ಪಿಚ್ಚರ್ ಹುಚ್ಚು…

ಸಮತಾ.ಆರ್

“ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ…” ಹಾಡು ಅಲೆ ಅಲೆಯಾಗಿ ತೇಲಿ ಬಂದು ಕಿವಿ ತಾಗಿದಾಗ, ನನ್ನ ಅತ್ಯಂತ ಮೆಚ್ಚಿನ ಹಾಡು ತಂದ ರೋಮಾಂಚನದಿಂದ ಅಡಿಗೆ ಮನೆಯಲ್ಲಿ ಸ್ಟೌವ್ ವರೆಸುತ್ತಿದ್ದವಳು ಒಂದು ನಿಮಿಷ ನಿಂತು “ಇದೆಲ್ಲಿಂದಪ್ಪ ಬರ್ತಿದೆ? ಮನೇಲಿ ಟಿವಿ ಹಾಕಿಲ್ಲವಲ್ಲ” ಅಂದುಕೊಳ್ಳುತ್ತ ಕುತೂಹಲದಿಂದ ಹೊರ ಬಂದರೆ ರಸ್ತೆಯಲ್ಲಿ ಹೋಗುತ್ತಿದ್ದ ಯಾವುದೋ ಕಾರಿನಲ್ಲಿ ಇಡೀ ದೇಶಕ್ಕೆ ಕೇಳುವಷ್ಟು ಜೋರಾಗಿ ಹಾಕಿಕೊಂಡು ಹೋಗುತ್ತಿದ್ದರು.

ಒಳಗೆ ಬಂದರೂ ಹಾಡಿನ ಗುಂಗಿನಿಂದ ಹೊರಬರದೆ ಫೋನ್ ತೆಗೆದು ಯೂ ಟ್ಯೂಬ್ ನಲ್ಲಿ ಹುಡುಕಿ ಮತ್ತೆ  ಮತ್ತೆ ಕೇಳಿದೆ. ಯಾರು ಏನೇ ಹೇಳಲಿ ಸಿನೆಮಾ ಹಾಡುಗಳ ಗುಂಗಿಗೆ ಒಳಗಾಗದವರು ನಮ್ಮ ದೇಶದಲ್ಲಿ ಅತ್ಯಂತ ಕಡಿಮೆಯೇ. ಬರಿ ಹಾಡೇನು ಸಿನೆಮಾ ಎಂಬ ಮಾಯಾಲೋಕದ ಮೋಡಿಗೆ ಒಳಗಾಗದವರು ಉಂಟೇ? ಅದೂ ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಭಾಷೆಗಳಲ್ಲಿ ವೈವಿಧ್ಯಮಯವಾಗಿ ಸಿನೆಮಾಗಳು ತಯಾರಾಗುವ ನಮ್ಮ ದೇಶದಲ್ಲಿ ಸಿನೆಮಾ ಒಂದು ಜಾತ್ಯತೀತ ಧರ್ಮವೇ ಆಗಿ ಹೋಗಿದೆ. ನಮ್ಮ ಮನೆಯಲ್ಲಂತು ಇರೋ ಬರೋ ಎಲ್ಲರೂ ಸಿನೆಮಾ ಪ್ರಿಯರೇ. ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿಯ ಸಿನೆಮಾಗಳು ಇಷ್ಟವಾದರೂ ಒಟ್ಟಾರೆಯಾಗಿ ಎಲ್ಲರಿಗೂ ನಮ್ಮಜ್ಜಿ ಹೇಳುತ್ತಿದ್ದ ಹಾಗೆ “ಪಿಚ್ಚರ್ ಹುಚ್ಚು”.

ಮೊದಲು ನೋಡಿದ ಸಿನೆಮಾ ಯಾವುದು ಅಂತ ಸರಿಯಾಗಿ ನೆನಪಿಲ್ಲವಾದರೂ ಬಹಳ ಚಿಕ್ಕ ವಯಸ್ಸಿನಿಂದಲೇ ನೋಡುತ್ತಿರುವುದು ಮಾತ್ರ ನೆನಪಿದೆ. ನಾವು ಚಿಕ್ಕವರಿದ್ದಾಗ ಅಂದರೆ ಎಂಬತ್ತರ ದಶಕದಲ್ಲಿ ಮನರಂಜನೆಯ ಮಾಧ್ಯಮಗಳು ಸಿನೆಮಾಗಳು ಮತ್ತು ನಾಟಕಗಳು ಮಾತ್ರ. ನಾಟಕಗಳು ಅಂದ್ರೆ ನಮ್ಮ ಊರಲ್ಲಿ ಹಬ್ಬದ ಸಮಯದಲ್ಲಿ ಆಡುತ್ತಿದ್ದ ನಾಟಕಗಳು, ಅದರಲ್ಲೂ ರಜೆಯಲ್ಲಿ ಊರಿಗೆ ಹೋದಾಗ ಮಾತ್ರ ನೋಡಲು ಸಿಗುತಿದ್ದವು. ಹಾಗಾಗಿ ನಾವು ಆಗ ವಾಸವಿದ್ದ ಭದ್ರಾವತಿಯಲ್ಲಿ ಇದ್ದಾಗಲೆಲ್ಲ ಪಿಚ್ಚರ್ಗೆ ಹೋಗೋದೇ ಒಂದು ದೊಡ್ಡ ಮನರಂಜನೆ ನಮಗೆಲ್ಲ. ಆಗ ಟಿವಿ ಹಾವಳಿ ಇನ್ನೂ ಶುರುವಾಗಿರಲಿಲ್ಲವಾದ್ದರಿಂದ ಪಿಚ್ಚರ್ ನೋಡ್ಬೇಕು ಅಂದ್ರೆ ಟಾಕೀಸ್ ಗೆ ಹೋಗಿಯೇ ನೋಡಬೇಕಿತ್ತು. ಆಗ ಭದ್ರಾವತಿ ಯಲ್ಲಿ ನಾಲ್ಕೈದು ಟಾಕೀಸ್ ಗಳಿದ್ದು ನಾಲ್ಕರಲ್ಲು ಕೆಲವೊಮ್ಮೆ ಬೇರೆ ಬೇರೆ ಪಿಚ್ಚರ್ ಹಾಕಿದ್ರೂ, ಒಮ್ಮೊಮ್ಮೆ ಒಂದೆರಡು ಟಾಕೀಸ್ಗಳಲ್ಲಿ ಒಂದೇ ಪಿಚ್ಚರ್ ನಡೆಯೋದು ಇತ್ತು.

ನಮ್ಮಮ್ಮನಿಗೂ ಮತ್ತು ಸುತ್ತ ಮುತ್ತ ಇದ್ದ ಅವರ ಗೆಳತಿಯರಿಗೂ ವಾರಕ್ಕೊಮ್ಮೆ ಒಂದು ಸಿನೆಮಾ ನೋಡದೆ ಇರಲಾಗುತ್ತಿರಲಿಲ್ಲ. ಇನ್ನು ಆ ಕಾಲದಲ್ಲಿ ಹೆಂಗಸರು ಹೆಂಗಸರೇ ಪಿಚ್ಚರ್ಗೆ ಹೋದ್ರೆ ಹೆಂಗೆ? ಆದ್ದರಿಂದ ಜೊತೆಗೆ ತಮ್ಮ ಚಿಳ್ಳೆ ಪಿಳ್ಳೆ ಮಕ್ಕಳನ್ನೂ ಎಳೆದುಕೊಂಡು ಹೋಗುತ್ತಿದ್ದರು. ಟಾಕೀಸ್ ಗಳೇನು ನಡೆದುಕೊಂಡು ಹೋಗುವಷ್ಟು ಹತ್ತಿರದಲ್ಲೇ ಇದ್ದದ್ದರಿಂದ ಒಂದು ಮೂರು ನಾಲ್ಕು ಮನೆಯ ಹೆಂಗಸರು ಮತ್ತವರ ಮಕ್ಕಳ ಸೈನ್ಯವೇ ಮೆರವಣಿಗೆ ಹೊರಟಂತೆ ಪಿಚ್ಚರ್ ನೋಡಲು ಹೊರಡುತ್ತಿದ್ದರು. ಆಗ ಪಿಚ್ಚರ್ ಅಂದ್ರೆ ಕನ್ನಡ ಪಿಚ್ಚರ್ಗಳೇ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್, ಅನಂತನಾಗ್, ಶಂಕರ್ ನಾಗ್, ಪ್ರಭಾಕರ್, ಇತ್ಯಾದಿ ಇತ್ಯಾದಿ ನಾಯಕ ನಟರ ಆ ಕಾಲದ ಹೆಚ್ಚು ಕಡಿಮೆ ಎಲ್ಲ ಪ್ರಸಿದ್ದ ಚಿತ್ರಗಳನ್ನು ನೋಡಿ ಬಿಟ್ಟಿದ್ದೇವೆ.

ಪಿಚ್ಚರ್ ಗೆ ಹೊರಡೋದು ಎಂದರೆ ಎಲ್ಲಾ ಮಕ್ಕಳು ತುದಿಗಾಲಿನಲ್ಲಿ ಹೊರಟು ನಿಂತಿರೋರು, ಅಮ್ಮಂದಿರು ತುಸು ತಡ ಮಾಡಿದರೆ ನಮಗೆಲ್ಲ ಸಿಟ್ಟೋ ಸಿಟ್ಟು. ಪಿಚ್ಚರ್ ಅಂದ್ರೆ ಮೊದಲಿಗೆ ತೋರಿಸೋ ಬ್ಲಾಕ್ ಅಂಡ್ ವೈಟ್ ನ ನ್ಯೂಸ್ ರೀಲ್ ಗಳಿಂದ ಶುರುವಾಗಿ, ಪ್ರೊಡಕ್ಷನ್ ನವರ ದೇವರ ಚಿತ್ರದ ಹಾಡು, ಟೈಟಲ್ ಕಾರ್ಡ್, ಆಮೇಲೆ ಪಿಚ್ಚರ್, ಕೊನೆಗೆ ತೋರಿಸೋ ಶುಭಂ ಅನ್ನೂ ಕೂಡ ಬಿಟ್ಟ ಕಣ್ಣು ಬಿಟ್ಟಂತೆ ನೋಡಿದರೆ ಮಾತ್ರ ಪಿಚ್ಚರ್ ನೋಡ್ದಂಗೆ ಆಗೋದು. ಇದರಲ್ಲಿ ಸ್ವಲ್ಪ ಮಿಸ್ ಆದ್ರೂ ಏನೋ ಕಳೆದುಕೊಂಡ ಭಾವ ನಮಗೆಲ್ಲ. ಆಗೆಲ್ಲ ಪಿಚ್ಚರ್ ಕಥೆ ಗಿತೆ ಬಗ್ಗೆ ನಾವು ಮಕ್ಕಳು ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಒಟ್ಟಾರೆಯಾಗಿ ಚೆಂದದ ಹಾಡು, ಡಾನ್ಸ್, ಫೈಟಿಂಗ್, ಒಂದೆರಡು ನಗು ಬರಿಸೊ ಕಾಮೆಡಿ ಇದ್ದಿದ್ರೆ ಸಾಕಿತ್ತು “ಪಿಚ್ಚರ್ ಸಕ್ಕತ್ತಾಗಿತ್ತು” ಅಂದುಕೊಂಡು ಬರೋವು.

ಆದ್ರೆ ನಮ್ಮ ಅಮ್ಮಂದಿರಿಗೆ ಮಾತ್ರ ಒಳ್ಳೆ ಕಥೆ ಇದ್ದು, ಹೀರೋಯಿನ್ ಒಳ್ಳೊಳ್ಳೆ ಸೀರೆ, ಡ್ರೆಸ್ ಹಾಕ್ಕೊಂಡು ಚೆನ್ನಾಗಿ ಮೇಕಪ್ ಮಾಡ್ಕೊಂಡು ಇದ್ರೆ ಮಾತ್ರ ಒಳ್ಳೆ ಪಿಚ್ಚರ್. ಪಿಚ್ಚರ್ ನೋಡಿ ಬಂದ ಮೇಲೂ ಸಂಜೆ ಯಾರದಾದರೂ ಮನೆ ಜಗಲಿ ಮೇಲೆ ಗುಂಪು ಕೂಡಿ ಕೂತಾಗ ಒಂದು ನಾಲ್ಕು ದಿನವಾದರೂ ಹರಟೆ ಹೊಡೆಯುವಷ್ಟು ಸಾಮಗ್ರಿ ಒದಗಿಸದೇ ಹೋದ್ರೆ ಅದೆಂಥ ಪಿಚ್ಚರ್ರು ಬಿಡ್ರಿ.  ಅಲ್ಲದೆ ಯಾವುದಾದ್ರೂ ಪಿಚ್ಚರ್ ತುಂಬಾ ಇಷ್ಟವಾಗಿ ಬಿಟ್ರೆ ಎರಡು ಮೂರು ಸರಿ ಮತ್ತೆ ಮತ್ತೆ ಅದನ್ನು ನೋಡಿದ್ದೂ ಇದೆ. ರಾಜ್ ಕುಮಾರ್ ಅವರ “ಸತ್ಯ ಹರಿಶ್ಚಂದ್ರ” ನಾವು ವಠಾರದವರೆಲ್ಲ ಒಂದಲ್ಲ ಎರಡಲ್ಲ ಅಂತ ಮೂರು ಸಾರಿ ನೋಡಿದ್ದು.

ಇನ್ನು ಪಿಚ್ಚರ್ಗೆ ಹೋಗೋ ಗುಂಪಲ್ಲಿ ಇದ್ದ ತರೆಹವಾರಿ ಜನರಲ್ಲೀ ನಮ್ಮ ಹಿಂದಿನ ಮನೆಯಲ್ಲೇ ಇದ್ದ ಮನೆ ಓನರ್ ಮನೆಯಜ್ಜಿಯೂ ಒಂದು. ಚೆನ್ನಾಗಿ ಹಸ ಸಾಕ್ಕೊಂಡು, ಬಡ್ಡಿ ವ್ಯವಹಾರ ಮಾಡ್ಕೊಂಡು ಇದ್ದ ಆವಜ್ಜಿ ಕೈಯಲ್ಲಿ ಯಾವಾಗ್ಲೂ ದುಡ್ಡಾಡೋದು. ಹಂಗಾಗಿ “ಶಾಂತಮ್ಮ ನೀನು ಪಿಚ್ಚರ್ಗೆ ಹೋಗ್ಬೇಕಾದ್ರೆ ನನ್ನೂ ವಸಿ ಕರೆದ್ಬಿಡವ್ವ” ಅಂದುಕೊಂಡು ಸುಮಾರು ಸರಿ ನಮ್ಮೊಂದಿಗೆ ಬಂದಿತ್ತು. ಆದ್ರೆ ಟಾಕೀಸ್ನಲ್ಲಿ ಆವಜ್ಜೀ ಪಕ್ಕ ಕೂರೋಕೆ ನಮಗ್ಯಾರಿಗೂ ಇಷ್ಟ ಇರಲಿಲ್ಲ. ಏಕೆ ಅಂದರೆ ಅಜ್ಜಿ ಸುಮ್ನೆ ಪಿಚ್ಚರ್ ನೋಡೋ ಪಾರ್ಟಿಯೇ ಅಲ್ಲ ಡೈಲಾಗ್ಮಧ್ಯೆ ಮಧ್ಯೆ ತನ್ನ ಉದ್ಘಾರಗಳನ್ನೂ ಸೇರಿಸುತ್ತ, ಅಳುವ ಸೀನ್ ನಲ್ಲಿ ಅತ್ತು, ಫೈಟಿಂಗ್ ಸೀನ್ ನಲ್ಲಿ ತಾನೂ ಮುಷ್ಟಿ ಕಟ್ಟಿ “ಹೊಡಿ, ಇಕ್ಕೂ ಆ ನನ್ ಮಗನಿಗೆ” ಅನ್ನುತ್ತಾ, ಕ್ಲಬ್ ಡಾನ್ಸ್ ಬಂದಾಗೆಲ್ಲ “ಥೂ ಲೋಫರ್ ಮುಂಡೆ” ಅಂತೆಲ್ಲ ಶಾಪ ಹಾಕುತ್ತಾ, ರೊಮ್ಯಾಂಟಿಕ್ ಸೀನ್ ಬಂದಾಗ ಸೆರಗಿನಿಂದ ಬಾಯಿ ಮುಚ್ಚಿಕೊಂಡು ಪಿಸ ಪಿಸಾ ನಗುತ್ತಿದ್ದ ಅಜ್ಜಿ ಎಷ್ಟೊಂದು ಬಾರಿ ಅಕ್ಕ ಪಕ್ಕ ಕೂತವರಿಂದ “ಇದ್ಯಕಮ್ಮಾ,ಸುಮ್ನೆ ಕೂತ್ ಗೊಳ್ಳೋಕ್ಕೆ ಆಕ್ಕಿಲ್ವಾ” ಅಂತೆಲ್ಲ ಬೈಯ್ಯಿಸಿಕೊಂಡ್ರೂ ತನ್ನ ಚಾಳಿ ಬಿಟ್ಟಿರಲಿಲ್ಲ.

ಮೊದಲೆಲ್ಲ ಥರಾವರಿ ಕಥೆಗಳ ಪಿಚ್ಚರ್ ಗಳು ಬಂದರೂ, ತೊಂಬತ್ತರ ದಶಕದ ಒಂದು ಸೀಸನ್ ನಲ್ಲಿ ಗೋಳಿನ ಕಥೆಗಳ, ಕಣ್ಣೀರು ಹರಿಸುವ ಸಿನೆಮಾಗಳ ಒಂದು ಟ್ರೆಂಡ್ ಇತ್ತು. ತಾಯಿ, ಕರುಳು, ತವರು ಇತ್ಯಾದಿ ಇತ್ಯಾದಿ ಕರುಳು ಕುಯ್ಯುವ ಹಾಗಿದ್ದ ಕಥೆಗಳ ಪಿಚ್ಚರ್ಗಳನ್ನೆಲ್ಲ ನಮ್ಮ ಹೆಂಗಸರು ನೋಡಿ ನೋಡಿ ಸುಮಾರು ಪಿಚ್ಚರ್ಗಳನ್ನ ಸೂಪರ್ ಹಿಟ್ ಮಾಡಿ ಬಿಸಾಕಿದ್ರು. ಅದರಲ್ಲಿ ಒಂದು ತವರ ಪಿಚ್ಚರ್ಗೆ ಹೀಗೆ ಅಕ್ಕಪಕ್ಕದ ಹೆಂಗಳೆಯರೆಲ್ಲ ಸೇರಿ ಹೊರಟರು. ನನ್ನಣ್ಣ ಮತ್ತು ತಮ್ಮ ಆಗಲೇ ಅಕ್ಷನ್ಪ್ ಪಿಚ್ಚರ್ ಗಳಿಗೆ ಮಾತ್ರ ಆದ್ರೆ ಬರೋ ಅಷ್ಟು ದೊಡ್ಡವರಾಗಿ ಬಿಟ್ಟಿದ್ರು, ಹಂಗಾಗಿ ನಮ್ಮಮ್ಮನ ಜೊತೆ ನಾನು, ಜೊತೆಗೆ ಎದುರು ಮನೆ ಹೋಟೆಲ್ ಇಟ್ಟಿದ್ದ ಬಟ್ರಮ್ಮ, ಅವರ ಮೂರು ಹೆಣ್ಣು ಮಕ್ಕಳು, ಹಿಂದಿನ ಮನೆ ಅಜ್ಜಿ, ಅವರ ಇಬ್ಬರು ಸೊಸೆಯಂದಿರು, ನಮ್ಮನೆ ಕೆಲಸದ ಜಯ ಅವಳ ಮಗಳು ಹೀಗೆ ಮಹಿಳಾ ಸೈನ್ಯವೇ ಹೊರಟಿತು. ಟಾಕೀಸ್ ತಲುಪಿ ಟಿಕೆಟ್ ತೆಗೆದು ಒಳಹೋಗಿ ಕುಳಿತರೆ ಒಂದು ಇಡೀ ಸಾಲೇ ನಮ್ಮ ಪಟಾಲಂದಾಗಿತ್ತು.

ಸರಿ ಪಿಚ್ಚರ್ ಶುರುವಾದ ಒಂದು ಅರ್ಧಗಂಟೆಗೆ ನಾಯಕಿಯ ಕಷ್ಟಗಳು ಶುರುವಾಗಿ ಎಲ್ಲರ ಕಣ್ಣು ಮೂಗುಗಳಲ್ಲಿ ತುಂಗೆ-ಭದ್ರೆಯರು ಹರಿಯಲು ಶುರುವಾದರು. ನನಗೆ ಮತ್ತು ನನ್ನಮ್ಮನಿಗೆ ಮಾತ್ರ ಅಳ ಬರುತ್ತಿದ್ದದ್ದು ಸ್ವಲ್ಪ ಕಡಿಮೆಯೇ, ದುಃಖ್ಖ ಅನಿಸಿದರೂ ಕಣ್ಣಲ್ಲಿ ನೀರೆನೂ ಬರುತ್ತಿರಲಿಲ್ಲ. ಹಾಗಾಗಿ  ಜೊತೆಯವರು ಕಣ್ಣೀರುಗರೆಯಲು ಶುರುವಾದಾಗ ನಾವಿಬ್ಬರೂ ಪರಸ್ಪರ ಮುಖ ನೋಡಿ ಕೊಂಡಾಗ ನನಗರಿವಿಲ್ಲದೆ ಒಂದು ಕಿಸಕ್ ಅಂತ ಹೊರಬಂದ ನನ್ನ ನಗು ನೋಡಿ ನಮ್ಮಮ್ಮನಿಗೂ ನಗು.

ನಂತರ ಪಿಚ್ಚರ್ಗಿಂತ ಹೆಚ್ಚಾಗಿ ಅಕ್ಕ ಪಕ್ಕ ಕೂತವರ ಶೋಕ, ಕಣ್ಣೀರ ಧಾರೆ, ನಿಟ್ಟುಸಿರು, ಉದ್ಗಾರಗಳೇ ಹೆಚ್ಚಿನ ಮನರಂಜನೆ ಒದಗಿಸಲಾರಂಭಿಸಿದವು. ಎಲ್ಲರ ಕರ್ಚೀಫ್ಗಳು ನೆನೆದು, ಸೀರೆಯ ಸೆರಗುಗಳು ಕಣ್ಣೊರೆಸಲಾರಂಭಿಸಿದವು. ಬಟ್ರಮ್ಮಾ ಅಂತೂ ಸೀರೆಯ ಸೆರಗೂ ಸಾಲದೆ ಕೆಳಗೆ ಬಗ್ಗಿ ತಮ್ಮ ಸೀರೆಯ ಅಡಿಯ ಪೆಟ್ಟಿ ಕೋಟಿನಿಂದ ಜೋರಾಗಿ ಮೂಗು ಹಿರಿದು ಕೊಂಡಾಗಲಂತು ನನ್ನ ನಗು ಉಕ್ಕಿ ಉಕ್ಕಿ ಬರಲಾರಂಭಿಸಿತು. ಅಂತೂ ಕಷ್ಟ ಪಟ್ಟು ನಗು ತಡೆದುಕೊಂಡು ಹೇಗೋ ಪಿಚ್ಚರ್ ಮುಗಿಸಿ ಆಚೆ ಬಂದಾಗ ನೋಡಿದರೆ ಎಲ್ಲರ ಮುಖಗಳು ಬಾತುಕೊಂಡು, ಕಣ್ಣೆಲ್ಲಾ ಕೆಂಪಾಗಿ ಎಲ್ಲರೂ ದುಃಖ ತಪ್ತರಾಗಿರುವುದ ಕಂಡು ನಮ್ಮ ಓನರ್ ಅಜ್ಜಿ ಹೇಳೇ ಬಿಡ್ತು “ಅಲ್ಲ ಕಣ್ ಶಾಂತಮ್ಮ, ದುಡ್ ಕೊಟ್ಟು ಅಳಕೆ ಬರ್ಬೇಕಿತ್ತ, ನಾನ್ ಇನ್ಮೇಲೆ ಇಂಥ ಪಿಚ್ಚರ್ಗೆಲ್ಲಾ ಬರಕ್ಕಿಲ್ಲ, ರವಿಚಂದ್ರನ್ ಪಿಚ್ಚರ್ರೇ ಸರಿ ನೋಡು, ಪುಣ್ಯಾತ್ಮ ಒಂದು ಪಿಚ್ಚರ್ ನಲ್ಲು ಅಳ್ಸಿಲ್ಲ ಅವ್ನು” ಅಂತ ತನ್ನ ಅಂತಿಮ ನಿರ್ಣಯ ಕೊಟ್ಟೆ ಬಿಡ್ತು. ಹಾಗೆ ಕೆಲವರ್ಷಗಳ ಬಳಿಕ ಎಂಬತ್ತರ ದಶಕದ ಮಧ್ಯ ಭಾಗ ಮತ್ತು ತೊಂಬತ್ತರ ದಶಕದಿಂದ ಪ್ರಾರಂಭವಾಗಿ ಟಿವಿ ಎಂಬ ಮಾಯಾ ಪೆಟ್ಟಿಗೆ ಎಲ್ಲರ ಮನೆಗಳ ಪ್ರವೇಶಿಸಿ ತನ್ನ ಝಂಡಾ ಊರಿದ ಬಳಿಕ ಟಾಕೀಸ್ಗೆ ಹೋಗಿ ನೋಡುವುದರ ಜೊತೆಗೆ ಬೋನಸ್ಸಿನಂತೆ ವಾರಕ್ಕೊಂದು ದಿನ ಭಾನುವಾರದಂದು ಪಿಚ್ಚರ್ಗಳು ನೋಡಲು ಸಿಗಲಾರಂಭಿಸಿದವು.

ಆಗ ಬೆಂಗಳೂರಿನಲ್ಲಿ ಮಾತ್ರ ಕನ್ನಡ ದೂರದರ್ಶನ ಕೇಂದ್ರದ ಪ್ರಸಾರವಿದ್ದು ಮತ್ತೆ ಬೇರೆ ಜಿಲ್ಲೆಗಳಲ್ಲಿ ದೆಹಲಿ ಕೇಂದ್ರದ ಪ್ರಸಾರ ಆಗುತಿತ್ತು. ಹಾಗಾಗಿ ನಮಗೆಲ್ಲ ಹಿಂದಿ ಪಿಚ್ಚರ್, ಧಾರಾವಾಹಿಗಳು ನೋಡಲು ಸಿಕ್ಕಿ, ನಾವು ನೋಡಿ ನೋಡಿ ಹಿಂದಿಯನ್ನು ಶಾಲೆಯಲ್ಲಿ ಕಲಿಸುವ ಮುನ್ನವೇ ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಮಾತನಾಡಲು ಕಲಿತು ಬಿಟ್ಟಿದ್ದೆವು. ಆದ್ರೆ ಮಕ್ಕಳು ಕಲಿತಷ್ಟು ವೇಗದಲ್ಲಿ ದೊಡ್ಡವರು ಕಲಿಯಲಾಗದೆ ನಮ್ಮಮ್ಮ ಟಿವಿ ನೋಡುವಾಗೆಲ್ಲ ನಾವು ಯಾರಾದರೂ ದುಭಾಷಿಗಳಂತೆ ಕೆಲಸ ಮಾಡಬೇಕಿತ್ತು. ಹಿಂದಿ ಕಲಿತ ಮೇಲೆ ಹಿಂದಿ ಪಿಚ್ಚರ್ ನೋಡೋದಕ್ಕೂ ಶುರು ಹಚ್ಚಿಕೊಂಡು ಟಿವಿ ಮತ್ತು ಟಾಕೀಸ್ ನಲ್ಲಿ ನೋಡಿರೋದಕ್ಕೆ, ತಾನೇ ತಾನಾಗಿ ಬೈಹಾರ್ಟ್ ಆದ ಹಾಡುಗಳಿಗೆ ಲೆಕ್ಕವೇ ಇಲ್ಲ. ಆಗ ಉಂಟಾದ ಶಾರುಖ್ ಖಾನ್ ಮೇಲಿನ ಕ್ರಷ್ ಇನ್ನೂ ಕಡಿಮೆಯಾಗಿಲ್ಲ. ಈಗಲೂ ಅವನ ಯಾವುದಾದ್ರೂ ಪಿಚ್ಚರ್ ನೋಡಬೇಕಾದರೆ ಎದೆಯಲ್ಲಿ ಏನೋ ಚಳಕ್ ಅನ್ನೋದು ನಿಂತಿಲ್ಲ.

ಮನೆಯಲ್ಲಿ ಎಲ್ಲರೂ ಹೀಗೆ ಸಿನೆಮಾ ವ್ಯಾಮೋಹಿಗಳಾದರೂ ನಮ್ಮಪ್ಪ ಮಾತ್ರ ಯಾವ ಟಾಕೀಸ್ಗೂ ಹೋದವರಲ್ಲ. ಶಾಲಾ ಕಾಲೇಜು ದಿನಗಳಲ್ಲಿ ಮಸ್ತಾಗಿ ನೋಡಿ ನೋಡಿ ಆಗಿದ್ದ ಸಂತೃಪ್ತತೆಯೇ ಕಾರಣ ಅವರ ಈ ಸಿನೆಮಾ ವೈರಾಗ್ಯಕ್ಕೆ. ಈಗ ಅವರು ಕೇವಲ ಕಲಾ ಸಿನೆಮಾಗಳನ್ನ ಮಾತ್ರ ನೋಡೋರು. ಆಗ ದೂರದರ್ಶನದಲ್ಲಿ ಪ್ರತಿ ಭಾನುವಾರ ಮಧ್ಯಾಹ್ನ ಪ್ರಶಸ್ತಿ ವಿಜೇತ ಕಲಾ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದರು. ನಾನು ನಮ್ಮಪ್ಪ ಬಿಡದೆ ಎಷ್ಟೊಂದು  ಸತ್ಯಜಿತ್ ರೇ, ಕಾಸರವಳ್ಳಿ, ನಿಹಲಾನಿ, ಬೆನೆಗಲ್, ಅಡೂರು ಮುಂತಾದ ಪ್ರಸಿದ್ಧ ನಿರ್ದೇಶಕರ ಚಿತ್ರಗಳನ್ನು ನೋಡಿದ್ದೇವೆ. ಮನೆಯಲ್ಲಿ ಇನ್ಯಾರಿಗೂ ಅಂತಹ, ನಮ್ಮಣ್ಣನ ಪ್ರಕಾರ “ಕುಯ್ಯೊ ಪಿಚ್ಚರ್” ನೋಡೋಕೆ ಇಷ್ಟ ಇರಲಿಲ್ಲ. ತಮಾಷೆ ಎಂದರೆ ಆ ಪಿಚ್ಚರ್ ಗಳ ಪ್ರಾಯೋಜಕರು ಅಮೃತಾಂಜನ ಕಂಪನಿ ಯವರಾಗಿದ್ದು ನಮ್ಮಮ್ಮನಿಗೆ ನಗು ಬರಿಸುತಿತ್ತು.

ಬರೀ ಭದ್ರಾವತಿಯಲ್ಲ, ಬೇಸಿಗೆ, ದಸರಾ ರಜೆಯಲ್ಲಿ ನಮ್ಮೂರು ಸಾಲಿಗ್ರಾಮಕ್ಕೆ ಹೋದಾಗಲೂ ಈ ಪಿಚ್ಚರ್ ಹುಚ್ಚು ಮುಂದುವರಿಯುತ್ತಿತ್ತು. ಆಗ ನಮ್ಮೂರಲ್ಲಿ ಎರಡು ಟಾಕೀಸ್ ಇದ್ದು ಒಂದು ಒಳ್ಳೆಯ ಕಟ್ಟಡವಾದ ಪದ್ಮಂಬಾ ಆದರೆ ಇನ್ನೊಂದು ಟೆಂಟ್ ವೈನಂ. ಪಿಚ್ಚರ್ ನೋಡೋಕೆ ಸಾಮಾನ್ಯವಾಗಿ ಈವೇನಿಂಗ್ ಶೋ ಗೆ ಹೋಗ್ತಾ ಇದ್ದದ್ದು. ಯಾಕೆಂದರೆ ನಮ್ಮ ಮಾವಂದಿರು ತೋಟ ಗದ್ದೆ ಕೆಲಸ ಮುಗಿಸಿ ಎತ್ತಿನ ಗಾಡಿ ಕಟ್ಟಲು ಆಗ್ಲೇ ಸಮಯವಾಗುತ್ತಿದ್ದು. ನಮ್ಮ ಅತ್ತೆ ಮಾವಂದಿರು, ಚಿಕ್ಕಮ್ಮದಿರು, ಅವರ ಮಕ್ಕಳು, ನಾವು, ನಮ್ಮಜ್ಜಿ ಎಲ್ಲರೂ ಗಾಡಿ ಮೇಲೆ ಟಾಕೀಸ್ಗೆ ಹೋಗಿ ಪಿಚ್ಚರ್ ನೋಡ್ತಾ ಇದ್ವಿ. ಟಾಕೀಸ್ ನಲ್ಲಿ ಇದ್ದ ಇನ್ನೊಂದು ಆಕರ್ಷಣೆ ಅಲ್ಲಿ ಮಾರುತ್ತಿದ್ದ ವಗ್ಗರಣೆ ಪುರಿ. ಅಂತಹ ರುಚಿಯಾದ ಪುರಿಗೆ ಸಮನಾದ ಯಾವ ಪಾಪ್ ಕಾರ್ನ್ ಅನ್ನೂ ನಾನು ಇದುವರೆಗೆ ಕಂಡಿಲ್ಲ. ಹೀಗೆ ರಜೆಯಲ್ಲು ನಾಲ್ಕೈದು ಪಿಚ್ಚರ್ ಗ್ಯಾರಂಟಿ ನೋಡ್ತಿದ್ವಿ.

ಪಿಚ್ಚರ್ ನೋಡಬೇಕಾದರೆ ಸುಮ್ಮನೆ ಕೂತ್ಕೊಂಡು ಮೌನವಾಗಿ ಪಿಚ್ಚರ್ ಯಾರೂ ನೋಡಿದವರೇ ಅಲ್ಲ. ಊರಲ್ಲಂತೂ ಶಿಳ್ಳೆ ಹೊಡೆದುಕೊಂಡು, ಬೊಬ್ಬೆ ಹಾಕಿಕೊಂಡು, ಹೀರೋ ಎಂಟ್ರಿ ಆದಾಗ ಚಿಲ್ಲರೆ ಕಾಸು ಪರದೆಗೆ ಎಸೆದುಕೊಂಡು ಜನ ಪಿಚ್ಚರ್ ನೋಡೋರು. ಒಮ್ಮೆ ನಾವು  ಕುಳಿತಿದ್ದ ಸೀಟ್ ಎದುರುಗಡೆ ಇದ್ದ ಒಬ್ಬರು ಹೀರೋ ಎಂಟ್ರಿ ಆದ ತಕ್ಷಣ ತಮ್ಮ ಪಟ್ಟಪಟ್ಟಿ ಗನ್ನಳ್ಳಿ ಚಡ್ಡಿ ಜೋಬಿಂದ ಒಂದು ಹಿಡಿ ಚಿಲ್ಲರೆ ಕಾಸು ತೆಗೆದು “ಹೋಗ್ ಅತ್ಲಾಗಿ” ಅನ್ನುತ್ತಾ ಪರದೆಯ ಕಡೆಗೆ ಎಸೆದದ್ದು ಈಗಲೂ ನಮ್ಮಣ್ಣ ಅಣಕಿಸಿ ತೋರಿಸಿದಾಗೆಲ್ಲ ನಗು ಉಕ್ಕಿ ಬರುತ್ತದೆ.

ಆಗ ಸೀಟ್ ನಂಬರ್ ಎಲ್ಲ ಇರುತ್ತಿರಲಿಲ್ಲವಾಗಿ ಮೊದಲು ಒಳ ಹೋದೋರು ಸೀಟ್ ಹಿಡಿದುಕೊಳ್ಳೋರು. ಸೀಟ್ ಹಿಡಿಯಲು ಎಷ್ಟೋ ಸಾರಿ ಜಗಳವಾಗಿ ಹೊಡೆದಾಟಕ್ಕೆ ನಿಂತರೂ, “ಶುಕ್ಲಮ್ ಬರದರಂ” ಅಂತ ಪಿಚ್ಚರ್ ಶುರು ಮಾಡೋ ಹೊತ್ತಿಗೆ ಎಲ್ಲಾ ತಣ್ಣಗಾಗಿ ಹೆಂಗೋ ಸಿಕ್ಕ ಸಿಕ್ಕ ಕಡೆ ಕುಳಿತು ನೋಡಲು ಶುರು ಮಾಡಿಕೊಳ್ಳುತ್ತಿದ್ದೋ. ಪಿಚ್ಚರ್ ನೋಡಿ ವಾಪಸ್ ಮನೆಗೆ ಹೋದ ಬಳಿಕ ಯಾರಿಗಾದರೂ ಬರಲಾಗದೆ ಮನೆಯಲ್ಲಿ ಉಳಿದು ಹೋಗಿದ್ದರೆ ಅವರಿಗೆ ಎರಡು ಮೂರು ದಿನ ಪಿಚ್ಚರ್ ಕಥೆಯಲ್ಲ ಅಭಿನಯ ಸಹಿತವಾಗಿ ಹೇಳಿ ಹೊಟ್ಟೆ ಉರಿಸುತ್ತಿದ್ದೋ.

ಸಿನಿಮಾ ನಮ್ಮಲ್ಲಿ ಎಷ್ಟೊಂದು ನವಿರಾದ ಭಾವನೆ ಗಳನ್ನೂ ಹುಟ್ಟಿಸುತ್ತಿತ್ತೋ ಕೆಲವು ವಿಚಿತ್ರ ಭಾವನೆಗಳನ್ನೂ ಹುಟ್ಟು ಹಾಕಿದ್ದು ಉಂಟು. ಆಗಿನ ಪಿಚ್ಚರ್ ಗಳಲ್ಲಿ ಒಂದು ಸಾಮಾನ್ಯ ಅಂಶ ಅಂದರೆ ಹೀರೋ ಇಲ್ಲವೇ ಹೀರೋಯಿನ್ ಸಾಯಿಸಲು ವಿಲ್ಲನ್ ಒಂದು ಲಾರಿಯನ್ನು ಕಳಿಸುತ್ತಿದ್ದು. ಆ ಲಾರಿಯೋ ನಮ್ಮ ಮೈ ಮೇಲೆಯೇ ನುಗ್ಗಿ ಬಂದಂತೆ ಅನ್ನಿಸಿ ಭಯವಾಗುತ್ತಿತ್ತು. ಈಗಲೂ ನನಗೆ ರಸ್ತೆಯಲ್ಲಿ ಲಾರಿ ಕಂಡರೆ ನಡುಕವೆ. ಜೊತೆಗೆ ಟ್ರೈನ್ ನಲ್ಲಿ ಪ್ರಯಾಣ ಮಾಡುವಾಗ ರೈಲ್ವೇ ಸ್ಟೇಷನ್ ನಲ್ಲಿ ಮಕ್ಕಳು ಕಳೆದು ಹೋಗೋದು ಎಷ್ಟೋ ಪಿಚ್ಚರ್ಗಳಲ್ಲಿ ನೋಡಿ ಈಗಲೂ ಟ್ರೈನ್ ಪ್ರಯಾಣವೆಂದರೆ ಸ್ವಲ್ಪ ಹಿಂಜರಿಕೆಯೇ.

ಕೆಲವು ಬಾರಿ ಪಿಚ್ಚರ್ ಹೆಸರು ಹೇಳಲು ಕೆಲವರಿಗೆ ನಾಲಿಗೆ ಹೊರಳದೆ ವಿಚಿತ್ರವಾದ ರೂಪಾಂತರ ಹೊಂದಿ ಕೇಳುವವರಿಗೆ ಗೊಂದಲದ ಜೊತೆಗೆ ನಗೆ ಉಕ್ಕಿಸಿದ್ದು ಇದೆ. ಒಮ್ಮೆ ಹೀಗೆ ನಮ್ಮ ಎದುರು ಮನೆಯವರು ಅವರ ಊರಿನಲ್ಲಿ ನೋಡಿಕೊಂಡು ಬಂದ ಸಿನೆಮಾ ಕಥೆಯನ್ನು ಹೇಳುವಾಗ ಪಿಚ್ಚರ್ ಹೆಸ್ರು ಹೇಳು ಅಂದಾಗ, “ಏ ಅದ್ಯಾವುದೋ ಕಿರ್ ನಾತ್ಕ ಪಿಚ್ಚರು” ಅಂದಾಗ ನಮ್ಮಮ್ಮನಿಗೆ ಗೊಂದಲವಾಗಿದೆ. ಮನೆಗೆ ಬಂದು ನನ್ನ ಬಳಿ “ಅದ್ಯಾವುದೂ ಕಿರ್ ನಾತ್ಕಾ” ಅಂತ ಕೇಳಿದಾಗ, ತಲೆ ಕೆರೆದು ಕೊಳ್ಳುತ್ತಾ ನನಗೂ ಹೊಳೆಯದೆ, ನಂತರ ವೃತ್ತ ಪತ್ರಿಕೆಗಳ ಸಿನೆಮಾ ಪುರವಣಿಗಳನೆಲ್ಲ ಹುಡುಕಿದ ಮೇಲೆ ತಿಳಿದಿದ್ದು ಅದು ಕಿರಾತಕ ಅಂತ!

ಊರಿಂದ ಆಗ ಯಾರಾದ್ರೂ ನಮ್ಮ ಮನೆಗೆ ಬಂದರೆ ನೆಂಟರಿಷ್ಟರೆಲ್ಲರ ಕಷ್ಟ ಸುಖ ಕೇಳಿದ ಬಳಿಕ ನಾವು ಮರೆಯದೆ ಕೇಳುತ್ತಿದ್ದ ಪ್ರಶ್ನೆ “ಪದ್ಮಂಬದಲ್ಲಿ, ವೈನಮಲ್ಲಿ ಯಾವ್ ಪಿಚ್ಚರ್ ಹಾಕವ್ರೆ” ಅಂತ. ಕಾಲ ಕ್ರಮೇಣ ಬೆಳೆದಂತೆಲ್ಲ ಟಿವಿ ಹಾವಳಿ ಹೆಚ್ಚಾಗುತ್ತಾ ಹೋಗಿ, ನೂರೆಂಟು ಚಾನಲ್ ಗಳು ದಾಳಿಯಿಡುತ್ತ ಬಂದು, ನಿಧಾನವಾಗಿ ಟಾಕೀಸ್ ಗೆ ಹೋಗಿ ಪಿಚ್ಚರ್ ನೋಡೋ ಅಭ್ಯಾಸ ಅದು ಹೇಗೆ ಮಾಯವಾಯಿತು ಗೊತ್ತಿಲ್ಲ. ಈಗ ರಿಮೊಟ್ ಕೈಯಲ್ಲಿದ್ದರೆ ಸಾಕು ಕ್ಷಣಕ್ಕೊಂದು ಪಿಚ್ಚರ್ ನೋಡಲು ಸಿಕ್ಕಿ ಅತಿಯಾದ ಅಮೃತದ ವಿಷವಾಗಿ ಬಿಟ್ಟಿವೆ. ಜೊತೆಗೆ ಮೂರು ಗಂಟೆ ಕುಳಿತು ನೋಡುವಷ್ಟು ಸಮಯ ಸಮಾಧಾನ ಈಗ ಯಾರ ಬಳಿ ಇದೆ ಹೇಳಿ ನೋಡೋಣ.

ಅಲ್ಲದೆ ಬಾಲ್ಯದಲ್ಲಿ ಸಿನಿಮಾದ ಮಾಯಾಜಾಲಕ್ಕೆ ಮರುಳಾಗಿ ಅದರ ಭ್ರಮಾಲೋಕವನ್ನು ವಿಶ್ಲೇಷಿಸುವ ಸಾಮರ್ಥ್ಯವಿರದ ಮುಗ್ದ ಮನಸ್ಸು ಬೆಳೆದಂತೆಲ್ಲ, ಲೋಕ ಅರ್ಥವಾಗುತ್ತಾ ಹೋದಂತೆಲ್ಲ, ಕಟು ವಾಸ್ತವ ದ ಜಗತ್ತು ಎದುರಿಸುವಾಗ ತಾನೇ ತಾನಾಗಿ ನಮಗರಿವಿಲ್ಲದೆ ಆ ಮಾಯಾಲೋಕದಿಂದ ದೂರ ಸರಿದೆವೇನೋ. ಮುಂಚಿನ ಹಾಗೆ ಸಿನೆಮಾ ನೋಡುವಾಗ ಆ ಪಾತ್ರಗಳೇ ನಾವಾಗಿ ಅವು ಅನುಭವಿಸುವ ಭಾವನೆಗಳೆಲ್ಲ ನಮ್ಮವೇ ಆಗಿ ನೋಡುತ್ತಿದ್ದಂತೆ ಈಗಿನ ವಿಶ್ಲೇಷಣೆಯ ಮನಸ್ಸು ನೋಡಲು ಬಿಡದು.

ಪ್ರತಿಯೊಬ್ಬರ ಕೈಗೂ ಒಂದೊಂದು ಸ್ಮಾರ್ಟ್ ಫೋನ್ ಬಂದು, ಸಾಮಾಜಿಕ ಜಾಲತಾಣಗಳ ಮಿಥ್ಯಾ ಲೋಕದಲ್ಲಿ ತಮ್ಮದೇ ಆದ ಜೀವನ ಸೃಷ್ಟಿಸಿಕೊಂಡು ಬದುಕುತ್ತಿರುವ ಇಂದಿನ ನಾವುಗಳೆಲ್ಲ ಒಟ್ಟಾಗಿ ಸೇರಿ ಸಿನೆಮಾ ಎಂಬ ಎಲ್ಲರೂ ಕೂಡಿ ನೋಡಿ ಅನುಭವಿಸುತ್ತ ಇದ್ದ ಸುಖದ ಲೋಕವನ್ನು ಬಹಳ ಹಿಂದೆ ಹಾಕಿ ಬಂದಿದ್ದೇವೆ. ಈಗಲೂ ಸಿನೆಮಾ ಥಿಯೇಟರ್ ಗಳಿಗೆ ಜನ ಹೋಗಿ ನೋಡುತ್ತಾರೆ ಆದರದು ಅವರ ಕುಟುಂಬಕ್ಕೆ, ಇಲ್ಲವೇ ನಾಲ್ಕಾರು ಸ್ನೇಹಿತರ ಗುಂಪಿಗೆ ಮೀಸಲಾಗಿದೆ. ಹಿಂದಿನ ಹಾಗೆ ನೆರೆಹೊರೆಯವರು ಒಟ್ಟಿಗೆ ಸೇರಿ, ನೆಂಟರಿಷ್ಟರ ಜೊತೆ ಸೇರಿ ಹೋಗುವ ಪರಿಪಾಠ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆಯಾಗಿದೆ.

ಆದರೆ ಕಾಲ ಹೇಗೆ ಬದಲಾದರೂ ಸ್ಮಾರ್ಟ್ ಫೋನ್ ನಲ್ಲೆ ಆದ್ರೂ, ಒಬ್ಬರೇ ಕುಳಿತು ಪಿಚ್ಚರ್ ನೋಡುವವರನ್ನು ಕಂಡಾಗಲೆಲ್ಲ ಅಷ್ಟು ಸುಲಭದಲ್ಲಿ ಬಿಟ್ಟರೂ ಬಿಡದೀ ಮಾಯೆ ಅನ್ನಿಸುತ್ತದೆ. ಎಲ್ಲಿಯವರೆಗೆ ನಮ್ಮಲ್ಲಿ ಕನಸುಗಳಿರುತ್ತವೆಯೋ ಅಲ್ಲಿಯವರೆಗೆ ಸಿನಿಮಾಗಳೂ ಇರುತ್ತವೆ. ಆಗೊಮ್ಮೆ ಈಗೊಮ್ಮೆ ಯಾವಾಗಲಾದರೂ ಯೂ ಟ್ಯೂಬ್ ನಲ್ಲಿ ಹಳೆಯ ಹಾಡು ಸಿನೆಮಾ ನೋಡಿದಾಗ ಮನಸು ಭಾರವಾಗಿ ಹಳೆಯ ದಿನದ ಸುಖಗಳ ನೆನೆಯುತ್ತದೆ.

‍ಲೇಖಕರು nalike

May 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Nagraj Harapanahalli.karwar

    ತುಂಬಾ ಚೆಂದ‌ ಬಂದಿದೆ…ಸಿನಿಮಾ‌ ಹಾಗೂ ಸಿನಿಮಾ ಹಾಡುಗಳ ನೆನಪಿನ‌ಮಾಲೆ.‌ ನಾ ಪಿಯುಸಿ ಎರಡು‌ ವರ್ಷ ಮುಗಿಸುವಾಗ ನೋಡಿದ ಸಿನಿಮಾಗಳ‌ ಸಂಖ್ಯೆ ೩೦೦. ಈ ಬಗ್ಗೆ ಬರೆಯುವ ಆಸೆ ಬಂತು ನೋಡ್ರಿ…

    ಪ್ರತಿಕ್ರಿಯೆ
    • shashi kumar

      ಸಮತ ಮೇಡಂ ಲೇಖನ ಉತ್ತಮವಾಗಿ ಮೂಡಿಬಂದಿದೆ ನಾವು ಚಿಕ್ಕವರಿದ್ದಾಗಿನ ದಿನಗಳು ನೆನಪು ಬಂದvu…

      ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ShreyaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: