ಅಪ್ಪನ ಕಳ್ಳಭಟ್ಟಿ ಪುರಾಣ…

ಸಿ ಎಸ್ ಕರೀಗೌಡ

ಅಪ್ಪ ತನ್ನ ಯೌವ್ವನದ ವಯಸ್ಸಿನಲ್ಲಿ ತನ್ನ ವಾರಗೆಯವರೊಡನೆ ಕಳ್ಳಭಟ್ಟಿ ಕುಡಿಯುತ್ತಿದ್ದರು. ಎಲ್ಲರೂ ಸೇರಿ ಗುಂಪಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದರು. ಊರ ಹೊರಗಿನ ತಿಪ್ಪೆ ಗುಂಡಿಗಳಲ್ಲಿ ಹಾಗೂ ಜಮೀನುಗಳಲ್ಲಿ ಗುಂಡಿ ತೋಡಿ ಮಡಕೆ ಹೂಳುತ್ತಿದ್ದರು. ಹೀಗೆ ಹೂಳಿದ ಮಡಕೆಗೆ ನೀರು, ಅಮೋನಿಯಂ ಸಲ್ಪೇಟ್‍, ಬೆಲ್ಲ, ಕೊಳೆತ ಹಲಸು, ಬಾಳೆ, ಬೇಲ, ಪರಂಗಿ ಇನ್ನಿತರ ಹಣ್ಣುಗಳನ್ನು ಹಾಕುತ್ತಿದ್ದರು.

ಕಳ್ಳಭಟ್ಟಿ ಕಾಯಿಸುವವರು ಬೇಗ ಹುಳಿ ಬರಲಿ ಎಂದು ಸತ್ತ ನಾಯಿ, ಬೆಕ್ಕು, ಹಳೆ ಚಪ್ಪಲಿ ಹಾಕುತ್ತಾರೆಂಬ ಮಾತಿದೆ. ಅಪ್ಪನನ್ನು ಈ ಬಗ್ಗೆ ಒಮ್ಮೆ ಕೇಳಿದಾಗ ಮುಖ ಸಿಂಡರಿಸಿಕೊಂಡನು. “ಕಾಲಿಗೆ ಹಾಕಲು ಚಪ್ಪಲಿ ಇಲ್ಲ. ಕಳ್ಳಭಟ್ಟಿಗೆ ಎಲ್ಲಿಂದ ಬರಬೇಕು’’ ಎಂದರು. ‘ನಾಯಿ, ಬೆಕ್ಕು ಎಂದೆ’. ಕೋಪ ಮೂಗಿನ ತುದಿಯಿಂದ ಹಾರಿತು. “ಐವತ್ತು ವರ್ಷದ ಹಿಂದಿನ ಕತೆಯೆಲ್ಲ ಕೆದಕುತ್ತಾ ಇದೀಯ. ಮಾಡಕೆ ಏನು ಕೆಲಸ ಇಲ್ಲ ನಿಂಗೆ. ಹೋಗಿ ಏನಾದರು ಕೆಲಸ ನೋಡೋಗು’’ಎಂದರು. ನನ್ನ ಪ್ರಶ್ನೆಗೆ ನೇರ ಉತ್ತರ ಸಿಗಲಿಲ್ಲ. ಅಂದರೆ ಕೊಳೆತ ನಾಯಿ, ಬೆಕ್ಕನ್ನು ಕೂಡ ಕಳ್ಳಭಟ್ಟಿಗೆ ಬೇಗ ಹುಳಿ ಬರಲಿ ಎಂದು ಉಪಯೋಗಿಸಿರಬಹುದೇ!

ತಿಪ್ಪೆಯನ್ನು ಆಯ್ಕೆ ಮಾಡಲು ಕಾರಣ ತಿಪ್ಪೆಯ ವಾಸನೆ. ಕಳ್ಳಭಟ್ಟಿ Fermentation ಆದಾಗ ವಾಸನೆ ಬರುವುದನ್ನು ಯಾರೂ ಗಮನಿಸಬಾರದೆಂದು ತಿಪ್ಪೆಯಲ್ಲೇ ಹೂಳುತ್ತಿದ್ದರು. ಹಾಗೆಯೇ ಆ ಮಡಕೆ ಯಾರಿಗೂ ಕಾಣದಂತೆ ತರಗೆಲೆಗಳಿಂದ ಮುಚ್ಚುತ್ತಿದ್ದರು. ಆದರೆ ದಿನಕ್ಕೆರಡು ಬಾರಿ ಕಡ್ಡಿಯಿಂದ ಕಲಕುವುದನ್ನು ಮರೆಯುವಂತಿಲ್ಲ. ಎಂಟು ದಿನ ಕಳೆದ ನಂತರ ಮಡಕೆಯಲ್ಲಿ ಕೊಳೆತ ನೊರೆಭರಿತ ನೀರಿನಲ್ಲಿರುವ ಹಣ್ಣಿನ ಸಿಪ್ಪೆ, ನಾಯಿ ಬೆಕ್ಕಿನ ಪಳೆಯುಳಿಕೆ, ಹಾಗೂ ಚಪ್ಪಲಿಯನ್ನು ಬೇರ್ಪಡಿಸುತ್ತಾರೆ. ಒಲೆ ಮೇಲೆ ಕೊಳೆತ ನೀರಿನ ಮಡಕೆ ಇಡುತ್ತಾರೆ. ಅದರ ಮೇಲೆ ಸಣ್ಣ ರಂಧ್ರವಿರುವ ಮಡಕೆ ಇದ್ದು, ಅದರ ಮೇಲೆ ಮತ್ತೊಂದು ಮಡಕೆ. ಮೂರು ಮಡಕೆಗಳಿಗೆ ಸಗಣಿ ಅಥವಾ ಹಸಿ ಮಣ್ಣನ್ನು ಮೆತ್ತುತ್ತಾರೆ.

ಎರಡನೆ ಮಡಕೆಯ ರಂಧ್ರಕ್ಕೆ ಬಿದಿರಿನ ಅಥವಾ ಪರಂಗಿ ಗಿಡದ ಎಲೆಯ ಪೈಪನ್ನು ಅಳವಡಿಸಿ, ರಂಧ್ರದಿಂದ ಆವಿಯಾಗುವಂತೆ ಸಗಣಿ ಮೆತ್ತುತ್ತಾರೆ. ಕೆಳಗಿನಿಂದ ಸೌದೆ ಹಾಕಿ ಚನ್ನಾಗಿ ಕಾಯಿಸುತ್ತಾರೆ. ಕಾದ ಕೊಳೆತ ನೀರಿನ ಆವಿ ಎರಡನೇ ಮಡಕೆಗೆ ಬಂದಾಗ, ಮೇಲಿನ ಮಡಕೆಗೆ ಹಾಕಿರುವ ತಣ್ಣೀರಿನಿಂದ ಘನೀಕರಣಗೊಳ್ಳುತ್ತದೆ. ಬಿದಿರು ಅಥವಾ ಪರಂಗಿ ಪೈಪಿನಿಂದ ಮತ್ತೊಂದು ಮಡಕೆಯಲ್ಲಿ ಸಂಗ್ರಹವಾಗುತ್ತದೆ. ಮೇಲಿನ ಮಡಕೆಯಲ್ಲಿ ನೀರು ಬಿಸಿಯಾದಾಗ ಬದಲಾಯಿಸಿ ತಣ್ಣೀರು ಹಾಕುತ್ತಿರಬೇಕು. ಭಟ್ಟಿ ಎಂಬುದು ಆಗಿನ ಕಾಲದ Distillation. ಏನೇ ಆದರೂ ಈ ತಂತ್ರಜ್ಞಾನ ಎಷ್ಟು ಸುಲಭದ ಮಾತಲ್ಲ.

ಈ ತಂತ್ರಜ್ಞಾನವು ಮುಂದುವರಿದ ನಾಗರೀಕತೆಯಿಂದಲೇ ಬಂದಿರಬಹುದು. ಅದರಲ್ಲಿಯೂ ಸುಗಂಧ ದ್ರವ್ಯಗಳ ಭಟ್ಟಿ. ಮುಖ್ಯವಾಗಿ ಮಳೆ ಬಂದಾಗ ಬರುವ ಮಣ್ಣಿನ ವಾಸನೆಯ ದ್ರವ್ಯವನ್ನು ನಮ್ಮ ಪೂರ್ವಜರು ತಯಾರಿಸುತ್ತಿದ್ದುದು ಅತ್ಯಂತ ವಿಸ್ಮಯವೇ ಸರಿ. ಈ ಬಗ್ಗೆ ಇತಿಹಾಸಕಾರರು ಹೆಚ್ಚಿನ ಬೆಳಕನ್ನು ಚೆಲ್ಲಬೇಕಾಗಿರುತ್ತದೆ. ಮಡಕೆಯಲ್ಲಿ ಸಂಗ್ರಹವಾದ ಆವಿ ಅಥವಾ ಬಿಸಿ ಭಟ್ಟಿ ತಣ್ಣಗಾಗಲು ಮಡಕೆಯ ಮೇಲೆ ಆಗಾಗ್ಗೆ ತಣ್ಣೀರು ಸುರಿಯುತ್ತಿರಬೇಕು. ಮಡಕೆ, ಕೊಡ ಅಥವಾ ತಂಬಿಗೆಯಲ್ಲಿ ಸಂಗ್ರಹವಾಗುವ ಈ ದ್ರವವೇ ಕಳ್ಳಭಟ್ಟಿ.

ತುಂಬಾ ಸ್ಟ್ರಾಂಗ್‍ ಬೇಕೆನ್ನುವವರು ಅದನ್ನೇ ಕುಡಿಯುತ್ತಿದ್ದರು. ಅಷ್ಟೊಂದು ಕಿಕ್ ಬೇಡ ಎನ್ನುವವರು ನೀರು ಬೆರೆಸಿ ಕುಡಿಯುತ್ತಿದ್ದರು. ಬಹುತೇಕ ಎಲ್ಲರೂ ಸ್ಟ್ರಾಂಗ್ಪ್ರಿ ಯರೇ. ಕಳ್ಳಭಟ್ಟಿ ಕಾಯಿಸಲು ಪ್ರಾರಂಭಿಸಿ, ಕಳ್ಳಭಟ್ಟಿ ತಯಾರಾಗುವವರೆಗೂ ಎಲ್ಲರ ಮುಖಗಳು ಭಯಮಿಶ್ರಿತವಾಗಿರುತ್ತಿದ್ದವು. ಕುಡಿದು ಮುಗಿಸುವವರೆಗೆ ಭಯವೇ? ಯಾರಾದರೂ ನೋಡಿ ಪೊಲೀಸರಿಗೆ ದೂರು ಕೊಟ್ಟಾರೆಂಬ ಆತಂಕ. ಹೀಗಾಗಿ ತಯಾರಾದ ಕ್ಷಣಮಾತ್ರದಲ್ಲಿ ಅದರ ಯಾವುದೇ ಅವಶೇಷವೂ ಕಾಣದಂತೆ ಕುಡಿತದ ಕಾರ್ಯನಿರ್ವಹಿಸುತ್ತಿದ್ದರು. ಕುಡಿದವರ ಬಾಯಿ ವಾಸನೆ ಮತ್ತು ಆಯತಪ್ಪಿದ ಓಲಾಟದಿಂದ ಮಾತ್ರ ಕಳ್ಳಭಟ್ಟಿ ಕುಡಿದಿದ್ದಾರೆಂದು ಗೊತ್ತಾಗುತ್ತಿತ್ತು. ಒಮ್ಮೊಮ್ಮೆ ಇನ್ನೇನು ಕುಡಿಯಬೇಕು ಎನ್ನುವಷ್ಟರಲ್ಲಿ ಪೊಲೀಸರು ಬಂದಾರೆಂಬ ಭಯದಿಂದ, ಮಡಕೆಗಳನ್ನು ಪೊದೆ ಕಡೆ ಬಿಸಾಡಿ ಓಡಿದ್ದು ಇದೆ. ಕಳ್ಳಭಟ್ಟಿ ಕುಡಿದವರು ಯಾರೂ ಭಯದಿಂದ ಗಲಾಟೆ ಮಾಡುತ್ತಿರಲಿಲ್ಲ.

ಹಳ್ಳಿಗಳಲ್ಲಿ ಕಳ್ಳಭಟ್ಟಿಯನ್ನು ಯಾರಿಗೂ ಗೊತ್ತಾಗದಂತೆ ಮನೆಗಳಲ್ಲಿ ತಯಾರಿಸುವ ಜಾಲ ಇಂದೂ ಇದೆ. ಇದು ಈಗ ಮನೆಯಲ್ಲೇ ಕುಕ್ಕರ್ನಲ್ಲಿ ತಯಾರಿಸುವಷ್ಟು ಆಧುನಿಕರಣಗೊಂಡಿದೆ. ಇಪ್ಪತ್ತು ಲೀಟರ್ಗೆಓ ಐದು ಕೆಜಿ ಬೆಲ್ಲ, ಅಮೋನಿಯಂ ಸಲ್ಫೇಟ್, ಹಣ್ಣುಗಳನ್ನು ಸೇರಿಸಿ ಪ್ರತಿದಿನ ಎರಡು ಬಾರಿ ಬೆಳಿಗ್ಗೆ ಮತ್ತು ಸಂಜೆ ಕಲೆಸಿದರೆ ಎಂಟು ದಿನದ ನಂತರ ಕೊಳೆತ ನೀರನ್ನು ಕುಕ್ಕರ್ನಹಲ್ಲಿ ಹಾಕಿ ಕಾಯಿಸಿ, ಕುಕ್ಕರ್‍ ಮೇಲೆ ವಿಜಲ್ ಬದಲು ಒಂದು ಪೈಪ್‍ ಅಳವಡಿಸಿ ಆವಿಯಾದ ಮದ್ಯವನ್ನು ಒಂದು ಪ್ರತ್ಯೇಕ ಬಾಟಲಿಯಲ್ಲಿ ಸಂಗ್ರಹಿಸುತ್ತಾರೆ.

ಕ್ರಮೇಣ ಈ ಬಾಬ್ತಿನ ಮೇಲೆ ಸರ್ಕಾರದ ಕಣ್ಣು ಬಿತ್ತು. ಆದಾಯದ ಮೂಲವಾಯಿತು. ಸರ್ಕಾರ ಹೆಂಡ ಮಾರಾಟವನ್ನು ತಾಲ್ಲೂಕುವಾರು ಗುತ್ತಿಗೆ ನೀಡಿತು. ಗುತ್ತಿಗೆ ಪಡೆದವರು ಹಳ್ಳಿ ಹಳ್ಳಿಗಳಲ್ಲಿ ಹೆಂಡ ಶರಾಬು ಅಂಗಡಿ ತೆರೆದರು. ಕದ್ದುಮುಚ್ಚಿ ನಡೆಯುತ್ತಿದ್ದ ಚಟಕ್ಕೆ ಸಾರ್ವಜನಿಕ ಮಾನ್ಯತೆ ಸಿಕ್ಕಂತಾಯಿತು. ಮಧ್ಯ ಗುತ್ತಿಗೆದಾರರು ನಮ್ಮೂರಿನ ಪಕ್ಕದ ಹೋಬಳಿ ಕೇಂದ್ರದಲ್ಲಿ ಅಂಗಡಿ ತೆರೆದರು. ಕಳ್ಳಭಟ್ಟಿ ತಯಾರಿಸುತ್ತಿದ್ದವರು, ಕುಡಿಯುತ್ತಿದ್ದವರು ಪೊಲೀಸರ ಭಯದಿಂದ ಬದುಕುತ್ತಿದ್ದವರೆಲ್ಲ ಸಾರಾಯಿಯತ್ತ ಸರಾಗವಾಗಿ ಹೊರಳಿದರು. ಕಡಿಮೆ ಖರ್ಚಿನಲ್ಲಿ ಮುಗಿಯುತ್ತಿದ್ದ ಈ ಚಟ ಈಗ ಸಂಪೂರ್ಣ ದುಡಿಮೆಯ ಜೇಬಿಗೆ ಕತ್ತರಿ ಬೀಳಲಾರಂಭಿಸಿತು.

ನಾನು ಶಾಲೆಗೆ ಹೋಗುವಾಗ ಸೇಂದಿ ಅಂಗಡಿ ಗಮನಿಸುತ್ತಿದ್ದೆ. ಮೊದಲಿದ್ದ ಹೆಂಡದ ಬದಲು ಸಾರಾಯಿ ಅಂಗಡಿ ಬಂದವು. ಇವು ಊರು ಹೊರಗೆ ಇರುತ್ತಿದ್ದವು. ಸಾರಾಯಿ ಅಂಗಡಿಯಲ್ಲಿ ಸಾರಾಯಿ ಮಾರುವವನು ಒಂದು ರೀತಿಯ ಮಹಾರಾಜನಂತೆ. ಅಟ್ಟಣಿಗೆಯ ಅಂಗಡಿಯ ಮೇಲೆ ಕುಳಿತು ಕ್ಯಾನಿನಿಂದ ಗ್ಲಾಸಿಗೆ ಸಾರಾಯಿ ಸುರಿದು ಕೊಡುತ್ತಿದ್ದನು. ಜನ ನಿಂತುಕೊಂಡೆ ಕುಡಿದು ಟವಲ್ನಿಂತದ ಬಾಯಿ ಒರಸಿಕೊಂಡು, ಒಂದೆರಡು ಕಾಳು ಉಪ್ಪುಿ, ಉಪ್ಪಿನಕಾಯಿ ನಂಜಿಕೊಂಡು ಬಾಯಿ ಚಪ್ಪರಿಸುತ್ತ ಹೊರಡುತ್ತಿದ್ದರು. 80ರ ದಶಕದಲ್ಲಿ ನಮ್ಮೂರಿಗೆ ಒಂದು ವೈನ್ ಶಾಪ್ ಬಂತು. ಈಗ ಎರಡು ವೈನ್ ಶಾಪ್ ಇವೆ. ಒಂದು ಎಂ.ಆರ್‍.ಪಿ ಶಾಪ್ ಅಲ್ಲದೇ ಮೂರು ಬಾರ್ ಅಂಡ್ ರೆಸ್ಟೋರೆಂಟ್ಗಳಿವೆ. ಇದರ ಜೊತೆಗೆ ಹಳ್ಳಿಯಲ್ಲಿನ ಪೆಟ್ಟಿ ಅಂಗಡಿಯಲ್ಲಿ ಎಲ್ಲವೂ ಸಿಗುತ್ತವೆ.

ನಮ್ಮೂರಿನಲ್ಲಿ ಕಳ್ಳಭಟ್ಟಿ ಕುಡಿಯುತ್ತಿದ್ದವರು ಬೆರಳಿಕೆ ಮಂದಿ, ಹೆಂಡ, ಸೇಂದಿ ಬಂದಾಗ ವಯಸ್ಕರು, ಹಿರಿಯರು ಕುಡಿಯುತ್ತಿದ್ದರು. ಊರಿನಲ್ಲಿ ಕುಡಿಯುವವರು ಯಾರೆಂಬುದು ಎಲ್ಲರಿಗೂ ಗೊತ್ತಿತ್ತು. ಈಗ ನಮ್ಮೂರಿನ ಕುಡುಕರಲ್ಲಿ ವಯಸ್ಸಿನ ವ್ಯತ್ಯಾಸವಿಲ್ಲ. ಜಾತಿ-ಭೇದವಿಲ್ಲ. ಪುಣ್ಯದ ವಿಷಯವೆಂದರೆ ಹೆಂಗಸರು ಕುಡುಕರಾಗಿರುವ ಬಗ್ಗೆ ದೂರುಗಳಿಲ್ಲ. ಗಂಡಸರು ತಮ್ಮ ದುಡಿಮೆಯ ಜೊತೆಗೆ ಹೆಂಡತಿ, ತಾಯಂದಿರ ದುಡಿಮೆ ಹಣವನ್ನು ಕುಡಿತಕ್ಕೆ ಖರ್ಚು ಮಾಡುತ್ತಾರೆ. ಹಣ ಕೊಡುವುದಿಲ್ಲವೆಂದರೂ ಗಲಾಟೆ ಮಾಡುತ್ತಾರೆ. ಕೊಟ್ಟರೆ ಕುಡಿದ ಮೇಲೂ ಗಲಾಟೆ. ಕುಡುಕರಿರುವ ಸಂಸಾರಗಳಲ್ಲಿ ಮಹಿಳೆಯರ ಬದುಕು ನಿತ್ಯವೂ ನರಕ.

ಒಮ್ಮೆ ಸೈಕಲ್ನುಲ್ಲಿ ಮಗುವಿನೊಡನೆ ಬಂದ ಒಬ್ಬ ವ್ಯಕ್ತಿ ವೈನ್‍ ಶಾಪ್ ಮುಂದೆ ಸೈಕಲ್ ನಿಲ್ಲಿಸಿ, ಒಂದು ಪೆಗ್ ಕುಡಿದ. ಸೈಕಲ್ ಮೇಲೆ ಕೂತಿದ್ದ ಆರೇಳು ವರ್ಷದ ಹುಡುಗ ‘ಅಪ್ಪಾ ನನಗೂ ಕೊಡಿಸಪ್ಪ’ ಎಂದು ಕೇಳುತ್ತಿರುವುದನ್ನು ನೋಡಿ,ನನ್ನ ಕರುಳು ಚುರಕ್ ಅಂದಿತು. ಕಣ್ಣಾಲಿಗಳು ನೀರಾದವು.

ಕುಡಿದಾಗ ಮನಸ್ಸು ಬೆತ್ತಲೆ ಅಂತೆ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ನಮ್ಮೂರಿನವನೊಬ್ಬ ಕುಡಿದು ಟೈಟಾಗಿ ರಸ್ತೆಗಳಲ್ಲಿ ಬಿದ್ದು ಒದ್ದಾಡುತ್ತಿದ್ದ, ಮಣ್ಣು ತಿನ್ನುತ್ತಿದ್ದ. ನಮಗೆಲ್ಲಾ ಆಶ್ಚರ್ಯ. ಕುಡಿದರೆ ಮಣ್ಣನ್ನು ಜೀರ್ಣಿಸಿಕೊಳ್ಳಬಹುದೆಂದು. ಆದರೆ ಆತ ಬಹು ಬೇಗ ಸತ್ತುಹೋದ. ಅವನ ಹೆಂಡತಿ ಕೂಲಿನಾಲಿ ಮಾಡಿ, ಇದ್ದ ತನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಮದುವೆ ಮಾಡಿದರು.

ನಾನು ಮಿಡ್ಲ್ ಸ್ಕೂಲ್ ನಲ್ಲಿದ್ದಾಗ ಒಬ್ಬ ಜವಾನ ಬಹಳ ಕುಡಿಯುತ್ತಿದ್ದ. ಸಂಬಳ ಬಂದ ಒಂದು ವಾರ ಕೆಲಸಕ್ಕೆ ಬರುತ್ತಿರಲಿಲ್ಲ. ಅವರ ಮಗ ಟಿಸಿಹೆಚ್ ಮಾಡಿ, ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅಪ್ಪನ ಬಗ್ಗೆ ಅಸಹ್ಯ ಪಡುತ್ತಿದ್ದರು. ಎಲ್ಲರ ಎದುರು ಅಪ್ಪ ತನ್ನ ಮಾನ ಕಳೆಯುತ್ತಿದ್ದಾರೆಂದು. ದುರಾದೃಷ್ಟವೆಂದರೆ, ಎರಡೇ ವರ್ಷದಲ್ಲಿ ಅಪ್ಪನಿಗಿಂತ ದೊಡ್ಡ ಕುಡುಕರಾದರು. ರಸ್ತೆಯಲ್ಲಿ ಬಿದ್ದು ಒದ್ದಾಡಿದರು.

ನಮ್ಮ ಮನೆಯ ಪಕ್ಕದವನದೂ ಒಂದು ರೀತಿಯ ಇದೇ ಕಥೆ. ಕುಡಿದ ದಿನ ತನ್ನ ಮನೆಯವರ ಮೇಲೆ ಜಗಳ ಕಟ್ಟಿಟ್ಟ ಬುತ್ತಿ. ಜೋರಾಗಿ ಅಶ್ಲೀಲವಾಗಿ ಬೈಯುವುದು, ನಮಗೆಲ್ಲಾ ಮನರಂಜನೆ. ಬೈಸಿಕೊಂಡವರಿಗೆ ಪ್ರಾಣ ಸಂಕಟ. ನಶೆ ಇಳಿದ ನಂತರ ಏನೂ ಆಗಿಯೇ ಇಲ್ಲವೆಂಬಂತೆ ಆತನ ವರ್ತನೆಯಿತ್ತು. ದೇವರಂಥ ಮನುಷ್ಯ! ಯಾರಿಗಾದರೂ ಮತ್ತೊಬ್ಬರ ಮೇಲೆ ಸಿಟ್ಟು ಇದ್ದು, ಬೈಯಲೂ ಧೈರ್ಯವಿಲ್ಲದವರು ಕುಡಿದು ಬೈದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ನಮ್ಮೂರಿನಲ್ಲಿ ಕುಡಿತದ ಅಭ್ಯಾಸವಿರುವ 40 ವರ್ಷದವರು ಮತ್ತು ಮಧ್ಯ ವಯಸ್ಕರು ರೋಗಿಷ್ಠ ವೃದ್ಧರಂತೆ ಕಾಣುತ್ತಾರೆ. ಮುಖದಲ್ಲಿ ಕಾಂತಿ ಇಲ್ಲ. ಶರೀರದಲ್ಲಿ ಶಕ್ತಿ ಇಲ್ಲ. ಕೃಷಿ ಮಾಡಲು ತ್ರಾಣವಿಲ್ಲದಂತಾಗಿದ್ದಾರೆ.

ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮಧ್ಯದಂಗಡಿಗಳು ಸೇರಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದವು. ಮಧ್ಯದ ಅಂಗಡಿ ತೆರೆಯುವಂತೆ ಬಹಳ ಒತ್ತಡವಿತ್ತು. ತೆರೆದಾಗ ಕಿಲೋಮೀಟರ್ಗಟ್ಟಲೇ ಸರದಿಯಲ್ಲಿ ನಿಂತು, ಮಧ್ಯ ಖರೀದಿಸಿ ಮಧ್ಯಪ್ರಿಯರು ತಂಪಾದರು!

ಒಂದು ದಿನ ರಾತ್ರಿ ಊಟ ಮಾಡಿ ಮೊಬೈಲ್ನಲ್ಲಿ ಮಾತನಾಡುತ್ತಾ ಊರ ಹೊರಗಿನ ಬಯಲಿನತ್ತ ಹೊರಟೆ. ಕತ್ತಲಿನಲ್ಲಿ ಕೊಳ್ಳಿ ದೆವ್ವ. ಅದು ಮೇಲೆ ಹೋದಾಗ ಪ್ರಕಾಶಮಾನ, ಒಂದೈದು ಸೆಕೆಂಡ್ಗಳ ಕಳೆದ ನಂತರ ಪ್ರಕಾಶಿಸುವುದು ಕಡಿಮೆ. ಐದು ಅಡಿ ವೃತ್ತದಲ್ಲೇ ಓಡಾಟ. ಹಿಂದೆ ಓಡಿ ಹೋಗೋಣ ಎಂದುಕೊಂಡೆ . ಪರಿಚಿತ ದನಿಗಳು ಕೇಳಿಸಿದವು. ದೈರ್ಯ ತೆಗೆದುಕೊಂಡು ಕೊಳ್ಳಿ ದೆವ್ವದ ಕಡೆ ಹೊರಟೆ. ಒಂದು ಕೈ ನೋಡೋಣ ಅಂತ. ಮೊಬೈಲ್ ಟಾರ್ಚ್ ಆನ್ ಮಾಡಿ ಹತ್ತಿರ ಹೋದೆ. ದೆವ್ವ ಕೂಡ ಮೇಲಕ್ಕೆದ್ದಿತು. ಅಣ್ಣಾ ಎಂದು ಎರಡಕ್ಕಿಂತ ಹೆಚ್ಚು ದನಿಗಳು ಕೇಳಿದವು. ಎರಡಕ್ಕಿಂತ ಹೆಚ್ಚು ದೆವ್ವಗಳಿದ್ದಾವೆಯೇ? ಬೆಂಕಿ ಹಾರಿತು. ಯಾರದು? ಅಂದೆ.

ನಾವಣ್ಣ, ಸುಮ್ನೆ ಮಾತನಾಡ್ತ ಕೂತ್ಕೊಂಡಿದ್ದೀವಿ ಎಂದು ನಾಲ್ಕು ಜನ ಜಾಗ ಖಾಲಿ ಮಾಡಿದರು. ಎಲ್ಲ ಪರಿಚಿತ ಮುಖಗಳು. ಈಗ ಹಳ್ಳಿಗಳಲ್ಲಿ ಸಂಜೆ ಕತ್ತಲಾದಂತೆ ಬಯಲಿನಲ್ಲಿ, ತೋಟಗಳ ಬದುಗಳ ಮೇಲೆ ಕುಳಿತು ಯುವಕರು ಕುಡಿಯುವುದು ಸಾಮಾನ್ಯವಾಗಿದೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕೇಕ್ ಕಟ್ ಮಾಡಿ ಹುಟ್ಟಿದಬ್ಬ ಆಚರಣೆ ಮಾಡುವುದು ಕೂಡ. ಧೂಮಪಾನ ಮತ್ತು ಮಧ್ಯಪಾನ ಅಣ್ಣ ತಮ್ಮಂದಿರಿದ್ದಂತೆ. ಅಂದು ಯುವಕರು ಕುಡಿದು ಸಿಗರೇಟ್ ಸೇದುತ್ತಿದ್ದರು.

ಒಂದೇ ಸಿಗರೇಟನ್ನು ನಾಲ್ಕೈದು ಜನ ಹಂಚಿಕೊಂಡು ಸೇದುತ್ತಿದ್ದರು. ಸೇದುವವನು ಸಿಗರೇಟನ್ನು ಬಾಯಲ್ಲಿಟ್ಟು, ಶ್ವಾಸಕೋಶಕ್ಕೆ ಎಳೆದುಕೊಂಡಾಗ, ತುದಿಯ ಬೆಂಕಿ ಹೆಚ್ಚು ಕಾಂತಿಯಿಂದ ಕಂಗೊಳಿಸುತ್ತಿತ್ತು. ಬಾಯಿಂದ ಹೊರ ತೆಗೆದಾಗ ಬೆಂಕಿಯ ಪ್ರಖರತೆ ಕಡಿಮೆಯಾಗುತ್ತಿತ್ತು. ಒಂದೇ ಸಿಗರೇಟ್ ನಾಲ್ಕೈದು ತುಟಿಗಳಲ್ಲಿ ಕತ್ತಲಿನಲ್ಲಿ ಸಂಚಾರ ಮಾಡುತ್ತಿದ್ದದ್ದು ದೂರದಿಂದ ನೋಡಿದ ನನಗೆ ದೆವ್ವ ಗಳಿಗೆಗೊಮ್ಮೆ ಜೋರಾಗಿ ಪ್ರಕಾಶಿಸಿ ಮತ್ತೆ ತಣ್ಣಗಾಗಿ ಅತ್ತಿತ್ತ ಓಡಾಡುತ್ತಿದೆ ಎಂದು ಭ್ರಮೆ ಉಂಟು ಮಾಡಿದ್ದು ಸಹಜವಾಗಿತ್ತು.

ಒಮ್ಮೆ ಅಪ್ಪ ನಮ್ಮ ಮನೆಗೆ ಬಂದಾಗ ಸಂಬಂಧಿಕರ ಮನೆಗೆ ಹೋಗಿದ್ದರು. ಅವರು ಅಪ್ಪನಿಗೆ ಕುಡಿಯುವ ವ್ಯವಸ್ಥೆ ಮಾಡಿದರು. ಡೈನಿಂಗ್ ಟೇಬಲ್ ಹತ್ತಿರ ಕೂರಿಸಿ ಒಂದು ಗ್ಲಾಸ್ಗೆಅ ಮಧ್ಯ ಸುರಿದು, ನಂಜಿಕೊಳ್ಳಲು ಚಿಪ್ಸ್‍ ಅನ್ನು ಪ್ಲೇಟಿಗೆ ಹಾಕಲು ಪಕ್ಕಕ್ಕೆ ವಾಲಿದರು. ತಿರುಗಿ ನೋಡ್ತಾರೆ ಗ್ಲಾಸ್ ಖಾಲಿ! ‘ಓ ನಾನು ಗ್ಲಾಸ್ಗೆಮ ಮಧ್ಯವನ್ನೇ ಹಾಕಿಲ್ಲವೇನೋ’ ಅಂದುಕೊಂಡು ಅವರು ಮತ್ತೆ ಬಾಟಲಿಯಿಂದ ಮಧ್ಯ ಹಾಗೂ ನೀರು ಸುರಿದು ಒಳಗೆ ಹೋಗಿ ಬರುವಷ್ಟರಲ್ಲಿ ಮತ್ತೆ ಗ್ಲಾಸ್ ಖಾಲಿ! ಅವರಿಗೆ ಆಶ್ಚರ್ಯ. ಎರಡೇ ನಿಮಿಷಕ್ಕೆ ಎರಡು ಗ್ಲಾಸ್ ಖಾಲಿ! ‘ಮಧ್ಯವನ್ನು ಬೇಗ ಕುಡಿಯಬಾರದು. ಕಾಫಿ, ಟೀ ಕುಡಿದಂತೆ ನಿಧಾನವಾಗಿ ಸಿಪ್ ಲೆಕ್ಕದಲ್ಲಿ ಕುಡಿಯಬೇಕೆಂದರು.’ ಅಪ್ಪನಿಗೆ ಗುಟುಕು ಲೆಕ್ಕದಲ್ಲಿ ಕುಡಿದು ಅಭ್ಯಾಸವಿಲ್ಲ. ಅದೇನಿದ್ದರೂ ಒಂದೇ ಬಾರಿಗೆ ಗೊಟಕ್ಕನೆ ಕುಡಿದು ಅಭ್ಯಾಸ.
ಗೊಟಕ್ಕನೆ ಕುಡಿಯುವುದಕ್ಕೆ ಒಂದು ಚಾರಿತ್ರಿಕ ಕಾರಣವಿದೆ.

ಗ್ರಾಮೀಣ ಪ್ರದೇಶದ ಬಹುಪಾಲು ವೃದ್ಧರಿಗೆ ಗೊಟಕ್ಕನೆ ಕುಡಿದೇ ಅಭ್ಯಾಸ. ಇವರೆಲ್ಲ 50 ವರ್ಷಗಳ ಹಿಂದೆ ಕದ್ದು ಮುಚ್ಚಿ ಕಳ್ಳಭಟ್ಟಿ ಕುಡಿಯುತ್ತಿದ್ದವರು. ಯಾರಾದರೂ ನೋಡಿಯಾರು, ಪೊಲೀಸರು ಬಂದಾರೆಂಬ ಭಯದಿಂದ ಕಳ್ಳಭಟ್ಟಿ ತಯಾರಾದ ಕ್ಷಣಮಾತ್ರದಲ್ಲಿ ಕುಡಿದು ಖಾಲಿ ಮಾಡುತ್ತಿದ್ದರು. ಹೆಂಡ ಮತ್ತು ಸಾರಾಯಿ ಅಂಗಡಿಗಳಲ್ಲಿ ಟೇಬಲ್ಗಷಳಲ್ಲಿ ಕುಳಿತು ಕುಡಿಯುವ ವ್ಯವಸ್ಥೆ ಇರಲಿಲ್ಲ. ಇಲ್ಲೂ ಕೂಡ ನಿಂತುಕೊಂಡೇ ಕುಡಿದು ಬೇಗ ಜಾಗ ಖಾಲಿ ಮಾಡುವ ಧಾವಂತ. ಈ ಅಭ್ಯಾಸ ಬಲದಿಂದ ಪೆಗ್ ಆಗಲೀ, ಪಿಚ್ಚರ್ ಆಗಲೀ ಒಂದೇ ಗುಟುಕಿಗೆ ಗೊಟಕ್ಕನೆ ಕುಡಿದು ಮುಗಿಸುವ ಅಭ್ಯಾಸ.

ಒಮ್ಮೆ ಅಪ್ಪನನ್ನು ಕೇಳಿದೆ. ಕಳ್ಳಭಟ್ಟಿ ಸರಿಯೊ? ಈಗ ಸರ್ಕಾರ ಮಾರಾಟ ಮಾಡುತ್ತಿರುವ ಮಧ್ಯ ಸರಿಯೊ ಎಂದು. ಎರಡು ನಿಮಿಷ ಮೌನ. ನಂತರ ಹೇಳಿದರು. ಕಳ್ಳಭಟ್ಟಿಯಲ್ಲಿ ಒಗ್ಗ಼ಟ್ಟಿನ ರೋಚಕತೆ, ಸಾಹಸ, ಹೋರಾಟ ಇತ್ತು. ಮನಸ್ಸಿನ ದುಗುಡಗಳೆಲ್ಲವನ್ನೂ ಹೊರ ಹಾಕುವ ಸಾಂಘಿಕ ಪ್ರಯತ್ನವಿತ್ತು. ಕಳ್ಳಭಟ್ಟಿ ಒಂದು ರೀತಿ ಮನೆ ಊಟವಾದರೆ, ಸರ್ಕಾರದ ಮಧ್ಯ ಹೋಟೆಲ್‍ ಊಟವಿದ್ದಂತೆ ಎಂದು ಮುಗುಳುನಕ್ಕರು.

‍ಲೇಖಕರು Admin

June 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Kotresh Arsikere

    ಚೆಂದದ ಬರಹ.ಧನ್ಯವಾದಗಳು ಲೇಖಕರಿಗೆ

    ಪ್ರತಿಕ್ರಿಯೆ
    • km vasundhara

      ಗ್ರಾಮ್ಯ ಬದುಕಿನ ಯಥಾವತ್ ದಾಖಲೆಯಾಗಿರುವ ಈ ಬರಹ ಹೊಸ ಪೀಳಿಗೆಗೆ ಒಂದು ರೀತಿಯಲ್ಲಿ ರೋಚಕ ಕಥಾನಕವಾಗಿಯೂ ಬೇರೊಂದು ಲೋಕದ ಬಗ್ಗೆ ಮಾಹಿತಿಪೂರ್ಣವಾಗಿರುವ ವರದಿಯಾಗಿಯೂ ವಿಶಿಷ್ಟ ಎನಿಸುತ್ತದೆ. ಲೇಖಕರಿಗೆ ಅಭಿನಂದನೆಗಳು

      ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Kotresh ArsikereCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: