ಒಂದು ಸಾವು, ಆರು ವೈರಿಗಳ ಸಂಘರ್ಷ : ಅರಿಷಡ್ವರ್ಗ

ಶರಣು ಹುಲ್ಲೂರು


‘ಅವಧಿ’ REVIEW-

ಜೀವನದ ಆರು ವೈರಿಗಳನ್ನು ಅರಿಷಡ್ವರ್ಗ ಎನ್ನಬಹುದೇನೋ. ಬಯಸುವ ಬಯಕೆ ಕಾಮವಾದರೆ, ಬಯಸಿದ್ದು ಸಿಗದೇ ಇದ್ದಾಗ ಕ್ರೋಧ ಹೊರಹೊಮ್ಮತ್ತದು. ಬಯಕೆ ಹೆಚ್ಚಾದಂತೆ ಲೋಭ ಆವರಿಸಿಕೊಳ್ಳುತ್ತದೆ. ಅದು ತನ್ನನ್ನು ಬಿಡದಂತೆ ಮೋಹ ಪರಿಬಿಡುತ್ತದೆ. ತಾನೇ ಇನ್ನೊಬ್ಬನಾದಾಗ ಮತ್ಸರ ಬೆಳೆಯುತ್ತದೆ. ತನ್ನಲ್ಲಿರುವುದು ಕೈ ಬಿಡದಂತೆ ಎಚ್ಚರವಹಿಸುವುದು ಮದವಾಗುತ್ತದೆ. ಹೀಗಾಗಿಯೇ ಇವನ್ನು ಗೆದ್ದವನು ತನ್ನನ್ನು ತಾನು ಗೆಲ್ಲುತ್ತಾನೆ ಎನ್ನುವುದು ಸಿಂಪಲ್ ಲಾಜಿಕ್.

ಈ ಆರು ಹಿತಶತ್ರುಗಳನ್ನು ಒಟ್ಟಾಗಿಸಿ ಅರಿಷಡ್ವರ್ಗ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಅರವಿಂದ್ ಕಾಮತ್. ಹಾಗಂತ ಇದೊಂದು ವೇದಾಂತ ಹೇಳುವ ಚಿತ್ರವಲ್ಲ. ಶರಣರ ವಾಣಿಗಳಂತೆ ತತ್ವವನ್ನೂ ಇದು ಸಾರುವುದಿಲ್ಲ. ನಮ್ಮೊಳಗಿನ ಈ ಆರು ವೈರಿಗಳ ತಾಕಲಾಟವನ್ನು ಪಾತ್ರಗಳಾಗಿಸಿ ಕುಣಿಸಿದ್ದಾರೆ. ಇದು ಸುಳ್ಳು ಮತ್ತು ಅದೇ ಸತ್ಯ ಎಂಬ ಸಿದ್ಧ ಮಾದರಿಗಳಾಚೆ, ಮತ್ತೊಂದನ್ನು ಹುಡುಕುವ ಸಾರ್ಥಕ ಪ್ರಯತ್ನ ಈ ಚಿತ್ರದ್ದು. ಇದರಾಚೆ ನಾವು ಏನನ್ನೂ ನಿರೀಕ್ಷಿಸಬಾರದು, ಹಾಗೆ ಮಾಡಿದರೆ ಅದು ರಸಭಂಗ.

ಸಿನಿಮಾ ಎನ್ನುವುದು ಕಲ್ಪನಾಲೋಕ. ಒಂದು ಹನ್ನೊಂದಾಗುವ ಭ್ರಮೆ. ಅಂಥದ್ದೊಂದು ಭ್ರಮಾಲೋಕವನ್ನು ಸೃಷ್ಟಿಸಿ, ವಾಸ್ತವದ ವರಾಂಡದಲ್ಲಿ ಹಿಡಿದು ಕೂರಿಸುವಂಥ ನಿರ್ದೇಶಕರ ಪ್ರಯತ್ನ ಹಲವು ರೀತಿಗಳಲ್ಲಿ ಸಫಲ. ಅದಕ್ಕೆ ಕಥೆ, ಕಲಾವಿದರು ಮತ್ತು ಪೂರಕ ಎಲ್ಲ ವಾತಾವರಣಗಳು ಕೈ ಹಿಡಿದಿವೆ. ಈ ಕಾರಣದಿಂದಾಗಿಯೇ ನಮ್ಮೊಳಗಿನ ಕಳ್ಳಾಟಗಳು ನಮ್ಮ ಅರಿವಿಗೆ ಬಾರದಂತೆ ಗರಿಗೆದರುತ್ತವೆ.

ಜೀವಜಗತ್ತಿನ ತಲೆತಲಾಂತರದ ಪದರುಗಳು ಮೆರವಣಿಗೆ ಹೊರಡುತ್ತವೆ. ಅವನು ಪೊಲೀಸ್ ಅಧಿಕಾರಿಯಾ? ಕಳ್ಳನಾ? ಅವಕಾಶವಾದಿಯಾ? ಲಫಂಗನಾ? ಬಯಕೆಯ ಬತ್ತಿ ಹೊತ್ತಿಸಿದ ಲೋಲನಾ? ಎಷ್ಟೊಂದು ಪ್ರಶ್ನೆಗಳು. ಇವೆಲ್ಲದಕ್ಕೂ ಉತ್ತರ ಹುಡುಕಾಡುವ ಪ್ರಯತ್ನವೇ ಅರಿಷಡ್ವರ್ಗ ಸಿನಿಮಾ. ಅಚ್ಚರಿಯಂದರೆ, ಪ್ರಶ್ನೆಗೆ ಹುಟ್ಟುವುದು ಮತ್ತೊಂದು ಪ್ರಶ್ನೆಯೇ ಎನ್ನುವುದು.

ಇದು ಇಂಥದ್ದೇ ವರ್ಗಕ್ಕೆ ಸೇರುವ ಸಿನಿಮಾ ಎಂದು ನಿಚ್ಚಳವಾಗಿ ಹೇಳುವುದು ಕಷ್ಟ. ಮರ್ಡರ್ ಮಿಸ್ಟರಿ ಅಂದರೆ, ಥ್ರಿಲ್ಲರ್ ಕೋಪ ಮಾಡಿಕೊಳ್ಳುತ್ತದೆ. ಇವೆರಡರ ಸಂಗಮವಾ? ಅಂದರೆ, ಸೈಕಲಾಜಿಕಲ್ ಡ್ರಾಮಾ ಬೇಸರಿಸಿಕೊಳ್ಳುತ್ತದೆ. ಕುತೂಹಲದ ಕೊಂಕಿಗೆ ಏನೆಲ್ಲ ಬೆರಸಬಹುದೊ ಅದೆಲ್ಲವನ್ನೂ ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಹಾಗಾಗಿ ನಿಮ್ಮೊಳಗೆ ಹುಟ್ಟುವ ಭಾವಕ್ಕೆ ನೀವೇ ಹೆಸರಿಸಿಕೊಳ್ಳಿ.

ಕೊಲೆಯೊಂದರ ಸುತ್ತ ತೆರೆದುಕೊಳ್ಳುವ ಕಥೆಯಲ್ಲಿ ಕಾಮವಿದೆ. ಅದು ಬಾಯಾರಿದ ಕಾಮ. ಸಾವಿದೆ, ಅದು ಸರಸದ ಸಾವು. ಹಸಿವಿದೆ. ಅದಕ್ಕೆ ಐದಾರು ಮುಖಗಳು. ಈ ತಿಕ್ಕಾಟಗಳ ಸಂಘರ್ಷವೇ ಇಡೀ ಸಿನಿಮಾ.

ಸಿಂಪಲ್ಲಾಗಿ ಕಥೆ ಹೇಳುವುದಾದರೆ, ಇಳಿ ವಯಸ್ಸಿನ ಗಂಡು, ನಡುವಯಸ್ಸಿನ ಹೆಣ್ಣು. ಈ ಗಂಡು ನಿರ್ಮಾಪಕ ಮತ್ತು ಖ್ಯಾತ ಉದ್ಯಮಿ. ಹೆಣ್ಣು ಅವನ ಹೆಂಡತಿ ಮತ್ತು ಫಿಲ್ಮ್ ಎಡಿಟರ್. ಇವಳ ಆಸೆಯೊಂದನ್ನು ಈಡೇರಿಸಲಾಗದ ಗಂಡ ಮರ್ಡರ್ ಆಗುತ್ತಾನೆ. ಹಲವು ಆಮಿಷಗಳನ್ನು ಹೊತ್ತ ಮೂವರು ಹುಡುಗರು ಈ ಸಾವಿನ ಮನೆಗೆ ಅನಿರೀಕ್ಷಿತವಾಗಿ ಪ್ರವೇಶ ಮಾಡುತ್ತಾರೆ. ಈ ಕೊಲೆ ಆಗಿದ್ದು ಹೇಗೆ? ಮಾಡಿದವರು ಯಾರು? ಅದಕ್ಕೆ ಕಾರಣವೇನು? ಯಾರೆಲ್ಲ ಈ ದಾಳಕ್ಕೆ ಸಿಕ್ಕಾಕಿಕೊಂಡು ಅದರಿಂದ ಪಾರಾಗುವುದಕ್ಕೆ ಏನೆಲ್ಲ ಹರಸಾಹಸ ಪಡುತ್ತಾರೆ? ಈ ಮರ್ಡರ್ ಮಿಸ್ಟರಿ ಬೇಧಿಸಲು ಬರುವ ತನಿಖಾಧಿಕಾರಿ ಜಾಣ್ಮೆ ಎಂಥದ್ದು? ಹೀಗೆ ಕುತೂಹಲ ಮೂಡಿಸುವಂತ ಸಾಕಷ್ಟು ಸಂಗತಿಗಳ ಒಟ್ಟು ಹೂರಣವೇ ಸಿನಿಮಾದ ಕಥೆ. ಇಂಥದ್ದೊಂದು ಕಥೆಯನ್ನು ರೋಚಕ ಚಿತ್ರಕಥೆಯಾಗಿಸಿದ್ದೇ ಇದರ ಗೆಲುವು.

ಸಿನಿಮಾದ ಮೊದಲರ್ಧ ನಿಧಾನಗತಿಯಲ್ಲಿ ಸಾಗುತ್ತದೆ. ಹಾಗಂತ ಬೋರು ಹೊಡೆಸುವುದಿಲ್ಲ. ಈ ತನಿಖಾಧಿಕಾರಿ ಇದ್ದಾರಲ್ಲ ಅಶೋಕ್ ಕಲ್ಬುರ್ಗಿ (ನಂದ ಗೋಪಾಲ್) ನಿಧಾನಗತಿಯನ್ನೇ ಮರೆಸುವಂತೆ ನಟಿಸಿ ಬಚಾವ್ ಮಾಡುತ್ತಾರೆ. ದ್ವಿತೀಯಾರ್ಧದ ಚಿತ್ರಕಥೆಯ ಪ್ರತಿ ದೃಶ್ಯವೂ ರೋಚಕ. ನಾನಾ ತಿರುವುಗಳು, ಅವುಗಳನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ ರೀತಿ, ನೋಡುಗನಿಗೆ ಹೊಸ ಅನುಭವ ನೀಡುತ್ತದೆ.

ಸಂಭಾಷಣೆಯಲ್ಲಿ ಸಾಮಾನ್ಯ ನೋಡುಗನಿಗೂ ಹಿಡಿಸುವಂತಹ ಪದಬಳಕೆ ಕೊರತೆ ಬಿಟ್ಟರೆ, (ಇದು ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಎನ್ನಬೇಡಿ) ಸಿನಿಮಾ ಕಟ್ಟಿದ ಕ್ರಮದಲ್ಲಿ ಯಾವುದೇ ಆಕ್ಷೇಪಣೆ ಇಲ್ಲ. ಇಡೀ ಸಿನಿಮಾ ನೋಡುಗನನ್ನು ಆವರಿಸಿಕೊಳ್ಳುವಂತೆ ಮಾಡುವುದು ಸಿನಿಮಾಟೋಗ್ರಫಿ. ಬಾಲಾಜಿ ಮನೋಹರ್ ಅವರ ಸಿನಿಮಾಟೋಗ್ರಫಿ ಚಿತ್ರದ ಜೀವಾಳ ಕೂಡ. ಪ್ರತಿ ಭಾವಗಳನ್ನು ಇಂಚಿಂಚಾಗಿ ಮೊಗೆದು ಕೊಟ್ಟಿದ್ದಾರೆ. ಅರಿಷಡ್ವರ್ಗಗಳಿಗೂ ಒಂದೊಂದು ಬಣ್ಣ ಇದೆಯಾ? ಎಂಬ ಕುತೂಹಲ ಮೂಡಿಸುತ್ತಾರೆ.

ಅದ್ಯಾರ್ರೀ ಅವರು ನಂದ ಗೋಪಾಲ್‍? ಅವರು ನಿಜವಾಗಿಯೂ ನಟರಾಕ್ಷಸ. ಮೌನದಲ್ಲೇ ಮಾತುಗಳನ್ನು ಮುಗಿಸಿಬಿಡುತ್ತಾರೆ. ಏನ್‍ ರೀ ಅದು ನಿಮ್ಮ ಲುಕ್? ಕೂತಲ್ಲಿಯೇ ಎದೆ ನಡುಕ ಹುಟ್ಟಿಸಿ ಬಿಡುತ್ತೀರಿ. ಇದರಾಚೆ ಏನೂ ಹೇಳಲಾರೆ. ಆಟೋ ಡ್ರೈವರ್ ಆಗಿ ನಟಿಸಿರುವ ಗೋಪಾಲ್ ಕೃಷ್ಣ ದೇಶಪಾಂಡೆ ಅವರ ನಟನೆ ಮತ್ತೊಂದು ರೀತಿಯದ್ದು. ಪೊಲೀಸ್ ಎದುರು ಕಾಪೌಂಡ್ ಹಾರುವಾಗಿನ ನಿಮ್ಮದೊಂದು ನೋಟ ಮತ್ತು ಸೆಲ್ ನಲ್ಲಿರುವಾಗ ಪಡುವ ಆತಂಕ ನಿಮ್ಮ ಪ್ರತಿಭೆಗೆ ಸಾಕ್ಷಿ.

ಹಿರಿಯ ರಂಗ ಕಲಾವಿದ ಶ್ರೀಪತಿ ಮಂಜನಬೈಲು, ಅರವಿಂದ್ ಕುಪ್ಳಿಕರ್, ಅವಿನಾಶ್, ಅಂಜು ನಾಯಕ್, ಸಂಯುಕ್ತ ಹೊರನಾಡ್, ಮಹೇಶ್ ನಿಮ್ಮದು ಸಾರ್ಥಕ ನಟನೆ. ಸಿನಿಮಾ ಗೆಲ್ಲುವುದಕ್ಕೆ ಕೇವಲ ಸ್ಟಾರ್ ನಟರಷ್ಟೇ ಬೇಕಿಲ್ಲ ಎನ್ನುವುದನ್ನು ನಿರೂಪಿಸಿದ್ದೀರಿ. ನಮ್ಮೊಳಗಿನ ಅರಿಷಡ್ವರ್ಗಗಳನ್ನು ಉದ್ದೀಪಿಸಿದ್ದೀರಿ. ಈ ಗೆಲುವು ಪಾತ್ರಗಳದ್ದೇ ಆದರು, ನಿಮ್ಮಿಂದಾಗಿಯೇ ಪಾತ್ರಗಳು ಗೆದ್ದಿವೆ.

ಲಾಕ್ ಡೌನ್ ನಂತರದಲ್ಲಿ ಬಿಡುಗಡೆಯಾದ ಎರಡನೇ ಸಿನಿಮಾವಿದು. ಆಕ್ಟ್ 1978 ಸಿನಿಮಾದ ಮೂಲಕ ನಿರ್ದೇಶಕ ಮಂಸೋರೆ ಮೊದಲ ಸಿಕ್ಸರ್ ಬಾರಿಸಿದರೆ, ಈಗ ಅರವಿಂದ್ ಕಾಮತ್ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮ್ಯಾಚ್ ರೋಚಕ ತಿರುವು ಪಡೆದುಕೊಂಡಿದೆ.

‍ಲೇಖಕರು Avadhi

November 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ vedaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: