‘ಅವ್ವ’ ಆಗುವುದೆಂದರೆ ಕೆಲವರಿಗೆ ಅವಸರದ ಮಾತಲ್ಲ..

ಪೂಜಾ ರಘುನಂದನ್ 

ತಾಯ್ತನ ಸಿಗದಿದ್ದಕ್ಕೆ ತನಗೆಂದೇ ಈ ಜಗಕೆ ಬಂದಿದ್ದ ಕಂದನಿಗೆ ತಾಯಾದವಳ ಅದಮ್ಯ ಕರುಳಿನ ಕತೆ ಇದು!..

ಮದರ್ಸ್ ಡೇ, ವುಮೆನ್ಸ್ ಡೇ… ಎಷ್ಟು ಅದ್ಭುತ ಆಚರಣೆಗಳು. ಹೆಣ್ಣಿನ ದಿನ ಒಂದಿನ ಅಲ್ಲ, ಪ್ರತಿ ಕ್ಷಣ ಅವಳ ದಿನವೇ..!ಇಲ್ಲಿ ನಾನು ಹೇಳಲಿಕ್ಕೆ ಹೊರಟಿದ್ದು ಯಾರದ್ದೋ ಕಥೆ ಅಲ್ಲ. ಯಾರದೋ ಉದಾಹರಣೆ ಅಲ್ಲ, ಯಾವುದೋ ಸಂಘಟನೆ ಮಾಡೋಣ ಅಂತ ಅಲ್ಲವೇ ಅಲ್ಲ. ಇದು ನನ್ನ ಕಥೆ… ಮದುವೆ ನಂತರದ ಹೆಣ್ಣಿನ ಭಾವುಕದ ಕಥೆ… ಯಾಕೆ ಈ ಕಥೆ ಇವತ್ತೆ ಅಂದರೆ, ಇವತ್ತೇ ಹೇಳಿದರೆ ಮಾತ್ರ ಇದಕ್ಕೆ ಇನ್ನಷ್ಟು ಅರ್ಥ ಬರಬಹುದು ಅನ್ನೋದು ನನ್ನ ಅನಸಿಕೆ. ಇನ್ನೂ ಮಿಕ್ಕಿದ್ದು ನಿಮ್ಮ ಭಾವನೆಗಳಿಗೆ ಬಿಟ್ಟಿದ್ದು.

ಕುಂದಾನಗರಿ  ಬೆಳಗಾವಿಯಲ್ಲಿ ಹುಟ್ಟಿ ಮಾಯಾನಗರಿ ಬೆಂಗಳೂರಿನಲ್ಲಿ ಆಗತಾನೆ ನೌಕರಿಗೆ ಸೇರಿದ್ದ ನಾನು   ಉತ್ತರ ಕರ್ನಾಟಕದ ಮಗಳು. ಹಾಸನದ ರಘುನಂದನನೊಟ್ಟಿಗೆ ನನ್ನ ಲಗ್ನ ನಿಶ್ಚಯ ಆಯಿತು. 2012 ರಲ್ಲಿ ಹಾಸನದಲ್ಲಿ ಮದುವೆಯಾದೆ. ಮದುವೆ ನಂತರ ಹೊಸ ಜೀವನ. ತುಂಬು ಕುಟುಂಬ. ಯಾವುದೇ ಕೆಲಸಕ್ಕೆ ಸೇರುವ ಯೋಚನೆ ನನ್ನಲ್ಲಿರಲಿಲ್ಲ. ಏಕೆಂದರೆ  ನಾ ಆಚೇ ಹೋದ್ರೆ ಮನೆಯವರು ಏನು   ಅನ್ಕೊಳ್ತಾರೆ ಅನ್ನುವ ಕಾಡುವ ಪ್ರಶ್ನೆ. ಯಾಕೆಂದರೆ ನಾನು ಹೆಣ್ಣು ಅಲ್ಲವೇ.. ಹತ್ತಾರು ಹೊಸ ಸ್ನೇಹಿತರ ಭೇಟಿ, ನಾಲ್ಕಾರು ಕಾರ್ಯಕ್ರಮಗಳ ತಿರುಗಾಟದ ಮಧ್ಯೆ ಹೀಗೆ ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು ಅಂತ ದಿನಗಳು ಕಳೆಯುತ್ತಾ ಹೋದದ್ದು ಗೊತ್ತಾಗಲೇ ಇಲ್ಲ. ಆಗ ಪ್ರಾರಂಭವಾಗಿದ್ದು ಗುಡ್ ನ್ಯೂಸ್ ಬಗ್ಗೆ… ಈ ಜನರಿಗೆ ಯಾಕೆ ಅಷ್ಟೊಂದು ಆಸಕ್ತಿ ಅಂತ ಗೊತ್ತಿಲ್ಲ. ಅವರಿಗೆ ಆ್ಯಕ್ಚುಲ್ ಆಗಿ ಬೇಕಿರೋದು ಏನು ? ಅಂತ ನನಗೆ ಇದುವರೆಗೂ ಕಾಡುವ ಯಕ್ಷ ಪ್ರಶ್ನೆ! ಸ್ವಾಮಿ.. ಸಿಕ್ಕವರೆಲ್ಲರೂ ಕೇಳುವ ಒಂದೇ ಪ್ರಶ್ನೆ ಶುಭ ಸುದ್ದಿ ಏನು… ಏನು ಗುಡ್ ನ್ಯೂಸ್… ಎಂದು ಮಾತ್ರ.ಇಷ್ಟರ ಮಧ್ಯೆ ನಾವು ಗುಡ್ ನ್ಯುಸ್‌ಗೆ ರೆಡಿ ಯಾಗಿ ಗುಡ್ ನ್ಯುಸ್ ಕೊಟ್ಟಾಯ್ತು. ಅವತ್ತು ಸಂಜೆ ನಮ್ಮ ಅಮ್ಮ(ಅತ್ತೆ) ಅವರು ಬೊಂಡಾ, ಸ್ವೀಟ್ ಎಲ್ಲವನ್ನೂ ಮಾಡಿ ಖುಷಿ ಪಟ್ಟ್ರು.

ನನ್ನ ಮೈದ್ನಾ ‘ಅತ್ತಿಗೆ ನಾನು ಫುಲ್ ಹ್ಯಾಪಿ… ನಮ್ಮಮನೆಗೆ ಒಂದು ಪುಟ್ಟ ಪಾಪು ಬರುತ್ತೆ ಅಲ್ವ’ ಅಂದ. ಅವನ ಮುಖದಲ್ಲಿ ಆ ಖುಷಿ ನೋಡಿಯೇ ನನಗೆ ಕಣ್ಣಲ್ಲಿ ನೀರು. ಆ ಒಂಬತ್ತು ತಿಂಗಳ ಕಾತುರದ ಕಾಯುವಿಯಿಕೆಗೆ ಕ್ಷಣಗಣನೆ ಅಲ್ಲಿಂದಲೇ ಆರಂಭವಾಯಿತು.. ಎಲ್ಲವೂ  ತಾಯ್ತನದ ಬದಲಾವಣೆ.. ತನ್ನ ಪುಟ್ಟವಾದ ಆ ಗರ್ಭ ಚೀಲದಲ್ಲಿ ತನ್ನ ಕಂದಮ್ಮನನ್ನು ರಕ್ಷಿಸುತ್ತಾ, ಹಲವಾರು ಕನಸುಗಳನ್ನು ಕಾಣುತ್ತಾ.. ಮೂಡ್ ಸ್ವಿಂಗ್ ಅದ್ರೂ ಇಷ್ಟವಾದ ಆಹಾರವನ್ನು ತ್ಯಜಿಸಿ ಇಷ್ಟವಾದ ಉಡುಗೆ ಬಿಟ್ಟು.. ತನ್ನ ದೇಹವನ್ನೇ ಆ ಜೀವಕ್ಕೆ ಮುಡಿಪಾಗಿ ಇಡ್ತಾಳೆ ಅಮ್ಮಳಾಗುವವಳು.

ಬಹು ಶಿಸ್ತಿನಿಂದ ಮಲಗಿ ಏಳುವ ಅಭ್ಯಾಸವನ್ನು ರೂಢಿ ಮಾಡ್ಕೊಳತಾಳೆ. ನಾನು ಸಹ ಇದಾವುದಕ್ಕೂ ಹೊರತಾಗಿರಲಿಲ್ಲ.ಆ ನಗು ಆ ಖುಷಿಯ ವಾತಾವರಣ ಎಲ್ಲವೂ ಕೇವಲ 2 ತಿಂಗಳಲ್ಲಿ  ನನ್ನಿಂದ ಜಾರಿಹೋಯಿತು…! ನನ್ನ ಛಾಪು.. ನನ್ನ ರಿಫ್ಲೆಕ್ಷನ್  ಅದಕ್ಕೂ ಹೃದಯ ಬಡಿತ ಪ್ರಾರಂಭವಾಗಿತ್ತು.. ಪುಟ್ಟ ಪುಟ್ಟ… ಕೈ ಕಾಲು ಮೂಡುವ ಸಮಯದಲ್ಲಿ ನನ್ನ ಮಗುವಿನ ಹೃದಯದ ಬಡಿತ ನಿಂತಿತ್ತು. ನನ್ನ ಹೊಟ್ಟೆಯಲ್ಲಿದ್ದ ಮಗು ಮಾಂಸ ರೂಪದಲ್ಲಿ ಜಾರಿ ಬಿದ್ದಿತ್ತು.. ಅದನ್ನ ನಾನು ಇದುವರೆಗೂ ಮಾಂಸದ ಮುದ್ದೆ ಅನ್ನಲು ಸಾಧ್ಯವಿಲ್ಲ. ಆ ಕ್ಷಣ ಆ ಮಗು ನನ್ನ ‘ಅಮ್ಮಾ ಅಮ್ಮಾ..’ ಎಂದು ನನ್ನನ್ನು ಬಚ್ಚಲ ಮನೆಯಲ್ಲಿ ಝೇಂಕರಿಸುವ ಶಬ್ದ ನನ್ನನ್ನ ಆವರಿಸಿದಂತಿತ್ತು. ಬಚ್ಚಲ ಮನೆಯ ತುಂಬೆಲ್ಲ ರಕ್ತದ ವಾಸನೆಯಾದರೆ ನನ್ನ ಹೊಟ್ಟೆ ನೋವಿನ ಕಥೆ ಇನ್ನೊಂದೆಡೆ! ಇದರ ಮಧ್ಯೆ ಮನಸ್ಸಿನ ನೋವು ಹೇಳತೀರದು.. ಮೂರು ತಿಂಗಳು ಗರ್ಭದಲ್ಲಿದ್ದ ಮಗು ಜಾರಿ ಬೀಳುವ ನೋವು ಅಮ್ಮನಾದ ನನಗೆ ಮಾತ್ರ ಗೊತ್ತು.. ಇಂತಹ ಕಷ್ಟ ನನಗೆ ಸರಿಯಾಗಿ 6 ಸಾರಿ ಗರ್ಭ ತೊಳಸಿದ್ದು.. ಅದಾಗಿನೇ ಹೋಗಿದ್ದು.. ಅಷ್ಟು ಮಕ್ಕಳು ಹುಟ್ಟಿದ್ರೆ ಈವಾಗ ನನಗೆ ಸರಿಯಾಗಿ 6 ಮಕ್ಕಳಿರುತ್ತಿದ್ದವು.ಈ ಮಧ್ಯೆ ಎಷ್ಟೋ ಟ್ರೀಟ್ಮೆಂಟ್ ಎಷ್ಟೋ ಹರಕೆ.. ಎಲ್ಲ ಪ್ರಯೋಗ ನನ್ನ ದೇಹದ ಮೇಲೆ ಆಗಿತ್ತು.

ವಿವಿಧ ರೀತಿಯ ಔಷಧಿ ಪ್ರಕಾರಗಳು, ವಿವಿಧ ಪ್ರಯೋಗಗಳು, ವಿವಿಧ ಚಿಕಿತ್ಸೆಗಳು, ಹೆಮೆಟಾಲಜಿ, ಕ್ರೋಮೋಸೋಮ್ ಟೆಸ್ಟ್, ಜೆನೆಟಿಕ್ ಟೆಸ್ಟ್‌ನಂತಹ ಪರೀಕ್ಷೆಗಳನ್ನು ನಡೆಸಿದಾಗಲೂ ಸಹ ಯಾವುದೇ ರೀತಿಯ ದೋಷಗಳು ಕಂಡು ಬರಲಿಲ್ಲ.ಆದರೂ ತಾಯ್ತನದ ಭಾಗ್ಯ ಮಾತ್ರ ನನ್ನದಾಗುತ್ತಿರಲಿಲ್ಲ. ಮತ್ತೆ ಮತ್ತೆ ನನಗೆ ನೋವುಗಳು ಮರು ಕಳಿಸುತ್ತಿದ್ದದ್ದು, ಇಷ್ಟೇ ಅಲ್ಲದೇ ನಾನು ಆಯುರ್ವೇದ ಸೇರಿ ಹಲವಾರು ಪ್ರತಿಷ್ಠಿತ ಆಸ್ಪತ್ರೆ.. ಪ್ರತಿ ದಿನ ಔಷಧ ಇಂಜೆಕ್ಷನ್.. ಹೀಗೆ ಸಾಗುತ್ತಾ ಇತ್ತು. ಪ್ರತಿದಿನ ಹತ್ತಾರು ಮಾತ್ರೆಗಳನ್ನು ತೆಗೆದುಕೊಂಡರೂ ಸಹ ಒಮ್ಮೆಯೂ ಸಹ ನನ್ನ ತಾಯ್ತನ 2 ತಿಂಗಳನ್ನು ದಾಟುತ್ತಿರಲಿಲ್ಲ.

ಪ್ರತೀ ಬಾರಿಯೂ ನಲವತ್ತೈದನೇ ದಿನಕ್ಕೆ ಸರಿಯಾಗಿ ಹೃದಯಬಡಿತ ಗೋಚರಿಸುವಾಗ ಪಡುತ್ತಿದ್ದ ಸಂತಸ ಎರಡನೇ ತಿಂಗಳ ಸ್ಕ್ಯಾನಿಂಗ್ ನಲ್ಲಿ ಅಂಧಕಾರದಲ್ಲಿ ಲೀನವಾಗುತ್ತಿತ್ತು. ಅಮ್ಮ ಅನಸ್ಕೊಳೋದು ಅಷ್ಟು ಸುಲಭಾ ಅನ್ಕೊಂಡ್ರಾ.. ಅದಕ್ಕೆ ಅನ್ನೊದು ತಾಯಿಗಿಂತ ದೇವರಿಲ್ಲ ಅಂತ. ನನ್ನ ಆತ್ಮೀಯ ಸ್ನೇಹಿತೆ ಒಬ್ಬಳು ‘ಮಗು ಮಾಡಿ ಕೊಡ್ತೀನಿ ಕಣೇ ನೀನೆ ಅದರ ಅಮ್ಮ ಆಗು’ ಅಂತ ಮಾತು ಕಥೆಗಳು ಸಹ ನಡೆಯಿತು. ಯಾವುದನ್ನ ನಂಬಲಿ ಯಾವುದನ್ನ ಬಿಡಲಿ.. ಆತ್ಮೀಯ ಸ್ನೇಹಿತೆ.. ನಮ್ಮವರದೇ ಅನ್ನೊದು ಒಂದು ಬಂತು ಆ ಕ್ಷಣಕ್ಕೆ ಎಲ್ಲವೂ ಸರಿ ಇತ್ತು. ಮತ್ತೆ ಆ ಪ್ರಕ್ರಿಯೆ ಮುಂದುವರಿಯಲೇ ಇಲ್ಲ.

ಆ ಮಾತುಗಳು ಅಲ್ಲಿಯೇ ಮೌನವಾದವು. ಈ ಕುರಿತಾದ ವಿಷಯ ಮತ್ತೊಮ್ಮೆ ಅವಳೊಡನೆ ಮಾತನಾಡುವ ಮನಸ್ಸು ನನಗಾಗಲಿಲ್ಲ.ಇಷ್ಟೇಲ್ಲಾ ಆಯ್ತಲ್ಲ.. ಕಷ್ಟ, ನೋವು, ಹಿಂಸೆ ,ಜನರ ಪ್ರಶ್ನೆ… ಎಲ್ಲವನ್ನೂ ದಾಟಿ ನಮ್ಮ ಮನೆಯಲ್ಲಿ ಒಂದು ಗಟ್ಟಿ ನಿರ್ಧಾರವನ್ನು ಮಾಡಿದ್ವಿ. ಅದರಲ್ಲೂ ಒಂದು ಹೆಣ್ಣು ಮಗುವನ್ನೇ ದತ್ತು ತೆಗೆದುಕೊಳ್ಳಬೇಕೆಂಬ ಅಚಲವಾದ  ನಿರ್ಧಾರ ನಮ್ಮದಾಯಿತು… ನಾವು ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ನಾನು ‘ಅಮ್ಮ ಆಗಲು’, ರಘು ತಂದೆ ಆಗಲು, ಅತ್ತೆ ಮಾವ.. ಮೈದನಾ ವಾರಗಿತ್ತಿ … ಶ್ರೀ ದೃತ್.. ಎಲ್ಲರೂ ಅಜ್ಜ ..ಅಜ್ಜಿ ..ಚಿಕ್ಕಪ್ಪ ಚಿಕ್ಕಮ್ಮ …ಅಣ್ಣ ಆಗಲು ನಿರ್ಧಾರ ಮಾಡಿದ್ವಿ.

ಈ ನಿರ್ಧಾರ ಮಾಡಿದಾಗ ನನ್ನ ವಯಸ್ಸು 26, ರಘುವಿನ ವಯಸ್ಸು 30 ಹಾಗೂ ನಾವು ಮದುವೆಯಾಗಿ ಕೇವಲ 6 ವರ್ಷಗಳಾಗಿದ್ದವು. ಸುಮ್ಮನೆ ಪ್ರಯತ್ನ ಪಡುತ್ತಾ ಕಾಲಹರಣ ಮಾಡಿ ಮುಂದೆಂದೋ ದತ್ತು ಸ್ವೀಕಾರದ ನಿರ್ಧಾರ ಮಾಡುವ ಬದಲು ಅದಾದರೆ ಜೀವನ ಸುಖಮಯವಾಗಿರುತ್ತದೆ ಎಂಬ ಆಲೋಚನೆಯಿಂದ ನಾವು ಈ ಒಳ್ಳೆಯ ನಿರ್ಧಾರಕ್ಕೆ ಬಂದಂತಾಯ್ತು.ಮತ್ತೆ ಇದೇ ಜನರ ಪ್ರಶ್ನೆ.. ಯಾಕೇ ಇಷ್ಟು ಬೇಗ ನೀವು ಈ ನಿರ್ಧಾರವನ್ನು ತೆಗೆದುಕೊಂಡಿರಿ ಕಾಯ ಬೇಕಿತ್ತು ಎಂಬುದು. ಅಲ್ಲಿ ಇಲ್ಲಿ, ಹಾಗೇ ಹೀಗೆ.. ಆ ಡಾಕ್ಟರ್, ಈ ಡಾಕ್ಟರ್, ದೇವರು, ಹರಕೆ, ನಾಟಿ ಔಷಧ, ಪಥ್ಯ, ಹೊಸ ಹೊಸ ತಂತ್ರಜ್ಞಾನದ ವಿಷಯಗಳು.. ಹೀಗೆ ಹತ್ತು ಹಲವಾರು ವಿಷಯಗಳು ಮತ್ತೆ ಮರುಕಳಿಸಿ ತೊಡಗಿದಾಗ ಅಬ್ಬಬ್ಬಾ ‘ಪ್ಲೀಸ್ ಸ್ಟಾಪ್ ಆಲ್ ದೀಸ್..’ ಅಂತ ಒಮ್ಮೆ ನಾನು ಗಟ್ಟಿಯಾಗಿ ತಿರುಗಿ ಬಿದ್ದೆ. ಅಲ್ಲಿಗೆ ಈ ಜನರ ಬಾಯಿ ಮುಚ್ಚಿ ಹೋಯಿತು.

ಮನೆಯವರ ಬೆಂಬಲ ನಮ್ಮನ್ನು ಇನ್ನೂ ಗಟ್ಟಿಯಾಗಿ ಮಾಡ್ತು. ಜನರ ಬಾಯಿಗೆ ಬೀಗ ಹಾಕುವ ಹಾಗೇ ಉತ್ತರ ಕೊಟ್ವಿ. ಕೇಳಿದವರಿಗೆಲ್ಲರಿಗೂ ನಾವು ತೆಗೆದುಕೊಂಡಿರುವ ನಿರ್ಧಾರದ ಹಿಂದಿರುವ ಸತ್ಯಗಳು ಹಾಗೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ಮನಮುಟ್ಟುವಂತೆ ಯಾವುದೇ ಸಂಕೋಚವಿಲ್ಲದೆ ವಿವರಿಸತೊಡಗಿದೆವು. ಇದು ನನ್ನನ್ನು ಮತ್ತಷ್ಟು ನಿಮ್ಮಳ ಮಾಡಿತು ಹಾಗೂ ನನ್ನ ನಿರ್ಧಾರದ ಸರಿ ಇದೆ ಎನಿಸತೊಡಗಿತು.ಕಾನೂನು ಪ್ರಕಾರ ದತ್ತು ಸ್ವೀಕಾರಕ್ಕೆ ಏಕೈಕ ಮಾರ್ಗವಾದ CARA ವೆಬ್ ಸೈಟ್ ಮೂಲಕ ದತ್ತು ಪ್ರಕ್ರಿಯೆಗೆ ನೋಂದಣಿ ಮಾಡಿ ನಮ್ಮ ಮಗಳ ಬರುವಿಕೆಗೆ ಮುನ್ನುಡಿ ಬರೆದವು. ಎರಡು ವರ್ಷ ಕಾಯ ಬೇಕಿತ್ತು, ಕಾದ್ವಿ. ಲಿಗಲ್ ಅಡಾಪ್ಷನ್ ಅನ್ನೋದು ಸುಲಭವಾದ ವಿಧಾನ; ಅದು ಗೊತ್ತಿದ್ದವರಿಗೆ ಮಾತ್ರ. ಪಾಪ ಓದು ಬರಹ ಬರದೆ ಇರುವವರಿಗೆ ಇದು ಕಬ್ಬಿಣದ ಕಡಲೆ.

ನಾವು ಈ ವಿಚಾರದ ಕುರಿತಾಗಿ ಅರಿತವರ ಬಳಿ ಸರಿಯಾಗಿ ವಿಷಯವನ್ನು ಮನನ ಮಾಡಿಕೊಂಡಿದ್ದರಿಂದ ನಮಗೆ ಈ ಪ್ರಕ್ರಿಯೆ ಬಹಳ ಸುಲಭವೇ ಆಯಿತು ಎನ್ನಬಹುದು. ಸಾಮನ್ಯವಾಗಿ ಎಲ್ಲರೂ ಹೇಳ್ತಾರೆ ನೀವು ದತ್ತು ತೊಗಳ ಬೇಕಾದ್ರೆ ನಿಮ್ಮ ಆಸ್ತಿ ಅನ್ನು ಆ ಮಗುವಿನ ಹೆಸರಿಗೆ ಆಗಬೇಕು ಅಂತ. ಆದ್ರೆ ಈ ತರಹದ ರೂಲ್ಸ್ ದತ್ತು ಪ್ರಕ್ರಿಯೆಯಲ್ಲಿ   ಇಲ್ಲ. ಆದ್ರೆ ತಂದೆಯ ವರಮಾನವನ್ನು ನೋಡ್ತಾರೆ ಯಾಕೆಂದರೆ ಆ ಕುಟುಂಬಕ್ಕೆ, ಮಗುವಿನ ಪೋಷಣೆ ಮಾಡಲು ಅಗುತ್ತಾ ಅಂತ. ಈಗಾಗಲೇ ಅದು ಅನಾಥವಾಗಿ ಆಶ್ರಮದಲ್ಲಿ ಬಂದಿರುತ್ತೆ.

ಮತ್ತೊಮ್ಮೆ ಅದಕ್ಕೆ ತೊಂದರೆಯಾಗಬಾರದಂತ. ಹಾಗಾಗಿ ಸರಕಾರ ಕೆಲ ನಿಮಯ ಮಾಡಿದೆ.ದತ್ತು ಪ್ರಕ್ರಿಯೆಗೆ ನೋಂದಣಿ ಮಾಡಿಸಿದ ಸುಮಾರು ಎರಡೂವರೆ ವರ್ಷಗಳ ಕಾಲದ ನಂತರ ನಮ್ಮ ಮನೆಯ ಮಗು ನಮ್ಮ ಮನೆಗೆ ಆಗಮಿಸುವ ಸಂದೇಶ ನಮಗೆ ಬಂದಾಗ ಮನೆಯವರ ಸಂತಸ ಹೇಳತೀರದು. ಇನ್ನೇನು ಕೆಲವೇ ದಿನಗಳಲ್ಲಿ ನನ್ನ ಮಗಳು ನನ್ನ ಮನೆಗೆ ಬರುತ್ತಾಳೆ ಎಂಬ ಸಂತಸದಲ್ಲಿದ್ದ ಸಮಯದಲ್ಲಿಯೂ ಸಹ ನನ್ನ ಪರಿಚಯಸ್ಥರೊಬ್ಬರು ‘ಇನ್ನೂ ಸಮಯವಿದೆ ಯೋಚಿಸಿ.. ಒಂದು ದೇವಸ್ಥಾನದಲ್ಲಿ ಹರಕೆ ಮಾಡಿಕೊಂಡರೆ ನಿಮ್ಮದೇ ಮಗುವನ್ನು ಪಡೆಯಬಹುದು’ ಎಂಬ ಆಲೋಚನೆಯನ್ನು ನಮ್ಮಲ್ಲಿ ಬಿತ್ತಲು ಮುಂದಾದಾಗ, ನಾನು ಅವರಿಗೆ ಹೇಳಿದ ಒಂದೇ ಮಾತು ‘ಅದೇ ದೇವರ ಅನುಗ್ರಹದಿಂದ ನನ್ನ ಮಗಳು ಇನ್ನೇನು ನಾಲ್ಕಾರು ದಿನಗಳಲ್ಲಿ ಮನೆಗೆ ಬರುತ್ತಿದ್ದಾಳೆ’ ಎಂದು! ಎಷ್ಟೋ ಜನ ನಮ್ಮ ರಕ್ತದಿಂದಾಚೆ ಯೋಚನೆ ಮಾಡುವ ದಾರಿ ಸಹ ನೋಡಿರಲ್ಲ.. ಆ ರೀತಿಯಲ್ಲಿ ಆದ್ರೆ ಆ ಮಗು ನಮ್ಮರಕ್ತ ಅಲ್ಲದಿದ್ರು ಅದು ನನಗಾಗಿಯೇ ಈ ಭೂಮಿ ಬಂದಿದೆ.. ಆ ಮಗುವಿಂದನೇ ನಾವು ಅಮ್ಮ.. ಅಪ್ಪ ಅಂತ ಕರೆಸಿಕೊಳ್ಳುವ ಸೌಭಾಗ್ಯ ನಮ್ಮದಾಗಿರುತ್ತೆ. ಇದನ್ನ ನಾವು ಬಹು ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿ ಅಲೌಕಿಕತೆಯೂ ಆಧ್ಯಾತ್ಮಿಕತೆಯೂ ಗೋಚರವಾಗುದಂತೂ ಸತ್ಯ. ಅದಕ್ಕೆ ನಾವೇ ಉದಾಹರಣೆ.

ನಮ್ಮ ಮನೆಯಲ್ಲಿ ಯತಿಗಳ ಆಗಮನ, ಗುರುಹಿರಿಯರ ಒಡನಾಟ ನಮ್ಮ ಕುಟುಂಬಕ್ಕೆ ಬಹಳ ಇದೆ. ಅದೇ ರೀತಿಯಲ್ಲಿ ನಮ್ಮ ಮಗು ಸಹ ಮುರುಗಾ  ಮಠದಲ್ಲಿ ಶ್ರೀಗಳವರ ಹಸ್ತಗಳಿಂದ, ಮೂರು ತಿಂಗಳು ಅವರ ಆರೈಕೆಯಲ್ಲಿ ಬೆಳದ ಕಂದ ಇಂದು ನನ್ನ ಮಡಿಲ ಸೇರಿದೆ.. ಆ ಮಗು ನನ್ನ ಮಡಿಲ ಸೇರಿದ್ದಾಗ ಅದಕ್ಕೆ ಮೂರುವರೆ ತಿಂಗಳು. ಅವಳ ಆಗಮನವನ್ನು ಅವಳ ಚಿಕ್ಕಪ್ಪ ಚಿಕ್ಕಮ್ಮ, ಅಣ್ಣ ಎಷ್ಟು ಅದ್ದೂರಿಯಾಗಿ ಮಾಡದ್ರು ಅಂದರೆ, ಅತ್ಯಂತ ವೈಭವೋಪೇತವಾಗಿ.. ನಾದಸ್ವರ ಸಮೇತ, ಹೂಗಳ ಕಲರವ, ವಾದ್ಯಗಳ ಸುರಿಮಳೆ, ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳು.. ಅವಳ ಅಣ್ಣ ಶ್ರೀ ದೃತ್ ಅವಳಿಗೆ ಗುಲಾಬಿ ಹೂ ಕೊಟ್ಟು ‘ತಂಗಿ ಪಾಪಾ ಬಂದ್ಲು ನಮ್ಮಮನೆಗೆ’ ಅಂತ ಸ್ವಾಗತವನ್ನು ಮಾಡಿದ್ದು ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ.

ಇಂದು ಅವಳಿಗೆ ಒಂದುವರೆ ವರ್ಷ…ಈ ಜನರೇಶನ್ ಅಬ್ಬಬ್ಬ..  ಸಾಫ್ಟ್ ವೇರ್ ಕಂಪೆನಿಗಳಲ್ಲಿ, ಗಾರ್ಮೆಂಟ್ ಕೆಲಸದಲ್ಲಿ, ಅನೇಕ ವೃತ್ತಿಗಳಲ್ಲಿ ಕೆಲಸ ಮಾಡುವವರು, ವರ್ಕಿಂಗ್ ವುಮೆನ್ಸ್, ಕಲಾವಿದರು.. ಹೀಗೆ ಒಂದಾ ಎರಡಾ ಎಲ್ಲದರಲ್ಲೂ ನಾವು ಮುಂದು ಎಂದರೂ ಈ ತಾಯ್ತನ ಅಂತಾ ಬಂದಾಗ ಹೆಣ್ಣು ಅನುಭವಿಸುವ ನೋವಿಗೆ ಸರಿ ಸಾಟಿಯಿಲ್ಲ.

ಗಂಡಾಗಲಿ ಹೆಣ್ಣಾಗಲಿ ಇಬ್ಬರು ಸಮಾನರು ಅಂದಾಗ ಇಬ್ಬರು ಒಂದು ಜೀವಕ್ಕೆ ಸಾಕ್ಷಿಯಾಗುವ ಕ್ಷಣವನ್ನು ಸುಂದರವಾಗಿ ಅನುಭವಿಸಬೇಕು. ಆವಾಗಲೇ ಪವಿತ್ರವಾದ ಜೀವ ಮತ್ತು ಜೀವನ ಜೊತೆ ಆಗುತ್ತೆ. ಅದು ನಮ್ಮದಾದರೂ ಸರಿ.. ನಮಗೆ ಸಾಧ್ಯವಾಗದಿದ್ದರೆ ನಮಗಾಗಿಯೇ ಹುಟ್ಟಿರುವ ಬೇರೊಂದು ಮಗುವಿನಿಂದ ಆದರೂ ಸರಿ…ಇಂದಿಗೂ ಸಹ ನನ್ನಂತಹ ನೂರಾರು  ಮಹಿಳೆಯರು ಮಕ್ಕಳ ವಿಚಾರದಲ್ಲಿ ಗೊಂದಲದಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ನೋವನ್ನನುಭವಿಸುತ್ತ ಮತ್ತೆ ಮತ್ತೆ ಚಿಕಿತ್ಸೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ದತ್ತು ಪ್ರಕ್ರಿಯೆಯ ಬಗ್ಗೆ ಮನಸ್ಸು ಮಾಡುವುದು ಒಳಿತಲ್ಲವೇ? ಒಂದೊಮ್ಮೆ ನೀವೇನಾದರೂ ದತ್ತು ಪ್ರಕ್ರಿಯೆಯ ಬಗ್ಗೆ ಆಸಕ್ತಿ ಹೊಂದಿದ್ದರೆ ಅದರ ಬಗ್ಗೆ ಮಾಹಿತಿಗಳನ್ನು ಪಡೆಯಲು ನನ್ನನ್ನು ಯಾವ ಕ್ಷಣದಲ್ಲಾದರೂ ಸಂಪರ್ಕಿಸಬಹುದು. ನಾನು ಸದಾ ನಿಮ್ಮೊಂದಿಗಿದ್ದೇನೆ..

‍ಲೇಖಕರು Admin

May 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Sudha Adukal

    ಒಳ್ಳೆಯ ಬರಹ. ನಿಮ್ಮ ನಿರ್ಧಾರ ಅನೇಕರಿಗೆ ಮಾರ್ಗದರ್ಶಿಯಾಗಲಿ

    ಪ್ರತಿಕ್ರಿಯೆ
  2. Shivakumar uppin

    ಬಹಳ ಮನೋಜ್ಞವಾಗಿ ಬರೆದಿದ್ದಾರೆ. ಕೈಯಿಂದಲ್ಲ, ಈ ತಾಯಿ ಕರುಳಿಂದ ಬರೆದಂಗಿದೆ. ಅನೇಕರ ನೋವಿಗೆ ಈ ಮೂಲಕ ದನಿಯಾಗಿದ್ದಾರೆ ಪೂಜಾ. ನಮ್ಮದೇ ಕರುಳು-ಬಳ್ಳಿ ಬೇಕೆನ್ನುವವರಿಗೆ ವಿಶ್ವ ಮಾನವತೆಯ ರೀತಿ ತಿಳಿ ಹೇಳಿದ್ದಾರೆ. ಈ ತಾಯಿ, ಮಗೂಗೆ ನನ್ನ ಕಡೆಯಿಂದ ಅನನ್ಯ ಪ್ರೀತಿ..

    ಪ್ರತಿಕ್ರಿಯೆ
    • ಮಳವಳ್ಳಿ ಸಾಯಿಕೃಷ್ಣ

      ಸಂಪೂರ್ಣ ಓದಿದೆ ಪದಜೋಡ ಣೆ ಆ ಪದಗಳಲ್ಲಿ ಇರುವ ಆ ತಾಯಿ ಹೃದಯ ದ ಬಾವನೆಗಳು ಮನದಾಳದ ಸಾಗರದಲ್ಲಿ ಭಾವನೆಗಳ ಕಪ್ಪೆ ಚಿಪ್ಪಿನಲ್ಲಿ ಮುತ್ತಿನಂತೆ ಬೇರೂರಿದವು ಇದು ಲೇಖನ ಅನ್ನುವುದಕ್ಕಿಂತ ತಾಯ್ತನ ಬಯಸುವ ಒಂದು ಹೆಣ್ಣಿನ ಮನದಾಳದ ಕನಸುಗಳು ಕಣ್ಣಿನಲ್ಲಿ ಬರೋ ಕನಸುಗಳ ಆಕಾರ ಕ್ಷಣಿಕ ಮನದಾಳದ ಕನಸುಗಳು ಶಾಶ್ವತ ಅನ್ನೋ ದು ಪದಗಳಲ್ಲಿ ಕಟ್ಟಿಕೊಟ್ಟಿದ್ದೀರಿ
      ದತ್ತು ಮಗುವಾಗದರೇನು ಆಮಗು ಕರೆಯುವ ಅಮ್ಮ ಎಂಬ ಧನಿಯು ಭೆಲೆಯೇ ಕಟ್ಟಲಾಗದ ಸ್ವತ್ತು ತಾಯಿ ಜೀವಕ್ಕೆ
      ಎಷ್ಟೋ ಹೀಗೆ ನೊಂದಿರುವ ಹೆಣ್ಣು ಜೀವಗಳಿಗೆ ತಾಯಿ ಆಗಲು ಬಯಸಿ ತಾಯಿ ಸ್ಥಾನಕ್ಕೆ ಮಗು ಮರಿಚಿಕೆಯಾಗಬಾರದು ಮರಳು ಗಾಡಿನಲ್ಲಿ ಒಯಸಿಸ್ ನೀರಿನಂತೆ ಸಂಜೀವಿನಿ ಆಗುತ್ತಿರುವ ನಿಮಗೆ ಜಗತ್ತಿನ ಎಲ್ಲ ತಾಯಂದಿರ ಆಶ್ರೀವಾದ ಇರಲಿ
      ಹೃದಯದ ಕಣ್ಣೀರು ಕಾಣದು ಆ ಕಣ್ಣೀರು ಒರೆಸುವ ಕೈಗಳಾಗುತ್ತಿದ್ದೀರಿ ನಿಮಗೆ ಇನ್ನಷ್ಟು ಆ ಭಗವಂತ ಶಕ್ತಿ ಚೈತನ್ಯಗಳನ್ನು ನೀಡಲಿ

      ಜಗತ್ತಲ್ಲಿ ಮೊದಲನೇ ಮ್ಯೂಸಿಕ್ ಡೈರೆಕ್ಟರ್ ತಾಯಿಯೇ ಲಾಲಿ ಪದ ಕಟ್ಟಿ ಜೋಗುಳದ ಸಂಗೀತ ಸೃಷ್ಟಿಸಿದವಳೇ ತಾಯಿ

      ಪ್ರತಿಕ್ರಿಯೆ
      • Vinay Kumar M. G.

        ಚೆನ್ನಾಗಿದೆ. ಅನುಭವವನ್ನು ದಾಖಲು ಮಾಡುವಾಗ ಲೇಖಕ/ಕಿಗೆ ಇರಬೇಕಾದ ಬದ್ಧತೆ ಇದು. ಯಾವ ಹೊಸತನ್ನೂ ಸುಲಭವಾಗಿ ಒಪ್ಪದ ಕರ್ಮಠ ಮನಸ್ಸುಗಳು ಹೇರಳವಾಗಿರುವ ದೇಶ ನಮ್ಮದು. ಅಂತಹವುಗಳ ನಡುವೆ ಹೋರಾಡುವಾಗ ಗಟ್ಟಿ ಮನಸ್ಸಿರಬೇಕು. ನಿಮ್ಮಲ್ಲಿ ಅದು ಇದೆ. ನಿಮ್ಮಂತಹವರ ಸಂತತಿ ನೂರ್ಮಡಿಯಾಗಲಿ

        ಪ್ರತಿಕ್ರಿಯೆ
  3. Shruthi k s

    ಬಹಳಷ್ಟು ಜನರಿಗೆ ಇಂತಹ ಶಕ್ತಿ ಬೇಕಿರುತ್ತೆ ಅದು ನಿಮ್ಮಿಂದ ಸಾಧ್ಯತೆ ಬಹಳಷ್ಟಿದೆ ನಿಮ್ಮ ಅನುಭವದ ಲೇಖನ ಅಂತ ಹೇಳುವುದಕ್ಕಿಂತ ನಿಮ್ಮನ್ನು ನೋಡಿ ಜನರು ಜನ ಬದಲಾಗಿ ಒಂದು ಸಕಾರಾತ್ಮಕವಾಗಿ ನಿಮ್ಮಂತೆಯೆ ಯೋಚಿಸಿದರೆ ಜೀವನ ಚಂದ. ಧನ್ಯವಾದಗಳು ಮ್ಯಾಡಮ್

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Vinay Kumar M. G.Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: