ಅವನ ಅಂತ್ಯಕ್ರಿಯೆಯ ವೇಳೆ ಇವಳು ಗೊಲ್ಗೊಪ್ಪ ತಿಂದಳು!

ವಿದ್ಯಾರಶ್ಮಿ ಪೆಲತ್ತಡ್ಕ

ಇರ್ಫಾನ್ ಖಾನ್ ಅಭಿನಯದ ‘ಲಂಚ್ ಬಾಕ್ಸ್‌’ ಚಿತ್ರದಲ್ಲಿ ನಾಯಕಿಯ ತಾಯಿ ತನ್ನ ಪತಿ ತೀರಿಕೊಂಡಾಗ ಮಗಳ ಬಳಿ ಒಂದು ಮಾತು ಹೇಳುತ್ತಾಳೆ, ‘ನಿನ್ನ ಅಪ್ಪ ಸತ್ತಾಗ ನನಗೆ ಏನಾಗುತ್ತದೋ ಏನೋ ಅಂದುಕೊಳ್ಳುತ್ತಿದ್ದೆ. ಆದರೆ ಈಗ ಏನೂ ಅನಿಸುತ್ತಿಲ್ಲ ನನಗೆ. ಹಸಿವಾಗುತ್ತಿದೆ ಅಷ್ಟೇ. ಪರೋಟ ಬೇಕೆನಿಸುತ್ತಿದೆ…’ ‘ಪಾಗ್ಲೈಟ್‌’ ಚಿತ್ರದ ನಾಯಕಿಗೂ ಹಾಗೇ, ಗಂಡನ ಅಗಲಿಕೆ ಯಾವ ಭಾವವನ್ನೂ ಮೂಡಿಸಿರುವುದಿಲ್ಲ.

ಒಂದೆಡೆ ಗಂಗಾನದೀ ತೀರದಲ್ಲಿ ಅವಳ ಪತಿಯ ಅಸ್ಥಿ ವಿಸರ್ಜನೆಯ ಕಾರ್ಯ, ಅದೇ ವೇಳೆ ಇನ್ನೊಂದೆಡೆ ಬೀದಿ ಬದಿಯಲ್ಲಿ ಗೋಲ್ಗೊಪ್ಪಾ ಸವಿಯುವ ಅವಳು! ಅಂತ್ಯಕ್ರಿಯಾದಿ ಸದ್ಗತಿ ಕಾರ್ಯಗಳ ತಯಾರಿ ಮನೆಯಲ್ಲಿ ನಡೆಯುವಾಗ ಅವಳಿಗೆ ಪೆಪ್ಸಿ ಮತ್ತು ಚಿಪ್ಸ್ ತಿನ್ನುವ ಆಸೆ. ಮನೆ ತುಂಬ ಜನ. ಬಂದವರೆಲ್ಲ ಸಂತಾಪ ಸೂಚಿಸಿದರೆ ಆಕೆ ನಿರ್ಲಿಪ್ತಳು. ಅವಳ ಈ ಸ್ಥಿತಿಗೆ ‘ಪೋಸ್ಟ್ ಟ್ರೌಮಾ ಸ್ಟ್ರೆಸ್ ಡಿಸಾರ್ಡರ್‌’ ಎಂದೂ ಅಲ್ಲಿದ್ದವರೇ ಯಾರೋ ವ್ಯಾಖ್ಯಾನಿಸುತ್ತಾರೆ. ಆದರೂ ಇವಳಲ್ಲಿ ಮಾತ್ರ ಹಾಗಲ್ಲ. ಕೆಲವರ ಬದುಕಿನಲ್ಲಿ ಹಾಗಾಗುತ್ತದೇನೋ.

ಹೊರಜಗತ್ತಿನ ಪಾಲಿಗೆ ಅವರು ಅತ್ಯಂತ ದುಃಖಿಯಾಗಿರುತ್ತಾರೆ. ಆದರೆ, ಆ ಪರಿಯ ಬೇಸರ ಅವರಿಗಾಗಿರುವುದಿಲ್ಲ. ಹಾಗಂತ ಅವರು ಸಂತೋಷವಾಗಿದ್ದಾರೆಂದು ಉಳಿದವರು ಅಂದುಕೊಂಡ ಸಮಯದಲ್ಲಿ ನಿಜಕ್ಕೂ ಖುಷಿಯಿಂದ ಇರುವುದೂ ಇಲ್ಲ. ”ಪಾಗ್ಲೈಟ್‌”ನ ನಾಯಕಿ ಸಂಧ್ಯಾಳಿಗೂ ಅಷ್ಟೇ, ಪತಿಯ ಸಾವಿನಲ್ಲಿ ನೋವೇನೂ ಆಗಿರುವುದಿಲ್ಲ. ಮುಂದೆ ಮಗಳ ಗತಿಯೇನು ಎಂಬ ಹೆತ್ತವರ ಆತಂಕಸಹಿತ ದುಃಖ, ಪತಿಯ ಹೆತ್ತವರ ಅಂತರಾಳದ ಪುತ್ರಶೋಕ, ಪತಿಯ ಕಡೆಯ ಬಂಧುಗಳ ವಿವಿಧ ಉದ್ದೇಶ ಸಹಿತವಾದ ತೋರಿಕೆಯ ವಿಷಾದ… ಎಲ್ಲವನ್ನೂ ನೋಡುತ್ತಲೇ ತಾನೂ ಗಂಭೀರಳಾಗುವ ಸಂಧ್ಯಾ ಇದ್ಯಾವುದನ್ನೂ ಅಂಟಿಸಿಕೊಳ್ಳದ ವರ್ತನೆಯಲ್ಲಿ ತನ್ನದೇ ಲೋಕದಲ್ಲಿರುತ್ತಾಳೆ. ಎಂದಿನಂತೆ ಗೊಲ್ಗೊಪ್ಪಾ ಸವಿಯಬೇಕು, ಚಿಪ್ಸ್ ತಿನ್ನಬೇಕು, ಕೋಲಾ ಕುಡಿಯಬೇಕು ಎಂದಷ್ಟೇ ಅವಳಿಗೆ ಅನಿಸುವುದು…

ಪತಿ ಆಸ್ತಿಕ್‌ನ ಅಂತ್ಯಕ್ರಿಯೆಗೆಂದು ಮನೆಗೆ ಬಂದವರ ಎದುರು ನಟನೆಗಾದರೂ ದುಃಖ ಮಾಡಲು ಒಲ್ಲೆನೆನ್ನುತ್ತಾಳೆ ಅವಳು. ಸೂತಕದ ಮನೆಯಲ್ಲಿ ಗೆಳತಿಯ ಹೆಸರು ಹೇಳಿ ಚಿಪ್ಸ್ ತರಿಸಿಕೊಂಡು ತಿನ್ನುವ ಅವಳ ಬಗೆ ವಿಚಿತ್ರವೆನಿಸಿ ನಗುವನ್ನೂ ತರಿಸುತ್ತದೆ. ಡಾರ್ಕ್ ಕಾಮೆಡಿಗಳೆಂದರೆ ಹಾಗೇ, ದುಃಖದ ಸಂದರ್ಭದಲ್ಲಿ ನಗು ತರಿಸುವಂಥವು! ಸಂಧ್ಯಾಳ ಈ ಬಗೆಯ ನಿರ್ಲಿಪ್ತತೆಗೂ ಒಂದು ಕಾರಣವಿರುತ್ತದೆ. ಅವರು ಮದುವೆಯಾಗಿ ಇನ್ನೂ ಐದು ತಿಂಗಳಷ್ಟೇ ದಾಟಿದ ನವ ವಧೂವರರವರು.

ಬದುಕಿದ್ದಾಗ ಭಾವನೆಗಳೊಂದಿಗೆ ಹತ್ತಿರವಾಗದ ಅವನು ತೀರಿಕೊಂಡಾಗ ಹೇಗೆ ತಾನೇ ದುಃಖ ಹುಟ್ಟಿಸಬಲ್ಲ? ಅವನು ಹೇಗೋ ಇಲ್ಲವಾದ. ಪ್ರೀತಿಯೇ ಹುಟ್ಟಿರದಿದ್ದ ಮೇಲೆ ಈಗ ದುಃಖ ಹುಟ್ಟೀತು ಹೇಗೆ? ತಾನೂ ಅವನೂ ಪತಿ-ಪತ್ನಿಯರಂತಿರಲಿಲ್ಲ ಎಂಬುದು ಅವಳಿಗಷ್ಟೇ ಗೊತ್ತು. ಹೀಗಾಗಿಯೇ ಎಲ್ಲರೆದುರು ತನಗೇನೂ ಆಗಿಲ್ಲವೆಂಬಂತೆ ಇರುವುದೂ ಕಷ್ಟ, ಇರದಿರುವುದೂ ಕಷ್ಟ ಎಂಬ ತೂಗುಯ್ಯಾಲೆ. ನಿಮ್ಮ ಮನೆಯ ಮಗ ನನಗೆ ಏನೂ ಆಗಿರಲಿಲ್ಲ ಎಂದು ಎಲ್ಲರೆದುರು ಹೇಳುವಾಸೆ, ಆದರೆ ಸಾಧ್ಯವಾಗುವುದಿಲ್ಲ. ಈ ಆಕ್ರೋಶವನ್ನೇ ಗೊಲ್ಗೊಪ್ಪ ತಿಂದೋ, ಕೋಲಾ ಹೀರಿಯೋ ಸಮಾಧಾನಿಸುವ ಪ್ರಯತ್ನ. ಹೀಗಿರುವಾಗಲೇ ಗಂಡನ ಫೈಲ್‌ಗಳೆಡೆಯಲ್ಲಿ ಅವನು ಪ್ರೀತಿಸುತ್ತಿದ್ದ ಹುಡುಗಿಯ ಫೋಟೋ ಸಿಗುತ್ತದೆ.

ಮನೆಗೇ ಬಂದ ಅವಳನ್ನು ಖಾಸಗಿಯಾಗಿ ಕರೆದು ಮಾತಾಡುತ್ತಾಳೆ. ಆ ಹುಡುಗಿಯ ಮನೆಗೂ ಹೋಗಿ ಮತ್ತೆ ಮತ್ತೆ ತನ್ನ-ಆಸ್ತಿಕ್‌ನ ನಡುವೆ ಅರಳದ ಪ್ರೀತಿಗೆ ಕಾರಣ ಹುಡುಕುತ್ತಾಳೆ. ‘ನೀನು ನಿಜವಾದ ಆಸ್ತಿಕ್‌ನನ್ನು ಕಂಡುಕೊಳ್ಳಬೇಕಿತ್ತು’ ಎಂದಾ ಹುಡುಗಿ ಅಂದಿದ್ದೇ ಇವಳಿಗೊಂದು ಮರ್ಮಾಘಾತ, ವಿವಾಹದ ಬಳಿಕ ಆಸ್ತಿಕ್ ತನಗೆ ಮೋಸ ಮಾಡಲಿಲ್ಲ ಎಂಬ ಅರಿವು. ಅಲ್ಲಿಂದ ತನ್ನ ಗಂಡನ ನಿಜದ ನಿಜವನ್ನು ತಿಳಿಯುತ್ತ ಹೋಗುತ್ತಾಳೆ. ಅವನ ಇಷ್ಟಗಳು ಈಗ ಅವಳಿಗೆ ತಿಳಿಯುತ್ತವೆ. ಅವನ ರೊಮ್ಯಾಂಟಿಕ್ ಸ್ವಭಾವವನ್ನು ಕಲ್ಪಿಸಿಕೊಳ್ಳುವ ಮಟ್ಟಕ್ಕೆ ಪರಿಚಯವೂ ಆಗುತ್ತದೆ.

ಆಸ್ತಿಕ್ ಮತ್ತವನ ಗೆಳತಿ ಹೋಗಿದ್ದ ಜಾಗಕ್ಕೆಲ್ಲ ಮತ್ತೆ ಭೇಟಿ ನೀಡುತ್ತಾಳೆ… ತನ್ಮೂಲಕ ಆಸ್ತಿಕ್ ಅವಳಿಗೆ ಹೊಸದಾಗಿ ಸಿಕ್ಕಂತಾಗುತ್ತದೆ. ಆಸ್ತಿಕ್ ಇನ್ನಿಲ್ಲವಾಗಿ ಹತ್ತನೇ ದಿನಕ್ಕೆ ಅವನು ಸ್ವರ್ಗ ತಲುಪಿದ ಎಂದಲ್ಲಿ ಘೋಷಿಸುತ್ತಿದ್ದಂತೆಯೇ ಇವಳು ಅವನನ್ನು ಮನಸಾರೆ ಕ್ಷಮಿಸುವ ಹಂತಕ್ಕೆ ತಲುಪುತ್ತಾಳೆ, ಅಳುವೂ ಉಕ್ಕುತ್ತದೆ. ಅವಳನ್ನುತ್ತಾಳೆ, ‘ನಾನು ಆಸ್ತಿಕ್‌ನನ್ನು ಕ್ಷಮಿಸಿದೆ.

ಈಗ ನನಗೆ ಅಳಬೇಕಿಸುತ್ತಿದೆ.ಆದರೆ ನನಗೆ ತುಂಬಾ ಹಸಿವಾಗಿದೆ…’, ಇದೀಗ ಅವಳದು ಪ್ರೀತಿಯ ಹಸಿವು, ಹೊಸ ಬದುಕನ್ನು ಕಂಡುಕೊಳ್ಳುವ ಹಸಿವು.ಈ ಮಧ್ಯೆ ಅವಳಿಗೆ ಆಸ್ತಿಕ್‌ನಿಂದ ಸಿಕ್ಕ ೫೦ ಲಕ್ಷಕ್ಕಾಗಿ ಹಾತೊರೆವ ಕುಟುಂಬ ಸದಸ್ಯರು, ಅದಕ್ಕಾಗಿಯೇ ವಿವಾಹವಾಗಬಯಸುವ ಆಸ್ತಿಕ್‌ನ ಸೋದರ ಸಂಬಂ, ಪ್ರೀತಿಸುತ್ತೇನೆ ಎನ್ನುವ ಆಸ್ತಿಕ್‌ನ ಸ್ವಂತ ತಮ್ಮ, ‘ಇಲ್ಲೇನು ಮಾಡುತ್ತೀ, ಮನೆಗೇ ಬಂದುಬಿಡು’ ಅನ್ನುತ್ತ ಹೇಳಿಕೆ ಬದಲಾಯಿಸಿದ ಅಮ್ಮ… ಒಂದು ಸಾವು ಹಲವರ ನಿಜಮುಖಗಳನ್ನು ಪರಿಚಯಿಸುತ್ತದೆ. ಇವರೆಲ್ಲರ ಮಧ್ಯೆ ಸಿಲುಕಿದ ಸಂಧ್ಯಾ ಮುಂದೇನು ಮಾಡುತ್ತಾಳೆ ಎಂದು ಉದ್ದಕ್ಕೂ ಕುತೂಹಲ ಮೂಡಿಸುತ್ತಾ ಸಾಗುವ ಚಿತ್ರ ನ್ಯಾಯೋಚಿತ ಅಂತ್ಯವನ್ನೇ ಕಾಣುತ್ತದೆ. ಬಿಗಿಯಾದ ಕಥೆ, ಚಿತ್ರಕಥೆ, ನಿರ್ದೇಶನ (ಉಮೇಶ್ ಬಿಸ್ಟ್) ದಿಂದಾಗಿ ಚಿತ್ರ ಹೇಳಬೇಕಾದ್ದನ್ನು ಹೇಳುವಲ್ಲಿ ಸಫಲವಾಗುತ್ತದೆ.

ಸಂಧ್ಯಾ (ಸಾನ್ಯಾ ಮಲ್ಹೋತ್ರ), ಆಸ್ತಿಕ್‌ನ ತಂದೆ (ಅಶುತೋಷ್ ರಾಣಾ) ಸೇರಿ ಎಲ್ಲರೂ ಪಾತ್ರ ನಿರ್ವಹಿಸಿದ್ದಕ್ಕೆ ಮೆಚ್ಚುಗೆಯಲ್ಲದೆ ಬೇರೇನೂ ಸಲ್ಲದು. ಯಾವಾಗ ಮಹಿಳೆ ಜಾಣೆಯಾಗುತ್ತಾಳೋ ಆಗ ಅವಳನ್ನು ಕ್ರೇಝಿ ಅಂತಾರೆ ಎಂಬಂತಹ ಮನ ತಟ್ಟುವ ಮಾತುಗಳೂ ಇಲ್ಲಿವೆ. ಸಂಧ್ಯಾಳ ಎಲ್ಲ ತಲ್ಲಣಕ್ಕೂ ಕಾರಣವಾಗುವ ಅವಳ ದಿವಂಗತ ಪತಿ ಆಸ್ತಿಕ್‌ನನ್ನು ಎಲ್ಲಿಯೂ ಕಿಂಚಿತ್ತೂ ತೋರಿಸದೆ ಆ ಪಾತ್ರವನ್ನು ಕಟ್ಟಿಕೊಡುವ ಬಗೆ ಚೆಂದ.

ಸಿನಿಮಾ ಮುಗಿದ ಮೇಲೆ ಪ್ರಶ್ನೆಯೊಂದು ಕಾಡುತ್ತದೆ, ಚಿತ್ರದಲ್ಲಿ ನಾಯಕಿಯ ಬಾಳಪಯಣ ಇನ್ನೂ ಆರಂಭದ ಹೊತ್ತು. ದಾರಿ ಸರಿ ಇಲ್ಲವೋ ಅಥವಾ ಸಾಗುತ್ತಿರುವ ವಾಹನ ಹಾಳಾಗಿದೆಯೋ… ಅಂತೂ ಇನ್ನೊಂದರ ಅನ್ವೇಷಣೆಯಲ್ಲಿ ಹೊರಡುವ ಅವಕಾಶವೇನೋ ಆಕೆಗೆ ಸಿಗುತ್ತದೆ. ಆದರೆ, ಅರ್ಧ ದಾರಿ ಸಾಗಿದ ಮೇಲೆ ಪಥ ಬದಲಿಸಲಾಗದೆ ನಿಂತವರ ಕಥೆಯೇನು? ಅಂದಹಾಗೆ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.

ಸಿನಿಮಾ ನೋಡಲು ಹೇಳಿದ K Suresh Shanbhogue ಅವರಿಗೆ ಥ್ಯಾಂಕ್ಸ್

‍ಲೇಖಕರು Avadhi

May 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. hanamantha haligeri

    ನನಗೂ ಈ ಚಿತ್ರ ಬದುಕಿನ ಸಂಬಂಧಗಳ ಬಗ್ಗೆ ಬಹಳ ಪ್ರಶ್ನೆಗಳನ್ನು ಹುಟ್ಟಿಸಿತ್ತು ಮೇಡಂ ನನಗೆ ಅನಿಸಿದ್ದನ್ನು ನೀವು ನಿಮ್ಮ ಬರಹದಲ್ಲಿ ದಾಖಲಿಸಿದ್ದಿರಿ.

    ಪ್ರತಿಕ್ರಿಯೆ
    • Vidyarashmi P N

      ಧನ್ಯವಾದಗಳು ಹಾಲಿಗೇರಿಯವರೇ. ಹೌದು, ಸಿನಿಮಾ ಹಲವು ವಿಷಯಗಳ ಕುರಿತು ಯೋಚಿಸುವಂತೆ ಮಾಡುತ್ತದೆ

      ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Vidyarashmi P NCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: