‘ಕವಿತೆ ಬಂಚ್’ನಲ್ಲಿ ಗಾಯತ್ರಿ ರವಿ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಗಾಯತ್ರಿ ರವಿ
ಗಾಯತ್ರಿ ಸದ್ಯ ಹುಬ್ಬಳಿಯ ಪ್ರಧಾನ ಅಂಚೆ ಕಚೇರಿಯ ಉದ್ಯೋಗಿ. ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಹಟಗಿನಹಾಳದವರು. ಈಗಾಗಲೆ ಮಂಜು ಹನಿಗಳು, ಕುರುಡನಿಗೆ ಕನ್ನಡಿ (ಕವನ ಸಂಕಲನಗಳು) ಶಶೂನ ಸೈಕಲ್ (ಲಲಿತ ಪ್ರಬಂಧಗಳು) ಕೃತಿಗಳು ಪ್ರಕಟವಾಗಿವೆ. ಡಾ. ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ ಅವರುಗಳ ಕುರಿತು ಲೇಖನಗಳು ಪ್ರಕಟವಾಗಿವೆ.

1. ಬಯಸಿದ ಬಣ್ಣ

ಜನ ಸಂದಣಿಯೇ ಇಲ್ಲದ
ಜಗವೊಂದು ಬೇಕಾಗಿದೆ
ದಾರಿ ತೋರುವ ಗುರುವಿನ ಹೊರತಾಗಿ

ಎಂದೋ ಕಟ್ಟಿಕೊಂಡ
ಗೋಡೆಗಳನು ಕೆಡುವ ಬೇಕಿದೆ
ನೆರಳು ನೀಡುವ ಸಸಿಗಳ ನೆಡುತ

ನಾನೇ ಹಾಕಿಕೊಂಡ
ಗೆರೆಯನ್ನ ದಾಟಿ ಬರಬೇಕಿದೆ
ದಡಕಾದ ಖಾತ್ರಿ ನನ್ನದು

ಬೇಡವಾದುದವ ತುಂಬಿ
ತಿಪ್ಪೆಗೆಸೆಯ ಬೇಕಿದೆ
ಗಿಡಕೆ ಗೊಬ್ಬರವಾದರೂ ಆದೀತು

ಮುಖವಾಡವಿಲ್ಲದ
ಮುಖವೊಂದು ಬೇಕಾಗಿದೆ
ನೀರ ಬಿಂಬ ಕದಲದಂತೆ

ಚಿತ್ತದಲಿ ಕೆತ್ತಿದ ಚಿತ್ರವನು
ಚಿತ್ತಾರವಾಗಿಸಬೇಕಿದೆ
ಬಯಸಿದ ಬಣ್ಣ ಮಾಸದಂತೆ

2. ಬುದ್ಧನಾಗ ಹೊರಟವಳಿಗೆ

ಬುದ್ಧನಾಗಲು
ನಾನೆದ್ದು ಕಣ್ಣು ಹಾಯಿಸಿದೆ
ಅರ್ಧ ರಾತ್ರಿಯಲಿ
ಬೋಧಿವೃಕ್ಷಕೆ;
ಬರಿಗಾಲ ಯಾತ್ರೆ

ಹಗಲೆಲ್ಲ ಸುರಿವ ಮಳೆಗೆ
ಮುದುಡಿ ಮಲಗಿದೆ ಮನೆ
ಫ್ಯಾನಿನ ಸದ್ದು

ಅಂಗಾತ ಬಿದ್ದ ರಸ್ತೆಯಲ್ಲಿ
ಹೆಗ್ಗಣ ವಿರಾಜಮಾನ,

ಸದಾ ಚಿಣ್ಣರಿಗಾಗಿ
ಕಾದ ಜೋಕಾಲಿ
ಖಾಲಿ ಖಾಲಿ

ಒಂದಿಂಚು ಬೆಳೆಯದ
ಲೈಟಿನ ಕಂಬದ
ಬೆಳಕಿನ ಸುತ್ತ,
ಕೀಟಗಳ ಆಟ.

ಕೆಳಗೆ ಕತ್ತಲೆ
ಅವನೊಪ್ಪಿಕೊಂಡು
ನಳನಳಿಸುವ
ಅಮೃತಬಳ್ಳಿ

ತೆರೆದ ಬಾಯಿ
ಮುಚ್ಚದಂತೆ
ಕಪ್ಪೆಗಳ ವಟರ್ ವಟರ್

ನಾಯಿಗಳು ಬೊಗಳುತ್ತಿವೆ
ಪಕ್ಕದ ಬೀದಿಯಲಿ
ಭಯದ ಸ್ವರದಲಿ

ದೂರದಲ್ಲೆಲ್ಲೊ, ತನ್ನಿರುವಿಕೆಯನ್ನು
ಸಾಬೀತು ಪಡಿಸಿದ
ಗುರುಖಾನ ಸೀಟಿ

ಉದುರುವ ಎಲೆಯಲ್ಲಿ ಉಲ್ಲಾಸ
ಗಿಡಮರಗಳ ಮೌನ ಸಂಭಾಷಣೆ
ನಾಳೆಗಾಗಿ ಕಾದ ಮೊಗ್ಗುಗಳು

‘ಸೂಯ್’ … ..
ಎನ್ನುತ ಬಂತು
ಗಾಳಿ – ಗೈಯ್ಯಾಳಿ

ಪಕ್ಕೆಂದು ಕರೆಂಟು ಹೋಗಿ
ತೆರೆದ ಕಿಟಕಿಯ, ಹಾಕಿಬಿಟ್ಟೆ
ಬರಿಗಾಲ ನಡಿಗೆಯೆ ಬೇಡ
ಬೋಧಿವೃಕ್ಷವ ಹುಡುಕುವುದೂ ಬೇಡ

ಆಸೆಯೇ ದುಃಖಕ್ಕೆ ಮೂಲ
ಬುದ್ಧನೇ ಹೇಳಿದ್ದು ನೆನಪಾಗಿ
ಇದ್ದುದರಲ್ಲಿಯೇ ಕಾಲುದ್ದ
ಮಾಡಿಕೊಂಡು ಮಲಗಿದೆ

3. ಆಫೀಸ್ ಬಾತ್‌ರೂಮಿನಲ್ಲಿ

ಆಫೀಸಿನ ಬಾತ್‌ರೂಮಿನಲ್ಲಿ
ಖಾಸಗಿ ಬಾತ್‌ಗಳ ವಿಲೇವಾರಿ,
ಕುಚ್ ಖಾಸ್‌ಗಳ ಡಿಲೇವರಿ
ನಿರಾಳ ನಿಟ್ಟುಸಿರು

ಸೋಪು – ಫಿನೈಲುಗಳ ಸಂಗಮ
ಜೀವಜಲ ಪಾಪ ನಾಸಿನಿ ಗಂಗೆಗೆ ನಮನ.

ಗುಸು-ಗುಸು ಪಿಸು ಮಾತು
ಒಣ ಮಾತುಗಳಿಗೆ
ಸಿಹಿ ಬೇವಿನ ಒಗ್ಗರಣೆ,
ಬಾಗಿಲು ಬಡೆದ ಸದ್ದಿಗೆ
ಮುಗುಳ್ನಗೆಯ ಸ್ವಾಗತ

ಒಬ್ಬರಾದ ಮೇಲೆ ಇನ್ನೊಬ್ಬರು
ಸರತಿ ಸಾಲಿನಲ್ಲಿ ನಿಂತವರು
ಕಾಲು ನೋಯುತ್ತಿದ್ದರೂ
ಕಾಲು ಕೆದರುವ ಹಾಗಿಲ್ಲ

ಬಣ್ಣ ಬದಲಾಯಿಸುವುದು,
ಇಲ್ಲದ್ದಕ್ಕೆಲ್ಲ ಬಣ್ಣ ಬರುವುದು
ಇಲ್ಲಯೇ

ಏಕಾಂತ- ಸುಖಾಂತ

ನೀರೆಯ ಸೆರಗು
ಸೀರೆಯ ನೀರೆಗೆಗೆ
ಅಲಂಕಾರದ ಅರಮನೆ

ಎಸೆದದ್ದನ್ನೆಲ್ಲಾ
ಒಡಲೊಳಗೆ ಸೇರಿಸಿಕೊಂಡು
ಹೊರ ಹಾಕದೆ
ಬಾಯಿ ಮುಚ್ಚಿ ಮೂಲೆಯಲ್ಲಿ
ಕುಳಿತ ಡಸ್ಟ್ಬಿನ್

ಕನ್ನಡಿಯ ಮುಂದೆ
ಭಾವನೆಗಳು ಬದಲಾಗುವ ಪರಿಗೆ
ಆಗಾಗ ಅತ್ತು
ಹಗುರಾಗುವ
ಒಣಕಲು ಕಸಬರಿಗೆ

ಎಂದೂ ಲೆಕ್ಕವಿಟ್ಟಿಲ್ಲ,
ಎಲ್ಲೊ
ಏನನ್ನೊ
ಯಾರಲ್ಲೂ ;
ಬಾಯಿ ಬಿಟ್ಟಿಲ್ಲ

4. ಕಸದ ತೊಟ್ಟಿಯಲ್ಲಿ

ಕಸದ ತೊಟ್ಟಿಯಲ್ಲಿ
ತಳವಿರದ ಬುಟ್ಟಿಗಳು

ಪ್ಲಾಸ್ಟಿಕ್ ಚೀಲದಲಿ
ಉಸಿರುಗಟ್ಟಿರುವ
ಅನ್ನದ ಅಗಳು
ಈಗಷ್ಟೇ ಕತ್ತರಿಸಿದ
ನೀರೆಯ ಹೆರಳು

ಕರ‍್ಕಲ್ಲ….
ಕೋಳಿಯ ಪುಚ್ಚವುಂಟು,
ಹಸಿದ ಹೊಟ್ಟೆ
ನೊರಜು ನೊಣ
ನಾಯಿಗಳು,

ಮುಂಗುಷ್ಟು ಕಿತ್ತ ಚಪ್ಪಲಿಗಳು.

ತುಟ್ಟಿಯಾಗದೆ
ತಡವರಿಸಿದ
ತಟ್ಟುಗಳು
ಪಟ್ಟಿಯಾಗದ
ಪಳಯುಳಿಕೆಗಳು

ಅಕ್ಷರ ಅಳಿಸಿದ ಪುಸ್ತಕ,
ಚಿತ್ರ ಕಾಣದ ಸಿಡಿ ಪ್ಲೇಯರ್,
ಬೆಳೆಯಲಾರದ ಬೀಜಗಳು,
ಗೊಬ್ಬರವಾಗದ
ಗರೀಬು ಕನಸುಗಳು,
ಫೇಸ ಇಲ್ಲದ ಬುಕ್‌ಗಳು.

ಸನಿಹದಲ್ಲೇ
ಕೈಯಿಲ್ಲದ ಬಾಬಾನ ಮೂರ್ತಿ
ದಿಕ್ಕು ಕಾಣದ ದೇವರ ಫೂಟೊ !

5. ಕಣ್ಣೀರ ಪಯಣ

ಚಿಕ್ಕವಳಿದ್ದಾಗ
ಅಪ್ಪ ಗದರಿಸಿದರೆ
ಗಲ್ಲ ಉಬ್ಬಿಸಿಕೊಂಡು
ಕಾಣದ ಕರವಸ್ತ್ರ
ಹುಡುಕುತ್ತಿದ್ದೆ
ಕಣ್ಣೀರು ಒರಸಿಕೊಳ್ಳಲು

ಹದಿಹರೆಯದಲಿ
ಅವ್ವನ ಸೆರಗು
ಸದಾ ಸಲಹುವ
ಅಭಯ

ಮುಂದೆ
ಮಕ್ಕಳ ಮೆತ್ತೆನೆಯ
ಅಂಗಿಯ ಚುಂಗಿಗೆ
ಕೈಚಾಚಿ
ಒಂದೊಮ್ಮೆ
ಅವು ಸಾಲದಾಗಿ
ಕಣ್ಣೀರಲ್ಲೇ
ಕೈ ತೊಳೆಯುತ್ತಿದ್ದೆ

ಈ ನಡುವೆ
ಹಸಿ ದುಪ್ಪಟ್ಟಾಗೆ
ಕಣ್ಣೊರಸಿಕೊಂಡು
ಕಾಡಿಗೆ ಹಚ್ಚುವುದ ಬಿಟ್ಟು
ಬಹಳ ದಿನವಾಯಿತು

ಮಳೆಗೆ ಮೈ ನೆನೆದು
ಕನ್ನಡಕದಲಿ ಕಣ್ಣು ಮಂಜಾಗಿ
ಉರಿವ ಒಲೆಯು ಮುಂದೆ
ಕಣ್ ನೀರು ಒಣಗಿ ಹೋಯಿತು

ಕೆಳ ಜಾರದಂತೆ
ಕೊನೆಗೆ
ಕಣ್ಣೀರಿಟ್ಟವಳಿಗೆ
ತಿಳಿಯದಂತೆ

‍ಲೇಖಕರು Admin

October 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ Vagish hugarCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: