‘ಚಲೋ ದಿಲ್ಲಿಗೊಂದು ವಿರಾಮದ ಸಮಯ’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ನಿಮಗೆ ದಿಲ್ಲಿಯ ಹವೆ ತಾಕಿಬಿಟ್ಟಿದೆ ಎಂದು ಇಂದು ಯಾರಾದರೂ ಅಂದುಬಿಟ್ಟರೆ ನನಗೆ ಅಚ್ಚರಿಯಾಗುವುದಿಲ್ಲ. 

ಏಕೆಂದರೆ ಇಷ್ಟು ದೀರ್ಘಕಾಲ ದಿಲ್ಲಿಯಲ್ಲಿದ್ದುಕೊಂಡು ಇಲ್ಲಿಯ ಪ್ರಭಾವದಿಂದ ಬಿಡಿಸಿಕೊಳ್ಳುವುದು ಕಷ್ಟಸಾಧ್ಯವೇ ಹೌದು. ಹಾಗೆ ನೋಡಿದರೆ ಮನುಷ್ಯನಿಗೂ, ಮಹಾನಗರಿಗೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಒಳಗೊಳ್ಳುವ ಹಂಬಲದ ಜೊತೆಗೇ, ಅಷ್ಟಿಷ್ಟು ನಿರ್ದಯತೆಗಳು ಎರಡಕ್ಕೂ ಇವೆ. ಮಹಾತ್ವಾಕಾಂಕ್ಷೆ ಮನುಷ್ಯನಿಗೂ ಇದೆ, ಮಹಾನಗರಿಗೂ ಇದೆ. ಒಂದು ರೀತಿಯಲ್ಲಿ ಮಹಾನಗರಿ ಅನ್ನುವುದೇ ಮನುಷ್ಯನ ಮಹಾತ್ವಾಕಾಂಕ್ಷೆಗಳ ಒಂದು ದೊಡ್ಡ ಜಿಯಾಗ್ರಾಫಿಕಲ್ ಪ್ರೊಜೆಕ್ಷನ್. ಅದು ಕನಸುಗಾರರ ಪ್ರಯೋಗಶಾಲೆ, ಪರಿಶ್ರಮಿಗಳ ಅಖಾಡ. ಮಹಾನಗರಿಯನ್ನು ಸೃಷ್ಟಿಸಿದ್ದೇ ಮನುಷ್ಯನಲ್ಲವೇ! ಹೀಗಾಗಿ ತನ್ನದೇ ಗುಣಾವಗುಣಗಳನ್ನು ಮನುಷ್ಯನು ಮಹಾನಗರಿಗೂ ಧಾರೆಯೆರೆದಿದ್ದಾನೆ. 

ಮಂಗಳೂರಿನಲ್ಲಿ ತನ್ನ ಪಾಡಿಗೆ ತಾನಿದ್ದ ನನಗೆ ಜಗತ್ತನ್ನು ತೋರಿಸಿದ್ದು ದಿಲ್ಲಿ ಎಂಬ ಕೆಲಿಡೋಸ್ಕೋಪು. ಹೀಗಾಗಿ ದಿಲ್ಲಿಗೊಂದು ವಿಶೇಷ ಮಹತ್ವವು ಯಾವತ್ತಿಗೂ ಇದ್ದೇ ಇರುತ್ತದೆ. ಥೇಟು ಬದುಕಿನಂತೆ ಈ ಶಹರವು ಅಲ್ಲಲ್ಲಿ ಸೌಮ್ಯವಾಗಿಯೂ, ಅಲ್ಲಲ್ಲಿ ರೌದ್ರಾವತಾರದಲ್ಲೂ ನನಗೆ ಪಾಠಗಳನ್ನು ಕಲಿಸಿದೆ, ಕತೆಗಳನ್ನು ಹೇಳಿದೆ. ಆಗೊಮ್ಮೆ ಈಗೊಮ್ಮೆ ಜ್ಞಾನೋದಯಗಳನ್ನೂ ಕರುಣಿಸಿದೆ. ಸ್ಥಳವೊಂದರ ಜೊತೆ ಸುದೀರ್ಘವಾದ ನಂಟು ಬೆಳೆದುಬಿಟ್ಟಾಗ ಅದು ಕೇವಲ ಒಂದು ಭೌಗೋಳಿಕ ಗುರುತಾಗಿಯಷ್ಟೇ ಉಳಿಯದೆ, ಕ್ರಮೇಣ ನಮ್ಮ ವ್ಯಕ್ತಿತ್ವದ ಭಾಗವೂ ಆಗಿಬಿಡುತ್ತದೆ. ಮಹಾನಗರಿಯೊಂದು ಮನುಷ್ಯನೊಳಗೆ ಇಷ್ಟಿಷ್ಟೇ ಇಳಿಯುವುದು, ಉಳಿಯುವುದು ಹೀಗೆ. 

ದಿಲ್ಲಿಯಲ್ಲಿದ್ದುಕೊಂಡು ಕನಸುಗಳನ್ನು ಕಂಡವರು ನನಗ್ಗೊತ್ತು. ಆ ಕನಸುಗಳ ಬೆನ್ನತ್ತಿ ಯಶಸ್ವಿಯಾದವರೂ ನನಗ್ಗೊತ್ತು. ಒಂದು ಕಾಲದಲ್ಲಿ ನ್ಯೂಯಾರ್ಕಿನಂತಹ ಮಹಾನಗರಿಗಳಿಗಿದ್ದ ಪ್ರಾಮುಖ್ಯತೆಯು ಇಂದು ದಿಲ್ಲಿಯಂಥಾ ಶಹರಗಳಿಗೂ ಬಂದುಬಿಟ್ಟಿದೆ. ಪ್ರತೀವರ್ಷವೂ ಹೆಚ್ಚಾಗುತ್ತಲಿರುವ ಜನಸಂದಣಿಯ ಒಳಪ್ರವಾಹ, ಜಾಗತಿಕ ಮಟ್ಟದಲ್ಲಿ ಕಾಸ್ಮೋಪಾಲಿಟನ್ ಆಗುತ್ತಿರುವ ಮಹಾನಗರಿಯ ಬೆಳವಣಿಗೆಗಳು ಇದಕ್ಕೆ ಒಳ್ಳೆಯ ನಿದರ್ಶನ. ದಿಲ್ಲಿಯಲ್ಲಿ ಕರ್ನಾಟಕದ ಮಂದಿ ತಮ್ಮ ಸಂಸ್ಕೃತಿಯ ಘಮವನ್ನು ಎಷ್ಟು ಹಬ್ಬಿಸಿದ್ದಾರೆಯೋ, ಅದೇ ಮಾದರಿಯಲ್ಲಿ ಕಾಂಗೋ ಮಂದಿ ಕೂಡ ತಮ್ಮದೇ ಆದ ಛಾಪನ್ನು ಒಂದಿಲ್ಲೊಂದು ವಿಧಾನದಲ್ಲಿ ಈ ಶಹರದಲ್ಲಿ ಉಳಿಸಿದ್ದಾರೆ. ಹೀಗೆ ದಿಲ್ಲಿಯ ವಿಕಾಸದಲ್ಲಿ ಎಲ್ಲರ ಪಾಲೂ ಇದೆ. ದಿಲ್ಲಿಯೆಂದರೆ ನೂರಾರು ವೈವಿಧ್ಯಗಳ ಒಂದು ಅದ್ಭುತ ಕಾಕ್ಟೇಲ್.  

ದಿಲ್ಲಿ ಸೇರಿದಂತೆ ಹಲವು ಶಹರಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾದ ದಂಗೆಗಳ ಬಗ್ಗೆ ಸಾಕ್ಷ್ಯಚಿತ್ರವೊಂದು ಹೇಳುತ್ತಿತ್ತು. ಇವೇ ಸಾಮಾಜಿಕ ಜಾಲತಾಣಗಳು ಅಪೂರ್ವ ರೀತಿಯಲ್ಲಿ ನಮ್ಮೆಲ್ಲರನ್ನು ಬೆಸೆದಿದ್ದೂ ಇದೆ. ಕೆಲ ವರ್ಷಗಳ ಹಿಂದೆ ಸಮಾನಮನಸ್ಕ ಸೃಜನಶೀಲರ ಗುಂಪೊಂದು ಪತ್ರ ಬರೆಯುವ ಅಭಿಯಾನವನ್ನು ಕೈಗೊಂಡಿತ್ತು. ನಮಗೆ ಯಾವ ರೀತಿಯಲ್ಲೂ ಪರಿಚಯವಿರದ ವ್ಯಕ್ತಿಯೊಬ್ಬನಿಗೆ ಬರೆಯುವ ಪತ್ರವದು. ಅಸಲಿಗೆ ನಮ್ಮ ಪತ್ರವು ಯಾರ ಕೈಸೇರುತ್ತದೆಂಬುದು ಇಲ್ಲಿ ಸ್ವತಃ ನಮಗೇ ಗೊತ್ತಿರುವುದಿಲ್ಲ. ಹೀಗೆ ನಾವು ಬರೆದಿದ್ದ ಜೀವನಪ್ರೀತಿಯ ಪತ್ರಗಳು ಮುಂದೆ ಇಸ್ಲಾಮಾಬಾದಿನ ಕೆಫೆಯೊಂದನ್ನು ತಲುಪಿದ್ದವು ಎಂದು ಕೇಳಿದ ನೆನಪು. ಯಾರೋ, ಎಲ್ಲೋ ಹಚ್ಚಿರುವ ದೀಪಗಳು ಹೀಗೆ ಇನ್ನೆಲ್ಲೋ ಕೆಲ ಮಂದಿಯ ದಿನಗಳನ್ನು ಬೆಳಗುವುದೂ ಕೂಡ ಇಲ್ಲಿರುವ ಯುವಮನಸ್ಸುಗಳು ಮಾಡಬಲ್ಲ ಅದ್ಭುತಗಳಲ್ಲೊಂದು. 

ನನ್ನ ದಿಲ್ಲಿಯ ಬದುಕಿಗೂ, ದಿಲ್ಲಿ ಕಾಲಮ್ಮಿಗೂ ಇರುವ ಸಾಮ್ಯತೆಗಳು ಹಲವು. ಮಹಾ ಎಂದರೆ ಎಷ್ಟು ದಿನ ಇಲ್ಲಿರುತ್ತೇವೆ ಹೇಳಿ ಎಂದು ದಿಲ್ಲಿಯ ಬಗ್ಗೆ ನಾವು ಮಾತಾಡಿಕೊಳ್ಳುತ್ತಿದ್ದ ದಿನಗಳಿದ್ದವು. ನಾವೆಲ್ಲಾ ಹೀಗೆ ಬಾಯಿಪಟಾಕಿಯ ಮಾತುಗಳನ್ನಾಡಿದ್ದೇ ಬಂತು. ಈ ಗುಂಗಿನಲ್ಲಿ ದಿಲ್ಲಿಯ ನಂಟಿಗೆ ಆಗಲೇ ಒಂದು ದಶಕದ ಹರೆಯ. ಇತ್ತ ಒಂದೆರಡು ತಿಂಗಳು ದಿಲ್ಲಿಯ ಬಗ್ಗೆ ಬರೆಯೋಣವೆಂದು ಹುಟ್ಟಿಕೊಂಡ ಅಂಕಣವು ಇಂದು ಭರ್ಜರಿ ಐವತ್ತೈದು ವಾರಗಳವರೆಗೆ ಬಂದಿದೆ. ಒಂದಲ್ಲಾ ಒಂದು ರೀತಿಯಲ್ಲಿ ಓದುಗರನ್ನು ತಟ್ಟಿದೆ. ಓರ್ವ ಬರಹಗಾರನಿಗಂತೂ ಜೀನಾ ಇಸೀ ಕಾ ನಾಮ್ ಹೈ! 

ಚಲೋ ದಿಲ್ಲಿ ಅಂಕಣವು ಹುಟ್ಟಿಕೊಂಡಿದ್ದು ದಿಲ್ಲಿಯ ಬಗೆಗಿರುವ ಸಾಮಾನ್ಯ ನೋಟದಾಚೆಗೂ ಇರುವ ಬದುಕಿನ ಅನಾವರಣದ ತುಡಿತಕ್ಕಾಗಿ. ಹೀಗಾಗಿ ಸಾಮಾನ್ಯವಾಗಿ ಪಟ್ಟಿ ಮಾಡಲಾಗುವ ದಿಲ್ಲಿಯ ಪ್ರಸಿದ್ಧ ತಾಣಗಳ ಬಗೆಗಿನ ನೀರಸ ಮಾಹಿತಿಗಿಂತ ಹೆಚ್ಚಾಗಿ ದಿಲ್ಲಿಯೊಳಗಣ ಬದುಕಿನ ಅಸಂಖ್ಯಾತ ಆಯಾಮಗಳು, ಇಲ್ಲಿಯ ಜನರು, ಅವರ ನಿಟ್ಟುಸಿರುಗಳೇ ಲೇಖನಗಳ ರೂಪದಲ್ಲಿ ಇಲ್ಲಿ ಸರಣಿಯಾಗಿ ಬಂದಿವೆ. ಸದ್ಯ ಈ ಶಹರದಲ್ಲಿ ನೆಲೆಸಿದ್ದೇನೆ ಎಂಬ ಹಿತವಾದ ನೆಪವನ್ನಿಟ್ಟುಕೊಂಡು ಇಲ್ಲಿಯ, ಇಲ್ಲಿಯವರ ಕತೆಗಳನ್ನು ನನ್ನವೇ ಕತೆಗಳನ್ನಾಗಿಸಿ ಚಲೋ ದಿಲ್ಲಿ ಅಂದುಬಿಟ್ಟವನು ನಾನು. ಈ ನಿಟ್ಟಿನಲ್ಲಿ ಐವತ್ತೈದು ವಾರಗಳ ಸುದೀರ್ಘ ಪಯಣದ ತರುವಾಯ ಚಲೋ ದಿಲ್ಲಿ ಪಯಣಕ್ಕೀಗ ಪುಟ್ಟ ವಿರಾಮದ ಸಮಯ. 

ನನ್ನ ಬಿಡಿ ಲೇಖನಗಳಿಂದ ಹಿಡಿದು ಮಿನಿ ಸರಣಿಗಳಿಗೂ, ಸಣ್ಣಕತೆ-ಅನುವಾದಗಳಿಂದ ಹಿಡಿದು ಅಂಕಣಗಳಿಗೂ “ಅವಧಿ” ತವರುಮನೆಯಿದ್ದಂತೆ. ಒಂದಾನೊಂದು ಕಾಲದಲ್ಲಿ ಆಲಸ್ಯದ ಅವತಾರ ಪುರುಷನಂತಿದ್ದ ನನ್ನನ್ನು ‘ಅವಧಿ’ ಪಟ್ಟಾಗಿ ಕುಳಿತು ಬರೆಸಿದೆ. ಕಾಲಾನುಕ್ರಮದಲ್ಲಿ ಬೆಳೆಸಿದೆ. ‘ಚಲೋ ಚಲೋ’ ಎಂದು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬದುಕುವ ನನ್ನಂಥವರಿಗೆ ‘ಥೋಡಾ ರುಕೋ’ ಎನ್ನುವುದು ಕೊಂಚ ಕಷ್ಟವಾದರೂ ಅನಿವಾರ್ಯ. ಅದೇನೇ ಇರಲಿ. ‘ಹಾಯ್ ಅಂಗೋಲಾ!’ ಅಂಕಣದಂತೆ ಚಲೋ ದಿಲ್ಲಿಯೂ ಕೂಡ ಐವತ್ತು ವಾರಗಳ ಮೈಲುಗಲ್ಲನ್ನು ಯಶಸ್ವಿಯಾಗಿ ದಾಟಿರುವುದು ಸದಾಕಾಲ ನನ್ನ ನೆನಪಿನಲ್ಲುಳಿಯುವ ಖುಷಿಯ ಸಂಗತಿಗಳಲ್ಲೊಂದು. 

ಕತೆಗಳ ಹೊಸದೊಂದು ಬುತ್ತಿಯೊಂದಿಗೆ ಅವಧಿಯ ಅಂಗಳದಲ್ಲೇ ಮತ್ತೆ ಸಿಗೋಣವೆಂಬ ಭರವಸೆಯೊಂದಿಗೆ…

| ಮುಕ್ತಾಯ |

‍ಲೇಖಕರು Admin

October 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Ambika Idoor

    Beautifully concluded Article.. Many congratulations for this wonderful journey❤️ Looking forward for the best of best work from you..

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Ambika IdoorCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: