ನನ್ನೂರಿನ ‘ಬಾಬಾ’

ವಿನೋದ ರಾ ಪಾಟೀಲ

ಆಗ ನಾನಿನ್ನೂ ಚಿಕ್ಕವ. ಕನ್ನಡ ಸಾಲಿ. ಖಾಕಿ ಚಡ್ಡಿ ಹಾಕಿಕೊಂಡು ಸೈಕಲ್ ಗಾಲಿ ಉರಳಿಸುತ್ತಾ ನಮ್ಮೂರಿಗೆ ಬರುತ್ತಿದ್ದ ರೈತ ಸಂಘದ ಗಾಡಿಗಳ ಹಿಂದೆ ಹುಡುಗರೆಲ್ಲಾ ಓಡುತ್ತಿದ್ದೆವು. ನಮ್ಮೂರಿನ ಮಧ್ಯೆ ರೈತ ಸಂಘದ ಆಫೀಸ್ ಇತ್ತು. ರಾಡಿಯಿಂದ ಸಾರಿಸಿದ ಗೋಡೆಯ ಮೇಲೆ ಹಸಿರು ಬಣ್ಣದಿಂದ ಬರೆದ ರೈತಹೋರಾಟದ ಚಿಹ್ನೆಗಳು ಗೋಚರಿಸಿದ್ದವು. ಆ ಆಫೀಸಿನ ಹಜಾರದಲ್ಲಿ ಹೋರಾಟಗಾರರು ಸೇರುತ್ತಿದ್ದರು. ಅಲ್ಲಿ ರೈತ ಸಂಘದ ಹಲವು ಪ್ರಮುಖ ಮುಖಂಡರು ಬರುತ್ತಿದ್ದರು. ಆಗ ನಮ್ಮೂರಿನ ತುಂಬಾ ಹಸಿರು ಟವೆಲ್ ಗಳದ್ದೇ ಸದ್ದು.

ರೈತರು ತಮ್ಮ ಸ್ವಂತ ಹಣದಲ್ಲಿ ರೊಟ್ಟಿ ಬುತ್ತಿಯ ಸಮೇತ ಹೋರಾಟಕ್ಕೆ ತೆರಳುತ್ತಿದ್ದರು. ಗ್ರಾಮದ ಎಲ್ಲ ರೈತ ಮಹಿಳೆಯರು ಈ ಹೋರಾಟಗಳಿಗೆ ಸಾಥ್ ನೀಡುತ್ತಿದ್ದರು. ಒಮ್ಮೆ ಅಂತೂ ಆ ಚಳುವಳಿ ಉತ್ತುಂಗದಲ್ಲಿದ್ದಾಗ ಗೌಡರನ್ನು ಪೋಲಿಸರು ಬಂಧಿಸಲು ಬಂದಾಗ ಗ್ರಾಮದ ರೈತ ಮಹಿಳೆ ಕಡಕೋಳ ನಾಗಮ್ಮ ಪೋಲಿಸರ ಎದೆ ಪಟ್ಟಿ ಹಿಡಿದು ಬಾಬಾಗೌಡರನ್ನು ಹಿಡದ್ರ ನಿಮಗೆ ಕೈಯಾಗ ತಟ್ಲಿನೆ ಬರ‍್ತಾವ ಎನ್ನುವ ಅವಾಜ್ ಹಾಕಿ ಪೋಲಿಸರು ಕಾಲ್ಕೀಳುವಂತೆ ಮಾಡಿದ್ದಳು. ಆ ಕಾಲದ ನಮ್ಮೂರಿನ ಹಲವು ಗೋಡೆಗಳ ಮೇಲೆ ತಕ್ಕಡಿಯ ಚಿಹ್ನೆ ಕಾಣಿಸುತ್ತಿದ್ದವು.

ಇನ್ನೂ ರಾಸ್ತಾ ರೋಕೋ ಚಳುವಳಿಗಳು ಖಾಯಂ ಆಗಿದ್ದವು. ರಸ್ತೆಯ ಮೇಲೆ ಗಾಂಧೀ ಪೋಟೋ ಇಟ್ಟು ರಸ್ತೆ ರೋಕೋ ಚಳುವಳಿ, ಜಿಲ್ಲೆ ತಾಲೂಕು ಹಂತದಲ್ಲಿ ಜೈಲ ಭರೊ, ಬಾರಕೋಲು ಚಳುವಳಿ ಹೀಗೆ ಚಳುವಳಿ ನಮ್ಮ ಊರಿನಲ್ಲಿಯೇ ಹುಟ್ಟಿರಬೇಕು ಎನ್ನುವಷ್ಟರ ಮಟ್ಟಿಗೆ ತಮ್ಮ ಹಕ್ಕುಗಳ ಸಲುವಾಗಿ ನಡೆಯುತ್ತಿದ್ದವು. ಅಂದು ಇವೆಲ್ಲಕ್ಕೂ ಪ್ರೇರಣೆಯಾಗಿದ್ದು ಅವರ ಪ್ರಮುಖ ಮಾತುಗಳು. ಅಪ್ಪಟ ಗಾಂಧೀ ನಿಲುವಿನ ಗೌಡರ ಪ್ರಮುಖ ಭಾಷಣ ಸತ್ತವರನ್ನು ಪುಟಿದೇಳುವ ರೀತಿಯಲ್ಲಿ ಇರುತ್ತಿದ್ದವು. ಸಂಗೊಳ್ಳಿ ರಾಯಣ್ಣ, ಚೆನ್ನಮ್ಮನ ನಾಡಿನ ರೈತರಾದ ನೀವು ಹುಟ್ಟು ಹೋರಾಟಗಾರರು ಎಂದು ಹುರಿದುಂಬಿಸುತ್ತಿದ್ದರು. ಈ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಜಾಗೃತ ಮಾಡುತ್ತಿದ್ದರು.

ಕಳಚಿದ ನಕ್ಷತ್ರ
ಈ ದುರಿತ ಕಾಲ ನಮ್ಮ ನಡುವಿನ ನಮ್ಮೂರಿನ ರೈತಧ್ವನಿ ಎಂಬ ನಕ್ಷತ್ರವನ್ನ ಆಕಾಶ ಇಂದು ಕರೆಸಿಕೊಂಡಿದೆ. ಇದ್ದಷ್ಟ ದಿನವನ್ನ ನಿಯತ್ತಿನಿಂದ ಬದುಕಿದವರು. ನಮ್ಮ ಹಳ್ಳಿ ತೀರಾ ಚಿಕ್ಕದು ಅದಕ್ಕಾಗಿ ಚಿಕ್ಕಬಾಗೇವಾಡಿ ಎಂಬ ಹೆಸರು. ಗೌಡರ ಕಾರಣಕ್ಕೆ ಇಂದು ಹೆಸರು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ. ಈ ಊರಿನ ರೊಟ್ಟಿಗೆ ದಿಲ್ಲಿಯಲ್ಲಿ ಗರ್ಜಿಸುವ ತಾಕತ್ತು ಇದೆ ಎನ್ನುವುದನ್ನು ತೋರಿಸಿಕೊಟ್ಟವರು. ರೈತರ ಸ್ವಾಭಿಮಾನಕ್ಕಾಗಿ ಅವರ ಬದುಕು ಹಸನಾಗಲು ಕೊನೆವರೆಗೂ ಹೋರಾಟದಲ್ಲಿ ನಿರತರಾಗಿದ್ದರು. ಯಾವ ರೀತಿ ರೈತರನ್ನು ಲೇವಿದಾರರು, ದಲ್ಲಾಳಿಗಳು ಶೋಷಣೆ ಮಾಡುತ್ತಿದ್ದಾರೆ ಎನ್ನುವುದನ್ನ ರೈತರಿಗೆ ತಿಳಿಸಿದರು.

ಗ್ರಾಮಮಟ್ಟದ ಲೆವಿ ಹೋರಾಟವನ್ನು ಜಾಗೃತ ಮಾಡಿ ಪಂಚಾಯತದಿಂದ ಸಂಸತ್ತಿನವರೆಗೆ ರೈತ ಧ್ವನಿಯನ್ನ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಂತರ ಇವರನ್ನ ಸೆಳೆದಿದ್ದು ಬೆಳಗಾವಿ ರೈತ ಹೋರಾಟಗಾರರು ಆಗತಾನೆ ಚಿಗುರುವ ಸಮಯದಲ್ಲಿ ಅವರ ಜೊತೆಯಾದರು. ಅಲ್ಲಿಂದ ಅಂದರೆ ೧೯೮೨ ರಿಂದ ೧೯೯೫ ರವರೆಗೆ ರೈತ ಸಂಘದಲ್ಲಿ ಕ್ರಿಯಾಶೀಲರಾಗಿ ರಾಜ್ಯದೆಲ್ಲೆಡೆ ಸಂಚರಿಸಿ ರೈತರನ್ನು ಒಟ್ಟುಗೂಡಿಸಿದರು. ನಿಮಗೂ ಒಂದು ಧ್ವನಿಯಿದೆ ಎಂದು ತೋರಿಸಿದರು.

ರೈತನ ಮಗ ದಿಲ್ಲಿ ಸಂಸತ್ತು ಕಂಡ
ರೈತ ಹೋರಾಟಗಳ ಮೂಲಕ ಹೆಸರುವಾಸಿಯಾದ ನಂತರ ರೈತರಿಗೆ ಎನಾದರೂ ಮಾಡಬೇಕು ನೆಮ್ಮದಿ ದಿನಗಳನ್ನು ಅವರು ಅನುಭವಿಸಲು ಅರ್ಹರು ಎನ್ನುವ ಧ್ಯೇಯದೊಂದಿಗೆ ಒಂದು ರಾಷ್ಟ್ರೀಯ ಪಕ್ಷವನ್ನು ಸೇರಿ ಸಂಸತ್ತನ್ನು ಪ್ರವೇಶಿಸಿದರು. ಅಲ್ಲಿ ರೈತರಿಗೆ ಅನುಕೂಲವಾಗುವ ಕಾನೂನುಗಳ ಜಾರಿಗೆ ಪ್ರಯತ್ನಿಸಿದರು. ಕೆಸರು ಮೆತ್ತಿದ ಕಚ್ಚಾ ರಸ್ತೆಯಲ್ಲಿ ರೈತರು ಹೊಲಗಳಿಗೆ ಹೋಗಲು ಕಷ್ಟಪಡುತ್ತಿದ್ದ ಸಮಯದಲ್ಲಿ ಗ್ರಾಮ ಸಡಕ ಯೋಜನೆ ಜಾರಿ ತಂದು ಹಾದಿಯನ್ನು ಸುಗಮಗೊಳಿಸಿದರು.

ಹಿಂದೆ ಈ ಭಾಗದ ರೈತರು ರೊಟ್ಟಿ ಕಟ್ಟಿಕೊಂಡು ಬಂದು ಹೋರಾಟಕ್ಕೆ ಜೊತೆಯಾಗಿದ್ದರು.ಅವರ ಋಣವನ್ನು ಅಧಿಕಾರದಲ್ಲಿದ್ದಾಗ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಋಣಸಂದಾಯ ಮಾಡಿದ್ದರು. ಚಿಕ್ಕ ಊರಾಗಿದ್ದರೂ ರಾಷ್ಟ್ರೀಯ ಮಟ್ಟದ ಪ್ರಮುಖರು ನಮ್ಮ ಊರಿಗೆ ಬರುತ್ತಿದ್ದರು. ಮಾಜಿ ಪ್ರಧಾನಿ ದೇವೇಗೌಡರಾದಿಯಾಗಿ ಹಲವರು ನಮ್ಮ ಹಳ್ಳಿಗೆ ಬಂದ ನೆನಪು ಇನ್ನೂ ಹಸಿರು.

ಅಪ್ಪಟ ಕಾಯಕ ಯೋಗಿ
ಬೆಳಗು ಮುಂಚೆ ಎದ್ದು ತೋಟಕ್ಕೆ ತೆರಳಿ ಯೋಗ ಮಾಡುತ್ತಿದ್ದರು. ನಂತರ ತಾವೇ ಕಾಳಜಿಯಿಂದ ಬೆಳೆಸಿದ ಮಾವು, ಚಿಕ್ಕು ಹಾಗೂ ಇತರ ತೋಟಗಳ ಬೆಳೆಗಳ ಮೇಲೆ ಕೈಯಾಡಿಸಿ ಸ್ವತಃ ತಾವೇ ಮುಂದೆ ನಿಂತು ಕೃಷಿ ಮಾಡಿಸುತ್ತಿದ್ದರು. ಮನೆಗೆ ಬೇಕಾದ ಎಲ್ಲವನ್ನು ತಮ್ಮ ತೋಟದಲ್ಲಿ ಅಪ್ಪಟ ದೇಸಿ ಶೈಲಿಯಲ್ಲಿ ಬೆಳೆಯುತ್ತಿದ್ದರು. ನಂತರ ಕೃಷಿಯ ಆಗು ಹೋಗುಗಳ ಮೇಲೆ ಬೆಳಕು ಚೆಲ್ಲುವ ಪತ್ರಿಕೆಗಳ ಮೇಲೆ ನಿತ್ಯ ಕಣ್ಣಾಡಿಸುತ್ತಿದ್ದರು.

ವಿಶೇಷವಾಗಿ ನಮ್ಮ ಗ್ರಾಮವನ್ನು ಇಷ್ಟಪಡುತ್ತಿದ್ದರು ಸಚಿವರಾಗಿ ಬಂದ ನಂತರ ಅವರಾಡಿದ ಮಾತುಗಳು ಇನ್ನೂ ಕಿವಿಯಲ್ಲಿವೆ ‘ಈ ಗ್ರಾಮಕ್ಕೆ ಹುಲ್ಲು ತರುವ ಬದಲು ಹೂ ತರುವೆ’ ಎಂದು ಅದರಂತೆ ನಮ್ಮ ಗ್ರಾಮಕ್ಕೆ ಹಾಯಸ್ಕೂಲ ಪಶು ಚಿಕಿತ್ಸಾಲಯ ಹಾಗೂ ಇನ್ನೂ ನಮ್ಮ ಊರು ಇಡೀ ದೇಶಕ್ಕೆ ಹೆಸರಾಗುವಂತೆ ಮಾಡಿದ್ದರು. ಮೊಮ್ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ ಅವರ ಜೊತೆ ನಲಿಯುತ್ತಾ ಈ ನೆಲಕ್ಕೆ ಬೇಕಿದ್ದ ಮಾರ್ಗದರ್ಶನ ನೀಡುತ್ತಾ ಇನ್ನೂ ಕೆಲಕಾಲ ನಮ್ಮ ಜೊತೆ ಇರಬೇಕಿತ್ತು.ಅವರು ಕುಳಿತುಕೊಳ್ಳುತ್ತಿದ್ದ ಜಾಗ ನೋಡಿದರೆ ದುಃಖ ಉಮ್ಮಳಿಸಿ ಬರುತ್ತದೆ. ಮತ್ತೊಮ್ಮೆ ಹುಟ್ಟಿ ಬನ್ನಿ…

‍ಲೇಖಕರು Avadhi

June 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. RUDRAGOUDA MURAL

    ಹಳ್ಳಿ ಶೈಲಿಯ ಆಪ್ತ ಬರಹ. ಕಂಡ ಸಂಗತಿಯನ್ನು ನೆನಪಿನ ಅಂತರಾಳದಿಂದ ಬರಹದ ಅಂಗಳಕ್ಕೆ ತಂದ ವಿನೋದ ಪಾಟೀಲರಿಗೆ ಧನ್ಯವಾದಗಳು. ಚಿಕ್ಕಬಾಗೇವಾಡಿಯ ದೊಡ್ಡ ಪ್ರತಿಭೆ ಬಾಬಾಗೌಡರು. ಇಂಥ ನಾಯಕರು ಈಗಿನ ಯುವಕರಿಗೆ ಸ್ಫೂರ್ತಿದಾಯಕ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ RUDRAGOUDA MURALCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: