ಆರ್ ಜಿ ಹಳ್ಳಿ ನಾಗರಾಜ ಕಂಡಂತೆ ಡಾ ಗಿರಿಜಮ್ಮ

ಆರ್ ಜಿ ಹಳ್ಳಿ ನಾಗರಾಜ

ವೃತ್ತಿಯಲ್ಲಿ ಜನಪ್ರಿಯ ಡಾಕ್ಟರ್, ಬಡವರ ಹಾಗೂ ನಿರ್ಗತಿಕರ ಬಗ್ಗೆ ಅಪಾರ ಕಾಳಜಿ ಹಾಗೂ ವಿಶೇಷ ಪ್ರೀತಿ. ಅಂಥ ಬಡತನದಲ್ಲಿ ಹುಟ್ಟಿ ಬೆಳೆದುದ್ದರ ಪರಿಣಾಮ ಅವರ ಹೃದಯ ಮಾನವೀಯತೆಗೆ ತುಡಿಯುತ್ತಿತ್ತು. ಅವರು ವೈದ್ಯಕೀಯ ವೃತ್ತಿ ಜೊತೆಗೆ ಹಲವು ಹವ್ಯಾಸ ಹೊಂದಿದ್ದರು. ಬರವಣಿಗೆಯಲ್ಲಿ ಕತೆ, ಕಾದಂಬರಿ, ವೈಚಾರಿಕ ಲೇಖನ, ವೈದ್ಯಕೀಯದಲ್ಲಿ ಪ್ರಸೂತಿ ಬಗ್ಗೆ ಕೃತಿ ರಚನೆ, ದೂರದರ್ಶನಕ್ಕೆ ಕಿರು ಧಾರಾವಾಹಿ, ಸಿನಿಮಾ ನಿರ್ದೇಶನ… ಹೀಗೆ ಬಹುಮುಖ ಪ್ರತಿಭೆಯ ವರಾಗಿದ್ದ ಇವರು ಡಾ. ಎಚ್. ಗಿರಿಜಮ್ಮ.

ಇಂಥ ಕ್ರಿಯಾಶೀಲ ಡಾಕ್ಟರ್ ದಾವಣಗೆರೆಯಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾದರೆಂಬ ಸುದ್ದಿ ತಿಳಿದು ಅತೀವ ನೋವು, ದುಃಖ ಉಂಟಾಯಿತು. ಅವರು ನಮ್ಮ ಕುಟುಂಬದ ಪ್ರೀತಿಯ ವೈದ್ಯೆ. ಮಾರ್ಗದರ್ಶಿ. ನನಗೆ ಅಕ್ಕನಂತೆ ಇದ್ದವರು. ನನ್ನ ಪತ್ನಿ ಕವಯಿತ್ರಿ ಡಾ. ಎಚ್.ಎಲ್. ಪುಷ್ಪಾಗೆ ಅಚ್ಚುಮೆಚ್ಚಿನ ವೈದ್ಯೆ, ಲೇಖಕಿ. ಹಿತಚಿಂತಕಿ. ಅವರು ನಿಧನರಾದಾಗಾ ಒಂಟಿಯಾಗೆ ಮನೆಯಲ್ಲಿದ್ದರು. ಅವರ ಬದುಕಲ್ಲಿ ಅನೇಕ ಏರಿಳಿತಗಳಿದ್ದವು. ಎದೆಯಲ್ಲಿ ದುಃಖ ಇಟ್ಟುಕೊಂಡು ಜಗದ ಎದುರು ಸದಾ ನಗುನಗುತ್ತಾ ಬಾಳಿದವರು. ಯಾರ ಮನಸ್ಸನ್ನೂ ನೋಯಿಸದ ಇವರ ಬಗ್ಗೆ ಏನು ಬರೆಯಲಿ?

ಅದು 1987-88. ನಾವು ಬೆಂಗಳೂರಿನ‌ ಹೌಸಿಂಗ್ ಬೋರ್ಡ್ ಹತ್ತಿರ ನಾಗರಬಾವಿ ರಸ್ತೆಯ ಮನೆಯಲ್ಲಿ ವಾಸವಿದ್ದೆವು. ಆ ಪ್ರದೇಶದಲ್ಲಿ ಆಗ ಹರಿಹರದಿಂದ ಬಂದ ಡಾ. ಎಚ್. ಗಿರಿಜಮ್ಮ ಅವರು ಒಂದು ನರ್ಸಿಂಗ್ ಹೋಂ ತೆಗೆದಿದ್ದರು. ನಮಗೆ ಲೇಖಕಿ, ಕತೆಗಾರ್ತಿ, ಕಾದಂಬರಿಕಾರರಾಗಿ ಆಗಲೇ ಅವರು ಪರಿಚಯ ಇದ್ದುದರಿಂದ ಕುಟುಂಬದ ಸಖ್ಯ ಬೇಗನೆ ಬೆಳೆಯಿತು. ಜೊತೆಗೆ ನಮ್ಮ ಊರಿನವರೆಂಬ ಅಭಿಮಾನ. ಅವರು ಆ ಪ್ರದೇಶದ ಪ್ರಸಿದ್ದ ಪ್ರಸೂತಿತಜ್ಞೆಯಾಗಿ ಹೆಸರಾದರು.

ನಾವು ಒಂದು ರೀತಿ ಹೋರಾಟದ ಬದುಕು ನಡೆಸುತ್ತಿದ್ದರಿಂದ ವೈದ್ಯಕೀಯ ಚಿಕಿತ್ಸೆಗೆ ಅವರ ಆಶ್ರಯ ಪಡೆಯುವುದು ಅನಿವಾರ್ಯ ಆಗಿತ್ತು. ಪತ್ನಿ ಪುಷ್ಪಾ ಗರ್ಭಿಣಿ ಆದಾಗ ಅವರೆ ಪ್ರತಿಯೊಂದನ್ನೂ ಮಾರ್ಗದರ್ಶನ ಮಾಡಿ, ಚಿಕಿತ್ಸೆ ನೀಡುತ್ತಿದ್ದರು.

ಸ್ವಲ್ಪ ಕಾಲ ಆದ ನಂತರ ಡಾ. ಗಿರಿಜಮ್ಮನವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿತಜ್ಞೆಯಾಗಿ ಕೆಲಸ ಸಿಕ್ಕಿತು. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಅವರು ವೃತ್ತಿ ಆರಂಭಿಸಿದರು. ಆಗ ಆ ಆಸ್ಪತ್ರೆ ರಾಜಕಾರಣಿಗಳು ಚಿಕಿತ್ಸೆ ಪಡೆಯುವ ವಿಶೇಷ ಆಸ್ಪತ್ರೆಯೂ ಆಗಿತ್ತು. ಅಲ್ಲಿ ಹೆರಿಗೆಗಾಗಿ ವಿಶೇಷ ಸವಲತ್ತಿನ ವೈದ್ಯಕೀಯ ಉಪಕರಣಗಳೂ ಇದ್ದವು. ಅಲ್ಲೂ ಗಿರಿಜಮ್ಮ ವೈದ್ಯೆಯಾಗಿ ಜನಪ್ರಿಯರಾದರು. ತಮ್ಮ ವಾಸ್ತವ್ಯವನ್ನೂ ಆಸ್ಪತ್ರೆ ಆವರಣದ ಕ್ವಾಟ್ರಸ್ಸಿಗೆ ಬದಲಾಯಿಸಿದ್ದರು.

ಪುಷ್ಪಾಗೆ ಹೆರಿಗೆ ಸಂದರ್ಭ ತಾವೇ ಮುತುವರ್ಜಿ ವಹಿಸಿ, ಆಸ್ಪತ್ರೆಗೆ ಸೇರಿಸಿಕೊಂಡು, ಹೆರಿಗೆ ಕಷ್ಟವಾದಾಗ ಆಪರೇಷನ್ ಮಾಡಿ ತಾಯಿ ಮಗುವನ್ನು ಆರೋಗ್ಯಕರವಾಗಿ ನೋಡಿಕೊಂಡು ಮಾನವೀಯತೆ ಮೆರೆದವರು. ವಿಶೇಷ ವಾರ್ಡನ್ನು ಕೊಡಿಸಿ ಉಪಕಾರ ಮಾಡಿದ್ದರು.

ನಮಗೊಬ್ಬರಿಗೇ ಅವರು ಆಪ್ತ ವೈದ್ಯರಾಗಿರಲಿಲ್ಲ. ಅನೇಕ ಬರಹಗಾರರು, ಟಿವಿ, ಸಿನಿಮಾ ಕಲಾವಿದರಿಗೂ ಅವರು ಆಪ್ತ ವೈದ್ಯೆ, ಮಾರ್ಗದರ್ಶಕರಾಗಿದ್ದರು. ಗೆಳೆಯ ನಾಗತಿಹಳ್ಳಿ ‌ಚಂದ್ರಶೇಖರ ಆಗ ಉಪನ್ಯಾಸಕ ವೃತ್ತಿ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಹೆಸರಾಗಿದ್ದ. ಅವನ ಶ್ರೀಮತಿ ಶೋಭಾ ಕೂಡ ಅದೇ ಆಸ್ಪತ್ರೆಯಲ್ಲಿ‌ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಅವರ ಮಗಳು ಕನಸು, ನಮ್ಮ ಮಗಳು ಅಂಕಿತನಿಹಾರಿ ಒಂದೇ ದಿನ ಬೌರಿಂಗ್ ಆಸ್ಪತ್ರೆಯಲ್ಲಿ ಹುಟ್ಟಿದಾಗ ಡಾ.ಗಿರಿಜಮ್ಮ ಅವರೆ ಎಲ್ಲಾ ಆರೈಕೆ, ಯೋಗಕ್ಷೇಮ ನೋಡಿಕೊಂಡದ್ದು…

ಮುಂದಿನ ದಿನಗಳ ಅವರ ಬದುಕು, ಬರಹ, ಟಿವಿ ಧಾರಾವಾಹಿ, ಸಿನಿಮಾ, ಹೋರಾಟ… ಎಲ್ಲಾದರಲ್ಲೂ ಕೈಯಾಡಿಸಿದಾಗ ನಾವು ಜೊತೆ ಇದ್ದೆವು. ಅವೆಲ್ಲ ಈಗಲೂ ಹಸಿರಾಗಿವೆ.

ಅವರು ಉತ್ತರ ಕನ್ನಡ ಜಿಲ್ಲೆಯ ಒಬ್ಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಅವನು ನೋಡಲು ಸುಂದರವಾಗಿದ್ದ. ಅವನನ್ನು ಹಾಕಿಕೊಂಡು ಕೆಲವು ಟೆಲಿಫಿಲಂ ಹಾಗೂ ಒಂದು ಸಿನಿಮಾಕೂಡ ಮಾಡಿದರು. ಅವನಿಗೆ ಓಡಾಡಲು ಒಂದು ಕಾರನ್ನೂ ಕೊಡಿಸಿದ್ದರು. ಇಷ್ಟಾಗ್ಯೂ ಅವನು ಮುಂದೆ ಡಾ. ಗಿರಿಜಮ್ಮ ಅವರಿಗೆ ನಿಷ್ಠನಾಗಿ ಇರಲಿಲ್ಲ! ಅವರಿಗೆ ಮಾನಸಿಕ ಕಿರುಕುಳ ಕೊಡಲು ಶುರು ಮಾಡಿದ. ಇದರಿಂದ ವೈದ್ಯೆಯಾದ ಅವರು ಯಾರಲ್ಲೂ ಹೇಳಿಕೊಳ್ಳದೆ ಮಾನಸಿಕ ಹಿಂಸೆ ಅನುಭವಿಸಿದರು.

ಕೆಲ ವರ್ಷಗಳ ನಂತರ ಇಬ್ಬರೂ ಬೇರೆಬೇರೆಯಾದರು. ಆರಂಭದ ಟಿವಿ ಟೆಲಿ ಫಿಲಂಗೆ ಅವರು ಆಯ್ಕೆ ಮಾಡಿಕೊಂಡ ವಿಷಯ “ಭ್ರೂಣ ಹತ್ಯೆ”. ಇದರ ಮುಖ್ಯ ಪಾತ್ರದಲ್ಲಿ ನಟಿ ಉಮಾಶ್ರೀ, ಪ್ರಕಾಶರೈ ಅಭಿನಯಿಸಿದ್ದರು. ಕಾಲಚಕ್ರ ಉರುಳಿದಂತೆ ಬೆಂಗಳೂರು ಬೇಸರವಾಗಿ ದಾವಣಗೆರೆಗೆ ವಾಪಾಸು ಬಂದರು. ಬೆಂಗಳೂರಿನಲ್ಲಿ ಕೊಂಡಿದ್ದ ಅಪಾರ್ಟ್ ಮೆಂಟ್ ಮಾರಿ ತಮ್ಮ ಹಳೆ ನೆಲೆ ಹುಡುಕಿಕೊಂಡರು. ಅಲ್ಲೂ ಜನಪ್ರಿಯ ಪ್ರಸೂತಿವೈದ್ಯೆಯಾಗಿ ಜನ ಮನ್ನಣೆ ಗಳಿಸಿದರು. ಜತೆಗೆ ತಮ್ಮ ಹವ್ಯಾಸದ ಬರವಣಿಗೆಯನ್ನು ಮುಂದುವರೆಸಿದರು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಗರ್ಭಿಣಿ, ಸ್ತ್ರೀ ದೇಹ, ರಕ್ತದ ಕಾಯಿಲೆಗಳು, ಸಂತಾನಹೀನತೆ ಮೊದಲಾದ ಕೃತಿ ರಚಿಸಿದರು.

ಡಾ. ಗಿರಿಜಮ್ಮ ಅವರ ವೈದ್ಯಕೀಯ ಹಾಗೂ ಸಾಹಿತ್ಯ ಸೇವೆ ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ನವಂಬರ್ 1ರ ಆ ಸಮಾರಂಭ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದರೆ, ಅಂದು ಬೆಳಗ್ಗೆ ‘ಡಿ.ಎಸ್. ಮ್ಯಾಕ್ಸ್ ಸಾಹಿತ್ಯ ಪುರಸ್ಕಾರ’ದ ಪ್ರಶಸ್ತಿ, ಫಲಕ, ರೂ.15,000/- ನಗದಿನ ಪ್ರಶಸ್ತಿ ಸಮಾರಂಭವೂ ಬೆಂಗಳೂರಲ್ಲಿ ನಡೆಯಿತು. ಆಗ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪನವರು ವೇದಿಕೆಯಲ್ಲಿ ಇದ್ದದ್ದು ಸ್ಮರಣೀಯ ಗಳಿಗೆಯಾಯಿತು.

ಕಳೆದ ವರ್ಷ ಡಾ.ಎಚ್.ಗಿರಿಜಮ್ಮ ಅವರು ‘ಕಾಡುತಾವ ನೆನಪುಗಳು’ ಎಂಬ ಆತ್ಮಚರಿತ್ರೆ ಬರೆದರು. ಇದನ್ನು ಬೆಂಗಳೂರಿನ ನಿಡಸಾಲೆ ಪುಟ್ಟಸ್ವಾಮಯ್ಯ ತಮ್ಮ ಪ್ರಕಾಶನದಿಂದ ಹೊರತಂದರು. ಅದು ಅಂತರಂಗದ ನೋವನ್ನೆ ಬಸಿದಿಟ್ಟ ಕೃತಿ. ತಮ್ಮ ಎಲ್ಲಾ ನೋವುಗಳನ್ನು ಅಲ್ಲಿ ಹೇಳದಿದ್ದರು, ಪುರುಷ ಪ್ರಧಾನ ಸಮಾಜ ಒಬ್ಬ ವೈದ್ಯೆಯನ್ನೂ ನಡೆಸಿಕೊಂಡ ರೀತಿಯನ್ನು ಚಿತ್ರಿಸಿದ್ದಾರೆ.

ಕೊನೆಯ ಮಾತು: ರಾಜ್ಯದಲ್ಲಿ ಜನಪ್ರಿಯರಾದ ಡಾಕ್ಟರ್ ಎಚ್. ಗಿರಿಜಮ್ಮ ಅವರಿಗೆ ದಾವಣಗೆರೆಯಲ್ಲಿ ಸಾಹಿತ್ಯಕ್ಕೆ ಸಿಕ್ಕಬೇಕಾದ ಮಾನ್ಯತೆ ಸಿಕ್ಕಲಿಲ್ಲವೇನೋ ಅನ್ನಿಸುತ್ತದೆ. ಅವರಿಗೆ ತಾಲ್ಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಎಲ್ಲಾ ಅರ್ಹತೆ ಇತ್ತು. ಆದರೆ ಕಾಲ ಕೂಡಿ ಬರಲಿಲ್ಲ. ಆ ವೇದನೆಯೂ ಅವರ ಅಂತರಂಗದಲ್ಲಿ ಇತ್ತು.

‍ಲೇಖಕರು Admin

August 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shridhar B.Nayak

    ಡಾ.ಗಿರಿಜಮ್ಮ ಹರಿಹರದಲ್ಲಿದ್ದಾಗ ಪರಿಚಿತರಾಗಿದ್ದರು.ಅಲ್ಲಿ ಅವರು ಬಡವರ ವೈದ್ಯೆ ಎಂದೇ ಪರಿಚಿತರಾಗಿದ್ದರು.ಬದುಕಿನಲ್ಲಿ ಎದುರಾದ ಆಘಾತಗಳನ್ನು ಧೈರ್ಯದಿಂದ ಎದುರಿಸಿದ ಗಟ್ಟಿಗಿತ್ತಿ ಅವರು.ಅವರ ಕತೆ ಕಾದಂಬರಿಗಳು ತುಂಬ ಜನಪ್ರಿಯವಾಗಿವೆ.ನೈಜ ಘಟನೆಗಳೇ ಅವರ ಸಾಹಿತ್ಯದ ಹೂರಣ.‌ಅವರ ಆತ್ಮಕಥನವನ್ನು ಓದಬೇಕು.ಅಗಲಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Shridhar B.NayakCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: