ಗಿರೀಶ್ ಕಾಸರವಳ್ಳಿ ಅವರಿಗೆ ಗಾಂಧಿ ಸಿಕ್ರು..

-ನಾ. ದಾಮೋದರ ಶೆಟ್ಟಿ

ಅದೊಂದು ಗುರುವಾರ, ಸಹೋದ್ಯೋಗಿ ಮಿತ್ರ ಶಿಕಾರಿಪುರ ಕೃಷ್ಣಮೂರ್ತಿ ನನ್ನನ್ನು ಕಾಯುತ್ತಾ ನಿಂತಿದ್ದರು. ಅವರ ಪುತ್ರಿ ವಾಣಿಗೆ ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಒಂದು ಸೀಟು ಬೇಕಿತ್ತು. ‘ನೀವು ಬಂದ್ರೆ ಚೆನ್ನಾಗಿರುತ್ತೆ, ಡಾ. ಆಳ್ವಾರ ಜೊತೆ ಮಾತಾಡಲು’ ಎಂದರು. ‘ಅದಕ್ಕೆ ನಾನ್ಯಾಕೆ ಬೇಕು? ಡಾ. ಆಳ್ವರು ನನ್ನಷ್ಟೆ ನಿಮಗೂ ಪರಿಚಿತರು. ಯಾವತ್ತೂ ನನಗೊಂದು, ನಿಮಗೊಂದೂಂತ ಮಾತಾಡೋರೇ ಅಲ್ಲ. ನೀವೇ ಹೋಗಿ’ ಎಂದೆ ನಾನು. ‘ಹಾಗಲ್ಲ, ಇವತ್ತು ನಿಮ್ಮ ಕಾರಲ್ಲಿ ಹೋಗೋಣ. ನಾನಾದರೆ ದ್ವಿಚಕ್ರ ವಾಹನ ತಗೋಬೇಕು, ಮೂವತ್ತೈದು ಕಿಲೋಮೀಟರು. ಸುಮ್ಮನೆ ಸುಸ್ತು’ ಎಂದರು. ಕೃಷ್ಣಮೂರ್ತಿ ಹಾಗೇನೆ. ಮಾತಿನಲ್ಲಿ ತುಂಬ ಜಾಣ. ದ್ವಿಚಕ್ರವಾಹನದಲ್ಲಿ ಸವಾರಿ ಹೊರಟರೆ ಅವರಿಗೆ ಸುಸ್ತಾಗುವುದು ಎಂಬುದನ್ನು ನನ್ನ ಹೆಸರೆತ್ತಿ ಹೇಗೆ ತಿರುಗಿಸಿಬಿಟ್ಟರು ನೋಡಿ! ಅವರ ಆಯಾಸ ನನ್ನ ಆಯಾಸ ಎಂದುಕೊಂಡು ಹೊರಟೆ. ಒಂದುವೇಳೆ ಹಾಗೆ ಹೊರಡದಿರುತ್ತಿದ್ದರೆ ಗಾಂಧಿ ಸಿಗುತ್ತಲೇ ಇರಲಿಲ್ಲ..

ಕಾರು ಮೂಡಬಿದಿರೆಗೆ ಹೊರಟಿತು. ನಾವಿಬ್ಬರೂ ಬರುತ್ತೇವೆಂದು ಡಾ. ಆಳ್ವಾರಿಗೆ ದೂರವಾಣಿ ಕರೆ ಮಾಡಿದ್ದೆವು. ಅವರದ್ದೊಂದು ಸರಳತೆ. ಸಾಮಾನ್ಯವಾಗಿ ದೊಡ್ಡದೊಡ್ಡವರೆಲ್ಲ ಕೈಗೆ ಸಿಗುವುದೇ ಕಷ್ಟ; ಅಂಥದ್ದರಲ್ಲಿ ಇವರು ಸಂಜೆ ಹೊತ್ತನ್ನು ವಿದ್ಯಾಗಿರಿಯ ಕ್ಯಾಂಟಿನ್ನಲ್ಲಿ ವಿದ್ಯಾರ್ಥಿಗಳೊಂದಿಗೆ, ಮೇಷ್ಟ್ರುಗಳೊಂದಿಗೆ ಹಾಗೂ ಮಕ್ಕಳ ಹೆತ್ತವರೊಂದಿಗೆ ನಿಷ್ಕಪಟ ನಗೆ, ನಾಟಕ, ಪಟ್ಟಾಂಗದಲ್ಲಿ ಕಳೆಯುತ್ತಿದ್ದರು. ಆಗೆಲ್ಲಾ ಅನ್ನಿಸುವುದುಂಟು; ಇವರು ದೊಡ್ಡವರಂತೆ ಮರ್ಜಿ ತೋರಿಸೋದು ಯಾವಾಗ? ಎಂದು.

ಕಾರು ಚಲಿಸುತ್ತಿತ್ತು. ಈ ಮೂಡಬಿದಿರೆಯ ದಾರಿಯೇ ಹಾಗೆ, ಬಳುಕುವ ಹಾವಿನ ಹಾಗೆ. ಅದಕ್ಕೆ ನೇರ ನಡೆ ಗೊತ್ತೇ ಇಲ್ಲ. ಎಡಕ್ಕೊಮ್ಮೆ ಬಲಕ್ಕೊಮ್ಮೆ ಸ್ಟಿಯರಿಂಗ್ ತಿರುಗದಿರುತ್ತಿದ್ದರೆ ಗಾಂಧಿ ಸಿಗುತ್ತಿರಲಿಲ್ಲ. ಅಷ್ಟೂ ತಿರುವುಗಳು.

ಅಂದಹಾಗೆ ಇದನ್ನೊಂದು ಹೇಳಬೇಕಿತ್ತು: ಕನ್ನಡದ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಾದ ಕಾಸರವಳ್ಳಿಯವರು ಕುಂವೀ ಅವರ ಕತೆಯೊಂದನ್ನು ಆಧಾರವಾಗಿಟ್ಟುಕೊಂಡು ಚಿತ್ರ ತೆಗೆಯಲು ಉದ್ದೇಶಿಸಿದ್ದರು. ಒಮ್ಮೆ ದೂರವಾಣಿಯಲ್ಲಿ ಸಂಪರ್ಕಿಸಿದ್ದ ಕಾಸರವಳ್ಳಿಯವರು ‘ಕೂರ್ಮಾವತಾರ ಎಂಬ ಕುಂವೀ ಕತೆಯನ್ನು ಸಿನಿಮಾ ಮಾಡಲು ಹೊರಟಿದ್ದೇನೆ. ಅದರ ನಾಯಕ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು ಆತ ಗಾಂಧಿಯ ಪಾತ್ರವನ್ನು ವಹಿಸಬೇಕಾದ ಪ್ರಮೇಯ ಒದಗುತ್ತದೆ. ಗಾಂಧಿ ಹಂತಹಂತವಾಗಿ ಆತನೊಳಕ್ಕೆ ಆವಾಹನೆಗೊಳ್ಳುತ್ತಾನೆ.

ಇದೊಂದು ಅಸುಲಭ ಆದರೆ ದೃಶ್ಯಮಾಧ್ಯಮಕ್ಕೆ ಅಸದೃಶವಾಗಿ ಒಪ್ಪುವ ಕತೆ. ಅದಕ್ಕೊಬ್ಬ ನಾಯಕ ಪಾತ್ರಧಾರಿ ಬೇಕು ಮತ್ತು ಅವರು ಗಾಂಧಿಯ ಹಾಗೆ ಕಾಣಬೇಕು. ನಿಮ್ಮಲ್ಲೆಲ್ಲಾದರೂ ಗಾಂಧಿ ಸಿಕ್ಕಿದರೆ ತಿಳಿಸಿ’ಎಂದಿದ್ದರು. ಇದು ಬಹು ಕಷ್ಟದ ಕೆಲಸ. ಕಾಸರವಳ್ಳಿಯವರು ಹಾಗೆ ಹೇಳಿ ನಾಲ್ಕಾರು ತಿಂಗಳುಗಳೇ ಕಳೆದಿದ್ದುವು. ನನ್ನಲ್ಲಿ ಹೇಳಿದ ಹಾಗೆಯೇ ಕರ್ನಾಟಕದ ಉದ್ದಗಲದ ಅವರ ಗೆಳೆಯರಿಗೆ ಹೇಳಿದ್ದರು. ಎಲ್ಲಿಯೂ ಗಾಂಧಿ ಸಿಕ್ಕಿರಲಿಲ್ಲ.

‘ಗಾಂಧಿ ಕುರಿತಾದ ಗಾಂಧಿ ವರ್ಸಸ್ ಗಾಂಧಿ, ಗಾಂಧಿ-ಅಂಬೇಡ್ಕರ್ ಮುಂತಾದ ನಾಟಕದಲ್ಲಿ ನಟಿಸಿ ಪ್ರಸಿದ್ಧಿ ಪಡೆದ ನಟರಿದ್ದಾರಲ್ಲ, ಅವರನ್ನು ಪ್ರಯತ್ನಿಸಬಾರದೇಕೆ?’ಎಂದಿದ್ದೆ ಒಮ್ಮೆ. ಅದಕ್ಕವರು ‘ಅದರಲ್ಲಿ ಹೊಸತನವಿಲ್ಲ. ನನಗೆ ತಾಜಾತನ ಬೇಕು. ಒಮ್ಮೆ ಬಳಸಿದ್ದನ್ನು ಮತ್ತೆ ಬಳಸುವ ಯೋಚನೆ ನನಗಿಲ್ಲ’ ಎಂದಿದ್ದರು. ಅವರದು ಹಾಗೆಯೆ; ಅಂದುಕೊಂಡದ್ದು ಆಗುವ ತನಕ ಕೈಬಿಡುವ ಜಾಯಮಾನ ಅವರದ್ದಲ್ಲ.

ಅಡೂರು ಗೋಪಾಲಕೃಷ್ಣನ್ ಎಂಬ ಇನ್ನೊಬ್ಬ ಸುವಿಖ್ಯಾತ ನಿರ್ದೇಶಕರೂ ಹಾಗೇನೆ; ‘ಮದಿಲುಗಳ್’ ಎಂಬ ಚಲನಚಿತ್ರ ನಿರ್ದೇಶಿಸುವುದಕ್ಕೂ ಮುನ್ನ ಅದರ ನಾಯಕ ಪಾತ್ರಧಾರಿಯಾದ ಮಲಯಾಳದ ಖ್ಯಾತ ನಟ ಮಮ್ಮುಟ್ಟಿಯವರನ್ನು ಒದು ತಿಂಗಳ ಕಾಲ ಉಪವಾಸ ಕೆಡವಿದ್ದರು. ವ್ಯಕ್ತಿಯನ್ನು ಪಾತ್ರವನ್ನಾಗಿಸಲು ಏನೆಲ್ಲಾ ಕಸರತ್ತು ಮಾಡಬೇಕು? ಇವರನ್ನಾದರೆ ಉಪವಾಸ ಕೆಡವಬೇಕಾದ ಯಾವ ಅಗತ್ಯವೂ ಇಲ್ಲ. ಒಟ್ಟಿನಲ್ಲಿ ಗಾಂಧಿ ಬೇಕೇಬೇಕು. ಏನೂ ಆಗದಿದ್ದರೆ ಕುಂವೀ ಕತೆಗೆ ಗುಡ್ ಬೈ ಹೇಳುವುದಕ್ಕೂ ಅವರು ತಯಾರು.

ಕಾರು ವಾಮಂಜೂರು ದಾಟಿ ಮುಂದಕ್ಕೆ ಸಾಗುತ್ತಿತ್ತು. ಎಡಮಗ್ಗುಲಲ್ಲಿ ಕೂತ ಕೃಷ್ಣಮೂರ್ತಿ ಡಾ. ಮೋಹನ ಆಳ್ವಾರ ಗುಣಗಾನ ಮಾಡುತ್ತಿದ್ದರು. ಎಡೆಗೆಡೆಗೆ ನನ್ನ ಗುಣಗಾನವೂ ಓತಪ್ರೋತಗೊಳ್ಳುತ್ತಿತ್ತು. ನಡುವೆ ನಮ್ಮಿಬ್ಬರ ಸಂಬಂಧ ಗಾಂಧಿ-ನೆಹರು ಸಂಬಂಧದ ಹಾಗೆ ಎಂದೂ ಅಂದುಬಿಟ್ಟರು. ನನಗದು ಪಥ್ಯವಾಗಲಿಲ್ಲ. ನಮ್ಮಿಬ್ಬರಲ್ಲಿ ಯಾರು ಗಾಂಧಿ ಯಾರು ನೆಹರು ಎಂಬುದೂ ಸ್ಪಷ್ಟವಾಗಲಿಲ್ಲ. ಆಳ್ವರಾದರೋ ಗಾಂಧಿಯ ಸರಳತೆ ಮೈಗೂಡಿಸಿಕೊಂಡವರು ನಿಜ. ಆದರೆ ಸಂಸ್ಥೆಯ ನಿಭಾವಣೆಯಲ್ಲಿ ಕೆಲವೊಮ್ಮೆ ನೆಹರೂವಿನಷ್ಟೆ ಕಠಿಣ. ಮತ್ತೆ ನನ್ನದು ಬಿಡಿ, ಎತ್ತಣಿಂದೆತ್ತ ಸಂಬಂಧ ಎಂದುಕೊಳ್ಳುತ್ತ ಇದ್ದೆನಾದರೂ ನಮ್ಮ ಸವಾರಿಯ ನಡುವೆ ಗಾಂಧಿಯ ವಿಷಯ ಯಾಕೆ ಬಂದು ಕೂತಿತು? ಇಲ್ಲಿ ಕಾಸರವಳ್ಳಿಯವರು ಪ್ರವೇಶ ಪಡೆಯುತ್ತಿದ್ದಾರೆಯೇ? ಎಂದೂ ಅನ್ನಿಸಿಹೋಯಿತು. ಕೆಲವೊಮ್ಮೆ ಹಾಗೇನೆ: ಮುಂದೆ ನಡೆಯಲಿರುವ ಯಾವುದೋ ಘಟನೆಗೆ ಪೂರ್ವಸೂಚನೆ ಸಿಕ್ಕುವುದು ಹೀಗೇನೆ.

ಮೂಡುಬಿದಿರೆಯ ಖಾಯಂ ದಾರಿಯಲ್ಲಿ ಕೈಕಂಬ ತಲುಪಿದಾಗ ನಾನು, ಮಲ್ಲಿಪಟ್ಟಣ, ನರಸಿಂಹ ಮೂರ್ತಿ ಯಾವತ್ತೂ ಮಜ್ಜಿಗೆ ಕುಡಿಯುವ ಅಂಗಡಿಯೊಂದಿದೆ. ಅಂದೂ ಕಾರು ಅಲ್ಲಿಗೆ ತಲುಪುವಾಗ ಘಕ್ಕನೆ ನಿಂತುಬಿಟ್ಟಿತು. ಇಬ್ಬರೂ ಕೆಳಗಿಳಿದು ಮಜ್ಜಿಗೆ ಕುಡಿದು ಮತ್ತೆ ಕಾರೇರಿದೆವು. ಆದರೆ ಗಾಂಧಿ ಮಾತ್ರ ಎಲ್ಲೂ ಕಾಣಿಸಲಿಲ್ಲ.

ರಸ್ತೆ ಒಮ್ಮೆ ಎಡಕ್ಕೆ, ಒಮ್ಮೆ ಬಲಕ್ಕೆ ಹೊರಳುತ್ತಿತ್ತು. ತುಸುದೂರ ತಲುಪುವುದರೊಳಗೆ ತಿರುವೊಂದರಲ್ಲಿ ಕೃಷ್ಣ ಮೂರ್ತಿ ಕಾರಿನ ಬಾಗಿಲು ಸರಿಯಾಗಿ ಹಾಕಿರಲಿಲ್ಲ ಎಂಬುದು ಗೊತ್ತಾಯಿತು. ಕಾರನ್ನು ನಿಧಾನಗೊಳಿಸಿ ಕೃಷ್ಣಮೂರ್ತಿಯ ಕಡೆಗೆ ವಾಲಿ ಬಾಗಿಲನ್ನು ಎಳೆದು ಹಾಕಿದೆ. ಆ ಭರದಲ್ಲಿ ಒಂದು ಕ್ಷಣ ಅವರ ಮಡಿಲಿಗೆ ಕುಸಿದೆ. ಕಾರು ಅಲುಗಾಡಿತು. ಅವರ ಮುಖದಲ್ಲಿ ಗಾಬರಿಯ ಮಿಂಚೊಂದು ಮೂಡಿತು. ಆ ಗಾಬರಿಯಲ್ಲ್ಲಿ ಏನೋ ಒಂದು ಹೊಸತನ! ಒಂದು ಕ್ಷಣ. ಅವರ ಮುಖವನ್ನೇ ನೋಡಿದೆ! ಹೌದು. ನನಗ್ಯಾಕೆ ಇಷ್ಟು ಕಾಲ ಹೊಳೆಯಲಿಲ್ಲ!?

ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದೆ.
ಮೊಬೈಲ್ ಫೋನ್ ಎತ್ತಿಕೊಂಡು ಗಟ್ಟಿಯಾಗಿ ಕಿರಚಿದೆ: ಸಾರ್, ಗಾಂಧಿ ಸಿಕ್ಕ! ಗಾಂಧಿ ಸಿಕ್ಕ!
ಕಾಸರವಳ್ಳಿಯವರಿಗೆ ಗಾಬರಿ ಆಗಿರಬೇಕು: ಏನ್ರಿ, ಏನು ಹೇಳ್ತಾ ಇದ್ದೀರಿ?

ನಾನಂದೆ: ಹೌದು ಸಾರ್. ನೀವು ಹೇಳಿದ್ರಲ್ಲ; ಗಾಂಧಿ ಬೇಕೂಂತ, ಗಾಂಧಿ ಸಿಕ್ಕಿದ.
ಕಾಸರವಳ್ಳಿಯವರು ಕೂರ್ಮನ ಹಾಗೆ ತಲೆ ಹೊರಚಾಚಿ ಯೋಚಿಸಿದರು: ಓ, ಅದಾ ನಾದಾ. ಅದರ ಯೋಚನೆ ಬಿಟ್ಟು ತಿಂಗಳೊಂದಾಯಿತು. ಗಾಂಧಿ ಸಿಗೋಲ್ಲ ಅಂತ ಗೊತ್ತಾಗಿಬಿಡ್ತು. ಅದಕ್ಕೇ ಬಿಟ್ಟುಬಿಟ್ಟೆ.

ನನಗೆ ತಡೆದುಕೊಳ್ಳಲಾಗಲಿಲ್ಲ: ‘ಅಯ್ಯೊ, ದಯವಿಟ್ಟು ಹಾಗೆ ಹೇಳ್ಬೇಡಿ. ನಿಜವಾಗಿ ಗಾಂಧಿ ಸಿಕ್ಕಿದ್ದಾನೆ. ಯಾವುದೇ ಕಾರಣಕ್ಕೂ ಆ ಯೋಜನೆಯನ್ನು ಕೈ ಬಿಡಬೇಡಿ. ಇಂಥ ಗಾಂಧಿ ನಿಮ್ಮ ಕೈಗೆ ಸಿಕ್ಕರೆ ಕನಿಷ್ಠ ಒಂದು ರಾಷ್ಟ್ರಪ್ರಶಸ್ತಿ ಗ್ಯಾರಂಟಿ.
ಅವರಂದರು: ಇಲ್ಲ ನಾದಾ, ನಾನು ನೋಡದ ಗಾಂಧಿಗಳಿಲ್ಲ, ಯಾರೂ ನನ್ನ ಉದ್ದೇಶಿತ ಮಟ್ಟಕ್ಕೆ ಬರಲಿಲ್ಲ. ಹಾಗಾಗಿ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎನಿಸಿ ಕೈಬಿಟ್ಟೆ.
ನಾನೆಂದೆ: ನಿಮ್ಮ ಎಲ್ಲ ಉದ್ದೇಶಗಳನ್ನು ಈಡೇರಿಸಿಕೊಡುವ ಗಾಂಧಿ ನನ್ನ ಕೈಯಲ್ಲಿದ್ದಾನೆ. ಅದೇ ಮೂಗು, ಅದೇ ಬೋಳು ತಲೆ, ಅದೇ ಕೃಶ ದೇಹ, ಅದೇ ಚಯರ್ೆ, ಕನ್ನಡಕವೊಂದು ಕೊಡಿಸಿಬಿಡಿ, ಥೇಟ್ ಗಾಂಧಿಯೆ. ಆಟೆನ್ಬರೋ ಕೂಡ ಇವರಿಗೆ ಸಮನಲ್ಲ, ನೋಡಿಬೇಕಾದ್ರೆ.’
ಕಾಸರವಳ್ಳಿ ಅಂದರು: ಹೌದಾ….

ಅವರ ಸ್ವರದಲ್ಲಿ ತುಸು ಕುತೂಹಲ ಮೂಡಿದ್ದು ನನ್ನ ಗಮನಕ್ಕೆ ಬಂತು. ಕಾದ ಕಬ್ಬಿಣಕ್ಕೆ ಆಗಲೇ ಬಾರಿಸಿ ಬಿಡಬೇಕೆಂದುಕೊಂಡೆ: ‘ನಾಳೇನೇ ಅವರನ್ನು ಕಳುಹಿಸಿಕೊಡುತ್ತೇನೆ.’

ನನ್ನ ಅವಸ್ಥೆ ನೋಡಿ ಕೃಷ್ಣಮೂರ್ತಿಗೆ ಗಾಬರಿ. ‘ಚೆನ್ನಾಗಿದ್ರಲ್ಲ, ಇದೇನಾಯ್ತು ಇವರಿಗೆ?’ ಎಂದುಕೊಂಡು ವಿಚಾರಿಸಿದರು: ನಾದಾ, ನಾದಾ, ಏನಾಯ್ತು. ಯಾಕೆ? ಯಾಕೆ ಈ ಹೊತ್ತಿನಲ್ಲಿ ಗಾಂಧಿಮಾತು? ಮೂಡಬಿದಿರೆಗೆ….

ಅಷ್ಟರಲ್ಲಿ ಕಾಸರವಳ್ಳಿಯವರೆಂದರು: ಒಂದು ಫೋಟೋ ಕಳಿಸಿಕೊಡಿ,
ನಾನೆಂದೆ: ಫೋಟೋ ಕಳಿಸುವ ಪ್ರಶ್ನೆಯಿಲ್ಲ. ನೀವೊಮ್ಮೆ ಅವರನ್ನು ಮುಖತಃ ನೋಡಬೇಕು. ನಾಳೆ ಅವರನ್ನೇ ಕಳಿಸ್ತೇನೆ.
ಕಾಸರವಳ್ಳಿಯವರು ಇಕ್ಕಟ್ಟಿಗೆ ಸಿಲುಕಿದವರಂತೆ ಮಾತನಾಡಿದರು: ಇಲ್ಲ ನಾದಾ. ಸುಮ್ಮನೆ ಇಲ್ಲೀ ತನಕ ಬಂದು ಬರಿಗೈಯಲ್ಲಿ ಹಿಂದಿರುಗುವಾಗ ನನಗೂ ಬೇಸರವಾಗುತ್ತದೆ.
ಕೃಷ್ಣಮೂರ್ತಿ ಕೇಳಿದರು: ಯಾರಬಗ್ಗೆ ಹೇಳ್ತಾ ಇದ್ದೀರಿ?

ನಾನೆಂದೆ; ಅವರು ಬಂದು ಹೋಗುವುದರ ಬಗ್ಗೆ ನೀವು ಚಿಂತೆ ಮಾಡಬೇಡಿ. ಅವರಿಗೆ ಅಲ್ಲಿ ನೂರು ಬೇಳೆಗಳಿರ್ತಾವೆ. ಯಾವುದಾದರೂ ಒಂದು ಬೇಳೆ ಬೇಯಿಸಿಕೊಂಡು ಬರ್ತಾರೆ. ಅವರಂತೂ ವೆಂಕು ಪಣಂಬೂರಿಗೆ ಹೋಗಿ ಬಂದಹಾಗೆ ಹೋಗಿ ಬರುವ ಜನ ಅಲ್ಲ. ಆ ಚಿಂತೆ ನಿಮಗೆ ಬೇಡ. ನಾಳೆ ಮನೇಲಿ ಇರ್ತೀರಿ ತಾನೆ?
ಅಷ್ಟರಲ್ಲಿ ಕೃಷ್ಣಮೂರ್ತಿ ಮತ್ತೆ ಕೇಳಿದರು: ನನ್ನ ಬಗ್ಗೇನಾ?
ನಾನೆಂದೆ: ನಿಮ್ಮ ಬಗ್ಗೇನೆ. ನೀವು ಇಂದು ರಾತ್ರೀನೆ ಬೆಂಗಳೂರಿಗೆ ಹೊರಡ್ಬೇಕು.

ಯಾರು ಯಾರೊಂದಿಗೆ ಏನೆಲ್ಲ ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗದ ಸನ್ನಿವೇಶ. ಕಾರು ರಸ್ತೆ ಬದಿಯಲ್ಲಿ ನಿಂತಿದೆ. ಮೋಹನ ಆಳ್ವರು ಮೂಡಬಿದಿರೆಯಲ್ಲಿ ಕಾಯ್ತಾ ಇದ್ದಾರೆ. ಕೃಷ್ಣಮೂರ್ತಿಯ ಮಗಳ ಸೀಟಿನ ತಲೆಬಿಸಿ ಪರಿಹಾರವಾಗಲಿಲ್ಲ. ಅಷ್ಟರಲ್ಲೆ ಬೆಂಗಳೂರಿಗೆ ಹೋಗುವ ಮಾತು….
ಕೃಷ್ಣಮೂರ್ತಿಗಂತೂ ಮುಗಿಯದ ತಳಮಳ. ಆಳ್ವರಿಗೂ ಗಾಂಧಿಗೂ ಸಂಬಂಧ ಕಲ್ಪಿಸಿ ಮಾತನಾಡಿದ್ದು ತಪ್ಪಾಯಿತೆ? ನಾನ್ಯಾಕೆ ಬೆಂಗಳೂರಿಗೆ ಹೊರಡಬೇಕು? ಗಾಂಧಿ ಸಿಕ್ಕಿದ, ಗಾಂಧಿ ಸಿಕ್ಕಿದ ಅಂತ ಇವರು ಯಾಕೆ ಹೀಗೆ ಕಿರಚಾಡಬೇಕು?

ಕೃಷ್ಣಮೂರ್ತಿಯ ಅದೇ ಗೊಂದಲದ ಗೂಡಿಗೆ ನಾನೊಂದು ಪ್ರಶ್ನೆ ಎಸೆದೆ: ಒಂದುವೇಳೆ ಕಾಸರವಳ್ಳಿಯವರ ಚಿತ್ರದಲ್ಲಿ ನೀವು ಗಾಂಧಿ ಪಾತ್ರ ಮಾಡಬೇಕಾಗಿ ಬಂದ್ರೆ ತಯಾರಿದ್ದೀರಾ?
ಕೃಷ್ಣಮೂರ್ತಿ ನನ್ನ ಮಾತನ್ನು ಸಾರಾ ಸಗಟಾಗಿ ತಳ್ಳಿಹಾಕುವ ಲಕ್ಷಣ ಕಂಡುಬಂತು:’ಎಲ್ಲಿಯ ಕಾಸರವಳ್ಳಿ! ಎಲ್ಲಿಯ ಕೃಷ್ಣಮೂರ್ತಿ! ಎಲ್ಲಿಯ ಗಾಂಧಿ! ಸುಮ್ನಿರಿ ನಾದಾ…!’
ನಾನೆಂದೆ: ನೋಡಿ ಕೃಷ್ಣಮೂರ್ತಿ, ನಾನು ಹೇಳಿದ ತಕ್ಷಣ ನೀವು ಗಾಂಧಿ ಆಗಿಬಿಡ್ತೀರಿ ಅಂತಲ್ಲ. ನಿಜದ ಬದುಕಿನಲ್ಲಿ ನೀವು ಗಾಂಧಿ ಆಗೋದಕ್ಕೆ ಸಾಧ್ಯಾನಾ? ಇಂಥ ಒಂದು ಅವಕಾಶ ಸಿಕ್ಕಿದ್ರೆ ಯಾಕಾಗಬಾರದು? ನಿಮ್ಮನ್ನೊಮ್ಮೆ ಕಾಸರವಳ್ಳಿಯವರು ನೋಡಿದರೆ ಏನ್ತಪ್ಪು? ನಿಮಗೊಂದು ಅಂತಾರಾಷ್ಟ್ರೀಯ ಮನ್ನಣೆ ಲಭಿಸಿದರೆ ಯಾಕೆ ಬೇಡ? ಅದಕ್ಕಾಗಿ ಒಂದಷ್ಟು ಶ್ರಮಪಟ್ಟು ಗಾಂಧಿಯನ್ನು ಆವಾಹಿಸಿಕೊಂಡರೆ ನಿಮ್ಮ ಗಂಟೇನು ಮುಳುಗಿಹೋಗುತ್ತಾ?
ಕೃಷ್ಣಮೂರ್ತಿಯ ಚಿಕ್ಕ ದೇಹ ಇನ್ನಷ್ಟು ಮುದುಡಿಕೊಂಡಿತು. ಯೋಚಿಸಿದರು. ಕೃಷ್ಣಮೂರ್ತಿ ಯೋಚಿಸಿಯೇ ಯೋಚಿಸಿದರು: ಒಂದುವೇಳೆ ನೀನೇ ಗಾಂಧಿ ಆಗಿಬಿಡು ಅಂತ ಅವರು ಹೇಳಿದರೆ ನನ್ನಿಂದ ಸಾಧ್ಯಾನಾ?

‘ಇದಪ್ಪ ಪ್ರಶ್ನೆ.’ ನಾನವರನ್ನು ಸಮಾಧಾನ ಪಡಿಸಿದೆ: ಕಾಸರವಳ್ಳಿ ಅವರ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸೋದು ನಿಮ್ಮ ಬದುಕಿನ ಬಹಳ ಮಹತ್ವದ ಘಟ್ಟ. ಒಂದೊಮ್ಮೆ ನೀವೇ ಹೇಳಿದ್ರಲ್ಲ ನನಗೆ: ‘ಎಣ್ಣೆ ಬಂದಾಗಾ…’. ಈಗ ಎಣ್ಣೆ ಬಂದಿದೆ. ತಲೆಕೊಡಿ. ನಿಮ್ಮ ಹೊರನೋಟಕ್ಕೆ ಅವರ ಸಹಿ ಬಿದ್ದರೆ ಒಳಗಿನದ್ದನ್ನು ಅವರೇ ರಿಪೇರಿ ಮಾಡಿಕೊಳ್ತಾರೆ. ಗಾಂಧಿ ಬೃಹತ್ಪ್ರಮಾಣದಲ್ಲಿ ಮಹತ್ತ್ವದ ವ್ಯಕ್ತಿಯಾದರೆ ಅದರ ಅಣುವಾದರೂ ನೀವು ಆಗಬಹುದಲ್ಲವೆ? ಯಾಕೆ ನಿಮ್ಮನ್ನು ನೀವೇ ನಾಲಾಯಕ್ಕು ಅಂದುಕೊಳ್ಳುತ್ತೀರಿ?
ಕೃಷ್ಣಮೂರ್ತಿ ಹೊರಟದ್ದು ಮೂಡುಬಿದಿರೆಗೆ. ತಲುಪಿದ್ದು ಬೆಂಗಳೂರಿಗೆ. ತಲೆತುಂಬ ಕಾಸರವಳ್ಳಿ…ತಾಯಿಸಾಹೇಬ, ಘಟಶ್ರಾದ್ಧ, ದ್ವೀಪ, ಹಸೀನಾ, ನಾಯಿ ನೆರಳು, ಗುಲಾಬಿ ಟಾಕೀಸು, ಕನಸೆಂಬೋ ಕುದುರೆಯನೇರಿ….ಏರಿ…

ಕೃಷ್ಣಮೂರ್ತಿಯ ಮನಸ್ಸುತುಂಬ ಗಾಂಧಿ. ಗಾಂಧಿಯ ಉಡುಗೆ, ಗಾಂಧಿಯ ನಡಿಗೆ, ಗಾಂಧಿಯ ಕನ್ನಡಕ, ಗಾಂಧಿಯ ಜಪತಪ, ಗಾಂಧಿಯಾಗುವುದು ಹೇಗೆ? ರಘುಪತಿ ರಾಘವ ರಾಜಾರಾಮ್, ಹೇ ರಾಮ್….

ಅಂದು ಶುಕ್ರವಾರ. ಸಹೋದ್ಯೋಗಿ ಮಿತ್ರ ಶಿಕಾರಿಪುರ ಕೃಷ್ಣಮೂರ್ತಿ ನನ್ನನ್ನು ಕಾಯುತ್ತ ನಿಲ್ಲಲಿಲ್ಲ. ಮನಸ್ಸಿನಲ್ಲೆ ಗಾಂಧಿ ಮಂಡಿಗೆ ಮೆಲ್ಲುತ್ತ ಗಿರೀಶ್ ಕಾಸರವಳ್ಳಿಯವರ ಮನೆಯ ಹೊರಬಾಗಿಲು ತಲುಪಿ ಬೆಲ್ಲು ಬಾರಿಸಿದರು. ಬಾಗಿಲು ತೆರೆದ ಕಾಸರವಳ್ಳಿಯವರ ಮಗಳು ಅನನ್ಯಾ ಮೊದಲೇ ದೊಡ್ಡದಾಗಿದ್ದ ಕಣ್ಣುಗಳನ್ನು ಮತ್ತಷ್ಟು ಅರಳಿಸಿ ಗಟ್ಟಿಯಾಗಿ ಉದ್ಗರಿಸಿದಳು: ಅಪ್ಪಾ, ಗಾಂಧಿ ಸಿಕ್ಕಿದ್ರು!

‍ಲೇಖಕರು avadhi

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

15 ಪ್ರತಿಕ್ರಿಯೆಗಳು

    • P Sheshadri

      ನಿಜ,
      ನಾನೂ ಸೆಟ್‌ನಲ್ಲಿ ಇವರನ್ನು ನೋಡಿ ದಂಗಾಗಿದ್ದೆ.
      ಮಾತಾಡಿಸಲೂ ಅಳುಕು.
      ಅಲ್ಲಿಯವರೆಗೆ ಗಾಂಧಿಯನ್ನು ಬರೀ ಬ್ಲಾಕ್‍ ಅಂಡ್ ವೈಟ್‌ನಲ್ಲಿ ನೋಡಿದ್ದ ನನಗೆ ಇಲ್ಲಿ ಈಸ್ಟ್‌ಮನ್‌ಕಲರ್ ಗಾಂಧಿ ಕಂಡ!
      ಆದರೆ ಈ ಗಾಂಧಿ ರಾಷ್ಟ್ರದವರಿಗೆ ಕಾಣಲಿಲ್ಲವಲ್ಲ ನಾದ!
      ಅವರಿಗೆ ಅಟೆನ್‌ಬರೋನೆ ಹೆಚ್ಚಾದ!

      ಪ್ರತಿಕ್ರಿಯೆ
  1. renuka manjunath

    ಹುಡುಕಿದರೋ….ಸಿಕ್ಕರೋ…?! ಒಟ್ಟಿನಲ್ಲಿ ಓದಲು ಸ್ವಾರಸ್ಯವಾಗಿದೆ…! ಒಂದೊಮ್ಮೆ ಈ ಚಿತ್ರಕ್ಕೆ ಪ್ರಶಸ್ತಿ ಬಂದರೆ……ಗಾಂಧಿ ಸಿಕ್ಕ ಬಗೆಗಿನ ಈ ‘ಕತೆ’ ಮೇಕಿಂಗ್ ಆಫ್ ದ ಫಿಲ್ಮ್ ನ ‘ಉಪಕತೆ’….! ಪಾತ್ರದಾರಿಗಳು ಹೇಗಾದರೂ ಸಿಕ್ಕಾರು…….’ನಿಜದ ನಡೆಯ ಗಾಂಧಿ’ ಮತ್ತೊಮ್ಮೆ ಎಲ್ಲಿಯಾದರೂ ಸಿಗುವರೇ…?

    ಪ್ರತಿಕ್ರಿಯೆ
  2. Tejaswini Hegde

    ಓಹ್ ನಮ್ಮ ಕೃಷ್ಣಮೂರ್ತಿ ಅಂಕಲ್ ಗಾಂಧಿ ಆದ ಕಥೆ ಹೀಗಿತ್ತೋ!! 🙂 ಗೊತ್ತೇ ಇರಲಿಲ್ಲ…. ಸ್ವಾರಸ್ಯಕರವಾಗಿದೆ. “ಚಿತ್ರ ನೋಡು ಒಮ್ಮೆ ತೇಜು..” ಅಂದಿದ್ರು… ಆಗೇ ಇಲ್ಲ ಈವರೆಗೂ 🙁 ಬೇಗ ನೋಡ್ತೀನಿ.. 🙂

    ಪ್ರತಿಕ್ರಿಯೆ
  3. G Venkatesha

    Neenasam Samskruthi Shibiradalli naanu E Cinima Nodiddene. Krishnamurthy ravaradu sahajavaada Abhinaya. Kasaravalliravaru nijavaagiyu krishnamurthy ravaralli Gandhiyannu Avaahisiddare. E Ibbarigu haagu NADAravarigu abhinandanegalu.

    ಪ್ರತಿಕ್ರಿಯೆ
  4. malathi S

    ನಾನು ನಿಹಾರಿಕಾ ಬೆಂಗಳೂರು ಅಂತರ್ ರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಕೂರ್ಮಾವತಾರ ನೋಡಿ, ಕನ್ನಡದಲ್ಲಿ ನಾವು ನೋಡಿದ ಅತ್ಯಂತ ಒಳ್ಳೆಯ ಸಿನಿಮಾ, ಅದರ ಬಗ್ಗೆ ವಿಶ್ಲೇಷಣೆ ನಡೆಸಿ 10 ರಲ್ಲಿ 9 ಮಾರ್ಕ್ ಕೊಟ್ಟು..ಮರುದಿನ ಲಿಡೋ ದಲ್ಲಿ ನ ಸಿನಿಮಾ ಸಾಲಿನಲ್ಲಿ ಯಾರು ಯಾರು ಇದ್ದಾರೆಂದು ನೋಡುತ್ತ, ಗಾಂಧಿ ತಾತನನ್ನು ನೋಡಿ, ‘Niha Gandhiji is watching this movie with us today’ ಅಂದಾಗ ಮೊದಲಿಗೆ ಅವಳಿಗೆ ಅರ್ಥವಾಗಲಿಲ್ಲ. Search and find out for yourself ಅಂದೆ. ಆ ಮೇಲೆ ಅವಳಿಗೂ ಅವರು ಗೋಚರವಾಗಿ ನಾವು high five ಕೊಟ್ಟಿದ್ದು ನೆನಪಾಯ್ತು ನಾ ದಾ ಶೆಟ್ಟಿಯವರ ಈ ಬರಹ ಓದಿ.
    ಎಲ್ಲರೂ ನೋಡಲೇ ಬೇಕಾದ ಸಿನಿಮಾ ಕೂರ್ಮಾವತಾರ
    🙂
    ಮಾಲತಿ ಎಸ್

    ಪ್ರತಿಕ್ರಿಯೆ
  5. ಅಭಯ ಸಿಂಹ

    ನನಗೆ ನಾದಾ ಸರ್ ಮಂಗಳೂರಲ್ಲಿ ಕನ್ನಡ ಮಾಸ್ಟರ್ರು. ಕೃಷ್ಣ ಮೂರ್ತಿಗಳು ಸಂಸ್ಕೃತ ಮಾಸ್ಟರ್ರು. ಗಿರೀಶ್ ಸರ್ ಸಿನೆಮಾ ಮಾಡೋದಕ್ಕೆ ಪ್ರೇರಣೆ, ಗುರುಗಳು! ಇವಿಷ್ಟೂ ಮಹಾನ್ ವ್ಯಕ್ತಿಗಳ ಸಮಾಗಮ ಒಂದೇ ಚಿತ್ರದಲ್ಲಿ ಆಗಿದ್ದರಿಂದ ಆ ಸಿನೆಮಾ ಕುರಿತಾದಂತೆ ಒಂದು ಆತ್ಮೀಯತೆ ನನಗೆ. ಕೂರ್ಮಾವತಾರ ಗಿರೀಶ್ ಸರ್ ಚಿತ್ರಗಳಲ್ಲಿ ಒಂದು ತೀರಾ ಭಿನ್ನ ಅನುಭವ ನೀಡಿದ ಚಿತ್ರ ಇದು ನನ್ನ ಮಟ್ಟಿಗೆ.

    ಪ್ರತಿಕ್ರಿಯೆ
  6. Prema

    Namma Mangaloru samskruta mestru cinemage kaalidtiroo bagge Oodi khuShi aaytu. Sir bagge oodi khushi aaytu mate events kaNmunde nadidiro tara barediddare, Chennagide, Dhanyavaada

    ಪ್ರತಿಕ್ರಿಯೆ
  7. Usha Rai

    ಗಾಂಧಿ ಸಿಕ್ಕಿದ ಬಗ್ಗೆ ಸ್ವಾರಸ್ಯವಾಗಿ ಬರೆದಿದ್ದೀರಿ. ನಮ್ಮೂರಿನ ಪರಿಸರದಲ್ಲಿ ಮೂಡಿದ ಬರಹವನ್ನು ಬಹಳ ಆಸಕ್ತಿಯಿಂದ ಓದಿದೆ. ನಾನು ಸಿನಿಮಾ ನೋಡಿಲ್ಲ.ನೋಡಬೇಕೆಂದು ಅನಿಸುತ್ತಿದೆ.

    ಪ್ರತಿಕ್ರಿಯೆ
  8. Siddalingamurthy BG

    ನಮಗೆಲ್ಲ ಈ ಚಿತ್ರ ನೋಡಲು ಯಾವಾಗ ಅವಕಾಶ ಸಿಗುವುದೋ ? ಯಾರಾದರು ಚಿತ್ರ ರಿಲೀಸ್ ಡೇಟ್ ಗೊತ್ತಿದ್ದರೆ ತಿಳಿಸಿ

    ಪ್ರತಿಕ್ರಿಯೆ
  9. ಆರ್.ಜಿ. ಹಳ್ಳಿ ನಾಗರಾಜ

    ಏನು ನಾ…ದ ಅವರೆ, ಇಷ್ಟುದಿನ ಕಪ್ಪೆಚಿಪ್ಪಿನಲ್ಲಿ ಕೂರ್ಮಾವತಾರದ `ಗಾಂಧಿ’ ಹುಡುಕಾಟದ ಕತೆಯನ್ನ ಏಕೆ ಬಚ್ಚಿಟ್ಟಿದ್ದಿರಿ? ಎಷ್ಟೊಂದು ಕುತೂಹಲಕಾರಿ ಘಟನೆ ಇದು… ರಾಜ್ಯ ಪ್ರಶಸ್ತಿ ಬಂದ ನಂತರ ಗಾಂಧಿ ಹುಡುಕಾಟದ ಕತೆಯನ್ನು ಸ್ವಾರಸ್ಯವಾಗಿ ಬರೆದು ದಾಖಲಿಸಿದ್ದೀರಿ…ಇನ್ನು ಮುಂದಿನ ಧಾರಾವಾಹಿ ಗಾಂಧಿ ಪಾತ್ರಧಾರಿ ಕೃಷ್ಣಮೂತಿರ್ ಅವರೇ ಬರೆಯಬೇಕು… ಬರೆಯಿಸಿ, ಅವರ ಕೈಯಿಂದಲೇ..
    -`ಆರ್.ಜಿ’

    ಪ್ರತಿಕ್ರಿಯೆ
  10. suresh j

    nada sir avaru bareyuva shaily mane matu iddante. manassige hattiravaguvante bareyuttare.gandhi sikkidru lekhana super. shooting samayadalli nammannu bengalorige karedukondu hogi gandhiyannu torisiddu mareyuva hagilla. thanks nada sir.

    ಪ್ರತಿಕ್ರಿಯೆ
    • na.damodara shetty

      Aarjii halli mattu suresh.
      naavu malagiddevu. niivu ebbisidiri.gaaandhi haagene. ellara niddeyannuu kedisuttaane.
      thanks.

      ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ PremaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: