ಕುವೆಂಪು ನೋಡಲು ಹೋದ್ರಂತೆ ಅಮಿತ್ ಷಾ

ಬಿ.ಆರ್. ಸತ್ಯನಾರಾಯಣ

 

ನಿರೀಕ್ಷೆಯಂತೆ ಅಮಿತ್ ಷಾ ಕುಪ್ಪಳಿಗೆ ಹೋಗಿ ಕವಿಗೆ ನಮನ ಸಲ್ಲಿಸಿ ಬಂದಿದ್ದಾರೆ!

ದೆಹಲಿಯ ನಾಯಕರಿಗೆಲ್ಲಾ ವಿಧಾನಸಭೆ ಚುನಾವಣೆ ಬಂತೆಂದರೆ, ಆಯಾಯ ರಾಜ್ಯದಲ್ಲಿ ಗೆಲುವಿಗೆ ಏನೇನು ತಂತ್ರ ರೂಪಿಸಬೇಕೆಂದೇ ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ.

ಆಯಾಯ ರಾಜ್ಯಗಳಲ್ಲಿ ಭೇಟಿ ನೀಡಬಹುದಾದ ಮಠಮಾನ್ಯಗಳು ದೇವಸ್ಥಾನಗಳು, ಭಾಷಣಗಳಲ್ಲಿ ಉದ್ಧರಿಸಬಹುಹದಾದ ಸಾಧಕರ ಹೆಸರುಗಳು. ಇವೆಲ್ಲವನ್ನೂ ಸ್ಥಳೀಯ ನಾಯಕರು ಪಟ್ಟಿ ಮಾಡುತ್ತಾ ಕೂರುತ್ತಾರೆನ್ನಿಸುತ್ತದೆ. ದೆಹಲಿ ನಾಯಕರು ಬಂದು ಇಲ್ಲಿಯ ಸಾಧಕರ ಹೆಸರುಗಳನ್ನು ತಪ್ಪುತಪ್ಪಾಗಿ ಉಚ್ಛರಿಸಿ ಹೋಗುವುದು ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿದೆ.

ಈಗ ಹೊಸ ಸೇರ್ಪಡೆ ಕುವೆಂಪು-ಕುಪ್ಪಳಿ!

ಬಸವಣ್ಣ, ನಾರಾಯಣಗುರು, ಕೆಂಪೇಗೌಡ, ವಿಶ್ವೇಶ್ವರಯ್ಯ, ಕುವೆಂಪು ಮೊದಲಾದ ಈ ನಾಡಿನ ಸಾಧಕರ ಹೆಸರುಗಳನ್ನು ದೆಹಲಿ ನಾಯಕರ ಬಾಯಲ್ಲಿ ಹೇಳಿಸಿ, ಕನ್ನಡಿಗರ ಮತವನ್ನು ಬಾಚಬಹುದು ಎಂಬ ಕಿಲಾಡಿ(!) ಐಡಿಯಾ ಅದ್ಯಾವ ಮಹಾನಾಯಕನಿಗೆ ಹೊಳೆಯಿತೊ ತಿಳಿಯದು. ಮಾದ್ಯಮಗಳೂ ಅದಕ್ಕೆ ಅನಗತ್ಯ ಮಹತ್ವ ಕೊಡುತ್ತಿರುವುದು ದುರಂತವೇ ಸರಿ. ಅಷ್ಟಕ್ಕೂ ಈ ಸಾಧಕರ್ಯಾರೂ, ದೆಹಲಿ ನಾಯಕರ ಬಾಯಲ್ಲಿ ಉಲ್ಲೇಖಗೊಂಡು ದೊಡ್ಡವರಾಗಬೇಕಿಲ್ಲ; ಕನ್ನಡಿಗರ ಮನಗಳಿಗೆ ಪ್ರವೇಶ ಪಡೆಯಬೇಕಿಲ್ಲ ಅಲ್ಲವೆ?

ಮೊನ್ನೆಯಷ್ಟೇ ರಾಹುಲ್ ಗಾಂಧಿ ಮೈಸೂರಿನಲ್ಲಿ ಕುವೆಂಪು ಹೆಸರು ಹೇಳಿ ಹೋಗಿದ್ದಾರೆ. ಈಗ ಅಮಿತ್ ಷಾ ಸರದಿ. ‘ನೀನು ಹೆಸರು ಮಾತ್ರ ಹೇಳಿದ್ದೀಯಾ? ನೋಡು ನಾನು ಕುಪ್ಪಳಿಗೇ ಹೋಗುತ್ತಿದ್ದೇನೆ, ನೋಡು’ ಎಂದು ಸವಾಲು ಹಾಕುವಂತೆ ಕಾಣುತ್ತಿದೆ.

ಕನ್ನಡಿಗರಿಗೆ ಕುವೆಂಪು ಅಂದರೆ, ಒಂದು ಭವ್ಯವಾದ ಕಲ್ಪನೆ ಇದೆ. ಕನ್ನಡಿಗ-ಭಾರತೀಯ ಎಂಬ ಗಡಿಗಳನ್ನು ದಾಟಿದ ವಿಶ್ವಮಾನವ ಪರಿಕಲ್ಪನೆಯ ಸಾಕಾರ ಮೂರ್ತಿ ಕುವೆಂಪು.

ಭಾರತ-ಬಿಜೆಪಿ-ಹಿಂದುತ್ವ ಎಂಬ ಪರಿಕಲ್ಪನೆಯ ಸಾಕಾರಮೂರ್ತಿ ಅಮಿತ್ ಷಾ!

ಬಹುಶಃ ಈ ಚುನಾವಣೆಯಿಲ್ಲದಿದ್ದಲ್ಲಿ ಅಮಿತ್ ಷಾ ಕಿವಿಯ ಮೇಲೆ ಕುವೆಂಪು ಹೆಸರು ಬೀಳುತ್ತಿತ್ತೆ? ಉತ್ತರ ಎಲ್ಲರಿಗೂ ಗೊತ್ತಿರುವಂತದ್ದೆ.

ಕುಪ್ಪಳಿಯಲ್ಲಿ ಅಮಿತ್ ಷಾ ನೀಡಿರುವ ಹೇಳಿಕೆಯೆಂದು ಪತ್ರಿಕೆಯಲ್ಲಿ ಪ್ರಕಟವಾಗಿರುವ ಹೇಳಿಕೆಯನ್ನು ಗಮನಿಸಿ: “ಜ್ಞಾನಪೀಠ ಪುರಸ್ಕೃತ ಕುವೆಂಪು ಅವರ ‘ರಾಮಾಯಣ ದರ್ಶನಂ’ ರಾಷ್ಟ್ರದಲ್ಲಿಯೇ ಉತ್ಕೃಷ್ಟ ಗ್ರಂಥ. ಅವರ ಕೃತಿಗಳಲ್ಲಿ ವಿವೇಕಾನಂದ ಚಿಂತನೆ ಮತ್ತು ಸಂದೇಶಗಳನ್ನು ಪ್ರತಿಪಾದಿಸಿರುವುದು ಮಹತ್ವದ ವಿಚಾರ. ಅವರ ವಿಶ್ವಮಾನವ ಸಂದೇಶ ಸಾರ್ವಕಾಲಿಕ.”

‘ರಾಮಾಯಣ ದರ್ಶನಂ’ ಹಿಂದಿ ಅನುವಾದದ ಪ್ರತಿಯನ್ನು ಅಮಿತ್ ಕೈಯಿಂದ ಮುಟ್ಟಿದ್ದು, ಕಣ್ಣಿಂದ ನೋಡಿದ್ದು ನಿನ್ನೆಯಷ್ಟೆ! ತಕ್ಷಣ ಅದೊಂದು ಉತ್ಕೃಷ್ಟ ಗ್ರಂಥ ಎಂಬ ಅಭಿಪ್ರಾಯ ಅವರಿಂದ ಬರುತ್ತದೆ. ಮಾಧ್ಯಮಗಳು ಅದನ್ನು ಪ್ರಕಟಿಸುತ್ತವೆ! ಒಟ್ಟು ಹೇಳಿಕೆಯೇ ಯಾರೋ, ಒಂದರ್ಧ ಗಂಟೆಯ ಹಿಂದೆ ಕಾರಿನಲ್ಲಿ ಬರುವಾಗ ಹೇಳಿಕೊಟ್ಟ ಮಾತುಗಳ ಗಿಳಿಪಾಠ. ಇನ್ನು ಮುಂದುವರೆದು ಸಿದ್ಧರಾಮಯ್ಯ ಸರ್ಕಾರ ಕುವೆಂಪು ಅವರ ವಿಶ್ವಮಾನವ ತತ್ವದ ಆಶಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.

‘ಪರಂಪರೆ ಮತ್ತು ಕುವೆಂಪು’ ಎಂಬ ಲೇಖನದಲ್ಲಿ, ತೇಜಸ್ವಿಯವರು ಗುರುತಿಸಿರುವಂತೆ ಕುವೆಂಪು ವಿರುದ್ಧದ ಟೀಕೆಗಳಿಗೆ ಎರಡು ನೆಲೆಗಳಿವೆ. ಒಂದು, ಕುವೆಂಪು ಶೂದ್ರವಾದಿ; ಬ್ರಾಹ್ಮಣ ಅಥವಾ ವೈದಿಕ ಸಂಪ್ರದಾಯ ವಿರೋಧಿ ಎಂದು.

ಎರಡನೆಯದು ಕುವೆಂಪುರವರ ಬ್ರಾಹ್ಮಣ ವಿರೋಧ ಕೇವಲ ಸಾಮಾಜಿಕ. ಅವರು ಆಳದಲ್ಲಿ ಪ್ರತಿಪಾದಿಸುವುದು ಆರ್ಯಸಂಸ್ಕೃತಿಯನ್ನೇ, ಆದ್ದರಿಂದ ಕೊನೆಗೂ ವೈದಿಕ ಸಂಸ್ಕೃತಿಗೆ ಅದರಿಂದ ಲಾಭ ಎಂಬುದು! ಈ ಚುನಾವಣೆಯಲ್ಲಿ ಅಥವಾ ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲಿ ಜಾತಿ-ಮತ-ಧರ್ಮಗಳೇ ಪ್ರಮುಖವಾಗಿ ಕೆಲಸ ಮಾಡುತ್ತಿರುವುದರ ಹಿನ್ನೆಲೆಯಲ್ಲಿ ಮೇಲಿನ ಮಾತುಗಳನ್ನು ಮನನ ಮಾಡಿಕೊಳ್ಳಬೇಕಾಗಿದೆ.

ಬುದ್ಧ, ಬಸವ, ಗಾಂಧಿ, ಭಗತ್ ಸಿಂಗ್, ಅಂಬೇಡ್ಕರ್ ಮೊದಲಾದ ವಿಶ್ವಮಾನವರು ಹಿಂದುತ್ವವಾದಿಗಳ, ಜಾತಿವಾದಿಗಳ ಬ್ಯಾನರಿನಲ್ಲಿ ಕಾಣಿಸಿಕೊಂಡಂತೆ ಕುವೆಂಪು ಅವರು ಕಾಣಿಸಿಕೊಳ್ಳಬಹುದು. ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅವನನ್ನು ವಿಶ್ವಮಾನವನನ್ನಾಗಿ ಮಾಡುವುದೆ ವಿದ್ಯೆ ಕರ್ತವ್ಯವಾಗಬೇಕು ಎನ್ನುತ್ತಾರೆ ಕುವೆಂಪು.

ಆದರೆ, ವಿದ್ಯೆಯಿಂದ, ಸಾಧನೆಯಿಂದ, ತಪಸ್ಸಿನಿಂದ ವಿಶ್ವಮಾನವತ್ವಕ್ಕೇರಿದ ಮಹನೀಯರನ್ನೆಲ್ಲಾ ಒಂದೊಂದು ಮತಕ್ಕೆ, ಧರ್ಮಕ್ಕೆ, ಜಾತಿಗೆ ಕಟ್ಟಿಹಾಕುವುದಕ್ಕೆ ರಾಜಕೀಯ ಪಕ್ಷಗಳು ಅವಿರತ ಶ್ರಮಿಸುತ್ತಿವೆ, ಅವರ ಹೆಸರಿನಲ್ಲಿ ಧರ್ಮಸ್ಥಾಪನೆಗೆ ಪಣ ತೊಡುತ್ತಿವೆ, ವಿಶ್ವಮಾನವರನ್ನು ಕುಬ್ಜಮಾನವರನ್ನಾಗಿಸಲು!

ಜವಹರಲಾಲ್ ನೆಹರೂರವರ ಬಗ್ಗೆ ಕುವೆಂಪು ಅವರಿಗೆ ಅಭಿಮಾನವಿತ್ತು. ತಮ್ಮ ಬರಹಗಳಲ್ಲಿ ಅಲ್ಲಲ್ಲಿ ಅದನ್ನು ವ್ಯಕ್ತಪಡಿಸಿದ್ದಾರೆ ಕೂಡಾ. ನೆಹರೂ ಅವರ ಮತಧರ್ಮ ನಿರಪೇಕ್ಷ ಮನೋಭಾವ ಕುವೆಂಪು ಅವರಿಗೆ ಅಚ್ಚುಮೆಚ್ಚಿನದಾಗಿತ್ತು. ಕುವೆಂಪು ಬದುಕಿದ್ದ ಕಾಲಕ್ಕೆ ರಾಜಕಾರಣ ಮತ್ತು ಧರ್ಮ, ಈಗಿರುವಂತೆ ಅಷ್ಟೊಂದು ಅಪವಿತ್ರಮೈತ್ರಿಗೆ ಒಳಗಾಗಿರಲಿಲ್ಲವಾದರೂ, ಪ್ರಜಾಪ್ರಭುತ್ವದಲ್ಲಿ ಮತಧರ್ಮ ನಿರಪೇಕ್ಷತೆಯ ಅಗತ್ಯವನ್ನು ಮತ್ತು ಮಹತ್ವವನ್ನು ಕವಿ ಮನಗಂಡಿದ್ದರು.

ಅವರ ವೈಚಾರಿಕ ನಿಲುವು ಅದೇ ಆಗಿತ್ತು. ಆದ್ದರಿಂದಲೇ, ಬಹುತ್ವದ ಭಾರತದಲ್ಲಿ ನೆಹರೂರವರ ನಡೆಯ ಮಹತ್ವವನ್ನು ಕುವೆಂಪು ಬಲ್ಲವರಾಗಿದ್ದರು. ಆದರೆ, ಇಂದು, ನೆಹರೂ ಪಕ್ಷದ ನಾಯಕರು, ಚುನಾವಣೆಯ ಹೊತ್ತಿಗೆ ಮತ ಧರ್ಮ ದೇವಸ್ಥಾನಗಳ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿಯಂತೂ ಬೃಹನ್ನಾಟಕದಂತೆ ಕಾಣುತ್ತದೆ!

ಇನ್ನು, ಬಿ.ಜೆ.ಪಿ. ಪ್ರತಿಪಾದಿಸುತ್ತಿರುವ ಹಿಂದುತ್ವಕ್ಕೂ ಕುವೆಂಪು ಕನಸಿನ ಹಿಂದುತ್ವಕ್ಕೂ ಎಳ್ಳಿನಿತೂ ಸಂಬಂಧವಿಲ್ಲ!  “ಈ ದೇವಾಲಯಗಳ ಸ್ವರೂಪವೆ ಬದಲಾಗದಿದ್ದರೆ, ಶ್ರುತ್ಯಂಶದ ವೇದಾಂತ ದರ್ಶನವನ್ನಾಶ್ರಯಿಸಿ, ಸ್ಮೃತ್ಯಂಶದ ಧರ್ಮಶಾಸ್ತ್ರಪುರಾಣಾದಿಗಳ ಕಾಲದೇಶಾಚಾರಗಳ ಅನಿತ್ಯಾಂಶಗಳನ್ನು ತ್ಯಜಿಸದಿದ್ದರೆ ಧರ್ಮದ ವಿನಾಶ ಇಂದಲ್ಲ ನಾಳೆ ಸ್ವತಃಸಿದ್ಧ!

ವರ್ಣಾಶ್ರಮ, ಜಾತಿಪದ್ಧತಿ, ಚಾತುರ್ವರ್ಣ್ಯ ಮೊದಲಾದ ಮೂಢನಂಬಿಕೆಗಳ ಪುರೋಹಿತಶಾಹಿಯಿಂದ ಸಂಪೂರ್ಣವಾಗಿ ಪಾರಾದಂದೇ ಹಿಂದೂಮತವು ವೇದಾಂತ ದರ್ಶನವಾಗಿ, ವಿಶ್ವಧರ್ಮವಾಗಿ, ಸರ್ವಧರ್ಮಗಳನ್ನು ಒಳಗೊಂಡು, ನಿಜವಾದ ವಿಶ್ವಧರ್ಮವಾಗುತ್ತದೆ. ಅಲ್ಲಿಯವರೆಗೂ ಅದು, ಶೂದ್ರಪೀಡನಕರವಾಗಿ ಪುರೋಹಿತ ಪೀಡೆಯ ಬ್ರಾಹ್ಮಣ್ಯ ಮಾತ್ರವಾಗಿರುತ್ತದೆ; ಮತ್ತು ಬುದ್ಧಿಯುಳ್ಳವರಿಗೆ ಜುಗುಪ್ಸೆ ಉಂಟುಮಾಡುವ ಅಸಹ್ಯವಾಗಿರುತ್ತದೆ.” ಇದು ಹಿಂದೂ ಧರ್ಮದ ಬಗ್ಗೆ ಕುವೆಂಪು ಅವರ ಕಡಕ್ ನುಡಿಗಳು. ಸುಮಾರು ಅರ್ಧ ಶತಮಾನದ ಹಿಂದೆ ಕುವೆಂಪು ಬರೆದ ಈ ಟಿಪ್ಪಣಿ ಇಂದಿಗೂ ಪ್ರಸ್ತುತ.

ಇವತ್ತಿಗೂ ಜಾತಿಪದ್ಧತಿ, ಮೂಢನಂಬಿಕೆಗಳು, ಪುರೋಹಿತಶಾಹಿ ಇವೆಲ್ಲವೂ ದೇಹಕ್ಕಂಟಿದ ಕ್ಯಾನ್ಸರಿನಂತೆ ಬಾಧಿಸುತ್ತಿವೆ. ಅಂತಹುದರಲ್ಲಿ, ಹಿಂದುತ್ವವೊಂದೇ ಸತ್ಯ! ಹಿಂದುತ್ವವೇ ಭಾರತೀಯತೆ, ಹಿಂದುತ್ವದ ವಿರುದ್ಧ ಮಾತನಾಡುವುದೇ ದೇಶದ್ರೋಹ, ಹಿಂದುತ್ವವನ್ನು ಪ್ರತಿಪಾದಿಸುವ ಪಕ್ಷದ ವಿರುದ್ಧ ಮಾತನಾಡುವುದೇ ದೇಶದ್ರೋಹ… ಎಂಬ ಸಂಕುಚಿತ ಮನಸ್ಥಿತಿಯ ಉತ್ಪಾದಕರೂ ಉದ್ಧಾರಕರೂ ಆದ ಪಕ್ಷದ ಅಧ್ಯಕ್ಷ ಅಮಿತ್ ಷಾ, ಕುವೆಂಪು ವಿಚಾರಧಾರೆಯನ್ನು ಮುಖಾಮುಖಿಯಾಗಿದ್ದು ಅಸಂಗತ ನಾಟಕವೊಂದರ ತುಣುಕಿನಂತೆ ಕಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ಇಂತಹುದಕ್ಕೆ ಹೆಚ್ಚು ಹೆಚ್ಚು ಮಹತ್ವ ಕೊಡುತ್ತಿರುವ ರಾಜ್ಯ ನಾಯಕರುಗಳು – ಎಲ್ಲಾ ಪಕ್ಷದವರೂ- ವಿದೂಷಕರಂತೆ ಕಾಣುತ್ತಿದ್ದಾರೆ.

ಅಮಿತ್ ಷಾ ಆಗಲಿ, ರಾಹುಲ್ ಗಾಂಧಿಯೇ ಆಗಲಿ, ಈ ದೇಶದ ಈಗಿನ ಪ್ರಧಾನಿ ನರೇಂದ್ರ ಮೋದಿಯೇ ಆಗಲಿ, ಇನ್ನಾವ ದೆಹಲಿ ನಾಯಕನೇ ಆಗಲಿ ಇವರ ಬಾಯಲ್ಲಿ ಉಲ್ಲೇಖಗೊಂಡು ಕುವೆಂಪು ಮೊದಲಾದವರು ದೊಡ್ಡವರಾಗಬೇಕಿಲ್ಲ. ಜಾತಿವಾರು ದೇವಾಲಯ-ಮಠಗಳಿಗೆ ಎಡತಾಕುವವರು, ಜಾತಿ ಮತಗಳ ಲೆಕ್ಕದಲ್ಲಿ ಮತ ಕೇಳುವುವವರು, ಜಾತಿ ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚುವವರು… ನಮ್ಮ ಸಾಧಕರ ಹೆಸರನ್ನು ಉಲ್ಲೇಖಿಸುವುದು, ಅವರಿಗೆ ಮಾಡುವ ಅವಮಾನವೆಂದೇ ನನಗನ್ನಿಸುತ್ತದೆ.

ಕನಿಷ್ಠ, ಎಲ್ಲ ಪಕ್ಷಗಳ ರಾಜ್ಯ ನಾಯಕರು ಪೈಪೋಟಿಯ ಮೇಲೆ ಕನ್ನಡ ನಾಡಿನ ಸಾಧಕರ ಹೆಸರನ್ನು, ದೆಹಲಿಯವರ ಬಾಯಿಂದ ಹೇಳಿಸುವ ಬದಲು ಕನ್ನಡ ನಾಡಿನ ಅಸ್ಮಿತೆಯನ್ನು ದೆಹಲಿ ನಾಯಕರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಇದು ಅಸಂಭವನೀಯ ಎಂಬ ಅರಿವು ನನಗಿದೆ.

ಅದಕ್ಕೂ ಮೊದಲು ದೆಹಲಿ ನಾಯಕರೇನೂ ಮೇಲಿನಿಂದ ಇಳಿದು ಬಂದವರಲ್ಲ, ಅವರೂ ನಮ್ಮಂತೆ ಅನ್ನ ತಿನ್ನುವ ಕಕ್ಕ ಮಾಡುವ ನರಮನುಷ್ಯರು ಎಂಬುದನ್ನು ರಾಜ್ಯ ನಾಯಕರು ಮನಗಾಣಬೇಕಿದೆ. ಜೊತೆಗೆ ಕನ್ನಡಿಗರು, ಕನ್ನಡದ ಮಾಧ್ಯಮಗಳು ಸಹ ದೆಹಲಿಯವರು, ನಮ್ಮವರ ಹೆಸರನ್ನು ಉಲ್ಲೇಖಿಸುವುದೇ ಪರಮಪಾವನ ಎಂಬಂತೆ ನಂಬುವುದನ್ನು ನಂಬಿಸುವುದನ್ನು ನಿಲ್ಲಿಸಬೇಕಿದೆ.

‍ಲೇಖಕರು Avadhi GK

March 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Shama Nandibetra

    “ದೆಹಲಿ ನಾಯಕರೇನೂ ಮೇಲಿನಿಂದ ಇಳಿದು ಬಂದವರಲ್ಲ, ಅವರೂ ನಮ್ಮಂತೆ ಅನ್ನ ತಿನ್ನುವ ಕಕ್ಕ ಮಾಡುವ ನರಮನುಷ್ಯರು ಎಂಬುದನ್ನು ರಾಜ್ಯ ನಾಯಕರು ಮನಗಾಣಬೇಕಿದೆ. ಜೊತೆಗೆ ಕನ್ನಡಿಗರು, ಕನ್ನಡದ ಮಾಧ್ಯಮಗಳು ಸಹ ದೆಹಲಿಯವರು, ನಮ್ಮವರ ಹೆಸರನ್ನು ಉಲ್ಲೇಖಿಸುವುದೇ ಪರಮಪಾವನ ಎಂಬಂತೆ ನಂಬುವುದನ್ನು ನಂಬಿಸುವುದನ್ನು ನಿಲ್ಲಿಸಬೇಕಿದೆ.”

    Perfect

    ಆದರೆ ಇದು ಆಗೋ ಕೆಲಸ ಅಲ್ಲ ಬಿಡಿ. ಎಲ್ಲರೂ ಯಾರ ಹಿಂದೆ ಹೋದರೆ ತಮ್ಮ ಕೆಲಸ ಸುರಳೀತ ಎಂಬುದನ್ನು ಯೋಚನೆ ಮಾಡೋರೇ ವಿನಃ ದೇಶದ ಐಕ್ಯತೆ ಮಾನವತೆ ಬಗೆಗಲ್ಲ!

    ಪ್ರತಿಕ್ರಿಯೆ
  2. Shyamala Madhav

    ನಿಜಕ್ಕೂ ಅಸಂಗತ ನಾಟಕ. ಉತ್ತಮ ಬರಹ.

    ಪ್ರತಿಕ್ರಿಯೆ
  3. K. Rajakumar

    ಉಚ್ಚಾರ ಸರಿ.
    ನಾರಾಯಣಗುರು ಮಾನ್ಯರು. ಆದರೆ ಅವರನ್ನು ಕರುನಾಡಿನ ಸಾಧಕರ ಪಟ್ಟಿಯಲ್ಲಿ ಇರಿಸಲಾಗಿದೆ.

    ರಾಜಕಾರಣಿಗಳ ದೇಗುಲದೋಟವಾಗಲೀ; ಸಮಾಧಿ, ಖಬರಸತಾನಗಳ ಭೇಟಿಯಾಗಲೀ ಅದು ನಿಶ್ಚಿತವಾಗಿ ಮತಬೇಟೆಯೇ!

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Shyamala MadhavCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: