ಅಲ್ಲಿಂದಲೇ ಆರಂಭವಾಗಿತ್ತು ಎಲ್ಲ..

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.

ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಪರಿಸ್ಥಿತಿಯ ಜಂಜಾಟಕ್ಕೆ ಸಿಕ್ಕಿದ ನನ್ನ ಮನೆ ಮಧ್ಯಮವರ್ಗದ ಸಾಧಾರಣ ಸೌಲಭ್ಯಗಳಿಂದಲೂ ವಂಚಿತವಾಗಿ ತೀರ ಬಡಕುಟುಂಬದತ್ತ ವಾಲುತ್ತಿರುವ ಹೊತ್ತಿನ ಆರಂಭ ಅದು. ಅಣ್ಣ ಅಪಘಾತದಲ್ಲಿ ಹೊರಟುಹೋಗಿ, ಅಪ್ಪನೂ ಅಸ್ತಮಾದಿಂದ ಹಾಸಿಗೆ ಹಿಡಿದು ಅವ್ವ ಕಂಗಾಲಾದ ಸಂದರ್ಭ.

ನನ್ನ ಓದಿನ, ಮಹತ್ವಾಕಾಂಕ್ಷೆಯ ಗುರುತಿದ್ದ ಅವ್ವ ಒಲೆಯ ಮುಂದೆ ಕುಳಿತು ಹೊತ್ತದೇ ಸತಾಯಿಸುವ ಸೌದೆಯನ್ನು ಊದುತ್ತಲೋ… ಅಪ್ಪನ ಅಸ್ತಮಾಕ್ಕೆ ವರ್ಷಕ್ಕಾಗುವಷ್ಟು ಕಷಾಯಪುಡಿಯನ್ನು ಒರಳುಕಲ್ಲಿನಲ್ಲಿ ಹಾರೆಮೊಂಡಿನಿಂದ ಕುಟ್ಟುತ್ತಲೋ ” ನೀನು ರಾಶಿ ಕಲಿಯುವುದೇನು ಬೇಡ ಮಗಳೇ… ಪಿ ಯೂ ಸಿ ಮುಗಿಸಿ ಟಿ ಸಿ ಹೆಚ್ ಮಾಡ್ಕಂಬಿಡು.. ನಮ್ಮ ಪರಿಸ್ಥಿತಿ ನೋಡೀಯಲ್ಲ ” ಅನ್ನುತ್ತ ಹೆಚ್ಚೇನೂ ಹೇಳದೇ ಮಾತು ಮುಗಿಸುತ್ತಿದ್ದಳು.

“ಪ್ರೊಫೆಸರ್ ಆಗಬೇಕು.. ಪಿ ಹೆಚ್ಡಿ ಮಾಡಬೇಕು ಅಂತಿದ್ದೆಯಲ್ಲ ” ಎಂಬ ಗುರುಗಳ ತಲಾ ಪ್ರಶ್ನೆಗಳಿಗೆ ಮೌನವಾಗುಳಿದು ಆರುನೂರು ಚಿಲ್ಲರೆ ವಿದ್ಯಾರ್ಥಿಗಳಿರುವ ಕಲಾವಿಭಾಗಕ್ಕೆ ಪ್ರಥಮವಾಗಿ ತೇರ್ಗಡೆಯಾಗಿದ್ದ ಪಿ ಯೂ ಸಿ ಅಂಕಪಟ್ಟಿ ಹಿಡಿದು ಟಿ ಸಿ ಹೆಚ್ ಕಡೆಗೆ ನಿರಾಸಕ್ತಿಯಿಂದಲೇ ಹೆಜ್ಜೆ ಹಾಕಿದ್ದೆ. ಎರಡು ವರ್ಷದ ಕೋರ್ಸ ಮುಗಿಸಿ, ಆರೇ ತಿಂಗಳಿಗೆ ನೌಕರಿಯೂ ಸಿಕ್ಕಿ ಬದುಕಿನ ಇನ್ನೊಂದು ಮಜಲಿಗೆ ದಾಟಿದಳು ಮಗಳು.. ತಮಗೂ ಭದ್ರತೆಯನ್ನು ತಂದುಕೊಟ್ಟಳು.. ಎನ್ನುತ್ತ ಅಪ್ಪ ಅವ್ವ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು.

ಎಲ್ಲಿಗೆ ಎಲ್ಲ ಮುಗಿಯಿತು ಅಂದುಕೊಂಡಿದ್ದೆನೋ ಅಲ್ಲಿಂದಲೇ ಆರಂಭವಾಗಿತ್ತು ಎಲ್ಲ.

ಮೊದಲ ಶಾಲೆ ಕರಾವಳಿಗೂ ಮೇಲಿನ ಅರೆಮಲೆನಾಡು ಮುಂಡಗೋಡು ತಾಲ್ಲೂಕಿನ ಕುಗ್ರಾಮದ್ದು… ನೆಲಕ್ಕೆ ಎರಡುಮಾರು ಉದ್ದದ ಬಾರೀಕು ಕಟ್ಟಿಗೆ ಕೋಲುಗಳನ್ನು(ಅಥವಾ ಹತ್ತಿಕಟಗಿ) ಸಾಲಾಗಿ ಚುಚ್ಚಿ ಅದನ್ನು ಸೆಣಬಿನ ನಾರಿನಿಂದ ಮೇಲೆ ಕೆಳಗೆ  ನೇಯ್ದು ಒಳಹೊರಗೆ ಮಣ್ಣು ಸೆಗಣಿ ಬಡಿದು ನಿರ್ಮಿಸಿಕೊಂಡ ಒಂದೇ ಕೋಣೆಯ ಒಂದೇ ನಮೂನೆಯ ಐವತ್ತರವತ್ತು ಮನೆಗಳು ಆ ಊರತುಂಬ…ಹಾಗಾಗಿ ಅಲ್ಲಿ ನೆಲೆ ಸಿಗದೇ ವಾಸ್ತವ್ಯ ಬೇರೆ ಕಡೆ ಮಾಡಿದ್ದೆ.

ಮೂರು ಕಿಮೀ ದೂರ ದಿನವೂ ನಡೆದು ಸಾಗಬೇಕು ಶಾಲೆಯಿರುವ ಅಲ್ಲಿಗೆ.. ಹಸಿರು ಹಾದಿ. ಉದ್ದಕ್ಕೂ ಕಬ್ಬು, ಹತ್ತಿ, ಜೋಳದ ಹೊಲಗಳು.. ಶರಣು ಅನ್ನುತ್ತ ಕಾಳಜಿ ತೋರುವ ಹಳ್ಳಿ ಮಂದಿ, ಗುಡ್ಡದ ತುದಿಯ ಶಾಲೆಯಿಂದ ನನಗಾಗಿ ಕಾಯುತ್ತ ಹುಲುಬು ಕಂಡದ್ದೇ ಅರ್ಧದಾರಿಯವರೆಗೆ ಓಡಿ ಬಂದು ಕರೆದೊಯ್ಯುವ ಪುಟಾಣಿ ಪರಿವಾರ ಇವೆಲ್ಲದರ ಮಧ್ಯೆ ನಾನು ಚಿಗುರಿಕೊಳ್ಳತೊಡಗಿದ್ದೆ.

“ಜ್ವಾಳ ,ಕಬ್ಬಿನ ಹೊಲದ ಹಾದಿಯಂತೆ, ಘಟ್ಟದ ಮೇಲಿನ ಮಂದಿ ಭಾಳ ಒರಟರಂತೆ, ಹಾಗಂತೆ ಹೀಗಂತೆ” ಅಂತ ಊರಲ್ಲಿ ಜನ ತಲಾ ಮಾತಾಡಿ ಭಯಬೀಳಿಸಿದ ಕಾರಣಕ್ಕೆ ಆತ್ಮರಕ್ಷಣೆಗಿರಲಿ ಅಂತ ಅಂಕೋಲೆಯಿಂದ ಕೊಂಡು ಹೋಗಿ ಬ್ಯಾಗಿನಲ್ಲೇ ಇದ್ದು ಹೊಲದ ಹಾದಿಯಲ್ಲಿ ನನ್ನ ಜೊತೆಗೆ ತಿರುಗಾಡಿದ ‘ಹರಿತ ಚೂರಿ’ ತಿಂಗಳು ಕಳೆದ ಮೇಲೆ ಬ್ಯಾಗಿನಿಂದ ಹೊರಬಿದ್ದು ರೂಮಿನಲ್ಲಿ ಈರುಳ್ಳಿ ಮುಳಗಾಯಿ ಟೊಮ್ಯಾಟೋ ಕತ್ತರಿಸಲು ಬಳಕೆಯಾಗತೊಡಗಿತ್ತು.

” ಶಾಲೆಲಿ ಮೂವತ್ನಾಲ್ಕು ದಾಖಲಾತಿ ಇದ್ರೂ ದಿನದ ಹಾಜರಾತಿ ಖಾಯಂ ಎಂಟೋ ಹತ್ತೋ… ಕೂಲಿ ಮಂದಿ. ಹೊಲಕ್ಕೋಗ್ತಾರ.. ಮಕ್ಕಳು ಕೂಡ ಅವ್ವಂದಿರ ಬೆನ್ ಹಿಡೀತಾವ ಏನೂ ಮಾಡಕ್ಕಾಗಲ್ಲ ನೋಡಿ” ಎಂಬ ಸಹಶಿಕ್ಷಕಿಯ ಮಾತಿಗೆ ಹೊಸ ಉಪಾಯ ಹುಡುಕಬೇಕಿತ್ತು. ಪುಟ್ಟ ಗುಡ್ಡಗಾಡು ಪ್ರದೇಶವಾದ ಅಲ್ಲಿ ನಾನು ಕಾಲುರಸ್ತೆಯಲ್ಲಿ ಹಾದು ಶಾಲೆಗೆ ಹೊರಟರೆ ಹತ್ತಿಹೊಲದಲ್ಲಿ ಹತ್ತಿಬಿಡಿಸುತ್ತಿದ್ದ, ತಮ್ಮನ್ನೋ… ತಂಗೀನೋ ಎತ್ತಿಕೊಂಡ, ಬುತ್ತಿ ತಗೊಂಡು ಹೊಲಕ್ಕೆ ಹೊರಟ ಪುಟಾಣಿ ಪಾತ್ರಗಳು ಅಡಗಲು ನೋಡುತ್ತಿದ್ದವು. ಇಲ್ಲಾ ನೆಲಕಪ್ಪಿ ಬಿದ್ದುಕೊಂಡು ಮಣ್ಣಲ್ಲಿ ಮರೆಯಾಗುತ್ತಿದ್ದವು.

” ಹೊಸ ಅಕ್ಕಾರ ಬಂದಾರ ನಮ್ ಜತಿ ಕುಂಟಲಿಪಿ ಆಡ್ತಾರ.. ಕಥಿ ಹೇಳ್ತಾರ .. ಮೀನು ನೋಡಾಕ ಹಳ್ಳದ ಕಡೆ ಒಯ್ತಾರ” ಶಾಲೆಗೆ ಬರುವ ಮಕ್ಕಳು ಊರಲ್ಲಿ ಹೇಳಿ ಸುದ್ದಿ ಹರಡಲು ತಡವಾಗಲಿಲ್ಲ.. ಹೊಲದ ಬದುವಿನಿಂದ ಒಂದೊಂದೇ ಸೂರ್ಯಕಾಂತಿ ಹೂಗಳಂತ ಮುಖಗಳು ಇಣುಕತೊಡಗಿ ಶಾಲೆಯಲ್ಲಿ ನಗು ಮಾತು ಆಟ ಓಟ ಕಥೆ ಓದು ಹೆಚ್ಚಾಗತೊಡಗಿದವು.

ವರ್ಗಕೋಣೆಯಲ್ಲಿ ಕುಳಿತು ನಿಸ್ತೇಜ ಶಬ್ದಗಳೊಂದಿಗೆ ಸಂವಹನ ನಡೆಸೋದು ಯಾವ ವಿದ್ಯಾರ್ಥಿಗಳಿಗೂ ಆಗಿಬರಲ್ಲ.. ಆ ವಿಧಾನದಲ್ಲಿ ಪಾಠ ಮಾಡಿದರೆ ಜಮೆಯಾದ ಹುಡುಗರನ್ನು ಕಳೆದುಕೊಳ್ಳಬೇಕಾದೀತು ಎಂಬ ಸತ್ಯ ಹೊಳೆದು ದಿನದ ಕೆಲ ಅವಧಿಗಳಲ್ಲಿ ಹೊರಸಂಚಾರಕ್ಕೆ ಹೊರಡತೊಡಗಿದೆವು.. ಅಚ್ಚರಿಯಾಗುವಂತೆ ಮರ ಗಿಡ ಹೂ ಬಳ್ಳಿ ಕಾಯಿಗಳ ಪರಿಚಯ ಅವರಿಂದಲೇ ನನಗಾಗತೊಡಗಿತು. ಇದುವರೆಗೂ ಕೋಣೆಯ ಕೂಸಾಗಿದ್ದ ನನ್ನನ್ನು ಓಣಿಯ ಕೂಸಾಗಿಸತೊಡಗಿದ್ದರು ಮಕ್ಕಳು.

ಶಾಲೆಯ ಯಲ್ಲಪ್ಪ ಅನ್ನೋ ಹುಡುಗ ಮೂರನೇ ವರ್ಗದಲ್ಲಿ ಶಾಲೆ ಬಿಟ್ಟು ನಾಲ್ಕು ವರ್ಷವಾಗಿತ್ತಂತೆ… ಉಳಿದ ಮುವತ್ಮೂರು ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿ ತಿಂಗಳಾಗಿದ್ದರೂ ಅವನನ್ನು ಜಪ್ಪಯ್ಯ ಎಂದರೂ ಶಾಲೆಗೆ ತರುವುದಾಗಿರಲಿಲ್ಲ ನನಗೆ. ಚಿಗುರು ಮೀಸೆ ಬೇರೆ ಬಂದು ಕರೆಯಲು ಹೋದ ಹುಡುಗರನ್ನು ನಿಮ್ಮ ಅಕ್ಕೋರಷ್ಟೇ ಪ್ರೌಢ ನಾನು ಎಂಬರ್ಥದಲ್ಲಿ ಏನಾದರೊಂದು ಉಡಾಫೆ ಮಾತನಾಡಿ ಕಳಿಸುತ್ತಿದ್ದ.. ನನಗೋ ಛಲ.

ಶಾಲೆಯಿಂದಾಚೆ ಸ್ವಲ್ಪ ದೂರದಲ್ಲಿ ಪಕ್ಷಿಧಾಮ. ಅಲ್ಲಿ “ದಿನಾ ಎಮ್ಮಿ ಮೇಯಿಸ್ಕಂಡು.. ಹಕ್ಕಿ ಸುಟ್ಕೊಂಡು ತಿಂತಿರ್ತಾನೆ ಟೀಚರ್ ” ಎಂಬ ಸುಳಿವು ಸಿಕ್ಕಿತ್ತು ಮಕ್ಕಳಿಂದ. ಮರುದಿನ ಹೊರಟೆವು ಆಕಡೆ.. ಯಲ್ಲಪ್ಪ ಎಮ್ಮಿ ಮ್ಯಾಲೆ ಕುಳಿತು ‘ಯಾರೇ ಕೂಗಾಡಲಿ’ ಎನ್ನುತ್ತ ಕವಣೆ ರಿಪೇರಿ ಮಾಡೋದ್ರಲ್ಲಿ ತಲ್ಲೀನನಾಗಿದ್ದ..

ನಾವೋ ಅವನಿಗಾಗಿ ಬಂದವರಲ್ಲ ಎಂದು ನಟಿಸುತ್ತ ಪರಿಸರ ಅಧ್ಯಯನದ ‘ಪಕ್ಷಿಗಳು’ ಪಾಠ ತೆರೆದು ಡ್ಯಾಂ ಸುತ್ತ ಹಾರಾಡುವ ಹಕ್ಕಿಗಳ ಹೆಸರು, ಆಹಾರ, ಬಣ್ಣ, ಗಾತ್ರ ಬರೆಯತೊಡಗಿದ್ದೆವು.. ನಿಧಾನಕ್ಕೆ ಕುತೂಹಲಿತನಾಗತೊಡಗಿದ್ದ ಆತನಿಗೆ ಸಮಯ ನೋಡಿ ಗಾಳ ಹಾಕಿದ್ದೆ ” ಬಾರೋ ಇಲ್ಲಿ.. ಹಕ್ಕಿ ಹೆಸರು ಹೇಳು ಬರ್ಕೋತೇವೆ” ಅಂದದ್ದೇ ಓಡೋಡಿ ಬಂದಿದ್ದ..

ಸಿಳ್ಳಾರ, ನೀರುಬಾತು, ಗುಳುಮುಳುಕ, ನೀರುಕಾಗೆ, ಮಿಂಚುಳ್ಳಿ, ಮಡಿವಾಳ ಹೀಗೆ ಪುಃಖಾನುಪುಃಖವಾಗಿ ಹೆಸರಿನೊಂದಿಗೆ ಅವು ಯಾವ ಸಮಯದಲ್ಲಿ ಬರ್ತವೆ, ಆಹಾರ, ಮೊಟ್ಟೆ ಇಡೋ ಸಮಯ ಎಲ್ಲವನ್ನೂ ವಿವರಿಸಿದ್ದ.. ನಾನಂತೂ ದಂಗಾಗಿ ಕುಳಿತಿದ್ದೆ.. ಮರಳಿ ಬರುವಾಗ ಕಾಲ್ದೊರೆಯ ನೀರಿನಲ್ಲಿ ಜಾರಿಬೀಳುವಂತಾಗಿದ್ದ ನನಗೆ ಅವರವ್ವ ನೀರು ದಾಟುವಾಗ ಹೇಗೆ ಸೀರೆ ಕಚ್ಚೆ ಹಾಕಿ ಕಾಲು ನೆಲಕ್ಕೆಕಪ್ಪಿಸಿ ದಾಟುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದ..

ಮರುದಿನ ಎಲ್ಲರಿಂತ ಮೊದಲು ಶಾಲೆಯ ಬಾಗಿಲಲ್ಲಿ ಕಾಯುತ್ತಿದ್ದು ಅಚ್ಚರಿ ಮೂಡಿಸಿದ್ದ.. ಅವನಿಗಲ್ಲ ಎಂಬಂತೆ ಸಾರ್ವತ್ರಿಕವಾಗಿ “ಹಕ್ಕಿಗಳೂ ನಮ್ಮಂತೆ ಜೀವಿಗಳು.. ಗೂಡಲ್ಲಿನ ಮೊಟ್ಟೆ ಕದ್ದು ಸುಟ್ಟು ತಿನ್ನಬಾರದು, ಕವಣೆಬೀಸಿ ಹಕ್ಕಿಕೊಂದು ಅದನ್ನೂ ಸುಟ್ಟು ತಿನ್ನಬಾರದು. ಅದೂ ಮುದ್ದುಮರಿಗಳ ತಾಯಿ ಅಲ್ವ..

ನಿಮ್ಮ ಅವ್ವ ಮುಂಡಗೋಡ ಸಂತಿಯಿಂದ ತರೋ ಸೇವು ಚೂಡಾ ಮಿರ್ಚಿಭಜಿಗೆ ನೀವು ಕಾದಂತೆ ಅದರ ಮರಿಗಳೂ ಅದು ತರೋ ಗುಟುಕಿಗೆ ಕಾಯ್ತಿರುತ್ತವೆ ಅಲ್ವಾ” ಅಂತ ಅಂದ ಮೇಲೆ ಖಾಯಂ ಅವನ ಹೆಗಲಚೀಲದಲ್ಲಿರುತ್ತಿದ್ದ ಕವಣೆ ಕಾಣೆಯಾಗಿತ್ತು..

ಅವನ ಸುಪರ್ದಿಯಲ್ಲಿ ಇನ್ನಷ್ಟು ಮತ್ತಷ್ಟು ಪರಿಸರ ಭೇಟಿಗಳು ನಂತರದ ದಿನಗಳಲ್ಲಿ ಮಾಮೂಲಾದವು ನಮಗೆ..

ಎರಡೇ ವರ್ಷಕ್ಕೆ ಆ ಊರು ಬಿಟ್ಟು ಬರುವಾಗ ಭೋರಾಡಿ ಅತ್ತವು ಮಕ್ಕಳು. ಯಲ್ಲಪ್ಪ ಸುದ್ದಿ ತಿಳಿದದ್ದೇ ಅನ್ನ ನೀರು ಬಿಟ್ಟ.. ಅವನನ್ನು ಸಮಾಧಾನಿಸಲು ನಾನು ಹರಸಾಹಸ ಪಡಬೇಕಾಯ್ತು..ಶಾಲೆ ಬಿಡದಂತೆ ಭಾಷೆ ಪಡೆದು, ತಿಂಗಳಿಗೊಮ್ಮೆ ಪತ್ರ ಬರೆವ ವಾಗ್ಧಾನ ನೀಡಿ ಹೊಸ ಶಾಲೆಯ ಹಾದಿ ಹಿಡಿದಿದ್ದೆ .

ಯಲ್ಲಪ್ಪ ಬಿ ಎ ವರೆಗೆ ಕಲಿತು ಸಿ ಆರ್ ಪಿ ಎಪ್ ಯೋಧನಾದ. ಇತ್ತೀಚೆಗೆ ಫೇಸ್ಬುಕ್ನಲ್ಲಿ ನನ್ನ ಹುಡುಕಿ ಕುಣಿದಾಡಿದ..ಟೀಚರ್ ಟೀಚರ್ ಅನ್ನುವ ಅವನ ಧ್ವನಿ ಈಗಲೂ ಕಿವಿಯಲ್ಲಿ ರಿಂಗಣಿಸಿ ಅದು ಅವ್ವ ಅವ್ವ ಅಂದಂತೆ ಕೇಳಿಸಿ ಹಸಿರಾಗುತ್ತೇನೆ ನಾನು..

ಹೀಗೇ ಮುದ್ದು ಮಕ್ಕಳ ಒಡನಾಟದಲ್ಲಿ ಎಷ್ಟೋ ವರ್ಷಗಳು ಕಳೆಯುತ್ತಲಿವೆ.. ನಾವೆಲ್ಲ ಶಿಕ್ಷಕರು ಕೂಡಿ ಅವರ ಶೈಕ್ಷಣಿಕ ಸಾಮಗ್ರಿಗಳ ಅಗತ್ಯಗಳನ್ನೂ ದಾನಿಗಳ ಮೂಲಕ ಆದಷ್ಟು ಪರಿಹರಿಸಲು ಪ್ರತೀವರ್ಷ ಪ್ರಯತ್ನಿಸುತ್ತಿದ್ದೇವೆ. ಸ್ವಂತ ದುಡಿಮೆ ಕಲಿತು ದೂರದಲ್ಲಿರೋ ಹಲವಾರು ಮಕ್ಕಳು ಪ್ರತೀವರ್ಷ ಅಕ್ಕೋರನ್ನು ನೋಡಲು ಬರುತ್ತಾರೆ ಪ್ರೀತಿಯೊಂದಿಗೆ .. ನಾನೂ ಹೆಮ್ಮೆ ರೋಮಾಂಚನ ಆನಂದಬಾಷ್ಪ ಎಲ್ಲವನ್ನೂ ಅನುಭವಿಸುತ್ತ ಇಂದಿನ ಮಕ್ಕಳಿಗೆ ಅವರನ್ನು ಪರಿಚಯಿಸುತ್ತೇನೆ..

ಚೂರು ಪ್ರೀತಿ, ಹುರಿದುಂಬಿಸುವಿಕೆಗೆ ಅರಳಿಕೊಳ್ಳುವ ಮುಗ್ಧ ಮಕ್ಕಳು ನಮಗೂ ಅಪೂರ್ವ ನಿಜದರ್ಶನ ಮಾಡಿಸಬಲ್ಲವು.. ಇದು ನಿರಂತರ ಚಲನೆಯ ಪ್ರಕ್ರಿಯೆ. ಆತ್ಮವಿಶ್ವಾಸ ಬೆಳೆವಲ್ಲಿ, ಬೆಳೆಸುವಲ್ಲಿ ಕೇವಲ ಮಾಹಿತಿ ನೀಡುವ, ಬೋಧಿಸುವ, ಆಜ್ಞೆ, ಆದೇಶ, ಕಟ್ಟುಪಾಡು ಹೇರುವ ಕ್ರಿಯೆ ಎಳ್ಳಷ್ಟೂ ಪ್ರಯೋಜನಕ್ಕೆ ಬರಲ್ಲ ಅನ್ನೋ ಮಾತು ಸರ್ವವಿಧಿತ…

ನನ್ನಲ್ಲಿ ಇಂದು ಚೂರುಪಾರಾದರೂ ಬೆಳೆದು ಬಂದಿರುವ ಕವಿತ್ವ ಗುಣದ ಮೂಲ ಕೂಡ ಮಕ್ಕಳ ಒಡನಾಟದಿಂದ ಬಂದದ್ದು, ಅವರು ನನ್ನ ಕರೆದು ಕೊಂಡೊಯ್ದ ಪ್ರಕೃತಿಯ ಸಂಪರ್ಕದಿಂದ ಬಂದದ್ದು ಎಂದು ಹೆಮ್ಮೆಯಿಂದ ಎಂದೆಂದೂ ಹೇಳಿಕೊಳ್ಳುತ್ತೇನೆ ನಾನು.

ದೇಶ ಸುಧಾರಿಸುತ್ತಿದೆ ಎಂದು ಎಷ್ಟೇ ಜಾಗಟೆ ಹೊಡೆದರೂ ಹಳ್ಳಿಯ ಅದರಲ್ಲೂ ತಳಸಮುದಾಯದವರ ಬಡತನ ಇಂದಿಗೂ ಅಂತೆಯೇ ಇದೆ.. ಬದಲಾಗಿ ಅಂಟಿಕೊಂಡ ಚಟಗಳು ದುಡಿವ ವರ್ಗದ ಬದುಕು ಕಸಿದುಕೊಳ್ಳುತ್ತಿವೆ.. ನಾನು ಇದುವರೆಗೆ ಕೆಲಸಮಾಡಿದ ಎಲ್ಲ ಶಾಲೆಗಳು ಹಳ್ಳಿಯ ಪರಿಸರದಲ್ಲೇ ಇದ್ದು ಈ ಸಮಸ್ಯೆಯ ಅರಿವು ಚನ್ನಾಗಿ ಆಗಿದೆ ನನಗೆ ..

ಒಂದು ಹೊತ್ತು ಸ್ವಂತ ಅಗತ್ಯಕ್ಕಾಗಿ ದುಡಿದುಕೊಂಡು ಇನ್ನೊಂದು ಹೊತ್ತು ಶರಾಬಿನ ಗುಂಗಲ್ಲಿ ಮೈಮರೆವ ಪುರುಷವರ್ಗ…. ಮನೆ ಮಕ್ಕಳು, ದನ ಕರ , ಸೌದೆ ಸೊಪ್ಪು , ಅಡುಗೆ ಕೂಲಿ ಎನ್ನೋ ಜಂಜಾಟದಲ್ಲೇ ಬಿದ್ದು ಬೆಳಗು ಮಾಡೋ ಸ್ತ್ರೀ ವರ್ಗ.. ರಾತ್ರಿ ಪ್ರತಿ ಮನೆಯಲ್ಲಿ ಮಾಮೂಲಾಗಿರುವ ಜಗಳ ಹೊಡೆದಾಟದ ಮದ್ಯದಲ್ಲಿ ಮುಗ್ದ ಮಕ್ಕಳ ಮನಸ್ಸುಗಳು ಕಮರುತ್ತಿವೆ..

ಹಾಗಾಗಿ ಅವರ ಶೈಕ್ಷಣಿಕ ಅಗತ್ಯಗಳಿಗಿಂತ ಹೆಚ್ಚು ಹೆಚ್ಚು ಮನೋಬಲ ಗಟ್ಟಿಗೊಳಿಸುವುದರ ಕುರಿತು ಹೆಚ್ಚು ಒತ್ತುಕೊಡುತ್ತಿದ್ದೇನೆ ನಾನು ಅಂದಿನಿಂದ ಇಂದಿನವರೆಗೆ.. ಪ್ರತೀವರ್ಷ ಪಾಲಕರೊಂದಿಗಿನ, ಮಕ್ಕಳೊಂದಿಗಿನ ಕೌನ್ಸಿಲಿಂಗ್ ಜಾರಿಯಲ್ಲಿಟ್ಟು ಮಕ್ಕಳನ್ನು ಮೋಟಿವ್ ಮಾಡಿಬಿಟ್ಟರೆ ಚೂರು ಮಾರ್ಗದರ್ಶನ ಸಿಕ್ಕಿದರೂ ಅವರು ತಮ್ಮಷ್ಟಕ್ಕೆ ತಾವು ಕಲಿಯಬಲ್ಲರು.. ನಮಗೂ ಕಲಿಸಬಲ್ಲರು ಎಂಬುದು ನನ್ನ ಸುದೀರ್ಘ ಅನುಭವ ಕಲಿಸಿದ ಪಾಠ

ನೀವೇನಂತಿರೀ…..

October 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. Smitha Amrithraj.

    ನಿಮ್ಮಂತಹ ಶಿಕ್ಷಕರ ಸಂಖ್ಯೆ ಸಾವಿರವಾಗಲಿ ರೇಣಕ್ಕ..ಆಪ್ತ ಬರಹ.

    ಪ್ರತಿಕ್ರಿಯೆ
    • ರೇಣುಕಾ ರಮಾನಂದ

      ಸ್ಮಿತಾ ಮುದ್ದಮ್ಮ ಥ್ಯಾಂಕ್ಯೂ ಕಣೇ

      ಪ್ರತಿಕ್ರಿಯೆ
  2. Gopal trasi

    ಅಂಕಣ ಓದುತ್ತಿರುವಂತೆ ನಮ್ ಶಿವರಾಮ ಕಾರಂತರ ಬಾಲವನ ಪರಿಕಲ್ಪನೆ ನೆನಪಾಯಿತು. ಪ್ರತಿ ಶಾಲೆಯಲಿ ಶಿಕ್ಷಕರು ಈ ತರಹ ಇರುವಂತಿದ್ದರೇ… ಆ ಮಕ್ಕಳೇ ಧನ್ಯರು… ಅಭಿನಂದನೆ ನಿಮಗೆ.

    ಪ್ರತಿಕ್ರಿಯೆ
  3. ಗೀತಾ ಎನ್ ಸ್ವಾಮಿ

    ನನಗೆ ನಿಮ್ಮ ವಿದ್ಯಾರ್ಥಿ ಆಗಬೇಕೆನಿಸಿತು ರೇಣುಕಾ ಮೇಡಂ.

    ಪ್ರತಿಕ್ರಿಯೆ
  4. ರೇಣುಕಾ ರಮಾನಂದ

    ಸುಧಾ ಮೇಡಂ..ಥ್ಯಾಂಕ್ಯೂ

    ಪ್ರತಿಕ್ರಿಯೆ
  5. ವಾಸುದೇವ ಶರ್ಮಾ

    ಬಹಳ ಆಪ್ತವಾಗಿದೆ. ನಿಜವಾಗಿಯೂ ನಿಮ್ಮಂತಹ ಶಿಕ್ಷಕಿಯರು ಶಿಕ್ಷಕರ ಕೊಡುಗೆ ಅಮೋಘವಾದುದು. ನನ್ನ ಓಡಾಟದಲ್ಲಿ ಅಲ್ಲಿ ಇಲ್ಲಿ ಶಾಲೆಗಳಲ್ಲಿ ನಿಮ್ಮಂತಹ ಕಾಳಜಿಯಿರುವ ಟೀಚರ್ಗಳನ್ನು ಭೇಟಿ ಮಾಡಿದ್ದೀನಿ. ಎಲ್ಲ ಟೀಚರ್ಗಳೂ ಒಂದೇ ಏನೂಮಾಡಲ್ಲ ಅನ್ನೋ ಜನ ಇಂತಹವನ್ನು ಓದಬೇಕು, ನಿಮ್ಮಂತಹವರನ್ನು ಭೇಟಿಯಾಗಬೇಕು.‌ ನಿಮ್ಮಂತಹ ಸಮುದಾಯ ಹೆಚ್ಚಾಗಲಿ.

    ಪ್ರತಿಕ್ರಿಯೆ
  6. ವಾಸುದೇವ ಶರ್ಮಾ

    ಆಪ್ತವಾಗಿದೆ. ಶಾಲಾ ಶಿಕ್ಷಕ ಶಿಕ್ಷಕಿಯರಲ್ಲಿ ಇಂತಹ ಸ್ವಯಂಪ್ರೇರೇಪಣೆಯೇ ಅದೆಷ್ಟೋ ಮಕ್ಕಳು ಮತ್ತೆ ಶಾಲೆಗೆ ಬರಲು ಕಲಿಯಲು ಮುಂದೆ ಬರಲು ಸಾಧ್ಯವಾಗಿರುವುದು. ನನ್ನ ಓಡಾಟದಲ್ಲಿ ನಾನೂ ಅಲ್ಲಲ್ಲಿ ಒಂದಷ್ಟು ಉತ್ಸಾಹೀ ಶಿಕ್ಷಕ ಶಿಕ್ಷಕಿಯರನ್ನು ಭೇಟಿ ಮಾಡಿದ್ದೇನೆ. ನಿಮ್ಮಂತ ಮಕ್ಕಳನ್ನು ಪ್ರೀತಿಸುವ ಟೀಚರ್‌ಗಳ ಪಡೆ ದೊಡ್ಡದಾಗಲಿ.

    ಪ್ರತಿಕ್ರಿಯೆ
  7. Ahalya Ballal

    ಎಷ್ಟು ದಿನದಿಂದ ಓದ್ಬೇಕು ಅಂದ್ಕೊಂಡಿದ್ದೆ ನಿಮ್ಮ ಅಂಕಣವನ್ನು. ಇವತ್ತು ಮುಹೂರ್ತ ಬಂತು. ತುಂಬ ಇಷ್ಟವಾಯ್ತು, ಮೀನಮ್ಮ.

    ಪ್ರತಿಕ್ರಿಯೆ
  8. ಕಲಾ ಭಾಗ್ವತ್

    ಚೆಂದದ ನೈಜ ನಿರೂಪಣೆ ಯೊಂದಿಗೆ ಅನುಭವದ ಹಂಚಿಕೆ. ಈ ಪಯಣ ಯಶಸ್ವಿಯಾಗಲಿ ರೇಣುಕಾ.

    ಪ್ರತಿಕ್ರಿಯೆ
  9. ರಾಜಹಂಸ

    ಬಹಳ ಆಪ್ತವಾದ ಬರಹ. ಯಲ್ಲಪ್ಪನ ಬದಲಾವಣೆ ಮತ್ತು ಬೆಳವಣಿಗೆ ರೋಮಾಂಚನ ಮೂಡಿಸಿತು. ನಿಮ್ಮಂತ ಉತ್ಸಾಹಿ ಮತ್ತು ಪ್ರಮಾಣಿಕ ಶಿಕ್ಷಕರಿಂದ ಇಂತಹ ಸಾಧನೆಗಳು ಸಾಧ್ಯ. ಈ ಬರಹ ಓದಿ ತುಂಬ ಖುಷಿಪಟ್ಟೆ. ನಿಮ್ಮ ಈ ಕಾರ್ಯಕ್ಕೆ ಪೂರ್ಣವಿರಾಮವಿರದಿರಲಿ.

    ಪ್ರತಿಕ್ರಿಯೆ
  10. km vasundhara

    ನಿಮ್ಮ ಸ್ವಾನುಭವದ ಕಥನ ಬಹಳ ಚೆನ್ನಾಗಿದೆ. ಆಡಳಿತ- ಅಧಿಕಾರದ ಹೊರತಾಗಿ, ಶಿಕ್ಷಣ ಹಾಗೂ ಶಿಕ್ಷಕರಿಗಿರುವ ಶಕ್ತಿಯೇ ಬೇರೆ. ಮನುಷ್ಯರ ನಿಜವಾದ ಸಾಮರ್ಥ್ಯ ಹೊರತರುವ ಮಾರ್ಗ ಶಿಕ್ಷಣವೇ. ಶುಭವಾಗಲಿ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ರಾಜಹಂಸCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: