ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 15

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

15

ಪೊಟಾಶಿಯಂ ಮಾಡಿದ ಹಾವಳಿ

ನಾನು ತಿಂಡಿಯನ್ನೇನೋ ಅಲ್ಲಿ ಕೊಟ್ಟಿದ್ದನ್ನೇ ತಿನ್ನುತ್ತಿದ್ದೆ. ಮನೆಯಿಂದ ತರಿಸಿದ ಚಟ್ನಿಪುಡಿ ಇದ್ದುದರಿಂದ ಉಪ್ಪಿಟ್ಟು, ಸೇವಿಗೆಬಾತ್, ಇಡ್ಲಿ ಎಲ್ಲವೂ ನುಂಗುವಂತಾಯಿತು. ಇಷ್ಟೆಲ್ಲಾ ಅಂಟಿಬಯಾಟಿಕ್ಸ್ ತೆಗೆದು ಕೊಳ್ಳುತ್ತೇನೆ ಅದಕ್ಕೆ ತಕ್ಕ ಪೌಷ್ಟಿಕಾಂಶ ಇರಬೇಕು ಅಂತ ಮನೆಯಿಂದ ತರಿಸಿಕೊಳ್ಳುವ ಊಟದ ಜೊತೆಗೆ ಹಣ್ಣುಗಳನ್ನು ಕಳಿಸುವಂತೆ ಹೇಳಿದ್ದೆ. ಶಂಕರ್ ಸುಮಾರು ೪-೫ ತಿಂಗಳಿಂದ ರಾತ್ರಿಯ ಹೊತ್ತು ಬರೀ ಫಲಾಹಾರ ಮಾಡುತ್ತಿದ್ದರಿಂದ ವಿವಿಧ ಬಗೆಯ ಹಣ್ಣುಗಳನ್ನು ಅತ್ಯಂತ ಸುಂದರವಾಗಿ ಹೆಚ್ಚುವುದರಲ್ಲಿ ಪರಿಣತರಾಗಿದ್ದರು. ಅದು ಅವರದೇ ಕೆಲಸವಾಗಿತ್ತು.

ದಿನವೂ ಊಟದ ಜೊತೆ ಹೆಚ್ಚಿದ ಪಪಾಯ್, ಬಿಡಿಸಿದ ದಾಳಿಂಬೆಬೀಜ, ಸೌತೆಕಾಯಿಯ ಹೋಳು, ಜೊತೆಗೆ ಮೋಸಂಬಿ ಜ್ಯೂಸ್, ಬಾಳೆಯಹಣ್ಣುಗಳು, ಇನ್ನೊಂದು ಬಾಟಲಿಯಲ್ಲಿ ಹಾಲು, ಬೇಯಿಸಿದ ಮೊಟ್ಟೆ ಎಲ್ಲವನ್ನೂ ನಿಟಾಗಿ ಕಳಿಸುತ್ತಿದ್ದರು. ಅಕ್ಕನ ಮಗ ಸುಧಿ ತನ್ನ ಕಾರಿನಲ್ಲಿ ನಮ್ಮ ಮನೆಗೆ ಹೋಗಿ ಅದನ್ನು ತೆಗೆದುಕೊಂಡು ಬಂದು ಆಸ್ಪತ್ರೆಯಲ್ಲಿ ಸೆಕ್ಯೂರಿಟಿಯ ಬಳಿ ಕೊಟ್ಟು ಹೋಗುತ್ತಿದ್ದ. ರಾತ್ರೆಗಾಗಿ ಈ ಊಟದ ಜೊತೆಯಲ್ಲಿ ಎರಡು ಚಪಾತಿ ಪಲ್ಯಗಳೂ ಇರುತ್ತಿದ್ದವು.

ಹೀಗೇ ಎಂಟು ಹತ್ತು ದಿನಗಳು ಅರಾಮಾಗಿ ನನ್ನ ದಿನಚರಿ ನಡೆದಿತ್ತು. ಹಾಡು ಕೇಳುವುದು, ಪೋನ್‌ನಲ್ಲಿ ಅಲ್ಪಸ್ವಲ್ಪ ಮಾತಾಡುವುದು, ಓಷೋ ಪುಸ್ತಕವನ್ನು ೮-೧೦ ಪುಟ ಓದುವುದು, ಉಸಿರಾಟದ ವ್ಯಾಯಾಮ ಮಾಡುವುದು, ಡ್ರಿಪ್ ಹಾಕಿಸಿಕೊಳ್ಳುವುದು, ಹೀಗೆ.. ನಾನು ಎಲ್ಲ ಸರಿಹೋಗುತ್ತಿದ್ದೇನೆ. ಇನ್ನೇನು ಆಕ್ಸಿಜನ್ ಲೆವೆಲ್ ಸಹಜ ಸ್ಥಿತಿಗೆ ಬಂದರೆ ಸಾಕು ಎಂದು ನೆಮ್ಮದಿಯಿಂದ ಕಾಲಕಳೆಯುತ್ತಿರುವಾಗ ಆ ದಿನ ತಮ್ಮ ಪರಿವಾರ ಸಮೇತ ನಿತ್ಯ ಬರುತ್ತಿದ್ದ ಡಾಕ್ಟರ್‌ಗೆ ಬದಲಾಗಿ ಇನ್ನೊಬ್ಬ ಡಾಕ್ಟರ್ ಬಂದರು. ಅವರು ಸೀನಿಯರ್ ಎಂದು ನೋಡಿದ ಕೂಡಲೇ ತಿಳಿಯುತ್ತಿತ್ತು.

ಹೇಗಿದ್ದೀರಿ ಎಂದು ಕೇಳುತ್ತಲೇ ಫ್ರೂಟ್ಸ್ ತಗೋತಿರೇನು ಎಂದರು. ನಾನು ತುಂಬಾ ಆತ್ಮವಿಶ್ವಾಸದಿಂದ ಹೌದು ಎಂದೆ. ಅವರು ತಕ್ಷಣವೇ ಏರಿದ ದನಿಯಲ್ಲಿ ಪೋಟಾಷಿಯಂ ಜಾಸ್ತಿ ಇದೆ ರೀ. ನೋ ಫ್ರೂಟ್ಸ್ ಅಂದರು. ನನಗೆ ಒಮ್ಮೆಲೆ ಗಾಬರಿಯಾಯಿತು. ಇದೇನೂ ನನಗೆ ಯಾರೂ ಹೇಳಲೇ ಇಲ್ಲವಲ್ಲ ಅಂತ ಮೆಲ್ಲಗೆ ದನಿ ಹೊರಡಿಸುತ್ತಿದ್ದಂತೆಯೇ ನಾನು ಹೇಳುತ್ತಿದ್ದೇನೆ ನೋ ಫ್ರೂಟ್ಸ್. ಪೊಟಾಶಿಯಂ ಕಡಿಮೆ ಮಾಡಬೇಕು ಎನ್ನುತ್ತಾ ಪಕ್ಕದ ಜೂನಿಯರ್ ಡಾಕ್ಟರ್‌ರತ್ತ ತಿರುಗಿ ಕ್ಯಾಲ್ಸಿಯಂ… ಕೊಡಿ ಎನ್ನುತ್ತಾ ಆ ಕ್ಯಾಲ್ಸಿಯಂ ಸಂಯುಕ್ತದ ಹೆಸರು ಹೇಳಿ ಮುಂದೆ ಹೋದರು.

ನನಗೆ ಅಕ್ಷರಶಃ ಇದೊಂದು ಬೆಚ್ಚಿ ಬೀಳಿಸಿದ ಸಂಗತಿ. ಯಾವುದೇ ಅರಿವಿಲ್ಲದೆ ಅಷ್ಟೆಲ್ಲಾ ಹಣ್ಣು ತಿನ್ನುತ್ತಿದ್ದೆನಲ್ಲ. ಅದರಲ್ಲಿಯೂ ಪೊಟಾಶಿಯಂ ಅಂಶ ಹೆಚ್ಚಿಸುವ ಬಾಳೆಹಣ್ಣು. ರಾತ್ರಿ ಸಂಕಟವಾದರೆ ಇರಲಿ ಎಂದು ಮಧ್ಯರಾತ್ರಿ ಹೊತ್ತಿನಲ್ಲೂ ಬಾಳೆಹಣ್ಣು ತಿಂದದ್ದಿದೆ. ಈ ಬಾಳೆಹಣ್ಣು ನಮ್ಮ ಮನೆಯ ಡಯೆಟ್‌ನ ಅದೆಷ್ಟು ಅವಿಭಾಜ್ಯ ಅಂಶ ಎಂದರೆ ನನಗೆ ತಿಳಿವು ಬಂದಾಗಿನಿಂದಲೂ ಒಂದು ರಾತ್ರಿಯೂ ಊಟದ ನಂತರ ಬಾಳೆಹಣ್ಣು ತಪ್ಪಿಸಿದ್ದೇ ಇಲ್ಲ.

ನಮ್ಮ ಮನೆಯಲ್ಲಿ ಹುಟ್ಟಿದ ಮಕ್ಕಳಿಗೂ ಕೂಡ ದೊಡ್ಡವರಾಗುತ್ತಿದ್ದಂತೆ ದಿನವೂ ಬಾಳೆಹಣ್ಣು ತಿನ್ನಿಸುವ ಅಭ್ಯಾಸ. ನಾವು ಆ ರೀತಿ ಏಳೆಂಟು ತಿಂಗಳಿಂದಲೇ ಮಕ್ಕಳಿಗೆ ಬಾಳೆಹಣ್ಣು ತಿನ್ನಿಸುವುದನ್ನು ನೋಡಿದವರು ಶೀತ ಆಗುವುದಿಲ್ಲವೇ ಎಂದು ಗಾಬರಿಯಿಂದ ಕೇಳುತ್ತಾರೆ. ಆದರೆ ಅಂತಹ ಯಾವ ತೊಂದರೆಯೂ ನಮಗೆ ಆಗಿಲ್ಲ. ವಂಶಪಾರಂಪರ‍್ಯವಾಗಿ ಎಂಬಂತೆ ಬಾಳೆಹಣ್ಣು ತಿನ್ನುವ ಅಭ್ಯಾಸ. ಅದಕ್ಕಿಂತ ಮುಖ್ಯವಾಗಿ ಈ ಕರೋನಾ ಶುರುವಾದ ನಂತರ, ನಮ್ಮ ಆಹಾರದ ತಟ್ಟೆಯಲ್ಲಿರಬೇಕಾದ ಪದಾರ್ಥಗಳು ಎಂದು ಎರಡೆರಡು ಬಾಳೆಹಣ್ಣು ಹಾಗೂ ಮೊಟ್ಟೆ ಇತ್ಯಾದಿಯನ್ನು ಜಾಹಿರಾತಿನಲ್ಲಿ ತಪ್ಪದೆ ತೋರಿಸಲಾಗುತ್ತಿತ್ತು.

ಒಟ್ಟಿನಲ್ಲಿ ಬಾಳೆಹಣ್ಣಿನ ಜೊತೆ ನನ್ನ ಸುಮಾರು ಅರವತ್ತಾರು ವರ್ಷಗಳಿಗೂ ಹೆಚ್ಚಿನ ಬಾಂಧವ್ಯವನ್ನು ಈ ಕರೋನಾ ಕಳಚಿಹಾಕಿತ್ತು. ಸರಿ ಆನಂತರ ಪೋಟಾಶಿಯಂನ ದುಷ್ಪರಿಣಾಮಗಳನ್ನು ಕುರಿತು ಮನೆಯ ಡಾಕ್ಟರ್ ನರೇಂದ್ರ ಹತ್ತಿರ ಕೇಳಿಕೊಂಡಾಗ ತಿಳಿದು ಬಂದದ್ದು ಇಷ್ಟು. ನಮ್ಮ ದೇಹಕ್ಕೆ ಖನಿಜಾಂಶ ಬೇಕೇಬೇಕು. ಒಂದೊಂದು ಖನಿಜಕ್ಕೂ ನಿರ್ದಿಷ್ಟ ಕೆಲಸವಿದ್ದು ಇದರಲ್ಲಿ ಯಾವುದೂ ತೀರಾ ಕಡಿಮೆಯಾಗಲೂ ಬಾರದು. ತೀರಾ ಹೆಚ್ಚಾಗಲೂ ಬಾರದು, ಕೆಲವು ಖನಿಜಗಳು ತೀರಾ ಕಡಿಮೆ ಪ್ರಮಾಣದಲ್ಲಿ ಬೇಕು. ಅವುಗಳ ಅಳತೆ ಸ್ವಲ್ಪ ಹೆಚ್ಚಾದರೂ ಪರಿಣಾಮ ವಿಪರೀತವಾಗಿರುತ್ತದೆ. ಇಂತಹ ಗುಂಪಿಗೆ ಸೇರಿದ ಖನಿಜ ಪೋಟಾಶಿಯಂ.

ಈ ಖನಿಜವು ನಮ್ಮ ದೇಹದಲ್ಲಿರುವ ದ್ರವಗಳ ಸಮತೋಲನವನ್ನು ಕಾಪಾಡುವ, ಮಾಂಸಖಂಡಗಳ ಸಂಕುಚನಕ್ಕೆ ಸಹಾಯ ಮಾಡುವ ಹಾಗೂ ಹೃದಯ ಬಡಿತ ಏರುಪೇರುಗಳಿಲ್ಲದೆ ಸ್ಥಿರ ವೇಗದಲ್ಲಿರುವಂತೆ ಮಾಡುವ ಖನಿಜವಾಗಿದೆ. ನಮ್ಮ ದೇಹಕ್ಕೆ ಬೇಕಾದ ಯಾವುದೇ ಖನಿಜವನ್ನು ದೇಹವು ತಾನಾಗೇ ಉತ್ಪಾದಿಸುವುದಿಲ್ಲ. ಆದ್ದರಿಂದ ಅದು ಆಹಾರದ ಮೂಲಕವೇ ಒದಗಬೇಕು. ತಾಜ ಹಣ್ಣು ತರಕಾರಿಗಳು ಹಾಗೂ ಮಾಂಸ ಇವು ಖನಿಜಾಂಶವನ್ನು ಪೂರೈಸುವ ಮುಖ್ಯ ಆಕರಗಳು.

ಪೋಟಾಶಿಯಂ ನಿಂದಾಗಿ ಸ್ವಲ್ಪ ಕಾಂಪ್ಲಿಕೇಶನ್ ಆಗಿದೆ. ಎಲ್ಲಾ ಸರಿಹೋಗುತ್ತದೆ ಅಂತ ಡಾ. ಮಾಧವರೆಡ್ಡಿ ಶಂಕರ್‌ಗೆ ಫೋನ್ ಮಾಡಿ ತಿಳಿಸಿದ್ದರು. ಆದರೆ ನನಗೇಕೋ ಸಧ್ಯದಲ್ಲೆ ಡಿಸ್ಚಾರ್ಜ್ ಆಗಿ ಬಿಡುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದವಳಿಗೆ ಈ ಹೊಸ ಸಮಸ್ಯೆ ತುಂಬ ಭಯವನ್ನುಂಟುಮಾಡಿತ್ತು. ಒಂದು ವೇಳೆ ಸರಿಹೋಗದೆ ಕಿಡ್ನಿ ಹೃದಯ ಮೊದಲಾದವುಗಳಿಗೆ ಹಾನಿಯಾದರೆ ಆಗ ಇನ್ನೆಷ್ಟು ದಿನ ನಾನು ಆಸ್ಪತ್ರೆಯಲ್ಲಿರಬೇಕು, ಕಿಡ್ನಿಗೇನಾದರೂ ಆದರೆ, ನನಗೆ ಮೊದಲೇ ಡಯಾಬಿಟಿಸ್ ಇದೆ. ಹಾಗಿದ್ದರೆ ಡಯಾಲಿಸಿಸ್‌ಗಾಗಿ ನಾನು ಆಸ್ಪತ್ರೆಗೆ ಅಲೆಯಬೇಕಾಗಬಹುದೇ? ಅದರ ನೋವು, ಖರ್ಚು, ಅಲೆದಾಟಗಳನ್ನು ಊಹಿಸಿಕೊಂಡಾಗ ಮನಸ್ಸಿನ ತುಂಬಾ ಕತ್ತಲು ತುಂಬಿಕೊಂಡಂತೆ, ಮುಂದೆ ದಾರಿಯೇ ಇಲ್ಲ, ಅಲ್ಲಿಗೆ ನನ್ನ ಬದುಕು ಮುಗಿದಂತೆಯೇ ಅನ್ನಿಸಿತು.

ನಿಧಾನವಾಗಿ, ಇಂಥ ತೊಂದರೆಗೀಡಾಗಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡವರ ಚಿತ್ರಗಳನ್ನು ನೆನಪಿಸಿಕೊಳ್ಳತೊಡಗಿದೆ. ಆಗ ಮೊದಲು ಕಣ್ಣೆದುರು ಬಂದ ಚಿತ್ರ ಗಿರೀಶ್ ಕಾರ್ನಾಡ್. ಅವರು ಮೂಗಿನ ನಳಿಕೆ ಮಾಸ್ಕ್ ನೊಂದಿಗೇ ಟೌನ್ ಹಾಲ್ ಎದುರು ಮೀಟೂ ಅರ್ಬನ್ ನಕ್ಸಲ್ ಎಂದು ಪ್ಲಕಾರ್ಡ್ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ ಚಿತ್ರ. ಆನಂತರ ನೆನಪಿಗೆ ಬಂದಿದ್ದು ಲೇಖಕಿ ಡಾ. ಅನುಪಮಾ ನಿರಂಜನ. ಕ್ಯಾನ್ಸರ್‌ನಿಂದಾಗಿ ಕೇವಲ ತಮ್ಮ ೫೭ನೇ ವಯಸ್ಸಿನಲ್ಲಿಯೇ ನಮ್ಮನ್ನು ಬಿಟ್ಟಗಲಿದ ಅನುಪಮಾ ಕ್ಯಾನ್ಸರ್ ಚಿಕಿತ್ಸೆಗಾಗಿ ಮುಂಬಯಿಯವರೆಗೂ ಹೋಗಿ ಬರುತ್ತಿದ್ದರು. ಆದರೂ ಅವರು ತಮ್ಮ ಕಷ್ಟ ಸಂಕಟ, ನೋವುಗಳನ್ನು ಬಹಿರಂಗವಾಗಿ ವ್ಯಕ್ತಪಡಿಸದೆ ತಮ್ಮ ಬರವಣಿಗೆ ಹಾಗೂ ಸಾರ್ವಜನಿಕ ಚಟುವಟಿಕೆಗಳಲ್ಲಿಯೂ ಅಷ್ಟೇ ಕ್ರಿಯಾಶೀಲರಾಗಿದ್ದರು.

ಇನ್ನು ಲಂಕೇಶ್, ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಮದ್ರಾಸ್‌ಗೆ ಹೋಗಿದ್ದರು. ಅವರು ವಿಮಾನದಲ್ಲಿ ಪ್ರಯಾಣಿಸಬಾರದು ಎಂದು ತಪ್ಪಾಗಿ ತಿಳಿದುಕೊಂಡು ರೈಲಿನಲ್ಲಿ ಬರುವ ತೊಂದರೆ ತೆಗೆದುಕೊಂಡಿದ್ದರು. ಅವರು ಕಾದಿರಿಸಿದ ಬೋಗಿಗಾಗಿ ಸುಮಾರು ದೂರ ನಡೆಯಬೇಕಾಗಿ ಬಂದ ವಿಷಯವನ್ನು ಅವರೇ ತಮ್ಮ ಪತ್ರಿಕೆಯಲ್ಲಿ ತಿಳಿಸಿದ್ದರು.

ಇಷ್ಟಕ್ಕೂ ನನ್ನ ಬದುಕು ಮುಗಿದು ಹೋದರೂ ಆಗುವ ನಷ್ಟವೇನು? ಮಕ್ಕಳು ತಮ್ಮ ತಮ್ಮ ಬದುಕಿನಲ್ಲಿ ಸುಖವಾಗಿ ನೆಲೆ ಊರಿದ್ದಾರೆ. ಇನ್ನು ಉಯಿಲು ಬರೆದಿಟ್ಟು ಹೋಗುವಂಥ ಆಸ್ತಿಯೇನೂ ನನಗಿಲ್ಲ. ಒಂದಿಷ್ಟು ಒಡವೆ ಒಂದಿಷ್ಟು ಹಣ. ಕಷ್ಟದಲ್ಲಿರುವಂಥ ನನ್ನ ಕೆಲವು ಬಂಧುಗಳಿಗೆ ಹಣವನ್ನು ಕೊಟ್ಟು ಬಿಡುವಂತೆ ತಿಳಿಸಬಹುದು. ನಾನು ಉಯಿಲು ಬರೆಯುವುದಿದ್ದರೆ ಅಥವಾ ತಿಳಿಸಿ ಹೋಗುವುದೇನಿದ್ದರೂ ಅದು ನನ್ನ ಬರವಣಿಗೆಗೆ ಸಂಬಂಧಿಸಿದ ವಿಷಯ. ಸಿ.ಆರ್. ರೆಡ್ಡಿಯವರ ಬಗ್ಗೆ ಸುಮಾರು ಒಂದೂವರೆ ವರ್ಷದಿಂದ ಬರೆಯುತ್ತಾ ಬಂದಿದ್ದ ಪುಸ್ತಕದ ಕೆಲಸ ಮುಗಿದು ಅದರ ಮೊದಲ ಡಿಟಿಪಿಯೂ ಮುಗಿದಿತ್ತು. ತಿದ್ದುಪಡಿಗೆಂದು ಕೊಟ್ಟಿರುವ ಎರಡನೇ ಕರಡನ್ನು ನೋಡುವ ಕೆಲಸ ಬಾಕಿ ಇತ್ತು.

ಲಾಕ್‌ಡೌನ್ ನಿಂದ ಈ ಕೆಲಸಕ್ಕೆ ಮಧ್ಯೆ ಮಧ್ಯೆ ಅಡಚಣೆಯಾಗಿ ಅದರ ಕೆಲಸ ಮುಗಿದಿರಲಿಲ್ಲ. ನನಗೆ ಹುಷಾರು ತಪ್ಪುವುದಕ್ಕೂ ಮೊದಲೇ ಈ ಪುಸ್ತಕದ ಮೊದಲ ಮಾತು, ಪರಿವಿಡಿ ಮುಂತಾದವುಗಳನ್ನು ಬರೆದು ಒಂದು ಫೈಲ್‌ಗೆ ಹಾಕಿಟ್ಟಿದ್ದೆ. ಹುಷಾರು ತಪ್ಪಿದಾಗ ಆದಿಚುಂಚನಗಿರಿಯ ವಿಕಸನ ಮಾಲೆಯ ಅಡಿಯಲ್ಲಿ ಪ್ರಕಟವಾಗುತ್ತಿರುವ ಈ ಕೃತಿ ಸರಣಿಯ ಸಂಚಾಲಕರಾದ ಎಂ.ಜಿ. ಚಂದ್ರಶೇಖರಯ್ಯ ನವರಿಗೆ ಒಂದು ದಿನ ಫೋನ್ ಮಾಡಿ, ಈ ಪುಸ್ತಕದ ಕೆಲಸ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಅವರಿಗೆ ನೀಡಿದೆ. ಒಂದು ವೇಳೆ ನನಗೆ ಏನಾದರೂ ಆದರೆ ಪುಸ್ತಕ ಪ್ರಕಟಣೆಯ ಕಾರ್ಯವನ್ನು ಅವರು ಪೂರ್ಣಗೊಳಿಸಲಿ ಎಂಬ ದೃಷ್ಟಿಯಿಂದ.

ಇನ್ನೂ ಕೆಲವು ಕೆಲಸಗಳು ಅರ್ಧ ಹಾದಿ ಕ್ರಮಿಸಿದ್ದವು. ಅದರಲ್ಲಿ ಮುಖ್ಯವಾದುದು ಪ್ರಾತಿನಿಧಿಕ ಕನ್ನಡ ಜನಪದ ಕಥೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಕೆಲಸ. ಈಗಾಗಲೇ ತುಳು ಜನಪದ ಕಥೆಗಳು ಇಂಗ್ಲಿಷ್‌ಗೆ ಅನುವಾದವಾಗಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಕನ್ನಡದ ಕಥೆಗಳ ಅಂತಹ ಒಂದು ಸಂಕಲನವನ್ನು ಸಾಧ್ಯವಾದರೆ ಜೆ.ಎನ್.ಯು. ವತಿಯಿಂದ ಪ್ರಕಟಿಸುವ ಇರಾದೆ ವ್ಯಕ್ತಪಡಿಸಿದ್ದ ಪುರುಷೋತ್ತಮ ಬಿಳಿಮಲೆಯವರಿಗಾಗಿ ಇದರ ಕೆಲಸವನ್ನು ಆರಂಭಿಸಿದ್ದೆ. ಆದರೆ ಕರೋನಾ ಹಾಗೂ ಲಾಕ್‌ಡೌನ್ ದೆಸೆಯಿಂದ ನನ್ನ ಈ ಕೆಲಸ ಕುಂಟುತ್ತಾ ಸಾಗಿತ್ತು.

| ಇನ್ನು ನಾಳೆಗೆ |

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Prabhukumar

    ಈ ಹಿಂದಿನ ಒಂದೆರಡು ಕಥನಗಳಲ್ಲಿ ಕೊರೋನಾವನ್ನು ದೂರೀಕರಿಸಿದಂತೆ ಸಾಮಾಜಿಕ, ರಾಜಕೀಯ ವಿಷಯಗಳನ್ನು ಕುರಿತು ಬರೆಯುತ್ತಿದ್ದವರು, ‘ಕಹಾನೀ ಮೆ shocking twist’ ಕೊಟ್ಟಿದ್ದೀರಿ, ಈ ಕಥನದಲ್ಲಿ. ನಮ್ಮ ಶರೀರಕ್ಕೆ ಖನಿಜಾಂಶಗಳು ಬೇಕು; ಆದರೆ ಇವು ತೀರಾ ಕಡಿಮೆಯಾಗಲೂ ಬಾರದು, ತೀರಾ ಹೆಚ್ಚಾಗಲೂ ಬಾರದು; ಹೆಚ್ಚು-ಕಡಿಮೆಯಾದರೆ ಪರಿಣಾಮ ವಿಪರೀತವಾಗಿರುತ್ತದೆ, ಎನ್ನುವದನ್ನು ಓದಿ ಗಾಬರಿಯಾಯಿತು.

    ತೀರಿಕೊಂಡರೆ ಏನೆಲ್ಲಾ ಆದಾವು, ಏನೆಲ್ಲಾ ಮಾಡಬೇಕು, ಎಂದಿತ್ಯಾದಿ ಯೋಚನೆಗಳು ಬಂದವು ಎನ್ನುವದನ್ನು ಈಗ ಓದುವಾಗ ನಗು ಬರುತ್ತದೆ. ಆದರೆ ಆಗ ನಿಮ್ಮ ಮನಸ್ಥಿತಿಯನ್ನು ಕುರಿತು ಯೋಚಿಸಿದಾಗ ಹೆದರಿಕೆಯಾಗುತ್ತೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ PrabhukumarCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: