ನುಚ್ಚಿನ ಡಬ್ಬಿ ಒಜ್ಜೆಯಿಳಿಯದಿರಲಿ

ಪ್ರಜ್ಞಾ ಮತ್ತಿಹಳ್ಳಿ

ಮಕ್ಕಳೇ ಬರದ ಶಾಲೆ ಖೋಲಿಯ
ಗುಡಿಸೂದೆಂತಕ್ಕೆ ಫುಕ್ಕಟ್
ಅಂತಲೇ ಮನೆಗಟ್ಟಿದರು
ದಿನಗೂಲಿ ಸಿಪಾಯಿ ಅಂತ
ನಾಕು ದುಡ್ಡು ತರುತ್ತಿದ್ದ ರೇಣಕಿ

ಹಸಿದ ಮಕ್ಕಳಿಗಾಗಿ ಬುಟ್ಟಿ ಹೊತ್ತು
ಬೀದಿಯುದ್ದ ಹೆಜ್ಜೆಯೂರುತ್ತ
ನಾಭಿಯಾಳದಿಂದ ಸ್ವರ ತೆಗೆದು
ಕಿರುಚುತ್ತಾಳೆ ಪಪ್ಪಾಯ ಬೇಕೇನ್ರೀ

ಒಳಗೆ ಮೆತ್ತನೆ ಸೋಫಾದಲ್ಲಿ
ಬಿದ್ದಲ್ಲೇ ಜೊಂಪು ಹತ್ತಿದವರಿಗೆ
ಥಟ್ಟನೆ ಎಚ್ಚರಾಗಿ ರೇಗಿ ಹೋಗುತ್ತದೆ
ಒಂದು ಕ್ಷಣ ನಿದ್ರಿಸುವ ಸುಖವೂ ಇಲ್ಲದ
ಇದೆಂಥ ಕರ್ಮಕಾಲ ಬಂತಪ್ಪ

ಇಪ್ಪತ್ತು ಮನೆಗಳಲ್ಲಿ ಒಂದೂ ಖರೀದಿ
ಇಲ್ಲವೆಂದರೆ ಇಂದಿನ ಕೂಳು ಕುಚ್ಚುವುದು
ಹೇಗೆಂಬ ಲೆಕ್ಕಾಚಾರಕ್ಕೆ ಹೆಜ್ಜೆ ಸೋತು
ಗೇಟೆದುರು ನಿಂತು ದೈನ್ಯವೇ ಹೆಪ್ಪಿಟ್ಟು
ಧ್ವನಿಗುಂಟ ಹರಿದು ಕಂಪನ ವಿಸ್ತಾರದಲಿ
ಹುರಿಗೊಂಡು ಈಟಿಯಾದಂತೆ ಅಕ್ಕರ‍್ರೀ

ಬಾಣ ನೆಟ್ಟ ಹಕ್ಕಿಯೊಂದು ವಿಲಿಗುಟ್ಟಿದಂತೆ
ಕಣ್ಣಿಗೆ ಗುರಿಯಿಟ್ಟ ಪಾರ್ಥನಿಗೆ ಮೆಚ್ಚುಗೆಯ ಚಪ್ಪಾಳೆ
ಸರಕ್ಕನೆ ಟಿ.ವಿ. ಬಿಟ್ಟೆದ್ದು ಕಿಡಕಿಗೆ
ಮುಖ ತೋರಿಸಿ ಗದರುತ್ತಾರೆ

ಮಾಭಾರತ ನೋಡೂ ಮುಂದ ಎದಕ ಬರ್ತಿ
ಮಹಾ ಭಾರದ ಬುಟ್ಟಿ ಇಳಿಸಲಿಕ್ಕೊಂದು ಕೈ
ನೆರವು ಸಿಗದಿದ್ದರೆ ಗೋಣು ಮುರಿಯುವುದು ನಿಕ್ಕಿ
ಯವ್ವಾ ಹಣ್ಣ ಭಾಳ ಸವಿಯದಾವ್ರಿ ರ‍್ರೀ

ಹೊಸ ಫೋನಿನ ಮುದ್ದು ಮುಖ ಮೇಲೆತ್ತಿ
ಸೆಲ್ಫಿಗಾಗಿ ಆನ್ ಲೈನ್ ಖರೀದಿ ಕುರ್ತಿಯ
ಕಸೂತಿ ಕಾಣವಂತೆ ಎದೆಯುಬ್ಬಿಸಿ ಫೋಸು
ಕೊಡುವ ಕಸರತ್ತಿಗೆ ಬೇಸತ್ತ ಹುಡುಗಿ
ಕಿರುಚುತ್ತಾಳೆ ಬ್ಯಾಡ ಹೋಗಬೇ

ಖಾಲಿ ಹೊಟ್ಟೆಯ ಹರಿದ ಚಪ್ಪಲಿಯ
ಕಾಲುಗಳು ಇನ್ನು ನಡೆಯಲಾರೆವೆಂದು
ತತ್ತರಿಸುವಾಗ ಅಲ್ಲೊಂದು ಗೇಟು
ತೆರೆಯುತ್ತದೆ ನೆರಿಗೆನ್ನೆಯ ಕನ್ನಡಕ

ಕೃಶಕೈಯೆತ್ತಿ ಬುಟ್ಟಿಯಿಳಿಸಿ ಒಂದೊಂದೇ
ಹಣ್ಣೆತ್ತಿ ನೋಡುವಾಗ ಬಡಬಡಿಸುತ್ತಾಳೆ
ಎಣ್ಣಿ ಹೊಡದ ಹಣ್ಣು ಮಾಡಿಲ್ರಿ ಯಪ್ಪಾ
ತಾನು ಬೆಳೆಯದ ಗಿಡದ ಕೊಯ್ಯದ ಕಾಯಿಯ
ಕುರಿತು ಖೊಟ್ಟಿ ತಾರೀಫು ಮಾಡಿ ಬುಟ್ಟಿ
ಖಾಲಿ ಆಗಲಿಕ್ಕೆ ರುಚಿಯ ಬಣ್ಣಿಸುತ್ತಾಳೆ
ತಿಂದವರಂತೆಯೇ ಚಪ್ಪರಿಸುತ್ತ

ಕೊನೆಯಲ್ಲಿ ಒಣಗಿದ ಗಂಟಲಿಂದ ನೀರು
ಬೇಡುತ್ತಾಳೆ ಚರಿಗೆ ಮೇಲೆತ್ತಿ ಸುರುವಿಕೊಂಡು
ನಾಳೆನೂ ತರಲೇನ್ರಿ ಎಂದು ಸಣ್ಣ ಭರವಸೆಯ
ಹಕ್ಕಿಮರಿಗೆ ಗೂಡು ಕಟ್ಟುತ್ತಾಳೆ
ನಿನ್ನ ಹೆಸರೇನು ಲ್ಯಾಪಿಯಲ್ಲೇ ಸುದ್ದಿ ಟೈಪಿಸುವ
ವರ್ಕ ಫ್ರಂ ಹೊಂ ಪ್ರಶ್ನೆಗೆ ಹೇಳುತ್ತಾಳೆ

ಓಹೋ ಯಲ್ಲಮ್ಮನ ಹೆಸರು
ನಿತ್ಯ ನೀರು ತರುವ ಮರಳ ಕೊಡ
ಒಡೆದ ದಿವಸ ಶೀಲ ಶಂಕಿಸಿದ ಜಮದಗ್ನಿಯ
ಸಿಟ್ಟಿಗೆ ಮಗನ ಕೊಡಲಿಯೇ ರುಂಡ
ಹಾರಿಸಿತಿಲ್ಲವೆ? ವರದಿಗಾತಿ ಕೇಳುತ್ತಾಳೆ

ಅದೇನೊ ಗೊತ್ತಿಲ್ರಿ ನನ್ನ ಗಂಡ
ನಶೆದಾಗ ಒದ್ದ ಕದದ ಚಿಲಕ ಮುರದೇತಿ
ಗಡಂಗಿನ ಮಗ್ಗುಲದ ಮನಿಯಾಗ
ಸಣ್ಣ ಹುಡುಗಿ ಒಂದೇ ಇರಾಕ ಅಂಜತೇತಿ
ಕತ್ತಲಾಗೂದರಾಗ ಹಣ್ಣ ಮಾರಿ ನುಚ್ಚು
ಒಯ್ಯಬೇಕರಿ ಯಲ್ಲವ್ವನೇ ಕಾಯಬೇಕರಿ
ಕದಕ ಅಡ್ಡ ಇಟ್ಟ ನುಚ್ಚಿನ ಡಬ್ಬಿ
ಖಾಲಿಯಾದರೈತಿ ಕೂಸಿಗೆ ಫಜೀತಿ

‍ಲೇಖಕರು Avadhi

October 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Smitha Amrithraj.

    ಪ್ರಜ್ಞಾ ಮೇಡಂ…ಕವಿತೆ ಇಷ್ಟ ಆಯಿತು

    ಪ್ರತಿಕ್ರಿಯೆ
  2. ಕಲಾ ಭಾಗ್ವತ್

    ಮನಕ್ಕಿಳಿಯುವ ಸಾಲುಗಳು..

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: