ಚಿಕ್ ಚಿಕ್ ಸಂಗತಿ: ನಿಸಾರ್ ಅಹ್ಮದ್ ಯಾಕೆ ಸುಳ್ಳು ಹೇಳ್ತೀರಾ..!!

 

ಈ ಬರಹದಲ್ಲಿ ನಿಸಾರ್ ಅಹ್ಮದ್ ಇಲ್ಲ.

ಆದರೆ ನಿಸಾರ್ ಅಹ್ಮದ್ ಇದ್ದಾರೆ 

ನಿಸಾರ್ ಅಹ್ಮದ್ ಅವರ ಅತ್ಯಂತ ಜನಪ್ರಿಯ ಕವಿತೆಗಳಲ್ಲಿ ಒಂದಾದ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಕವಿತೆ ನನ್ನನ್ನು ತುಂಬಾ ಕಾಡಿತ್ತು.

ಅದರ ನೆನಪಲ್ಲೇ ಹುಟ್ಟಿದ್ದು ಈ ಬರಹ 

ನನ್ನ ಚಿಕ್ ಚಿಕ್ ಸಂಗತಿ ಸರಣಿಯಲ್ಲಿ ಈ ಹಿಂದೆ ಪ್ರಕಟವಾಗಿತ್ತು.

 

ಜಿ ಎನ್ ಮೋಹನ್ 

”ಅಮ್ಮ ನಾನ್ಯಾಕಮ್ಮಾ ಕೂದಲು ಕಟ್ ಮಾಡಿಸ್ಕೋಬಾರ್ದು’
ಅಮ್ಮನಿಗೆ ಇದೊಂದು ಎಂಟನೆಯ ಅದ್ಭುತ

ಇದುವರೆಗೂ ಕೂದಲು ಕಟ್ ಮಡಿಸಬೇಕಾದರೆ ಅವಳಿಗೆ ದಮ್ಮಯ್ಯ ಗುಡ್ಡೆ ಹಾಕಬೇಕಿತ್ತು
ಒಂದು ವಾರ ಮೊದಲಿನಿಂದಲೇ ರೆಡಿ ಮಾಡಬೇಕಿತ್ತು ಅವಳಿಗೆ ಪೂಸಿ ಹೊಡೆಯಲು
ಅವಳಿಗೆ ಬೇಕು ಬೇಕಾದ ಬರ್ಗರ್, ಐಸ್ ಕ್ರೀಮ್, ಬಾರ್ಬಿ ಎಲ್ಲಾ ಕೊಡಿಸಬೇಕಿತ್ತು
ಅಂತಹದ್ದರಲ್ಲಿ ಈ ದಿನ ಅವಳೇ ಮುಂದಾಗಿ ”ಯಾಕೆ ಕೂದಲು ಕಟ್ ಮಾಡಿಸ್ಕಬಾರ್ದು” ಅಂತ ಕೇಳ್ತಿದ್ದಾಳೆ ಅಂದ್ರೆ…!!

ಸೂರ್ಯ ಏನಾದರೂ ಇವತ್ತು ಪಶ್ಚಿಮದಲ್ಲಿ ಹುಟ್ಟಿದ್ದಾನಾ ಅಂತ ನೋಡಲು ಅಮ್ಮ ಆಚೆ ಹೆಜ್ಜೆ ಇಟ್ಟಿದ್ದಳು
ಆಗ ಅವಳು ”ಅಮ್ಮ ನನ್ನ ಕ್ಲಾಸ್ ಮೇಟ್ ಗೆ ಕೂದಲೇ ಇಲ್ಲ, ಅವಳಿಗೆ ಕೂದಲೇ ಬರೋಲ್ವಂತೆ..
ನನ್ನ ಕೂದಲು ಕಟ್ ಮಾಡಿ ಅವಳಿಗೆ ಕೊಟ್ರೆ ಇಬ್ಬರಿಗೂ ಕೂದಲು ಇರುತ್ತೆ ಅಲ್ವಾಮ್ಮಾ” ಅಂದಳು

ಆಗಿದ್ದಿದ್ದು ಇಷ್ಟೇ
ಕೊಲರಾಡೋದ ಬ್ರೂಮ್ ಫೀಲ್ಡ್ ನ ಮೆರಿಡಿಯನ್ ಎಲಿಮೆಂಟರಿ ಶಾಲೆಯ ಹುಡುಗಿಯ ಮೇಲೆ ಕ್ಯಾನ್ಸರ್ ಧಾಳಿ ಮಾಡಿತ್ತು.
ನಿರಂತರ ತಪಾಸಣೆ, ಚಿಕಿತ್ಸೆಯಿಂದ ಆ ಪುಟ್ಟ ಹುಡುಗಿ ಕುಗ್ಗಿಹೋಗಿದ್ದಳು
ಶಾಲೆಗೆ ಬರುವ ವಿಶ್ವಾಸವೇ ಕುಗ್ಗಿ ಹೋಗಿತ್ತು. ನಗು ಎನ್ನುವುದು ಹತ್ತಿರಕ್ಕೆ ಸುಳಿದು ವರ್ಷಗಳೇ ಆಗಿ ಹೋಗಿತ್ತು
ತಲೆಯಲ್ಲಿ ಕೂದಲಿಲ್ಲದೆ ಬೀದಿಗೆ ಬರಲೂ ಆ ಹುಡುಗಿ ಹಿಂಜರಿಯುತ್ತಿದ್ದಳು

ಆಗಲೇ ಅವಳ ಕ್ಲಾಸ್ ಮೇಟ್ ಗೆ ಈ ಐಡಿಯಾ ಬಂದಿದ್ದು
ಈ ಐಡಿಯಾ ಇವಳಿಗೆ ಹೇಗೆ ಬಂತಪ್ಪಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದ ಅಮ್ಮ
ವಿಷಯ ಗೊತ್ತಾದವಳೇ ”ನೀನೊಬ್ಬಳೇ ಯಾಕೆ ನಾನೂ ರೆಡಿ” ಅಂದಳು

ಇಬ್ಬರೂ ಈ ಕಾರಣಕ್ಕಾಗಿ ತಲೆ ಕೂದಲಿಗೆ ಕತ್ತರಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಶಾಲೆಗೆ ಗೊತ್ತಾಯಿತು,
ಶಾಲೆಯ ಮಕ್ಕಳಿಗೂ, ಅವರ ಅಮ್ಮಂದಿರು ಅಪ್ಪಂದಿರಿಗೂ ಸುದ್ದಿ ಹರಡಿತು.
ಅರೆ ನಮ್ಮ ಮಕ್ಕಳ ಹೇರ್ ಕಟ್ ಕೂಡಾ ಮಾಡಿಸೋಣ ಅದಕ್ಕೇನಂತೆ ಎಂದು ಮುಂದೆ ಬಂದರು.
ಆಮೇಲೆ ಮಕ್ಕಳದ್ದು ಮಾತ್ರ ಯಾಕೆ ನಮ್ಮದೂ ಆಗಿಹೋಗಲಿ ಎಂದು ಸಜ್ಜಾದರು.

ಒಂದು ಒಂದು ನೂರೊಂದು ಆಯಿತು
ಶಾಲೆಯ ಮಕ್ಕಳೇ ಸಜ್ಜಾಗಿದ್ದಾರೆ ಎಂದಾಗ ಅವರ ಟೀಚರ್ ಗಳೂ ಓಕೆ ಎಂದರು. ಮುಖ್ಯೋಪಾಧ್ಯಾಯಿನಿ ನಾನೂ ರೆಡಿ ಎಂದು ಗ್ರೀನ್ ಸಿಗ್ನಲ್ ಕೊಟ್ಟರು
ಮಕ್ಕಳು ಕಟಿಂಗ್ ಮಾಡಿಸಿಕೊಳ್ಳಲು ಕಟಿಂಗ್ ಶಾಪ್ ಗೆ ಹೋದಾಗ ಅಲ್ಲಿನವರಿಗೂ ವಿಷಯ ಗೊತ್ತಾಯ್ತು.
ಸರಿ ನೀವು ಪುಟಾಣಿಗಳೇ ಇಷ್ಟು ಮಾಡುವುದಾದರೆ ನಾವ್ಯಾಕೆ ಹಿಂದೆ ಎಂದು ಆ ಕ್ಷೌರಿಕರು ಉಚಿತ ಕ್ಷೌರ ಮಾಡುವ ಪ್ರಾಮಿಸ್ ಮಾಡಿದರು

ಆ ಪುಟ್ಟ ಹುಡುಗಿ ಮಾರ್ಲೀ ಪ್ಯಾಕ್ ಶಾಲೆಗೆ ಬಂದಾಗ ಇಡೀ ಶಾಲೆಯ ಸಭಾಂಗಣದಲ್ಲಿ ಹೇರ್ ಕಟಿಂಗ್ ಹಬ್ಬ ನಡೆಯುತ್ತಿತ್ತು.
ವೇದಿಕೆಯ ಮೇಲೆ ಕಟಿಂಗ್, ಸಭಾಂಗಣದಲ್ಲಿ ಕೂದಲು ಬೋಳಿಸಿಕೊಳ್ಳಲು ಸಜ್ಜಾದ ಮಕ್ಕಳು
ಮಾರ್ಲೀ ಮುಖದಲ್ಲಿ ದೊಡ್ಡ ಬೆರಗು ಮೂಡಿದ್ದೇ ತಡ ಎಲ್ಲರಿಗೂ ಉತ್ಸಾಹ ಬಂತು
ಪ್ರತಿಯೊಬ್ಬರೂ ಅವಳ ಜೊತೆ ಆಟ ಆಡುತ್ತಲೇ ಕಟಿಂಗ್ ಮಾಡಿಸಿಕೊಂಡರು

ಕೊನೆಗೆ ಒಂದು ಬಾಕಿ ಇತ್ತು ಹೆಡ್ ಮಿಸ್ ದು.
ಆಗ ಎಲ್ಲಾ ನಿರ್ಧಾರ ಮಾಡಿದರು. ಹೆಡ್ ಮಿಸ್ ಕೂದಲನ್ನ ಈ ಮಾರ್ಲಿಯೇ ಕತ್ತರಿಸಲಿ ಅಂತ
ಮಿಸ್ ತಲೆ ಗುಂಡಾಗುವವರೆಗೂ ಹುಡುಗಿ ಕೇಕೆ ಹಾಕಿ ನಗುತ್ತಾ ಚಪ್ಪಾಳೆ ತಟ್ಟುತ್ತಾ ಕತ್ತರಿ ಆಡಿಸುತ್ತಾ ಹೋದಳು

“Be Bold, Be Brave, Go Bald.” ಅನ್ನೋ ಟ್ಯಾಗ್ ಲೈನ್ ಸಹಾ ಹುಟ್ಟಿಕೊಳ್ತು

ಮಾರ್ಲೀ ಗೆ ಆದ ಅಷ್ಟೇ ಖುಷಿ ಮುಹರೆಂ ಗೂ ಆಗಿತ್ತು, ಇಸ್ತಾಂಬುಲ್ ನಲ್ಲಿ
ಮಾರ್ಲೆಂ ಗೆ ಕಿವಿ ಏನಂದ್ರೆ ಏನೂ ಕೇಳಿಸೋದಿಲ್ಲ
ಮಾತಾಡೋಕಂತೂ ಆಗೋದೇ ಇಲ್ಲ
ಅಪಾರ್ಟ್ಮೆಂಟ್ ನಿಂದ ಆಚೆ ಬಂದ್ರೆ ಸಾಕು ಮುದುಡಿ ಹೋಗ್ತಿದ್ದ
ಮನೆ ಬಾಗಿಲು ಯಾರಾದ್ರೂ ತಟ್ಟಿದರೆ ಸಾಕು ಓಡಿ ಹೋಗಿ ರೂಮ್ ಸೇರಿಕೊಳ್ತಿದ್ದ
ಲಿಫ್ಟ್ ನಲ್ಲಿ, ರೋಡ್ ನಲ್ಲಿ, ಬಸ್ ನಲ್ಲಿ ಹೀಗೆ ಎಲ್ಲಿ ಯಾರಾದ್ರೂ ಮಾತಾಡಿಸಿಬಿಡ್ತಾರೋ ಅಂತ ಕುಗ್ಗಿ ಹೋಗ್ತಿದ್ದ

ಒಂದು ದಿನ ಹೀಗೆ ಮೈ ಮುದುಡಿಕೊಂಡೇ ಆಚೆ ಬಂದ. ವಾಕಿಂಗ್ ಗೆ ಹೋಗ್ಬೇಕಿತ್ತು
ಅಪಾರ್ಟ್ಮೆಂಟ್ ಲಿಫ್ಟ್ ನಿಂದ ಇನ್ನೂ ಆಚೆ ಬಂದಿಲ್ಲ ಎದುರಿಗಿದ್ದ ಅಂಕಲ್ ಒಂದು ಶಬ್ದ ಹೊರಡಿಸಲಿಲ್ಲ
ಬದಲಿಗೆ ಸಂಜ್ಞೆಯಲ್ಲೇ ‘ಎಲ್ಲಿಗೆ’ ಅಂದ್ರು. ಇವನು ಕಣ್ಣು ಬಿಟ್ಟುಕೊಂಡೇ ಇದ್ದ

ನಾಲ್ಕು ಹೆಜ್ಜೆ ಮುಂದೆ ಬಂದ್ರೆ ಸೆಕ್ಯೂರಿಟಿ ಗಾರ್ಡ್ ‘ಕಾಫಿ ಕುಡಿದ್ರಾ’ ಅಂತ ಸಂಜ್ಞೆಯಲ್ಲೇ ಕೇಳಿದ
ಇನ್ನೂ ನಾಲ್ಕು ಹೆಜ್ಜೆ ಬಂದ್ರೆ ಅಪಾರ್ಟ್ಮೆಂಟ್ ನ ಚಿಳ್ಳೆಗಳು ‘ಅಂಕಲ್ ಹೌ ಆರ್ ಯು’ ಅಂತ ಸಂಜ್ಞೆಯಲ್ಲೇ ಕೇಳಿದ್ರು
ದೂರದಲ್ಲಿ ಜಿಮ್ ನಲ್ಲಿದ್ದ ಹುಡುಗಿಯರು ‘ನಿನ್ನ ಜೊತೆ ನಾವೂ ಬರ್ಬೋದಾ ವಾಕಿಂಗ್ ಗೆ’ ಅಂತ ಸಂಜ್ಞೆಯಲ್ಲೇ ಕೇಳಿದ್ರು
ಪ್ರತಿಯೊಬ್ಬರೂ ಪರ್ಫೆಕ್ಟ್ ಆಗಿ ಸಂಜ್ಞೆ ಬಳಸ್ತಿದ್ರು

ಇಡೀ ಅಪಾರ್ಟ್ಮೆಂಟ್ ನಲ್ಲಿ ಸದಾ ಗದ್ದಲ, ಕೂಗು ಕೇಕೆ, ಹರಟೆ
ಎಲ್ಲರೂ ಬೆಳಗ್ಗೆಯಿಂದ ಸಂಜೆಯವರೆಗೂ ಹಕ್ಕಿಗಳ ಹಾಗೆ ಚಿಲಿ ಪಿಲಿ, ಚಿಲಿ ಪಿಲಿ ಅಂತಿದ್ರು
ಆದರೆ ಇವನೊಬ್ಬನೇ ಹೊರಗಡೆ ಬರದೇ ರೂಮಿನಲ್ಲಿ ಸೇರಿ ಹೋಗ್ತಿದ್ದ
ಆಗಲೇ ಅಪಾರ್ಟ್ಮೆಂಟ್ ನ ಎಲ್ಲರೂ ಮಾತಾಡಿಕೊಂಡಿದ್ದು

ಕೋಚ್ ನೇಮಕ ಆಯ್ತು.
ವಾರಗಳ ಕಾಲ ಮಕ್ಕಳು ಮುದುಕರು ಮನೆಯವರು ಆಳುಗಳು ಅಂತ ನೋಡದೆ ಎಲ್ಲರೂ ಸೈನ್ ಲ್ಯಾಂಗ್ವೇಜ್ ಕಲಿತುಕೊಂಡ್ರು

ಎಲ್ಲರೂ ಮಾತಾಡಿಕೊಂಡು ಒಂದು ದಿನ ಮಾತು ಬಾರದ ಆತನಿಗಾಗಿ ತಾವು ಮಾತು ಕಳೆದುಕೊಳ್ಳಲು ನಿರ್ಧರಿಸಿದರು
ಈಗ ಅವನೂ ಅಷ್ಟೇ ನಗುವಿನ ಬಗ್ಗೆ, ಮೈತುಂಬಾ ಉತ್ಸಾಹ
ಎಲ್ಲರ ಜೊತೆ ಆಡ್ತಾನೆ ಓಡ್ತಾನೆ
ಯಾಕೆಂದ್ರೆ ಈಗ ಅಪಾರ್ಟ್ಮೆಂಟ್ ನಲ್ಲಿರುವ ಯಾರಿಗೂ ಮಾತು ಬರುವುದಿಲ್ಲ
ಅವನೊಬ್ಬನಿಗಾಗಿ ಎಲರೂ ಮಾತನ್ನು ಕತ್ತರಿಸಿ ಊರ ಆಚೆಗೆ ಎಸೆದಿದ್ದಾರೆ

ಯಾಕೆ ಇದೆಲ್ಲಾ ಇವತ್ತು ಅಂತ ಕೇಳಿದ್ರಾ
ಮನೆಯಲ್ಲಿದೆ ಒಂದಿಷ್ಟು ಟೈಮ್ ಇತ್ತು
ಸಿಸ್ಟಮ್ ನ ಕಿವಿ ಹಿಂಡಿದೆ

ನಿಮ್ಮೊಡನಿದ್ದೂ ನಿಮ್ಮಂತಾಗದೆ.. ಬಗ್ಗಿದ ಕಡೆ ಬಾಗದೆ..

ಕೆ ಎಸ್ ನಿಸಾರ್ ಅಹ್ಮದ್ ಕವಿತೆ ಬರ್ತಿತ್ತು

ನಿಸಾರ್ ಅಹ್ಮದ್ ಯಾಕೆ ಸುಳ್ಳು ಹೇಳ್ತೀರಾ..!!

 

‍ಲೇಖಕರು Admin

May 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Shama, Nandibetta

    ಮಾನವನೆದೆಯಲಿ ಆರದೆ ಉರಿಯಲಿ ಮಾನವತೆಯ ದೀಪ… ರೇಗುವ ದನಿಗೂ ರಾಗ ಒಲಿದು ರಿಂಗಣಿಸಲಿ ಮಧುರಾಲಾಪ

    ಪ್ರತಿಕ್ರಿಯೆ
  2. ರಾಜಾರಾಂ ತಲ್ಲೂರು

    ಎರಡು ವರ್ಷಗಳ ಹಿಂದೆ ಮನೆಯಲ್ಲೇ ಕ್ಯಾನ್ಸರ್ ಮಾರಿಯ ರೌದ್ರಾವತಾರ ಕಂಡಿದ್ದೇನೆ. ನೀವಿಲ್ಲಿ ಹೇಳಿದ್ದು ಎಷ್ಟು ದೊಡ್ಡ ಸಂಗತಿ ಎಂದು ನನಗೆ ಗೊತ್ತಿದೆ.

    ಪ್ರತಿಕ್ರಿಯೆ
  3. lalitha sid

    ಇದು ಚಿಕ್ಕ ಸಂಗತಿಯಲ್ಲ. ಒಮ್ಮೊಮ್ಮೆ ನಮ್ಮ ಮಕ್ಕಳಿಗೂ ನಾವು ಮಾಡಲು ಹಿಂದೇಟು ಹೊಡೆಯಬಹುದಾದ ಕೆಲಸ. ಆ ಶಾಲೆಯ ಮಕ್ಕಳು
    ಆ ಅಪಾರ್ಟ್ ಮೆಂಟ್ ನಿವಾಸಿಗಳು ನಿಜಕ್ಕೂ ದೊಡ್ಡಮನುಷ್ಯರು.

    ಪ್ರತಿಕ್ರಿಯೆ
  4. C. N. Ramachandran

    ಪ್ರಿಯ ಮೋಹನ್: ಹಾರ್ದಿಕ ಧನ್ಯವಾದಗಳು. ಎಲ್ಲೆಲ್ಲೂ ಸ್ವಾರ್ಥವೇ ತುಂಬಿ ತುಳುಕುತ್ತಿದೆ; ಇಡೀ ವಿಶ್ವವೇ ನನ್ನ ವಿರುದ್ಧ ನಿಂತಿದೆ; ಎಂದು ಹೆಚ್ಚಿನವರು ಇಂದು ಹೃದಯಹೀನರಾಗುತ್ತಿರುವಾಗ ಇಂತಹ ಪ್ರೀತಿಯ, ಹೃದಯ ವೈಶಾಲ್ಯದ ಉದಾಹರಣೆಗಳು ನಮ್ಮೆದುರು ಇರಬೇಕು. ಅವುಗಳನ್ನು ನಮಗೆ ಕೊಟ್ಟ, ಇಂದೂ ಎಂದೆಂದೂ ಪ್ರೀತಿ-ವಾತ್ಸಲ್ಯಗಳು ಜೀವಂತವಾಗಿರುತ್ತವೆ ಎಂದು ನಮಗೆ ತೋರಿಸಿರುವ ನಿಮಗೆ ಮತ್ತೊಮ್ಮೆ ಧನ್ಯವಾದಗಳು. ಇಂತಹ ಅನೇಕ ಲೇಖನಗಳು ನಿಮ್ಮಿಂದ ಬರಲಿ –ನಮ್ಮೆಲ್ಲರ ಒಳಿತಿಗಾಗಿ. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  5. shanta

    Dodda dodda vichaaragallanna chikka chikk sangatiyalli helta iditi. Adbhuta. Manadumbi namaskaara. Intaha baraha nirantaravaagirali. Dhanyawada.

    ಪ್ರತಿಕ್ರಿಯೆ
    • Nagraj Harapanahalli.karwar

      ಬದುಕಿನಲ್ಲಿ ಪ್ರೀತಿ ವಾತ್ಸಲ್ಯಗಳೇ ಕೊನೆಯಲ್ಲಿ ಉಳಿಯುವುದು ಎಂಬ ಧ್ವನಿ ಇಲ್ಲಿ ಪ್ರಮುಖವಾದುದು. ಚೆಂದ ಬರಹ…ಸರ್‌

      ಪ್ರತಿಕ್ರಿಯೆ
  6. Moulali.A.Aikur

    ಬದುಕಿನ ಸುಂದರತೆ ಕಂಡವರು,ಸುಂದರವಾದ ಬದುಕಿಗಾಗಿ ಬದಕುತ್ತಾರೆ.ನಿಸ್ವಾರ್ಥ ಮತ್ತು‌ ಪ್ರೀತಿಪೂರ್ಣ ಬದುಕಿನ ದರ್ಶನ ಮಾಡಿಸಿದ್ದಕ್ಕಾಗಿ ಮೋಹನ್ ಸರ್ ಗೆ ಧನ್ಯವಾದಗಳು.

    ಪ್ರತಿಕ್ರಿಯೆ
  7. Jayalaxmi Patil

    ಇಂಥಾ ನೆರವುಗಳು ಅನ್ನೋದಕ್ಕಿಂತ ಇಂಥ ಸಹೃದಯ ಮನಸುಗಳು, ನೊಂದ ಎಲ್ಲರಿಗೂ ನಾವೂ ನಿಮ್ಮಂತೆಯೇ ಎಂದು ಹೇಳುವವರೆಗೆ ನಿಸಾರ್ ಅಹಮದ್ ಅವರ ಕವನ ಅಂಥ ನೊಂದವರೆಲ್ಲರ ದನಿಯಾಗುತ್ತದೆ. ತುಂಬಾ ಆರ್ದ್ರ ಮತ್ತು ಹಾಗೆ ಮಾಡಲು ಸ್ಪೂರ್ತಿ ಕೊಡುವ ಉದಾಹರಣೆಗಳನ್ನು ನೀಡಿದ್ದೀರಿ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ shantaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: