ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ’ಜೀವ ಉಳಿದದ್ದು ಅವಳದು, ಆದರೆ ಗೆದ್ದವರು ನಾವು..’

ವೃತ್ತಿ ಸಾರ್ಥಕ್ಯದ ಆ ದಿನ

“ಸರ್, ನಿನ್ನೆ ರಾತ್ರಿ ಸಿಜೇರಿಯನ್ ಆದ ಪೇಶಂಟ್ ಗೆ ಭಾಳ ಬ್ಲೀಡಿಂಗ್ ಆಗಾಕ ಹತ್ತೈತ್ರಿ, ಅರ್ಜಂಟ್ ಬರ್ರಿ…”
ಸುಮಾರು ಹದಿನೇಳು ವರ್ಷಗಳ ಹಿಂದಿನ ಮಾತು. ಅದೊಂದು ದಿನ ಬೆಳಿಗ್ಗೆ ಐದು ಘಂಟೆಯ ಸಮಯ. ನಮ್ಮ ಆಸ್ಪತ್ರೆಯ ನರ್ಸ್ ಗಾಬರಿ ತುಂಬಿದ ಧ್ವನಿಯಲ್ಲಿ ಫೋನ್ ಮಾಡಿ ಹೇಳಿದಾಗ ನಾನು ಗಡಿಬಿಡಿಯಿಂದ ಹೊರಟೇಬಿಟ್ಟೆ. ನಮ್ಮ ಮನೆಗೂ ಆಸ್ಪತ್ರೆಗೂ ನಡುವಿನ ಸುಮಾರು ಒಂದು ಕಿಲೋಮೀಟರ್ ದೂರವನ್ನು ಒಂದೇ ನಿಮಿಷದಲ್ಲಿ ಕ್ರಮಿಸಿ, ಆಸ್ಪತ್ರೆ ತಲುಪಿದೆ.
ನಾನು ಎಂ.ಬಿ.ಬಿ.ಎಸ್. ಮಾತ್ರ ಮಾಡಿಕೊಂಡು ನಮ್ಮೂರಲ್ಲಿ ಖಾಸಗಿ ಪ್ರಾಕ್ಟೀಸ್ ಮಾಡುತ್ತಿದ್ದ ದಿನಗಳಿಂದ ಈವರೆಗೂ ಹೆರಿಗೆಗೆ ಬಂದ ರೋಗಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ಅಲ್ಲಿ ಎರಡು ಜೀವಗಳ ಜವಾಬ್ದಾರಿ ಇರುವುದರ ಜೊತೆಗೆ ಒಂದಿಷ್ಟೇ ಅಲಕ್ಷ ಮಾಡಿದರೂ ಯಾವುದೇ ಕ್ಷಣ ಏನಾದರೂ ಅನಾಹುತಗಳಾಗುವ ಸಂದರ್ಭಗಳು ಬಹಳ. ಅಲ್ಲದೆ ನನ್ನ ಮನದಲ್ಲಿ ಅಪ್ರಯತ್ನವಾಗಿ ಅಚ್ಚಳಿಯದೆ ಮನೆಮಾಡಿದ ನನ್ನ ಬಾಲ್ಯದ ಘಟನೆಯೂ ಕಾರಣ. ಹಾಗೆ ನೋಡಿದರೆ ನಾನು ವೈದ್ಯನಾಗಲು ಪ್ರೇರೇಪಣೆ ನೀಡಿದ್ದೇ ಮರೆಯಲಸಾಧ್ಯವಾದ ಆ ವಿಷಾದದ ಘಟನೆ.
ನಾನು ಆಗ ಹತ್ತು ವರ್ಷದವನಿದ್ದೆ. ನಮ್ಮವ್ವ ತನ್ನ ಏಳನೆಯ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದಳು. ಈಗಿನಂತೆ ಸಣ್ಣ ಕುಟುಂಬದ ಪದ್ಧತಿ ಆಗ ಬಹುಜನರಿಗೆ ಗೊತ್ತಿಲ್ಲದ ಕಾರಣ ಆರು,ಏಳು ಮಕ್ಕಳನ್ನು ಹೆರುವುದು ಸಾಮಾನ್ಯವಾಗಿತ್ತು. ಅಂದು ಶುಕ್ರವಾರ ಎಳ್ಳ ಅಮಾವಾಸ್ಯೆಯ ದಿನ, ನಾವೆಲ್ಲಾ ಚಕ್ಕಡಿಯಲ್ಲಿ ಕುಳಿತು ‘ಚರಗ ಚೆಲ್ಲಲು’ ಹೊಲಕ್ಕೆ ಹೊರಟಿದ್ದರೆ, ತಲೆಯ ಮೇಲೆ ದೊಡ್ಡಗಂಟಿನಲ್ಲಿ ಅರಿವೆಗಳನ್ನು ಹೊತ್ತು, ಅವುಗಳನ್ನು ತೊಳೆದುಕೊಂಡು ಬರಲು, ಅವ್ವ ಭಾವಿಗೆ ಹೊರಟಿದ್ದಳು, ಚಕ್ಕಡಿಯಲ್ಲಿ ಬಂದರೆ ತುಂಬು ಗರ್ಭಿಣಿಗೆ ಕಷ್ಟವಾಗುತ್ತದೆಂದು ಆ ಸಲ ಹೊಲಕ್ಕೆ ಬರುವುದನ್ನು ಬಿಟ್ಟಿದ್ದಳು. ಗುಡ್ಡದಂಥ ಹೊಟ್ಟೆ, ತಲೆಯ ಮೇಲೆ ಒಂದು ಹೊರೆ ಅರಿವೆಗಳು, ಏರು ಹಣೆ, ಹಣೆಗೆ ಹಚ್ಚಿದ ದೊಡ್ಡದಾದ ಕುಂಕುಮ, ಅನಾಯಾಸವಾಗಿ ಅವಳು ಹೆಜ್ಜೆ ಇಡುತ್ತಿದ್ದ ರೀತಿ, ಮುಖದ ಮೇಲಿನ ಸಂತೃಪ್ತಿಯ ನಗು, ನಾವು ಕುಳಿತು ಹೊರಟಿದ್ದ ಚಕ್ಕಡಿಯ ಹಿಂದೆ ನಡೆದು ಬರುತ್ತಿದ್ದ ಅವಳ ಮುಖ ನಲವತ್ತೇಳು ವರ್ಷಗಳ ನಂತರವೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ. ನಮ್ಮವ್ವನ ಮಾಸದ ಆ ನಗೆ ನನ್ನ ಮನ:ಪಟಲದ ಮೇಲೆ ಹಾಗೆಯೇ ಉಳಿದುಕೊಂಡಿದೆ.
ಆ ದಿನಕ್ಕೆ ಸರಿಯಾಗಿ ಏಳು ದಿನಗಳ ನಂತರದ ಶುಕ್ರವಾರ ಬೆಳಗಿನ ನಾಲ್ಕು ಗಂಟೆಯ ಸುಮಾರಿಗೆ ನಮ್ಮ ಆಮ್ಮ(ಅಜ್ಜಿ) ಗಾಢ ನಿದ್ರೆಯಲ್ಲಿದ್ದ ನಮ್ಮನ್ನೆಲ್ಲ ಎಬ್ಬಿಸಿದಳು. ಅವಳು ಸಂತೋಷದಿಂದ, “ ನಿಮಗ ತಮ್ಮ ಹುಟ್ಯಾನ, ನೋಡ ಏಳ್ರಿ..” ಅಂದಾಗ ನಾವು ಆರೂ ಜನ ಎದ್ದು ಕುಳಿತು ಅದೇ ತಾನೇ ಹುಟ್ಟಿದ ತಮ್ಮನನ್ನು ನೋಡಿ ಖುಶಿಗೊಂಡೆವು. ಡಿಸೆಂಬರ್ ಚಳಿಯಲ್ಲಿ ಬೆಚ್ಚನೆಯ ಅರಿವೆಗಳನ್ನು ಸುತ್ತಿಸಿಕೊಂಡು ಶಾಂತವಾಗಿ ನಿದ್ದೆ ಮಾಡುತ್ತಿದ್ದ. ಆದರೆ ಪರದೆಯ ಆಚೆಗೆ ಕುಳಿತ ಅವ್ವನ ಮುಖ ಅದೇಕೋ ಸಪ್ಪಗಿತ್ತು. ಅವಳು ಸಂಕಟ ಪಡುತ್ತಿದ್ದಳು. ನಿಶ್ಯಕ್ತಿಯಾದಂತೆ ಕಂಡಳು. ಎಂದಿನ ನಗೆ ಅಲ್ಲಿರಲಿಲ್ಲ. ನಮ್ಮ ಅಮ್ಮ(ಅಜ್ಜಿ) ಮತ್ತು ಸೂಲಗಿತ್ತಿ ಕೂಡಿ ಏನೋ ಚರ್ಚಿಸುತ್ತಿದ್ದರು. ಅವರ ಮುಖದ ಮೇಲೆ ಗಾಬರಿಯಿತ್ತು. ನಮ್ಮಪ್ಪ ಓಡೋಡಿ ಹೋಗಿ ಅಲ್ಲಿನ ವೈದ್ಯರೊಬ್ಬರನ್ನು ಕರೆತಂದರು. ಸಣ್ಣ ಹಳ್ಳಿಯಾದ ನಮ್ಮೂರಲ್ಲಿ ಆಸ್ಪತ್ರೆಯಿರಲಿಲ್ಲ. ಇದ್ದ ಆರ್. ಎಂ. ಪಿ. ಗಳೇ ಆಪತ್ಕಾಲದ ಚಿಕಿತ್ಸಕರು. ಸೂಲಗಿತ್ತಿ ತನಗೆ ತಿಳಿದದ್ದನ್ನು ತಾನು ಮಾಡುವುದು, ವೈದ್ಯರು ತಮಗೆ ತೋಚಿದ ಇಂಜೆಕ್ಷನ್ ತಾವು ನೀಡುವದು, ಅನ್ನುವುದರೊಳಗೆ, ನಮ್ಮವ್ವ ನಮ್ಮ ಕಣ್ಣೆದುರಿಗೆ ಕುಸಿದೇಬಿಟ್ಟಳು. (ಅದಕ್ಕೆ ಕಾರಣ ಹೆರಿಗೆ ನಂತರದ ಅತೀ ರಕ್ತಸ್ರಾವ, ಎಂದು ನನಗೆ ಈಗ ಅನಿಸುತ್ತದೆ.) ಸಾಯುವಾಗ ಕೊನೆಯ ಬಾರಿಗೆ ನಮ್ಮೆಲ್ಲರೆಡೆ ಕಣ್ಣು ತಿರುಗಿಸಿ ನೋಡಿದ್ದು, ಹರಳೆಣ್ಣೆ ದೀಪದ ಮಂದ ಬೆಳಕಿನಲ್ಲಿ ಕಂಡಿತು. ಅದು ಇವತ್ತೇ ಸಂಭವಿಸಿದಷ್ಟು ಸ್ಪಷ್ಟವಾದ ಚಿತ್ರ ನನ್ನ ಕಣ್ಣ ಮುಂದಿದೆ. ಹೌದು, ನಮ್ಮೆದುರಿಗೇ ನಮ್ಮವ್ವ ತೀರಿಹೋಗಿದ್ದಳು. ದಿನವೂ ಚೆಂದ ಚೆಂದದ ಕತೆಗಳನ್ನು ಹೇಳುತ್ತ, ನಮ್ಮ ಅಭ್ಯಾಸದ ಬಗೆಗೆ ಅಪಾರ ಕಾಳಜಿ ತೋರುತ್ತ, ಗಣಿತದ ಸಮಸ್ಯೆಗಳನ್ನು ಅನಾಯಾಸವಾಗಿ ತಿಳಿಸಿಕೊಡುತ್ತ, ಶಿಕ್ಷಣವನ್ನೂ ಆಟವನ್ನಾಗಿಸುತ್ತಿದ್ದ ಅವ್ವ ಹೋಗಿಬಿಟ್ಟಿದ್ದಳು.

“ ನನ್ನ ಮಗ ಸಾಲ್ಯಾಗ ಭಾಳ ಶ್ಯಾಣ್ಯಾ ಅದಾನ. ಆವಾ ಡಾಕ್ಟರ್ ಆಗ್ತಾನ. ನಮಗೆಲ್ಲ ಅವನss ಔಷಧಿ ಕೊಡ್ತಾನ…..” ಅಂತ ಊರೆಲ್ಲ ಅವ್ವ ಹೇಳುತ್ತಿದ್ದದ್ದು ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು. ಅವ್ವ ಅಪೇಕ್ಷಿಸಿದಂತೆ, ಅಪ್ಪ ನನ್ನನ್ನು ಡಾಕ್ಟರ್ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಂ. ಬಿ. ಬಿ. ಎಸ್. ಆದ ಮೇಲೆ ನಾನು ಮಾಡಿದ ಮೊದಲ ನಿರ್ಧಾರವೆಂದರೆ. ‘ಯಾವ ತಾಯಿಯೂ ಅವ್ವನ ಹಾಗೆ ಹೆರಿಗೆಯಿಂದಾಗಿ ಸಾಯಬಾರದು,’ ಎಂಬುದು. ಅದನ್ನು ಮನಸ್ಸಿನೊಳಗೆ ಗಟ್ಟಿಯಾಗಿ ನಿರ್ಧರಿಸಿಕೊಂಡ ನಾನು, ನಮ್ಮ ಹಳ್ಳಿಯಲ್ಲಿ ಪ್ರ್ಯಾಕ್ಟೀಸ್ ಮಾಡುವಾಗಲೂ ಹೆರಿಗೆಗೆ ಬಂದ ಮಹಿಳೆಯರ ಜೊತೆ ನಿಂತೆನೆಂದರೆ, ಅವರು ಸುರಕ್ಷಿತವಾಗುವ ತನಕ ಬೇರೆ ರೋಗಿಗಳನ್ನು ನೋಡುತ್ತಿರಲಿಲ್ಲ. ಪ್ರಸೂತಿಗೆ ಬಂದ ಪ್ರತಿ ಮಹಿಳೆಯಲ್ಲೂ ನಾನು ಅವ್ವನನ್ನು ಕಾಣಲು ಪ್ರಯತ್ನಿಸುತ್ತಿದ್ದೆ. ಅದು ಹಾಗೆಯೇ ಮುಂದುವರಿದು ಈಗ ಎಮ್. ಎಸ್. ಮಾಡಿದ ಮೇಲೂ ಅದನ್ನೇ ತಪ್ಪದೆ ಪಾಲಿಸಿಕೊಂಡು ಬಂದಿದ್ದೇನೆ. ನಮ್ಮ ಆಸ್ಪತ್ರೆ ಅಥವಾ ಬೇರೆ ಯಾವುದೇ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಬಂದ ಮಹಿಳೆಗೆ ಸ್ವಲ್ಪವೇ ಕಷ್ಟವಿದ್ದರೂ ‘ಇರುವುದೆಲ್ಲವ ಬಿಟ್ಟು’ ಓಡಿ ಹೋಗುತ್ತೇನೆ, ಹಗಲು ರಾತ್ರಿಗಳ ಪರಿವೆಯಿಲ್ಲದೆ.
ಇಂದೂ ಕೂಡ ಹಾಗೆಯೆ ಆಯಿತು. ಕರೆ ಬಂದ ತಕ್ಷಣ ನಾನು ಆಸ್ಪತ್ರೆ ತಲುಪಿದೆ. ಅಲ್ಲಿ ನೋಡಿದರೆ ಅವಳು ರಕ್ತದ ಮಡುವಿನಲ್ಲಿ. ಹೆರಿಗೆ ನಂತರ ಈ ರೀತಿ ರಕ್ತಸ್ರಾವ ಕೆಲವೊಮ್ಮೆ ಸಂಭವಿಸುತ್ತವೆ. ಅದೂ ಮೂರನೆಯ,ನಾಲ್ಕನೆಯ ಹೆರಿಗೆಯ ನಂತರ ಹೀಗಾಗುವುದು ಸಾಮಾನ್ಯ. ಗರ್ಭಕೋಶ ಸಂಕುಚಿತಗೊಳ್ಳುವ ಶಕ್ತಿ ಕಳೆದುಕೊಂಡಾಗ ಸಂಭವಿಸುವ ಗಂಭೀರ ಸ್ಥಿತಿ ಇದು. ಅವಳದು ನಾಲ್ಕನೆಯ ಹೆರಿಗೆ. ಮೊದಲಿನ ಮೂರು ಸಹಜ ಹೆರಿಗೆಗಳಾಗಿದ್ದರೂ ಈ ಬಾರಿ ಕೂಸು ಅಡ್ಡಲಾಗಿ ಇದ್ದುದರ ಕಾರಣ ಸಿಜೇರಿಯನ್ ಮಾಡಲಾಗಿತ್ತು. ರಾತ್ರಿ ಎರಡು ಘಂಟೆಗೆ ಶಸ್ತ್ರಚಿಕಿತ್ಸೆ ಮುಗಿಸಿ, ಮುಂದೆ ಅರ್ಧ ಘಂಟೆ ಅವಳೊಂದಿಗೆ ಇದ್ದು ಬಂದಿದ್ದೆ. ಆಗ ಏನೂ ಇರದ ಸಮಸ್ಯೆ ಈಗ ಪ್ರಾರಂಭವಾಗಿತ್ತು. ನಾನು ಅಲ್ಲಿ ತಲುಪುವುದರೊಳಗೆ ಡ್ಯೂಟಿಯಲ್ಲಿದ್ದ ನರ್ಸ್ ರಕ್ತಸ್ರಾವ ನಿಲ್ಲಿಸುವ ತುರ್ತು ಇಂಜೆಕ್ಷನ್ ಗಳನ್ನೂ ಅದಾಗಲೇ ನೀಡಿದ್ದಳು. ಅನುಭವಿ ನರ್ಸ್ ಗಳು ಕೆಲವೊಮ್ಮೆ ವೈದ್ಯರಿಗೆ ಸರಿಸಮನಾಗಿ ಔಷಧೋಪಚಾರ ಮಾಡಬಲ್ಲವರಾಗಿರುತ್ತಾರೆ.
ಆದರೆ ತೀವ್ರ ರಕ್ತಸ್ರಾವದಿಂದ ಅವಳು ಕುಸಿಯಲು ಪ್ರಾರಂಭಿಸಿದ್ದಳು. ನಾವು ನೀಡಿದ ಸಲೈನ್ ಒಂದಿಷ್ಟು ಸಮಯ ಮಾತ್ರ ರಕ್ತದೊತ್ತಡವನ್ನು ಸಹಜಸ್ಥಿತಿಯಲ್ಲಿ ಹಿಡಿದಿಡಲು ಸಾಧ್ಯ. ‘ರಕ್ತಕ್ಕೆ ರಕ್ತ ಮಾತ್ರ ಸಾಟಿ.’ ಈಗ ತುರ್ತಾಗಿ ರಕ್ತ ಹಾಕುವುದು ಮತ್ತು ಶಸ್ತ್ರಚಿಕಿತ್ಸೆ ಮಾಡಿ ರಕ್ತಸ್ರಾವ ನಿಲ್ಲಿಸುವುದು ಅವಶ್ಯವಾಗಿತ್ತು. ಅಂದರೆ ಮಾತ್ರ ಅವಳನ್ನು ಬದುಕಿಸುವುದು ಸಾಧ್ಯವಿತ್ತು. ಅಲ್ಲಿ ನೋಡಿದರೆ ರೋಗಿಯ ಸಂಬಂಧಿಕರಾರೂ ಇಲ್ಲ. ಕೂಸನ್ನು ನೋಡಿಕೊಳ್ಳಲು ಒಬ್ಬ ಮುದುಕಿಯನ್ನು ಬಿಟ್ಟು ಎಲ್ಲರೂ ತಮ್ಮೂರಿಗೆ ಹೊರಟು ಹೋಗಿದ್ದರು. ಆಗಿನ್ನೂ ಮೊಬೈಲ್ ಫೋನ್ ಗಳಿರಲಿಲ್ಲ. ಮತ್ತೆ ಆ ಹಳ್ಳಿಗೆ ಫೋನ್ ಕೂಡ ಇಲ್ಲ. ನಮಗೆ ದಿಕ್ಕು ತೋಚದಂತಾಯಿತು. ಕ್ಷಣ ಕ್ಷಣಕ್ಕೆ ಅವಳ ಸ್ಥಿತಿ ಗಂಭೀರವಾಗತೊಡಗಿತ್ತು. ಅವಳ ಚಡಪಡಿಕೆ ಸಂಕಟ ನೋಡಲಾಗುತ್ತಿಲ್ಲ. ಸಮೀಪದಲ್ಲಿ ಬ್ಲಡ್ ಬ್ಯಾಂಕ್ ಇಲ್ಲ. ರಕ್ತ ಸಿಗಬೇಕಾದರೆ ಕನಿಷ್ಠ ೬೦ ಕಿ.ಮೀ. ದೂರ ಹೋಗಬೇಕು. ಅದೂ ಅಲ್ಲಿ ಇವಳ ಗ್ರುಪ್ ನ ರಕ್ತ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಧರ್ಮ ಸಂಕಟ ಅಂದರೆ ಇದೇ ಇರಬೇಕು. ಅವಳ ರಕ್ತದ ಗ್ರುಪ್ ನೋಡಿದೆ. ಇನ್ನು ಸಮಯ ವ್ಯರ್ಥ ಕಳೆಯುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬಂದು, ರಕ್ತಸ್ರಾವವನ್ನು ಸಾಧ್ಯವಿದ್ದಷ್ಟು ಹತೋಟಿಯಲ್ಲಿಡುವಂಥ ಇಂಜೆಕ್ಷನ್ ಗಳನ್ನೂ, ದ್ರಾವಣಗಳನ್ನೂ ನೀಡಲು ನಮ್ಮ ಸಿಬ್ಬಂದಿಗೆ ತಿಳಿಸಿ, ಅರಿವಳಿಕೆ ತಜ್ಞರನ್ನು ಕರೆತರಲು ಕಾರು ತೆಗೆದುಕೊಂಡು ಹೊರಟೆ. ತಮ್ಮ ಮನೆಯಲ್ಲಿದ್ದ ಅವರನ್ನು ಅರ್ಜೆಂಟ್ ಆಗಿ ನನ್ನ ಜೊತೆ ಬರುವಂತೆ ವಿನಂತಿಸಿದೆ. ಒಂದೇ ಮಾತಿಗೆ ನನ್ನ ಕಾರಿನಲ್ಲಿ ಕುಳಿತ ಅವರಿಗೆ ದಾರಿಗುಂಟ ವಸ್ತುಸ್ಥಿತಿ ವಿವರಿಸಿದೆ.
ಆಸ್ಪತ್ರೆಗೆ ಬಂದವನೇ ನನ್ನ ಹಾಗೂ ರೋಗಿಯ ರಕ್ತ ಹೊಂದುತ್ತದೆಯೇನೋ ಎಂಬುವುದನ್ನು ಪರೀಕ್ಷಿಸಲು ನಮ್ಮ ಟೆಕ್ನಿಷಿಯನ್ ಗೆ ಹೇಳಿದೆ. ಯಾಕೆಂದರೆ ನನ್ನ ಹಾಗೂ ರೋಗಿಯ ರಕ್ತದ ಗುಂಪು ಒಂದೇ ಇದೆ, ಎಂದು ನನಗೆ ಗೊತ್ತಿತ್ತು. ಸುದೈವವಶಾತ್ ‘ನನ್ನ ರಕ್ತ ಅವಳದರೊಂದಿಗೆ ಹೊಂದಿಕೆಯಾಗುತ್ತದೆ’ ಎನ್ನುವುದನ್ನು ನಮ್ಮ ಟೆಕ್ನಿಷಿಯನ್ ಹೇಳಿದಾಗ ನಮ್ಮ ಸಂತೋಷಕ್ಕೆ ಪಾರವೇ ಇಲ್ಲ. ಆ ದಿನಗಳಲ್ಲಿ ಎಮರ್ಜೆನ್ಸಿಗಾಗಿ ರಕ್ತದ ಬ್ಯಾಗ್ ಗಳನ್ನು ನಾವು ಇಟ್ಟುಕೊಂಡಿರುತ್ತಿದ್ದೆವು. ಮತ್ತೆ ಆಗ ರಕ್ತ ಸಂಗ್ರಹಣೆ ಹಾಗೂ ವಿತರಣೆಯ ಕಾಯಿದೆ ಕೂಡ ಈಗಿನಂತೆ ಇರಲಿಲ್ಲ. ಅದೀಗ ಉಪಯೋಗಕ್ಕೆ ಬಂತು. ನನ್ನ ಒಂದು ಬಾಟಲಿ ರಕ್ತ ತೆಗೆದು ಅವಳಿಗೆ ನೀಡಲು ಪ್ರಾರಂಭಿಸಿ, ಅರಿವಳಿಕೆ ತಜ್ಞರು ಅರಿವಳಿಕೆ ನೀಡಿದ ನಂತರ, ಮನದಲ್ಲಿಯೇ ನಮ್ಮವ್ವನನ್ನು ನೆನೆದು ಶಸ್ತ್ರಚಿಕಿತ್ಸೆ ಪ್ರಾರಂಭಿಸಿದೆ.
ಆ ಶಸ್ತ್ರಚಿಕಿತ್ಸೆ ನನ್ನ ಜೀವನದಲ್ಲಿಯೇ ಮರೆಯಲಾರದಂತಹುದು. ಯಾಕೆಂದರೆ ರೋಗಿಯ ಜವಾಬ್ದಾರಿಯುತ ಸಂಬಂಧಿಕರಿಲ್ಲ. ಏನಾದರೂ ಹೆಚ್ಚುಕಡಿಮೆಯಾದರೆ, ಆಮೇಲೆ ಬಂದ ಅವರನ್ನು ಸಮಾಧಾನ ಪಡಿಸುವದು ಕಷ್ಟದ ಕೆಲಸ. ಅಲ್ಲದೆ ಇಷ್ಟೆಲ್ಲ ಮಾಡಿಯೂ ಅವಳು ಬದುಕುವ ಬಗ್ಗೆ ಭರವಸೆ ಇಲ್ಲ. ಆದರೂ ಧೈರ್ಯ ಮಾಡಲೇಬೇಕಾಯ್ತು. ಆಗ ನಮ್ಮ ಗುರಿ ಎಂದರೆ ಪ್ರಾಮಾಣಿಕ ಪ್ರಯತ್ನ ಮಾತ್ರ. ಅಷ್ಟೊತ್ತಿಗೆ ನನ್ನ ಅಸಿಸ್ಟಂಟ್ ಡಾಕ್ಟರ್ ಒಬ್ಬರ ರಕ್ತ ಕೂಡ ಹೊಂದಾಣಿಕೆಯಾಯಿತು. ಅವನದನ್ನೂ ಒಂದು ಬಾಟಲಿ ರಕ್ತ ಹಾಕಿ, ಮುಂದಿನ ಒಂದು ಘಂಟೆ ‘ತಪಸ್ಸಿನಂತಹ’ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಿದೆವು. ಅವಳು ಗುಣಮುಖ…!, ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಜೀವ ಉಳಿದದ್ದು ಅವಳದು, ಆದರೆ ಗೆದ್ದವರು ನಾವು..!!
“ನನ್ನ ವೈದ್ಯವೃತ್ತಿಯಲ್ಲಿಯೇ ಅತ್ಯಂತ ಸಾರ್ಥಕ ದಿನ ಅದು..”
ಈಗ ಕೆಲವು ದಿನಗಳ ಹಿಂದೆ ಎಸ್.ಎಸ್.ಎಲ್.ಸಿ. ಕಲಿಯುತ್ತಿದ್ದ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಒಬ್ಬ ತಾಯಿ ಬಂದಿದ್ದಳು. ಬಂದವಳೇ ಮಗಳಿಗೆ
“ ಸಾಹೇಬರ, ಕಾಲು ಮುಟ್ಟಿ ನಮಸ್ಕಾರ ಮಾಡು” ಅಂದಳು.
ನನಗೆ ಯಾಕೆಂದು ಗೊತ್ತಾಗಲಿಲ್ಲ. ಯಾಕೆಂದು ಕೇಳಿದರೆ
“ಅವತ್ತ ಸಿಜೇರಿಯನ್ ದಿಂದ ಹುಟ್ಟಿದ ಮಗಳು ಇವಳರೀ, ಸಾಹೇಬ್ರ…ನಿಮ್ಮನ್ನ ನಾವು ದಿನಾ ನೆನೆಸಿ ಊಟ ಮಾಡ್ತ್ಯಾವ್ರಿ ..” ಅಂದಳು.
ನನ್ನ ಕಣ್ಣಲ್ಲಿ ಆನಂದ ಭಾಷ್ಪಗಳು.
ಅಲ್ಲಿ, ದೂರದಲ್ಲೆಲ್ಲೋ ನಮ್ಮವ್ವ ಕೂಡ ತೃಪ್ತಿಯ, ಅಭಿಮಾನದ, ಹೆಮ್ಮೆಯ, ಸಂತಸದ ನೋಟ ಬೀರುತ್ತಿರಬಹುದೇ….!!
 

‍ಲೇಖಕರು G

December 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

31 ಪ್ರತಿಕ್ರಿಯೆಗಳು

  1. C. N. Ramachandran

    ನಮಸ್ಕಾರ ಡಾಕ್ಟ್ರೆ. ಖಂಡಿತವಾಗಿಯೂ ನಿಮ್ಮ ತಾಯಿ ಸ್ವರ್ಗದಲ್ಲಿ ನಿಮ್ಮನ್ನು ನೋಡಿ ಹೆಮ್ಮೆಯಿಂದ, ತೃಪ್ತಿಯಿಂದ ನಗುತ್ತಿರುತ್ತಾರೆ. ನಿಮ್ಮಂತಹವರು ಸಾವಿರಾರು ಜನ ನಮ್ಮ ಅಸಂಖ್ಯಾತ ಹಳ್ಳಿಗಳಿಗೆ ಬೇಕು. ದೇವರ ಆಶೀರ್ವಾದ ನಿಮ್ಮ ಮೇಲಿದ್ದು ನಿಮ್ಮ ಕೆಲಸಕಾರ್ಯಗಳು ಇತರರನ್ನೂ ಪ್ರಭಾವಿಸುವಂತಾಗಲಿ.
    ಕಣ್ಣು ತುಂಬಿ ಬಂದ, ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
    • Anonymous

      Sadananda annavre ,
      Modalu nimmannu huttisi nimmannu obba dr aguvadakke prerepisida nimma ammanige namaskaragalu . Dr jeevanadalli intaha yesto ghatanegalu aagi hogiruttave . Aadare idannu naavu namma Kanna munde nodutta iddeveno annuva thara barediruva nimage tumba dhanyavadagalu . Antha kasta samayadallu dhairya tori rakta kottu obba tayi maguvannu badukisida nimage hats off . . Jayashri patil

      ಪ್ರತಿಕ್ರಿಯೆ
  2. Sunil Gurannavar

    ಸರ್ ನಿಮ್ಮ ಲೇಖನಗಳು ನಿಜಕ್ಕೂ ಅನನ್ಯ ಸರ್. ಬಿಡುಗಡೆಯಾಗಿರುವ ನಿಮ್ಮ ಪುಸ್ತಕದ ಹೆಸರು ಹೇಳಿ ಸರ್. ನಿಮ್ಮ ಪುಸ್ತಕ ಓದಲು ತುಂಬಾ ಕಾತರಗೊಂಡಿದ್ದೇನೆ. ನಿಜಕ್ಕೂ ನಿಮ್ಮ ಲೇಖನಗಳಲ್ಲಿ ಜೀವನಾನುಭವ ಮಿಶ್ರಗೊಂಡ ಅದ್ಭುತ ಕಥೆಗಳಿವೆ ಮತ್ತು ಅವು ಮನಸ್ಸನ್ನ ತಟ್ಟುತ್ತವೆ ಸರ್.

    ಪ್ರತಿಕ್ರಿಯೆ
  3. Parvati Naik

    I am pleased to inform every body that I had given ANAESTHESIA for this patient. Thank you sir . I remember very well about this case, the amount of tension you had before, & the satisfaction you had after …..

    ಪ್ರತಿಕ್ರಿಯೆ
  4. Dr. S.R . Kulkarni.

    Saheb,Indeed a beautiful flashback covering not only personal pains & please ure, it includes lots of information about professional problems & legal hurdles which very badly affect the efforts of sincere Doctor.It also includes the very peculiar nature of human being though fondly keep remembering it may take decades to meet or may never come across.

    ಪ್ರತಿಕ್ರಿಯೆ
  5. Dr. S.R . Kulkarni.

    Just few minutes were over, a lady was admitted for delivery. Our staff girls ca came running saying the lady is bleeding. To my shock the bleeding was so profuse blood had started to trickle from the bed.
    No lab, no bl.bank, no emergency surgical facilities, I decided to shift her to district. Fortunately I had my own Ambulance.
    She was a mass of muscle,’arrange for or 8 bottles of blood then only I can touch The surgeon gave his verdict. How we struggled to arrange is another big story.
    The treatment was a success. When I made my face to return home the sun just started to rays, a new day started.
    Almost 30 yrs are over to this incident I am still waiting for one day the lady or somebody from her side may come & meet me.

    ಪ್ರತಿಕ್ರಿಯೆ
  6. Sneha Ramakanth

    ವೈದ್ಯೋ ನಾರಾಯಣೋ ಹರಿ: ಎಂಬ ಮಾತನ್ನ ಸಾರ್ಥಕ ಸರ್… ನಿಮ್ಮ ರಕ್ತವನ್ನೆ Patient ಗೆ ಕೊಟ್ಟು… ಆಕೆಯನ್ನು ಉಳಿಸಿದಿರಿ.. ನನಗೆ ಯಾವಾಗಲೂ ನಂಬಿಕೆ ನರ ರೂಪೇಣ ನಾರಾಯಣ ಅಂತ… ದೇವರು ಯಾವತ್ತು ಮನುಷ್ಯರ ಮೂಲಕವೆ ಸಹಾಯ ಮಾಡುವುದಂತೆ.. ಅಂದು ನೀವು ಆಕೆಗೆ ಸಾಕ್ಷಾತ ಧನವಂತರಿ ಆಗಿದ್ದೀರಿ.. ಪ್ರಾಯಶ: ಇಂದಿನ ಕಾಲದಲ್ಲಿ ಇಂಥವರು ವಿರಳ… ನಿಮಗೆ ಕೋಟಿ ನಮನಗಳು ….

    ಪ್ರತಿಕ್ರಿಯೆ
  7. lakshmishankarjoshi.

    ನಮ್ಮ ಕಣ್ಣಾಗೂ ನೀರ ತರಿಸಿಬಿಟ್ರಿ ಸಾಹೇಬ್ರ.ಸರ್ ತಮ್ಮೂರು?

    ಪ್ರತಿಕ್ರಿಯೆ
  8. ಭೀಮಣ್ಣ ಹುಣಸೀಕಟ್ಟಿ

    ಆ ಸಂಧರ್ಭಕ್ಕೆ ಮೆರೆದ ಮಾನವೀಯತೆ,ಧೈರ್ಯಗಾರಿಕೆ ಅಧ್ಭುತ !
    ಇದಕ್ಕೆಲ್ಲ ಪ್ರೇರಣೆ ಕೊಟ್ಟ “ಅವ್ವ”ನಿಗೆ ನನ್ನದೂ ಒಂದು ದೊಡ್ಡ ನಮಸ್ಕಾರ

    ಪ್ರತಿಕ್ರಿಯೆ
  9. sudha Manjunath

    This is really tuching n sensitive doctor. hats of to you. if every doctor is dedicated as u r there will be no treth to life. when u will get time to write sir? o feel happy that i could associate with u n became friend

    ಪ್ರತಿಕ್ರಿಯೆ
  10. ಭೀಮಣ್ಣ ಹುಣಸೀಕಟ್ಟಿ

    ಆ ಸಂಧರ್ಭಕ್ಕೆ ಮೆರೆದ ಮಾನವೀಯತೆ,
    ಧೈರ್ಯಗಾರಿಕೆ ಅಧ್ಭುತ !
    ಇದಕ್ಕೆಲ್ಲ ಪ್ರೇರಣೆ ಕೊಟ್ಟ “ಅವ್ವ”ನಿಗೆ
    ನನ್ನದೂ ಒಂದು ದೊಡ್ಡ ನಮಸ್ಕಾರ ..

    ಪ್ರತಿಕ್ರಿಯೆ
  11. hema

    maatu horadalla..jevanada artha sarthakateyanu elida adbhuta manamuttuva lekhanavidu…..

    ಪ್ರತಿಕ್ರಿಯೆ
  12. Prashanth

    Dear Doctor, I am still in tears after reading this. We need more doctors like you today. Now a days very rarely we are experiencing the humanity from your profession. It has become a corporate business. Each patient is looked like an opportunity to make money. I wish you many more years of successful practice and pray GOD that some doctors will get inspired by you.
    With Love and Respect
    Prashanth

    ಪ್ರತಿಕ್ರಿಯೆ
  13. ಡಾ.ಶಿವಾನಂದ ಕುಬಸದ

    Thanks to all for kind words.
    And
    Dr. Parvati, you desreve special thanks…as you were of great moral support to me on that day..without your support I would have lost her….

    ಪ್ರತಿಕ್ರಿಯೆ
  14. Prabhakar

    Very nice But very difficult to practice that way in today’s practice scenario

    ಪ್ರತಿಕ್ರಿಯೆ
  15. ಡಾ.ಸಂದೀಪ ಸಜ್ಜನ

    ಅನುಭವಗಳು ಅಪಾರ ಆಸ್ತಿಗಳು ಸರ್…..ತುಂಬಾ ಸುಂದರ ವಿವರಣೆ

    ಪ್ರತಿಕ್ರಿಯೆ
  16. Shantu Badarkod

    Mother earth is still liveable and safe because of few committed people like you.

    ಪ್ರತಿಕ್ರಿಯೆ
  17. ಡಾ.ಸುನೀಲಚಂದ್ರ ಅವರಾದಿ

    ನಿಮ್ಮ ಲೇಖನ ನಿಜಕ್ಕೂ ಅಮೋಘವಾಗಿದೆ.ತಾಯಿಯ ಸಾವಿನ ಆಘಾತವನ್ನು ತಡೆದುಕೊಂಡು ಎಲ್ಲ ತಾಯಂದಿರ ಜೀವ ಉಳಿಸಲು ನೀವು ನಿಮ್ಮನ್ನೇ ಸಮಪಿ೯ಸಿಕೊಂಡ ರೀತಿ ನಿಜಕ್ಕೂ ಅನುಕರಣೀಯ,ಮಾನವತೆಗಂದು ಪಾಠ ಹಾಗೂ ಆ ಮಹಾತಾಯಿಗೆ ನಿಜವಾದ ಶ್ರದ್ಧಾಂಜಲಿ…್
    ಹೃದಯಂಗಮ ಬರವಣಿಗೆಗಾಗಿ ಧನ್ಯವಾದಗಳು ಡಾ.ಶಿವಾನಂದರವರಿಗೆ

    ಪ್ರತಿಕ್ರಿಯೆ
  18. Sandhya, Secunderabad

    Namaskaara Doctre. Odi kannu tumbi bantu. Nimmantaha Doctarara santati nooraagali, saaviragalaagali antashte aashisaballe.

    ಪ್ರತಿಕ್ರಿಯೆ
  19. armanikanth

    ಅಕ್ಕರೆಯ ಸರ್,
    ಲೇಖನ ಓದಿ ಮುಗಿಸುವ ವೇಳೆಗೆ ಅದೆಷ್ಟು ಬಾರಿ ಕಂಬನಿ ಜಾರದಂತೆ ನೋಡಿಕೊಂಡೆನೋ ಗೊತ್ತಾಗಲಿಲ್ಲ. ನಿಮ್ಮೊಳಗಿರುವ ಅಮ್ಮನಿಗೆ ನಮಸ್ಕಾರ.

    ಪ್ರತಿಕ್ರಿಯೆ
  20. Dr Ravi Jammihal

    Article has come out nicely as any other day. Two pertinent issues you have brought out.
    Lack of basic infrastructure at peripheral areas/villages which is a realty even now and the abundance of dedication of medical team in such places is really great.
    With the newer legislations/regulations in health care, which are putting strain on medical personnel and facilities, it is becoming more and more difficult to work in smaller areas. Persons like you and your teams are doing great job despite all odds.

    ಪ್ರತಿಕ್ರಿಯೆ
  21. Krishna R

    ಓದಿ ಕಣ್ಣಲ್ಲಿ ನೀರು ಬಂತು . ನಿಮ್ಮ ತಾಯಿ ನಿಮ್ಮ ಕಣ್ಣೆದುರಿಗೆ ತೀರಿಕೊಂಡಿದ್ದು ತುಂಬಾ ದುಖದ ವಿಷಯ . ಆದರೂ ನೀವು ಬದುಕಿಸಿದ ಈ ತಾಯಿಯಿಂದಾಗಿ ನಿಮ್ಮ ತಾಯಿಯ ಆತ್ಮಕ್ಕೆ ಚಿರಶಾಂತಿ ಸಿಗುವುದು ಖಂಡಿತಾ . ದೇವರು ನಿಮ್ಮನ್ನು ಚೆನ್ನಗಿತ್ತಿರಲಿ . ತುಂಬಾ ಚೆನ್ನಾಗಿ ಬರೆಯುತ್ತಿದ್ದೀರಿ ಹಾಗೂ ನಿಮ್ಮ ಮುಂದಿನ ಕಂತಿಗೆ ಯಾವಾಗಲೂ ಎದುರು ನೋಡುತ್ತಿರುತ್ತೇನೆ

    ಪ್ರತಿಕ್ರಿಯೆ
  22. Kavya Bhat

    ಕಣ್ಣಾಲಿಗಳು ತುಂಬಿದವು…. ವೈದ್ಯನಾದವ ಹೇಗಿರಬೇಕೆಂಬುದಕ್ಕೆ ಕನ್ನಡಿ ನೀವು….

    ಪ್ರತಿಕ್ರಿಯೆ
  23. Upendra

    ಕೆಲವೊಮ್ಮೆ ನನ್ನ ಬಾಯಿಯಿಂದ ಅನಾಯಾಸವಾಗಿ ಸುಳ್ಳು ಹೊರಬೀಳುತ್ತೆ. ನಾನು ಯೋಚಿಸದೆ ಇರುವಂತಹ ಸುಳ್ಳು.
    ಇಂದು ಮಧ್ಯಾಹ್ನ ಹಾಗೇ ಆಯ್ತು… ಸಹೋದ್ಯೋಗಿಯೊಬ್ಬರು ಯಾಕೆ ಅಳ್ತಾ ಇದ್ದೀರಾ ಅಂದ್ರು… ಇಲ್ಲಮ್ಮಾ ಅಂದೆ. ಕಣ್ಣು ಕೆಂಪಾಗಿದೆ… ನೀರು ತುಂಬಿಕೊಂಡಿದೆ ಅಂದ್ರು.
    ಓ ಅದಾ? ಚಿಕ್ಕ ಚಿಕ್ಕ ಅಕ್ಷರಗಳು ಈ ಲ್ಯಾಪ್ಟಾಪ್ ನಲ್ಲಿ ಓದೋದು ಕಷ್ಟ ಆಗ್ತಿದೆ. ಕನ್ನಡಕ ಕೂಡಾ ಚೇಂಜ್ ಮಾಡೋದಿದೆ.. ಸಮಯ ಸಿಗುತ್ತಿಲ್ಲ ಅಂದೆ.
    ಡಾಕ್ಟರ್ ಶಿವಾನಂದ ಕುಬಸದರ ‘ನೆನಪಿನ ಪೆಟ್ಟಿಗೆಯಿಂದ’ ಸರಣಿ ಲೇಖನ ಓದುತ್ತಿದ್ದೆ, ಅವಧಿಯಲ್ಲಿ. ಶೀರ್ಷಿಕೆ – “ವೃತ್ತಿ ಸಾರ್ಥಕ್ಯದ ಆ ದಿನ”. ಅದನ್ನು ಓದುವಾಗ ಭಾವುಕನಾದೆ ಅಂತ ಹೇಗೆ ಹೇಳುವುದು?
    ನನ್ನದೊಂದು ‘ಸೆಲ್ಯೂಟ್’ ನಿಮಗೆ, ಡಾಕ್ಟರ್

    ಪ್ರತಿಕ್ರಿಯೆ
  24. manjunath.s

    I am speechless and I shall desist from talking lightly about your profession. Hats off to your focus and determination. You have made your fraternity proud. You stand out as my hero.

    ಪ್ರತಿಕ್ರಿಯೆ
  25. dr. Naaz shaikh

    Very heart touching. Truly…. You have focused on intra and post partum adventures….of course child birth is nothing less than an adventure. Your mother has been an inspiration to all your writings.
    Practice a decade ago was much simpler as the patients had so much of faith and at the same time they used to accept the complications. But today they see us with so much suspicion resulting in more commercialisation. No body wants to take risk …. Sympathy has taken a back seat.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಭೀಮಣ್ಣ ಹುಣಸೀಕಟ್ಟಿCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: