ದೇವನೂರು ಈ ನಾಡಿನ ಆತ್ಮಸಾಕ್ಷಿ..

ಎದೆಯ ದನಿ

ಎನ್ ಎಸ್ ಶಂಕರ್

1983ರಲ್ಲಿ ಧಾರವಾಡದಲ್ಲಿ ಎರಡನೇ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ. ಆಗ ಈ ಚರ್ಚೆ ಯಾಕೆ ಶುರುವಾಯಿತೋ ಗೊತ್ತಿಲ್ಲ. ಅಂತೂ ಚಳವಳಿ ಕಾಲದಲ್ಲಿ ಚಳವಳಿಯೇ- ಅಂದರೆ ಧರಣಿ, ರ್ಯಾಲಿ, ಪ್ರತಿಭಟನೆ- ಇಂಥ ಹೋರಾಟದ ಚಟುವಟಿಕೆಗಳೇ ಮುಖ್ಯ, ಸಾಹಿತ್ಯವಲ್ಲ ಎಂದು ನಂಬಿದ್ದ ನನ್ನಂಥ ಮುಗ್ಧರ ದಂಡೇ ಅಲ್ಲಿತ್ತು, ಹಾಗೇ ವಾದ ಹೂಡಿತ್ತು.

ಆಗ ಸಮ್ಮೇಳನದ ಸಭಾಂಗಣದಲ್ಲೇ ಸಭಿಕರ ಮಧ್ಯೆ ಕೂತಿದ್ದ ದೇವನೂರ ಮಹಾದೇವ ಅಲ್ಲೇ ಕೂತು- ದಲಿತರು ಮಾರಮ್ಮನಿಗೆ ಕೋಣ ಬಲಿ ಕೊಡುವ ಹಿಂದಿನ ಕಥೆ ಹೇಳಿದರು. ಅಂದರೆ ಕಾನೂನು ಮಾಡಲಾಗದ್ದನ್ನು, ಧರ್ಮ ವಿಧಿಸಲಾಗದ್ದನ್ನು ಕೇವಲ ಒಂದು ಕಥೆ ಹೇಗೆ ಸಾಧಿಸಿದೆ; ತಲೆಮಾರುಗಳ ಕಾಲ ದಲಿತರ ಕೈಯಲ್ಲೇ ದಲಿತರನ್ನು ಬಲಿ ಕೊಡಿಸುತ್ತ ಬಂದಿದೆ ಎಂದು ವಿವರಿಸಿದರು. ಅದನ್ನು ಕೇಳುತ್ತಿದ್ದಂತೆಯೇ ಆ ಕಥೆಯ ಸಂಪೂರ್ಣ ತಥ್ಯ ನಮ್ಮ ತಲೆಗೆ ಹೋಯಿತೆಂದಲ್ಲ, ಆದರೆ ಆ ಕ್ಷಣವೇ ತೆಗೆದು ಕಪಾಳಕ್ಕೆ ಬಾರಿಸಿದಂತೆ ಒಮ್ಮಿಂದೊಮ್ಮೆಲೇ ನಮ್ಮ ಕಣ್ಣು ತೆರೆಸಿ ಜೀವಮಾನದುದ್ದಕ್ಕೂ ಬೆನ್ನಟ್ಟಿದ ಕಥೆಯದು. ಅದು ಈ ‘ಎದೆಗೆ ಬಿದ್ದ ಅಕ್ಷರ’ದಲ್ಲೂ ಇದೆ:

ದಲಿತರಾದ ನಮ್ಮಲ್ಲಿ ಮಾರಮ್ಮನಿಗೆ ಕೋಣ ಬಲಿ ಕೊಡುವ ಪದ್ಧತಿ ಇತ್ತು. ಈ ಪದ್ಧತಿಯ ಹಿಂದೆ ಇರುವ ಕಥೆ ಏನೆಂದರೆ- ಒಬ್ಬ ಅಸ್ಪೃಶ್ಯನು ಬ್ರಾಹ್ಮಣ ಕನ್ಯೆಯನ್ನು ಪ್ರೀತಿಸಿ, ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ವಂಚಿಸಿ ಆಕೆಯನ್ನು ಮದುವೆಯಾಗುತ್ತಾನೆ. ಮುಂದೆ ತಾನು ಮದುವೆಯಾದಾತ ಅಸ್ಪೃಶ್ಯ ಎಂದು ಆ ಬ್ರಾಹ್ಮಣಿಗೆ ತಿಳಿದಾಗ ಆಕೆ ಕುಪಿತಳಾಗಿ ಅಗ್ನಿ ಪ್ರವೇಶ ಮಾಡುತ್ತಾ ‘ಜಾತಿ ಸುಳ್ಳು ಹೇಳಿ ನನ್ನನ್ನು ಕೆಡಿಸಿದ ಪ್ರಯುಕ್ತ ಆ ಅಸ್ಪೃಶ್ಯ ಕೋಣವಾಗಿ ಹುಟ್ಟಲಿ, ಆ ಕೋಣವನ್ನು ನನಗೆ ಬಲಿ ಕೊಡಲಿ’ ಎಂದು ಶಾಪ ಕೊಡುತ್ತಾಳೆ. ಇದು ಕಥೆ. ಕೋಣವಾದ ತಮ್ಮವನನ್ನೇ ನಮ್ಮವರು ಬಲಿಕೊಡುತ್ತಾ, ಅಷ್ಟೇ ಅಲ್ಲ ತಿಂದು ಬಂದಿದ್ದಾರೆ. ಇಂದು ಕೋಣ ಬಲಿಯು ಮಾಂಸ ಮಾತ್ರವಾಗಿರಬಹುದು. ಆದರೆ ಹಿಂದೆ, ನಮ್ಮವರನ್ನು ನಮ್ಮಿಂದಲೇ ಕೊಲ್ಲಿಸುವುದನ್ನು ಈ ಕತೆ ಮಾಡಿಸಿತ್ತು. ವರ್ಣಸಂಕರವನ್ನು ತಡೆದಿತ್ತು.

ಒಬ್ಬ ದೊರೆ ಅಥವಾ ಸರ್ವಾಧಿಕಾರಿ ತನಗೆ ಇಷ್ಟವಾಗದವರನ್ನು ಗಲ್ಲಿಗೆ ಏರಿಸಬಹುದು ಅಥವಾ ಕೊಲ್ಲಿಸಬಹುದು. ಆದರೆ ಈ ಕತೆ ಯಾವ ಬಲಾತ್ಕಾರವನ್ನೂ ಮಾಡದೆ ನಮ್ಮನ್ನು ನಮ್ಮ ಕೈಯಾರೆಯೇ ಕೊಲ್ಲಿಸಿದೆ. ಸಾಹಿತ್ಯವನ್ನು ಉಡಾಫೆಯಾಗಿ ನೋಡಬೇಡಿ ಎನ್ನುವುದಕ್ಕೆ ಇಷ್ಟೆಲ್ಲ ಹೇಳುತ್ತಿರುವೆ. (ದನಿ ಇಲ್ಲದೆ ಮಲಗಿರುವವರ ದನಿಯಾಗಿಯೂ)

ಆಯಿತಾ? ಇದಾದ ಮೇಲೆ ಮುಂದೊಮ್ಮೆ ಡಾ. ಯು.ಆರ್. ಅನಂತಮೂರ್ತಿ ಚಿಕ್ಕಂದಿನಲ್ಲಿ ತಮ್ಮ ಮನೆಯ ಕೊಟ್ಟಿಗೆ ಕೆಲಸಕ್ಕೆ ಬರುತ್ತಿದ್ದ ಹುಡುಗನ ಬಗ್ಗೆ ಬರೆದರು. ಆ ಹುಡುಗ ಬರುತ್ತಿದ್ದ, ಹೋಗುತ್ತಿದ್ದ. ಆದರೆ ಬಾಲಕ ಅನಂತಮೂರ್ತಿ ಶಿವರಾಮ ಕಾರಂತರ ‘ಚೋಮನ ದುಡಿ’ ಓದಿದ ಕೂಡಲೇ, ಆ ಹುಡುಗ ತನ್ನಂತೆಯೇ ಕಷ್ಟ ಸುಖಗಳುಳ್ಳ, ಒಳ ಬಾಳೂ ಇರಬಹುದಾದ ಮನುಷ್ಯನ ಹಾಗೆ ಕಾಣತೊಡಗಿದ…! ಇನ್ನೂ ಮುಂದಕ್ಕೆ ಲಂಕೇಶರು ಟಾಲ್ಸ್ಟಾಯ್ನ ‘ಮನುಷ್ಯನಿಗೆಷ್ಟು ಭೂಮಿ ಬೇಕು’ ಕತೆ ಹೇಗೆ ಸಾಹಿತ್ಯದ ಉದ್ದೇಶಗಳ ಕುರಿತು ತಮ್ಮನ್ನು ಎಚ್ಚರಿಸಿತೆಂದು- ಒಮ್ಮೆಯಲ್ಲ, ಹಲವು ಬಾರಿ ಬರೆದರು. ಈ ಕತೆಯಿಂದಾಗಿ ಬರೆಯುವುದರ, ಬದುಕುವುದರ ಘನತೆ ತಿಳಿಯಿತು ಎಂದು ಬರೆದರು…

ಹೀಗೆ ನನ್ನಂಥವರು ಸಾಹಿತ್ಯದ ಯಕ್ಷಿಣಿಗೆ ಮನಸ್ಸು ತೆರೆದುಕೊಳ್ಳುತ್ತ ಬಂದಿದ್ದರ ಹಿಂದಿನ ಪ್ರೇರಣೆ ಮಹಾದೇವ ಹೇಳಿದ ಅದೊಂದು ಕಥೆಯೇ. ಎಷ್ಟೋ ವರ್ಷಗಳು ಕಳೆದ ಮೇಲೆ, ಈ ಕಥೆಯಿಂದಲೇ ಶುರುವಾಗಿ ಹೆಜ್ಜೆಯಿಡುತ್ತ ಬಂದು ನನಗೆ ಸ್ಫುಟವಾಗಿದ್ದು- ಮನುಷ್ಯರನ್ನು ಮನುಷ್ಯರಾಗಿ ಮಾಡುವುದೇ ಸಾಹಿತ್ಯದ ಕೆಲಸ. ಅಷ್ಟಕ್ಕೂ ಭಾರತದಲ್ಲಿ- ಮಹಾದೇವರೇ ಬರೆದಂತೆ- ‘ಮನುಷ್ಯನಾಗಿ ಹುಟ್ಟಿದ ಮನುಷ್ಯ ಮನುಷ್ಯನಾಗೇ ಉಳಿಯಲು ಎಷ್ಟೊಂದು ಕಷ್ಟ ಅನ್ನಿಸಿ ಸುಸ್ತಾಗುತ್ತದೆ’… ಇರಲಿ. ಈಗ ಯೋಚಿಸಿದರೆ, ಮಹಾದೇವ ಉದ್ದಕ್ಕೂ ನನ್ನಂಥ ಎಳೆಯರನ್ನು ಎಷ್ಟೊಂದು ಬಗೆಗಳಲ್ಲಿ ತಿದ್ದುತ್ತಾ ಬಂದರು, ನಮ್ಮ ಗೊಂದಲಗಳನ್ನೆಲ್ಲ ನಿವಾರಿಸಿದರು ಎಂದು ನೆನಪಾಗುತ್ತದೆ. ಅದಕ್ಕಾಗಿ ಅವರಿಗೆ ಎಂದೂ ಕೃತಜ್ಞ. ಮತ್ತು ಈ ಮಾತುಗಳನ್ನು ಅವರು ಹೇಳಿ, ಬರೆದು ಮಾಡದಿದ್ದರೆ ಈ ನಾಡಿನಲ್ಲಿ ಇನ್ನು ಯಾರೂ ಮಾಡುತ್ತಿರಲಿಲ್ಲ…. ‘ಎದೆಗೆ ಬಿದ್ದ ಅಕ್ಷರ’ ಹಾಗೆ ನನ್ನಲ್ಲಿ ಇಂಥ ಏನೇನೋ ನೆನಪುಗಳನ್ನು ಕೆದಕಿ ಹಿಮ್ಮುಖ ಯಾನಕ್ಕೆ ಕರೆದೊಯ್ದ ಪುಸ್ತಕವೂ ಹೌದು.

ಆಗೆಲ್ಲ ದಲಿತ ಸಂಘರ್ಷ ಸಮಿತಿ ಸಭೆಗಳು, ಸಮಾವೇಶಗಳು ನಡೆಯುತ್ತದ್ದವಲ್ಲ, ಆಗಲೇ ಒಮ್ಮೆ ದಲಿತರ ವಿರುದ್ಧ ‘ನೀವು ಜಾತಿ ವಿರೋಧಿಸುವುದಾಗಿ ಹೇಳುತ್ತೀರಿ, ಆದರೆ ಜಾತಿ ಸಮ್ಮೇಳನಗಳನ್ನು ಮಾಡುತ್ತೀರಲ್ಲ? ಮೇಲ್ಜಾತಿಗಳವರು ಸಭೆ, ಸಮ್ಮೇಳನ ಮಾಡಿದರೇಕೆ ವಿರೋಧಿಸುತ್ತೀರಿ?’ ಎಂದ ಪ್ರಶ್ನಾ ರೂಪದ ಟೀಕೆಗಳು ಬಂದಿದ್ದವು. ಇನ್ನೂ ಅದೇ ತಾನೇ ಕಣ್ಣು ಬಿಡುತ್ತಿದ್ದ ದಲಿತ ಚಳವಳಿಯಲ್ಲಿ ಸೇರಿಹೋಗಲು ಹವಣಿಸುತ್ತಿದ್ದ ನನ್ನಂಥವರ ಮಟ್ಟಿಗೆ ಇದು ಉತ್ತರಿಸಲಾಗದ ಪ್ರಶ್ನೆಯಾಗಿತ್ತು. ಆಗ ಮಹಾದೇವ ‘ನಿಜ, ಆದರೆ ನಾವು ಜಾತಿ ವ್ಯವಸ್ಥೆ ವಿರುದ್ಧ ಜಾತಿ ಸಭೆ ಮಾಡುತ್ತಿದ್ದೀವಾ ಅಥವಾ ಜಾತಿಯನ್ನು ಗಟ್ಟಿಗೊಳಿಸಲು ಮಾಡುತ್ತಿದ್ದೀವಾ ಎಂಬುದು ಮುಖ್ಯ’ ಎಂದು ಉತ್ತರಿಸಿ ನಮ್ಮ ಗೊಂದಲ ನಿವಾರಿಸಿದ್ದರು.

ಆ ವೇಳೆಗಾಗಲೇ- ಎಲ್ಲರಿಗೂ ಗೊತ್ತಿದ್ದಂತೆ- ಮಹಾದೇವ ಖ್ಯಾತ ಬರಹಗಾರರಾಗಿದ್ದರು. ಎಷ್ಟು ಹೆಸರುವಾಸಿಯೆಂದರೆ, ಅವರ ಶೈಲಿಯನ್ನು ಅನುಕರಿಸುವ ಎಳೆ ಬರಹಗಾರರ ದೊಡ್ಡದೊಂದು ಬಳಗವೇ ಇತ್ತು. ಮಹಾದೇವ ಮಾತ್ರ ತಮ್ಮ ಬರಹದಲ್ಲಿ, ಮಾತಿನಲ್ಲಿ ಉದ್ದಕ್ಕೂ ಇದೇ ‘ಮನುಷ್ಯರನ್ನು ಮನುಷ್ಯರಾಗಿ’ ಮಾಡುವ ಕಸುಬಿನಲ್ಲಿ ತೊಡಗಿದ್ದರು. (ಆನತಿ ಕಾಲದಲ್ಲೇ ಕೆಳ ಜಾತಿ, ಕೀಳು ಜಾತಿ ಎಂದೆಲ್ಲ ಇದ್ದ ಸಂಬೋಧನೆಗಳ ಬದಲಾಗಿ ಮಹಾದೇವ ‘ತಳ ಸಮುದಾಯ’ ಎಂದು ಕರೆಯಿರಿ ಎಂದರು. ಅದನ್ನು ಈಗ ಎಲ್ಲರೂ ಒಪ್ಪಿ ಹಾಗೇ ಚಾಲ್ತಿಗೆ ಬಂದಿದೆ.) ಅವರನ್ನು ಸಾಮಾನ್ಯವಾಗಿ ‘ದಲಿತ ಬರಹಗಾರ’ ಎಂದು ಗುರುತಿಸುವುದು ವಾಡಿಕೆ. ಆದರೆ ಮಹಾದೇವರನ್ನು ದಲಿತ ಲೇಖಕ ಮಾತ್ರ ಎಂದು ಗುರುತಿಸುವುದು ಅವರಿಗಷ್ಟೇ ಅಲ್ಲ, ಇಡೀ ಓದುಗ ಸಮುದಾಯಕ್ಕೆ ಮಾಡುವ ದೊಡ್ಡ ಅನ್ಯಾಯ. ಯಾಕೆಂದರೆ ಅವರು ದಲಿತ ನೆಲೆಯಲ್ಲಿ ನಿಂತು ಮನುಕುಲದ ಅನುಭವಗಳನ್ನು ಹೇಳಹೊರಟ ಲೇಖಕ. ಹೇಗೆ ಸಾದತ್ ಹಸನ್ ಮಂಟೊ, ಮುಸ್ಲಿಂ ನೆಲೆಯಿಂದ ಮನುಕುಲದ ಅನುಭವಗಳನ್ನು ಮಂಡಿಸುತ್ತಾನೋ, ಹಾಗೇ ಮಹಾದೇವ.

‘ಎದೆಗೆ ಬಿದ್ದ ಅಕ್ಷರ’ದ ಬಹು ಮುಖ್ಯ ಭಾಗ ಸಹಜವಾಗಿಯೇ ಜಾತಿ ತಾರತಮ್ಯ ಮತ್ತು ಸಮಾನತೆಯ ಪ್ರಶ್ನೆಗಳ ಸುತ್ತ ಗಸ್ತು ತಿರುಗುತ್ತದೆ. ಜಾತಿಯ ಎಣೆಯಿಲ್ಲದ ರೂಪಗಳನ್ನು, ಭಾರತೀಯ ಮನಸ್ಸಿನ ನಿರಂತರ ಆತ್ಮವಂಚನೆಯನ್ನು ಕಂಡು ಮಹಾದೇವ ತೊಳಲಾಡುತ್ತಾರೆ. ಇದೇ ಪ್ರಶ್ನೆಯನ್ನು ತಿರುಗಿಸಿ ಮುರುಗಿಸಿ ಮುಟ್ಟಿ ತಟ್ಟಿ ಏನಾದರೂ, ಎಲ್ಲಿಯಾದರೂ ಬಿಡುಗಡೆಯ ದಾರಿ ಕಂಡೀತೇ ಎಂದು ಹುಡುಕಾಡುತ್ತಾರೆ. ಅವರ ಹುಡುಕಾಟ ಈ ನೆಲದ ಆತ್ಮವನ್ನು ಕೆದಕಿ ಕಲಕುವಂತಿದೆ:

ಭಾರತ ಗಾಯಗೊಂಡು ಬಿದ್ದಿದೆ. ಅದರ ‘ಗಾಯ’ ಅದಕ್ಕೆ ಗಾಯ ಅನಿಸುತ್ತಿಲ್ಲ. ಅಸ್ಪೃಶ್ಯತೆ ಜಾತಿ ಮತೀಯತೆಯ ಗಾಯ ನಂಜಾಗಿ ಮಿದುಳಿಗೇರಿ ಭಾರತ ಹುಚ್ಚಾಗಿದೆ. ಈ ಗಾಯವನ್ನೇ, ಈ ಹುಚ್ಚನ್ನೇ ಸಮಾಜದಲ್ಲಿ ಸಂಸ್ಕೃತಿ ಅಂತ, ಪರಂಪರೆ ಅಂತ ಬಿಂಬಿಸಲಾಗಿದೆ. (ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ)

ಅಸ್ಪೃಶ್ಯತೆ ಪಾಪ ಎಂದರೆ ಹೌದೆನ್ನುವ ಭಾರತೀಯ ಮನಸ್ಸು ಅದೇ ಅಸ್ಪೃಶ್ಯತೆ ಆಚರಿಸುವವರು ಪಾಪಿಷ್ಟರು ಎಂದರೆ ಬೆಚ್ಚಿ ಬೀಳುತ್ತದೆ….

ಬಸ್ಸು ರೈಲು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ. ಹೋಟೆಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ. ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ. ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು. ಅಂತರಂಗ ಕತ್ತಲಲ್ಲೆ ಇದೆ. (ಭಾರತ ಸಂವಿಧಾನಕ್ಕೆ ‘ಭೂತ’ಚೇಷ್ಟೆ)

ದಲಿತರು ನೋಡಲು ಚೆನ್ನಾಗಿದ್ದಾರೆ ಎಂಬ ಕಾರಣಕ್ಕೆ ಹೊಡೆತ ತಿಂದಿದ್ದರು. ಸವರ್ಣೀಯ ಹುಡುಗೀನ ಪ್ರೀತಿಸಿದ್ದಕ್ಕೆ ಕೊಲೆಯಾಗಿದ್ದರು. ಪಂಚಾಯ್ತಿ ಅಧ್ಯಕ್ಷರಾಗಿದ್ದಕ್ಕೆ ಜೀವ ತೆತ್ತಿದ್ದರು. ಅಸ್ಪೃಶ್ಯರ ದೇಹಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಆ ಉರಿಯುವ ದೇಹವು ಸವರ್ಣೀಯ ಸಸ್ಯಾಹಾರಿ ಅಹಿಂಸಾವಾದಿಗಳಿಗೆ ಆಹಾರವಾಗಿತ್ತು. ಗಂಗಾಜಲ ತರುತ್ತಿದ್ದ ಅಸ್ಪೃಶ್ಯರನ್ನು ಕೊಲ್ಲಿಸಲು ವಿಪ್ರನು ಡಕಾಯಿತರೊಡನೆ ಅಡ್ಡಗಟ್ಟಿ, ಡಕಾಯಿತರೇ ಕೊಲೆ ಮಾಡಲು ಹಿಂದೆಗೆಯುತ್ತಿದ್ದಾಗ, ಕ್ರೂರ ವಿಪ್ರನು ‘ಧರ್ಮ ಉಳಿಸುವುದಕ್ಕಾಗಿ’ ಎಂದು ಕೊಲ್ಲಿಸಿದ್ದನು. ಊರಾಚೆಯವರ ಮದುವೆ ದಿಬ್ಬಣ ಊರೊಳಕ್ಕೆ ಬಂದುದಕ್ಕಾಗಿ, ಹದಿನಾಲ್ಕು ಜನ ಜೀವ ತೆತ್ತು, ರಕ್ತವು ಬಿಹಾರದ ಬೆಲ್ಚಿ ಹತ್ಯಾಕಾಂಡಕ್ಕಿಂತಲೂ ಕ್ರೂರವಾಗಿ ಚೆಲ್ಲಾಡಿತ್ತು. ಪ್ರಾಣಿದಯಾ ಸಂಘದವರಾದರೂ ಈ ಬಗ್ಗೆ ಮಾತಾಡಲಿಲ್ಲ! (ಬೇಡ ಎನಲಿ ಯಾವ ನಾಲಿಗೆಯಲಿ?)

ಬಹಳ ಹಿಂದೆ, ಡಾ. ಯು.ಆರ್. ಅನಂತಮೂರ್ತಿಯವರನ್ನು ಭೇಟಿ ಮಾಡಲು ಹಿರಿಯರೊಬ್ಬರು ಬಂದಿದ್ದರು. ತುಂಬಾ ಶುಭ್ರವಾಗಿದ್ದರು. ಮೈತುಂಬಾ ಬಿಳಿ ಬಟ್ಟೆ, ಜುಟ್ಟು ನಾಮ ಇತ್ತು. ಅವರು ಮಾತಾಡಿ ಹೋದ ಮೇಲೆ ಅಂತಮೂರ್ತಿಯವರು ‘ಈಗ ಬಂದಿದ್ದವರು ವೇದ ಉಪನಿಷತ್ ಪುರಾಣ ಪಾರಂಗತರು’ ಎಂದರು. ಜೊತೆಗೆ- ‘ಇವರು ತಾವೇ ತಮ್ಮ ಅಡುಗೆ ಮಾಡಿಕೊಂಡು ಊಟ ಮಾಡುವುದು’ ಎಂದು ಹೇಳಿದರು. ಇದು ಯಾಕೋ ನನ್ನ ಮನಸ್ಸಲ್ಲಿ ಉಳಿದುಬಿಟ್ಟಿತು. ತನ್ನ ಕೈಯಾರ ಮಾಡಿದ್ದನ್ನು ಮಾತ್ರ ಊಟ ಮಾಡುವ ಇವರಿಗೆ ವೇದ ಉಪನಿಷತ್ಗಳು ಹೇಳಿಕೊಟ್ಟಿದ್ದೇನು ಎಂಬ ಪ್ರಶ್ನೆ ನನ್ನೊಳಗೆ ಉಳಿದುಬಿಟ್ಟಿತು. ಈಗ ಅನ್ನಿಸುತ್ತದೆ- ಇವರ ಕಠೋರ ಮಡಿಯ ಅಸ್ತಿತ್ವದಲ್ಲೆ ಅಸ್ಪೃಶ್ಯತೆಯ ಪ್ರಚಾರ ಕಾರ್ಯವೂ ಅಂತರ್ಗತವಾಗಿದೆ ಅಂತ….

ಇನ್ನೊಂದು ಭೀಕರ ಉದಾಹರಣೆ ಕೊಡುತ್ತೇನೆ. ಪುರಿ ಜಗದ್ಗುರು ಅಸ್ಪೃಶ್ಯತೆಯನ್ನು ಎತ್ತಿ ಹಿಡಿದಾಗ ಭಾರತ ತಲ್ಲಣಿಸಲಿಲ್ಲ. ಭೀಕರ ಉದಾಹರಣೆ ಎಂದು ನನ್ನ ಸಮಾಧಾನಕ್ಕಾಗಿ ಹೇಳಿಕೊಂಡೆ ಅಷ್ಟೆ. ಆದರೆ ಅದು ಭೀಕರವಾಗಿ ಸಮಾಜಕ್ಕೆ ತಟ್ಟಲೇ ಇಲ್ಲ… (ಪೇಜಾವರ ಶ್ರೀಗಳಿಗೆ) ನೀವು ದಲಿತ ಕೇರಿಗೆ ಪಾದವಿಟ್ಟರೆ ಅದನ್ನು ಧನ್ಯ ಎಂದುಕೊಳ್ಳುವ ಆ ದಲಿತ ಕೇರಿಯ ಮಗುವೊಂದು ನಿಮ್ಮನ್ನು ಪ್ರೀತಿಸಿ ‘ನಾನೂ ನಿಮ್ಮೊಡನೆ ಬರುತ್ತೇನೆ,  ನಗನೂ ನೀವಾಗುವ ಆಸೆ’ ಎಂದರೆ ನೀವೇನು ಮಾಡುತ್ತೀರಿ? (ಭಾರತ ಸಂವಿಧಾನಕ್ಕೆ ‘ಭೂತ’ಚೇಷ್ಟೆ)…

ಈ ದೇಶದಲ್ಲಿ ಬ್ರಾಹ್ಮಣರಿಗೇನೆ ಒಂದು ರಾಜ್ಯ ಕೊಟ್ರೂವೆ ಅಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಮತ್ತಿನ್ಯಾವುದೋ ಹುಟ್ಕಂಡು ನೂರೆಂಟು ಭಿನ್ನಾಭಿಪ್ರಾಯಗಳು ಆ ಬ್ರಾಹ್ಮಣರ ರಾಜ್ಯದಲ್ಲೇ ಬರುತ್ತೆ. ಅಲ್ಲಿ ಜರುಗುವ ವಾಗ್ವಾದ, ಗೇಲಿ, ಅವಹೇಳನ, ಆತ್ಮಹತ್ಯೆಗಳು ಆ ರಾಜ್ಯದ ಸಹಜ ಕ್ರಿಯೆಗಳಾಗಬಹುದು. ಹಾಗೇನೆ ದಲಿತರಿಗೇನೆ ಒಂದು ರಾಜ್ಯ ಕೊಟ್ರೂನು ಅಲ್ಲೂ ಕೂಡಾ ಬಲಗೈ, ಎಡಗೈ, ಎಡಗೈನ ಹೆಬ್ಬೆರಳು, ಬಲಗೈನ ಹೆಬ್ಬೆರಳು ಅಥವಾ ಕಿರುಬೆರಳು ಹೀಗೆ ವಿವಾದ, ಜಗಳ, ಮತ್ತೆ ಕೊಲೆಗಳು ಈ ರಾಜ್ಯದ ದಿನನಿತ್ಯ ಜರುಗುವ ಕ್ರಿಯೆಗಳಾಗಬಹುದು.

ಇದು ಯಾಕೆಂದರೆ ಸಮಾನತೆ ಹಾಗೂ ಸಹಬಾಳ್ವೆ ನಮಗೆ ರೂಢಿಯಾಗಿಲ್ಲ. (ಕನ್ನಡಕ್ಕೂ ಒಂದು ‘ರಾಷ್ಟ್ರೀಯತೆ’?)….

ತುಂಬಾ ಹಿಂದೆ, ಹಳ್ಳಿಯೊಂದರಲ್ಲಿ ದಲಿತರಿಗೆ ಹೋಟೆಲ್ಗೆ ಪ್ರವೇಶವಿಲ್ಲದ ಕಾರಣಕ್ಕೆ ಗಲಾಟೆಯಾಗಿ ಅಲ್ಲಿಗೆ ಹೋಗಿದ್ದೆವು. ಹೋಗಿ ನೋಡಿದರೆ, ಆ ಹೋಟೆಲ್ ಅಂದರೆ ಅದು ಜಗುಲಿ ಮೇಲೆ ತೆಂಗಿನ ಗರಿ ಕಟ್ಟಿದ ಒಂದು ಕತ್ತಲು ತುಂಬಿದ ಜೋಪಡಿಯಾಗಿತ್ತು. ಅಲ್ಲಿ ನೊಣಗಳ ಸಾಮ್ರಾಜ್ಯವಿತ್ತು. ಬಚ್ಚಲು ಪಕ್ಕದಲ್ಲೆ ಹರಿಯುತ್ತ, ಮೂಗು ಮುಚ್ಚಿಕೊಂಡು ಏನಾರು ತಿನ್ನಬೇಕಿತ್ತು. ಈ ಹೋಟೆಲ್ ಪ್ರವೇಶಕ್ಕೆ ದಲಿತರು ಹಾತೊರೆಯುತ್ತಿದ್ದರು. ಆ ದೃಶ್ಯ ನೋಡಿದ ನನ್ನ ಜೊತೆಗಿದ್ದ ಶ್ರೀಕೃಷ್ಣ ಆಲನಹಳ್ಳಿ ‘ಅಯ್ಯೋ ಮಾದೇವ, ಇಲ್ಲಿ ದಲಿತರು ಏನನ್ನೂ ತಿನ್ನದಿದ್ದರೇನೇ ಆರೋಗ್ಯವಲ್ಲವೆ?’ ಎಂದಿದ್ದರು. ಅದಕ್ಕೆ ನಾನು ‘ಪ್ರವೇಶ ಕೇಳುತ್ತಿರುವುದು ಮನಸ್ಸಿನ ಒಳಕ್ಕೆ’ ಎಂದಿದ್ದೆ.

ಭಾರತದ ಸ್ಥಿತಿಯೂ ಹೆಚ್ಚುಕಮ್ಮಿ ಆ ಹೋಟೆಲ್ನ ಕತೆಯಂತೆಯೇ ಇದೆ. ಇಲ್ಲಿ ಕೊಳಕುತನವಿದೆ., ಅನಾರೋಗ್ಯವಿದೆ, ಬಡತನವಿದೆ, ಅಜ್ಞಾನವು ತುಂಬಿದೆ. (ಭಾರತ ಸಂವಿಧಾನಕ್ಕೆ ‘ಭೂತ’ಚೇಷ್ಟೆ)…

ಇದು ಎದೆಯ ದನಿ. ‘ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂದು ಕುವೆಂಪು ಕೇಳುತ್ತಾರಲ್ಲ, ಹಾಗೆ ಮಹಾದೇವ ಸಮಾಜದ ನಾಡಿಪರೀಕ್ಷೆಗೆ ತೊಡಗಿ ಇದರ ನಿಜವೇನು ಎಂದು ಅರಸುತ್ತಾರೆ. ಮಹಾದೇವ ನಮ್ಮ ಕಾಲದ ಪ್ರಮುಖ ಬರಹಗಾರರಲ್ಲೊಬ್ಬರು, ಅಷ್ಟೇ ಅಲ್ಲ, ಈ ನಾಡಿನ ಆತ್ಮಸಾಕ್ಷಿಯಂತಿರುವವರು. ಜೊತೆಗೆ ದಲಿತ ಚಳವಳಿಯ ಆತ್ಮದ ದನಿ. ಅದಕ್ಕೇ ಅವರು ನಡೆಸುವ ಹುಡುಕಾಟ ನಮ್ಮೆಲ್ಲರಿಗೂ ಅಷ್ಟು ಮುಖ್ಯ.

ಅವರು ಮತ್ತೂ ಮುಂದುವರೆದು ಈ ಜಾತಿ ಬಿಕ್ಕಟ್ಟುಗಳಿಗೆ ಏನಾದರೂ ಹೊರದಾರಿಯಿರಬಹುದೇ ಎಂದೂ ಹುಡುಕುತ್ತಾರೆ.

ದಲಿತ ನೌಕರರ ಬಗ್ಗೆ ಪ್ರಚಲಿತದಲ್ಲಿರುವ ಒಂದು ಮಾತು ಹೀಗಿದೆ: ‘ತನಗೆ ಏನಾದರೂ ಅನ್ಯಾಯ ಕಷ್ಟ ಬಂದಾಗ ದಲಿತ ನೌಕರ ಅದನ್ನು ಇಡೀ ಜನಾಂಗಕ್ಕೇ ಆದ ಅನ್ಯಾಯ ಎಂಬಂತೆ ಗೋಳಾಡುತ್ತಾನೆ. ಇಲ್ಲದಿದ್ದರೆ ಸುಮ್ಮನಿರುತ್ತಾನೆ’ ಅಂತ… ದಲಿತ ನೌಕರರ ಜೀವನ ಚರಿತ್ರೆಯನ್ನು ಒಂದೇ ವಾಕ್ಯದಲ್ಲಿ ಬರೆಯಿರಿ ಎಂದರೆ ಏನನ್ನು ಬರೆಯಬಹುದು?- ‘ಬಡತನದಲ್ಲಿ ಕಷ್ಟಪಟ್ಟು ಓದಿ ವಿದ್ಯಾವಂತನಾಗಿ ಕೆಲಸಕ್ಕೆ ಸೇರಿ ಸಂಬಳ ತೆಗೆದುಕೊಂಡು ಆಮೇಲೆ ಊಟ ಮಾಡಿಕೊಂಡು ಚೆನ್ನಾಗಿ ಸತ್ತ’- ಬಹುತೇಕರದು ಇಷ್ಟೆ ಅಲ್ಲವೆ? (ದಲಿತ ನೌಕರರ ಜೊತೆ ಪಿಸುಮಾತು)

ಸ್ವಾತಂತ್ರ್ಯ ಪೂರ್ವದ ಮನು ಸಂವಿಧಾನದ ಸಾಮಾಜಿಕ ಕಟ್ಟು ಕಟ್ಟಳೆಗಳಲ್ಲಿ ಹುಟ್ಟು ಮತ್ತು ಜಾತಿ ಬೇರ್ಪಡಲ್ಲ…. ಆದರೆ ಸ್ವಾತಂತ್ರ್ಯ ನಂತರದ ಸಂವಿಧಾನದಲ್ಲಾದರೂ ಹುಟ್ಟಿನಿಂದ ಜಾತಿಯನ್ನು ಯಾಕೆ ಬೇರ್ಪಡಿಸಬಾರದು? ಜಾತಿಯೂ ಯಾಕೆ ಆಯ್ಕೆಯಾಗಬಾರದು? ಉದಾ: ಕೆ. ರಾಮದಾಸ್ರಿಗೆ ದೊಂಬಿದಾಸರಾಗಬೇಕೆಂದು ಅವರು ಅದನ್ನು ಡಿಕ್ಲೇರ್ ಮಾಡಿಕೊಳ್ಳುವ ಹಕ್ಕಿರಲಿ… ರಾಮದಾಸ್ ಮೊಮ್ಮಗ/ ಮೊಮ್ಮಗಳಿಗೆ ಅಂದರೆ ಮೂರನೆಯ ಜನರೇಷನ್ಗೆ ಆ ಅನುಕೂಲದ ಹಕ್ಕು ದೊರೆಯುವಂತಾಗಲಿ. ಇದಕ್ಕೆ ಆಯಾಯ ಜಾತಿಯ ಕುಲಸ್ಥರು ಒಪ್ಪದೇ ಇರಬಹುದು. ಆದರೆ ಸಂವಿಧಾನದ ಹಕ್ಕಾಗಲು ಏನಂತೆ?

ಇದರಿಂದ ಎರಡು ಮೂರು ಬದಲಾವಣೆ ಆಗುತ್ತೆ: ಜಾತಿಗೂ ಹುಟ್ಟಿಗೂ ಸಂಬಂಧ ಇಲ್ಲ; ನಿಲ್ಲಿಸಿದ ಏಣಿಯಂತಿರುವ ಜಾತಿಯ ಸಾಮಾಜಿಕ ಮೆಟ್ಟಿಲನ್ನು ನಿರಾಕರಿಸಿದಂತೆ; ಏಣಿಯಂತೆ ಇಂತಿರುವ ಸಾಮಾಜಿಕ ತಾರತಮ್ಯದ ಜಾತಿಯನ್ನು ಮಲಗಿಸಿದರೆ ಆಗ ಜಾತಿಗಳು ಒಂದೊಂದು ಸಾಂಸ್ಕೃತಿಕ ಸಮುದಾಯವಾಗಿ ವರ್ತಿಸಬಹುದು…. (ದೊಂಬಿದಾಸ್!)

ನೀವು ದಲಿತರಾಗಿದ್ದರೆ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದ್ದಾಗಿ ಕಲ್ಪಿಸಿಕೊಳ್ಳಿ. ಹಾಗೇ ನೀವು ಬ್ರಾಹ್ಮಣರಾಗಿದ್ದರೆ ಒಂದು ದಲಿತನ ಮನೆಯಲ್ಲಿ ಹುಟ್ಟಿದಂತೆ ಕಲ್ಪಿಸಿಕೊಳ್ಳಿ… ಮುತಾಲಿಕ್ ತನ್ನನ್ನು ಒಬ್ಬ ಮುಲ್ಲಾ ಆಗಿ ಕಲ್ಪಿಸಿಕೊಂಡು ನೋಡಿದ್ದರೂ ಒಬ್ಬ ಮುಲ್ಲಾ ತನ್ನನ್ನುಮುತಾಲಿಕ್ ಆಗಿ ಕಲ್ಪಿಸಿಕೊಂಡಿದ್ದರೂ ಎಷ್ಟೋ ಜೀವಗಳು ಉಳಿಯುತ್ತಿದ್ದವು. ಅಸ್ಪೃಶ್ಯತೆ ಎನ್ನುವುದು ಎಷ್ಟೋ ಕಮ್ಮಿಯಾಗುತ್ತಿತ್ತು.

ಹೀಗಾದರೆ… ನಿಮ್ಮೊಳಗೇ ಇರುವ ಕವಿ ಎಚ್ಚರಗೊಳ್ಳುತ್ತಾನೆ. ಈ ಎಚ್ಚರಗೊಂಡ ಕವಿ ಬದುಕುಳಿಯಬೇಕಾದರೆ, ಕುವೆಂಪು ಅವರೇ ಹೇಳುತ್ತಾರೆ- ‘ಎದೆಯ ಗೂಡಲ್ಲಿ ಒಂದು ತೊಟ್ಟಿಲು ಕಟ್ಟಿ,  ಅದರೊಳಗೊಂದು ಪುಟ್ಟ ಮಗುವನ್ನಿಟ್ಟು ತೂಗುತ್ತಿರಬೇಕು’ ಅಂತ. (ಹುಟ್ಟುತ್ತ ವಿಶ್ವಮಾನವ)

ಚಾತುರ್ವರ್ಣ ಜಾತಿಭೇದದ ತಾರತಮ್ಯದ ಕಾನೂನು ಕಟ್ಟಳೆಗಳನ್ನು ಧರ್ಮವಾಗಿಸಲು ದೇವರುಗಳನ್ನೇ ರೌಡಿಗಳನ್ನಾಗಿಸಿದ ದೇಶ ಇದು…

‘ಕಳೆದ ಜನ್ಮದಲ್ಲಿ ಅಸ್ಪೃಶ್ಯತೆ ಆಚರಿಸಿದವರೇ ಈ ಜನ್ಮದಲ್ಲಿ ಅದನ್ನು ಅನುಭವಿಸಲು ಅಸ್ಪೃಶ್ಯರಾಗಿ ಹುಟ್ಟಿದ್ದಾರೆ. ಈ ಜನ್ಮದಲ್ಲಿ ಅಸ್ಪೃಶ್ಯತೆ ಆಚರಿಸುವವರು ಮುಂದಿನ ಜನ್ಮದಲ್ಲಿ ಅಸ್ಪೃಶ್ಯರಾಗಿ ಹುಟ್ಟುವರು’ ಎಂದು ಜನಜನಿತ ಮಾಡಿದರೆ ನಮ್ಮ ಜಡ ಸಮಾಜವು ಸ್ವಲ್ಪವಾದರೂ ಚಲಿಸಬಹುದಲ್ಲವೆ?… (ಬೇಕಾದುದು- ವೈಷ್ಣವ ದೀಕ್ಷೆಯಲ್ಲ; ತ್ರಿಜ ದೀಕ್ಷೆ)

ಹೀಗಿರುವಾಗ ಬಿಜೆಪಿ, ಆರ್ಎಸ್ಎಸ್ಗಳಿಗೆ ಒಂದೇ ಒಂದು ಪ್ರಾರ್ಥನೆ ಮಾಡುವ. ಏನಂತ? ನಮಗೆ ಈ ಮೀಸಲಾತಿಯ ಸಹವಾಸವೇ ಬೇಡ. ಬಡತನ ನಮಗೆ ರೂಢಿಯಾಗಿದೆ. ನಮಗೆ ಒಂದಾದರೆ ಸಾಕು: ಏನೆಂದರೆ- ‘ಹಿಂದೂ ಒಂದು’ ಎನ್ನುವ ನಿಮ್ಮ ನುಡಿಯನ್ನು ನಡೆಯಲ್ಲಿ ತನ್ನಿ. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ- ‘ಹಿಂದೂ ಒಂದು’ ಮಾಡುವುದಕ್ಕಾಗಿ ‘ಸ್ವಜಾತಿ ಮದುವೆ ಕಾನೂನುಬಾಹಿರ’ ಎಂಬುದನ್ನು ಜಾರಿಗೆ ತರುತ್ತೇವೆ ಎಂದು ಬಿಜೆಪಿ ಘೋಷಿಸಬೇಕು. ಆರ್ಎಸ್ಎಸ್ ಅದಕ್ಕಾಗಿ ಪ್ರಚಾರ ಮಾಡಬೇಕು…. ಹಿಂದೂ ಪದ ಉಚ್ಚಾರ ಮಾಡುವ ಶ್ರೀ ಪೇಜಾವರ ಮಠಾಧಿಪತಿಗಳು ಇತರ ಮಠಾಧಿಪತಿಗಳನ್ನು ಕಟ್ಟಿಕೊಂಡು ‘ಸ್ವಜಾತಿ ಮದುವೆ ಧರ್ಮ ನಿಷಿದ್ಧ’ ಎಂದು ಮನೆಮನೆಗೂ ಹೋಗಿ ಒಲಿಸಿದರೆ ಆಗ ‘ಹಿಂದೂ ಒಂದು’ ಎನ್ನುವುದೂ ಒಂದು ಧರ್ಮ ಆಗುತ್ತದೆ. ಆಗ ಹಿಂದೂ ಒಂದಾಗಲು ಪ್ರಾರಂಭಿಸುತ್ತದೆ. ಆಗ ಈ ಹುಳುಗಳಂತಿರುವ ಮಠಾಧಿಪತಿಗಳು ಚಿಟ್ಟೆಗಳಾಗುತ್ತಾರೆ. ನಾನು ಅವರಿಗೆ ಕೈಜೋಡಿಸಿ ನಮಸ್ಕರಿಸುತ್ತೇನೆ. ಇಂತಹ ಐಕ್ಯತೆಯ ಭಾವನೆಯ ವಾತಾವರಣದಲ್ಲಿ ಬಾಬರಿ ಮಸೀದಿಯೂ ನೆಲಸಮವಾಗುವುದಿಲ್ಲ. (ಮಂದಿರ ಅಗೆದರೆ ಒಳಗೆ ಮಂಡಲ್! ಹಾಗೂ ಒಂದು ಡಿಎನ್ಎ ಪರೀಕ್ಷೆ)?

(ಒಡೆದು ಚೂರಾಗಿರುವ ದಲಿತ ಸಂಘಟನೆಗಳನ್ನು ಉದ್ದೇಶಿಸಿ ‘ಒಕ್ಕೂಟ ಕಾರ್ಯಕ್ರಮವನ್ನು ಸೂಚಿಸುತ್ತಾ) ‘ನಂನಮ್ಮ ಧರ್ಮಗಳು ನಂನಮ್ಮ ಮನೆಯೊಳಗಿರಲಿ; ಸಂವಿಧಾನವೇ ಭಾರತದ ಧರ್ಮವಾಗಲಿ ಎಂಬ ಉಳಿವಿನ ವಾಕ್ಯವನ್ನು ಮನೆಮನೆಗೂ ತಲುಪಿಸಲು ಪ್ರತಿ ಹೊಸ ವರ್ಷದ ಇಡೀ ಜನವರಿ ತಿಂಗಳು ರಾಜ್ಯದ ಉದ್ದಗಲಕ್ಕೂ ಜಾಥಾ, ಮೆರವಣಿಗೆ, ಸಂಕಿರಣ, ಇದಕ್ಕಾಗಿ ಹಾಡು, ಲಾವಣಿ, ನಾಟಕ, ತಮ್ಮಟೆ ಪ್ರಚಾರ- ಇತ್ಯಾದಿ ಇತ್ಯಾದಿ (ಹೀಗೇ ಮುಂದುವರೆದರೆ)

ಹೀಗೆ ಬಗೆ ಬಗೆಯಲ್ಲಿ ಜಾತಿಯ ಅಕರಾಳ ವಿಕರಾಳ ರೂಪಗಳನ್ನು ಮುಟ್ಟಿ ನೋಡುತ್ತ ನಮ್ಮ ಮುಂದಿಡುವ ಮಹಾದೇವ ಗಾಂಧಿ, ಬುದ್ಧ, ಅಂಬೇಡ್ಕರರನ್ನು ಮತ್ತು ವಚನಕಾರರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ.

ಮಹಾದೇವ ‘ಗಾಂಧಿ’ ಚಿತ್ರ ನೋಡಿ ಬರೆದದ್ದು (ನಾನು ಗಾಂಧಿ ಚಿತ್ರ ನೋಡಿದೆ ಅಥವಾ ಆಕಾಶಕ್ಕೆ ಎರಡು ಗೇಣು ಕಮ್ಮಿ) ಸಂಘಟನೆಯಲ್ಲಿ ಆಗ ದೊಡ್ಡ ಸಂಚಲನ ಮೂಡಿಸಿದ ಘಟನೆ. ಆ ಸಿನಿಮಾದಲ್ಲಿ ಅಂಬೇಡ್ಕರರನ್ನು ಹೊರಗಿಟ್ಟು ಅಂಬೇಡ್ಕರರನ್ನು ಅವಮಾನಿಸಲಾಗಿದೆ ಎಂಬ ನಿಲುವು ತಾಳಿ ದಲಿತ ಸಂಘಟನೆ ಚಿತ್ರವನ್ನು ಬಹಿಷ್ಕರಿಸುವ ಕರೆ ಕೊಟ್ಟಿತ್ತು; ಆ ಹಿನ್ನೆಲೆಯಲ್ಲಿ ಮಹಾದೇವ ಆ ಸಿನಿಮಾ ನೋಡಿದ್ದೇ ಒಂದು ಬಂಡುಕೋರ ನಡೆಯಾಗಿತ್ತು. ಜೊತೆಗೆ ಆಗ ಗಾಂಧಿ ಬಗ್ಗೆಯೇ ದಲಿತ ಚಳವಳಿಯಲ್ಲಿ ಅಸ್ಪಷ್ಟತೆಯಿತ್ತು. ಅದಕ್ಕಿಂತಲೂ ಹೆಚ್ಚಾಗಿ ಚಳವಳಿಯ ಹಾದಿ ಹಿಂಸಾತ್ಮಕವಾಗಬೇಕೋ, ಅಹಿಂಸಾತ್ಮಕವೋ ಎಂಬುದೂ ದೊಡ್ಡ ವಾದ ವಿವಾದಗಳಿಗೆ ಕಾರಣವಾಗಿತ್ತು….

ಈ ಲೇಖನಕ್ಕೆ ಇಷ್ಟೆಲ್ಲ ಚಾರಿತ್ರಿಕ ಹಿನ್ನೆಲೆಯಿದೆ. ಹೀಗೆ ಈ ಪುಸ್ತಕದಲ್ಲಿನ ಮಹಾದೇವರ ಎಷ್ಟೋ ಬರಹಗಳಿಗೆ ಐತಿಹಾಸಿಕ ಮಹತ್ವವಿದೆ. ಉದಾಹರಣೆಗೆ ‘ಬಂಡೆಗಳ ಮೇಲೆ ಚಿಗುರೊಡೆಯಬೇಕಾಗಿದೆ’ ಎಂಬ ಬರಹ. ಬಂಡಾಯ ಸಾಹಿತ್ಯ ಸಂಘಟನೆಯ ಉದ್ಘಾಟನೆಯ ಭಾಷಣವಿದು. ಆಗ ಈ ಮಾತುಗಳು ಇಡೀ ಸಂಘಟನೆಯ ಪ್ರಣಾಳಿಕೆಯಾಗಿ ಕೆಲಸ ಮಾಡಿದ್ದು ಈಗಿನ ತಲೆಮಾರಿಗೆ ಗೊತ್ತೇ ಇರಲಾರದು. ಆ ಕಾರಣದಿಂದ ಈ ಪುಸ್ತಕ ಪ್ರಕಟಿಸಿದವರು ಎಲ್ಲ ಪ್ರಮುಖ ಬರಹಗಳ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿಯಾದರೂ ಇಲ್ಲಿ ಕೊಡಬೇಕಿತ್ತು. ಕೊನೇ ಪಕ್ಷ ಬರಹಗಳು ಮೊದಲು ಅಚ್ಚಾದ ಪತ್ರಿಕೆ ಹಾಗೂ ದಿನಾಂಕಗಳನ್ನು ನಮೂದಿಸಬೇಕಿತ್ತು. ಮುಂದಿನ ಮುದ್ರಣಗಳಲ್ಲಾದರೂ ಇದನ್ನು ಸರಿಪಡಿಸಿಕೊಂಡರೆ ಒಳ್ಳೆಯದು.

ಇರಲಿ. ಮಹಾದೇವ ಆಗ ಗಾಂಧಿ ಬಗ್ಗೆ ಬರೆದದ್ದು ಕೂಡ ಸಂಘಟನೆಯ ಆಂತರ್ಯದಲ್ಲಿ ದೊಡ್ಡ ಅವ್ಯಕ್ತ ತುಮುಲವನ್ನೇ ಎಬ್ಬಿಸಿತು. ಮಹಾದೇವ ಯಾವಾಗಲೂ ಅಹಿಂಸೆಯ ತಾತ್ವಿಕ ನಿಲುವಿನವರು. ಇಲ್ಲಿಯೇ ‘ಅಹಿಂಸೆಯ ಹುಡುಕುತ್ತಾ’ ಎಂಬ ಇನ್ನೊಂದು ಬರಹ ಕೂಡ ಇದೇ ದಿಕ್ಕಿನ ಹುಡುಕಾಟದ್ದು. ಅಲ್ಲಿ ಕೇರಳದ ನಕ್ಸಲೈಟ್ ನಾಯಕಿ ಅಜಿತಾ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಪೊಲೀಸರನ್ನು ಕೊಂದು ದೊಡ್ಡ ‘ಹೀರೋ’ ಆಗಿದ್ದ ಬಗ್ಗೆ ಬರೆಯುವ ಮಹಾದೇವ, ಆಗಿನ ಯುವಕರು ಅಜಿತಾಳನ್ನು ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದಾಗ, ತಾವು ಅನುಭವಿಸಿದ ತಳಮಳವನ್ನು ದಾಖಲಿಸುತ್ತಾರೆ. ಅಷ್ಟೇ ಅಲ್ಲ, ದಾಸ್ತೊವ್ಸ್ಕಿಯ ‘ಕ್ರೈಂ ಅಂಡ್ ಪನಿಷ್ಮೆಂಟ್’ ಕಾದಂಬರಿಯ ನಾಯಕ ರಾಸ್ಕೊಲ್ನಿಕೊವ್ನ  ತೊಳಲಾಟಕ್ಕೊಂದು ಒಳನೋಟ ಕೊಡುತ್ತಾರೆ. ಆತ ತನ್ನ ಮನೆಯೊಡತಿಯನ್ನು- ಅವನ ಪ್ರಕಾರ, ನಿಷ್ಪ್ರಯೋಜಕಿಯಾದ, ಶೋಷಕಿಯಾದ ದುಷ್ಟ ಮುದುಕಿ ಅವಳು- ಅನೇಕ ದಿನ ಕಾಲ ಪ್ಲಾನ್ ಮಾಡಿ ಕೊಲ್ಲುತ್ತಾನೆ. ಆ ಕೊಲೆ ನಡೆಯುವಾಗ ನಿರಪರಾಧಿಯಾದ ಆ ಮುದುಕಿಯ ಮಲತಂಗಿ ‘ಅನಿರೀಕ್ಷಿತ ಸಾಕ್ಷಿ’ಯಾದ ಕಾರಣ ಅವಳನ್ನೂ ಕೊಲ್ಲಬೇಕಾಗಿ ಬರುತ್ತದೆ. ಆದರೆ ಅವನು ನೋಯುವುದು, ಬೇಯುವುದು ತಾನು ಲೆಕ್ಕಾಚಾರ ಹಾಕಿ ಕೊಂದ ಮುದುಕಿಯ ಬಗ್ಗೆಯೇ ಹೊರತು ಆ ನಿರಪರಾಧಿಯ ಬಗ್ಗೆ ಅಲ್ಲ!… ಮಹಾದೇವ ಬರೆಯುತ್ತಾರೆ:

ರೋಡಿಯಾನ್ (ನಿಜದಲ್ಲಿ ಅವನ ಹೆಸರು ರಾಸ್ಕೊಲ್ನಿಕೊವ್)ನನ್ನು ಕನಸು ಮನಸಿನಲ್ಲೂ ಹಿಂಡುವ ಕೊಲೆ- ಇನ್ನೇನು ಸಾಯಲಿದ್ದ ಆ ದುಷ್ಟ ಅನುಪಯುಕ್ತ ಮುದುಕಿಯ ಕೊಲೆ ಮಾತ್ರ….

ಉದ್ದೇಶರಹಿತ ನೂರು ಕೊಲೆಗಳ ಮುಂದೆ, ಕೊಲೆ ಹಿಂಸೆಯನ್ನು ತಾತ್ವಿಕಗೊಳಿಸಿದ ಒಂದೇ ಕೊಲೆ ಸಮ ಸಮ ಅನ್ನಿಸಿಬಿಟ್ಟಿತು. ದಲಿತ ಸಂಘರ್ಷ ಸಮಿತಿ ಪ್ರಣಾಳಿಕೆಯಲ್ಲಿನ ಅಹಿಂಸೆಗೆ ಈ ಕಥೆಯೂ ಕಾರಣವಾಯಿತು…

ಈ ಪ್ರಶ್ನೆ ದೇವರು ಧರ್ಮದ ಪ್ರಶ್ನೆಗೆ ಬಂದು ಒಂದು ಧರ್ಮದಲ್ಲಿ ಧರ್ಮ ಉಂಟೋ ಇಲ್ಲವೋ ಎಂಬ ಅಳತೆಯನ್ನು ಅಹಿಂಸೆ ಮತ್ತು ಐಕ್ಯತೆಯಿಂದ ಅಳೆಯಬೇಕು ಎಂಬುದಷ್ಟೆ ನನ್ನ ಕಾಂಕ್ಷೆ.

ಈ ಜಿಜ್ಞಾಸೆಯೇ ಮುಂದಕ್ಕೆ ದಲಿತ ಸಂಘಟನೆಗೆ ಅಹಿಂಸೆಯ ದೀಕ್ಷೆ ಕೊಡಿಸಿತು. ಹೀಗೆ ಮಹಾದೇವ ಏಕಕಾಲದಲ್ಲಿ ಬರಹಗಾರರೂ, ಹೋರಾಟಗಾರರೂ ಆದ ಕಾರಣಕ್ಕೇ ಅವರ ತಾತ್ವಿಕತೆಗೆ ಹೋರಾಟ, ಸಾಹಿತ್ಯ ಎಲ್ಲವೂ ಒದಗಿಬರುತ್ತವೆ….

ಗಾಂಧಿ ಅಂಬೇಡ್ಕರ್ ಇಬ್ಬರನ್ನೂ ಪರಸ್ಪರ ವೈರಿಗಳೆಂದು ನೋಡುವ ಪರಿಪಾಠ ದಲಿತ ಸಂಘಟನೆಯಲ್ಲಿ ಇಂದೂ ಇರುವಾಗ ಮಹಾದೇವ ಅವರಿಬ್ಬರನ್ನೂ ಸಮನ್ವಯಗೊಳಿಸಲು ಆಗಲೂ ಹವಣಿಸಿದವರು. ಆಗ ಅಷ್ಟೆಲ್ಲ ವಿವಾದ ಎಬ್ಬಿಸಿದ- ಗಾಂಧಿ ಚಿತ್ರ ಕುರಿತ ಬರಹದಲ್ಲೇ ಹೀಗಿದೆ:

ಆ ಕಾಲದಲ್ಲಿ ನಾನು ಇದ್ದಿದ್ದರೆ ಯಾರ ಕಡೆ ಇರುತ್ತಿದ್ದೆ ಎಂದು ನನ್ನ ತಲೆ ತಿಂದಿತು. ಅದೆಷ್ಟೋ ಯೋಚಿಸಿದರೂ ನಿಲುಕದೆ ತಳಮಳಿಸಿದೆ. ನಿದ್ದೆಯಲ್ಲೂ ಈ ಚಿಂತೆ ನನ್ನನ್ನು ಬಿಡುತ್ತಿರಲಿಲ್ಲ. ಎದ್ದಾಗ, ನಾನು ಗಾಂಧಿ ಜೊತೆ ಇದ್ದೂ- ಅಂಬೇಡ್ಕರರನ್ನು ಅರ್ಥ ಮಾಡಿಕೊಳ್ಳಬೇಕೆಂದು, ಗಾಂಧಿಯೊಡನೆ ಅಂಬೇಡ್ಕರರ ಪರವಾಗಿ ವಾದಿಸುತ್ತಿದ್ದೆನೇನೋ ಎನಿಸಿತು…

ಮುಂದಕ್ಕೆ…

ಹಾಗಾದರೆ ದಲಿತರ ಹಿಂದಿನ ತಲೆಮಾರು ಗಾಂಧಿ, ಅಂಬೇಡ್ಕರ್ರ ಜಗಳವನ್ನು ಹೇಗೆ ಕಂಡಿತ್ತು? ಮಕ್ಕಳ ಹಿತಕ್ಕಾಗಿ ಎಂದುಕೊಂಡು ಜಗಳವಾಡುವ ಅಪ್ಪ ಅಮ್ಮನಂತೆ? ಹೀಗಲ್ಲದಿದ್ದರೆ ಈ ಇಬ್ಬರ ಫೋಟೋಗಳನ್ನು ಒಟ್ಟಿಗೆ ಇಟ್ಟುಕೊಳ್ಳಲು ಹೇಗೆ ಸಾಧ್ಯ?…

….ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಈ ಅಸಮಾನತೆಯ ಮನೆಗೆ ಕಲ್ಲೆಸೆಯುವವರಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಒಳಗಿದ್ದ ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಹೊರಲೋಕವು ಗಾಂಧಿಗೂ, ಅಂಬೇಡ್ಕರ್ಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತ್ತಿದ್ದುದು ಹೆಚ್ಚೂಕಮ್ಮಿ ಒಂದೇ ಕೆಲಸವನ್ನಲ್ಲವೇ? (ಗಾಂಧಿ ಅಂಬೇಡ್ಕರ್ – ಒಂದಿಷ್ಟು ಮಾತು)

‘ಗಾಂಧಿ- ಕಾಠಿಣ್ಯದ ತಂದೆಯಂತೆ. ಜೆಪಿ- ಅಸಹಾಯಕ ತಾಯಿ. ವಿನೋಬಾ- ಮದುವೆಯಾಗದ ವ್ರತನಿಷ್ಠ ಅಕ್ಕನಂತೆ. ಲೋಹಿಯಾ- ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ. ಅಂಬೇಡ್ಕರ್- ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ’- ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ. ಇದನ್ನು ಹೀಗಲ್ಲದೆ ಹೇಗೆ ನೋಡಬೇಕು? (ಉದ್ಘಾಟನೆಯಾದ ಸಮಾರೋಪ)

ದುರದೃಷ್ಟವಶಾತ್ ಗಾಂಧಿ- ಅಂಬೇಡ್ಕರ್ ವಿವಾದ ಇನ್ನೂ ಬಗೆಹರಿಯದೆ ಮುಂದುವರೆದೇ ಇದೆ…! ಆದರೆ ಮಹಾದೇವ ಹುಡುಕುವ ಬಿಡುಗಡೆಯ ದಾರಿಗಳಲ್ಲಿ ಗಾಂಧಿಯೂ ಸೇರುತ್ತಾರೆ, ಅಂಬೇಡ್ಕರರೂ ಸೇರುತ್ತಾರೆ. ಲೋಹಿಯಾ ಕೂಡ ಹೊರಗಿಲ್ಲ. ಹಾಗೇ ಜಾತಿಯನ್ನು ಮೀರಿ ಕ್ರಾಂತಿ ಮಾಡಿದ ವಚನ ಚಳವಳಿ ಬಗೆಗೂ ಮಹಾದೇವರ ಬೆರಗು ಕಮ್ಮಿಯದಲ್ಲ.

ನನಗೆ ಈ ಸಹಸ್ರಮಾನದಲ್ಲಿ ಕಾಣುವುದು ಹನ್ನೆರಡನೆಯ ಶತಮಾನದ ವಚನ ಆಂದೋಲನದ ಆ ಇಪ್ಪತ್ತೈದು ವರ್ಷಗಳು. ಹುಡುಕಿದರೂ ಜಗತ್ತಿನಲ್ಲೇ ಕನರ್ಾಟಕದ ಈ ಮಾದರಿ ಬಹುಶಃ ಎಲ್ಲೂ ಸಿಗುವುದಿಲ್ಲವೇನೋ! ಈ ವಚನಧರ್ಮವನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೇ ಇದು ಬೆಳಕಾಗಬಹುದೇನೋ. ಇದು ಜಾತಿಯಾದರೆ ಕೆಟ್ಟ ಜಾತಿ. ಧರ್ಮವಾದರೆ ಮಹೋನ್ನತ ಧರ್ಮ. (ದಯೆಗಾಗಿ ನೆಲ ಒಣಗಿದೆ)

ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರವರದೇ ಇಷ್ಟದೈವ. ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು. ಈ ರೀತಿ ಪ್ರಜ್ಞೆಯನ್ನೇ ದೇವರು ಅಂತ ಅಂದುಕೊಂಡರೆ ಸುಡುವ ಬೆಂಕಿಯನ್ನು ನೆತ್ತಿ ಮೇಲೆ ಇಟ್ಟುಕೊಂಡಂತಾಗುತ್ತದೆ. ನಮ್ಮ ಪ್ರಜ್ಞೆ ಮುಂದೆ ಸುಳ್ಳು ಹೇಳಕ್ಕಾಗಲ್ಲ. ಅದೇ ಕಷ್ಟ ಆಗೋದು. ಇತರೆ ದೇವರಿಗಾದರೆ- ಕಾಳಿ ಇರಲಿ, ಯಾವುದೇ ಉಗ್ರ ದೇವತೆ ಇರಲಿ, ಏನೋ ಸ್ವಲ್ಪ ಹೊಟ್ಟೆ ಒಳಕ್ಕೆ ಹಾಕ್ಕೋಂತ ಸುಳ್ಳುಪಳ್ಳು ಹೇಳಿಬಿಡಬಹುದು. ಆದರೆ ಪ್ರಜ್ಞೆ ಮುಂದೆ ಅದು ನಡೆಯದು. ಈ ಇಕ್ಕಟ್ಟಿಗೆ ವಚನಕಾರರು ಮುಖಾಮುಖಿಯಾದರು ಎಂದು ಕಾಣಿಸುತ್ತದೆ, ಅವರು ತಮ್ಮ ಕಷ್ಟ ಸುಖಾನ, ದುಃಖ ದುಮ್ಮಾನಾನ, ಏಳುಬೀಳುಗಳನ್ನು ಅವರ ಉತ್ಕಟ ಇಕ್ಕಟ್ಟುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ ಕೊಟ್ಟರು.

ಅವರು ಅಂದು ನುಡಿದದ್ದು ಇಂದು ನುಡಿದಂತೆ ಕೇಳಿಸುತ್ತಿದೆ. ಅದು ತನಗೆ ತಾನೇ ಕಾವ್ಯವಾಗಿಬಿಟ್ಟಿದೆ. (ನಡೆದು ಬರುವ ಅರಿವು)

ಹೀಗೆಯೇ ಬುದ್ಧನನ್ನು ಮಹಾದೇವ ಚಿಂತನೆಯ ಮಟ್ಟದಲ್ಲಿ ಎದುರುಗೊಂಡಾಗ ಸರಿ, ಆದರೆ ‘ಬುದ್ಧನೆಡೆಗೆ ಮರಳಿ ಮನೆಗೆ’ ಮುಂತಾದ ಕಾರ್ಯಕ್ರಮಗಳು ನನ್ನ ಹಾಗೂ ನನ್ನ ಹಲವು ಗೆಳೆಯರ (ಕೋಟಿಗಾನಹಳ್ಳಿ ರಾಮಯ್ಯ, ಎಚ್, ಗೋವಿಂದಯ್ಯ…) ಕಣ್ಣಿಗೆ ನಿಜ ವಿಮೋಚನೆಯ ಹುಡುಕಾಟವಾಗಿ ಕಾಣದೆ ಹೊಟ್ಟೆ ತುಂಬಿದ ದಲಿತ ಅಧಿಕಾರಿಗಳ ಶೋಕಿಯಾಗಿ ಮಾತ್ರ ಭಾಸವಾಗಿದೆ. ಮಹಾದೇವ ಈ ದಿಕ್ಕಿನಲ್ಲಿ ಯೋಚಿಸಿದಂತಿಲ್ಲ. ಹಾಗೇ ಈ ಪುಸ್ತಕದ ಎಲ್ಲ ಬರಹಗಳೂ ಒಂದೇ ಮಟ್ಟದ ಉತ್ಸಾಹವನ್ನು ನನ್ನಲ್ಲಿ ಉಕ್ಕಿಸಲಿಲ್ಲ ಎಂಬುದೂ ನಿಜ. ಉದಾಹರಣೆಗೆ ‘ಹೀಗೇ ಮುಂದುವರೆದರೆ’ ಎಂಬ ವಿಭಾಗದ ಬಹುತೇಕ ಬರಹಗಳು ಮೈ ಕೈ ನೋಯಿಸಿಕೊಳ್ಳದ, ಯಾವ ತೊಳಲಾಟವೂ ಇಲ್ಲದ ಸಂಪಾದಕೀಯ ಧಾಟಿಯ ಬರವಣಿಗೆಗಳು. ಇರಾಕ್ ಯುದ್ಧ ಮತ್ತು ಅಮೆರಿಕಾದ ಯುದ್ಧಪಿಪಾಸೆಯ ಬಗ್ಗೆ ಮಹಾದೇವ ಹೊಸದೇನು ಹೇಳಬಲ್ಲರು? ಮತ್ತು ಅದರ ಬಗ್ಗೆ ಮಹಾದೇವ ಬರೆಯಬೇಕೇ? (ಆಕಾಶದಲ್ಲಿ ರಣಹದ್ದುಗಳು)

ಅದು ಬಿಟ್ಟರೆ ದೇಶವನ್ನು ಅಪಾಯಕಾರಿ ಮಟ್ಟದಲ್ಲಿ ಅವರಿಸುತ್ತಿರುವ ಮತಾಂಧ ರಾಜಕಾರಣದ ಬಗ್ಗೆಯೂ ಮಹಾದೇವ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಅದರಲ್ಲಿ ನನ್ನ ಮನ ಸೆಳೆದದ್ದು ಇದು:

ಯಾಕೆ ಮತಾಂಧರು, ಮಾನಭಂಗಗಳ ಸುದ್ದಿಗಳನ್ನು, ಅದರಲ್ಲೂ ತಮ್ಮ ಪಾಪದ ಹೆಂಗಸರನ್ನು ಅಸ್ಪೃಶ್ಯರೊ, ಮುಸ್ಲಿಮರೊ ಅಪಹರಿಸಿಕೊಂಡು ಹೋದಂತೊ ರೇಪ್ ಮಾಡಿದಂತೊ ಅಥವಾ ಕೈ ಆಡಿಸಿದಂತೊ ಕಲ್ಪಿಸಿಕೊಂಡು ಅದನ್ನು ವಿವರವಾಗಿ ವರ್ಣಿಸಿಕೊಂಡು ದುಃಖಿಸುತ್ತಾರೆಂಬುದು ನನಗೆ ಅರ್ಥವಾಗದೆ ಉಳಿಯಿತು. ಇಂಥದೆಲ್ಲಾ ನಡೆದಿಲ್ಲವಾದರೂ ಅಂಥದೆಲ್ಲ ಅನೇಕರ ಮನಸ್ಸಲ್ಲಿ ಜರುಗುತಿತ್ತು! ಕೆಲವರ ಕಣ್ಣುಗಳಲ್ಲಿ ನೀರು ಬಂದಿತ್ತು. ಕೆಲವರ ಕಣ್ಣುಗಳಲ್ಲಿ ರಕ್ತ ಬಂದಿತ್ತು… (ಮತಾಂಧರ ಮೆದುಳೊಳಗೆ ಕೆಲವು ಕ್ಷಣಗಳು)

ವಚನವನ್ನು ತಾನು ಕೊಡದಿದ್ದರೂ ತನ್ನ ಅಪ್ಪನು ಕೊಟ್ಟ ವಚನವನ್ನೇ ನಡೆಸಿದ ವಚನಪಾಲನೆಯ ಸಂಕೇತ ಆತ (ರಾಮ). ಹೀಗಾಗಿ, ನ್ಯಾಯಾಲಯಕ್ಕೆ ಕೊಟ್ಟ ವಚನವನ್ನು ಪಾಲನೆ ಮಾಡದ ವಚನಭ್ರಷ್ಟ ಭಾರತೀಯ ಜನಾತಾಪಕ್ಷವು ದಿನಕ್ಕೆ ಸಾವಿರ ಸಲ ‘ಜೈ ಶ್ರೀರಾಮ್’ ಹೇಳುತ್ತಿದ್ದರೂ ಅದರ ಪಾಪ ಪರಿಹಾರವಾಗದೇನೊ! (ರಾಮನನ್ನು ಹುಡುಕಬೇಕಾಗಿದೆ!)

ಮಹಾದೇವ ಬರೆದ ವರದಿಗಳದ್ದೇ ಒಂದು ವಿಭಾಗವಿದೆ. (ಮುಖಾಮುಖಿ.) ಅವೆಲ್ಲವೂ ಸಮಕಾಲೀನ ದಲಿತರ ಪಾಡನ್ನು, ನಮ್ಮ ಸಮಾಜದ ವಸ್ತುಸ್ಥಿತಿಯನ್ನು ಮನ ಕಲಕುವಂತೆ ಚಿತ್ರಿಸುವ ನಿರುದ್ವಿಗ್ನ ಬರವಣಿಗೆಗಳು. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಒಂದು ವರದಿಯ ‘ದನಿ’ ಎಷ್ಟು ಮಹತ್ವದ್ದು ಎಂದು ತಿಳಿಯಲು ಈ ಬರಹಗಳನ್ನು ನೋಡಬೇಕು. ವಿಶೇಷವಾಗಿ ಹೊಳೆನರಸೀಪುರದ ದಲಿತರಿಗೂ ಸವರ್ಣೀಯರಿಗೂ ನಡೆದ ಘರ್ಷಣೆ ಕುರಿತ ‘ಕುರುಡು ಜಾತೀಯು ಕುಣಿಯೂತಲಿತ್ತೊ’. ಈ ವಿಭಾಗದಲ್ಲೇ ನನ್ನ ಮೆಚ್ಚಿನ ಬರಹಗಳಲ್ಲೊಂದಾದ ‘ಬ್ರಾಹ್ಮಣರ ಬಹಿರಂಗ ಸಭೆಯ ಅಂತರಂಗದಲಿ ಕೆಲಕಾಲ’ ಕೂಡ ಇದೆ.

ಆಗ ಕುವೆಂಪು ‘ಮೈಸೂರು ಮಿತ್ರ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕು ಎನ್ನುವ ಹಿಂದೂಧರ್ಮದಂಥ ಅನಿಷ್ಟ ಧರ್ಮ ಇನ್ನೊಂದಿಲ್ಲ’ ಎಂಬ ಹೇಳಿಕೆ ಕೊಟ್ಟಿದ್ದರು. ಅದೇ ಸಮಯದಲ್ಲಿ ನಾವುಗಳು ಹೊರತರುತ್ತಿದ್ದ ‘ಸುದ್ದಿ ಸಂಗಾತಿ’ ವಾರಪತ್ರಿಕೆಯಲ್ಲಿ (ಹಳೆಯ ಸಂದರ್ಶನದ ಮರುಮುದ್ರಣ) ‘ನಾನು ಹಿಂದೂ ಅಲ್ಲ’ ಎಂದು ಅದೇ ಧಾಟಿಯಲ್ಲಿ ಹೇಳಿದ್ದು ಅಚ್ಚಾಗಿತ್ತು. ಅವರ ಆ ಮಾತುಗಳಿಗೆ ಪ್ರತಿಭಟನೆಯಾಗಿ ಮೈಸೂರಿನಲ್ಲೊಂದು ಬ್ರಾಹ್ಮಣರ ಸಭೆ ನಡೆಯಿತು. ಆ ಸಭೆಗೆ ಶ್ರೀಕೃಷ್ಣ ಆಲನಹಳ್ಳಿಯವರೊಂದಿಗೆ ಹೋಗಿದ್ದ ದೇವನೂರ ಮಹಾದೇವ ಆಗ ‘ಸುದ್ದಿ ಸಂಗಾತಿ’ ಪತ್ರಿಕೆಗೆ ಬರೆದದ್ದು ಈ ಬರಹ. (ಮಹಾದೇವ ಕೂಡ ಈ ಪತ್ರಿಕೆಯ ಭಾಗವಾಗಿದ್ದರು). ಅವರ ತಮಾಷೆ, ವ್ಯಂಗ್ಯ, ಮಾನವೀಯ ಔದಾರ್ಯ ಹಾಗೂ ಕವಿಪ್ರಜ್ಞೆ- ಎಲ್ಲಕ್ಕೂ ಸಾಕ್ಷಿಯಂತಿದ್ದ ಈ ಬರಹ ಈಗಲೂ ಮಹಾದೇವರ ಅತ್ಯುತ್ತಮ ಬರವಣಿಗೆಯ ಮಾದರಿಗಳಲ್ಲೊಂದು:

ಮುಖ ನೋಡಿದರೇ ಬ್ರಾಹ್ಮಣರು ಎಂಬಂತಿದ್ದವರು, ಅದರಲ್ಲೂ ಹೆಚ್ಚಾಗಿ ಅರವತ್ತರ ಗಡಿ ದಾಟಿ ನೂರನ್ನೂ ತಲುಪುತ್ತಿದ್ದವರು ಒಬ್ಬೊಬ್ಬರಾಗಿ ಇಳಿಯುತ್ತಿದ್ದರು. ಆ ಅವರು ಆಕಾಶವೇ ತಲೆಯ ಮೇಲೆ ಬಿದ್ದಂತೆ ಸೊಂಟದ ಮೇಲೆ ತಮ್ಮೆರಡು ಕೈಯಿಟ್ಟುಕೊಂಡು ಅಥವಾ ಕೋಲೂರಿಕೊಂಡು ಅಥವಾ ಮಕ್ಕಳನ್ನು ಹಿಡಿದು, ಸಂಕಟವೇ ತಾವಾಗಿ ಕಾಲಲ್ಲಿ ಶಕ್ತಿ ಇಲ್ಲದಿದ್ದರೂ ಕಾಲೆಳೆದುಕೊಂಡು ಬರುತ್ತಿದ್ದ ಅವರನ್ನು ಕಂಡು ನಮಗೂ ಕರುಳು ಚುರುಕ್ ಅನ್ನುವಂತಾಗುತ್ತಿತ್ತು. ಮುಪ್ಪಾದ ಈ ಸಮೂಹದ ಸಂಕಟ ನೋಡಲಾಗದೆ, ಇದೇನು? ಶ್ರೀ ಮಧ್ವಾಚಾರ್ಯರು ಹೇಳುವ ಮೋಕ್ಷ ಕಾಣದ ನಿತ್ಯ ನಾರುಕಿಗಳು ನಮ್ಮೆದುರು ಸೇರುತ್ತಿದ್ದಾರೆಯೇ? ಎಂಬುವಷ್ಟು ದಾರುಣಮಯತೆ ಆ ಶ್ರೀ ಅಭಿನವ ಶಂಕರಮಠದೊಳಗೆ ತುಂಬಿ ತುಳುಕಾಡತೊಡಗಿತು….

ನಗು ನಗುತ್ತಾ ನಾನು ಒಂದು ಸಲ ಆ ಜನವನ್ನು ನೋಡಿದೆ. ಇತಿಹಾಸದ ಕ್ರೌರ್ಯಕ್ಕೆ ಸಿಕ್ಕಿ ಕಣ್ಣು ಕೈಕಾಲು ಕಳೆದುಕೊಂಡು ಕಣ್ಗಾಣದೆ ಹೆಳವರಾಗಿರುವ ಈ ನನ್ನ ಸಹಜೀವಿಗಳಿಗೆ ಏನು ಹೇಳಲಿ? ಹೇಗೆ ಹೇಳಲಿ?…

ಇತಿಹಾಸಕ್ಕೆ ತಮಾಷೆ ನೋಡುವ ಬಯಕೆ ಬಂದೇನೋ ಏನೋ ನನ್ನನ್ನು ಗುಡಿ ಒಳಕ್ಕೂ ಆತನನ್ನು ಗುಡಿ ಹೊರಕ್ಕೂ ಇರಿಸಿ, ಕಿಟಕಿ ಕಿಂಡಿ ಮೂಲಕ ನಮ್ಮಿಬ್ಬರ ಕೈ ಹಿಡಿಸಿ ನಗುತ್ತಿತ್ತು. ನನ್ನ ಕಣ್ಗಳ ಮುಂದೆ ಆ ಹುಡುಗನ ನಗು ತುಂಬಿತು. ಶ್ರೀ ಕುವೆಂಪು ಅವರ ‘ಹುಟ್ಟುತ್ತ ವಿಶ್ವಮಾನವ’ ಮೂಡಿತು. ಜಾತಿ ಮತಗಳ ವಿಷ ಜ್ವಾಲೆ ಇಂಥ ನಗುಗಳನ್ನೂ ಕ್ರೂರವಾಗಿ ಸುಡುವುದನ್ನು ಕಲ್ಪಿಸಿಕೊಳ್ಳಲೂ ಮನಸ್ಸಾಗದೆ ಬೇಯತೊಡಗಿದೆ….

ಇದನ್ನು ಓದಿದ ಮೇಲೆ ಮಹಾದೇವ ‘ರಸಾಯನಶಾಸ್ತ್ರದಲ್ಲಿ ಬರುವ ಪರ್ಯಾಪ್ತ ದ್ರಾವಣ (saturated solution) ದಂತೆ ಎಲ್ಲಾ ಜಾತಿಗಳು ತಂತಮ್ಮ ಕೊನೆ ಸ್ಥಿತಿ ತಲುಪಿ…’ (ಭಾರತ ಸಂವಿಧಾನಕ್ಕೆ ‘ಭೂತ’ಚೇಷ್ಟೆ) ಎಂಬ ಬುದ್ಧಿಪೂರ್ವಕ ಶೈಲಿಗೇಕೆ ಬಂದರು ಎಂದು ಬೇಸರವಾಗುತ್ತದೆ. ಯಾಕೆಂದರೆ ಎಷ್ಟೆಂದರೂ ಅವರು ಯಾವಾಗಲೂ ನೇರವಾಗಿ ಹೃದಯದಿಂದ ಬರೆದವರು.

ಇನ್ನೊಂದು ಉದಾಹರಣೆ ಇಲ್ಲಿ ಕೊಡಬೇಕು. ವಿಶೇಷಾಂಕವೊಂದರಲ್ಲಿ ಅವರು ಈ ಕೆಳಗಿನ ಸಾಲುಗಳನ್ನು ಬರೆದಾಗ ಆ ಸಂದರ್ಭದಲ್ಲಿ ಅದು ನಮ್ಮನ್ನು ಇಡಿಯಾಗಿ ಅಲ್ಲಾಡಿಸಿಬಿಟ್ಟಿತ್ತು:

‘ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತಿವೆ. ಅವುಗಳು ನನ್ನನ್ನು ತಿನ್ನುತ್ತವೆ…’ (ಮನವ ಕಾಡುತ್ತಿದೆ)

ಆದರೆ ಈಗ ಓದಿದರೆ ಇದು ತೀರಾ ಲೆಕ್ಕಾಚಾರದ pre-meditated ಬರವಣಿಗೆಯಾಗಿ ಕಾಣಿಸುತ್ತಿದೆ! ಹೀಗೇಕೆ? ಹಾಗೇ ಇವರ ಸಾಹಿತ್ಯಿಕ ಬರವಣಿಗೆಗಳ ‘ಮುತ್ತು ಮುಳುಗ…’ ವಿಭಾಗದಲ್ಲಿ ಖಾಸನೀಸರ ಕಥೆ ಬಗ್ಗೆ ಬರೆದದ್ದು. (ಖಾಸನೀಸರ ಮುಖೇನ ಸಣ್ಣಕಥೆ). ಅದೀಗ ಎಷ್ಟು ಸೀಮಿತವಾಗಿ, ಬಾಲಿಶವಾಗಿ ಕಾಣುವುದೆಂದರೆ, ಮಹಾದೇವ ಈಗ ಬರೆದಿದ್ದರೂ ಹೀಗೆಯೇ ಬರೆಯುತ್ತಿದ್ದರೇ ಎಂಬ ಪ್ರಶ್ನೆ ಏಳುತ್ತದೆ.

ಅಷ್ಟಾಗಿಯೂ,- ಇವರು ಲಂಕೇಶ್, ಅನಂತಮೂರ್ತಿ, ತೇಜಸ್ವಿಯವರನ್ನು ತ್ರಿಮೂರ್ತಿಗಳಿಗೆ ಹೋಲಿಸುವುದು ತುಸು ಪ್ರಯತ್ನಪೂರ್ವಕ ಅನಿಸಿದರೂ,- ಇವರ ಸಾಹಿತ್ಯಿಕ ಬರವಣಿಗೆಗಳ ಸೊಗಸೇ ಸೊಗಸು. ಲಂಕೇಶರ ಬಗ್ಗೆ ಬರೆದದ್ದನ್ನೇ ನೋಡಿ:

(ಲಂಕೇಶರ ಅದ್ಭುತ ಎನರ್ಜಿಯ ಬಗ್ಗೆ ಬರೆಯುತ್ತ) …ನನಗೆ ಅರ್ಥವಾಗದೇ ಇರುವುದು ಎಂದರೆ ಈ ಎನರ್ಜಿಯ ಚೈತನ್ಯ ಉಕ್ಕಿ ಹರಿಯಲು ಲಂಕೇಶ್ಗೆ ಒಂದು ಹುಲ್ಲುಕಡ್ಡಿಯಾದರೂ ವೈರಿಯಾಗಿ ಅವರ ಎದುರಿಗೆ ಬಂದು ತಲೆ ಕುಣಿಸಬೇಕಿತ್ತು! ತೊಡೆ ತಟ್ಟಬೇಕಿತ್ತು! ಇದು ಯಾಕೆ ಅಂತ ನನಗೆ ಈಗಲೂ ಅರ್ಥವಾಗ್ತಿಲ್ಲ…..

80ರ ದಶಕದಲ್ಲಿ ನಡೆದ ಮೀಸಲಾತಿ ಸೆಮಿನಾರ್ನಲ್ಲಿ ಲಂಕೇಶ್ ‘ದಲಿತರು ಈ ಸಮಾಜದ ಕಡೆ ನೋಡುತ್ತಿರುವದು ಪ್ರೀತಿಗಾಗಿ ಕೂಡ. ಇದಕ್ಕೆ ಒಂದು ಮುಗುಳ್ನಗೆ ಸಾಕು’ ಎಂದಿದ್ದರು. ಆ ಸೆಮಿನಾರ್ ವಿವರಗಳು, ಒತ್ತಾಯಗಳು ಎಲ್ಲವೂ ಇಂದು ಮರೆತುಹೋಗಿದೆ. ಆದರೆ ಅವರ ನುಡಿ ‘ಒಂದು ಮುಗುಳ್ನಗೆ ಸಾಕು’ ಎಂಬುದು ಲಂಕೇಶ್ ಮುಗುಳ್ನಗೆಯಾಗಿಯೂ ನಮ್ಮೊಡನೆ ಇದೆ. (ಲಂಕೇಶ್ ಎಂಬ ತಲ್ಲಣಿಸುವ ಜೀವ)

ಇದಕ್ಕಿಂತ ಮುಖ್ಯವಾದದ್ದು ‘ಕುಸುಮಬಾಲೆ ಹುಟ್ಟುವ ಮುನ್ನ’ ಎಂಬ ಬರಹ. ಅಲ್ಲಿ ಹಸಿವಿನಿಂದ ಸಾವಿನೆಡೆಗೆ ನವೆದುಹೋಗುವವನನ್ನು ಉಳಿಸಿಕೊಳ್ಳಲು ಅವನಿಗೊಂದು ಅನಿರೀಕ್ಷಿತ ಔತಣ ಏರ್ಪಡಿಸುವ ನೇಮ; ಜೋತಮ್ಮದೀರು ಸತ್ಯ ಹೇಳುವ ಪ್ರಸಂಗ; ಇದರ ಜೊತೆಗೆ- ಮಹಾದೇವ ಬರೆಯುವುದು-

ಕೆಲ ವರ್ಷಗಳ ಹಿಂದೆ ನನಗೆ ಗೊತ್ತಿದ್ದ ದಲಿತ ಸಂಘಟನೆಯಲ್ಲಿದ್ದ ಸ್ನೇಹಿತನೊಬ್ಬನ ಕೊಲೆಯಾಯಿತು. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ‘ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು’ ಎಂದಳು. ಆ ಕ್ಷಣ ನನಗೆ ‘ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೇ?’ ಅನ್ನಿಸಿ ಅದು ಒಳಗೇ ಬೆಳೆಯತೊಡಗಿತು.

ಒಂದು ದಿನ, ನನ್ನೊಳಗೆ ಈ ಮೂರೂ ಎಳೆಗಳೂ ಐಕ್ಯಗೊಂಡು ಕುಸುಮಬಾಲೆ ಮೂಡತೊಡಗಿತು.

‘ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೇ?’  ಎಂಬುದು ನನ್ನನ್ನು ಈಗಲೂ ಹಿಂಬಾಲಿಸಿ ಕಾಡುವ ತಲ್ಲಣಕಾರಿ ಪ್ರಶ್ನೆ.

ಇನ್ನು ಪ್ರೊ. ಎಲ್. ಬಸವರಾಜು ಬಗ್ಗೆ ಬರೆದಿದ್ದರಲ್ಲಿ-

ಅಲ್ಲಮನನ್ನು ನಟುವ ಮೂಲದವನೆಂದು ಹೇಳಿದ್ದು ಸಾಮಾನ್ಯ ಸಂಗತಿಯೇನಲ್ಲ. ಈ ಒಂದು ಕಾಣ್ಕೆ ವಚನಾಂದೋಲನವನ್ನು ನೋಡುವ ನೆಲೆಯನ್ನೇ ಬದಲಿಸಿಬಿಟ್ಟಿತು (‘ಮುತ್ತು ಮುಳುಗ’ ಪ್ರೊ. ಎಲ್. ಬಸವರಾಜು) ಎಂದು ಬೊಟ್ಟು ಮಾಡಿ ಹೇಳುತ್ತಾರೆ.

ಇವನ್ನೆಲ್ಲ ಓದುವಾಗ ಅವರು ಸರ್ವೋದಯ ಕರ್ನಾಟಕ ಪ್ರಯತ್ನದ ಬಗ್ಗೆ ಬರೆದದ್ದು ಅವ್ಯಾವಹಾರಿಕವಾದ ಒಣ ಆಶಯಗಳ ಹಗಲುಗನಸಿನಂತೆ ಕಂಡರೂ, ಅದನ್ನು ಅಲ್ಲಿಗೇ ಬಿಟ್ಟುಬಿಡೋಣ ಅನಿಸುತ್ತದೆ. ಮಹಾದೇವರೊಂದಿಗಿನ ನನ್ನ ಸ್ನೇಹ ದಶಕಗಳ ಕಾಲದ್ದು. ಸುದ್ದಿ ಸಂಗಾತಿ ಮಾಡುತ್ತಿದ್ದಾಗಲಂತೂ ನಿಕಟ ಒಡನಾಟವೇ. ನನ್ನ ಹಿರಿಯಣ್ಣನಂತಿದ್ದ ಅವರಿಂದ ಎಷ್ಟೋ ಬಾರಿ ಮಾರ್ಗದರ್ಶನ ಪಡೆದಿದ್ದೇನೆ. ಹಾಗೆಯೇ ಅವರ ವ್ಯಕ್ತಿತ್ವದ ಎತ್ತರ- ಅವರದೇ ಮಾತು ಬಳಸುವುದಾದರೆ- ನನ್ನ ಕಣ್ಣಳತೆಯಲ್ಲಿ ಎರಡೆರಡೇ ಗೇಣು ಕಮ್ಮಿಯಾಗುತ್ತ ಬಂದ ಪ್ರಸಂಗಗಳೂ ಹಲವಾರಿವೆ. ಅದನ್ನೆಲ್ಲ ಇಲ್ಲಿ ಚರ್ಚಿಸುವುದು ಬೇಡ.

ಹೋಗಲಿ, ಅವರ ತಮಾಷೆ, ಅದರೊಳಗೆ ಅಡಕವಾದ ವಿಷಣ್ಣತೆ, ನ್ಯಾಯ ಪ್ರಜ್ಞೆ- ಈ ಎಲ್ಲದರ ಬಗ್ಗೆ ಹೇಳಬೇಕೆನಿಸಿದರೂ…. ಅದೂ ಬೇಡ ಬಿಡಿ. ಕಡೆಗೂ ನನ್ನ ಮನಸ್ಸಿನಲ್ಲಿಳಿದು ಕಾಡುವ ಸಾಲುಗಳು ಇವು:

ಒಂದ್ಸಲ ನಮ್ಮ ಮನೆಯ ಕಕ್ಕಸ್ಸು ಕಮೋಡ್ ಕಟ್ಟಿಕೊಂಡಿತ್ತು. ಕಡ್ಡೀಲಿ ಅಲ್ಲಾಡಿಸಿ ಸರಿಮಾಡಲು ನೋಡಿದೆ. ಆಗಲಿಲ್ಲ. ಕೈಗೆ ಪ್ಲಾಸ್ಟಿಕ್ ಚೀಲ ಬಳಸಿ ರಿಪೇರಿ ಮಾಡಲು ನೋಡಿದೆ. ಜಗ್ಗಲಿಲ್ಲ. ಕೊನೆಗೆ ಸೋತು ‘ಅಯ್ಯೋ ನನ್ನ ಮಕ್ಕಳದಲ್ಲವೆ’ ಎಂಬ ಭಾವನೆ ತಂದುಕೊಂಡು ಕೈಯಲ್ಲೆ ಸರಿಮಾಡಿದೆ. ಈ ಭಾವನೆ ಬಾರದಿದ್ದರೆ ನಾನು ಕೈ ಹಾಕುತ್ತಿರಲಿಲ್ಲ. ಇಲ್ಲಿ ಸೋಲು ಮತ್ತು ಈ ಭಾವನೆ ಎರಡೂ ಇದೆ. ಮುಂದೆ ನನಗೆ ಆಶ್ಚರ್ಯ ಕಾದಿತ್ತು. ನನ್ನ ಪತ್ನಿ ಸುಮಿತ್ರಾ ತನ್ನ ಸಂಶೋಧನೆಗಾಗಿ ಒಬ್ಬ ಪೌರಕಾರ್ಮಿಕ ಹಿರಿಯರನ್ನು ‘ನಿಮಗೆ ಮ್ಯಾನ್ಹೋಲ್ ಡ್ರೈನೇಜ್ ಕೆಲ್ಸ ಮಾಡಲು ಕಷ್ಟಕಹಿ ಅನ್ನಿಸುವುದಿಲ್ಲವೆ’ ಅಂತ ಪ್ರಶ್ನಿಸಿದ್ದಕ್ಕೆ ‘ಯಾಕ್ರಮ್ಮಾ ಕಷ್ಟಕಹಿ. ನನ್ನ ಮಕ್ಕಳದು ಅಂತ ಅಂದ್ಕಂಡ್ರಾಯ್ತು’ ಅಂದರಂತೆ. ಅಸಹಾಯಕತೆ ಸೋಲಿನ ನಡುವೆಯೂ ಈ ದೊಡ್ಡ ಮನಸ್ಸೂ ಇಲ್ಲದಿದ್ದರೆ ಈ ಕೆಲ್ಸ ಮಾಡುವುದು ಕಷ್ಟ. ಆದರೆ ಇಂಥ ದೊಡ್ಡ ಮನಸ್ಸನ್ನೆ ಸಮಾಜ ಕೊಳಕು ಅಂತ ಗಣಿಸಿದೆ. ಇದು ಸಮಾಜವೇ ಕೊಳಕಾಗಿರುವುದರ ಲಕ್ಷಣ. ಅಷ್ಟೆ. (ಕೊಳಕು ಎಲ್ಲಿದೆ?)….

ಮನುಷ್ಯರನ್ನು ಮನುಷ್ಯರಾಗಿ ಮಾಡುವ ವ್ರತ ತೊಟ್ಟವನು, ಇದಕ್ಕಿಂತ ಬೇರೆ ಇನ್ನೇನಾದರೂ ಕೊಡುವ ಅಗತ್ಯವಿದೆಯೇ?

‍ಲೇಖಕರು avadhi

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

7 ಪ್ರತಿಕ್ರಿಯೆಗಳು

  1. ಪರಮೇಶ್ವರ ಗುರುಸ್ವಾಮಿ

    ದೇವನೂರು ಮಹದೇವರು ನೆನಪಿಗೆ ಬಂದಾಗಲೆಲ್ಲ ನನ್ನಲ್ಲಿ ಒಂದು ವಾಕ್ಯ ಮೂಡುತ್ತದೆ. ಇದು ಬಹಳ ವರ್ಷಗಳಿಂದ ನನ್ನಲ್ಲಿ ಮೂಡಿ ಬಂದಿರುವ ವಿವರಣಾ ವಾಕ್ಯ : ಶಿವನಂಥ ತಾಯಿ, ಕೃಷ್ಣನಂಥ ಜ್ಞಾನಿ.

    ಪ್ರತಿಕ್ರಿಯೆ
  2. parashuram boner

    ಎನ್‌.ಎಸ್‌.ಶಂಕರ್‌ ಅವರ ದೇವನೂರು ಮಹಾದೇವ ಅವರ ಕುರಿತು ಲೇಖನ ಓದಿದಾಗ ಹಳೆಯ ಘಟನೆಯೊಂದು ನೆನಪಿಗೆ ಬಂತು. ಅದೇ ತಾನೇ ಪತ್ರಿಕೋದ್ಯಮ ಕೋಸ್‌F ಮುಗಿಸಿದ್ದೆ. ಆಕಸ್ಮಿಕವಾಗಿ ಪರಿಚಯವಾದ ಇಂದೂಧರ ಹೊನ್ನಾಪುರ ಸರ್‌ ಕೆಲಸ ಮಾಡುತ್ತಿದ್ದೆ. ಅಂದರೆ ಅವರ ಸಂಪಾಧಕತ್ವದಲ್ಲಿ ಬರುತ್ತಿದ್ದ ಸಂವಾದ ಪತ್ರಿಕೆಯಲ್ಲಿ. ಅಕಸ್ಮಿಕವಾಗಿ ನಾನು ಗಾಂಧೀಜಿ ಕುರಿತು ಅಸಹನೆಯಿಂದ ಮಾತನಾಡಿದೆ. ತಕ್ಷಣ ಇಂದೂಧರ ಸರ್‌, ರೀ ಪರಶುರಾಮ ಗಾಂಧೀಜಿ ಅಂದರೆ ಏನು ಅಂತ ತಿಳಿದುಕೊಂಡಿದ್ದೀರಿ. ಗಾಂಧೀಜಿ ಈ ದೇಶಕ್ಕೆ ಸಿಕ್ಕ ದೊಡ್ಡ ಕೊಡುಗೆ ನೀವು ಏನಂತ ತಿಳಿದುಕೊಂಡಿದ್ದೀರಿ ಎಂದರು. ನನಗೆ ಈಗ ಅರ್ಥವಾಯಿತು. ಅವರು ಗಾಂಧಿ ಪರವಾಗಿ ಅಷ್ಟು ಗಟ್ಟಿಯಾಗಿ ಮಾತನಾಡಲು ಸದಾಕಾಲ ಅವರ ಒಡನಾಟದಲ್ಲಿರುವ ದೇವನೂರು ಮಹಾದೇವರೇ ಕಾರಣ ಎಂದು. (ಹಾಗಂತ ನನ್ನ ಊಹೆ) (ಆ ಕಾಲದಲ್ಲಿ ನಾನು ಇದ್ದಿದ್ದರೆ ಯಾರ ಕಡೆ ಇರುತ್ತಿದ್ದೆ ಎಂದು ನನ್ನ ತಲೆ ತಿಂದಿತು. ಅದೆಷ್ಟೋ ಯೋಚಿಸಿದರೂ ನಿಲುಕದೆ ತಳಮಳಿಸಿದೆ. ನಿದ್ದೆಯಲ್ಲೂ ಈ ಚಿಂತೆ ನನ್ನನ್ನು ಬಿಡುತ್ತಿರಲಿಲ್ಲ. ಎದ್ದಾಗ, ನಾನು ಗಾಂಧಿ ಜೊತೆ ಇದ್ದೂ- ಅಂಬೇಡ್ಕರರನ್ನು ಅರ್ಥ ಮಾಡಿಕೊಳ್ಳಬೇಕೆಂದು, ಗಾಂಧಿಯೊಡನೆ ಅಂಬೇಡ್ಕರರ ಪರವಾಗಿ ವಾದಿಸುತ್ತಿದ್ದೆನೇನೋ ಎನಿಸಿತು…) ಆದರೆ, ದೇವನೂರು ಮಹಾದೇವರನ್ನುಈಗಲೂ ನೋಡಲಾಗಿಲ್ಲ ಎನ್ನುವ ಕೊರಗು ನನ್ನನ್ನು ಕಾಡುತ್ತಿದ್ದೆ.
    -ಪರಶುರಾಮ ಬೋನೇರ, ಗಂಗಾವತಿ

    ಪ್ರತಿಕ್ರಿಯೆ
  3. Maluru Venkataswamy

    “ಎದೆಗೆ ಬಿದ್ದ ಅಕ್ಷರ” ಓದಿದ ಯಾರಾದರೂ ಮೊದಲಿನಂತೆ ಇರುವುದಿಲ್ಲ. ಅವರ ಅರಿವಿನ ಪರಿಧಿ, ಮನಸ್ಸಿನ ಪರಿಧಿ ವಿಸ್ತರಿಸುತ್ತದೆ. ಶಂಕರರಿಗೂ ಹಾಗೇ ಆಗಿರುತ್ತದೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ parashuram bonerCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: