ಕುಶ್ವಂತ್‌ ಕೋಳಿಬೈಲು ಕಂಡಂತೆ ʼಗಂಗೆ ಬಾರೆ ಗೌರಿ ಬಾರೆʼ

ಕುಶ್ವಂತ್‌ ಕೋಳಿಬೈಲು

ನಾನು ಶಿಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ ಮೊದಲಿನ ದಿನಗಳಲ್ಲಿ ಮಾತು ಬಾರದ ನವಜಾತ ಶಿಶುಗಳ ಸಮಸ್ಯೆಯನ್ನು ಅರಿತುಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. ಶಿಶು ವೈದ್ಯಕೀಯವೂ ಒಂದು ರೀತಿಯಲ್ಲಿ ಮಾತು ಬಾರದ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪಶು ವೈದ್ಯಕೀಯ ಶಾಸ್ತ್ರದಷ್ಟೇ ಸವಾಲಿನದ್ದು ಎಂದು ಅನಿಸಿತ್ತು.

ಕನ್ನಡದ ಹಿರಿಯ ಕಥೆಗಾರರು ಮತ್ತು ನಿವೃತ್ತ ಪಶುವೈದ್ಯರಾಗಿರುವ ಡಾ ಮಿರ್ಜಾ ಬಷೀರ್ ಅವರ ಅನುಭವ ಕಥನವಾದ “ಗಂಗೆ ಬಾರೆ, ಗೌರಿ ಬಾರೆ” ಪುಸ್ತಕವನ್ನು ಓದುತ್ತಿದ್ದಂತೆ ಹಸು, ಎಮ್ಮೆ,‌ಕುರಿ, ನಾಯಿ ಹೀಗೆ ವಿವಿಧ ಮೂಕ ಪ್ರಾಣಿಗಳಿಗೆ ಸಮಸ್ಯೆಯಾದಾಗ ಅವರಿದ್ದ ಸ್ಥಳಕ್ಕೆ ಹೋಗಿ ಕನಿಷ್ಠ ಸೌಕರ್ಯಗಳೊಂದಿಗೆ ಚಿಕಿತ್ಸೆ ನೀಡುವುದು ಪ್ರಪಂಚದ ಅತ್ಯಂತ ಸವಾಲಿನ‌ ಕೆಲಸಗಳಲ್ಲಿ ಒಂದು ಎಂಬ ಭಾವ ಮೂಡಿತು.

My favorite genre for books have always been biographies! ನಾನು ಫಿಕ್ಷನ್ ಬರೆಯುವವನಾದರೂ ಒಬ್ಬ ಓದುಗನಾಗಿ ನನಗೆ ನಾನ್ ಫಿಕ್ಷನ್ ಸಾಹಿತ್ಯವೆ ಹೆಚ್ಚು ಆಪ್ತವಾಗುವುದು. ದನದ ಡಾಕ್ಟರೊಬ್ಬರ ಮನಕಲಕುವ ಆತ್ಮಕಥೆಯಾದ “ಗಂಗೆ ಬಾರೆ ಗೌರಿ ಬಾರೆ” ನಾನು ಕಳೆದ ವರ್ಷ ಓದಿದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು..

ಕರ್ನಾಟಕದ ವಿವಿಧ ಜಿಲ್ಲೆಗಳ ಜನರು ಅವರ ಕೃಷಿ ಸಂಸ್ಕೃತಿ ಮತ್ತು ಅಲ್ಲಿನ‌ ಹವಾಮಾನವು ಒಂದಕ್ಕಿಂತ ಒಂದು ವಿಭಿನ್ನ. ಬಯಲುಸೀಮೆ, ಮಲೆನಾಡು, ಅರೆಮಲೆನಾಡು, ದಕ್ಷಿಣ ಕನ್ನಡ ಹೀಗೆ ವಿವಿಧ ಕಡೆಗಳಲ್ಲಿ ಪಶು ವೈದ್ಯರಾಗಿ ಸೇವೆ ಸಲ್ಲಿಸಿದ ಮಿರ್ಜಾ ಬಶೀರ್ ಅವರು ತಮ್ಮ ವೃತ್ತಿಯ ಅನುಭವಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ಗಂಗೆ ಬಾರೆ, ಗೌರಿ ಬಾರೆ” ಪುಸ್ತಕದಲ್ಲಿ ಚಿತ್ರಿಸಿದ್ದಾರೆ.‌ ಅವರ ಹಾಸ್ಯ ಪ್ರಜ್ಞೆ ಮತ್ತು ಆಕರ್ಷಕವಾಗಿ ಬರೆಯುವ ಶೈಲಿ ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಯಿತು.

ಹೋಬಳಿ ಮಟ್ಟದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿಯು ಎದುರಿಸಬೇಕಾಗಿ ಬರುವ ಅಡಳಿತ ವ್ಯವಸ್ಥೆಯ ಲೋಪದೋಷಗಳು, ವರ್ಗಾವಣೆಯ ಕಿರಿಕಿರಿಗಳು, ಪಟ್ಟಭದ್ರ ಹಿತಾಸಕ್ತಿಗಳ ಕಿರುಕುಳಗಳು ಹೀಗೆ ಎಲ್ಲವನ್ನೂ ಅವರು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ. ಮುಗ್ದ ಜನರು “ಸಾಬ್ರಾದ್ರೂ ಬಶೀರ್ ಡಾಕ್ಟರ್ ಅಂತವರಲ್ಲ” ಎಂದು ಹೇಳಿದ ಘಟನೆಗಳನ್ನು ಲೇಖಕರು ನಗುನಗುತ್ತಲೇ ಸ್ವೀಕರಿಸಿದ್ದಾರೆ. ಈ ಪುಸ್ತಕದಲ್ಲಿ ಬರುವ ಅಮಾಸೆಗೌಡ..ಕತ್ತೆ ಸಿದ್ದಣ್ಣನ ಪ್ರಕರಣಗಳು ಎಷ್ಟು ಸೊಗಸಾಗಿ ಮೂಡಿ ಬಂದಿವೆಯೆಂದರೆ ಈ ಪುಸ್ತಕದಲ್ಲಿ ಬರುವ ವಿವಿಧ ಅಧ್ಯಾಯಗಳಿಗೆ ಸ್ವಲ್ಪ ಮಸಾಲೆ ಸೇರಿಸಿದರೆ ಇದು ಉತ್ತಮ ವೆಬ್ ಸೀರೀಸ್ ತಯಾರಿಸಲು ವಸ್ತುವಾಗಬಹುದು.

ಗ್ರಾಮೀಣ ಭಾಗದ ರೈತರ ಮುಗ್ದತೆಯನ್ನು ಮತ್ತು ಅವರು ಎದುರಿಸುವ ಸಮಸ್ಯೆಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿರುವ ಮಿರ್ಜಾ ಬಶೀರರು ಈ ಪುಸ್ತಕದಲ್ಲಿ ಚಿತ್ರಿಸಿರುವ‌ ಶಿಕ್ಷಣ ವಂಚಿತ ಬಡವರ ಉದಾರತೆಯ ಉದಾಹರಣೆಗಳು ಕಣ್ಣನ್ನು ತೇವಗೊಳಿಸುತ್ತದೆ. ಇಂದಿನ ದಿನ ಕೃಷಿಯಿಂದ ವಿಮುಖವಾಗುತ್ತಿರುವ ರೈತಾಪಿ ಜನರು ಕೈಗಾರಿಕಾ ಕಾರ್ಮಿಕರಾಗಿ ಗಾರೆಕೆಲಸದವರಾಗಿ ಊರು ಬಿಡುತ್ತಿದ್ದಾರೆ. ಅನಕ್ಷರಸ್ಥ ರೈತರು ಶತಮಾನಗಳ ಕಾಲ ತಮ್ಮ ಕೃಷಿಯ ಜೊತೆಗೆ ಜೋಡಿಸಿಕೊಂಡ ಪಶು ಸಂಗೋಪನೆಯಿಂದಲೂ ವಿಮುಖರಾಗುತ್ತಿದ್ದಾರೆ.

ಈ ಪುಸ್ತಕದಲ್ಲಿ ಬರುವ ಸುಮಾರು ಎರಡು -ಮೂರು ದಶಕಗಳ ಹಿಂದಿನ ಗ್ರಾಮೀಣ ಕರ್ನಾಟಕದ ರೈತಾಪಿ ಜನರು ಮತ್ತು ಅವರ ದನಗಳಿಗಿದ್ದ ಅವಿನಾಭಾವವಾದ ಸಂಬಂಧವು ಇನ್ನು ಕೇವಲ ನೆನಪು ಮಾತ್ರ! ಮಿರ್ಜಾ ಬಶೀರರು ಈ ಸವಾಲಿನ‌ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ಮಾಡಲು ಅವರ ಶ್ರೀಮತಿಯಾದ ಹಸೀನಾರವರ ನೀಡಿದ ಸಹಕಾರದ ಬಗ್ಗೆಯೂ ಅವರು ನವಿರಾಗಿ ಬರೆದಿದ್ದಾರೆ.

ಪುಸ್ತಕ : ‘ಗಂಗೆ ಬಾರೆ ಗೌರಿ ಬಾರೆ’
ಲೇಖಕರು : ಡಾ ಮಿರ್ಜಾ ಬಷೀರರ
ಕೃತಿಯ ಬೆಲೆ : ರೂ 300
ಸಂಪರ್ಕಿಸಿ – 70191 82729

ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://bit.ly/3Xrr3Wu

‍ಲೇಖಕರು Admin

January 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಡಾII ಮಿರ್ಜಾ ಬಷೀರ್. ತುಮಕೂರು

    ವಂದನೆಗಳು ಕುಶ್ವಂತ್ ಸರ್

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಡಾII ಮಿರ್ಜಾ ಬಷೀರ್. ತುಮಕೂರುCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: