ತುಂಗಾನದಿಯ ಜಾಡಿನಲ್ಲಿ ತೇಜಸ್ವಿ, ಲಂಕೇಶ್ ಜೊತೆಗೆ

 

ಅಗ್ರಹಾರ ಕೃಷ್ಣಮೂರ್ತಿ

ಪೂರ್ಣಚಂದ್ರ ತೇಜಸ್ವಿ ಕೋಕಿಲೋದಯ ಚೈತ್ರ ಮುಂತಾಗಿ ತಮ್ಮ ಮಕ್ಕಳಿಗೆ ಕಾವ್ಯಾತ್ಮಕ ಹೆಸರುಗಳನ್ನಿಡುತ್ತಿದ್ದ ಕುವೆಂಪು ಅವರ ಬಗ್ಗೆ ಕೆಲವು ಪ್ರಭೃತಿಗಳು ಓಹೊಹೊ ಅನ್ನುತ್ತಿದ್ದುದನ್ನು ನಾನೇ ಕೇಳಿಸಿಕೊಳ್ಳುತ್ತಿದ್ದೆ. ಅಂದರೆ, ಇನ್ನು ನನಗಿಂತ ಹಿರಿಯರ ಬಗ್ಗೆ ಹೇಳಲೇಬೇಕಾಗಿಲ್ಲ. ಅಸಾಮಾನ್ಯ ಅಪ್ಪನಿಂದ ತೇಜಸ್ವಿಯೆಂಬ ಹೆಸರನ್ನಷ್ಟೇ ಪಡೆದ ಪೂಚಂತೇ ಸ್ವಯಂ ತೇಜಸ್ವಿನಿಂದ ಪ್ರಜ್ವಲಿಸಿದ ತಾರೆ. ಅವರು ಅಪರೂಪಕ್ಕೊಮ್ಮೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾಗ ನೆರೆಯುತ್ತಿದ್ದ ಅಭಿಮಾನಿಗಳ ಹಿಂಡನ್ನು ಕಂಡವರಿಗೆ ತಾರೆಯೆಂಬ ಶಬ್ಧದ ಅರ್ಥ ನಿಚ್ಚಳವಾಗಿ ಹೊಳೆಯುತ್ತದೆ. ಆನರಿಗೆ ಬೇಕೆಂದಾಗ ಪುಗಸಟ್ಟೆ ಸಿಗುವ ಸಾಹಿತಿ ವರ್ಗಕ್ಕೆ ಸೇರದ, ಮೂಡಿಗೆರೆಯಲ್ಲಿ ಅಡಗಿದ್ದ ಈ ಲೇಖಕ ಕನ್ನಡಿಗರ ಗಗನ ಕುಸುಮದಂತಿದ್ದರು. ಮೈಸೂರಿನ ಕೆ. ರಾಮದಾಸ್, ಶ್ರೀರಾಮ್, ಕಡಿದಾಳ್ ಶಾಮಣ್ಣ, ಕೆಲಕಾಲ ಲಂಕೇಶ್, ಕೆಲಮಟ್ಟಿಗೆ ಬಿ.ಎಲ್.ಶಂಕರ್ ಇಂಥ ಕೆಲವೇ ವ್ಯಕ್ತಿಗಳು ಈ ಗಗನಕುಸುಮವನ್ನು ಯಾವಾಗಲೂ ತಮ್ಮ ಕೈಯಲ್ಲೇ ಇಟ್ಟುಕೊಂಡಿರುತ್ತಾರೆಂದು ಎಲ್ಲರಿಗೂ ಈರ್ಷೆ ಉಂಟಾಗುತ್ತಿತ್ತು.

13GFP__LANKESH_2338892g‘ಯಾಕಳುವೆ ತೇಜಸ್ವೀ’ ಬಗ್ಗೆ ನಮಗೆ ಸ್ಕೂಲಿನಲ್ಲಿ ಪಾಠ ಳುತ್ತಿದ್ದ ಮೇಷ್ಟ್ರು ನಾರಾಯಸ್ವಾಮಿ ಯಾವುದೋ ವಿಚಾರ ಸಂಕಿರಣಕ್ಕೆ ತೇಜಸ್ವಿ ಬಂದಿದ್ದಾರೆಂದು ಗೊತ್ತಾಗಿ ಅವರನ್ನು ನೋಡಲು ಏದುಸಿರು ಬಿಡುತ್ತಾ ಓಡಿ ಬಂದುದನ್ನು ಕಂಡಿದ್ದೇನೆ. ಆ ವೇಳೆಗೆ ನಾವೆಲ್ಲ ಅಲ್ಲಿ ಸೇರಿದ್ದೆವು. ಅವರು ಬಂದ ಬಂದವರೆ ಬೀಚನಹಳ್ಳಿಯನ್ನು ಕರೆದು ‘ಲೇ ಗೌಡ. ತೇಜಸ್ವಿ ಬಂದೌನಂತೆ ಎಲ್ಲವೌನ್ಲ ತೇಜಸ್ವಿ ಎಲ್ಲವೌನ್ಲ’ ಎಂದು ಪಿಸುಗುಡತ್ತಾ ಪರದಾಡುತ್ತಿದ್ದುದು ನನ್ನ ಕಣ್ಣಿಗೆ ಕಟ್ಟಿದಂತಿದೆ. ‘ನೋಡಿ ಸಾರ್ ಅಲ್ಲಿ ನಿಂತಿದ್ದಾರೆ’ ಎಂದು ನಾವು ತೋರಿಸಿದಾಗ ಅವರನ್ನು ನೋಡಿ, ‘ಆ ಖಾಕಿ ಪ್ಯಾಂಟೂ ಒಳ್ಳೆ ಡ್ರೈವರ್ ಇದ್ದಂಗೌನಲ್ಲೋ’ ಎಂದು ಅಚ್ಚರಿಯನ್ನೂ, ನಿರಾಶೆಯನನೂ ಹೊತ್ತು ಅವರ ಮುಖವನ್ನೇ ತದೆಕಚಿತ್ತರಾಗಿ ನೋಡುತ್ತಾ ನಿಂತಿದ್ದ ಮೇಷ್ಟ್ರು ಮುಖ ನನಗೆ ಈಗಲೂ ನೆನಪಿದೆ. ಅವರ ಮಾತನ್ನು ಸತ್ಯ ಮಾಡುವೆನೆಂಬಂತೆ ಕೆಲ ಕ್ಷಣಗಳಲ್ಲೇ ಸೆನೆಟ್ ಹಾಲಿನಿಂದ ಹೊರಬಂದು ತಮ್ಮ ಎಣ್ಣೆನೀರು ಕಂಡಿರದ, ಧೂಳು ಅಡರಿದ್ದ ಜೀಪೇರಿ ಡ್ರೈವ್ ಮಾಡುತ್ತಾ ಹೊರಟೇ ಬಿಟ್ಟರು ತೇಜಸ್ವಿ. ವಿಚಾರ ಸಂಕಿರಣ ತನ್ನ ಪಾಡಿಗೆ ತಾನು ನಡೆಯುತ್ತಿತ್ತು. ಅವರು ಅವತ್ತು ನವ್ಯದ ವಾಹನದಿಂದ ಇಳಿದು ತಮ್ಮ ಭಿನ್ನ ಶೈಲಿಯ ಕಡೆಗೆ ಡ್ರೈವ್ ಮಾಡುತ್ತಾ ಹೋದಂತೆ ಗೋಚರಿಸುತ್ತಿತ್ತು.

ಲಂಕೇಶರ ಜೊತೆಗೆ ಅವರ ಸಂಬಂಧ ಅತಿಮಧುರವಾಗಿದ್ದ ದಿನಗಳಲ್ಲಿ, ಅವರು ಬೆಂಗಳೂರಿಗೆ ಬಂದಾಗ, ಲಂಕೇಶ್ ಫೋನ್ ಮಾಡಿ, ‘ಸಾಯಂಕಾಲ ತೇಜಸ್ವಿ ಬರ್ತಾರೆ ಬಾ’ ಅಂದು ಕರೆಯುತ್ತಿದ್ದರು. ನಮ್ಮ ಸಾಂಸ್ಕೃತಿಕ ಜಗತ್ತಿನ ಇಬ್ಬರು ಮಹಾ ಪ್ರತಿಭಾ ಸಂಪನ್ನರ ಜೊತೆಗೆ ಕಳೆದ ಆ ಸಂಜೆಗಳು ನನ್ನ ಸ್ಮರಣೀಯ ಗಳಿಗೆಗಳು.

ಒಂದು ಸಲ ಲಂಕೇಶರ ಮಗಳು ಕವಿತಾ, ಆಕೆಯ ಗೆಳತಿ, ನಾನು ಮತ್ತು ಲಂಕೇಶ್ ಮೂಡಿಗೆರೆಗೆ ಹೊರಟೆವು. ಲಂಕೇಶ್ ನಮ್ಮ ಡ್ರೈವರ್! ಆಗ ಅವರ ಹತ್ತಿರ ಡಾಲ್ಫಿನ್ ಎಂಬ ಪುಟಾಣಿ ಕಾರಿತ್ತು. ದಾರಿಯುದ್ದಕ್ಕೂ ಲಂಕೇಶರ ಪಾಠಗಳು, ಸೆಡವುಗಳು ಇತ್ಯಾದಿ ಕುರಿತು ಬರೆಯಲು ಇದು ಸಮಯವಲ್ಲ. ನಾವು ಮೂಡಿಗೆರೆ ತಲುಪಿದಾಗ ಸಂಜೆ ಕಳೆದಿತ್ತು. ತೇಜಸ್ವಿಯವರ ಮನೆಯ ಮುಂದಿನ ಪುಟ್ಟ ಅಂಗಳದಲ್ಲೇ ಕುಳಿತು ಮಾತಾಡಿದೆವು. ಅವರ ಅತಿಥಿ ಕೊಠಡಿಗಳಲ್ಲಿ ಮಲಗುವ ವ್ಯವಸ್ಥೆ ಊಟ, ಮತ್ತೆ ಮಾತು. ತೇಜಸ್ವಿ ಸಿಗರೇಟ್ ಸೇದದೇ ಕುಳಿತಿದ್ದ ನನ್ನ ಬಳಿ ನಿಂತು ‘ಇಲ್ಲಿ ಯಾರಾರ ಸಿಗರೇಟ್ ಸೇದಿದೆ ನೋಡ್ಕಂಡಿರು ಮತ್ತೆ.’ ಎಂದು ನನ್ನೆಡೆಗೆ ಬೆರಳು ತೋರಿಸುತ್ತಾ ನಿಂತರು. ನಾನು ಲಂಕೇಶ್ ಕಡೆಗೆ ನೋಡಿದೆ. ಅವರು ನಗುತ್ತಾ ತಮ್ಮದೇ ಶೈಲಿಯಲ್ಲಿ ಸಿಗರೇಟ್ ಎಳೆಯುತ್ತಿದ್ದರು. ಮತ್ತೆ ಸ್ವಲ್ಪ ಹೊತ್ತು ಹರಟೆ, ಮಾತು. ಮಾರನೆ ಬೆಳಿಗ್ಗೆ ತೇಜಸ್ವಿ ನಮಗೆ ಕಾಡು ತೋರಿಸಲು ಕರೆದೊಯ್ಯುವೆನೆಂದು ಹೇಳಿ ಮಲಗಲು ಹೋದರು.

ಮುಂದಿನ ಅಕ್ಕಿರೊಟ್ಟಿ, ಚಟ್ನಿ ಮತ್ತು ಜೇನುತುಪ್ಪದ ಬ್ರೇಕ್ಫಾಸ್ಟ್ ಚಟ್ನಿ ಜೊತೆಗೆ ಜೇನುತುಪ್ಪ ಕಲೆಸಿ ತಿನ್ನುವುದನ್ನು ವರ್ಣಿಸುತ್ತಿದ್ದರುತೇಜಸ್ವಿ . ಮನೆಯ ಮುಂದಿನ ಯಾವುದೋ ಮರದ ಮೇಲಿನ ಹಕ್ಕಿ ಮನುಷ್ಯರಂತೆ ವಿಧವಿಧವಾಗಿ ವಿಷಲ್ ಹಾಕುತ್ತಿದ್ದುದನ್ನು ಅವರು ನಮ್ಮ ಗಮನಕ್ಕೆ ತರುವವರೆಗೂ ನಾವು ಅದು ಯಾರೋ ಮನುಷ್ಯರ ಶಿಳ್ಳೆಯೇ ಇರಬಹುದೆಂದುಕೊಂಡಿದ್ದೆವು. ನಾವು ಕಾಡಿಗೆ ಹೊರಟಾಗ ಕವಿತಾ ಮತ್ತು ಅವಳ ಗೆಳತಿ ಬರುವುದಿಲ್ಲವೆಂದು ಮನೆಯಲ್ಲೇ ಉಳಿದರು. ನಾವು ಮೂವರು ಮತ್ತು ಡಾಲ್ಫಿನ್ ಕಾರು. ಡ್ರೈವರ್ ಲಂಕೇಶ್. ದಟ್ಟ ಕಾಡಿನ ದಾರಿಯಲ್ಲಿ.. ಸಾಹಿತ್ಯ ಸಮಾಜವಾದ, ಕಳ್ಳರು, ಸುಳ್ಳರು, ನೀಚರು ಎಲ್ಲದರ ಚರ್ಚೆಯ ಜೊತೆಗೆ ನೇಚರ್!

ದಾರಿಯುದ್ದಕ್ಕೂ ಅಲ್ಲಲ್ಲಿ ಗುಂಪುಗುಂಪಾಗಿ ರೆಕ್ಕೆ ಹರಡಿ ಕುಳಿತಿದ್ದ ನೂರಾರು ಚಿಟ್ಟೆಗಳನ್ನು ತೇಜಸ್ವಿ ವರ್ಣಿಸಿದರು. ಕಾಡಿನ ದಾರಿ ಬಿಟ್ಟು ಪಕ್ಕದ ಕಣಿವೆಗೆ ನಿಧಾನವಾಗಿ ಕಾರು ಕೆಳಗಿಳಿಸಲು ಹೇಳಿದರು. ಸ್ವಲ್ಪ ಮುಂದೆ ಹೋದಂತೆ ಎದುರಿಗೆ ಮರಗಳ ನಡುವೆ ತೆರೆದುಕೊಂಡ ಬೆಳಕಿನಲ್ಲಿ ತುಂಗಾ ನದಿಯ ದಂಡೆ ಕಾಣಿಸಿತು. ಎರಡೂ ದಡದಲ್ಲಿ ಬಂಡೆಗಲ್ಲುಗಳು, ಮರಳಿನ ವಿಸ್ತಾರ ಮತ್ತು ನದಿಯ ತೀವ್ರ ಹರಿವು ಕಣ್ಣಿಗೆ ಬಿತ್ತು. ಪ್ರಶಸ್ತವಾದ ಒಂದು ಸ್ಥಳ ಗೊತ್ತು ಮಾಡಿ ತಾವು ಮೊದಲೇ ಕಾರಿನಲ್ಲಿಟ್ಟಿದ್ದ ದೊಡ್ಡ ಜಮಖಾನೆ ಹಾಸಿದರು. ಮೂವರೂ ಮೈ ಚೆಲ್ಲಿದೆವು. ನದಿಯ ನಿನಾದ, ಕಾಡಿನ ಶಬ್ಧ ಎಲ್ಲವೂ ಮೌನಕ್ಕೆ ಮಿಡಿಯುತ್ತಿದ್ದ ಹಿನ್ನಲೆ ಸಂಗೀತದಂತಿತ್ತು. ನಾವು ಎಷ್ಟೋ ಹೊತ್ತು ಮಾತಾಡದೆ ಕುಳಿತಿದ್ದೆವು. ಆಗಾಗ ನಾನು ಲಂಕೇಶರ ಮುಖವನ್ನು, ಅವರು ನನ್ನ ಮುಖವನ್ನು ನೋಡಿ ಮರುಕ್ಷಣ ಕಾಡಿನ ಕಡೆಗೂ, ನದಿಯ ಕಡೆಗೂ, ನದಿಯಾಚೆಗಿನ ಕಾಡಿನ ಕಡೆಗೂ ವಿಸ್ಮಿತರಾಗಿ ನೋಡುತ್ತಿದ್ದೆವು. ತೇಜಸ್ವಿ ನಮ್ಮಿಬ್ಬರನ್ನೂ ಆ ಪರಿಸರದ ಒಂದು ಅಂಗವನ್ನಾಗಿ ಮಾಡಿ ಕೂರಿಸಿಬಿಟ್ಟಿದ್ದರು.

lankesh3ಇಂತಹ ಎಲ್ಲ ಏಕಾನತೆಯನ್ನೂ ಮುರಿಯಬಲ್ಲವರು ಲಂಕೇಶರೇ ತಾನೆ! ಅವರು ಮೇಲೆದ್ದು ನಿಂತರು. ನಿಧನವಾಗಿ ಹೆಜ್ಜೆ ಹಾಕುತ್ತಾ ಕಾರಿನ ಕಡೆ ಹೋದರು. ಡಿಕ್ಕಿಯಲ್ಲಿಟ್ಟಿದ್ದ ಚೀಲವೊಂದನ್ನು ತಂದು ನನ್ನ ಮುಂದಿಟ್ಟರು. ಅದರಲ್ಲಿ ಗ್ಲಾಸುಗಳು ಮತ್ತು ಎಂಥದೋ ಇಂಪೋರ್ಟೆಡ್ ವಿಸ್ಕಿ. ತೇಜಸ್ವಿ ‘ಅಯ್ಯೋ ನಿಮ್ಮ ಮನೆ ಹಾಳಾಗ ಎಂಥದ್ದ್ರೋ ಮಾರಾಯ್ರ’ ಅಂದರು. ಲಂಕೇಶ್ ತುಂಟನಗೆ ಬೀರುತ್ತಾ ‘ಇಂಪೋರ್ಟೆಡ್ ‘ ಅಂದರು. ಆಗ ಇಂಪೋರ್ಟೆಡ್ ಆದ ಎಲ್ಲವಕ್ಕೂ ಅಂಥಾ ಒಂದು ಮರ್ಯಾದೆ ಇತ್ತು. ತೇಜಸ್ವಿ, ‘ಏ ಅಗ್ರಾರ, ನನಗೆ ಸ್ಮಾಲ್ಗಿಂತ ಕಡಿಮೆ’ ಅಂದರು. ರಮಣೀಯವಾದ ತುಂಗಾದಡದಲ್ಲಿ ಕುಳಿತಿದ್ದ ನಮ್ಮ ಗಂಟಲಲ್ಲಿ ಯಾವುದೋ ದೇಶದ ಸ್ಕಾಚ್ ಇಳಿಯುತ್ತಿತ್ತು. ತೇಜಸ್ವಿ ತಮ್ಮ ಸ್ಮಾಲ್ ಮುಗಿಸುವಷ್ಟರಲ್ಲಿ ಹುರುಪುಗೊಂಡರು. ‘ಬಾ ಅಗ್ರಾರ, ಇವರು ಇಲ್ಲಿ ಕೂತಿರಲಿ’ ಎಂದು ತಮ್ಮ ಜೊತೆಗೆ ತಂದಿದ್ದ ವಿದೇಶಿ ಮೀನಿನ ಗಾಳ ತೆಗೆದರು. ತೇಜಸ್ವಿಯವರ ಈ ಇತಿಹಾಸ ಪ್ರಸಿದ್ಧ ಹವ್ಯಾಸವನ್ನು ಇನ್ ಆಕ್ಷನ್ ನೋಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಹುರುಪುಗೊಂಡೆ.

ಅವರು ಪ್ಯಾಂಟನ್ನು ಮಂಡಿವರೆಗೆ ಮಡಿಸಿಕೊಂಡರು. ನಾನು ಅನುಕರಿಸಿದೆ. ‘ಚಪ್ಪಲಿ ಬೇಡ ಮರಳಿನಲ್ಲಿ ನಡೆಯಲು ಆಗುವುದಿಲ್ಲ’ ಅಂದರು. ಸರಿ ನಾವು ಕುಳಿತಿದ್ದ ಸ್ಥಳದಿಂದ ಸ್ವಲ್ಪ ಮುಂದೆ ಹೋಗಿ ಕೆಳಕ್ಕೆ ಇಳಿದರು. ನಾನು ಹಿಂಬಾಲಿಸಿದೆ. ನೀರಿನ ಬಳಿಗೆ ಸಾಗುವವರೆಗೆ ಕೈಲಿದ್ದ ಗಾಳವನ್ನು ಸಿದ್ಧಗೊಳಿಸಿಕೊಂಡರು. ದಡಕ್ಕೆ ಬಂದ ನಂತರ ಗಾಳವನ್ನು ನೀರಿಗೆ ಒಗೆದರು. ತಕ್ಷಣ ಸುತ್ತುತ್ತಿದ್ದರು. ಬಿಸಿಲಿಗೆ ಕಾದಿದ್ದ ಮರಳು ನನ್ನ ಪಾದಗಳನ್ನು ಸುಡುತ್ತಿತ್ತು. ಅವರು ಮರಳಿನ ದಂಡೆಯಲ್ಲಿ ಓಡುತ್ತಾ ಗಾಳ ಬೀಸುತ್ತಾ ಕೈಯಲ್ಲಿ ಸುತ್ತುತ್ತಾ, ಏನೇನೋ ಗುನುಗುತ್ತಾ ಓಡುತ್ತಿದ್ದರು. ಮೀನು ಹಿಡಿಯುವುದೆಂದರೆ, ತಂಪಾದ ಒಂದು ಜಾಗದಲ್ಲಿ ಕೂತು ನೀರಿಗೆ ಗಾಳ ಹಾಕಿ ದಪ್ಪಂತ ಎಳೆದರೆ ಮೀನು ಸಿಕ್ಕುದೆಂಬ ಕಲ್ಪನೆಯಲ್ಲಿದ್ದ ನನಗೆ ಇವರ ಹಿಂದೆ ಓಡುತ್ತಾ ಮರಳಿನ ಬಿಸಿ ತಡೆಯಲಾರದೆ ನದಿ ಬಳಿಗೆ ಹೋಗಿ ನೀರಲ್ಲಿ ಕಾಲು ತಣಿಸಿ ಮತ್ತೆ ಇವರ ಹಿಂದೆ ಓಡುತ್ತಾ, ನಡುನಡುವೆ ಬಂಡೆಗಲ್ಲು ಸಿಕ್ಕರೆ ಅವುಗಳ ಮೇಲೆ ಪಾದಗಳನ್ನು ಚುರುಗುಟ್ಟಿಸಿಕೊಂಡು ಮತ್ತೆ ನೀರಿಗೆ ಕಾಲುಬಿಟ್ಟು ಓಡುತ್ತಿರುವಂತೆಯೇ ಕೇವಲ ಏಳೆಂಟು ನಿಮಿಷಗಳಲ್ಲಿ ‘ಸಾರ್ ನಾನು ವಾಪಸ್ ಹೋಗುತ್ತೀನಿ’ ಎಂದು ಕೂಗಿ ಹೇಳುತ್ತಾ ಹಿಂತಿರುಗಿದೆ.

ಅವರು ‘ಹೇ, ಏ, ಹೇತಲಾಂಡಿಕಣ್ರೀ’ ಎಂದು ಜೋರಾಗಿ ನಕ್ಕದ್ದು ಕೇಳಿಸಿತು. ನಾನು ಕಷ್ಟಪಟ್ಟು ಆ ಸುಡು ಮರಳಲ್ಲಿ ಕುಣಿಯುತ್ತಾ ಹಿಂತಿರುಗಿ ಬಂದು ಕುಳಿತೆ. ಲಂಕೇಶ್ ದೂರದಲ್ಲಿ ನದಿದಡದಲ್ಲಿ ಗಾಳ ಹಿಡಿದು ಓಡುತ್ತಿದ್ದ ತೇಜಸ್ವಿಯವರನ್ನು ನೋಡುತ್ತಾ ‘ಸೀಸೀ.ಹಿಂ ಕ್ರೇಜಿ ಫೆಲೋ’ ಎಂದು ತಮಗೆ ತಾವೇ ಮಾತಾಡಿಕೊಳ್ಳುತ್ತಿದ್ದರು. ನಾನು ವಿಸ್ಕಿಯನ್ನು ಗಂಟಲಿನ ಮೂಲಕ ಇಳೀಸಿಕೊಂಡು ನನ್ನ ಪಾದಗಳನ್ನು ತಂಪು ಮಾಡಿಕೊಳ್ಳತೊಡಗಿದೆ.

ಸಂಜೆಯಾಗತೊಡಗಿತು. ಎಷ್ಟೋ ಹೊತ್ತಿನವರೆಗೆ ತೇಜಸ್ವಿ ಕಣ್ಮರೆಯಾದರು. ಕಾಡಿನಲ್ಲಿ ಸಂಜೆಗೆ ಇನ್ನೊಂದು ಬಗೆಯ ದನಿ ಕೇಳಿಸಿತು. ಈಗ ಅವರು ತಮ್ಮ ಕೈ ಚೀಲದ ತುಂಬಾ ಒಂದು ಬುಟ್ಟಿ ಮೀನು ಹೊತ್ತುಕೊಂಡೇ ಬರುವರೆಂದು ನಿರೀಕ್ಷೆಯಲ್ಲಿದ್ದ ನಮಗೆ ಅವರು ‘ದರಿದ್ರದ್ದು ಕಣ್ರೀ’ ಎನ್ನುತ್ತಾ ಬರಿಗೈಲಿ ಬಂದು ಜಮಖಾನ ಮೇಲೆ ಕುಳೀತದ್ದು ಅವರಿಗಿಂತಾ ಹೆಚ್ಚು ನಿರಾಶೆಯುಂಟುಮಾಡಿತು. ‘ಕತ್ತಲಾಯ್ತು ನಡೀರಿ ಹೋಗೋಣ. ಅಲ್ಲಾ ಕಣ್ರೀ ನೀವು ಬೆಂಗಳೂರಿಂದ ಬಂದಿದ್ದೀರಿ ನನ್ನ ಪ್ರತಾಪ ತೋರ್ಸಣಾ ಅಂದ್ರೆ ಒಂದಾರ ಸಿಕ್ಕಬೇಡ್ವಾ ದರಿದ್ರ’ ಎಂದು ನಗತೊಡಗಿದರು.

ಈ ಕತ್ತಲಲ್ಲಿ ನಿಮಗೆ ದಾರಿ ಗೊತ್ತಾಗಲ್ಲ ನಾನೇ ಗಾಡಿ ಓಡಿಸ್ತೀನಿ’ ಎಂದು ತೇಜಸ್ವಿ ಎಷ್ಟು ಹೇಳಿದರೂ ಲಂಕೇಶ್ ಕೇಳಲಿಲ್ಲ. ಎರಡೇ ನಿಮಿಷಕ್ಕೆ ಭೂಮಿಯಲ್ಲಿ ಹುದುಗಿ ನಿಂತಿದ್ದ ಒಂದು ಬಂಡೆಯ ಮೇಲೆ ಕಾರು ಹತ್ತಿಸಿದರು. ವಿಚಿತ್ರ ಶಬ್ಧ ಮಾಡಿ ಡಾಲ್ಫಿನ್ ತಣ್ಣಗಾಯಿತು. ತೇಜಸ್ವಿ, ನನ್ನ ಮಾತು ಕೇಳಲ್ಲ ಕಣ್ರೀ ಲಂಕೇಶ್’ ಎಂದು ಕೂಗಿದರು. ಎಲ್ಲರೂ ಇಳಿದೆವು. ಕಾರಿನ ಆಕಾರ ಕಣ್ಣ ಮುಂದೆ ಕಾಣುತ್ತಿತ್ತು. ತೇಜಸ್ವಿ ಪ್ರಯತ್ನಿಸಿದರೂ ಅದು ಜುಂ ಎನ್ನಲಿಲ್ಲ. ಕೆಳಗಿಳಿದು ಬಂದು, ‘ಅಗ್ರಾರ ಬಾ ಇಲ್ಲಿ ಈ ಕಾರನ್ನ ಹಿಂದಿನಿಂದ ಎತ್ತಿ ಒಂದು ಅಡಿ ಪಕ್ಕಕ್ಕಿಡಬೇಕು’ ಅಂದರು. ನಾವು ಪ್ರಯತ್ನಿಸತೊಡಗಿದೆವು. ಲಂಕೇಶ್ ಬಂದು ಕೈ ಹಾಕಿದರು. ಯಶಸ್ವಿಯಾದೆವು. ಅಂದರೆ ನಾವು ಅಷ್ಟು ಶಕ್ತಿಶಾಲಿಗಳಾಗಿದ್ದೇವೆಂದು ಯಾರೂ ತಿಳಿಯಬಾರದು. ಡಾಲ್ಫಿನ್ ಅಷ್ಟು ಪುಟ್ಟ ಕಾರಾಗಿತ್ತು ಅಷ್ಟೇ. ಆಮೇಲೆ ಲಂಕೇಶ್ ಬಂದು ತಮ್ಮ ಡ್ರೈವಿಂಗ್ ಸೀಟನ್ನು ಬಿಟ್ಟುಕೊಟ್ಟರು.

ಕಾಡಿನ ದಾರಿಗೆ ಬಂದೆವು. ನದಿ ಇನ್ನೂ ಕಾಣುತ್ತಿತ್ತು. ತೇಜಸ್ವಿಯವರು ತಮ್ಮ ನಿರರ್ಥಕ ಪ್ರತಾಪವನ್ನು ಕುರಿತು ಚಿಂತಿಸುತ್ತಿದ್ದಂತೆ ಮೀನು ಸಿಗುವ, ಸಿಗದ ಸಂರ್ಭಗಳ ವ್ಯಾಖ್ಯಾನ ಮಾಡುತ್ತಿದ್ದರು. ಹಿಂತಿರುಗುವಾಗ ನದಿ ಹತ್ತಿರವೇ ಬಂದಾಗ ಕಾರನ್ನು ನಿಲ್ಲಿಸಿ ಇನ್ನೊಂದು ಸಲ ಗಾಳ ಹಾಕ್ತೀನಿ ಕಣ್ರೀ ಎಂದು ಕೆಳಗಿಳಿದರು. ‘ಏ ಕ್ರೇಜೀ, ಬರ್ರೀ ಹೋಗೋಣ’ ಅಂದು ಲಂಕೇಶ್ ಕೂಗುತ್ತಿದ್ದರೂ ಕೇಳದೆ ದಡದಡ ಇಳಿದು ನದಿಯ ಬಳಿಗೆ ಹೋಗಿಯೇಬಿಟ್ಟರು. ನಾವು ಕಾಡಿನ ಕತ್ತಲನ್ನು ದಿಟ್ಟಿಸುತ್ತಿದ್ದೆವು. ನನ್ನ ಮನಸ್ಸಿನಲ್ಲಿ ಆನೆಗೀನೆ ಬಂದರೆ ಈ ಡಾಲ್ಫಿನ್ ಗತಿ ಏನು ಎಂಬ ಯೋಚನೆ ಬೇರೆ ಅವತರಿಸಿತು. ಅಷ್ಟರಲ್ಲಿ ‘ಏ ಅಗ್ರಾರ ಬಾಯಿಲ್ಲಿ’ ಎಂಬ ತೇಜಸ್ವಿಯವರ ಕೂಗು ಕೇಳಿಸಿತ್ತಾ ‘ಇನ್ನೂ ಚಿಕ್ಕದು, ವಾಪಸ್ ಬಿಟ್ಟುಬಿಡಣ’ ಅಂದರು. ಅದನ್ನು ತೇಜಸ್ವಿಯವರ ಅಡಿಗೆ ಮನೆಯಲ್ಲಿ ಫ್ರೈ ಮಾಡಿ ರುಚಿ ನೋಡುವ ಹುಮ್ಮಸ್ಸಿನಲ್ಲಿದ್ದವನಿಗೆ ಅವರ ಮಾತು ಕಠೋರವಾಗಿ ಕೇಳಿಸಿತು. ಹಾಗಾದರೆ ಗಾಳದಿಂದ ಮುಕ್ತಗೊಳಿಸಿದ ಮೀನನ್ನು ನೀರಿಗೆಸೆದರು. ಆ ದೃಶ್ಯ ನನಗೆ ಇನ್ನೂ ಕಠೋರವಾಗಿ ಕಾಣಿಸಿತು. ತೇಜಸ್ವಿಯವರಿಗೆ ತಮ್ಮ ಪ್ರತಾಪ ತೋರಿಸಿದ ಸಂತೃಪ್ತಿ. ಮುಂದೆ ಕತ್ತಲಿನ ಕಾಡು ರಸ್ತೆಯುದ್ದಕ್ಕೂ, ಮನೆ ತಲುಪುವವರೆಗೂ ಅವರು ನಮ್ಮನ್ನು ನಗಿಸುತ್ತಾ ತುಂಬ ಲಗುಬಗೆಯಿಂದ ಡ್ರೈವ್ ಮಾಡಿದರು.

ಮರುದಿನ ಬೆಳಿಗ್ಗೆ ನಾವು ಬೆಂಗಳೂರಿನ ಕಡೆಗೆ ಹೊರೆಟವು. ತೇಜಸ್ವಿ ದಂಪತಿಗಳು ನಮ್ಮನ್ನು ಬೀಳ್ಕೊಟ್ಟರು. ಇದು 1984-85ರಲ್ಲಿರಬೇಕು. ಆನಂತರ ತೇಜಸ್ವಿಯವರು ಆಗೀಗ ಸಿಕ್ಕಾಗಲೆಲ್ಲ ಅವರ ಎಂದಿನ ತಮಾಷೆ, ಬೈಗುಳ ಹಾಗೂ ಅವರ ಸಾಹಸಗಳನ್ನು ಕೇಳುತ್ತಿದ್ದೆ. ಸುಬ್ಬಣ್ಣನವರ ಝೆನ್ ಪುಸ್ತಕದ ಮೇಲೆ ಬರೆದ ನನ್ನ ರಿವ್ಯೂ ಓದಿ, ‘ಏ ಅದೆಂಥ ಝೆನ್ ಮಾರಾಯ’ ಅವನ ಕಪಾಳಕ್ಕೆ ಇವನು ಹೊಡೆದ, ಇವನ ಕಪಾಳಕ್ಕೆ ಅವನು ಹೊಡೆದ ಇದೇ ಆಯ್ತಲ್ಲಾ ಅಗ್ರಾರ,’ ಎಂದು ಜೋರಾಗಿ ನಕ್ಕರು. ನ್ನ ಕಾದಂಬರಿ ಓದಿ, ‘ಅಯ್ಯೋ ಅದೇನು ನಿನ್ನ ನೀರಿನ ಗೋಳು ಮಾರಾಯ’ ಎಂದು ಸುತ್ತ ಇದ್ದವರಿಗೆಲ್ಲ ವರ್ಣಿಸಿದ್ದರು.

ಇಂತಿಪ್ಪ ನಮ್ಮ ಮಧುರ ಸಂಬಂಧಕ್ಕೆ ಒಂದು ವಿಪತ್ತು ಒದಗಿತು. ಕುವೆಂಪು ‘ಶ್ರೀರಾಮಾಯಣ ದರ್ಶನಂ’ ಹಸ್ತಪ್ರತಿ ಪ್ರಕಟಣೆ ಕುರಿತು ನಾನು ಲಂಕೇಶ್ ಪತ್ರಿಕೆಯಲ್ಲಿ ಕಠುವಾಗಿ ಬರೆದದ್ದು ಅವರಿಗೆ ಬಹಳ ಕೋಪವುಂಟು ಮಾಡಿತು. ಅವರಷ್ಟೇ ಅಲ್ಲ – ಅವರ ಕೆಲ ಅಭಿಮಾನಿಗಳು ಕೂಡ ನನ್ನ ಹೆಸರೆತ್ತಿದರೆ ಉರಿದುಬೀಳುತ್ತಿದ್ದರು. ಈ ಬರೆಹ ಪ್ರಕಟವಾದ ನಂತರ ಒಮ್ಮೆ ತೇಜಷ್ವಿ ಬೆಂಗಳೂರಿಗೆ ಬಂದಿದ್ದರು. ಎಂದಿನಂತೆ ಅವರನ್ನು ನೋಡಲು ಹೋದಾಗ ಅವರು ಮುಖಕೊಟ್ಟು ಮಾತಾಡಲಿಲ್ಲ. ಆನಂತರ ಎರಡು ಬಾರಿ ಫೋನ್ ಮಾಡಿ, ‘ನೀನು ಮೂಡಿಗೆರೆಗೆ ಬಂದು ಆ ಹಸ್ತಪ್ರತಿಯನ್ನು ನೋಡು’ ಎಂದರು. ನಾನು ಹೋಗಲು ಸಾದ್ಯವಾಗಲೇ ಇಲ್ಲ.

ಬೆಂಗಳೂರಿಗೆ ಕಾರ್ಯಕ್ರಮವೊಂದರಲ್ಲಿ ಅವರೊಂದಿಗೆ ನಾನೇ ಸಂವಾದ ನಡೆಸಿಕೊಡಬೇಕಾಯಿತು. ಕಿಕ್ಕಿರಿದ ಜನರ ಸಭಾಂಗಣದಲ್ಲಿ ಅದೊಂದು ಯಶಸ್ವಿ ಕಾರ್ಯಕ್ರಮವಾಯಿತು. ಅದಾದ ನಂತರ ನಮ್ಮ ಸಂಬಂಧ ಸಹಜ ಸ್ಥಿತಿಗೆ ಮರಳಿತು. ಆದರೂ ಅವರಿಗೆ ಸಿಟ್ಟು ಹೋಗಿರಲಿಲ್ಲ. ಕಳೆದ ಜೂನ್ ತಿಂಗಳಲ್ಲಿ ನಾನು ಫೋನ್ ಮಾಡಿ ‘ನೀವು ಮೆಕ್ಸಿಕೋ ದೇಶಕ್ಕೆ ಸಾಹಿತ್ಯ ಅಕಾಡೆಮಿಯ ಪರವಾಗಿ ಹೋಗಿ ಬರಬೇಕು, ದಯವಿಟ್ಟು ಒಪ್ಪಿಕೊಳ್ಳಿ’ ಅಂದಾಗ ‘ಅಯ್ಯೋ ಅಗ್ರಾರ. ನನಗೆ ವಯಸ್ಸಾದ ಮೇಲೆ ನಿನಗೆ ಅಧಿಕಾರ ಬಂತಲ್ಲಾ ಮಾರಾಯ!’ ಅಂದು ನಾನು ದೆಹಲಿಗೆ ಹೋಗುವಾಗ ನಡೆದ ರಾದ್ಧಾಂತ ಬಗ್ಗೆ ಫೋನಿನಲ್ಲೇ ವಿಚಾರಿಸಿಕೊಂಡು ಅಂತಿಮವಾಗಿ ನನಗಾದ ನೈತಿಕ ಜಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಪ್ರವಾಸದ ಬಗ್ಗೆ ಇನ್ನೊಂದು ತಿಂಗಳು ಬಿಟ್ಟು ಫೊನ್ ಮಾಡು, ಯಾವುದಕ್ಕೂ ತಿಳಿಸುತ್ತೇನೆ ಎಂದಿದ್ದರು. ಅದರಂತೆ ಫೋನ್ ಮಾಡಿದಾಗ ‘ಬೇರೆ ಇನ್ಯಾರನ್ನಾದರೂ ಆಯ್ಕೆ ಮಾಡಿ ಕಳೀಸಿ ನನ್ನ ಆರೋಗ್ಯ ಸರಿಯಿಲ್ಲ’ ಎಂದರು. ಅವರು ಸರ್ಕಾರಿ ಮರ್ಜಿಗೆ ಬೀಳಲು ಒಪ್ಪದೆ ಆರೋಗ್ಯ ಕಾರಣ ನೀಡುತ್ತಿದ್ದಾರೆ ಎಂದು ನಾನು ಭಾವಿಸಿದ್ದೆ.

ಅರವತ್ತಾದ ನಂತರ ಪ್ರತಿದಿನವೂ ಬೋನಸ್ ಇದ್ದಂತೆ ಎಂದು ಅವರು ಹೇಳಿದ್ದರು. ತುಂಬ ಕಡಿಮೆ ಬೋನಸ್ ಪಡೆದ ಅಪಾರವಾದ ಜನಮನ್ನಣೆಗಳಿಸಿ ಅಗಲಿರುವ ಪೂಚಂತೇ ಅಪರೂಪದ ವ್ಯಕ್ತಿತ್ವವುಳ್ಳ ಅತಿವಿಶಿಷ್ಟ ಲೇಖಕರಾಗಿದ್ದರು. ಒಬ್ಬ ಲೇಖಕ ತನ್ನದೇ ವಿಶಿಷ್ಟತೆಯನ್ನು ರೂಪಿಸಿಕೊಳ್ಳುವುದರ ಶ್ರೇಷ್ಠ ಮಾದರಿ ತೇಜಸ್ವಿ.

‍ಲೇಖಕರು Admin

March 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. kaviswara shikaripura

    Lankes,Tejaswi,Ramadas ivarugala nenapugalannu yeshtu baredaru,yeshtu odidaru thaniyuvudilla… Teaswi nenapugala kurithu Avadhi(Mayflower) pusthkavannu prakatisidare adeshtu chanda maarayre…

    ಪ್ರತಿಕ್ರಿಯೆ
  2. Dr. BR. Satyanarayana

    ಬೇಮಗಳೂರಿನಲ್ಲಿ ಕಾರ್ಯಕ್ರಮಕ್ಕೆಂದು ಬಂದು ಹೋಟೆಲೊಂದರಲ್ಲಿ ಉಳಿದಿದ್ದ ರಾಮದಾಸ್ ಒಮ್ಮೆ ಗಂಟೆಗಳ ಕಾಲ ತೇಜಸ್ವಿಯವರ ಆಸಕ್ತಿಯ ಬಗ್ಗೆ ಹೇಳಿದ್ದರು.ನಾವು ಯಾವುದೋ ಲೋಕದಲ್ಲಿ ವಿಹರಿಸುತ್ತಿರುವವರಂತೆ ಕುಳಿತು ಕೇಳಿದ್ದೆವು. ನಿಮ್ಮ ಲೇಖನ ಓದಿದಾಗಲೂ ಅದೇ ಅನುಭವವಾಯಿತು. ಥ್ಯಾಂಕ್ಸ್.
    ತೇಜಸ್ವಿ ಬಗ್ಗೆ ಏನೇ ಓದಿದರೂ ಕೊನೆಗೆ ಅನ್ನಿಸುವುದು ‘ಅವರಿನ್ನೂ ಇರಬೇಕಿತ್ತು’ ಎಂದೇ!

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ kaviswara shikaripuraCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: