ನನ್ನ ಕನ್ನಡ ತರಗತಿ… ಹೀಗೊಂದು ಕಲಿಕೆ!

ಅಕ್ಷಯ ಆರ್ ಶೆಟ್ಟಿ

ನಾನು ಕನ್ನಡ ಪ್ರಾಧ್ಯಾಪಿಕೆಯಾಗಿ, ನನ್ನ ಬೆಳೆದ ವಿಧ್ಯಾರ್ಥಿಗಳಲ್ಲಿ ಸದಾ ಒಂದು ಮಾತು ಕೇಳುವುದಿದೆ. ಟೆಕ್ನಾಲಜಿಕಲ್ ಸ್ಟಡಿಯನ್ನು ಆಯ್ದುಕೊಂಡಿರುವ ನೀವು ಕನ್ನಡವನ್ನೂ ಒಂದು ಪಠ್ಯವಾಗಿ ಏಕೆ ಓದ್ಬೇಕು? ಅಥವಾ ನಿಮ್ಮ ಯುನಿವರ್ಸಿಟಿ ಯಾಕೆ ಕನ್ನಡವನ್ನು ನಿಮಗೆ ಕಂಪಲ್ಸರಿ ಸಬ್ಜೆಕ್ಟ್ ಮಾಡಿದೆ, ಎಂಬುದಾಗಿ…

ನನ್ನ ವಿಧ್ಯಾರ್ಥಿಗಳ ‘ಬಿಕಾಸ್ ಇಟ್ ಈಸ್ ಅ ರಿಜನಲ್ ಲ್ಯಾಂಗ್ವೆಜ್’ ಎನ್ನುವ ಸಿದ್ಧ ಉತ್ತರ ನನಗೆ ಎದುರಾಗುತ್ತದೆ. ಆದರೆ ನಾನಷ್ಟಕ್ಕೆ ಬಿಡುವವಳಲ್ಲ. ಕಂಪಲ್ಸರಿ ಅನ್ನುವ ಒತ್ತಡದಿಂದ ಅವರನ್ನು ಹೊರ ತಂದು, ಕನ್ನಡ ಪಠ್ಯವನ್ನು ಆಸಕ್ತಿಯಿಂದ ಓದುವ ಮತ್ತು ಕೇಳುವ ಹಾಗೆ ಮಾಡುವ ನನ್ನ ಆಲೋಚನೆಗೆ ಮೊದಲ ದಿನದ ಮೊದಲ ತರಗತಿಯಲ್ಲೆ ಒಂದು ವೇದಿಕೆ ಒದಗಿಸುವ ಹುನ್ನಾರ ನನ್ನೊಳಗೆ ನಡೆಯುತ್ತಲೇ ಇರುತ್ತದೆ. 

ಹಾಗಾಗಿ, ಕುತೂಹಲದಿಂದ ನಾನೇನು ಹೇಳ್ಬಹುದು, ನನ್ನ ಪ್ರಶ್ನೆಗೆ ನನ್ನದೇ ಇಂಟರ್‍ ಪ್ರಿಟೇಶನ್ ಏನಿರಬಹುದು ಎಂದು ಕಾಯುವ ವಿಧ್ಯಾರ್ಥಿಗಳಿಗೆ, ನಾನು ಕನ್ನಡ ಕಲಿಯಲಿಕ್ಕಿರುವ ಮೂರು ಕಾರಣಗಳನ್ನು ಕೊಡುತ್ತೇನೆ.

ಮೊದಲನೆಯದು, ಅವರು ಹೇಳಿರುವ ರೀಜನಲ್ ಲ್ಯಾಂಗ್ವೇಜ್‍ನಿಂದ ನನ್ನ ಮಾತನ್ನು ತೊಡಗಿಸಿಕೊಂಡು, ಸಿಬಿಎಸ್‍ಸಿ ಮತ್ತು ಐಸಿಐಸಿಐ ಬೋರ್ಡ್ ಗಳಿಂದ ಕಲಿತು ಬಂದು ಇಂಜಿನಿಯರಿಂಗ್ ಮೆಟ್ಟಿಲು ಹತ್ತಿರುವ ಅವರಲ್ಲಿ, ಹತ್ತುತ್ತಲೇ ಕನ್ನಡವನ್ನು ಮರೆತಿರುವ ಅವರೊಳಗೆ ಮತ್ತೊಮ್ಮೆ ಕನ್ನಡದ ಬೀಜ ಮೊಳೆಯುವ ಪ್ರಯತ್ನ.

ನಿಮ್ಮ ಅಪ್ಪ ಅಮ್ಮನ ಆಸಕ್ತಿಯೋ ಅಥವಾ ನಿಮ್ಮ ಆಸಕ್ತಿಯೋ ನೀವು ನಿಮ್ಮ ಲೋವರ್ ಕ್ಲಾಸಸ್‍ನಲ್ಲಿ ಪ್ರೆಂಚ್ ಕಲಿಯಲ್ವಾ? ಯುರೋಪಿಯನ್ ಲ್ಯಾಂಗ್ವೇಜ್‍ಗೆ ತೆಗೆದುಕೊಳ್ಳಿಲ್ವಾ? ಅವುಗಳೊಡನೆ ಕನ್ನಡವು ಜೊತೆಗಿರ್ಲಿ. ಯಾಕಂದ್ರೆ ಒಂದು ಹೊಸ ಭಾಷೆ ಕಲಿಯುವುದರಿಂದ ನಾವು ಕಳೆದುಕೊಳ್ಳುವುದೇನಿದೆ, ಪಡೆಯುವುದರಾಚೆ…? ನನ್ನ ನಾನ್-ಕನ್ನಡಿಗ ಅಂದರೆ ಕರ್ನಾಟಕದವರಲ್ಲದ, ಕನ್ನಡಿಗರಾಗಿದ್ದೂ ಕನ್ನಡದ ವರ್ಣಮಾಲೆಯನ್ನೂ ಅರಿಯದ ವಿಧ್ಯಾರ್ಥಿಗಳಿಗೆ ನನ್ನ ಉವಾಚ…

ಎರಡನೆಯದು, ಆರು ಹೆವಿ ಟೆಕ್ನಾಲಜಿಕಲ್ ಸಬ್ಜೆಕ್ಟ್ ಗಳೊಳಗೆ ಮುಳುಗಿರುವ ಅವರು ವಸ್ತುಶಃ ತಮ್ಮ ಸುತ್ತುಮುತ್ತಲಿನ, ತಮ್ಮ ಸಮಾಜದ ತಮ್ಮ ನಾಡಿನ ವಿದ್ಯಮಾನಗಳಿಗೆ ಕುರುಡಾಗಿರುತ್ತಾರೆ, ಕಿವುಡಾಗಿರುತ್ತಾರೆ. ಅವರನ್ನು ಮತ್ತೆ ಕಣ್ತೆರೆಸುವ ಒಂದು ಯತ್ನ ನನ್ನ ಕನ್ನಡಿಗ ವಿದ್ಯಾರ್ಥಿಗಳ ಕನ್ನಡ ತರಗತಿ.

ಪಾಠದೊಳಗೆ ಇಣುಕುತ್ತಲೇ ಅದು ಅಲ್ಲಮನದಾಗಿರಲಿ ಶಿಶುನಾಳರ ತತ್ವಪದವಿರಲಿ, ಮತ್ತೆ ಪಠ್ಯದಾಚೆ ಬಂದು ವಿಧ್ಯಾರ್ಥಿಗಳನ್ನು ಸ್ವತಃ ಅವರ ಬದುಕಿಗೆ ಮುಖಾಮುಖಿಗೊಳಿಸುವ ಉದ್ದೇಶ ನನ್ನೊಳಗೆ ಸದಾ ಜಾಗೃತ. ಹಾಗೆ ಹೊರ ಜಗತ್ತಿಗೆ ಕೈ ಹಿಡಿದು ಕರೆದುಕೊಂಡು ಹೋಗುವ ವೇಳೆ, ತಮ್ಮ ಟೆಕ್ನಾಲಜಿಯ ಸ್ಟಡಿಯಿಂದ ಸ್ವಲ್ಪ ಹೊತ್ತು ಹೊರ ಬಂದು ರಿಲ್ಯಾಕ್ಸ್ ಆಗುವ ಒಂದು ದೊಡ್ಡ ಅವಕಾಶ, ನಾನು ಅವರೊಳಗೆ ಬಿತ್ತುವ ಎರಡನೆಯ ಕನಸು. ನನ್ನ ತರಗತಿ ಆ ಕನಸಿನ ಅರಮನೆಯಾಗುವ ಬಗ್ಗೆ ಸೆಮೆಸ್ಟರಿನ ಕೊನೆಗೆ ಅವರ ಬಾಯಿಯಿಂದಲೇ ಕೇಳಿ ತಿಳಿದಿರುವುದು ನನ್ನ ಅನುಭವ!

ಮೂರನೆಯದು, ಕರ್ನಾಟಕದ ನಾವು, ದಕ್ಷಿಣ ಕನ್ನಡ ಎಂದು, ಜಿಲ್ಲೆಯ ಹೆಸರಲ್ಲೂ ಕನ್ನಡವನ್ನೆ ಇಟ್ಟುಕೊಂಡಿರುವ ನಾವು, ಕನ್ನಡವೆ ತಿಳಿದಿರದಿದ್ದರೆ ಏನು ಚೆಂದ. ಲೋಕದ ವಿಸ್ತಾರದಲ್ಲಿ ಹಾರುವಷ್ಟೆ ಸಂಭ್ರಮ, ಸ್ಥಳಿಯವಾಗಿ ಬೇರೂರುವಲ್ಲೂ ವಹಿಸೋಣ; ಎಲ್ಲವನ್ನೂ ಕಲಿಯೋಣ, ಕನ್ನಡವನ್ನೂ ಮರೆಯದಿರೋಣ, ಎಂದು ಹೇಳ್ತಾ ವಿಜ್ಞಾನದ ವಿಸ್ತಾರದಲ್ಲಿ ಈಜುತ್ತಾ ವ್ಯಾವಹಾರಿಕ ವಲಯದಲ್ಲಿ ಮನುಷ್ಯ ಸಂಬಂಧಗಳ ಬಗೆಗೂ ಅರಿತು, ಕನ್ನಡದ ದಡಕ್ಕೆ ಬಂದು ನಿಂತ ನನ್ನ ನಾವೆಯನ್ನು ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಲ್ಲಿ ತೆರೆದು ತೋರುತ್ತಾ ಬೇಕಾಗಿರುವುದು ಕಲಿಯುವ ಮನಸ್ಸಷ್ಟೆ ಎಂದು ಮಾತು ನಿಲ್ಲಿಸುವಾಗ, ತರಗತಿಯಲ್ಲಿರುವ ಹೆಚ್ಚಿನ ಎಲ್ಲಾ ಟೀನೇಜ್ ಮೈಂಡ್‍ಗಳು ಮುಗುಳು ನಗುವಿನೊಂದಿಗೆ ನನ್ನ ಜೊತೆ ಸೇರಿರುತ್ತವೆ.

ಹೀಗೆ, ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜಿನಲ್ಲಿ ಮ್ಯಾನೆಜ್ಮೆಂಟ್ ವಿಧ್ಯಾರ್ಥಿಗಳಿಗೆ, ಮಾನವ ಸಂಪನ್ಮೂಲ ಪಾಠ ಮಾಡ್ತಾ, ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಕನ್ನಡವನ್ನು ಪಠಿಸ್ತಾ ಬಹುಶಃ ನಾನು ಖುಷಿ ಪಡುವುದು ಕನ್ನಡ ಪಠ್ಯ ಪುಸ್ತಕದ ಪುಟಗಳನ್ನು ತಿರುವುವಾಗಲೇ, ಎಂದು ನನ್ನೊಳಗು ಉಸುರದ ಕ್ಷಣವಿಲ್ಲ. ನಾನು ಬಿತ್ತುವ ಭಿತ್ತನೆ ಚಿಗುರೊಡೆದು ಫಸಲು ಕಾಣುವ ಸಂಭ್ರಮವನ್ನು ಒಮ್ಮೊಮ್ಮೆ ಕಾಲೇಜು ಮ್ಯಾಗಝೀನ್‍ನಲ್ಲಿ ಅವರ ಕನ್ನಡ ಬರಹಗಳ ಮೂಲಕ ಕಾಣಸಿಕ್ಕರೂ, ನಾನು ತರಗತಿಯಲ್ಲಿ ಭಿತ್ತಿದ ಬೀಜ ಅವರೊಳಗೆ ಬೇರೂರಿರುತ್ತದೆ ಅನ್ನುವುದು ಅವರು ತರಗತಿಯಲ್ಲಿ ತೋರುವ ಆಸಕ್ತಿಯಲ್ಲೆ ಸ್ಪಷ್ಟವಾಗುತ್ತದೆ.

ಮ್ಯಾಮ್, ನನ್ನ ಅಜ್ಜಿ ಕನ್ನಡ ಟೀಚರ್ ಆಗಿದ್ದವರು. ಅವರು ನನಗೆ ಕನ್ನಡ ಹೇಳಿ ಕೊಡ್ತಾ ಇದ್ರು, ಅಂತ ತಮ್ಮ ನೆನಪನ್ನು ತಾಜಾ ಮಾಡುವ ಕೆಲವೊಂದು ಮನಸ್ಸುಗಳು ಕನ್ನಡವನ್ನು ಪ್ರೀತಿಸುವ ದಾರಿಯಲ್ಲಿರುತ್ತವೆ. ಮೆಶಿನ್ನುಗಳ ಜೊತೆಯೋ, ಕೋಡಿಂಗ್‍ಗಳ ಜೊತೆಯೋ ಜಡ್ಡುಗಟ್ಟಿರುವ ಮನಸ್ಸುಗಳೊಳಗೆ ಹೂವು ಅರಳುವ ಸಂಭ್ರಮವನ್ನು, ಸಂಸ್ಕೃತಿಯ ಒಳಗೆ ಕಡೆದಿಟ್ಟ ಕೃತಿಯನ್ನು, ಲೋಕವನ್ನೇ ಪ್ರೀತಿಸುವ ಬಗೆಯನ್ನು, ನಾಡು ಹೆಮ್ಮೆ ಪಟ್ಟ ವ್ಯಕ್ತಿತ್ವದೊಳಗಿನ ವ್ಯಕ್ತಿಗಳನ್ನು ಕಾಣಿಸುತ್ತಲೇ, ಆ ದಾರಿಯ ಇಣುಕು ನೋಟದ ಮೂಲಕ ಆ ದಾರಿಯಲ್ಲಿ ನಡೆದರೆಷ್ಟು ಚೆಂದ ಎಂದು ಮನದಟ್ಟು ಮಾಡುವ ನೀಲ ನಕಾಶೆ ಕಾಣಿಸುವ ನನ್ನ ಪ್ರಯತ್ನಕ್ಕೆ, ತರಗತಿಯ ಹೊರಗೆ ವಿಧ್ಯಾರ್ಥಿಗಳು ಸಿಕ್ಕಾಗಲೂ ಕೈಯೆತ್ತಿ ಹೃದಯ ಮುಟ್ಟಿ ಹೇಳುವ ‘ನಮಸ್ತೆ’, ಬಾಯಿಯನ್ನಷ್ಟೆ ಬಳಸಿ ಹೇಳುವ ಗುಡ್ ಮಾರ್ನಿಂಗ್‍ಗಿಂತ ಎತ್ತರದಲ್ಲಿ ಉಳಿಯುತ್ತದೆ. ಆದರೆ, ತಲೆಯನ್ನು ಕೊಂಚವೇ ಬಗ್ಗಿಸಿ, ಕೈಗಳನ್ನು ಹೃದಯದ ಮುಂದಿಡಿದು, ಉಸುರುವ ಈ ಪಾಠ ನಾನು ಯಾವ ತರಗತಿಯಲ್ಲಿ ಯಾವ ವಿಧ್ಯಾರ್ಥಿಗೂ ಕಲಿಸಿಲ್ಲ. ಅವರೊಳಗಿದ್ದ ಮನುಷ್ಯ ಸಂಬಂಧವನ್ನು ಗೌರವಿಸುವ ಒಂದು ಮಧುರ ಭಾವವನ್ನಷ್ಟೆ ಎಚ್ಚರಿಸಿದ್ದು!

ಒಂದು ತರಗತಿ ಮುಗಿಸಿ, ಆ ಪುಸ್ತಕಗಳನ್ನು ಒಳಗಿಡುವ, ಆ ಹಿಂದಿನ ಮೇಷ್ಟ್ರು ಹೇಳಿರುವ ಕ್ಲಾಸ್ ವರ್ಕ್‍ಗಳನ್ನು ಮುಗಿಸುವ ಒತ್ತಡದಲ್ಲಿರುವ ಅವರು, ನಾನು ಒಳ ಪ್ರವೇಶಿಸುವಾಗ ಕೆಲವರು ತಮ್ಮದೇ ಲೋಕದಲ್ಲಿ ಮುಳುಗೇಳುತ್ತ ಎದ್ದು ನಿಲ್ಲಲು ಮರೆಯುತ್ತಾರೆ. ಹಾಗೆ ಕುಳಿತಿರುವ ಅವರನ್ನು ನೋಡಿ, ನೋಡುತ್ತಲೇ ಉಳಿದು, ಹಾಗೆಯೇ ಅವರತ್ತ ಒಂದು ಮುಗುಳುನಗುವನ್ನು ತಲುಪಿಸುವೆ.

ತಾವು ತಪ್ಪು ಮಾಡಿದವರಂತೆಯೋ ಅಥವಾ ಬೇಕೋ ಬೇಡವೋ ಎನ್ನುವಂತೆ ಎದ್ದು ನಿಲ್ಲುವ ಅವರ ಮನಸ್ಥಿತಿಗೆ ನಾನು ಯಾವತ್ತೂ ಹೇಳುವುದಿದೆ, ‘ನನಗಾಗಿ ಎದ್ದು ನಿಲ್ಬೇಡಿ. ಆದರೆ ಅಷ್ಟು ಹೊತ್ತು ಕುಳಿತು ಜೊಂಪು ಹಿಡಿದಿರುವ ನಿಮ್ಮ ದೇಹಕ್ಕೆ ಒಂದು ಪುಟ್ಟ ರಿಲ್ಯಾಕ್ಸ್ ಕೊಡಿ. ಬೇಕಾದ್ರೆ ಸ್ಟ್ರೆಚಸ್ ಮಾಡ್ಕೊಳ್ಳಿ. ದೇಹ ಮತ್ತು ಮನಸ್ಸನ್ನು ನನ್ನ ಮುಂದಿನ ಒಂದು ಘಂಟೆಯ ಮಾತನ್ನು ಕೇಳಿಸಿಕೊಳ್ಳಲು, ಆಲೋಚಿಸಲು ಪೂರ್ವ ತಯಾರಿ ಮಾಡಿಕೊಳ್ಳುವ ಉದ್ದೇಶ ನನ್ನೊಳಗಿನದು. ಬೆಳೆದ ಮಕ್ಕಳಲ್ಲಿ ಒತ್ತಡ ಹಾಕುವ ಬದಲು, ಹಿರಿಯರಿಗೆ ಗೌರವ ಕೊಡಬೇಕೆಂಬ ನೀತಿ ಪಾಠ ಮಾಡುವ ಬದಲು, ಅದರಿಂದ ಅವರಿಗಾಗುವ ಒಳಿತನ್ನು ಹೇಳುವ ಮೂಲಕ ಒಪ್ಪಿಸುವುದು ಹೆಚ್ಚು ಸಮಂಜಸ ಎಂದೆನಿಸುತ್ತದೆ. ಇದು ನಾನು ಕಲಿಸುತ್ತಾ ನನ್ನ ವಿಧ್ಯಾರ್ಥಿಗಳಿಂದ ಕಲಿತ ಪಾಠ. 

ಯಾವುದೇ ವಿಷಯವಿರಲಿ, ಆ ವಿಷಯಕ್ಕೆ ಸಂಬಂಧಿಸಿ ನಾನು ಹೇಳುವ ನನ್ನ ಆಲೋಚನೆಯಿರಲಿ, ಅದನ್ನು ಚರ್ಚೆಗೆ ತೆರೆದಿಡುವುದು ನನ್ನ ಹಂಬಲ. ಏಕೆಂದರೆ ಭಾಷೆಯನ್ನು, ನಾಡನ್ನು ಸಂಸ್ಕೃತಿಯನ್ನು ಕಲಿಯುವ ಮತ್ತು ಕಲಿಸುವ ನೆಲೆ, ಯಾವುದೇ ಕ್ಯಾಥೋಡ್ ಮತ್ತು ಆ್ಯನೋಡ್‍ಗಳ ಜೋಡಣೆಯ ಹಾಗೆ ಅಥವಾ ಥಿಯರಮ್ ಕಲಿಸುವ ಹಾಗೆ ಖಂಡಿತ ಅಲ್ಲ. ಇಲ್ಲಿ ಅಭಿಪ್ರಾಯಕ್ಕೆ, ತರ್ಕಕ್ಕೆ ಮತ್ತು ಆ ಮೂಲಕ ವಿಧ್ಯಾರ್ಥಿಗಳು ಪಡೆದುಕೊಳ್ಳುವ ಪ್ರಬದ್ಧತೆಗೆ ಅವಕಾಶವಿರುತ್ತದೆ. ಆ ಅವಕಾಶದ ಬಾಗಿಲನ್ನು ತೆರೆದುಕೊಡುವ ನನ್ನ ಪ್ರಯತ್ನ ಸದಾ ಸಾಗಿಯೇ ಇರುತ್ತದೆ.

ಕಳೆದ ವಾರ ಓನ್ಲೈನ್ ತರಗತಿ ಮುಗಿಸಿ, ಮಕ್ಕಳಿಗೆ ದಿನ ಶುಭವಾಗಲೆಂದು ಹಾರೈಸಿ, ಹೊರ ಸುತ್ತಾಡದಿರಿ ಎಂದು ಮತ್ತೊಮ್ಮೆ ನೆನಪಿಸಿ, ತರಗತಿಯಿಂದ ಹೊರ ಬಂದು ಸ್ವಲ್ಪ ಹೊತ್ತಿನ ಅಂತರದಲ್ಲಿ ನನ್ನ ಮೊಬೈಲ್ ಕೈಗೆತ್ತಿಕೊಂಡೆ. ಅಪರಿಚಿತ ನಂಬರಿನಿಂದ ಒಂದು ಸಂದೇಶ. ತೆರೆದು ಓದಿದೆ, ‘ಮ್ಯಾಮ್ ಯುವರ್ ಎಕ್ಸ್‍ಪ್ಲನೇಶನ್ಸ್ ಈಸ್ ಸೊ ಇಂಟ್ರೆಸ್ಟಿಂಗ್ ಟು ಲಿಸನ್; ಯೂ ಟೀಚ್ ರಿಯಲಿ ಗುಡ್’… ಅವೇ ಶಬ್ದಗಳು, ಅವೇ ವಾಕ್ಯ, ಮತ್ತು ಅಷ್ಟೆ ಇದ್ದದ್ದು ಆ ಮೆಸೆಜ್‍ನಲ್ಲಿ. ಐದು ನಿಮಿಷದ ಹಿಂದೆ ನಾನು ಆ ವಿಧ್ಯಾರ್ಥಿಗೆ ಆ ದಿನದ ತರಗತಿಯಲ್ಲಿ ವಚನಗಳನ್ನು, ಬಸವಣ್ಣನನ್ನು ಪಾಠ ಮಾಡಿದ ನೆನಪು ಸುಳಿದು ಹೋಯಿತು.

ಹನ್ನೆರಡನೆಯ ಶತಮಾನದ ಬಸವಣ್ಣನಾಗಲಿ ಅಥವಾ ಹದಿನೈದನೆಯ ಶತಮಾನದ ಕನಕನಾಗಲಿ, ಇಪ್ಪತ್ತೊಂದನೆ ಶತಮಾನದ ನಮ್ಮ ಮೊಗ್ಗುಗಳ ಮನಸ್ಸನ್ನು ಅರಳಿಸುವಲ್ಲಿ ನಮ್ಮ ಪಾತ್ರ ಹಿರಿದು ಎಂದು ಕಲಿಸುತ್ತಾ ಕಲಿತ ಕಲಿಕೆ ಮತ್ತೊಮ್ಮೆ ದೃಢವಾಯಿತು. ಹತ್ತನೇ ಶತಮಾನದ ಪಂಪನನ್ನು ಇಪ್ಪತ್ತೊಂದನೆ ಶತಮಾನದ ನಾವೇಕೆ ಓದಬೇಕು? ಅನ್ನುವಲ್ಲಿಂದ ತೊಡಗಿ, ನಾವು ಓದಲೇಬೇಕಿತ್ತು ಅನ್ನುವಲ್ಲಿಗೆ ಪಾಠವನ್ನು ತಂದು ನಿಲ್ಲಿಸುವ ನನ್ನ ತರಗತಿ, ನನ್ನೊಳಗೆ ನಾನು ಆಯಾ ದಿನದ ಕಲಿಕೆಗೆ ಹಾಕಿಕೊಳ್ಳುವ ಪುಟ್ಟ ಚೌಕಟ್ಟು!

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km vasundhara

    ಬರಹದ ವಸ್ತು ಕನ್ನಡ ಕಲಿಕೆಯ ಸುತ್ತಲೇ ಇದ್ದರೂ ಅದರ ಪ್ರಸ್ತುತಿ ಹೊಸಬಗೆಯಲ್ಲಿದೆ. ತುಂಬಾ ಚೆನ್ನಾಗಿದೆ. ನಿಮ್ಮ ಕನ್ನಡ ಪ್ರೇಮ ಮಕ್ಕಳ ಎದೆಯೊಳಗೂ ಇಳಿಯಲಿ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ km vasundharaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: