ಇದು ರಂಗಭೂಮಿಗೆ ನಮನ..

ನಾ. ದಾಮೋದರ ಶೆಟ್ಟಿ

ಇದೊಂದು ವಿಶಿಷ್ಟ ಅನುಭವ. ‘ಈ ಬಾರಿಯ ಅವಧಿ ಮ್ಯಾಗಸೀನಿನ ಸಂಡೇ ಸ್ಪೆಷಲಿಗೆ ನೀವು ಸಂಪಾದಕರು’ ಎಂಬುದಾಗಿ ‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ.ಎನ್. ಮೋಹನ್ ಫೋನಿನಲ್ಲಿ ಹೇಳಿದಾಗ ಒಂದು ಕ್ಷಣ ನಂಬಲಿಲ್ಲ ನಾನು. ಅಲ್ಪ ಅವಧಿಯಲ್ಲಿ ಇಷ್ಟು ಕೆಲಸ ಮಾಡಿ ಮುಗಿಸುವುದು ಸಾಧ್ಯವೇ ಎಂಬುದಾಗಿತ್ತು ನನ್ನ ಕಾತರ. ಆದರೂ ರಾಜ್ಯದ ಮೂಲೆ ಮೂಲೆಗಳಲ್ಲಿ ಕೊರೋನೋತ್ತರ ರಂಗಕೈಂಕರ್ಯಕ್ಕೆ ಸನ್ನದ್ಧರಾಗುತ್ತಿದ್ದ ಹಲವು ಗೆಳೆಯರನ್ನು ಸಂಪರ್ಕಿಸಿ ನನ್ನ ಮನದಿಂಗಿತವನ್ನು ಹೇಳಿದೆ. ಮಿತ್ರ ಶಶಿಧರ ಭಾರಿಘಾಟರ ಸಲಹೆಯನ್ನೂ ಪಡೆದುಕೊಂಡೆ.

‘ರಂಗತಂಡ ಕಟ್ಟಿಕೊಂಡು’ ಎಂಬ ವಿಶಾಲ ಸಾಧ್ಯತೆಯ ಶೀರ್ಷಿಕೆಯೊಂದನ್ನು ಕಂಡುಕೊಂಡು ಪ್ರಧಾನ ಸಂಪಾದಕರ ಸಲಹೆಯೊಂದಿಗೆ ಹಲವು ರಂಗಕರ್ಮಿಗಳನ್ನು ಸಂಪರ್ಕಿಸಿದೆ. ಎರಡು ದಿನಗಳ ಅವಧಿಯಲ್ಲಿ ಲೇಖನ ಸಿದ್ಧಪಡಿಸುವುದು ಸುಲಭದ ಬಾಬತ್ತಲ್ಲವೆಂಬುದು ಗೊತ್ತು. ಛಲಬಿಡದ ತ್ರಿವಿಕ್ರಮನಾದೆ.

ರಂಗಕಾಯಕವೆಂಬುದು ಕೈಲಾಸ ಕಾಯಕವೆ. ರಂಗತಂಡ ಕಟ್ಟಿಕೊಂಡು ಊರೂರು ಅಲೆದ ಪ್ರತಿಯೊಬ್ಬ ರಂಗಕರ್ಮಿಯೂ ತನ್ನ ಅನುಭವ ಭಂಡಾರವನ್ನು ವಿಸ್ತರಿಸುತ್ತಲೇ ಇರುತ್ತಾನೆ. ಅದನ್ನು ಮಿಕ್ಕವರಿಗೆ ಹಂಚಿಕೊಟ್ಟು ಅವರ ಅನುಭವವನ್ನು ವಿಸ್ತರಿಸುವುದೂ ಮುಖ್ಯ ವಿಚಾರವೆ. ರಂಗಸಂಘಟಕರು/ ನಿರ್ದೇಶಕರು ನಾಟಕದೊಂದಿಗೆ ಹೋದ ಜಾಗಗಳ ಯಾವುದಾದರೂ ಒಂದು ಅನುಭವವನ್ನು ಬರೆಯಿರಿ ಎಂದು ತಿಳಿಸಿದ್ದಕ್ಕೆ ಕೆಲವರು ನೇರವಾಗಿ ಅದನ್ನಷ್ಟೇ ವಿವರಿಸಿದ್ದಾರೆ. ಇನ್ನು ಕೆಲವರು ತಮ್ಮ ತಂಡದ ಕುರಿತು ಸ್ಥೂಲ ಮಾತುಗಳನ್ನೂ ಹೇಳಿ ಯಾವುದೋ ಒಂದು ಅನುಭವವನ್ನು ಮುಂದಿಟ್ಟಿದ್ದಾರೆ. ಎಲ್ಲ ಬರೆಹಗಳೂ ವಿಭಿನ್ನ ಅನುಭವ ನೀಡುತ್ತವೆ ಎಂಬ ನನ್ನ ನಂಬಿಕೆ ಇಲ್ಲಿ ಈಡೇರಿದೆ ಎಂದು ನಾನು ಭಾವಿಸಿದ್ದೇನೆ. ಎಲ್ಲ ಬರೆಹಗಾರರನ್ನು ಕೃತಜ್ಞತೆಯೊದಿಗೆ ಸ್ಮರಿಸುತ್ತೇನೆ.

 ಇತ್ತೀಚೆಗೆ ರಂಗಕರ್ಮಿಗಳು ತುಸು ಹಿಮ್ಮೆಟ್ಟಿದ ಒಂದು ಘಟನೆಯನ್ನು ನಿಮ್ಮ ಮುಂದಿಡಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತೇನೆ:

ನಾಟಕ ಪ್ರಯೋಗಗಳನ್ನು ಇತರ ಮಾಧ್ಯಮಗಳ ಮೂಲಕ ಪ್ರೇಕ್ಷಕರಿಗೆ ತಲುಪಿಸುವುದರ ಬಗ್ಗೆ ಆಕ್ಷೇಪಗಳಿವೆ. ರಂಗಭೂಮಿಯೊಂದೇ ಇತರ ಮಾಧ್ಯಮಗಳಿಗಿಂತ ಸಹಜವಾದದ್ದು. ಹಾಗಾಗಿ ಅದನ್ನು ಟಿವಿಯ ಮೂಲಕ, ಮೊಬೈಲ್ ಮೂಲಕ ನೋಡುವುದು ಒಂದು ಜೀವಂತ ಕಲೆಯ ಕೊಲೆಗೆ ಸಮ ಎಂದು ಹೇಳುವವರೂ ಇದ್ದಾರೆ. ಇದು ಪ್ರಸ್ತುತ ಕಾಲಘಟ್ಟದಲ್ಲಿ ಚರ್ಚೆಗೆ ಗ್ರಾಸವಾದ ವಿಚಾರ. ದೂರದರ್ಶನದಲ್ಲಿ ನಾಟಕ ಬಂದಾಗ ಮೂಗು ಮುರಿಯುವವರನ್ನು ಕಂಡಿದ್ದೇವೆ. ಹಾಗೆ ಮಾಡುವುದು ನಾಟಕಕ್ಕೆ ಅಪಚಾರ ಮಾಡಿದಂತೆ ಎನ್ನುವವರು ಇಂದೂ ಇದ್ದಾರೆ.

ಯುರೋಪಿನಲ್ಲಿ ಇಂದಿಗೂ ನಾಟಕವೇ ಮೆರೆಯುತ್ತವೆ. ನಾಟಕವನ್ನು ನಾಟಕ ಶಾಲೆಯಲ್ಲೇ ನೋಡಬೇಕು ಎಂಬ ಕಟ್ಟುಪಾಡಿಗೆ ಇಂದೂ ಅವರು ಬದ್ಧರು. ಆದರೆ ಕೋವಿಡ್-19 ನಮಗೆ ಹೊಸ ಪಾಠ ಕಲಿಸಿತು. ಮನೆಯಲ್ಲೇ ಕುಳಿತು ಕೊಳೆಯಬೇಕಾಗಿ ಬಂದ ಈ ಅವಧಿಯಲ್ಲಿ ಮನಸ್ಸನ್ನು ಪ್ರಫುಲ್ಲಗೊಳಿಸಲು ಯಾವುದಾದರೂ ದಾರಿ ಬೇಕಲ್ಲ ಎನ್ನುವ ಕಾಲಕ್ಕೆ ಪ್ರಜಾವಾಣಿ ದಿನಪತ್ರಿಕೆಯನ್ನು ವೇದಿಕೆಯನ್ನಾಗಿಸಿ, ಎನ್ ಎಸ್ ಡಿಯವರು ಶ್ರೀನಿವಾಸ್ ಜಿ ಕಪ್ಪಣ್ಣ ಅವರ ಸಂಚಾಲಕತ್ವವನ್ನು ಬಳಸಿ ಫೇಸ್‍ಬುಕ್ಕಲ್ಲಿ  ಒಂದು ನಾಟಕೋತ್ಸವವನ್ನು ನಡೆಸಿಯೇ ಬಿಟ್ಟರು.

ಎನ್‍ಎಸ್‍ಡಿಯ ಕಳೆದ ಕೆಲವಾರು ವರ್ಷಗಳ ದಾಖಲೀಕರಣಗೊಂಡ ನಾಟಕಗಳನ್ನೆಲ್ಲ ಹೊರತಂದು ಹನ್ನೊಂದು ದಿನಗಳ ಉತ್ಸವವನ್ನೇ ಏರ್ಪಡಿಸಿದರು. ಅವುಗಳು ಫೇಸ್ ಬುಕ್ ಮೂಲಕ ಪ್ರಸಾರ ಕಂಡವು ಹಾಗೂ ಈಗಲೂ ಅವನ್ನು ನೋಡಿಕೊಳ್ಳಲು ಪ್ರಜಾವಾಣಿ.ಕಾಮ್‍ನಲ್ಲಿ ಅವಕಾಶವಿದೆ. ಪ್ರತಿಯೊಂದು ನಾಟಕವನ್ನು ಎಂಟರಿಂದ ಹತ್ತು ಸಾವಿರದಷ್ಟು ಜನ ನೋಡಿದ್ದಾರೆ. ಕೆಲವರು ತಮ್ಮ ಮೊಬೈಲಲ್ಲಿ ಬರುತ್ತಿದ್ದ ನಾಟಕವನ್ನು ಟೀವಿಗೆ ಅಳವಡಿಸಿ ದೊಡ್ಡದಾಗಿಯೂ ನೋಡಿದ್ದಾರೆ.

ಸಾಮಾನ್ಯವಾಗಿ ನಾಟಕವೆಂಬುವುದು ಊರಿಂದೂರಿಗೆ ತಿರುಗಾಡಿ ಪ್ರೇಕ್ಷಕರನ್ನು ತನ್ನತ್ತ ಸೆಳೆದು ಪ್ರದರ್ಶನಗೊಳ್ಳುವುದು ವಾಡಿಕೆ. ವೃತ್ತಿಪರರು ಹೆಚ್ಚೆಂದರೆ ಒಂದೋ ಎರಡೋ ತಿಂಗಳು ಕ್ಯಾಂಪ್ ಹೂಡಿ ಪ್ರೇಕ್ಷಕರನ್ನು ಆಹ್ವಾನಿಸಬಹುದು. ‘ಇದು’ ಅದಕ್ಕೆ ನೇರ ವ್ಯತಿರಿಕ್ತ. ಪ್ರೇಕ್ಷಕರ ಕೈಯ ಮೊಬೈಲ್ ಒಳಗೆ ನಾಟಕ. ಮನೆಯ ಟ್ಯಾಬ್, ಟೀವಿಯ ಒಳಗೆ ನಾಟಕ. ಕಾರಂತರು ಹೇಳಿದ ಜೀವಂತ ಕಲೆ ಸಮಾಧಿಯಾಯಿತೆ?

ನನ್ನ ದೃಷ್ಟಿಯಲ್ಲಿ ಅದು ಹಾಗಲ್ಲ. ಕಾಲದ ವೇಗಕ್ಕೆ ನಾವು ದನಿಗೂಡಿಸಬೇಕು. ಒಂದುವೇಳೆ ಫೇಸ್ ಬುಕ್ ಮೂಲಕ ಕುಸುಮಬಾಲೆಯನ್ನು ತೋರಿಸದಿರುತ್ತಿದ್ದರೆ ಒಂದೇ ಪೆಟ್ಟಿಗೆ ಹತ್ತುಸಾವಿರ ಮಂದಿ ನೋಡುವ ಸಾಧ್ಯತೆಗಳೇನಾದರೂ ಇದ್ದುವೆ? ಅಥವಾ ನಮ್ಮ ನಗರಕ್ಕೆ ಕುಸುಮಬಾಲೆ ಆಡುವ ತಂಡ ಬಾರದಿರುತ್ತಿದ್ದರೆ ಆ ನಾಟಕವನ್ನು ನೋಡಲು ಸಿಗುತ್ತಿತ್ತೆ? ದೇವನೂರರು ಕೂಡಾ ‘ನನ್ನ ನಾಟಕವನ್ನು ಪುಸ್ತಕದಲ್ಲೇ ಓದಬೇಕು. ಆಡಿತೋರಿಸಲು ನಾನು ಬರೆದಿಲ್ಲ’ ಎನ್ನುತ್ತಿದ್ದರೆ? ಅಂತೆಯೇ ‘ವೇದಿಕೆಯಲ್ಲಲ್ಲದೆ ನಾನು ನಾಟಕ ನೋಡುವುದಿಲ್ಲ’ ಎಂದು ನಾವೂ ಕುಳಿತುಕೊಳ್ಳುತ್ತಿದ್ದರೆ ನಷ್ಟವಾಗುವುದು ನಮಗೇ.

ನಾಟಕವನ್ನು ಹಾಗೆ ನೋಡುವದರಿಂದ ಏನು ಫೀಲ್ ಸಿಗುತ್ತದೆ? ಎಂಬ ಪ್ರಶ್ನೆಯಿದೆ. ಈ ಮಾತನ್ನು ಸಿನಿಮಾಗಳಿಗೆ ಸಂಬಂಧ ಪಟ್ಟಹಾಗೆ ಕೂಡ ನಾವು ಹೇಳಬಹುದು. ಬೃಹದಾಕಾರದ ನಾಯಕ, ನಾಯಕಿಯರು ಕಣ್ಣ ಮುಂದೆ ಇಲ್ಲದಿದ್ದರೆ ಮನೆಯ ಟೀವಿಯಲ್ಲಿ ಆ ಫೀಲ್ ಸಿಗುವುದು ಹೇಗೆ? ಅದು ನಮ್ಮ ನಿಮ್ಮ ಮೈಂಡ್ ಸೆಟ್. ಕಾಲಕ್ರಮದ ಅಭ್ಯಾಸ. ಮೇಲಾಗಿ, ನಾಟಕವನ್ನು ನಾಟಕದಂತೆಯೇ ಚಿತ್ರೀಕರಿಸಲಾಗುತ್ತದೆಯೇ ಹೊರತು ಸಿನಿಮೀಯವಾಗಿಯೋ ಮತ್ತೊಂದು ರೂಪದಲ್ಲೋ ಚಿತ್ರೀಕರಿಸಲಾಗುವುದಿಲ್ಲ.

ಬಿಬಿಸಿಯವರು ಶೇಕ್ಸ್ ಪಿಯರ್ ನಾಟಕಗಳನ್ನು ಸಂಪುಟಗಳಲ್ಲಿ ಸೆರೆ ಹಿಡಿದು ಕೊಡದಿರುತ್ತಿದ್ದರೆ ಗ್ಲೋಬ್ ಥಿಯೇಟರಿನ ಆ ರಂಗಭೂಮಿಯ ಪರಿಚಯ ನಮಗಾಗುತ್ತಿರಲಿಲ್ಲ. ಅದೊಂದು ದಾಖಲಾತಿ. ಹಾಗೆಂದು ಲಂಡನ್ನಿನ ‘ದ ಮೌಸ್ ಟ್ರಾಪ್’ ನಾಟಕವನ್ನು ಏಳು ದಶಕಗಳಿಂದ ಪ್ರೇಕ್ಷಕರು ಥಿಯೇಟರಿಗೆ ಹೋಗಿಯೇ ನೋಡುತ್ತಾರೆ. ಅಲ್ಲಿನ ವೃತ್ತಿಪರ ನಾಟಕಗಳನ್ನು ವೀಡಿಯೋ ಶೂಟ್ ಮಾಡುವುದು ಬಿಡಿ; ಫ್ಲ್ಯಾಶ್ ರಹಿತ ಫೋಟೋ ತೆಗೆದರೂ ನಿಮ್ಮ ಕ್ಯಾಮರಾವನ್ನು ಕಸಿಯುತ್ತಾರೆ. ಆದರೆ ಕಣ್ಮರೆಯಾಗುವ ನಾಟಕಗಳನ್ನು ದಾಖಲಿಸಿ ಯಾವತ್ತಾದರೂ ಹೀಗೆ ನೋಡಿದರೆ ಅದನ್ನು ಮಹಾಪರಾಧವೆಂಬಂತೆ ಭಾವಿಸಿ ವಿರೋಧಿಸುವುದರಲ್ಲಿ ಹುರುಳಿಲ್ಲವೆಂದೇ ನಾನು ಭಾವಿಸಿದ್ದೇನೆ.

ಇದೊಂದು ಪ್ರತಿಕ್ರಿಯೆ ಅಷ್ಟೆ. ‘ಅವಧಿ’ ಕೊಟ್ಟ ಈ ಅವಕಾಶಕ್ಕೆ ಮತ್ತೊಮ್ಮೆ  ಅಭಿಮಾನಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Purushi

    I loved the Avadhi – theatre special. Beautifully brought out and more importantly giving importance to groups outside Bangalore and Mysore. This shows the spread of theatre and activities that are going on in the state. Thanks to Avadhi for this. May be Avadhi can think of adding a weekly column for Theatre and get the same written by various directors across the state.
    Being a past active and present passive theatre worker, I enjoyed reading each and every article.

    ಪ್ರತಿಕ್ರಿಯೆ
  2. na. damodara shetty

    ನಿಮ್ಮ ಪ್ರತಿಕ್ರಿಯೆ ಹುರುಪು ತಂದಿದೆ. ರಾಜ್ಯದ ಮೂಲೆಮೂಲೆಗಳಿಂದ ಲೇಖನಗಳನ್ನು ತರಿಸಿ ಒಟ್ಟು ಸೇರಿಸಿದರೆ ಒಂದು ಸುಂದರ ರಂಗಾವಲೋಕನ ಆಗಬಹುದುದೆಂದು ಪ್ರೊಫೆಸರ್ ಬಿ.ಎ.ವಿವೇಕ ರೈ ಅವರು ಫೋನ್ ಮಾಡಿ ತಿಳಿಸಿದ್ದರು.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ PurushiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: