್ತಿದ್ದೇನೆ ಸ್ವಲ್ಪ ತಿಳಿಸಿ

ನಿಮ್ಮ ನಾಲಿಗೆಯ ತ್ರಾಣ ಎಲ್ಲಿಯವರೆಗೆ?

ಹಿಟ್ಲರ್ ನ ಮೀಸೆ ಕುಣಿದಿದ್ದು

ಬಂಕರಿನಲ್ಲಿ ಗುಂಡು ಹೊಡೆದುಕೊಳ್ಳುವವರೆಗೆ.

ಕಾಗದದ ಸಾಕ್ಷಿ ಹಿಡಿದು

ಜೋಡೆತ್ತುಗಳು

ಗುಂಡಿ ತೋಡುತ್ತಿವೆ

ಎಲ್ಲ ಮುಗಿದ ಮೇಲೆ

ದೇಶ ಅಳಿದ ಮೇಲೆ

ಭವ್ಯ ಭಾರತದ ಕಿರೀಟ

ಉರುಳಿದ ಮೇಲೆ

ಕೊನೆಗೆ ಪಶ್ಚಾತ್ತಾಪ ಪಡಬಹುದೇ?

ಮರ್ಯಾದಾ ಪುರುಶೋತ್ತಮ

ನಿಜದ ರಾಮನಾಮ ಜಪಿಸಿ

ಧರ್ಮದೇಟು ತಪ್ಪಿಸಿಕೊಳ್ಳಬಹುದೇ?

**

ಪ್ರತಿಭಾ ನಂದಕುಮಾರ್

 

 

 

 

 

 

 

‍ಲೇಖಕರು avadhi

February 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Kotresh

    ಕವಿ ಕೂಗುಮಾರಿಯಾದಾಗ!

    ಅದು ಹಾರಾಡುವ ರೀತಿಗೆ,
    ರೆಕ್ಕೆಗಳಿವೆ ಎಂಬ ಖುಷಿಗೆ ,
    ಮನ ಸೋತಿದ್ದೆ ಆ ಚಿಟ್ಟೆಗೆ!

    ಇತ್ತೀಚೆಗೆ…..

    ಯಾಕೋ ಕಿರಿಕಿರಿ ಎನಿಸಿತು
    ಭಾರೀ ಶಬ್ದ ಎಂದೆನಿಸಿತು;
    ಮೌನ ನಾಶಮಾಡುತ್ತಿದೆ ಅನಿಸಿತು

    ಈಗ ಸರಿಯಾಗಿ ನೋಡಲೆತ್ನಿಸಿದೆ
    ಚಮಕ್ ಬೆಳಕಿಗೆ ಅದು ಆಕರ್ಷಿತ
    ಆಗುತ್ತಿತ್ತು!
    ನೋಡಿದೆ…ಪರಿಶೀಲಿಸಿದೆ…ಅಯ್ಯೋ
    ಅದು ಏರೋಪ್ಲೇನ್ ಚಿಟ್ಟೆ!!

    ಮೌನ ಅರಿಯದ ಕವಿಯೊಬ್ಬ
    ಕವಿಯೇ?
    ವರ್ತಮಾನಕ್ಕೆ ಸ್ಪಂದಿಸುವ ನೆಪ
    ಎಷ್ಟೆಲ್ಲಾ ಕೂಳತನ!
    ಹಡೆದವ್ವನ ಝಾಡಿಸಿ ಒದೆಯುವ
    ದುಷ್ಟತನ!!

    ಆಗ….

    ಕವಿಯೊಬ್ಬ ಹಾಡಿದನೆಂದರೆ
    ದೇಶವೇ ರೋಮಾಂಚನ;
    ರೋಮ ರೋಮಗಳಲ್ಲಿ ದೇಶ
    ಪ್ರೇಮ!

    ದಾಂಪತ್ಯ, ಸಹಜೀವನ
    ಪವಿತ್ರ ಪ್ರೇಮ!

    ಈಗ….

    ವಂಚನೆ,ಕೂಳತ್ವ….
    ರೋಮ ರೋಮಗಳಲ್ಲಿ
    ಅಪವಿತ್ರ ಪ್ರೇಮ,ಅನೈತಿಕತೆ

    ಮೌನವೆಲ್ಲಾ ಮಲಗಿ ಬಿಟ್ಟಿದೆ;
    ತಣ್ಣನೆಯ ಶವದ ಹಾಗೆ!
    ಕವಿ ಅರಚುತ್ತಿದ್ದಾನೆ….
    ರಾಕ್,ಪಾಪ್…
    ನಾಚಿಕೆ ಬಿಟ್ಟಂತೆ
    ದೇಹವನ್ನೆಲ್ಲಾ ಹರಾಜಿಗಿಟ್ಟಿದ್ದಾನೆ
    ತನ್ನ ತಾ ಮಾರಿ ಕೊಳ್ಳುತ್ತಾ……!
    ಸದ್ದಿಗೆ ಇಲ್ಲಿ ಯಾರೂ ಬೆಲೆ ಕೊಡರು
    ಎಂಬುದ ಮರೆತು!

    ಇಂಥಹದನೆಲ್ಲಾ ಧಿಕ್ಕರಿಸಿಯೂ
    ಅಲ್ಲಲ್ಲಿ….

    ಮೌನ,ಕಾಯಕ ಅರಿತ ಚಿಟ್ಟೆಗಳು
    ಹೂವಿನಿಂದ ಹೂವಿಗೆ ಹಾರಿ
    ಮಕರಂದ ಹೀರುತ್ತಾ,ಕೊಡುತ್ತಾ
    ತೆಗೆದು ಕೊಳ್ಳುತ್ತಾ ಪವಿತ್ರ ಪ್ರೇಮ
    ಬಂಧನ ನಿರ್ಮಿಸುತ್ತಿವೆ ಸದ್ದಿಲ್ಲದೆ!

    —Kotresh Arsikere
    25.02.2020

    ಪ್ರತಿಕ್ರಿಯೆ
    • HS Madhu

      ಚಂದ ಇತ್ತು ಮೇಡಮ್. ನನಗೆ ಆ ಪ್ರಯೋಗಶೀಲ ಸೃಜನಾತ್ಮಕ ಪ್ರಯತ್ನ ಇಷ್ಟ ಆಯ್ತು.

      ಪ್ರತಿಕ್ರಿಯೆ
  2. ಸಚಿನ್‌ಕುಮಾರ ಬ.ಹಿರೇಮಠ

    ರ್ಯಾಪ್ ಹಾಗೂ ಹಿಪ್ ಹಾಪ್ ಗಳು ಸಂಸ್ಕೃತಿ ಹಾಗೂ ಕಲಾಚಳುವಳಿಗಳಾಗಿ ಹುಟ್ಟಿವೆ ನಿಜ. ಆದರೆ ನಿಮ್ಮ ರ್ಯಾಪ್ ಕೇಳಿದಾಗ ಅರ್ಥವಾಗಲಿಕ್ಕೆ ಬಹಳ ಸಮಯ ಬೇಕಾಯಿತು. ರ್ಯಾಪ್ ಸಾಹಿತ್ಯ ಅದ್ಭುತವಾಗಿದೆ. ಸಾಕಷ್ಟು ತೀಕ್ಷ್ಣವಾಗಿಯೇ ಪದಗಳ ಹೋರಾಟ ಸಜ್ಜಾಗಿದೆ. ಆದರೆ ರ್ಯಾಪ್ ಮೂಸಿಕ್ ಗೆ ಹಾಗೂ ಅಲ್ಲಿನ ಚಿತ್ರಿಕೆಗಳ ಅವಸರದಿಂದ ಏನೂ ಅರ್ಥವಾಗಲಿಲ್ಲ. ಸಾಹಿತ್ಯ ಓದಿಕೊಳ್ಳುತ ವಿಡಿಯೋ ನೋಡಿದಾಗ ಮಾತ್ರ ಅರ್ಥ ಸ್ಪಷ್ಟವಾಗುತ್ತದೆ. ಇಂಥದ್ದೊಂದು ಪ್ರಯತ್ನಕ್ಕೆ ಸಲಾಂ…

    ಪ್ರತಿಕ್ರಿಯೆ
  3. RC

    Excellent composition. Personally, hate is not the answer to hate. Both sides have forgotten the path of love and mutual respect. But your poetry is incisive.
    Cheers

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಸಚಿನ್‌ಕುಮಾರ ಬ.ಹಿರೇಮಠCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: