ನಿನಗೆ ನೀನೇ ಗೆಳೆಯ, ನಿನಗೆ ನೀನೇ

ಗೊರೂರು ಶಿವೇಶ್

High noon  ಅಥವಾ ಮಟಮಟ ಮಧ್ಯಾಹ್ನ ಒಂದು ವೆಸ್ಟರ್ನ್ ಕ್ಲಾಸಿಕಲ್ ಚಿತ್ರ . ಪ್ರಸಿದ್ಧ ನಿರ್ದೇಶಕ  ಫ್ರೆಡ್ ಜಿನೆಮನ್ ನಿರ್ದೇಶನದ ಚಿತ್ರ.ನಾಯಕ ನಟ ಗ್ಯಾರಿ ಕೂಪರ್ ಹಾಗೂ ಚಿತ್ರಸಂಗೀತಕ್ಕೆ  ಸೇರಿದಂತೆ 4 ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಈ ಚಿತ್ರದ ಘಟನಾವಳಿಗಳ ಅವಧಿ ನೂರು ನಿಮಿಷ. ಘಟನೆಯ ಸ್ಥಳ ಮೆಕ್ಸಿಕೋ ಪ್ರಾಂತ್ಯದ ಸಣ್ಣ ನಗರ ಹ್ಯಾಡ್ಲಿ ವಿಲ್ಲ. 

ಕಥಾನಾಯಕ ವಿಲ್ ಕೇನ್ ಆಗತಾನೆ ಗೆಳತಿ ಆಮೆಯನ್ನು  ವರಿಸಿದ್ದಾನೆ. ಜೊತೆಗೆ ತನ್ನ ಮಾರ್ಷಲ್ ವೃತ್ತಿಗೆ ವಿದಾಯ ಹೇಳಿ  ಊರಿಗೆ ಮರಳಲು ಮಟಮಟ ಮಧ್ಯಾಹ್ನ 12ಕ್ಕೆ ಬರುವ ರೈಲಿಗೆ ಸಜ್ಜಾಗುತ್ತಿದ್ದಾನೆ .

ಅಷ್ಟರಲ್ಲಿ ಎದೆ ನಡುಗಿಸುವ  ಸುದ್ದಿ ಒಂದು ಬರುತ್ತದೆ,ಅದುವೇ ಆತನಿಂದ  ಬಂಧಿಸಲ್ಪಟ್ಟ ಕುಖ್ಯಾತ ದುಷ್ಕರ್ಮಿ ಗ್ಯಾಂಗ್ಸ್ಟರ್ ಫ್ರಾಂಕ್  ಮುಲ್ಲರ್ ಶಿಕ್ಷೆಯಿಂದಾಗಿ ಮುಕ್ತನಾಗಿ ಊರಿಗೆ ಮರಳುವ ಸುದ್ದಿ . ಅವನ ಜೊತೆಗೂಡಲು ಆಗಲೇ ಅವನ ಸಹೋದರನು ಸೇರಿ ಮೂರು ಜನ ರೈಲ್ವೆ ಸ್ಟೇಷನ್ ಗೆ ಹೋಗಿದ್ದಾರೆ .

ಆತನನ್ನು ಬಂಧಿಸಿ ಕರೆದೊಯ್ಯುವ ಮುನ್ನ ಹಿಂತಿರುಗಿ ಬಂದಾಗ ಕೊಂದು ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿ ಹೋಗಿರುವ ಆತ ಈಗ ಮಾಡುವ ಮೊದಲ ಕೆಲಸ ಅದೇ ಎಂದು ಎಲ್ಲರಿಗೂ ಗೊತ್ತಾಗಿ ಹೋಗಿದೆ .

ವಿಷಯ ತಿಳಿದೊಡನೆ ಸ್ಥಳೀಯ ಜಡ್ಜ್  ಕೇನ್ ಗೆ ಪರಾರಿಯಾಗಲು ತಿಳಿಸಿ ಅಲ್ಲಿಂದ ತೆರಳುತ್ತಾನೆ. ಉಳಿದವರು ಕೂಡ ಮುಲ್ಲರ್ ಇಲ್ಲಿಗೆ ಬರುವ ಮುನ್ನ ಕೇನ್ನನ್ನು ನ್ನು ಅಲ್ಲಿಂದ ಬೇರೆಡೆಗೆ ಪರಾರಿಯಾಗಲು ತಿಳಿಸುತ್ತಾರೆ.

ನವ ವಧುವಿನದು ಅದೇ ಅಭಿಪ್ರಾಯ. ನಾಳೆ ಬರಲಿರುವ ಹೊಸ ಮಾರ್ಷಲ್ ಮುಲ್ಲರ್ ನ ನಿವಾರಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ ಎಂಬುದು ಅವರ ಅಭಿಪ್ರಾಯ. ಆದರೆ  ಕೇನ್ ಓಡಿಹೋಗಲು ನಿರಾಕರಿಸುತ್ತಾನೆ ..

ಮಾರ್ಷಲ್ ಘನತೆಗೆ ಅದು ತಕ್ಕುದಲ್ಲ  ಎಂಬುದು ಒಂದು ಅಂಶವಾದರೆ ಆತ ಪರಾರಿಯಾದರೂ ಸೇಡು ತೀರಿಸಿಕೊಳ್ಳಬೇಕು ಎಂಬ ಮನೋಭಾವದ ಮುಲ್ಲರ್ ಎಲ್ಲಿದ್ದರೂ ಹುಡುಕಿ ಅದನ್ನು ತೀರಿಸಿಕೊಳ್ಳುತ್ತಾನೆ ಎಂಬುದು ಮತ್ತೊಂದು ಅಂಶ. ಇದನ್ನು ತಿಳಿದ ಆತನ ನೂತನ ವಧು ನೀ ಬಂದರೂ ಸರಿ, ಬಾರದಿದ್ದರೂ ಸರಿ ನಾನು ಮಧ್ಯಾಹ್ನದ ಟ್ರೈನಿಗೆ ಹೋಗುವೆ ಎಂದು ಅಲ್ಲಿಂದ ಹೊರಟು ಹೋಗುತ್ತಾಳೆ .                                             
ಈಗ ಕೇನ್ ದುಷ್ಕರ್ಮಿಗಳನ್ನು ಎದುರಿಸಲು ಸಹಾಯಕ್ಕಾಗಿ ಇರುವ ಕಡಿಮೆ ಕಾಲದಲ್ಲಿ ಎಲ್ಲೆಡೆ ಸುತ್ತುತ್ತಾನೆ ,ಅವನು ಊರಿಗೆ ಮಾಡಿದ ಸಹಾಯವನ್ನು ಎಲ್ಲರೂ ನೆನೆಸಿಕೊಳ್ಳುವವರಾದರೂ ಈಗ ಯಾರು ಅವನ ಜೊತೆಗೂಡಲೋಲ್ಲರು .ಅದಕ್ಕೆ ಪ್ರತಿಯೊಬ್ಬರಿಗೂ ಕಾರಣಗಳಿವೆ.

ಮುಂದಿನ ಮಾರ್ಷಲ್ ಆಗಲೂ ತನ್ನ ಹೆಸರನ್ನು ಬೆಂಬಲಿಸಲಿಲ್ಲ ಎಂದು ಅವನ ಡೆಪ್ಯೂಟಿ ಯ ದೂರಾದರೆ ,ಇವನಿಗಿಂತ ಮೊದಲಿನ ಮಾರ್ಷಲ್ ತನಗೆ ವಯಸ್ಸಾದ ಕಾರಣ ನೀಡುತ್ತಾನೆ. ಮತ್ತೊಬ್ಬ ಮನೆಯಲ್ಲಿದ್ದು ಹೆಂಡತಿಯಲ್ಲಿ ಇಲ್ಲವೆಂದು ತಿಳಿಸಲು ಹೇಳುತ್ತಾನೆ.  ಚರ್ಚ್ನಲ್ಲಿ ಅವನನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆದರೂ ಗುಂಡು ಕಾಳಗ ದಿಂದ ಊರಿನಲ್ಲಿ ನಡೆಯುವ ಗಲಾಟೆಯಿಂದಾಗಿ ಊರಿನ ಶಾಂತಿಗೆ ಧಕ್ಕೆ ಆಗಬಹುದೆಂದು ಹಿಂಜರಿಯುತ್ತಾರೆ.   

14 ವರ್ಷದ ಹುಡುಗನೊಬ್ಬ, ಒಂದು ಕಣ್ಣಿನ ಕುಡಿದು ನಿತ್ರಾಣ ಸ್ಥಿತಿಯಲ್ಲಿರುವ ಮತ್ತೊಬ್ಬ ಸಹಾಯಕ್ಕೆ ಬರುವುದಾಗಿ ತಿಳಿಸಿದರೂ ಅವರ ವಯಸ್ಸು ಹಾಗೂ ದೇಹದ ಸ್ಥಿತಿಯಿಂದ ಅವರ ಸಹಕಾರ ಪಡೆಯಲು ಕೆನ್ ನಿರಾಕರಿಸುತ್ತಾನೆ.     

ಹೀಗೆ ಯಾರ ಸಹಕಾರವೂ ದೊರೆಯದೆ ಏಕಾಂಗಿಯಾದ  ಕೇನ್ ಅಂತಿಮ ಗಳಿಗೆಯಲ್ಲಿ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಾನೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್.                     

ಬಿಟ್ಟು ಹೋಗದಿರು ಮನದನ್ನೆ ಚಿತ್ರದ ಥೀಮ್ ಸಾಂಗ್ .  1952 ರಲ್ಲಿ ಎಂದರೆ ಸರಿಸುಮಾರು ಸರಿ ಸುಮಾರು 70 ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರವನ್ನು  ಅಮೆರಿಕದ  ಎರಡು ಬಾರಿ  ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್   17 ಬಾರಿ  ವೈಟ್ ಹೌಸ್ ಸ್ಕ್ರೀನಿಂಗ್ ಮಾಡಿದರೆ  ಅಧ್ಯಕ್ಷ ರೋನಾಲ್ಡ್ ರೇಗನ್ ಇದು ತನ್ನ ಆಲ್ ಟೈಂ ಫೇವರೀಟ್ ಚಿತ್ರ ಗಳಲ್ಲೊಂದು ಎಂದು ಹೇಳಿಕೊಂಡಿರುವುದು ಎಂಥ ಉನ್ನತ ಹುದ್ದೆಯ ವ್ಯಕ್ತಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಯಾರ ನೆರವಿಲ್ಲದೆ ಏಕಾಂಗಿಯಾಗಿ ಪರಿಸ್ಥಿತಿಯನ್ನು ಎದುರಿಸಬೇಕಾದ ವಿಷಯವನ್ನು ಸಾಕ್ಷೀಕರಿಸುತ್ತದೆ.               

ಕರೋನಾ ವೈರಸ್ ನ ದಾಳಿಯ ಸಂದರ್ಭದಲ್ಲಿ ನಡೆಯುತ್ತಿರುವ ಘಟನೆಗಳು  ಈ ಅಂಶವನ್ನು ಮತ್ತೆ ಮತ್ತೆ ಸಾಕ್ಷೀಕರಿಸುತ್ತದೆ .

ಕರೋನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಒಬ್ಬರು ತಿಳಿಸಿದ ಹಾಗೆ  ಪಾಸಿಟಿವ್ ಬಂದ ಒಬ್ಬ ರೋಗಿಯನ್ನು  ಆಸ್ಪತ್ರೆಗೆ ದಾಖಲು ಮಾಡಿ ಹೋದ ಅವರ ಸಂಬಂಧಿಕರು ,ಮುಂದೆ  ತೀರಿಕೊಂಡಾಗ  ಅಂತ್ಯಸಂಸ್ಕಾರ ಮಾಡುವುದಿರಲಿ  ಅದನ್ನು ನೆರವೇರಿಸಲು ಆತನನ್ನು ಗುರುತಿಸುವ  ಪತ್ರಕ್ಕೆ ಸಹಿ ಹಾಕಲಾದರೂ ಬನ್ನಿ ಎಂದು ಕರೆದರು  ಬರದಿರುವುದನ್ನು ತಿಳಿಸಿದರು .

ರೋಗಿಗಳನ್ನು ರಸ್ತೆಯಲ್ಲಿ ಬಿಟ್ಟುಹೋದ ಬಂಧುಗಳು, ಕರೋನ ಪಾಸಿಟಿವ್ ಬಂದಿದೆ ಎಂದೊಡನೆ ಕಿಟಕಿ ಬಾಗಿಲು ಹಾಕಿಕೊಳ್ಳುವ  ಅಕ್ಕಪಕ್ಕದವರು ,ಹತ್ತಾರು ಬಾರಿ ಕರೆ ಮಾಡಿದರು ಯಾರು ಬಾರದೆ  ಕೆಲವಡೆ ಊರಿನವರೇ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆಗಳು  ಗೋಪಾಲಕೃಷ್ಣ ಅಡಿಗರ ನಿನಗೆ ನೀನೇ ಗೆಳೆಯ ಕವಿತೆಯನ್ನು ನೆನಪಿಸುತ್ತದೆ.   

ನಿನಗೆ ನೀನೇ ಗೆಳೆಯ/ ನಿನಗೆ ನೀನೇ/ ಅವರಿವರ ನಂಬುಗೆಯ ಮಳಲ ರಾಶಿಯ ಮೇಲೆ /ಬಾಳ ಮನೆಯನ್ನು ಮುಗಿಲಿಗೆ ಎತ್ತರಿರಿಸಲಿ ಹೇಯ / ಮನ ಸಿಡಿದು ಹೋಳಾಗುತ್ತಿರುವ  ವೇಳೆ/ ಕನಸುಗಳ ಗುಳ್ಳೆಗಳು ಒಡೆದೊಡೆದು ಬೀಳೆ/ ಜನುಮದಿ ರಿಂಗಣದಿ ಕಾಲುಗಳು ಸೋಲೆ/  ನಿನಗೆ ನೀನೇ ಗೆಳೆಯ/ ನಿನಗೆ ನೀನೇ /  ಕವಲುದಾರಿ ಮುಂದೆ ನೀ ಬಂದು ನಿಂದು/ ಸರಿದಾರಿ ಯಾವುದು ಎಂದು ಮುಂಗಾಣದಿರೆ ನೊಂದು/  ನಿನ್ನೆದೆಯ ಮಾತು ನಿನ್ನೆದೆಯೋಳು ಉಳಿದಿರಲು/ ಅದರ ತಿರುಳನ್ನು ತಿಳಿಯುವ ಮನ ಸುಳಿಯದಿರಲು/ ಮಾತುಮಾತಿಗೂ ವಾದ ಹೆಡೆಯೆತ್ತಿ ಬರಲು /ಅದರ ವಿಷಕೆ ಜೀವ ಬೆಂದು ಹೋಗಿರಲು/ ನಿನಗೆ ನೀನೇ ಗೆಳೆಯ /ನಿನಗೆ ನೀನೇ/                       

ಪ್ರತಿಯೊಬ್ಬರ ಜೀವನದಲ್ಲಿಯೂ ಬಂದುಹೋಗುವ ಈ ವಿಷಮ ಗಳಿಗೆಗಳನ್ನು ಎದುರಿಸಲು ಕಣ್ಣೀರ ಒರೆಸಲು ಈ ಕವಿತೆ ಕರವಸ್ತ್ರ ವಾಗಿ ಸಿಗುತ್ತದೆ

‍ಲೇಖಕರು Avadhi

October 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: