ಎಲ್ಲ ಸರಿಯಾಗಿದೆ ಎಂಬಂತೆ ಕಾಣುವ ಈ ಕಾಲದಲ್ಲಿ…

ಎಚ್‌ ಎನ್ ಆರತಿ

ಎಲ್ಲ ಸರಿಯಾಗಿದೆ ಎಂಬಂತೆ ಕಾಣುವ, ಭಾಸವಾಗುವ, ಚಂದದ ಬಣ್ಣ ಹೊತ್ತ, ಯಾವಾಗ ಬೇಕಾದರೂ ಬೀಳಬಹುದಾದ ತೇಪೆ ಹಚ್ಚಿದ ಬಿರುಕು ಗೋಡೆಗೆ ಒರಗಿ ನಿಂತಂತೆ ಭಾಸವಾಗುತ್ತಿದೆ.

ಕೋವಿಡ್, ಅನಪೇಕ್ಷಿತ ವೇಗದಲ್ಲಿ ಓಡುತ್ತಿದ್ದ ಬದುಕಿಗೆ ಹಠಾತ್ತಾಗಿ ಹಾಕಿದ ಹ್ಯಾಂಡ್ ಬ್ರೇಕ್. ಸರಿಯಾದ ಬ್ರೇಕ್ ಇಲ್ಲದೆ, ವೇಗವಾಗಿ ಚಲಿಸುವ ಗಾಡಿಗೆ ಹ್ಯಾಂಡ್ ಬ್ರೇಕ್ ಹಾಕಿದರೆ, ಏನೇನು ಅನಾಹುತವಾಗಬಹುದೋ ಕೋಟ್ಯಂತರ ಜೀವಿಗಳ ಬದುಕಿಗೆ ಅವೆಲ್ಲಾ ಆಗಿದೆ.

ಶೀಟ್ ಹೊದಿಸಿ, ಹಗ್ಗಕಟ್ಟಿ ಮೂಲೆಯಲ್ಲಿ ನಿಲ್ಲಿಸಿರುವ ತರಕಾರಿ ತಳ್ಳುಗಾಡಿಯಿಂದ ಹಿಡಿದು, ಒಂದೇ ಸಮನೆ ಸೈರನ್ ಕಿರುಚುತ್ತಾ ಹೋಗುವ ಆಂಬುಲೆನ್ಸ್ ವರೆಗೆ ಕಣ್ಣು ನೋಯುವಷ್ಟು, ಮನಸ್ಸು ತಳಮಳಿಸುವಷ್ಟು ದಾರುಣ ಕತೆಗಳ ಕೊಲಾಜ್ ಚಿತ್ರಗಳು ಮಲಗಲು ಬಿಡುತ್ತಿಲ್ಲ.

ಇವೆಲ್ಲದರ ನಡುವೆ ತುಂಬಾ ಜನರಿಗೆ ಈ ಸಹಿಸಲಾಗದ ಸಾಮಾಜಿಕ,ಮಾನಸಿಕ, ದೈಹಿಕ ಅಂತರದ ಏಕತಾನತೆ ಮತ್ತು ಏಕಾಂತವನ್ನು ಸಹಿಸುವಂತೆ ಮಾಡಿದ್ದು, ಅಂಗೈಯಲ್ಲಿ Tiktok ಆಡುವ ಅರಗಿಳಿಯಂತಹ ಫೋನ್, Laptopಗಳಿಂದ ಧರೆಗಿಳಿದ ಸಾಮಾಜಿಕ ಜಾಲತಾಣ, OTTಗಳ ಮಾಯಕ ಲೋಕ.

ತೆಪ್ಪೋತ್ಸವದ ಮಹಾಮಂಗಳಾರತಿಯಿಂದ ಹಿಡಿದು ನಮ್ಮ ಅಸಂಖ್ಯ ತೆವಲುಗಳ ಬಾಯಾರಿಕೆಗಳಿಗೆ ಒದಗುವವರೆಗೆ ಜಾಲತಾಣಗಳು ತೆರೆದುಕೊಂಡಿವೆ.

ಮಾದಕ ವಸ್ತುಗಳಿಗೆ ದಾಸರಾದಂತೆ, ಪಬ್ಜಿ ಆಟದ ಅಮಲಿನಲ್ಲಿ ತಂದೆ-ತಾಯಿ ಸ್ನೇಹಿತರ ಸಂಬಂಧಗಳನ್ನೇ ಕತ್ತಿ ಬಾಂಬು ಹಾಕಿ ಕೊಲ್ಲುವ ಸ್ಪೋಟಕವು, ನಮ್ಮ ನಮ್ಮ ಮನೆಯಲ್ಲಿ ಲ್ಯಾಪ್ ಟಾಪ್ ರೂಪದಲ್ಲೂ, ಕೈಯಲ್ಲಿ ಮೊಬೈಲಿನ ರೂಪದಲ್ಲೂ ಪರಿವರ್ತಿತವಾಗಿದೆ. ಈ ಅಪಾಯದ ಕರೆಗಂಟೆಗೆ ಕಿವುಡಾಗಿ ಏನು ಕೆಲಸವಿಲ್ಲದಿದ್ದರೂ ಬಿಝಿಯಾಗಿರುವ ಕಾಲಘಟ್ಟವಿದು.

ಇಂತಹ ಸನ್ನಿವೇಶದಲ್ಲಿ ಬರಹಗಾರರ ತಲ್ಲಣಗಳಿಗೆ ಸಶಕ್ತ ಧ್ವನಿಯಾಗಿ ನಿಲ್ಲಲು ಪತ್ರಿಕೆಗಳು ಕೆಲಸ ಮಾಡಿದಂತೆ ಆನ್ಲೈನ್ ಪೋರ್ಟಲ್ ಗಳ ಕೊಡುಗೆ ಅನನ್ಯವಾದದ್ದು.

ನಮಗೆ ದಾನ ಬೇಡ, ಚಲಾವಣೆ ಬೇಕು, ಚಾಲನೆ ಬೇಕು ಎಂಬ ಸತ್ಯಾಗ್ರಹವನ್ನು ಮಾಡುತ್ತಿರುವ ಹಿರಿಯ ರಂಗನಿರ್ದೇಶಕ ಪ್ರಸನ್ನ, ದೇಹ ಲಿಂಗ ಜಾತಿ ಬಣ್ಣದ ಮೇಲೆ ನಡೆಯುವ ರಾಜಕಾರಣವನ್ನು ಜನಪ್ರಿಯತೆಯ ನೆಲೆಯಲ್ಲಿ ವ್ಯಂಗ್ಯವಾಗಿ ಹಿಡಿದಿಟ್ಟಿರುವ ಪ್ರೀತಿಯ ಕವಿ ಲಲಿತಾ ಸಿದ್ಧಬಸವಯ್ಯ, ಸೆಳೆತದ ಸುಳಿಗಳ ಅನೂಹ್ಯ ಆಳದಲ್ಲಿ ಗಿರಗಿಟ್ಲೆಯಾಡುವ ಇಷ್ಟದ ಲೇಖಕಿ ಗೀತಾ ವಸಂತ, ಮಾಸ್ತರರ ಬದುಕಿನ ಒಳ್ಗೆ ಕನ್ನಡಿ ಕೂರಿಸುವ ಕಥೆ ಕೊಟ್ಟ ಸುನಂದಾ ಕಡಮೆ ಮೂರು ವಿಭಿನ್ನ ಪಾತಳಿಯ ಆತ್ಮಕಥನಗಳನ್ನು ಪರಾಮರ್ಶಿಸಿದ ಅಗ್ರಹಾರ ಕೃಷ್ಣಮೂರ್ತಿ, ಹೆಣದ ಮೋಟಯ್ಯ ರಾಜಕೀಯದಲ್ಲಿ ಹೆಣ್ಣಿನ ನಲುಗುವ ಆರ್ಥಿಕ ಸ್ವಾತಂತ್ರ್ಯದ ಜನಪದೀಯ ಚಿತ್ರಣ ನೀಡಿದ ಯುವ ಮಿತ್ರ ಅರುಣ್ ಜೋಳದಕೂಡ್ಲಿಗಿ, ಭಾವತೀವ್ರತೆಯ ಸಶಕ್ತ ಅಭಿವ್ಯಕ್ತಿಗೆ ಹೆಸರಾದ ಕವಿ ಗೆಳತಿ ಕಾತ್ಯಾಯಿನಿ ಕುಂಜಿಬೆಟ್ಟು, ಯಾವಾಗಲೂ ಮೆಚ್ಚಿ ಓದುವ ಸಹಕವಿ ಸುಬ್ಬು ಹೊಲೆಯಾರ್, ಮಕ್ಕಳ ಹಕ್ಕುಗಳು, ಜನಪರ ನಿಲವುಗಳನ್ನು ಉಸಿರಾಡುವ ಗೆಳತಿ ರೂಪ ಹಾಸನ, ನೆಲಮೂಲದ ಹೊಸ ಪ್ರತಿಮೆಗಳನ್ನು ಕಟ್ಟುವ ಚೀಮನಹಳ್ಳಿ ರಮೇಶಬಾಬು, LGBT ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಹೋರಾಡುವ ಗೆಳತಿ ಚಾಂದಿನಿ, ತನ್ನ ಮೊದಲ ಸಿನಿಮಾ ನಟನೆಯ ಬಗ್ಗೆ ಲವಲವಿಕೆಯಿಂದ ಮಾತನಾಡುವ ಅಜ್ಜಂಪುರ ಶ್ರುತಿ,… ಹೀಗೆ ಇದೊಂದು ವಿಭಿನ್ನ ನೆಲೆಗಳಿಂದ ಬಂದ ವಿಶಿಷ್ಟ ಧ್ವನಿಗಳ ಗುಚ್ಛ.

“ಅವಧಿ”ಯ ಅಂಗಳ ಎಲ್ಲ ಬರಹಗಾರರ ಆಡುಂಬೊಲ. ಸಾಹಿತ್ಯಲೋಕದಲ್ಲಿ ಎಲ್ಲೇ ಏನೇ ಆಗಲಿ ಅದಕ್ಕೆ ತಕ್ಷಣ ಪ್ರಚಾರ ಪ್ರಸಾರ ನೀಡಿ ತನ್ನದೇ ಸಂಭ್ರಮವೇನೋ ಅನ್ನುವಂತೆ ಒಳಗೊಳ್ಳುವ ವಿಶಾಲ ಹೃದಯ ಅವಧಿ ಬಳಗದ್ದು. ಮೋನಿ ಮ್ಯಾಜಿಕ್ ಫಲಶ್ರುತಿಯೇ ಅವಧಿ.

ಅವಧಿ ಪತ್ರಿಕೆ ಯಾವಾಗಲೂ ನನಗೊಂದು ಸೋಜಿಗ. ನಾವು ಕಂಡು ಕೇಳರಿಯದ ಜಾಗಗಳಿಂದ ಇವರು ಬರಹಗಾರರನ್ನು ಹೆಕ್ಕಿ ತೆಗೆಯುವ ಪರಿಗೆ ಬೆರಗಾಗಿದ್ದೇನೆ.

ಯುವ ಬರಹಗಾರರಿಗೆ “ಅವಧಿ” ಒಂದು ಗುಣಮಟ್ಟದ ಸಾಹಿತ್ಯದ ಅಡ್ಡಾ, ಸೃಜನಶೀಲ ಮನಸ್ಸುಗಳ ಮೆಚ್ಚಿನ ತಾಣ. ದಿನಪತ್ರಿಕೆಗಳಲ್ಲಿ ಸಾಹಿತ್ಯ, ಕವನ ನೀರಸವಾದ ಸಮಯದಿಂದಲೂ ‘ಅವಧಿ’ ಯಾವಾಗಲೂ ಸಾಹಿತ್ಯಪ್ರಿಯರಿಗೆ ಬತ್ತದ ಒರತೆ. ಗೆಳೆಯ ಮೋನಿಯ ಹೊಸ ಪ್ರಯತ್ನಕ್ಕೆ ಅಭಿನಂದನೆಗಳು, ಶುಭಹಾರೈಕೆಗಳು.

ಹೊಸತೊಂದು ಎಲೆತೊಟ್ಟಿರುವ ಅವಧಿಯ ಮೊದಲ ಮಹಿಳಾ ಸಂಪಾದಕತ್ವದ ಗೌರವ ಕೊಟ್ಟಿದ್ದೀರಿ.

ನನ್ನ ವ್ಯಕ್ತಿತ್ವ, ಆಸಕ್ತಿ ಮತ್ತು ನಿಲುವುಗಳಿಗೆ ಸೂಕ್ತವೆನಿಸುವ ಮೆಚ್ಚಿನ ಲೇಖಕರ ಬರಹಗಳು ಇಲ್ಲಿವೆ. ಓದಿ ಆನಂದಿಸಿ ಮತ್ತು ಪ್ರತಿಕ್ರಿಯಿಸಿ. ನಮಸ್ಕಾರಗಳು.

‍ಲೇಖಕರು Avadhi

September 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Shyamala Madhav

    ಆರತೀ, ನೀವು ಮಹಿಳಾ ಸಂಪಾದಕತ್ವ
    ವಹಿಸಿರುವುದು ತುಂಬಾ ಸಂತೋಷ. ಅನುದಿನವೂ ಅವಧಿಗಾಗಿ ಕಾಯುತ್ತಿರುವೆ.

    ಪ್ರತಿಕ್ರಿಯೆ
  2. Anjali Ramanna

    ಅಭಿನಂದನೆಗಳು ಪ್ರಿಯ ಆರತಿ. ಹೃದಯವನ್ನು ಕಣ್ಣಿನಲ್ಲಿ ಸಿಕ್ಕಿಸಿಕೊಂಡು ಉಸಿರಾಡುವ ಜೀವ ನೀವು ಯಾವತ್ತಿಗೂ ನನಗೆ ಹಿತ.
    Anjali Ramanna

    ಪ್ರತಿಕ್ರಿಯೆ
  3. Ahalya Ballal

    ಆರತಿ ಸಂಪಾದನೆ ಎಂದು ಕಂಡ ಕೂಡಲೇ ಫುಲ್ ಖುಶ್. ಈ ಸಂಪಾದಕೀಯವೇ ನಮ್ಮ ಇಂದಿನ ಲೋಕಕ್ಕೆ ಕನ್ನಡಿ. ಲೇಖನಗಳನ್ನು ಅವಶ್ಯವಾಗಿ ಓದುವೆ.
    ಥ್ಯಾಂಕ್ಯೂ ಜಿ.ಎನ್. ಮೋಹನ್ ಸರ್!

    ಪ್ರತಿಕ್ರಿಯೆ
  4. Manjula C S

    ಅಭಿನಂದನೆಗಳು ಮೇಡಂ. ಅವಧಿಯ ಪ್ರತಿ ಲೇಖನ ಕವಿತೆ ಸೊಗಸು. ನಿಮ್ಮ ಸಂಪಾದಕತ್ವದಲ್ಲಿ ಮತ್ತಷ್ಟು ಸುಂದರ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Ahalya BallalCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: