ನನ್ನ ಅಭಿಪ್ರಾಯ ಎನ್ನುವ ಸಂಕೋಲೆ!!

ಕಿರಣ ಕಾಟವಾ

ಒಂದೆರಡು ವರ್ಷಗಳ ಹಿಂದೆ ನನ್ನ ಮಗಳು ಮಾವಿನ ಸಸಿಯನ್ನು ನೆಟ್ಟು, ಆರೈಕೆ ಮಾಡಿ ಬೆಳೆಸಿದ್ದಳು. ಅದು ಗಿಡವಾಗಿ ಬೆಳೆದ ಮೇಲೆ ಅದನ್ನು ತಾತನ ಮನೆಯ ತೋಟಕ್ಕೆ ಒಯ್ದು ನೆಟ್ಟಳು. ಆದರೆ, ಅದು ಕೆಲ ದಿನಗಳ ನಂತರ ಬಾಡಿ ಹೋಯಿತು. ಅವಳ ಪ್ರಕಾರ ತಾತ – ಅಜ್ಜಿ ಅದನ್ನು ಸರಿಯಾಗಿ ಆರೈಕೆ ಮಾಡಲಿಲ್ಲವೆಂದೇ ಆಗಿತ್ತು.

ಮುಂದಿನ ವರ್ಷದಲ್ಲಿ ಇನ್ನೊಂದು ಸಸಿನೆಟ್ಟು ಬೆಳೆಸಿದಳು. ಅದು ಸಹ ಚೆನ್ನಾಗಿ ಗಿಡವಾಗಿ ಬೆಳೆಯಿತು. ಅದನ್ನು ನಮ್ಮ ಮನೆಯಲ್ಲಿಯೇ ಒಂದು ದೊಡ್ಡ ಕುಂಡಕ್ಕೆ ಬದಲಿಸಿದೆವು. ಕೆಲದಿನಗಳ ನಂತರ ಅದು ಬಾಡಿಯೇ ಹೋಯಿತು. ಆಗ ಅವಳಿಗೆ ಅನಿಸಿತು – ‘ಇದರ ಆವಾಸ ಸ್ಥಾನವನ್ನ ಬದಲಿಸಿದರೆ ಇದು ಬಾಡುತ್ತದೆ ಎಂದು ಅನಿಸುತ್ತದೆ. ಹೋದಸಲದ ಗಿಡ ಬಾಡಿದ್ದು ತಾತ ಅಜ್ಜಿಯರ ಅಲಕ್ಷ್ಯದಿಂದ ಅಲ್ಲ’ ಎಂದು. ಹೀಗೆ, ಒಂದು ಹೊಸ ವಿಚಾರ ಅವಳಿಗೆ ಗೊತ್ತಾಗುತ್ತಲೇ ಅವಳ ಅಭಿಪ್ರಾಯಗಳು ಬದಲಾದವು.

ಮನುಷ್ಯ ಸಹಜವಾಗಿ, ಒಂದು ವಿಷಯ, ವಸ್ತು ಅಥವಾ ಒಬ್ಬ ವ್ಯಕ್ತಿಯ ಬಗ್ಗೆ ಒಂದು ಅಭಿಪ್ರಾಯವನ್ನು ತಾಳಿದಾಗ, ಅದು ಸಾರ್ವಕಾಲಿಕ ಸತ್ಯ ಅನ್ನೋ ರೀತಿಯಲ್ಲಿಯೇ ನಡೆದುಕೊಳ್ಳುತ್ತಾನೆ. ಇದು ಸಹಜವಾಗಿ ಬಂದು ಬಿಡುತ್ತದೆ. ಆದರೆ, ವಿಶ್ಲೇಷಿಸಿ ನೋಡಿದಾಗ – ‘ಅದು ಆಗಿನ, ಅವನ ನಂಬಿಕೆ, ಅರಿವು ಮತ್ತು ವಿಷಯಗಳ ತಿಳುವಳಿಕೆಗೆ ಸೀಮಿತವಾಗಿರುತ್ತದೆ’. ಈ ಅಭಿಪ್ರಾಯಗಳು ಒಳ್ಳೆಯವು ಆಗಿರಬಹುದು, ಕೆಟ್ಟವು ಆಗಿರಬಹುದು. 

ವಿಷಯ, ವಸ್ತು, ವ್ಯಕ್ತಿಗಳದ್ದೇ  ಕೆಲವು ಉದಾಹರಣೆಗಳು ಇಲ್ಲಿವೆ: 

1. ಮೊದಮೊದಲು ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಿದ್ದಾನೆ ಎಂದು ತಿಳಿದಿದ್ದರು. ನಂತರ ಭೂಮಿ ಸೂರ್ಯನ ಸುತ್ತ ಸುತ್ತುತಿದೆಯೆಂದು ಗೊತ್ತಾಯಿತು. 

2. ಒಂದು ಕಾಲದಲ್ಲಿ ಸೈಕಲ್ ಬಡತನದ ಕುರುಹು. ಇಂದು ಸೈಕಲ್ ಆರೋಗ್ಯದ ಕುರುಹು. ಒಂದಾನೊಂದು ಕಾಲದಲ್ಲಿ ಬೆಲ್ಲದ ಚಹಾ ಬೇಡವಾಗಿತ್ತು, ಆದರೆ ಇಂದು Starbucks, Cafe Coffee Day ಗಳಲ್ಲಿ ಬೆಲ್ಲದ ಪುಡಿಯನ್ನು ಸಿಹಿಗಾಗಿ ಬಳಸುತ್ತಾರೆ. ಪಾಯಿಖಾನೆ ಬಯಲಿನಿಂದ ಮನೆಯ ಒಳಗಡೆ, ಮಲಗುವ ಕೊಠಡಿಯ ತನಕ ಬಂದಿದೆ. 

3. ‘ಎರಡು ಕನಸು’ ಸಿನಿಮಾದಲ್ಲಿ, ರಾಜಕುಮಾರ್ ಅವರು ಸಿನಿಮಾದ ಕೊನೆಯ ಹಂತದಲ್ಲಿ ಮಂಜುಳಾರನ್ನು ನೋಡಿದಾಗ ಅವರ ವೈವಾಹಿಕ ಜೀವನದ ಬಗ್ಗೆ ಬೇರೆಯಾಗುವ ಅಭಿಪ್ರಾಯ, ಅಂಗುಲಿಮಾಲಾ ಎನ್ನುವ ಕ್ರೂರಿ ಬುದ್ದನನ್ನು ಭೇಟಿಯಾಗಿ ಕೊಲ್ಲುವ ವೃತ್ತಿಯನ್ನು ಬಿಟ್ಟದ್ದು, ಬೇಡರ ವಾಲ್ಮೀಕಿ ಮಹರ್ಷಿಯಾದದ್ದು, ಜಿಪುಣ ವ್ಯಾಪಾರಿ ಪುರಂದರದಾಸರಾದದ್ದು… ಎಲ್ಲರಲ್ಲೂ ಒಂದು ಕಾಲದಲ್ಲಿದ್ದ ತಮ್ಮ ಬಗೆಗಿನ ಅಭಿಪ್ರಾಯಗಳು, ನಾಳೆಗೆ ಇಲ್ಲವಾಗಿಬಿಟ್ಟವು.

ಎಷ್ಟೋ ರಾಜಕಾರಣಿಗಳು, ಸಿನಿಮಾ ನಟರು, ಪ್ರಖ್ಯಾತಿ ಹೊಂದಿದವರು – ನಾವು ಒಳ್ಳೆಯವರೆಂದು ಕೊಂಡು, ಬೇರೆ ಮುಖ  ನೋಡಿದ್ದೇವೆ, ಕೆಟ್ಟವರೆಂದುಕೊಂಡವರ ಒಳ್ಳೆಯ ಮುಖ ನೋಡಿದ್ದೇವೆ. ಇಲ್ಲಿ ಅವರನ್ನು ಹೆಸರಿಸಬೇಕಿಲ್ಲ. ನಮ್ಮ ವೈಯಕ್ತಿಕ ಜೀವನದಲ್ಲೂ – ನಮ್ಮ ಸಂಸಾರದ ಸದಸ್ಯರು, ಗೆಳೆಯರು, ನೆರೆ-ಹೊರೆಯವರು, ಸಂಬಂಧಿಕರು, ಸಹೋದ್ಯೋಗಿ… ಹೀಗೆ ಎಲ್ಲರ ಬಗ್ಗೆಯೂ ಒಂದು ಅಭಿಪ್ರಾಯವನ್ನು ತಾಳಿರುತ್ತೇವೆ. ಈ ಅಭಿಪ್ರಾಯ ಬದಲಾವಣೆ ಕೇವಲ ಬೇರೆಯವರ ಬಗ್ಗೆಯೇ ಆಗಿರದೆ, ನಮ್ಮ ಬಗ್ಗೆಯೂ ಆಗಿರಬಹುದು. 

ಹೀಗೆ ಒಂದು ಕಾಲದಲ್ಲಿ ತಾನು ತಿಳಿದಂತೆ, ನೋಡಿದಂತೆ, ಅರಿತಂತೆ ಮಾತ್ರ ವಿಷಯಗಳು ಸತ್ಯ, ಬಾಕಿ ಎಲ್ಲ ಮಿಥ್ಯ ಎನ್ನುವ ಅಹಂನಿಂದಾಗಿ ಅವರವರ ಅಭಿಪ್ರಾಯಗಳೇ ಅವರಿಗೆ ಸತ್ಯವಾಗಿದ್ದವು. ತದನಂತರದ ಕಾಲದಲ್ಲಿ ಅವು ಬದಲಾದವು. ಅದಕ್ಕೆ ಬೇರೆ-ಬೇರೆ ಕಾರಣಗಳೇ ಇದ್ದವು – ಕಾಲದ ಬದಲಾವಣೆ, ಸಾಮಾಜಿಕ-ಆರ್ಥಿಕ ಬದಲಾವಣೆ, ಆಗಿನ ಕಾಲಮಾನದಲ್ಲಿ ನಡೆಯುವ ಕ್ರಾಂತಿಗಳು. ಎಲ್ಲದಕ್ಕಿಂತಲೂ ಮಿಗಿಲಾಗಿ ಜೀವನದ ಅನುಭವಗಳಿಂದ, ಓದು-ಕಲಿಕೆಗಳಿಂದ ಆದ ವಿಚಾರ ವಿಸ್ತರಣೆ ಹೆಚ್ಚು ಪರಿಣಾಮಕಾರಿಯಾಗಿದ್ದವು. ಇದೆ ರೀತಿ ‘ಇಂದು’ ನಾವು ಸತ್ಯವೆಂದೇ ತಿಳಿದುಕೊಂಡ ಅಭಿಪ್ರಾಯಗಳು – ವಸ್ತು, ವಿಷಯ, ವ್ಯಕ್ತಿ, ಸ್ವತಃ ಬಗ್ಗೆಯೂ ಸಹ – ನಾಳೆ ಬದಲಾಗುವವು. 

ಆದರೆ, ಈ ತತ್ವ ಎಲ್ಲ ವ್ಯತಿರಿಕ್ತ ಸಂದರ್ಭಗಳಿಗೂ ಅನ್ವಯವಾಗುತ್ತಾ? ಉದಾಹರಣೆಗೆ ಒಬ್ಬ ಕಳ್ಳತನ ಮಾಡಿ ಸಿಕ್ಕಾಗ, ಬೇಕು-ಬೇಕು ಅಂತಲೇ ನನಗೆ ಒಬ್ಬರು ಮೋಸ ಮಾಡಿದಾಗ, ಗುರುತ್ವಾಕರ್ಷಣೆಯೇ ಸತ್ಯ…ಇತ್ಯಾದಿ. ಕೆಲವು ವೈಜ್ಞಾನಿಕ ವಿಚಾರಗಳು – ಗುರುತ್ವಾಕರ್ಷಣೆ, ಭೂಮಂಡಲದ ರಚನೆ, ಇವುಗಳಲ್ಲಿ ಹೊಸ ವಿಚಾರಗಳು ಹೊರಬರಬಹುದು, ಅಲ್ಲಿಯವರೆಗೆ ಇವೆ ಸತ್ಯ. ಇನ್ನು ವ್ಯಕ್ತಿಗತ ವಿಚಾರಗಳು ಬಂದಾಗ: ನನಗೆ ಆದ ಮೋಸದಲ್ಲಿ ನನ್ನ ಮೂರ್ಖತನದ ಅರಿವು ನನಗಾದಾಗ, ಅಥವಾ ಆ ಸಂದರ್ಭದಲ್ಲಿ ಸಾಮಾಜಿಕ ಅರ್ಥ ವ್ಯವಸ್ಥೆಯ ಹಾಗಿತ್ತು ಎಂದು ಅರಿವಾದಲ್ಲಿ, ಅಥವಾ ನನಗೆ ಆದ ಮೋಸದಿಂದ ಏನೋ ಒಂದು ಹೊಸದಾದ ಒಳ್ಳೆಯ ಬದಲಾವಣೆ ನನ್ನ ಜೀವನದಲ್ಲಿ ಕಂಡಾಗ – ಆ ಮೋಸದ ಬಗ್ಗೆ ನನ್ನ ಈಗಿನವರೆಗಿನ ಅಭಿಪ್ರಾಯಗಳು ಬದಲಾಗುತ್ತವೆ/ಬದಲಾಗಬಹುದು. 

ಅಭಿಪ್ರಾಯ ಕೆಟ್ಟದ್ದೇ ಇರಲಿ, ಒಳ್ಳೆಯದೇ ಇರಲಿ, ನನ್ನ ಬಗ್ಗೆಯೇ ಇರಲಿ ಅಥವಾ ಬೇರೆಯವರ ಬಗ್ಗೆಯೇ ಇರಲಿ, ನನ್ನ ಅಭಿಪ್ರಾಯವೇ ಸಾರ್ವಕಾಲಿಕ ಸತ್ಯ ಅನ್ನುವುದರ ಬದಲು, ಬೇರೆಯಹಾಗೂ ಬೇರೆಯವರ ಅಭಿಪ್ರಾಯಗಳನ್ನು ತಿಳಿಯುವ, ಕೇಳುವ ಮಟ್ಟಿಗೆ ಮನಸ್ಸನ್ನು ತೆರೆದಿಟ್ಟುಕೊಳ್ಳುವುದು, ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುವುದು.

ಬೇರೆ ವಿಚಾರಗಳನ್ನು ವಿಸ್ತರಿಸಿಕೊಳ್ಳುವುದರಿಂದ, ಕೆಲವೊಮ್ಮೆ ಹೆಚ್ಚು ಕಾಲಾವಕಾಶವನ್ನು ಮಾಡಿಕೊಡುವುದರಿಂದ ಸಂಬಂಧ ಹದಗೆಡದಿರಬಹುದು. ಹಾಗೂ ಒಂದು ವೇಳೆ ಬೇರೆಯಾಗಲೇ ಬೇಕು ಎಂದೆನಿಸಿದಾಗ, ಸಮಾಧಾನ ಹಾಗೂ ಗೌರವದಿಂದಲೇ ದೂರ ಸರಿಯಬಹುದು. ಹಾಗಂತ, ಸದ್ಯಕ್ಕೆ ತಿಳಿದುಕೊಂಡಿರುವುದನ್ನು ತಿರಸ್ಕರಿಸುವ ಮನೋದಾರಣೆ ಇರಬೇಕು ಎನ್ನುವುದು ನನ್ನ ಮಾತಲ್ಲ. ತಪ್ಪಿಗೆ ಶಿಕ್ಷೆ ಆಗಲೇಬೇಕು. ಒಂದು ಕಡೆ ಮನಸ್ಸನ್ನು ತೆರೆದಿಡಿ. ಬದಲಾವಣೆ ಸಹಜ.

‍ಲೇಖಕರು Admin

August 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Amrut Malaji

    Anna, It’s really nice column.

    Get to know ourselves from the life with every incidents that we face and to change the prospective over the incidents
    that takes place.
    Is what, need of an hour.

    ಪ್ರತಿಕ್ರಿಯೆ
  2. Kiran

    Thank you Amruth. Yes, just don’t stick and also life won’t let us stick to A opinion

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ KiranCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: