ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 9

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ಮೂರನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ನಾಲ್ಕನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಐದನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಆರನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಏಳನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಎಂಟನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

9

ನಾದಮಯ

ಬೆಳಗಿನ ಜಾವ ನಾನು ಪಕ್ಕದ ಬೆಡ್‌ನವರೂ ಕೇಳುತ್ತಾರೆ ಎಂಬ ಕಾರಣಕ್ಕಾಗಿ ಭಕ್ತಿ ಗೀತೆಗಳನ್ನು ಹಾಕುತ್ತಿದ್ದೆ. ಸೂರ್ಯಗಾಯತ್ರಿ ಹಾಡಿದ ‘ಜಗದೋದ್ಧಾರನಾ’ದಿಂದ ಈ ಗೀತೆಗಳ ಸರಣಿ ಪ್ರಾರಂಭ. ಈ ಭಕ್ತಿಗೀತೆಗಳದೇ ಇನ್ನೊಂದು ಲೋಕ. ಇದುವರೆಗೂ ನಾನು ಕೇಳುತ್ತಾ ಬಂದಿದ್ದ ಗೀತೆಗಳೇ ಆಗಿದ್ದರೂ ಈ ಸಂಗೀತ ಸಂಯೋಜನೆ ಹಾಡಿಕೆಯಲ್ಲಿ ಅದೆಷ್ಟು ಹೊಸತನ? ಸೂರ್ಯಗಾಯತ್ರಿ, ರಘು ವೆಲ್ಲಾಳ್ ರಂತಹ ಹನ್ನೊಂದು ಹನ್ನೆರಡು ವಯಸ್ಸಿನ ಮಕ್ಕಳ ಪ್ರತಿಭೆ ಕಲ್ಪನೆಯನ್ನೂ ಮೀರಿದ್ದಾಗಿತ್ತು.

ಜಗದೋದ್ಧಾರನ ಹಾಡನ್ನು ಅನೇಕ ಸಂಗೀತಗಾರರು ಹಾಡಿದ್ದಾರೆ. ಅತ್ಯಂತ ಸರಳವಾದ ಈ ರಚನೆ ಅತ್ತುತ್ತಮವಾದ ರಚನೆಯೂ ಹೌದು. ಅಣೋರಣೀಯ ಮಹತೋಮಹೀಯ, ಅಪ್ರಮೇಯನಾದ ಶ್ರೀಕೃಷ್ಣನು ತಾಯಿ ಯಶೋಧೆಯ ವಾತ್ಸಲ್ಯದ ಮಡಿಲಲ್ಲಿ ಕೇವಲ ಒಂದು ಮಗು ಮಾತ್ರ. ಸರಳವಾದ ಬಂಧದಲ್ಲಿ ಶ್ರೀಕೃಷ್ಣನ ವಿಶ್ವರೂಪವನ್ನೇ ಹಿಡಿದಿರಿಸಿದ ಪುರಂದರದಾಸರ ಕಾವ್ಯ ಶಕ್ತಿಯನ್ನು ಕುರಿತು ಹೆಚ್ಚಿನ ಅಧ್ಯಯನಗಳು ನಡೆದಿಲ್ಲವೆಂದೇ ನನ್ನ ಅನಿಸಿಕೆ.

ಸೂರ್ಯಗಾಯತ್ರಿ ಎಂಬ ಈ ಪುಟಾಣಿ ಹುಡುಗಿ ಈ ಹಾಡಿನ ಸತ್ವ ಸೌಂದರ್ಯವನ್ನು ಅದೆಷ್ಟು ಅದ್ಭುತವಾಗಿ ಹೊರಹೊಮ್ಮಿಸಿದ್ದಳೆಂದರೆ, ನನ್ನುನ್ನು ಬೆಳಗಿನ ಜಾವ ತನ್ನ ನಾದಸುಧೆಯಲ್ಲಿ ಮುಳುಗಿಸಿದ್ದ ಹರಿಪ್ರಸಾದ್ ಚೌರಾಸಿಯಾ ಕೊಳಲಗಾನ ಮರೆತೇ ಹೋಗುತ್ತಿತ್ತು. ನಂತರ ರಘು ವೆಲ್ಲಾಳ್, ನಂತರ ಇದೇ ವಯಸ್ಸಿನ ಇನ್ನೂ ಒಂದಿಬ್ಬರು ಮಕ್ಕಳು ಹಾಡಿದ ಕೃಷ್ಣನನ್ನು ಕುರಿತಾದ ಹಾಡುಗಳು. ಮಾಧುರ್ಯ, ಭಾವಪರವಶತೆ, ತಲ್ಲೀನತೆ ಎಂಬ ಪದಗಳಿಗೆ ಹೊಸ ವ್ಯಾಖ್ಯಾನವನ್ನೇ ಕೊಡುವಂತೆ ಅವರ ಹಾಡಿಕೆ. ಪ್ರತಿಭೆ ದೈವದತ್ತವಾದುದು ಎಂಬ ಮಾತು ಇಂಥವರನ್ನು ನೋಡಿಯೇ ಸೃಷ್ಟಿಯಾಗಿರಬೇಕು.

ನನಗೆ ಸಂಗೀತವನ್ನು ಸವಿಯುವ, ಎಂದೂ ಇಲ್ಲದಂಥ ವಿರಾಮವನ್ನು ಕೋವಿಡ್ ಒದಗಿಸಿತ್ತು. ನಾನು ಆಸ್ಪತ್ರೆ ಸೇರಿದ ಮರುದಿನವೇ ನನ್ನ ಸ್ನೇಹಿತೆಯರು ದಕ್ಷಿಣಾದಿ ಹಾಗೂ ಉತ್ತರಾದಿ ಸಂಗೀತದ ಎಲ್ಲ ದಿಗ್ಗಜರ ಆಡಿಯೋ ವೀಡಿಯೋಗಳು, ಹಳೆಯ ಹಿಂದಿ ಚಿತ್ರಗೀತೆಗಳು, ಅದರಲ್ಲಿ ಬೆಸ್ಟ್ ಆಫ್… ಎಂದು ಪ್ರಾರಂಭವಾಗುವ ಎಲ್ಲಾ ಗಾಯಕರ, ಗೀತ ರಚನಕಾರರ, ಸಂಗೀತ ಸಂಯೋಜಕರ ಸಿನಿಮಾಗಳ, ನಾಯಕ ನಾಯಕಿಯರ… ಗೀತೆಗಳ ಸರಣಿಯನ್ನೇ ಕಳುಹಿಸಿ ಬಿಟ್ಟಿದ್ದರು. ಅದೇ ಮಧುರ ಗೀತೆಗಳು, ಚಿರಪರಿಚಿತ ಸಿಗ್ನೇಚರ್ ಟ್ಯೂನ್‌ಗಳು.

ಬದುಕು ಮತ್ತೆ ಅರ್ಧಶತಮಾನದ ಹಿಂದಕ್ಕೆ ಚಲಿಸಿದಂತೆ ಆಗಿತ್ತು. ಮನಸ್ಸು ತೀರಾ ಅಲ್ಲೋಲ ಕಲ್ಲೋಲವಾದಾಗ, ಖಿನ್ನತೆಯ ಆಳಕ್ಕೆ ಇಳಿದಾಗ ಅದನ್ನು ಸ್ತಿಮಿತಕ್ಕೆ ತಂದುಕೊಳ್ಳುವ ಬಗೆ ತಿಳಿಯದೆ ಕಂಗಾಲಾಗಿ ಹೊಯ್ದಾಡುವಾಗ ಇಂಥ ಒಂದೆರಡು ಮಧುರವಾದ ಗೀತೆಗಳನ್ನು ಕೇಳಿಬಿಟ್ಟರೆ ಎಲ್ಲ ದುಗುಡ ದುಮ್ಮಾನಗಳೂ ಮಾಯವಾಗಿಬಿಡುತ್ತವೆ. ತಂಗಾಳಿ ತೀಡಿದಂತೆ, ತಾಯಿಯ ಬೆಚ್ಚನೆಯ ಹಸ್ತ ಮೃದುವಾಗಿ ಹಣೆಯನ್ನು ಸವರಿದಂತೆ ಅದೊಂದು ವಿಸ್ಮಯಕರ ಪರಿವರ್ತನೆ ನಡೆದುಬಿಡುತ್ತದೆ.

ಸಂಗೀತಕ್ಕೆ ನಿಜಕ್ಕೂ ಅಂಥ ಮಾಂತ್ರಿಕ ಶಕ್ತಿ ಇದೆ. ನಾವು ಕೃಷ್ಣ ಕಥೆಯ ಸಂದರ್ಭದಲ್ಲಿ ಮಾತ್ರ ಹಾಡು ಮತ್ತು ಸಂಗೀತಗಳೇ ಕಥಾನಾಯಕನ ವೈಶಿಷ್ಟ್ಯವಾಗಿ ಬಿಡುವುದನ್ನು, ಹಾಡಿನ ಸಂಮೋಹಕತೆಯ ಕಥೆಗಳನ್ನು ಗಮನಿಸಿದ್ದೇವೆ. ಶ್ರೀಕೃಷ್ಣನ ಕೊಳಲ ನಾದದ ಮೋಡಿಯನ್ನು ಬಣ್ಣಿಸುವ ಸಾಹಿತ್ಯವೂ ಸಾಕಷ್ಟಿದೆ.

ಬೃಂದಾವನದ ಗೋಪಿಯರು ಪಕ್ಕದ ಗಂಡನನ್ನು ತೊಟ್ಟಿಲ ಹಸುಗೂಸನ್ನು ಮರೆತು ಮುರಳೀ ನಾದಕ್ಕೆ ಮನಸೋತು ಕೃಷ್ಣನ ಕೊಳಲಗಾನ ಕರೆದತ್ತ ಹೋಗಿಬಿಡುವ ರಮ್ಯ ವರ್ಣನೆಗಳು ಕಾವ್ಯಗಳಲ್ಲಿವೆ. ಕೃಷ್ಣನ ಕೊಳಲ ಗಾನ ಸಾಂಕೇತಿಕವೂ ಹೌದು. ಎಲ್ಲ ಮನುಷ್ಯರ ಆಳದಲ್ಲೆಲ್ಲೋ ಇರುವ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಚೇತನ…’ವನ್ನು ಅದು ಆಗಾಗ ಕರೆಯುತ್ತಿರುತ್ತದೆ. ಇದೇ ರೀತಿ ಫಿನ್ಲೆಂಡಿನ ಜಾನಪದ ಮಹಾಕಾವ್ಯ ‘ಕಲೆವಲ’ವೂ ಸಹ ಹಾಡಿನ ಮೋಡಿಯೇ ಕಥೆಯ ಹಾಗೂ ಕಥಾನಾಯಕನ ವೈಶಿಷ್ಟ್ಯವಾಗಿ ಬಿಡುವ ಒಂದು ಅಪೂರ್ವ ಕಾವ್ಯ.

ಈ ಮಹಾಕಾವ್ಯವು ಚಾರಣಿಗ ಹಾಡುಗಾರರ ಕಾವ್ಯವೆಂದೇ ಪ್ರಸಿದ್ಧ. ಈ ಕಾವ್ಯದ ನಾಯಕ ವಿನ್ನಿ ಮೊಯ್ನನ್ ಜ್ಞಾನವಂತ. ವಿಖ್ಯಾತ ಹಾಡುಗಾರ. ಕಥಾ ಘಟ್ಟದ ಒಂದು ಸಂದರ್ಭದಲ್ಲಿ ಅವನು ಪೈಕ್ ಮೀನಿನ ದವಡೆ ಎಲುಬಿನಿಂದ ಕಂತೀಲ್ ಎಂಬ ತಂತಿವಾದ್ಯವನ್ನು ಮಾಡುತ್ತಾನೆ. ವಿನ್ನಿಮೊಯ್ನನ್‌ನನ್ನು ಕಂಡರೆ ಅಸೂಯೆ ಪಡುತ್ತಿದ್ದವರು ಅದೇನು ಮಹಾ ನಾವೂ ನುಡಿಸುತ್ತೇವೆ ಎಂದು ಕೈಗೆತ್ತಿಕೊಂಡು ವಿಫಲರಾಗಿ ನಗೆಪಾಟಲಾಗುತ್ತಾರೆ.

ಕೊನೆಗೆ ವಿನ್ನಿ ಮೊಯ್ನನ್ ಅದನ್ನು ಹಗುರವಾಗಿ ಕೈಗೆತ್ತಿಕೊಂಡು ಚುರುಕು ಬೆರಳಿಂದ ನುಡಿಸುತ್ತಾ ಹಾಡತೊಡಗಿದಾಗ ಸ್ವರವನನುಸರಿಸಿ ಸ್ವರವು ಹೊರಟಂತೆ ಆನಂದದ ತರಂಗಗಳು ಇಡೀ ಲೋಕವನ್ನೇ ವ್ಯಾಪಿಸುತ್ತವೆ. ಆ ಹಾಡಿಗೆ ಆನಂದಿಸದ ಯಾವೊಂದು ಜೀವಿಯೂ ಇರುವುದಿಲ್ಲ. ಅಳಿಲುಗಳು ಜಿಂಕೆಗಳು ಕರಡಿ ತೋಳಗಳು ಬೆರಗಿನಿಂದ ಬಂದು ಅವನ ಸುತ್ತ ಸೇರುತ್ತವೆ. ಆಗಸದ ಹಕ್ಕಿಗಳು ಮುಗಿಲಂಚಿನ ಡೇಗೆಗಳು, ನೀರೊಳಗಿನ ಹಕ್ಕಿಗಳು ಹಿಮ ಜವುಗಿನ ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ಬಂದು ಅವನ ಭುಜವೇರಿ ಕುಳಿತುಬಿಡುತ್ತವೆ.

ಸಾಗರದ ಜೀವಿಗಳು, ನೀರೊಳಗಿನ ಮೀನುಗಳು ಕಡಲಂಚಿಗೆ ಬಂದು ಸಂಗೀತ ಆಲಿಸುತ್ತವೆ. ನೀಳ ಕೇಶ ರಾಶಿಯನ್ನು ಬಾಚುತ್ತಿದ್ದ ತರುಣಿಯರ ಕೈಯಿಂದ ಬಾಚಣಿಗೆ ಜಾರಿ ನೆಲಕ್ಕೆ ಬಿದ್ದುದೂ ಪರಿವೆಯಿಲ್ಲ. ಕೇಶರಾಶಿಯನ್ನು ಬಾಚದೆ ಹಾಗೇ ಬಿಟ್ಟು ವಿನ್ನಿ ಮೊಯ್ನನ್ ಸಂಗೀತದಲ್ಲಿ ಮೈ ಮರೆಯುತ್ತಾರೆ. ವೀರರೂ ಶೂರರೂ, ಹೆಂಗಸರು, ಗಂಡಸರು, ಚಿಕ್ಕವರು, ದೊಡ್ಡವರು, ಮಕ್ಕಳು, ಅರ್ಧ ಬೆಳೆದವರು, ತರುಣರೂ, ತರುಣಿಯರೂ ಎಲ್ಲರೂ ಮೈ ಮರೆತು ಕಂಬನಿ ಸುರಿಸುತ್ತಾರೆ. ಎದೆ ಕರಗಿ ನೀರಾಗುತ್ತದೆ.

ಸ್ವತಃ ವಿನ್ನಿ ಮೊಯ್ನನ್ ಕಣ್ಣಿಂದಲೂ ಕಂಬನಿ ಉರುಳತೊಡಗುತ್ತದೆ. ಕಣ್ಣಿಂದ ಕೆನ್ನೆಗೆ, ಕೆನ್ನೆಯಿಂದ ಗಲ್ಲಕ್ಕೆ, ಗಲ್ಲದಿಂದ ಹರವಾದ ಎದೆಗೆ, ಎದೆಯಿಂದ ಮೊಣಕಾಲಿಗೆ, ಮೊಣಕಾಲಿನಿಂದ ಪಾದಕ್ಕೆ, ಪಾದದಿಂದ ಕೆಳಗೆ ಹರಿದ ಕಂಬನಿ ಕಡಲಂಚಿಗೆ ಹರಿದು ಕಡಲು ಮೇರೆ ಮೀರಿ ಉಕ್ಕುತ್ತದೆ. ಕಂಬನಿಯ ಹನಿಗಳು ಕಡಲ ತಳಕ್ಕೆ ಜಾರುತ್ತವೆ, ಜಾರಿ ಹೊಳೆವ ಮುತ್ತಾಗುತ್ತವೆ. ನಿಜಕ್ಕೂ ಸಂಗೀತಕ್ಕೆ ಇಂಥದೊಂದು ಶಕ್ತಿ ಇದೆಯೇ? ಅನುಭವಿಸಿದವರಿಗೆ ಅದು ತಿಳಿದಿದೆ.

ಈ ಕರೋನಾ ಭಾರತದಿಂದ ಇನ್ನೂ ಬಹಳಷ್ಟು ದೂರದಲ್ಲಿ ಅಂದರೆ ಇಟಲಿಯಲ್ಲಿದ್ದಾಗ ದಿನವೊಂದಕ್ಕೆ ಅಲ್ಲಿ ನೂರಾರು ಸಂಖ್ಯೆಯಲ್ಲಿ ಸಾಯುತ್ತಿದ್ದ ಜನರು, ಶವಪೆಟ್ಟಿಗೆಗಳನ್ನು ಹೊತ್ತು ಸಾಲಾಗಿ ನಿಂತ ವಾಹನಗಳು, ಅಂತ್ಯಕ್ರಿಯೆಗಾಗಿ ತೋಡಿದ ದೊಡ್ಡ ದೊಡ್ಡ ಗುಂಡಿಗಳು ಇವುಗಳನ್ನೆಲ್ಲ ನೋಡುವಾಗ ಈ ವೈರಸ್ ಹೇಗೆ ಅಷ್ಟೊಂದು ಜನರ ಸಾವಿಗೆ ಕಾರಣವಾಗುತ್ತದೆ ಎಂಬುದು ಅರ್ಥವೇ ಆಗುತ್ತಿರಲಿಲ್ಲ.

ಕೊನೆ ಕೊನೆಗಂತೂ ಅಲ್ಲಿ ಸೋಂಕಿತರ ಪ್ರಮಾಣ ಅದೆಷ್ಟು ಹೆಚ್ಚಾಗ ತೊಡಗಿತೆಂದರೆ ಅವರೆಲ್ಲರಿಗೂ ಚಿಕಿತ್ಸೆ ಕೊಡುವಂಥ ಸೌಲಭ್ಯಗಳೆ ಇಲ್ಲವಾಗಿ ರೋಗದಿಂದ ಗುಣಮುಖರಾಗುವ ಸಾಧ್ಯತೆ ಇಲ್ಲದ ವೃದ್ಧರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದಿಲ್ಲ, ಅವರು ಮನೆಯಲ್ಲಿಯೇ ಸಾಧ್ಯವಾದಷ್ಟು ಚಿಕಿತ್ಸೆ ಪಡೆದುಕೊಳ್ಳಬಹುದು ಅಥವಾ ಸಾವನ್ನು ಬರಮಾಡಿಕೊಳ್ಳಬಹುದು ಎಂಬ ವರದಿಗಳನ್ನು ಓದುವಾಗ ಈಗಾಗಲೇ ಅರವತ್ತೇಳರ ಅಂಚಿನಲ್ಲಿದ್ದ ನನಗೆ ಯಾವುದೋ ಒಂದು ಮೂಲೆಯಲ್ಲಿ ಭೀತಿ ಆವರಿಸಿತು.

ಐವತ್ತು ಆರವತ್ತು ದಾಟಿದ ಮಾತ್ರಕ್ಕೆ ವೃದ್ಧರು ಎಂಬ ಗುಂಪಿಗೆ ಸೇರಿಸಿಬಿಡುವುದು ಯಾವ ನ್ಯಾಯ? ಈಗಿನ ೩೦-೪೦ರ ವಯಸ್ಸಿನಲ್ಲಿರುವವರಿಗೆ ಹೋಲಿಸಿದರೆ ನಾವೇ ಹೆಚ್ಚು ಆರೋಗ್ಯವಾಗಿದ್ದೇವೆ. ಅವರಿಗಿಂತ ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ. ನಮ್ಮ ಗೃಹಕೃತ್ಯ, ಕುಟುಂಬದ ಜವಾಬ್ದಾರಿ, ಬರವಣಿಗೆ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿಕೆ, ಕಾರ್ಯಕ್ರಮಗಳಿಗಾಗಿ ಊರಿಂದೂರಿಗೆ ಪ್ರಯಾಣ ಇವಾವುವೂ ಸಹ ಈಗ ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ಇದ್ದುದಕ್ಕಿಂತ ಕಿಂಚಿತ್ತೂ ಕಡಿಮೆಯಾಗಿಲ್ಲ.

ಹಾಗೆ ನೋಡಿದರೆ ಉದ್ಯೋಗದಿಂದ ನಿವೃತ್ತಿ ಎಂಬುದನ್ನು ಬಿಟ್ಟರೆ ಮಕ್ಕಳ ಮದುವೆ, ಅತಿಥಿಗಳ ಉಪಚಾರ, ಮೊಮ್ಮಕ್ಕಳ ಆರೈಕೆ… ಮೊದಲಾದ ದೃಷ್ಟಿಯಿಂದ ನಮ್ಮ ಕಾರ್ಯಭಾರ ಇನ್ನೂ ಹೆಚ್ಚಾಗಿದೆ. ಕೇವಲ ನಮ್ಮ ವಯಸ್ಸಿನ ದಾಖಲೆ ಯನ್ನೇ ಆಧಾರವಾಗಿಟ್ಟುಕೊಂಡು ಇವರು ವೃದ್ಧರು, ಕೈಲಾಗದವರು ಇನ್ನು ಇವರು ಸತ್ತರೂ ನಷ್ಟವಿಲ್ಲ ಎಂದು ತೀರ್ಮಾನಿಸಿಬಿಟ್ಟರೆ ಅದಕ್ಕಿಂತ ಅವೈಜ್ಞಾನಿಕ ಅವೈಚಾರಿಕವಾದುದು ಮತ್ತೇನಾದರೂ ಇದೆಯೇ? ನಿವೃತ್ತಿಯ ನಂತರ ಮಹಿಳೆಯರು ಇನ್ನೂ ಹೆಚ್ಚು ಚಟುವಟಿಕೆಯಿಂದಿರುತ್ತಾರೆ. ಕೆಲವೊಂದು ಸಾಂಸಾರಿಕ ಕಾರ್ಯಭಾರಗಳಿಂದಾಗಿ ಒಳಗೇ ಅದುಮಿಟ್ಟಿದ್ದ ಅವರ ಕಲೆ ಸಾಹಿತ್ಯಿಕ ಚಟುವಟಿಕೆಗಳೆಲ್ಲ ಈ ವಯಸ್ಸಿನಲ್ಲಿ ಗರಿಗೆದರುತ್ತವೆ.

ಈ ಕಾರಣದಿಂದಲೇ ನಮ್ಮ ಲೇಖಕಿಯರ ಸಂಘದಲ್ಲಿ ನಾವು ‘ಲೇಖ ಲೋಕ’ ಎಂಬ ಲೇಖಕಿಯರ ಆತ್ಮ ಕಥಾನಕಗಳ ದಾಖಲೆಯ ಮುಂದುವರಿಕೆಯಾಗಿ ಎಪ್ಪತ್ತು ದಾಟಿದ ಲೇಖಕಿಯರನ್ನು ಸಂಘಕ್ಕೆ ಕರೆಸಿ ಅವರ ಬದುಕು ಬರಹದ ದಾಖಲಾತಿ ಮಾಡಿ ಪ್ರಕಟಿಸುವ ಕೆಲಸ ಮಾಡಿದೆವು. ಈ ಕಾರ್ಯಕ್ರಮಕ್ಕೆ ನಾವಿಟ್ಟ ಹೆಸರು ‘ಎಪ್ಪತ್ತರ ವಯಸು ಇಪ್ಪತ್ತರ ಮನಸು’. ನಿಜಕ್ಕೂ ಈ ಎಪ್ಪತ್ತರ ವಯಸ್ಸಿನ ಲೇಖಕಿಯರ ಅನುಭವ ಕಥನಗಳನ್ನು ನೋಡಿದಾಗ ಅವರದು ಈಗಲೂ ಇಪ್ಪತ್ತರ ಮನಸ್ಸೇ ಎಂಬುದು ಖಾತ್ರಿಯಾಗಿತ್ತು. ಇವರಲ್ಲಿ ಸ್ಫುರುದ್ರೂಪಿ ಅನಕೃ ಅವರ ಭಾವ ಚಿತ್ರವನ್ನು ಪಠ್ಯ ಪುಸ್ತಕದಲ್ಲಿಟ್ಟುಕೊಂಡು ಆನಂದಿಸಿದವರಿದ್ದರು.

| ಇನ್ನು ನಾಳೆಗೆ |

‍ಲೇಖಕರು Avadhi

June 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. I M Prabhukumar

    ಕೋವಿಡ್ 19ಕ್ಕೆ ಚಿಕಿತ್ಸೆಪಡೆಯುತ್ತಿದ್ದರೂ ಶ್ರೀಮತಿ ಸಂಧ್ಯಾ ರೆಡ್ಡಿಯವರ ಬರೆಹಗಾರಿಕೆ ಎಷ್ಟೊಂದು ಜೀವಂತವಾಗಿಯೇ ಇತ್ತೆನ್ನುವದಕ್ಕೆ ಈ ಲೇಖನ ಸಾಕ್ಷಿ. ಆ ರೋಗಕ್ಕೂ ತನಗೂ ಸಂಬಂಧವಿಲ್ಲವೆನ್ನುವಂತೆ ಅವರು ಸಾಹಿತ್ಯ, ಸಂಗೀತ, ಸಾಮಾಜಿಕ ಸಮಸ್ಯೆ, ಸಮಾಜಕ್ಕೆ ಅದರೊಳಗಣ ಜನರ, ಮುಖ್ಯವಾಗಿ ವಯೋವೃದ್ಧರ ಕುರಿತಿರಬೇಕಾದ ಉತ್ತರದಾಯಿತ್ವದ ಬಗ್ಗೆ, ಹೀಗೆ ಹಲವು ವಿಷಯಗಳನ್ನು ಈ ಸಣ್ಣ ಬರೆಹದಲ್ಲಿ ಚರ್ಚಿಸಿದ್ದಾರೆ!

    ಲೇಖಕಿಯರ ಸಂಘದಲ್ಲಿ ‘ಲೇಖ ಲೋಕ’ ಎಂಬ ಲೇಖಕಿಯರ ಆತ್ಮ ಕಥಾನಕಗಳ ದಾಖಲೆಗಾಗಿ ಎಪ್ಪತ್ತು ದಾಟಿದ ಲೇಖಕಿಯರನ್ನು ಸಂಘಕ್ಕೆ ಕರೆಸಿ ಅವರ ಬದುಕು ಬರಹಗಳನ್ನು ‘ಎಪ್ಪತ್ತರ ವಯಸು ಇಪ್ಪತ್ತರ ಮನಸು’ ಎಂದು ಪ್ರಕಟಿ ಸುವ ಕೆಲಸ ಮಾಡಿದ್ದು ಇಲ್ಲಿ ನೆನಪಿಸಿಕೊಂಡದ್ದು ಸಂದರ್ಭೋಚಿತ. ನಿಜ; ಐವತ್ತು ದಾಟಿದವರು, ತಮ್ಮ ಉದ್ಯೋಗಗಳಿಂದ ನಿವೃತ್ತರು, ಎಂದೆಲ್ಲಾ ವಯೋವೃದ್ಧರನ್ನು ನಿಷ್ಪ್ರಯೋಜಕರು ಎಂದು ತಿಳಿಯುವದೇ ಒಂದು ತೆರನ ಸಾಮಾಜಿಕ ಬೇಜವಾಬ್ದಾರಿತನ! ಈ ತಪ್ಪು ತಿಳುವಳಿಕೆ ನಮ್ಮ ದೇಶದಲ್ಲೇ ಅಲ್ಲ, ಜಗತ್ತಿನ ಹಲವಾರು ದೇಶಗಳಲ್ಲೂ ಇವೆ. ಆದರೆ ಹಲವು ಮುಂದುವರೆದ ದೇಶಗಳ ಸರಕಾರಗಳು ಈ ರೀತಿಯ ವೃದ್ಧರಿಗೆ ಆರ್ಥಿಕ ಬೆಂಬಲವನ್ನು ಸಮರ್ಥವಾಗಿ ನೀಡಿವೆ; ಅದು ನಮ್ಮಲ್ಲಿಲ್ಲ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ I M PrabhukumarCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: