ಆಕ್ಟ್ 1978: ಬೇರೆ ಕಣ್ಣು, ಬೇರೆ ನೋಟ..

ಮಂಸೋರೆ ನಿರ್ದೇಶನದ ‘ಆಕ್ಟ್ 1978 ಚಿತ್ರ ಸಾಕಷ್ಟು ಸುದ್ದಿ ಮಾಡಿದೆ.

ವೀಕ್ಷಕರು ಮತ್ತೆ ಚಲನಚಿತ್ರ ಮಂದಿರಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ.

ಅಷ್ಟೇ ಅಲ್ಲ ಸಾಕಷ್ಟು ಉತ್ತಮ ಪ್ರಶಂಸೆ ಪಡೆದಿದೆ.

ಈಗ ‘ಅವಧಿ’ಯ ಇಬ್ಬರು ಮಹತ್ವದ ಬರಹಗಾರರಾದ ಕಥೆಗಾರರಾದ ಸುನಂದಾ ಕಡಮೆ ಹಾಗೂ ಅಂಕಣಕಾರರಾದ ಹೇಮಾ ಡಿ ಖುರ್ಸಾಪೂರ ಆವರು ಇದೇ ಸಿನೆಮಾದ ಬಗ್ಗೆ ಎರಡು ಭಿನ್ನ ಕೋನದಿಂದ ಸಿನೆಮಾದ ಆಳ ಅಗಲವನ್ನು ಹಿಡಿಯಲು ಪ್ರಯತ್ನಿಸಿದ್ದಾರೆ.

ಸುನ೦ದಾ ಕಡಮೆ 

ಚಲನಚಿತ್ರಗಳು ಕೇವಲ ಮನರಂಜನೆ ಅಥವಾ ಮಾನಸಿಕ ಸ್ವಾಸ್ತ್ಯವನ್ನು ಕಾಯ್ದುಕೊಳ್ಳುವ ಸಾಧನಗಳಷ್ಟೇ ಆಗಿರದೇ ಉತ್ತಮ ಜ್ಞಾನಸಾಧಕವೂ ಆಗಿರಬಹುದು ಎಂಬುದಕ್ಕೆ ಕಳೆದ ವಾರ ಬಿಡುಗಡೆಯಾದ ಆಕ್ಟ್ ೧೯೭೮ ಒಂದು ಅತ್ಯುತ್ತಮ ಉದಾಹರಣೆ. ಸಿನೆಮಾ ವೀಕ್ಷಿಸಿ ಹೊರಬರುತ್ತಿದ್ದಂತೆ ಒಂದೊಳ್ಳೆಯ ಕ್ರಾಂತಿಕಾರಿ ಪುಸ್ತಕ ಓದಿದ ಅನುಭವವನ್ನು ನೀಡುತ್ತದೆ. ಇದು ಅಮಾಯಕ ರೈತನೊಬ್ಬನ ಮಗಳು ಗೀತಾಳ ಹೋರಾಟದ ಕಥನವಷ್ಟೇ ಆಗಿರದೇ ಭ್ರಷ್ಟ ಸಮಾಜದ ಕೈಗನ್ನಡಿಯಾಗಿಯೂ ತೋರುತ್ತದೆ.

ಗಂಭೀರ ವಿಷಯವೊಂದನ್ನು ಎಲ್ಲ ವರ್ಗದ ವೀಕ್ಷಕರಿಗೆ ತಲುಪುವಂತೆ ಅಲ್ಲಲ್ಲಿ ತಿಳಿ ವಿನೋದವನ್ನು ಅಚ್ಚುಕಟ್ಟಾಗಿ ಸೇರಿಸಿ, ಒಂದು ಪೂರ್ಣ ಪ್ರಮಾಣದ ಚಿತ್ರ ಮಾದರಿಯೊಂದನ್ನು ಅಷ್ಟೇ ಸರಳತೆಯಲ್ಲಿ ಸಹಜತೆಯನ್ನೂ ತುಂಬಿ ಕಟ್ಟಿಕೊಡುವುದು ತುಂಬ ದೊಡ್ಡ ಸವಾಲಿನ ಕೆಲಸವೇ, ಅಂಥ ಸವಾಲನ್ನು ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಮಂಸೋರೆ ಮತ್ತು ತಂಡ ಇಲ್ಲಿ ಯಶಸ್ವಿಯಾಗಿಯೇ ನಿರ್ವಹಿಸಿದೆ.

ಕೌಟುಂಬಿಕ ಸ್ವಾರ್ಥ ಮತ್ತು ಭೌತಿಕ ಬದುಕಿನ ಸುಖಕ್ಕಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವ ಸರಕಾರೀ ನೌಕರರು ಎಸಗುವ ಬೇಜವಾಬ್ದಾರೀತನವನ್ನು ಆ ಮೂಲಕ ಇಡಿಯಾದ ಭ್ರಷ್ಟ ವ್ಯವಸ್ಥೆಯನ್ನು ಪ್ರಶ್ನಿಸುವ ವಿಷಯ ವಸ್ತುವುಳ್ಳ ಈ ಚಿತ್ರದ ಬದ್ಧತೆ ಮೆಚ್ಚುವಂಥದ್ದು. ಕೇವಲ ಮಾಹಿತಿ ರೂಪದಲ್ಲಿ ದೊರಕುವ ಕಾಯ್ದೆ ಕಾನೂನುಗಳ ಸಾಮಾನ್ಯ ಜ್ಞಾನವು ಜನಸಾಮಾನ್ಯರಿಗೆ ಒಮ್ಮೆಲೇ ಗ್ರಹಿಸಲು ಕಷ್ಟಸಾಧ್ಯ, ಅದಕ್ಕೆ ಪರಿಹಾರವೆಂಬಂತೆ ಇಂಥ ಕಥನ ಕಲೆ ಮಾತ್ರವೇ ಹೀಗೆ ವಾಸ್ತವವನ್ನು ಅಖಂಡವಾಗಿ ಹಿಡಿಯಬಲ್ಲದು ಮತ್ತು ಬಹುದಿನಗಳವರೆಗೆ ನಮ್ಮಲ್ಲಿ ನೆಲೆ ನಿಂತು ಕಾಡಿಸಬಲ್ಲವು ಕೂಡ.

ಆಕ್ಟ್ ೧೯೭೮ ಸಿನೆಮಾ ಅಂಥದ್ದೊಂದು ವಾಸ್ತವ ಚಿತ್ರಣದ ಅನುಭೂತಿ ದೊರಕಿಸುವಲ್ಲಿ ಸಫಲವಾಗಿದೆ. ಕಾಯ್ದೆಗಳ ಸಂದರ್ಭಗಳನ್ನು ಕ್ರೋಢೀಕರಿಸಿ ಸಂಭಾಷಣೆಯಲ್ಲಿ ಜೋಡಿಸುವಾಗ ನಿರ್ದೇಶನ ತಂಡ ಸಾಕಷ್ಟು ಅಧ್ಯಯನ ಕೈಗೊಂಡಿದ್ದು ಡಾಳಾಗಿ ಕಾಣಿಸುತ್ತದೆ.

ತಂದೆಯ ಸ್ಥಾನದಲ್ಲಿ ನಾಯಕಿಗೆ ಸದಾ ಬೆಂಬಲವಾಗಿ ನಿಲ್ಲುವ, ವ್ಯವಸ್ಥೆಯ ಅನ್ಯಾಯಕ್ಕೆ ಬಲಿಯಾಗಿ ಜರ್ಜರಿತಗೊಂಡ, ಮೌನವೇ ಮೈವೆತ್ತಂತಹ ಬಿ. ಸುರೇಶ ಅವರ ನಿಗೂಢ ಪಾತ್ರ, ಮೊದಲ ದೃಶ್ಯದಲ್ಲೇ ಸೊಳ್ಳೆಯನ್ನು ಬಲಿ ತೆಗೆದುಕೊಂಡ ಬ್ಯಾಟ್, ಶ್ವೇತವರ್ಣ ಬಳಿದುಕೊಂಡು ಸತ್ಯಾಗ್ರಹಕ್ಕೆ ಕೂತ ಗಾಂಧಿ ಪ್ರತಿಮೆ ಮತ್ತು ಹಳೆಯ ಮಾಸಿದ ಸರಕಾರೀ ಕಟ್ಟಡ, ವಾಟರ್ ಬ್ರೇಕ್‌ನಂತಹ ಹೆರಿಗೆಯ ಆತಂಕದ ಮುನ್ಸೂಚನೆ..

ಹೀಗೆ ಸಿನೆಮಾದಲ್ಲಿ ಬರುವ ಇನ್ನೂ ಅನೇಕ ಚಿತ್ರಗಳು ಧ್ವನಿಪೂರ್ಣ ಸಂಕೇತಗಳಾಗಿ ಕಟ್ಟಿಕೊಂಡಿವೆ, ಹಾಗಾಗಿ ಚಿತ್ರಕ್ಕೆ ಇನ್ನೊಂದೇ ಆಯಾಮದಲ್ಲಿ ಚಿಂತಿಸುವ ಗುಣವೂ ಸಿದ್ಧಿಸಿದೆ, ನ್ಯಾಯವಾಗಿ ಕಾನೂನುಬದ್ಧವಾಗಿ ಸಿಗಬೇಕಾದ ಫಲವನ್ನು ಪಡೆದುಕೊಳ್ಳುವ ಪಯಣದಲ್ಲಿ ಸಿಲುಕುವ ಜೀವಗಳನ್ನು ಟೇಕನ್ ಫಾರ್ ಗ್ರಾ೦ಟೆಡ್  ಮಾಡಿಕೊಂಡು ಉದಾಸೀನ ತೋರಿದರೆ ಆಗುವ ಪರಿಣಾಮವು ಚಿತ್ರದ ಬಿಂಬಗಳಾಗಿ ಮೂಡಿವೆ. ನಂತರ ನಾಯಕಿಯ ಬದುಕಿನ ಕೇಂದ್ರ ಸ್ವತಃ ಅವಳೇ ಆದಾಗ ಇಡೀ ವ್ಯವಸ್ಥೆ ಹೇಗೆ ಒಂದು ಅಂತರವನ್ನಿಟ್ಟುಕೊ೦ಡು ಭಯಮಿಶ್ರಿತ ಗೌರವದಿಂದ ನಡೆಸಿಕೊಳ್ಳತ್ತದೆ ಎಂಬುದಕ್ಕೆ ಒಟ್ಟಾರೆ ಅಲ್ಲಿಯ ಉದ್ವಿಗ್ನ ಸನ್ನಿವೇಶಗಳೇ ಕನ್ನಡಿಯಾಗಿವೆ.

ನಾಯಕಿ ಗೀತಾ ಸುತ್ತಲೇ ಸುತ್ತುತ್ತ ಕಟ್ಟಿಕೊಳ್ಳುವ ದುಗುಡ ತುಂಬಿದ ಕಥನ ಅವಳ ಗರ್ಭದೊಂದಿಗೇ ಬೆಳೆಯುತ್ತ ಸಾಗಿ, ಅವಳ ಸ್ವಭಾವದ ಬಣ್ಣಗಳನ್ನೂ ಬದಲಾಯಿಸಿಕೊಳ್ಳುತ್ತ, ಎಲ್ಲೆಲ್ಲೋ ಚದುರಿ ಹೋದ ಪಾತ್ರ ಪ್ರಪಂಚವು ಹೆರಳಿನ ಕೂದಲುಗಳ ಹಾಗೆ ಜೊತೆಯಾಗುತ್ತ ವೀಕ್ಷಣೆಯಲ್ಲಿ ಒಂದು ರೀತಿಯ ಒಟ್ಟಂದದ ಭಾವವನ್ನು ತರುವುದಲ್ಲದೇ, ಅಲ್ಲಲ್ಲಿ ಛಿದ್ರ ಪ್ರತಿಮೆಗಳಂತೆ ಹಿಂದೆ ಸರಿದ ದೃಶ್ಯಗಳನ್ನು ವರ್ತಮಾನದ ಘಟನೆಗೆ ಸೇರಿಸಿ ಎಲ್ಲೂ ಕೊಂಡಿ ಕಳಚದ ಸರಪಳಿಯ ಹಾಗೆ ಒಂದು ಸಮಗ್ರ ನೋಟವು ದಕ್ಕುವಂತೆ ಹೆಣೆದಿರುವುದು ನಿರ್ದೇಶಕರ ಪರಿಶ್ರಮಕ್ಕೆ ಸಾಕ್ಷಿ.

ಕುತೂಹಲವನ್ನು ಒಡಲಲ್ಲಿರಿಸಿಕೊಂಡ ತಲ್ಲಣಿಸುವ ದೃಶ್ಯಗಳ ಮಧ್ಯೆ ಬಂದು ಹೋಗುವ ಸೋಶಿಯಲ್ ಮಿಡಿಯಾಗಳ ಪಂಚಿ೦ಗ್ ಡೈಲಾಗ್‌ಗಳು ಹುಬೇ ಹೂಬಾಗಿ ಪರದೆಯಲ್ಲಿ ಕ್ರಮಿಸುವ ಕ್ಷಣದಲ್ಲಿ ವೀಕ್ಷಕರು ತಕ್ಷಣ ಸ್ಪಂದಿಸುವ ಸಣ್ಣ ಕಂಪನದ ಸ್ವರದಲ್ಲಿಯೇ, ಎಲ್ಲರ ಅನುಭವಕ್ಕೆ ತಟ್ಟುತ್ತಿದ್ದದ್ದು ವೇದ್ಯವಾಗುತ್ತದೆ.

ಅಮಾಯಕ ರೈತನೊಬ್ಬನ ಸಾತ್ವಿಕ ಮಗಳಾದ ನಾಯಕಿ ತಾಳ್ಮೆಯ ಕಟ್ಟೆಯೊಡೆದಾಗ ಕೈಗೊಂಡ ಪ್ರತಿಭಟನೆಯ ದಾರಿಯಲ್ಲಿ ಸಮುದಾಯದ ನೆಮ್ಮದಿಯ ಭವಿಷ್ಯತ್ತಿನ ಹುಡುಕಾಟ ಇರುವುದನ್ನು ನಾವು ಕಾಣುತ್ತೇವೆ, ಒಡಲ ತಳಮಳವನ್ನು ಹೋರಾಟದ ಹೆಜ್ಜೆಯಲ್ಲಿ ಹೊರಹಾಕಿ, ತನಗಾದ ಹಿಂಸೆ ಮುಂದೆ ಇನ್ನೊಬ್ಬರಿಗೆ ತಟ್ಟಬಾರದೆನ್ನುವ ಮಾನವೀಯ ತುಡಿತದಲ್ಲಿ. ತನ್ನ ಕೊನೆಯುಸಿರು ಇರುವತನಕ ಅವಳು ಕೈಯಲ್ಲಿ ಹಿಡಿದಿರುವ ಪಿಸ್ತೂಲು, ಒಂದೆಡೆ ಭ್ರಷ್ಟ ಸಮಾಜದ ವಿರುದ್ಧ ಹಿಡಿದ ವಿಲಕ್ಷಣ ಆಯುಧದಂತೆ ಕಂಡರೆ, ಇನ್ನೊಂದೆಡೆ ತಾಯಿ ಹೆಂಡತಿ ಮಗಳು ಈ ಎಲ್ಲ ಪಾತ್ರಗಳ ಒಳಗೆ ಸುಡುವ ಹೆಣ್ಣಾಗಿ ಗೀತಾ ‘ಐ ನೀಡ್ ರೆಸ್ಪೆಕ್ಟ್’ ಎನ್ನುತ್ತ ಚರಿತ್ರೆಯಲ್ಲಿ ಜಾಗ ಪಡೆಯಲು ಹೊರಟವಳ ರೂಪಕವಾಗಿಯೂ ಕಾಡುತ್ತಾಳೆ.

ಯಜ್ಞಾ ಶೆಟ್ಟಿ ಹಾಗೂ ಬಿ. ಸುರೇಶ ಅವರು ಕಳವಳ ಮತ್ತು ದಾರ್ಷ್ಟ್ಯ ತುಂಬಿದ ಮನಸ್ಸನ್ನು ಅವರ ಕಣ್ಣಭಾಷೆಗಳಲ್ಲೇ ನಾವು ಕಾಣಬಹುದು. ಹಾಗೆ ನೋಡಿದರೆ ಸಿನೆಮಾದ ಅಂಗಾ೦ಗಗಳು ಮೈತಳೆದು ನಿಲ್ಲುವುದೇ ನಿರ್ದೇಶಕ ತಾನು ಕಾಣುವ ಒಟ್ಟಾರೆ ಜೀವನ ದರ್ಶನದಿಂದ, ಇಂದಿನ ಜನಾಂಗ ಕೇವಲ ಪ್ರಚಾರ ಹಾಗೂ ತಕ್ಷಣದ ಯಶಸ್ಸಿಗಾಗಿ ಹಪಹಪಿಸುತ್ತಿರುವಾಗ, ಯುವ ನಿರ್ದೇಶಕ ಮಂಸೋರೆ ಮತ್ತು ತಂಡ ಅದಕ್ಕೆ ಅಪವಾದವೆನ್ನಿಸುವಂತೆ ಹದವಾಗಿ ಮತ್ತು ಗಂಭೀರವಾಗಿ ತೊಡಗಿಕೊಂಡಿದ್ದು, ಕನ್ನಡ ಚಿತ್ರರಂಗದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕವಾಗಿದೆ. ಮಂಸೋರೆಯವರು ಈ ಮೊದಲೂ ತಮ್ಮ ತೀಕ್ಷ್ಣ ನಿರೂಪಣೆಯ ಹರಿವು ಮತ್ತು ನಾತಿಚರಾಮಿಯಂಥ ಎರಡು ಸದಭಿರುಚಿಯ ಚಿತ್ರಗಳ ಮೂಲಕ ಅಷ್ಟೇ ಖ್ಯಾತಿಯನ್ನು ಗಳಿಸಿದಂಥವರು.

ಭ್ರಷ್ಟಾಚಾರದ ಸ್ವರೂಪವನ್ನು ತಮ್ಮ ಅನುಭವ ಗ್ರಹಿಕೆಗಳ ಮೂಲಕ ದಾಖಲಿಸುತ್ತ ಅಪಾರ ಸಹನೆಯಿಂದ ಕಟ್ಟಿದ ಸೂಕ್ಷ್ಮಗಳಾದುದರಿಂದ ಅವು ನಮ್ಮ ಭಾವಕೋಶವನ್ನು ತಟ್ಟುತ್ತವೆ. ಹಾಗಾಗಿ ಹೋರಾಟವು ನಕ್ಸಲೈಟ್ ಧೋರಣೆ ಅನ್ನಿಸಿಕೊಳ್ಳುವ ಹಿನ್ನೆಲೆಯಲ್ಲೂ ಕಥೆಯ ಆಶಯವನ್ನು ಚಿತ್ರವು ಘನತೆಯಿಂದ ಕಾಪಿಡುತ್ತದೆ. ಆ ಮೂಲಕ ಹೊಸ ಸಾಧ್ಯತೆಗಳ ಪ್ರಯೋಗಕ್ಕೆ ಕೂಡ ಈ ಸಿನೆಮಾ ತನ್ನನ್ನು ತಾನು ಒಡ್ಡಿಕೊಂಡಿದೆ.

ಗಾಂಧಿ ಏನು ಹೇಳಿದರು ಅನ್ನುವುದಕ್ಕಿಂತ ಹೇಗೆ ಬದುಕಿದರು ಎಂಬುದೇ ನಮ್ಮನ್ನೆಲ್ಲ ಹೆಚ್ಚು ಆಕರ್ಷಿಸುವ ಈ ಸಂದರ್ಭದಲ್ಲಿ, ಸರಕಾರೀ ಕಚೇರಿಯ ಎದುರು ಸತ್ಯಾಗ್ರಹಿಯಾಗಿ ಕೂಡಿಸಿದ ಗಾಂಧಿ ಪ್ರತಿಮೆಯ ಮೂಲಕ ಗಾಂಧೀವಾದಕ್ಕೆ ಚಿತ್ರದುದ್ದಕ್ಕೂ ಒಂದು ಬಗೆಯ ವಿಷಾದ ಭಾವ ಸ್ಥಾಯಿಯಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ.

ಮೌನಗರ್ಭವಾಗಿಸಿಕೊಂಡು ಕುದಿವ ಮಹಿಳೆ ತನ್ನ ಛಲ ಮತ್ತು ಆತ್ಮಸ್ಥೈರ್ಯದಿಂದಲೇ  ನೋವು ಅವಮಾನಗಳನ್ನು ದಾಟುತ್ತ ಕ್ಷಣಕ್ಷಣಕ್ಕೂ ಅನುಭವದ ಹಲವು ಅವತಾರಗಳಾಗಿ ಬಾಧಿಸುತ್ತ, ಕೊನೆಯಲ್ಲಿ ಅದೊಂದು ನಮ್ಮ ಭಾವ ಜಗತ್ತಿನ ಸ್ಪೋಟವೂ ಆಗುವುದು ಸಿನೆಮಾದ ಒಂದು ಶಕ್ತಿ, ಹಾಗಾಗಿ ಸಿನೆಮಾ ವೀಕ್ಷಿಸಿ ಹೊರ ಬರುವಾಗ ನಾವೂ ಗೀತಾಳಷ್ಟೇ ಕ್ರೋಧಗೊಂಡಿರುತ್ತೇವೆ. ನಾಯಕಿ ಕಂಡುಕೊ೦ಡ ಸ್ವಂತಿಕೆಯ ನೆಲೆಯು ಕತೆಯ ಇಡಿಯಾದ ಆಶಯಕ್ಕೆ ಸ್ತ್ರೀಪರವಾದ ಒಂದು ಆಲೋಚನಾ ಕ್ರಮದ ಹೊಸ ಹೊಳಹನ್ನೂ ತೋರುವಂತಿದೆ.

ಗಂಭೀರ ವಸ್ತುವನ್ನು ಹೊಸದೊಂದೇ ದಿಗಿಲಿನ ಭಾವದಲ್ಲಿ ಚಿಂತಿಸಲು ಹಚ್ಚುವ ಒಂದು ವಿಭಿನ್ನ ಮಾದರಿಯ ಚಿತ್ರವಿದು. ಅವಮಾನ ಅಭದ್ರತೆ ದಾಸ್ಯ ಬಡತನ ಹಸಿವು ಹೀಗೆ ಅನೇಕ ವಿಷಯಗಳ ಕುರಿತಾಗಿ ಈ ಚಿತ್ರ ಚರ್ಚೆಗೆ ತರುತ್ತದೆ. ಇವುಗಳನ್ನು ಹೊಂದಿದ ವ್ಯಕ್ತಿ ಜಗತ್ತಿನ ಯಾವ ಮೂಲೆಗೆ ಹೋದರೂ ಸುರುಳೀತ ಬದುಕು ನಡೆಸಲು ಸಾಧ್ಯ ಇಲ್ಲ, ಇಂಥ ಕಾಳಜಿಗಳ ಸುತ್ತಲೇ ಸಿನೆಮಾದ ಚಿಂತನೆಗಳು ಎಳೆಎಳೆಯಾಗಿ ದರ್ಶಿಸುತ್ತ ಹೋಗುವುದನ್ನು ನಾವು ಸಿನೆಮಾ ವೀಕ್ಷಿಸಿಯೇ ಆಸ್ವಾದಿಸಬೇಕು.

ಇಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಿರುವ ಜೀವವು ತಾಯ್ತನ ಹೊತ್ತ ಸ್ತ್ರೀಯಾಗಿರುವುದರಿಂದಲೇ ಚಿತ್ರದ ಹೂರಣಕ್ಕೆ ವಿಶೇಷವಾದೊಂದು ಕಾವು ಲಭಿಸಿದೆ. ಎಲ್ಲ ವೇದನೆಗಳ ಕೊನೆಯೆಂಬ೦ತೆ ಪವಿತ್ರ ತಾಯಿಯ ಅಗಲಿಕೆ ಮತ್ತು ಪರಿಶುದ್ಧತೆಗೆ ರೂಪಕವಾದ ಮಗುವಿನ ಆಗಮನ, ಪ್ರಾಮಾಣಿಕ ಸಮಾಜವೊಂದರ ಆಗಮನದ ಸೂಚನೆಯನ್ನೂ ನೀಡುವಂತಿದೆ.

ಸಾಮಾಜಿಕ ಪಿಡುಗುಗಳ ಕುರಿತು ಜಾಗ್ರತಿ ಮೂಡಿಸುವ ಇಂಥ ವಸ್ತುಗಳು ಇಂದು ಹೆಚ್ಚು ಹೆಚ್ಚು ದೃಶ್ಯ ಮಾಧ್ಯಮಕ್ಕೆ ಒಳಪಡುವ ಅಗತ್ಯವಿದೆ, ಯಾಕೆಂದರೆ ಸಿನೆಮಾ ಮತ್ತು ಧಾರಾವಾಹಿಗಳ ಮಾಧ್ಯಮ ಬಹಳಷ್ಟು ಜನರನ್ನು ಆಕರ್ಷಿಸುವ ಕಾಲಘಟ್ಟದಲ್ಲಿ ನಾವಿರುವುದರಿಂದ, ಒಳ್ಳೆಯದೇನಾದರೂ ಇದ್ದರೆ ಅದು ದೃಶ್ಯ ಮಾಧ್ಯಮದ ಮೂಲಕವೇ ಜನಸಮುದಾಯವನ್ನು ಅದರಲ್ಲೂ ಅನಕ್ಷರಸ್ಥರನ್ನು ನೇರವಾಗಿ ತಲುಪಲು ಸಾದ್ಯ.

ಯಾಕೆಂದರೆ ಒಂದು ಪುಸ್ತಕವನ್ನು ಎಷ್ಟು ಜನ ಓದಬಲ್ಲರು? ಅದೇ ವಸ್ತು ದೃಶ್ಯ ಮಾದ್ಯಮಕ್ಕೆ ಒಳಪಟ್ಟರೆ ಎಷ್ಟು ಜನ ನೋಡುತ್ತಾರೆ? ಅನುಪಾತದಲ್ಲಿ ತುಂಬಾ ವ್ಯತ್ಯಾಸವಿದೆ. ಹಾಗಾಗಿ ದೃಶ್ಯ ಮಾಧ್ಯಮವನ್ನು ನಾನು ಹೆಚ್ಚು ನಂಬುತ್ತೇನೆ. ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ಕೊಟ್ಟು ಓದಿಕೊಂಡು ಬನ್ನಿ ಅಂದರೆ ಎಷ್ಟು ಮಕ್ಕಳು ಇಷ್ಟಪಟ್ಟು ಓದಿ ಅರಗಿಸಿಕೊಳ್ಳಬಲ್ಲರು? ಅದೂ ಆಂಗ್ಲ ಮಾಧ್ಯಮದ ಮಕ್ಕಳಲ್ಲಿ ಅವರ ಮಾತ್ರ ಭಾಷೆಯ ಒಲವನ್ನು ನಾವು ಹೇಗೆ ಹೆಚ್ಚಿಸಬಹುದು? ಓದುವ ಹವ್ಯಾಸವಿಲ್ಲದ ಮಕ್ಕಳಲ್ಲೂ ಒಳ್ಳೆಯ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಬಿತ್ತುವುದು ಹೇಗೆ?

ಯಾಕೆಂದರೆ ಒಂದು ಪುಸ್ತಕವನ್ನು ಎಷ್ಟು ಜನ ಓದಬಲ್ಲರು? ಅದೇ ವಸ್ತು ದೃಶ್ಯ ಮಾದ್ಯಮಕ್ಕೆ ಒಳಪಟ್ಟರೆ ಎಷ್ಟು ಜನ ನೋಡುತ್ತಾರೆ? ಅನುಪಾತದಲ್ಲಿ ತುಂಬಾ ವ್ಯತ್ಯಾಸವಿದೆ. ಹಾಗಾಗಿ ದೃಶ್ಯ ಮಾಧ್ಯಮವನ್ನು ನಾನು ಹೆಚ್ಚು ನಂಬುತ್ತೇನೆ. ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ಕೊಟ್ಟು ಓದಿಕೊಂಡು ಬನ್ನಿ ಅಂದರೆ ಎಷ್ಟು ಮಕ್ಕಳು ಇಷ್ಟಪಟ್ಟು ಓದಿ ಅರಗಿಸಿಕೊಳ್ಳಬಲ್ಲರು? ಅದೂ ಆಂಗ್ಲ ಮಾಧ್ಯಮದ ಮಕ್ಕಳಲ್ಲಿ ಅವರ ಮಾತ್ರ ಭಾಷೆಯ ಒಲವನ್ನು ನಾವು ಹೇಗೆ ಹೆಚ್ಚಿಸಬಹುದು? ಓದುವ ಹವ್ಯಾಸವಿಲ್ಲದ ಮಕ್ಕಳಲ್ಲೂ ಒಳ್ಳೆಯ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಬಿತ್ತುವುದು ಹೇಗೆ?

ಅದಕ್ಕೆ ನನ್ನ ಸಲಹೆ ಒಂದೇ. ರಾಜ್ಯದ ಪ್ರತೀ ಶಾಲೆಯಲ್ಲೂ ವಾರಕ್ಕೊಂದು ಒಳ್ಳೆಯ ಅಭಿರುಚಿಗಳ ಸಿನೆಮಾಗಳನ್ನು ತೋರಿಸಬೇಕು. ತಿಂಗಳಿಗೆ ನಾಲ್ಕು ಸಿನೆಮಾಗಳನ್ನು ವಿದ್ಯಾರ್ಥಿಗಳು ನೋಡಿದರೆ ಅವರಿಗೆ ನಾಲ್ಕು ಪುಸ್ತಕಗಳನ್ನು ಓದಿದ ಪ್ರಯೋಜನ ದೊರೆತಿರಬೇಕು, ಶಾಲಾ ಮಕ್ಕಳಿಗಾಗಿಯೇ ಅವರ ಮನಸ್ಸನ್ನು ಬುದ್ಧಿಯನ್ನು ಹರಿತಗೊಳಿಸುವಂಥ, ಕ್ರಿಯಾಶೀಲತೆಯನ್ನು ಹೆಚ್ಚಿಸುವಂಥ, ಆಕ್ಟ್ ೧೯೭೮ ನಂಥ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಹ ಅತ್ಯುತ್ತಮ ಗುಣಮಟ್ಟದ ಸಿನೆಮಾಗಳನ್ನು ಸರ್ಕಾರವೇ ನಿರ್ಮಿಸಬೇಕು.

ಚಿತ್ರದ ಕೊನೆಯಲ್ಲಿ, ಕೇಡಿಗೆ ಕಾರಣರಾದ ನೌಕರರು ನೀಡುವ ಸಾಮೂಹಿಕ ರಾಜಿನಾಮೆಯ ಹುಸಿ ಭಾವೋದ್ವೇಗದ ಸಣ್ಣ ಸನ್ನಿವೇಶವನ್ನು ಹೊರತು ಪಡಿಸಿ, ಕಾನೂನಿನ ಹಂತಗಳಲ್ಲೂ ಹಲವು ಪ್ರಮುಖ ತಿರುವುಗಳನ್ನು ದಾಟುತ್ತ ಓಡುವ ಚಿತ್ರಕತೆ ಸುಮಾರು ಆರೇಳು ಘಂಟೆಗಳ ಅವಧಿಯಲ್ಲಿ ವಿಸ್ತರಿಸಿಕೊಳ್ಳುತ್ತದೆ, ಹೀಗೆ ಕತೆ ನಡೆವ ಕಾಲದ ಪರಿಮಿತಿ ಕಡಿಮೆಯಿದ್ದಷ್ಟೂ ಕಥನದ ಬಂಧ ಬಿಗಿಯಾಗಿರುತ್ತದೆ.

ನಿರೂಪಣೆಯ ಕ್ರಮದಲ್ಲಿಯೂ ದೃಶ್ಯ ಹಾಗೂ ಸಂಭಾಷಣೆಗಳೇ ಕಥೆಯನ್ನು ಹೇಳುತ್ತ ವೀಕ್ಷಕರಿಗೆ ಕಾಣಿಸಲು ಯತ್ನಿಸುವುದು ನಿರ್ದೇಶಕ ಮಂಸೋರೆಯವರ ಹರಿತ ಶೈಲಿ. ಅವರ ಹಿಂದಿನೆರಡು ಚಿತ್ರಗಳಲ್ಲಿಯೂ ಇದೇ ಶೈಲಿಯನ್ನು ನಾವು ಕಾಣಬಹುದು, ಇದು ಅವರಿಗೆ ಈಗಾಗಲೇ ಸಿದ್ದಿಸಿದ ಮತ್ತು ಕೈಹಿಡಿದ ಉತ್ತಮ ಮಾರ್ಗ, ಸಾಮಾಜಿಕ ಬದ್ಧತೆಯ ವಸ್ತುವುಳ್ಳ ಚಿತ್ರವನ್ನು ನಿರ್ಮಿಸುವ ಹಾಗೂ ಕೋವಿಡ್ ನಂತರದ ದಿನಗಳಲ್ಲಿ ಮೊಟ್ಟಮೊದಲಿಗೆ ಥಿಯೇಟರಿನಲ್ಲಿ ಬಿಡುಗಡೆಗೊಳಿಸುವ ದೊಡ್ಡ ರಿಸ್ಕನ್ನು ನಿರ್ಮಾಪಕರು, ನಿರ್ದೇಶಕರಾಧಿಯಾಗಿ ಆಕ್ಟ್ ೧೯೭೮ ಚಿತ್ರ ತಂಡ ಎದುರಿಸಿ, ನಿಭಾಯಿಸುವ ಧೈರ್ಯ ತೋರಿದ್ದು ಮೆಚ್ಚುವ ಸಂಗತಿ.

ಹೀಗೆ ಪುಟ್ಟ ಪುಟ್ಟ ಘಟನೆಗಳ ಮೂಲಕ ಸನ್ನಿವೇಶವನ್ನು ಅರ್ಥಪೂರ್ಣ ಚಿತ್ರವಾಗಿ ಕಟ್ಟಿಕೊಳ್ಳುವ, ವೀಕ್ಷಕರಿಗೆ ಹೆಚ್ಚಿನ ಪರಿಣಾಮಕಾರಿಯಾದ ದರ್ಶನ ಭಾಗ್ಯವನ್ನು ದೊರಕಿಸಿಕೊಡುವ, ವೀಕ್ಷಕರ ಮನಸ್ಸಿನಲ್ಲಿ ಬಹುಕಾಲ ಉಳಿದು ಕಾಡಬಲ್ಲಂಥ ಕೌಶಲ್ಯವುಳ್ಳ, ಸಮಕಾಲೀನತೆಯನ್ನು ಹೊಸರೀತಿಯಲ್ಲಿ ಎದುರುಗೊಳ್ಳುವ ಪ್ರಯೋಗಶೀಲವಾದ ಇಂಥ ಇನ್ನಷ್ಟು ಸಿನೆಮಾಗಳನ್ನು ಭಾರತೀಯ ಚಿತ್ರರಂಗಕ್ಕೆ ಮಂಸೋರೆ ನೀಡುವಂತಾಗಲಿ ಎಂದು ಹಾರೈಸುತ್ತ ಈ ಅಪರೂಪದ ಚಿತ್ರ ಹಾಗೂ ಚಿತ್ರತಂಡಕ್ಕೆ ತುಂಬು ಮಮತೆಯಿಂದ ಅಭಿನಂದಿಸುತ್ತೇನೆ.

ಹೇಮಾ ಡಿ ಖುರ್ಸಾಪೂರ

ಕಡಿಮೆ ಬಜೆಟ್ ನಲ್ಲಿ contemporary subject ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನೋಡುತ್ತಿರುವಷ್ಟು ಹೊತ್ತು ಬೇರೆ ಯಾವ ಯೋಚನೆಯೂ ಬರದ ಹಾಗೆ ನೋಡಿಸಿಕೊಂಡು ಹೋಗುತ್ತದೆ.

ದೂರದರ್ಶಿತ್ವ ಇಲ್ಲದಿದ್ದರೆ, ಸಮಷ್ಟಿ ಪ್ರಜ್ಞೆ ಕೊರತೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭೂತಪೂರ್ವ ಯಶಸ್ಸು ಕಾಣಬಹುದಾದ ಒಂದು ಎಳೆ, ವ್ಯಕ್ತಿ ಕೇಂದ್ರಿತ ಆಗುವ ಮೂಲಕ ಹೇಗೆ ‘ಕನ್ನಡ’ದ ಅತ್ಯುತ್ತಮ ಚಿತ್ರವಾಗಿ ಹೇಗೆ ಸೀಮಿತಗೊಂಡಿದೆ ಎನ್ನುವುದಕ್ಕೆ ಇವು ಕೆಲವು ಉದಾಹರಣೆಗಳು.

ಸಿನೆಮಾ ಹಾಲ್ ನಿಂದ ಹೊರ ಬರ್ತಿದ್ದ ಹಾಗೆ, ನಮ್ಮ ಆಫೀಸಿನ ಮಕ್ಕಳು, “ಮೇಡಂ, ಕೊನೆಯ ಹತ್ತು ಹದಿನೈದು ನಿಮಿಷ ನಮಗೆ ಅಳುನೇ ಬಂದ್ಬಿಡ್ತು…” ಎಂದರು. ಅಷ್ಟರ ಮಟ್ಟಿಗೆ ಇದು ಚಿತ್ರದ ಯಶಸ್ಸೇ.

ಈ ಅಳು ಬರಿಸುವ ಡೈಲಾಗ್ ಗಳು ಇಷ್ಟು ಪ್ರಮಾಣದಲ್ಲಿ ಇರಲೇಬೇಕು ಎನ್ನುವ ಸಂಭಾಷಣೆಕಾರರ ಮತ್ತು ನಿರ್ದೇಶಕರ ಯೋಚನೆ ಬಲೇ ಮಜ ಅನಿಸತ್ತೆ ನಂಗೆ. ಇದರ ಹಿಂದಿರುವ ಉದ್ದೇಶ ಇಷ್ಟೇ, ವ್ಯವಸ್ಥೆಗೆ, ಜನ ಸಾಮಾನ್ಯರಿಗೆ ಏನು ಬೇಕು ಎನ್ನುವುದಕ್ಕಿಂತ… ನಾವು ಕೊಟ್ಟಿದ್ದೇ ಅಂತಿಮ. ಅದನ್ನೇ ನೀವು ಮೆಚ್ಚಿ ಮೆಚ್ಚಿ ನೋಡಬೇಕು ಎನ್ನುವ ಭಾವವೇ ಇರುತ್ತದೆ.

ಕಳೆದ ಒಂದು ದಶಕದಿಂದ ಪತ್ರಿಕೆಗಳು, ಚಾನೆಲ್ ಗಳು, ಸಿನೆಮಾರಂಗ ಮಾಡಿದ್ದು, ಮಾಡುತ್ತಿರುವುದೂ ಇದನ್ನೇ. ವಿಷಯದ ವಸ್ತುನಿಷ್ಠ ಪ್ರಸ್ತುತಿಯಿಂದ ಸಮಾಜವನ್ನ, ಜನರನ್ನ ತಿಳಿವಳಿಕಸ್ಥರನ್ನಾಗಿ ಮಾಡುವುದಕ್ಕಿಂತ, ಗೊಂದಲಗೊಳಿಸಿ ಇವುಗಳ ಸಾವಾಸನೇ ಸಾಕಪ್ಪ ಎನ್ನುವಲ್ಲಿಗೆ ತಂದು ನಿಲ್ಲಿಸುವುದು.

ಇಡೀ ಸಿನೆಮಾದಲ್ಲಿ ತೀರಾ ನಿರಾಸೆಗೊಳಿಸಿದ ಅಂಶ… ಎಲ್ಲವೂ ಸ್ವಚ್ಛ ಬೆಳಕಿನಲ್ಲಿ ಅಚ್ಚುಕಟ್ಟಾಗಿ ಚಿತ್ರೀಕರಣಗೊಂಡಿದೆ. ಸಿನಿಮೆಟೋಗ್ರಫಿ ಕೆಲಸ ಕಾಣುವುದೇ ಇಲ್ಲ. ಹಿನ್ನೆಲೆ ಸಂಗೀತ (Vocal ಅಲ್ಲ Instrumental) ಸದ್ದೇ ಇಲ್ಲದಿರುವುದು ಮತ್ತು ತೀರಾ ಸಾಧಾರಣ ಮಟ್ಟದ ಸಬ್ ಟೈಟಲ್ ಗಳು.

ತಮ್ಮ ಸುತ್ತ ನೀವು ಮಾಡಿದ್ದೇ ಅದ್ಭುತ, ನಿಮ್ಮ ಥರ ಬೇರೆ ಯಾರೂ ಮಾಡಲು ಸಾಧ್ಯವೇ ಇಲ್ಲ ಎನ್ನುವ ಆಸ್ಥಾನ ಹೊಗಳುಭಟ್ಟರನ್ನ ಇಟ್ಟುಕೊಂಡದ್ದರ ಪರಿಣಾಮವಿದು. ಕಲೆಯ ಕುರಿತಾದ ವಸ್ತುನಿಷ್ಠ ವಿಮರ್ಶೆ ಬಯಸದ ಮನಸ್ಥಿತಿ ಇಲ್ಲದಿದ್ದರೆ ಕ್ರಿಯಾಶೀಲ ಮನಸುಗಳು ಹೀಗೆ ನಿಷ್ಕ್ರಿಯವಾಗುತ್ತವೆ.

ಪ್ರಮೋದ್ ಶೆಟ್ಟಿ ಒಳ್ಳೆಯ ಕಲಾವಿದರು. ಆದರೆ ಇಲ್ಲಿನ ಪೊಲೀಸ್ ಪಾತ್ರಕ್ಕೆ ಬೇಕಾದ body language, dialogue delivery ಆಗಲಿ ಇಲ್ಲ. ಸಿನೆಮಾ ಓಡಲಿ ಎನ್ನುವ ಕಾರಣಕ್ಕೆ ಇದೊಂದು province equality. ತಮಗೆ ಒಗ್ಗದ ಪಾತ್ರ ಮಾಡಿದರೆ ಹೇಗಿರುತ್ತದೆ ಎನ್ನುವುದಕ್ಕೆ ಉದಾಹರಣೆ.

ಬಾಂಬ್ ಗೆ ಮೂಲ ಸಾಮಗ್ರಿ ಒದಗಿಸಿದನ ವಿಚಾರಣೆ ಸಂದರ್ಭ: ಪೊಲೀಸರು ಸಿಟ್ಟಿನಲ್ಲಿ ಬಂದು ಆರೋಪಿಯ ಪ್ಯಾಂಟಿನೊಳಗಡೆ ಗನ್ ಇಟ್ಟರೆ ನಿಜ ಹೇಳುವ ಕ್ರಿಮಿನಲ್ ಗಳು ಇನ್ನೂ ಇದ್ದಾರೆ! ವಿಚಾರಣೆ ಕೂಡ ಅಷ್ಟೇ ಪೇಲವ, ಎಷ್ಟು ಬಾಂಬ್ ಗೆ ಆಗುವಷ್ಟು ಸಾಮಗ್ರಿ ತೆಗೆದುಕೊಂಡರು, ಏನು ಎತ್ತ ಅಂತಿಲ್ಲ. ಕೊನೆಯಲ್ಲಿ ಗೀತಾ ಕಟ್ಟಿಕೊಂಡಿದ್ದು ನಕಲಿ ಬಾಂಬ್ ಎಂದು ಹೇಳಿ ತೇಲಿಸಿ ಬಿಡುವುದು.

317 ದಿನದಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ ‘ಗಾಂಧಿ ಪ್ರತಿಮೆ’ ಗೀತಾ ಸಾಯುತ್ತಿದ್ದ ಹಾಗೇ ಬೋರ್ಡೆತ್ತಿಕೊಂಡು ಅಲ್ಲಿಂದ ನಿರ್ಗಮಿಸುತ್ತದೆ. ನ್ಯಾಯ ಸಿಕ್ಕಿತು ಅಥವಾ ನ್ಯಾಯ ಸಿಗುವುದಿಲ್ಲ ಎನ್ನುವುದು ನಮ್ಮನಮ್ಮ ಆಶುವಿಸ್ತರಣೆ ಸಾಮರ್ಥ್ಯದ ಮೇಲೆ ನಿಲ್ಲುತ್ತದೆ. ಪ್ರತಿಮೆಗಳ ಬಗ್ಗೆ ಹೇಳುವುದಾದರೆ ರೈತನನ್ನ ಮರದ ಮೇಲೆ ಹತ್ತಿಸಿ, ಕೆಳಗೆ ಬೀಳಿಸಿ ಸಾಯಿಸುವ ಅವಶ್ಯಕತೆ ಇರಲಿಲ್ಲ. ಅದಕ್ಕೊಂದು ಪ್ರತಿಮೆ ಸಾಕಿತ್ತು.

ಚಾನೆಲ್ ಪ್ರತಿನಿಧಿಗಳಿಗೆ ಗೀತಾ ಸಂದರ್ಶನ ಕೊಡುವುದು ಮುಗಿದ ಮೇಲೆ ನೋವನ್ನು ಸಾರ್ವತ್ರಿಕಗೊಳಿಸುವ ಭರದಲ್ಲಿ ಪಾತ್ರದಾರಿಗಳ ಕಣ್ಣಲ್ಲಿ ಜಿನುಗುವ ನೀರನ್ನು ಕ್ಲೋಸಪ್ ಮಾಡಿ ತೋರಿಸುವ ಮೂಲಕ ಅನುಕಂಪಕ್ಕೆ ಹೆಚ್ಚಿನ ಘನತೆ ಗೌರವ ಆರೋಪಿಸಿದ್ದಾರೆ.

ಕೊನೆಯಲ್ಲಿ ಗೀತಾಳಿಗೆ ಜನಿಸುವ ಮಗುವೊಂದನ್ನ ಬಿಟ್ಟರೆ ಬೇರೆ ಯಾವ ಫ್ರೇಮ್ ನಲ್ಲೂ ಮಕ್ಕಳು ಬರುವುದೇ ಇಲ್ಲ. ಮಕ್ಕಳಿಗೆ ಅಂತ ಏನೂ ಅಲ್ಲ. ಈ ಥರದ ಸಿನೆಮಾಗಳನ್ನು ಮಾಡಲು ಮಕ್ಕಳ ದೃಷ್ಟಿಕೋನಕ್ಕೆ ಮೊದಲ ಆದ್ಯತೆ ಬೇಕು. ಮಕ್ಕಳು ವರ್ತಮಾನದ ಸಂಕೇತ ಎನ್ನವುದನ್ನು ಅರ್ಥಮಾಡಿಕೊಳ್ಳದ ಸಿನೆಮಾ ಜಗತ್ತಿನ as usual  ಪುರಾನಿ ಆದತ್… ಇಲ್ಲೂ ಅನುರಣಿಸಿದೆ.

ರಿಪೋರ್ಟರ್ ಬಂದು ಮೈಕ್ ಹಿಡಿದು ‘ಏನ್ ಹೇಳು ನಿಂದು’ ಎಂದು ಕೇಳುವಷ್ಟು ಉದ್ದಟವನ್ನು ಸಾಮಾನ್ಯವಾಗಿ ಯಾರೂ ತೋರಲ್ಲ… ಅದೂ ಒಳಗೆ ಹೋಗಲೂ ಭಯ ಪಡುತ್ತಿದ್ದ ರಿಪೋರ್ಟರ್ ಬೇರೆ. ಆಗ ಗೀತಾ ಮೊದಲು ಹೇಳುವ ಮಾತು ಬಾತ್ ರೂಮ್ ಗೆ ಹೋಗಿ ಬಾ ಎನ್ನುವುದು ಮನುಷ್ಯ ಸಹಜ ಗುಣಗಳಿಗಿಂತ ಆದರ್ಶ ಪಾತ್ರ ಪೋಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಕಿಂಡಿಯಿಂದ ಕರಾರುವಕ್ಕಾಗಿ ಗುಂಡು ಹಾರಿಸುವ, ಮಿನಿ ಡ್ರೋನ್ ಅನ್ನು ಹೊಡೆದುರುಳಿಸುವ, ಪೊಲೀಸರಿಗೆ ಹೇಳಿ – ಕರೆಂಟ್ ಬಿಲ್ ಕಟ್ಟಿಸುವ, ಜೀಬ್ರಾ ಕ್ರಾಸಿಂಗ್ ಹಾಕಿಸಿ ಎನ್ನುವಂಥ ವ್ಯಕ್ತಿ ಕೇಂದ್ರಿತ ಬೇಡಿಕೆಗಳನ್ನೂ ಈಡೇರಿಸಿಕೊಳ್ಳುವ ಗೀತಾ ಹೊಟ್ಟೆಯಲ್ಲಿರುವ ತನ್ನ ಮಗುವಿಗೆ ಸಮಾಧಾನ ಮಾಡುತ್ತಾಳೆಯೇ ಹೊರತು, ಡಾಕ್ಟರ್/ನರ್ಸ್ ಅನ್ನು ಕಳುಹಿಸಿಕೊಡಿ ಅಂತ ಕೇಳಬಾರದು ಎನ್ನುವ ಸ್ವಾಭಿಮಾನದಲ್ಲಿ ತನ್ನ ಸಾವು ಖಚಿತ ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾಳೆ!

ವೈಯಕ್ತಿಕ ನಷ್ಟ ಯಾರಿಗಾದರೂ ಅದು ತುಂಬಲಾರದ್ದೇ. ಸಂವಿಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ಯಾವ ವ್ಯಕ್ತಿಯೂ ದ್ವೀಪವಲ್ಲ; ಜೊತೆಗೇ ಪ್ರತೀ ವ್ಯಕ್ತಿಗೂ ಇರುವ ಮೌಲ್ಯವನ್ನು ಕಡೆಗಣಿಸಲಾಗದು. ಇವೆರಡರ ನಡುವಿನ ಮೌಲ್ಯವನ್ನು ತಿಳಿಸಿಕೊಡುವುದೇ ಎಲ್ಲ ಒಳ್ಳೆಯ ಕಲೆಗಳ ನೆಲೆಗಟ್ಟು.

ವೈಯಕ್ತಿವಾಗಿ ನನಗೆ ತುಂಬಾ ಇಷ್ಟವಾದ ಡೈಲಾಗ್.. ‘ಚಿಕನ್ ಪಾಸ್ ಮಾಡ್ರಿ ಈ ಕಡೆ!’ ಅಲ್ವ ಮತ್ತೆ!! ಯಾವುದು ಏನೇ ಆದ್ರೂ ಅಲ್ವ ಬದುಕು ಇಷ್ಟೇ ಸರಳ.. ಅಚ್ಯುತ್ ಮತ್ತು ಅವಿನಾಶ್ ಅವರ versatile actingಗೆ ವಂದೇ.

ಒಂದು ಸಿನೆಮಾ ನೋಡಲು ಇಷ್ಟೆಲ್ಲ ಬೇಕೆ ಎನ್ನುವ ಮಾತೂ ಬರುತ್ತದೆ. film appreciation ನ ಅಭಿರುಚಿ ಬೆಳಸಬೇಕಾದದ್ದೂ ದೃಶ್ಯ ಮಾಧ್ಯಮದ್ದೇ ಜವಾಬ್ದಾರಿ. ಟಿಕೇಟಿಗೆ ಕೊಟ್ಟ ದುಡ್ಡಿಗೆ ಮೋಸವಿಲ್ಲ ಎನ್ನುವುದಾದರೆ ಕಮರ್ಶಿಯಲ್ ಸಿನೆಮಾಗಳು ಭರಪೂರ ಮನರಂಜನೆ ನೀಡುತ್ತದೆ ಅಷ್ಟು ಸಾಕಲ್ಲ! ಮನರಂಜನೆ ಹಿಂದೆ ಕಲೆ ನೀಡುವ ಸಂತೃಪ್ತಿಯೂ ಬೇಕಲ್ಲವೇ?

‍ಲೇಖಕರು Avadhi

November 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಹೇಮಾ ಅವರ ಅಭಿಪ್ರಾಯಗಳೇ ನನ್ನವೂ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಲಲಿತಾ ಸಿದ್ಧಬಸವಯ್ಯCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: