ಜಯಲಕ್ಷ್ಮಿ ಪಾಟೀಲ್ ಅಂಕಣ– ಜಾತ್ರೆಯಲ್ಲಿ ಕಳೆದುಹೋದೆವು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

5

ಸಿನಿಮಾ ನೋಡಲೆಂದು ನಾನು ಒಬ್ಬಳೇ ಉಜ್ಜನಿಯಲ್ಲಿ ಬಸ್ಸೊಂದನ್ನು ಹತ್ತಿದಾಗ ನನಗೆ ಮೂರು ವರ್ಷವಂತೆ. ಕಳೆದ ಕಂತನ್ನು ಓದಿದ ನನ್ನ ಅವ್ವ ಹೇಳಿದ್ರು. ಅದು ಬೆಂಗಳೂರಿಗೆ ಹೊರಡುವ ಬಸ್. ಅದೇ ಹೊತ್ತಲ್ಲಿ ತಮ್ಮ ನೆಂಟರನ್ನ್ಯಾರನ್ನೋ ಊರಿಗೆ ಕಳಿಸಲು ಬಂದಿದ್ದ ನಮ್ಮ ಮನೆಗೆಸಲದ ಸರ್ವಮಂಗಳ, ಬಸ್ಸಲ್ಲಿ ಕಿಟಕಿಗೆ ಮುಖ ಆನಿಸಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಾ ಹೊರಗೆ ನೋಡುತ್ತಾ ಕುಳಿತ ನನ್ನನ್ನು ಆಚೆಯಿಂದಲೇ ಗಮನಿಸಿದವಳು, ಪಕ್ಕದಲ್ಲಿ ನನ್ನ ತಂದೆತಾಯಿ ಇಲ್ಲದಿರುವುದನ್ನು ಗಮನಿಸಿ ಅನುಮಾನವಾಗಿ ಬಸ್ ಹತ್ತಿದ್ದಾರೆ.

‘ಪಪ್ಪಿ, ಅಮ್ಮಾ ಅಪ್ಪಾ ಎಲ್ಲೇ?’

‘ಮನ್ಯಾಗ’

‘ನೀನೆಲ್ಲಿ ಹೊಂಟಿ?’

‘ಕೊಟ್ಟೂರಿಗೆ ಸಿನಿಮಾ ನೋಡಾಕ’ ನಾನು ಒಬ್ಬಳೆ ಅನ್ನುವ ಅಂಜಿಕೆಯ ಲವಲವೇಶವೂ ಇಲ್ಲ ನನ್ನಲ್ಲಿ!

ಗಾಬರಿಯಾದ ಸರ್ವಮಂಗಳ ಈ ಬಸ್ಸು ಬೇರೆ ಊರಿಗೆ ಹೋಗುವುದಾಗಿಯೂ, ತಾನು ನನ್ನನ್ನು ಕೊಟ್ಟೂರಿಗೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುವುದಾಗಿಯೂ ನನ್ನನ್ನು ಪುಸಲಾಯಿಸಿ ಒಪ್ಪಿಸಿದ್ದಾಳೆ. ಕಂಡಕ್ಟರ್ ಬಳಿ, ತನಗೆ ನನ್ನ ಪರಿಚಯವಿದೆ ಎಂದು ಹೇಳಿ ನನ್ನ ಅಪ್ರತಿಮ ಸಾಹಸವನ್ನು ವಿವರಿಸಿ ವಾಪಸ್ ಕಮನೆಗೆ ಕರೆತರಲು ನೋಡಿದಾಗ ಸಹಜವಾಗಿಯೇ ಕಂಡಕ್ಟರ್ ಆಕೆಯನ್ನ ತಡೆದಿದ್ದಾರೆ. ಅದೇ ಬಸ್ಸಲ್ಲಿದ್ದ ಊರಿನವರ್ಯಾರೋ ಒಂದಿಬ್ಬರು, ನಾನು ಅವರಾದಿ ಡಾಕ್ಟರ್ ಮಗಳೆಂದು ಗೊತ್ತಿದ್ದವರು ಆಕೆಯ ಮಾತನ್ನು ಅನುಮೋದಿಸಿದ ಮೇಲೆಯೇ ಕಂಡಕ್ಟರ್ ಒಪ್ಪಿಕೊಂಡು ನನ್ನನು ಕರೆದುಕೊಂಡು ಹೋಗಲು ಬಿಟ್ಟಿದ್ದು. ವಾಪಸ್ ಮನೆ ಕಡೆಗೆ ಹೊರಟಿದ್ದನ್ನು ಕಂಡು ನಾನು ರಂಪ ಮಾಡಿದ್ದಿರಲೂ ಸಾಕು. ಪಾಪ ಆಕೆ ಹಾಗೂ ಹೀಗೂ ನನ್ನನ್ನ ಮನೆಗೆ ಕರೆತಂದಿದ್ದಾರೆ. ಮನೆಗೆ ಬಂದ ಮೇಲೆ ರಪಾರಪ್ ರಪಾರಪ್…. ಪಕ್ಕಾ ನಾಲ್ಕಾರು ಕಡುಬುಗಳು ಬೆನ್ನಿನ ಮೇಲೆ ಬೆಚ್ಚಗೆ ಕೆಂಪಗೆ ಬಿದ್ದಿರಲೇಬೇಕು!

ಆಗ ಅಂಜಿಕೆ ಇರಲಿಲ್ಲ ನನ್ನಲ್ಲಿ ಎಂದೆನಲ್ಲವೇ? ಅದು ಎಲ್ಲ ಮಕ್ಕಳಲ್ಲಿಯೂ ಇರುತ್ತದೋ ಇಲ್ಲಾ ನನ್ನಂಥ ಕೆಲವು ಸ್ಪೆಷಲ್ ಕ್ಯಾಡಿಡೇಟ್ಸ್ ಮಾತ್ರ ಹಾಗೆಯೋ ನನಗೆ ಗೊತ್ತಿಲ್ಲ. ಮುಂದೆ ನಾನು ಬೆಳೆಯುತ್ತಾ ಹೆಣ್ಣಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಒಂದೊಂದೇ ಅಂಜಿಕೆಗಳನ್ನು, ಸಂಕೋಚಗಳನ್ನು ಮನೆ, ಸಮಾಜ ನನ್ನೊಳಗೆ ಬಿತ್ತತೊಡಗಿತು..

ಚಿಕ್ಕವಳಿದ್ದಾಗಿನ ಇನ್ನೊಂದೆರಡು ಇಂಥವೇ ಅಂಜಿಕೆ ಅಂದರೇನೆಂದೇ ಗೊತ್ತಿರದ, ಹುಂಬುತನದ ಪ್ರಸಂಗಳಿವೆ! ಅಪ್ಪಾರು ಮೋರಟಿಗಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದು ನಿಮಗೀಗಾಲೇ ಹೇಳಿದ್ದೇನಲ್ಲ, ಒಮ್ಮೆ ಆ ಊರಿನ ಗೌಡರು ಯಂಕಂಚಿಯ ಉರುಸಿಗೆ ನನ್ನನ್ನು ಮತ್ತು ನನ್ನ ದೊಡ್ಡ ತಮ್ಮ ಜಗದೀಶನನ್ನು ತಮ್ಮ ಜೊತೆಗೆ ಎತ್ತಿನ ಬಂಡಿಯಲ್ಲಿ ಕರೆದುಕೊಂಡು ಹೋಗಿದ್ದರು. ಆಗ ಉತ್ತರ ಕರ್ನಾಟಕದಲ್ಲಿ ಜೋಡೆತ್ತಿನ ಬಂಡಿಗಳೇ ಹೆಚ್ಚಿದ್ದವು. ಒಂಟೆತ್ತಿನ ಬಂಡಿಗಳು ಎಲ್ಲೋ ಅಲ್ಲೊಂದು ಇಲ್ಲೊಂದು ಅಷ್ಟೆ. ಬಹುಶಃ ಈಗ ಎಲ್ಲೆಡೆ ಎತ್ತಿನ ಬಂಡಿಗಳು ತುಂಬಾ ಅಪರೂಪವಾಗಿವೆ ಅಥವಾ ಮಾಯವಾಗಿಯೇ ಹೋಗಿವೆ ಎಂದುಕೊಳ್ಳುತ್ತೇನೆ.

ನಾವು ಚಿಕ್ಕವರಿದ್ದಾಗ ನಮ್ಮ ತೋಟದಲ್ಲಿದ್ದ (ನಿಂಬಾಳದಲ್ಲಿ) ಎರಡೂ ಬಂಡಿಗಳು ಈಗಿಲ್ಲ. ಆಗೆಲ್ಲ ಪ್ರವಾಸ ಹೋಗಲೋ ಇಲ್ಲವೇ ಊರಿನಿಂದ ಬರುವವರನ್ನು ಕರೆತರಲೆಂದೋ ನಮ್ಮ ತೋಟದ ಮನೆಯಿಂದ ರೇಲ್ವೆ ಸ್ಟೇಶನ್ನಿಗೆ ಹೋಗುವ ಬಂಡಿಯ ತೊಟ್ಟಿಲಲ್ಲಿ ಜೋಳದ ಕಣಿಕೆಯನ್ನು ಹರವಿ ಅದರ ಮೇಲೆ ಜಮಖಾನೆ ಹಾಸಿ ಕುಳಿತುಕೊಳ್ಳಲು ಅನುವು ಮಾಡಿಕೊಳ್ಳುತ್ತಿದ್ದರು.

ಯಾರಾದರು ಅಪರೂಪದ ಅತಿಥಿಗಳು ಬರುವವರಿದ್ದರೆ ಇಲ್ಲವೇ ಶಹರದಿಂದ ಬರುವ ನಾಜೂಕಿನ ಜನರಿದ್ದರೆ ಕಣಕಿ, ಜಮಖಾನದ ಬದಲು ಹತ್ತಿಯ ಗಾದಿಯನ್ನು ಹಾಸಿ, ಒರಗಲು ತೆಕ್ಕೆಗಳನ್ನಿಟ್ಟು (ತೆಕ್ಕೆ: ಆನಿಸಿ ಕೂರಲು ತಲೆದಿಂಬಿಗಿಂತ ದಪ್ಪಗಿರುವ ಎರಡಡಿ ಅಗಲ, ಎರಡಡಿ ಎತ್ತರ ಇರುವ, ನಟ್ಟ ನಡುವೆ ಪುಟ್ಟ ಕಸೂತಿ ಇರುವ ಬಿಳಿ ಹೊದಿಕೆಯನ್ನು ಹಾಕಿದ ದಪ್ಪನೆಯ ದಿಂಬು) ಬಂಡಿಗಳು ತಯಾರಾಗಿ ನಿಲ್ಲುತ್ತಿದ್ದವು. ದೂರದ ಪ್ರವಾಸವಾದರೆ ಬಂಡಿಗೆ ಸವಾರಿ ಕಟ್ಟುತ್ತಿದ್ದರು.

ಹಾಗೆ ರೇಲ್ವೇ ಸ್ಟೇಶನ್ನಿನಿಂದ ಅತಿಥಿಗಳನ್ನು ಕರೆತರಲು ಹೋಗುವ ಬಂಡಿ ಏರಿ ನಾವೂ ಬರುತ್ತೇವೆ ಎಂದು ರಚ್ಚೆ ಹಿಡಿಯುತ್ತಿದ್ದೆವು ಮಕ್ಕಳು. ಬೇಗ ಗಮ್ಯ ತಲುಪಬೇಕೆಂದರೆ ಎತ್ತುಗಳ ಬಾಲ ತಿರುವುತ್ತಾ, ಆಗಾಗ ಅವುಗಳ ಬೆನ್ನ ಮೇಲೆ ಬಾರ್ಕೋಲು ಬೀಸುತ್ತಾ ನಡೆಯುತ್ತಿರುವ ಎತ್ತುಗಳನ್ನು ಓಡುವಂತೆ ಮಾಡುವುದು ವಾಡಿಕೆ. ಹಾಗೆಲ್ಲ ಬಾಲ ತಿರುವುದು, ಬಾರ್ಕೋಲು ಬೀಸುವುದು ಬೇಡ ಅವುಗಳಿಗೆ ನೋವಾಗುತ್ತೆ ಎಂದು ನಾನು ಅವಲತ್ತುಕೊಳ್ಳುತ್ತಿದ್ದೆ. ಬಂಡಿ ಹೊಡೆಯುವ (ಓಡಿಸುವ) ನಮ್ಮನೆ ಆಳುಗಳೋ ಇಲ್ಲವೇ ಪಂಡಿತ ಕಾಕಾ (ನನ್ನ ದೊಡ್ಡ ಚಿಕ್ಕಪ್ಪ. ಅವರ ಹೆಸರು ಪಂಡಿತ) ನಗೋರು. ಅವರಿಗೆ ನನ್ನ ಕಾಳಜಿ ಅರ್ಥವಾಗುತ್ತಿತ್ತು. ಇಲ್ಲವೆಂದಲ್ಲ. ಆದರೆ ‘ಹಂಗಂದ್ರ ಕೆಲಸ ಆಕ್ಕಾವ ಅವ್ವಿ? ದೌಡ ಹೋಗಿ ಮುಟ್ಟಬೇಕಂದ್ರ ಎತ್ಗೋಳ್ನ ಓಡ್ಸಾಕ ಹಂಗ ಮಾಡ್ಬೇಕಾಕ್ಕತಿ. ಇಲ್ಲಾಂದ್ರ ನಾವು ಸ್ಟೇಶನ್ ಮುಟ್ಟೂದ್ಯಾವಾಗ?’ ಎನ್ನುತ್ತಿದ್ದರು.

ಹಾಗೆ ಗಡಗಡ ಕುಲುಕುತ್ತಾ ಧೂಳೆಬ್ಬಿಸಿ ಓಡುವ ಬಂಡಿ ಎಂದರೆ ನಮಗೆಲ್ಲ ಮೋಜು. ಕಲ್ಲು ಮಣ್ಣಿನ ಹಾದಿಯಲ್ಲಿ ಸಾಗುವ ಬಂಡಿಯ ಕುಲುಕಿಗೆ ಮೈ ನೋಯುತ್ತದಾದರೂ ಅದರೆಡೆಗೆ ಲಕ್ಷ್ಯವೇ ಇರುತ್ತಿರಲಿಲ್ಲ. ಹಾಗಾಗಿಯೇ ಬಂಡಿಯಲ್ಲಿ ನಾವೂ ಬರ್ತೀವಿ ಎಂದು ಹಠ ಮಾಡುತ್ತಿದ್ದೆವು. ಬರುವವರು ಒಂದಿಬ್ಬರಾಗಿದ್ದರೆ ಒನ್ನಾಲ್ಕು ಮಕ್ಕಳು ಬಂಡಿ ಏರಲು ಪರವಾನಿಗಿ ಇರುತ್ತಿತ್ತು. ಇಲ್ಲವಾದರೆ, ಊರ ಮುಂಚೆ ಮಂಗಗಳಂತೆ ಬಂಡಿ ಏರಿ ಕುಳಿತ ನಮ್ಮನ್ನು ಎಳೆದು ಕೆಳಗಿಳಿಸಿಬಿಡುತ್ತಿದ್ದರು. 

ಸವಾರಿ ಕಟ್ಟಿದ ಅನೇಕ ಬಂಡಿಗಳು ಮೋರಟಗಿಯಿಂದ ಯಂಕಂಚಿಗೆ ಒಟ್ಟಿಗೆ ಹೊರಟು ನಿಂತಿದ್ದವು. ಅವುಗಳಲ್ಲಿ ಎರಡು ಗೌಡರ ಬಂಡಿಗಳು. ಬಹುಶಃ ಇದು ೧೯೭೫ ಇಲ್ಲಾ ೧೯೭೬ರಲ್ಲಿರಬೇಕು ಸರಿಯಾಗಿ ನೆನಪಿಲ್ಲ. ಯಂಕಂಚಿಯೂ ಮೋರಟಗಿಯಂತೆ ನಮ್ಮ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿರುವ ಊರು. ಈಗಿನಂತೆ ಆಗ ಬಸ್ಸುಗಳು ಅರ್ಧ ಮುಕ್ಕಾಲು ಗಂಟೆಗೊಂದರಂತೆ ಇದ್ದಿರಲಿಲ್ಲ ಮತ್ತು ಕಟ್ ಜರ್ನಿ ಸುಲಭವೂ ಆಗಿರಲಿಲ್ಲ. ಹೀಗಾಗಿ ಜನ ಎಲ್ಲೇ ಜಾತ್ರೆಗೆ ಹೋದರೂ ಎತ್ತಿನ ಬಂಡಿಗಳು ತಯಾರಾಗಿ ನಿಲ್ಲುತ್ತಿದ್ದವು.

ಯಂಕಂಚಿಯ ದಾವಲ್ ಮಲ್ಲಿಕ್ ಉರುಸ್ ಎಂದರೆ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗುವ ಜಾತ್ರೆಗಳಲ್ಲಿ ಒಂದು. ಅಲಾಬ್ ಮುಗಿದ ಎರಡು ತಿಂಗಳ ನಂತರ ಅಂದರೆ ಅಕ್ಟೋಬರ್/ನವಂಬರ್ ತಿಂಗಳಲ್ಲಿ ಯಂಕಂಚಿಯಲ್ಲಿ ಬಾಳಿ ಬದುಕಿದ ಸಂತ, ಪವಾಡಪುರುಷ ದವಲ್ ಮಲ್ಲಿಕ್ ನ ಉರುಸು ನಡೆಯುತ್ತದೆ. ಅಂದು ಯಂಕಂಚಿ ತಲುಪಿದ ಮೇಲೆ ಬಂಡಿಯಿಂದ ಕೆಳಗಿಳಿದು ನೋಡ್ತೀನಿ, ಊರಾಚೆಗಿರುವ ವಿಶಾಲವಾದ ಬಯಲಿನಲ್ಲಿ ಕಣ್ಣಿಗೆ ಕಾಣುವಷ್ಟು ದೂರದವರೆಗೂ ಸವಾರಿ ಹಾಕಿದ ಎತ್ತಿನ ಬಂಡಿಗಳು ಕೊಳ್ಳ್ ಹರ್ಕೊಂಡು ನಿಂತಿದ್ದ್ವು! ಕೊಳ್ಳ್ ಹರ್ಕೊಂಡು (ಕೊರಳು ಹರಿದುಕೊಂಡು) ಎಂದರೆ ನಿಮಗೆ ಗೊತ್ತಾಗಿರ್ಲಿಕ್ಕಿಲ್ಲ. ಬಂಡಿಯ ನೊಗದಿಂದ ಎತ್ತುಗಳನ್ನು ಬಿಡಿಸಿ ನಿಲ್ಲಿಸಿದ ಬಂಡಿಗಳು ಎಂದರೆ ಸುಲಭದಲ್ಲಿ ಅರ್ಥವಾದೀತು. ಅಷ್ಟೊಂದು ರಾಶಿ ರಾಶಿ ಎತ್ತಿನ ಬಂಡಿಗಳನ್ನು ನಾನು ನೋಡಿದ್ದು ಅದೇ ಮೊದಲ ಸಲ!

ನೊಗದಿಂದ ಬಿಡಿಸಿದ ಎತ್ತುಗಳನ್ನು ತಮ್ಮ ತಮ್ಮ ಬಂಡಿಗಳಿಗೆ ಸಮೀಪದಲ್ಲೇ ನೆಲಕ್ಕೆ ಗೂಟವೊಂದನ್ನು ಜಡಿದು ಅವುಗಳನ್ನು ಕಟ್ಟಿ ಮೇವು ಹಾಕಿರುತ್ತಿದ್ದರು. ಹತ್ತಿರದಲ್ಲಿ ಹರಿಯುವ ಹಳ್ಳಕ್ಕೆ/ಕೆರೆಗೆ ಎತ್ತುಗಳನ್ನೊಯ್ದು, ಮೈ ತೊಳೆದು ನೀರು ಕುಡಿಸಿಕೊಂಡು ಮತ್ತೆ ಗೂಟಕ್ಕೆ ಕಟ್ಟಿರುತ್ತಿದ್ದರು. ಇನ್ನು ಮರಳಿ ಹೋಗುವವರೆಗೆ ಎತ್ತುಗಳಿಗೆ ವಿಶ್ರಾಂತಿ. ಇದೀಗ ಎತ್ತುಗಳಿಗೆ ಬಿಡುಗಡೆ ಕೊಟ್ಟ ಅದೇ ನೊಗ ತೋಳು ಚಾಚಿ ನೆಲಕ್ಕೆ ಮುಖ ಅಂಟಿಸಿಕೊಂಡು ನಿಂತರೆ, ಬಂಡಿಯ ತೊಟ್ಟಿಲ ಭಾಗ ಮೇಲೆಕ್ಕೆದ್ದು ಅದರ ಹಿಂಬದಿಗೆ ಕೂರಲು ಹಾಸಿದ ಜಮಖಾನನ್ನೇ ಪರದೆಯಂತೆ ಅಡ್ಡ ಕಟ್ಟಿದರಾಯ್ತು, ಅಲ್ಲೊಂದು ತಾತ್ಪೂರ್ತಿಕ ಖೋಲಿ ತಯಾರಾಗುತ್ತಿತ್ತು. ತಂದ ಬುತ್ತಿ ನಾಯಿ ಪಾಲಾಗದಂತೆ ಮೆರೆ ಮಾಡಲು, ಬಿಸಿಲಿಗೆ ಕುಡಿಯುವ ನೀರಿನ ಕೊಡ ಕಾಯ್ದು ಬಿಸಿಗಾದಂತೆ, ಕುಳಿತು ಉಣ್ಣಲು ಇಲ್ಲವೇ ಒಬ್ಬಿಬ್ಬರು ಕಾಲು ಚಾಚಿ ಮಲಗಲು ಅನುಕೂಲವಾಗುತ್ತಿತ್ತು ಅದರಿಂದ.

ನಾನು ಮತ್ತು ನನ್ನ ತಮ್ಮ ಬಂಡಿಯಿಂದ ಕೆಳಗಿಳಿದ ಸ್ವಲ್ಪ ಹೊತ್ತಲ್ಲೇ “ಏ ಪಪ್ಪಿ, ಪಪ್ಪಿ ಏ, ಜಗೂ ಏ ಜಗೂ” ಎಂಬ ನಮ್ಮ ಮುತ್ತ್ಯಾರ ಕೂಗು ಕಿವಿಗೆ ಬಿತ್ತು. ನೀವಿಲ್ಲಿ ಏ ಮತ್ತು ಊ ಗಳನ್ನು ಎಷ್ಟು ಜೋರಾಗಿ, ದೀರ್ಘವಾಗಿ ಎಳೆಯಲು ಸಾಧ್ಯವೋ ಅಷ್ಟು ದೀರ್ಘ ಎಳೆಯುವುದನ್ನು ಕಲ್ಪಿಸಿಕೊಳ್ಳಿ. ನಮ್ಮಲ್ಲಿ ಹೊಲ, ತೋಟಗಳಲ್ಲಿ ದೂರದಲ್ಲಿದ್ದವರನ್ನು ಜೋರಾಗಿ ಕೂಗುವುದೇ ಹೀಗೆ. ಅಚ್ಚರಿ ನನಗೆ. ಈ ಪರ ಊರಲ್ಲಿ ನಿಂಬಾಳದಲ್ಲಿರೊ ಮುತ್ತ್ಯಾರ ದನಿ ಕೇಳಲು ಹೇಗೆ ಸಾಧ್ಯ ಅಂತ.

ಮತ್ತೆ ಮತ್ತೆ ಕರೆಯುವುದನ್ನು ಕೇಳಿ ಸುತ್ತ ನೋಡಿದರೆ ನಾವು ಬಂದ ಬಂಡಿಯ ಹಿಂದೆಯೇ ನಮ್ಮ ಎರಡೂ ಬಂಡಿಗಳಿವೆ. ಅಂದರೆ ನಿಂಬಾಳದಿಂದ ಉರುಸಿಗೆ ನಮ್ಮ ಮನೆಮಂದಿಯೆಲ್ಲ ಬಂದಿದ್ದಾರೆ. ಗೌಡರ ಶ್ರೀಮತಿಯವರಿಗೆ ನಮ್ಮಜ್ಜ ಕರೆಯುತ್ತಿರುವುದನ್ನ ತೋರಿಸಿ, ಅವರ ಒಪ್ಪಿಗೆ ಪಡೆದು ಓಡಿದೆವು ನಮ್ಮವರತ್ತ. ಒಂಥರಾ ಖುಷಿ ಒಂಥರಾ ಅದ್ಯಾವುದೋ ದಿಗ್ಬಂಧನದ ಭಾವ ನನ್ನಲ್ಲಿ.

ಆಯಿ ಮುತ್ತ್ಯಾರನ್ನು ಕಂಡರೆ ನಮಗೆಲ್ಲ ಭಯ ಭಕ್ತಿ ಎರಡೂ ಇದ್ದಿದ್ದು ಇದಕ್ಕೆ ಕಾರಣ. ನಮ್ಮಿಬ್ಬರನ್ನೂ ಬರಸೆಳೆದು ಎಲ್ಲರೂ ಮುದ್ದುಗರೆದರು. ನೈವೇದ್ಯಕ್ಕೆ ತೆಗೆದಿಟ್ಟ ಮಾದಲಿಯನ್ನು ಎತ್ತಿಟ್ಟು, ನಮ್ಮಿಬ್ಬರಿಗೂ ತುಪ್ಪ ಹಾಕಿ ಮಾದಲಿ, ರವೆ ಉಂಡೆ, ಕರ್ಚಿಕಾಯಿ ಮತ್ತು ಮುರ್ಮುರಿ ಚೋಡಾ ತಿನ್ನಲು ಕೊಟ್ಟರು. ಎಲ್ಲವನ್ನೂ ಒಮ್ಮೆಲೆ ತಿನ್ನುವುದಾದರೂ ಹೇಗೆ? ಒಂದೆರಡನ್ನು ತಿಂದ ಶಾಸ್ತ್ರ ನಡೆಯುತ್ತಿದ್ದಂತೆಯೇ ದೊಡ್ಡವರು ತಮ್ಮ ಸವರುಣಿಗೆಯಲ್ಲಿ ವ್ಯಸ್ಥರಾದರು.

‘ಆಯಿ ನಾವು ಉರುಸ್ ನೋಡಾಕ ಹೋಗೂನು?’ ನನ್ನಜ್ಜಿಯನ್ನು ಕೇಳಿದೆ. ಹಾಗೆ ನೋಡಿದರೆ ಅಜ್ಜನಿಗಿಂತ ಅಜ್ಜಿಯನ್ನು ಕಂಡರೇ ನಮಗೆಲ್ಲ ಹೆಚ್ಚು ಭಯ. ತುಂಬಾ ಕಟ್ಟುನಿಟ್ಟಿನ, ಶಿಸ್ತಿನ ಮಹಿಳೆಯಾಗಿದ್ದರು ಅವರು.

‘ಬರೇ ಸಣ್ಣೋರು ಹೋಗೂದು ಬ್ಯಾಡ, ಆಮ್ಯಾಲೆ ಎಲ್ಲಾರೂ ಕೂಡೆ ಹೋಗೂನಂತ.’

ನಾನು ಮುಖ ಚಿಕ್ಕದು ಮಾಡಿಕೊಂಡು, ಹೆದರುತ್ತಲೇ ‘ಆಯೀ…’ ಎಂದೆ.

ಪಾಪ ಅನಿಸಿರಬೇಕು ಆಯಿಗೆ. ‘ಆತು. ಇಲ್ಲೇ ಸ್ವಲ್ಪ ಮುಂದಕ್ಕ ಹೋಗಿ ನೋಡ್ರಿ. ಭಾಳ ಮುಂದ ಹೋಗಬ್ಯಾಡ್ರಿ’ ಎಂದು ತಮ್ಮ ಕಣ್ಣಳತೆಯ ದೂರ ತೋರಿ ತಾಕೀತು ಮಾಡಿದರು. ಹೂಂ ಎಂದವಳೇ, ಎಂದು ತಮ್ಮನ ಕೈಹಿಡಿದುಕೊಂಡು ಅವರು ತೋರಿದ ಜಾಗದೆಡೆಗೆ ನಡೆದೆ. ಅಲ್ಲಿ ನಿಂತು ನೋಡಿದರೆ ಆ ಜಾತ್ರೆಯಲ್ಲಿ ಹಾಕಿದ ಚಿರಕಿಗಾಣ, ತೊಟ್ಟಿಲ ಗಾಣ ಇತ್ಯಾದಿಗಳೆಲ್ಲ ದೂರದಲ್ಲಿ ಕಾಣತೊಡಗಿದವು. ಅವುಗಳ ಆಕರ್ಷಣೆ ತಡೆಯದಾಯಿತು. ಹಿಂದಿರುಗಿ ನೋಡಿದೆ. ದೊಡ್ಡವರು ಏನೇನೋ ಹೊಂದಿಸಿಕೊಳ್ಳುತ್ತಿದ್ದಾರೆ. ಉರುಸಲ್ಲಿ ಊದು ಹಾಕಲು, ನಮಗೆ ಖರ್ಚು ಮಾಡಲು ಸೇರಿಸಿ ಅಪ್ಪಾ ಕೊಟ್ಟಿದ್ದ ಇಪ್ಪತ್ತು ರೂಪಾಯಿ ತಮ್ಮನ ಹಾಫ್ ಚಡ್ಡಿಯ ಜೇಬಲ್ಲಿತ್ತು.

‘ಬಾ ಜಗು, ಚಿರ್ಕಿಗಾಣದ ಹಂತ್ಯಾಕ ಹೋಗೂನು’ ಎಂದು ತಮ್ಮನೊಂದಿಗೆ ಜಾತ್ರೆಯ ಗದ್ದಲದೊಳಗೆ ನುಗ್ಗಿದೆ. ಚಿರಕಿ ಗಾಣ ಕಂಡ ಕಡೆ ಸ್ವಲ್ಪ ದೂರ ನಡೆದು ತಲೆ ಎತ್ತಿ ನೋಡಿದರೆ, ಅಲ್ಲಿ ಚಿರ್ಕಿಗಾಣ ತೊಟ್ಟಿಲು ಕಾಣುತ್ತಲೇ ಇಲ್ಲ! ಇನ್ನೂ ಮುಂದಿರಬೇಕೆಂದು ಹಾಗೇ ಅರಸುತ್ತಾ ನಡೆದೆ.

‘ಅಕ್ಕಾ ನಡೀ ವಾಪಸ್ ಹೋಗೂನು, ಕಾಲು ನೂಸಾಕತ್ತಾವು’ ತಮ್ಮ ಅಳತೊಡಗಿದ.

‘ಇನ್ನೊಂದೀಟ ಮುಂದ ಹೋದ್ರ ಸಿಗಬೋದು ಬಾ’ ಎನ್ನುತ್ತಾ ಅವನನ್ನೆಳೆದುಕೊಂಡು ಮುನ್ನಡೆದೆ. ಹಾಗೆ ನಡೆಯುತ್ತಾ ನಾವಿಬ್ಬರೂ ಜಾತ್ರೆಯಲ್ಲಿ ಕಳೆದುಹೋದೆವು.

‍ಲೇಖಕರು Avadhi

June 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗ್ರೇಟ್..!

ಗ್ರೇಟ್..!

2 ಪ್ರತಿಕ್ರಿಯೆಗಳು

  1. ವಿಶ್ವನಾಥ ಎನ್ ನೇರಳಕಟ್ಟೆ

    ನಮಸ್ಕಾರ ಮೇಡಮ್. ಸಿನಿಮಾ ನೋಡುವುದಕ್ಕೆ ಬಸ್ಸಿನಲ್ಲಿ ಏಕಾಂಗಿಯಾಗಿ ಹೊರಟ ನೀವು ಮರಳಿ ಮನೆಸೇರಿದ್ದು, ಜಾತ್ರೆಗೆ ಹೊರಟದ್ದು- ಈ ವಿವರಗಳು ಅದ್ಭುತ ಅನುಭವವನ್ನು ಒದಗಿಸಿಕೊಟ್ಟವು. ಜಾತ್ರೆಯಲ್ಲಿ ಕಳೆದುಹೋದ ನೀವೂ, ತಮ್ಮನೂ ಮರಳಿ ಹೆತ್ತವರ ತೋಳು ಸೇರಿದ್ದನ್ನು ಓದುವ ನಿರೀಕ್ಷೆಯಲ್ಲಿ ನಾನಿದ್ದೇನೆ.

    ಪ್ರತಿಕ್ರಿಯೆ
    • Akshata Deshpande

      ತುಂಬಾ ಧೈರ್ಯವಂತ್ರು. ಇಲ್ಲ ಮಕ್ಕಳಲ್ಲೂ ಈ ಧೈರ್ಯ ಇರುತ್ತೆ. ಬರ್ತಾ ಬರ್ತಾ ದೊಡ್ಡವರು ಆಧಾಗೆ ಧೈರ್ಯ ಕಡಿಮೆ ಆಗುತ್ತೆ. ನೀವು ಬರೆದಿರುವ ಇಲ್ಲ ಪ್ರಸಂಗಗಳು ಕಣ್ಣಿಗೆ ಕಟ್ಟಿದಂತಿವೆ.. ಉತ್ತಮವಾದ ಬರಹ. ಮುಂದಿನ ಬರಹಕ್ಕಾಗಿ ಕಾದಿರುವೆ

      ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Akshata DeshpandeCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: