ಅನಾಮಿಕಾ @ ಹ್ಯಾಂಡ್ ಪೋಸ್ಟ್ : ಅವನು ಮಲಗಿದ್ದಾಗ ಬಂದು ಸಿಗರೇಟಿನಿಂದ ಸುಟ್ಟಿದ್ದ..

ಮೊಲದ ಆತ್ಮದಂತಹ ಹೆಣ್ಣುಮಕ್ಕಳು ನಾವು…

ಸುದ್ದಿ ಮನೆಗಳಲ್ಲಿ ಅತ್ಯಾಚಾರದ ಸುದ್ದಿಗಳನ್ನು ನೋಡುವಾಗಲೆಲ್ಲ ನನಗೆ ಕೆ.ವಿ.ತಿರುಮಲೇಶ್ ಅವರ, ‘ಬೇಕೆಂದೇ (ಪ್ರಯತ್ನಪಟ್ಟು) ನಾವು ಏನನ್ನಾದರೂ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಆದರೆ ಬೇಕೆಂದೇ ಮರೆಯುವುದು ಸಾಧ್ಯವಿಲ್ಲ,’ ಎಂಬ ಸಾಲು ಮತ್ತೆ ಮತ್ತೆ ನೆನಪಾಗಿ ಕಾಡುತ್ತದೆ. ಮತ್ತು ‘ಆ’ ಘಟನೆ ನೆನಪಾಗಿ ತಲ್ಲಣಿಸುತ್ತೇನೆ.

ಚಿಕ್ಕ ವಯಸ್ಸಿನಲ್ಲೇ ಅಪ್ಪ-ಅವ್ವನನ್ನು ಕಳೆದುಕೊಂಡ ದೊಡ್ಡ ಸೋದರತ್ತೆ ಮಗನನ್ನು ಅಪ್ಪ ಮನೆಯಲ್ಲಿ ತಂದಿಟ್ಟುಕೊಂಡಿದ್ದರು. ಆವತ್ತು ಅಪ್ಪ-ಅವ್ವ ಎಲ್ಲೋ ಹೊರಗೆ ಹೋಗಿದ್ದರು. ಅಕ್ಕ ಹಾಲು ಹಿಂಡುತ್ತಿದ್ದಳು. ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದವಳ ಹತ್ತಿರ ಬಂದವನ ಭಾವ ಸರಿಯಿಲ್ಲ ಎಂದು ಒಳಮನಸ್ಸು ಹೇಳುತ್ತಿತ್ತು. ಅನುಮತಿ ಇಲ್ಲದೆ ನನ್ನ ನೆರಳನ್ನೂ ನೀ ಸೋಕಲಾರೆ ಎಂದು ಬಲವಾಗಿ ವಿರೋಧಿಸಿದ್ದೆ. ಪರಿಣಾಮ ಮಲಗಿದ್ದಾಗ ಬಂದು ಸಿಗರೇಟಿನಿಂದ ಸುಟ್ಟಿದ್ದ.

ಅಪರಿಚಿತರಿರಬಹುದು, ಹೊಸಬರಿರಬಹುದು. ಕೆಲವೊಂದಿಷ್ಟು ಸ್ಪರ್ಶಗಳು ಇರಿಟೇಟ್ ಆಗುತ್ತವೆ ಅಂತ ಆಪ್ತರನ್ನ ಬಿಟ್ಟರೆ ಯಾರಿಗೂ ಹಲೋ, ಥ್ಯಾಂಕ್ಸ್ ಅಂತ ಕೈ ಕೂಡ ನೀಡದ ನಾನು ಸುಟ್ಟ ಗಾಯಕ್ಕಿಂತ ಅವನು ಮುಟ್ಟಿದನಲ್ಲ ಎನ್ನುವ ಭಾವಕ್ಕೇ ಕಂಗಾಲಾಗಿದ್ದು ನೋಡಿ ಆಸ್ಪತ್ರೆಗೆ ಸೇರಿಸಿದ್ದರು.

ಬೆಡ್ ಮೇಲೆ ಮಲಗಿದ್ದವಳಿಗೆ, ನೀನು ನಮ್ಮೆಲ್ಲರ ಶಕ್ತಿ. ನಿನ್ನ ಸಪ್ಪೆ ಮುಖ ನಮ್ಮೊಳಗಿನ ಅಪರಾಧಿ ಭಾವವನ್ನು ಹೆಚ್ಚಿಸುತ್ತದೆ. ಕಣ್ಣೀರು ಇನ್ನೂ ನಿಸ್ಸಹಾಯಕರನ್ನಾಗಿ ಮಾಡುತ್ತದೆ ಒಮ್ಮೆ ಮೊದಲಿನಂತೆ ನಗು ಎಂದು ಗೋಗರೆದದ್ದು ಬಾಲ್ಯ ಸ್ನೇಹಿತರು.

ಸಮಾಧಾನ ಮಾಡುತ್ತ, “ಏ ಗುಂಡಮ್ಮಾ ನೋಡಿಲ್ಲಿ. ಇನ್ನು ನಿನ್ನ ಒಬ್ಬಳನ್ನೇ ಬಿಡುವುದಿಲ್ಲ ಎನ್ನುವುದು ಸರಿಯಲ್ಲ. ನಿನಗೊಂದು ಸ್ವಯಂ ರಕ್ಷಣೆಯ ಸೂತ್ರ ಹೇಳಿ ಕೊಡುತ್ತೇವೆ. ಸರಿ ನೋಡಿಕೋ, ಆ ಸಮಯದಲ್ಲಿ ಹೆದರಬಾರದು. ಎದುರಿಗಿದ್ದವರು ಎಷ್ಟೇ ಶಕ್ತಿಶಾಲಿ, ಬಲಿಷ್ಠರಾಗಿದ್ದರೂ, ನೀನು ಶಕ್ತಿಯನ್ನೆಲ್ಲ ಹದಡಕ್ಕೆ (ಕೈಯ ಮಣಿಕಟ್ಟು) ತಂದು ಅವರ ಮೂಗಿನ ಮೇಲೊಮ್ಮೆ ಜಜ್ಜಿ ಬಿಡು. ಅಷ್ಟೇ ಅವರ ಕಥೆ…” ಎಂದು ತುಂಬಾ ಗಂಭೀರವಾಗಿ ಪ್ರಾತ್ಯಕ್ಷಿಕೆ ತೋರಿಸುತ್ತಿದ್ದವರನ್ನು ನೋಡಿ ಕಣ್ಣೀರು ಬರುವಷ್ಟು ನಕ್ಕಿದ್ದೆ.

ಮತ್ತೆ ಎಂದಿನಂತೆ ಎಲ್ಲರೊಂದಿಗೆ ಅಪ್ಪನ ಕಾಲ ಬಳಿ ಕೂತು ತೊಡೆಯ ಮೇಲೆ ಗಲ್ಲ ಊರಿ ಮಾತನಾಡುವ ಮಗುವಿನಂತೆ ಹರಟುತ್ತಿದ್ದರೆ, ನಿನ್ನ ನೋವುಗಳೆಲ್ಲ ನಮ್ಮವು, ನಮ್ಮೆಲ್ಲರ ಸುಖ ನಿನ್ನದು ಈ ಸ್ನೇಹ ಯಾವತ್ತೂ ಹೀಗೆ ಬೆರಳು ಹಿಡಿದಿರುತ್ತದೆ ಎಂದ ಅವರ ಮಾತುಗಳು ನೀಡಿದ ಮನೋಧೈರ್ಯ ಬಲು ದೊಡ್ಡದು.

ಆ ಘಟನೆಯ ನಂತರ ನಾನು ಮೊಣಕೈವರೆಗೆ ತೋಳಿರುವ ಟಾಪ್ ಗಳನ್ನೇ ಹಾಕುವುದು. ಒಮ್ಮೆ ಸ್ನೇಹಿತರು ಹುಟ್ಟುಹಬ್ಬಕ್ಕೆ ತಂದ ಹಾಫ್ ಸ್ಲೀವ್ ನ ಟಾಪ್ ಹಾಕಿದ್ದೆ. ಮೊಣಕೈ ನಂತರದ ಮೇಲಿನ ಭಾಗದಲ್ಲಿ ಕಾಣುತ್ತಿದ್ದ ಸುಟ್ಟ ಕಲೆಗಳನ್ನು ನೋಡಿ, ಚಂದ್ರನ ಕಲೆಯ ಜೊತೆ ಭೂಮಿಗೆ ಬಂದರೂ ಕಪ್ಪಿನ ಸೋಂಕಿಲ್ಲದ ತಿಳಿ ಬೆಳುದಿಂಗಳಂಥವಳ ಕೈಮೇಲೆ ಇಂಥದ್ದೆಲ್ಲ ನೋಡಲಾರೆವು ಪ್ಲಾಸ್ಟಿಕ್ ಸರ್ಜರಿ ಮಾಡಿಸೋಣ ಎಂದರು. ಬೇಡ, ಈ ಕಲೆಗಳನ್ನು ನೋಡುವಾಗಲೆಲ್ಲ ನನಗೆ ಸುಟ್ಟವನ ಮನಸ್ಥಿತಿಗಿಂತ, ನೋವಿನ ಕೊರಗಿಗಿಂತ ಆ ರಾತ್ರಿ ಗಾಯದ ಉರಿಯನ್ನು ತಣಿಸಲು ನೀವು ನವಿಲುಗರಿಯಿಂದ ಎಣ್ಣೆ ಸವರಿದ ಮಾನವೀಯ ಸ್ಪರ್ಶ ನೆನಪಾಗುತ್ತದೆ. ಅದನ್ನ ನೆನೆದು ಖುಷಿಯಾಗಿರುತ್ತೇನೆ. ಪುಟ್ಟ ಹಕ್ಕಿಯ ಬದುಕುವ ಛಲಕ್ಕೆ ಇಷ್ಟು ಸಾಕು ಎಂದೆ.

ಮಾಧ್ಯಮಗಳಲ್ಲಿ ಬರುವ ಅತ್ಯಾಚಾರದ ಸುದ್ದಿಗಳನ್ನು ನೋಡುವಾಗಲೆಲ್ಲ ನನಗೆ ಕಡಲುಗಳ್ಳರ ಕಾಟವನ್ನು ಕೊನೆಗೊಳಿಸಬಹುದು ಆದರೆ ಒಡಲುಗಳ್ಳರ ಕಾಟವನ್ನು ಹೇಗೆ ಕೊನೆಗೊಳಿಸುವುದು ಎನ್ನುವುದು ತಿಳಿಯದೇ ಕಳವಳಗೊಳ್ಳುತ್ತೇನೆ. ಆಗೆಲ್ಲ ನನಗೆ ಹಿಂದೊಮ್ಮೆ ಇಂತಹ ಪ್ರಕರಣಗಳನ್ನು ತಡೆಗಟ್ಟುವ ಕುರಿತು ನಡೆದ ಸೆಮಿನಾರ್ ಒಂದರಲ್ಲಿ ನಾನು ಮಂಡಿಸಿದ್ದ ಲೇಖನ ನೆನಪಿಗೆ ಬರುತ್ತದೆ.

ಒಂದು ನಾಯಿ ಊಟ ಮಾಡುತ್ತಿದ್ದಾಗ ಹತ್ತು ದಿನಗಳ ಕಾಲ ಗಂಟೆ ಹೊಡೆದರೆ ಹನ್ನೊಂದನೆ ದಿನ ಊಟ ಹಾಕದೆ, ಗಂಟೆ ಹೊಡೆದರೂ ಸಾಕು ಅದರ ಬಾಯಲ್ಲಿ ನೀರೂರುವುದಾಗಿ ನಿರೂಪಿಸಿದರು. ಈ ಪಾವ್‌ಲಾವ್ ಸಿದ್ಧಾಂತ ಆಧರಿಸಿ ಒಂದು ಸಿನೆಮಾ ಬಂದಿತು. ಅದರ ಹೆಸರು ‘Treated for violence’.  (ಮೂಗಿನ ಮೂಲಕ ಪ್ರವೇಶಿಸಿದ ಅಡುಗೆ ಮನೆಯ ಮಸಾಲೆ ವಾಸನೆಗೆ ‘ಬಾಯಲ್ಲಿ’ ನೀರೂರುತ್ತದೆ. ‘ಕಿವಿ’ ಗಳಿಗೆ ಕೇಳಿಸಿದ್ದಕ್ಕೆ ‘ಕಣ್ಣು’ಗಳು ನೀರಾಡುತ್ತವೆ. ಭಯವಾದಾಗ ಚರ್ಮ ನಿಮಿರೇಳುತ್ತವೆ. ಈ ವಿಷಯವಾಗಿ ಪಂಚೇಂದ್ರಿಯಗಳಿಗೆ ಒಂದರೊಂದಿಗೆ ಮತ್ತೊಂದಕ್ಕೆ ಸಂಬಂಧ ಇದೆಯೆಂದು ನಿರೂಪಿಸಿದ ವ್ಯಕ್ತಿ ‘ಪಾವ್ ಲಾವ್’. ಈ ವಿಷಯ ಕಂಡು ಹಿಡಿದಿದ್ದಕ್ಕೆ ಇವರಿಗೆ ನೊಬಲ್ ಪ್ರಶಸ್ತಿ ಕೂಡ ಬಂದಿತು)

 

ಈ ಚಿತ್ರದಲ್ಲಿ ರೇಪ್, ಹಿಂಸಾ ಪ್ರವೃತ್ತಿಯುಳ್ಳ ‘ಅಲೆಕ್ಸ್’ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸುತ್ತಾರೆ. ಆತನನ್ನು ಮನಶಾಸ್ತ್ರಜ್ಞರ ಬಳಿಗೆ ಚಿಕಿತ್ಸೆಗಾಗಿ ಕಳುಹಿಸುತ್ತಾರೆ. ಮನೋವಿಜ್ಞಾನಿಗಳು ಆತನಿಗೆ ಸೆಕ್ಸ್‌, ಹಿಂಸೆಯಿರುವ ಘಟನೆಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸುತ್ತ, ಅದೇ ಸಮಯಕ್ಕೆ ಆತನ ಶರೀರ ಅಶಕ್ತವಾಗುವ ಹಾಗೆ ಸ್ವಲ್ಪ ಕಾಲ ಚಿಕಿತ್ಸೆ ನೀಡಿ, ಬಿಡುಗಡೆ ಮಾಡುತ್ತಾರೆ. ಹೊರಬಂದ ಅಲೆಕ್ಸ್ ಮಾಮೂಲಿ ಸಂಸಾರ ಜೀವನಕ್ಕೆ ಅರ್ಹನೇ ಆದರೂ ರೇಪ್ ಮಾಡಬೇಕೆಂದರೂ, ಹಿಂಸಿಸೋಣವೆಂದರೂ ತಕ್ಷಣವೇ ಅಶಕ್ತನಾಗಿ ಹೋಗುತ್ತಿರುತ್ತಾನೆ. ನಿಜ ಜೀವನದಲ್ಲೂ ಆರೋಪಿಗಳಿಗೆ ಹೀಗೆ ಮಾಡಬಹುದಾದ್ದೇ ಸರಿಯಾದ ಶಿಕ್ಷೆ ಎನಿಸುತ್ತದೆ.

ಹಾಗಂತ ಗಂಡುಮಕ್ಕಳೇ ಹೀಗೆ ಎನ್ನುವ ಸಿನಿಕತನ ನನ್ನೊಳಗಿಲ್ಲ. ಯಾಕೆಂದರೆ ನಾನು ಕಂಡುಂಡ ಅತ್ಯುತ್ತಮ ಸ್ನೇಹ ಗಂಡುಮಕ್ಕಳದ್ದೇ. ಸ್ನೇಹಿತರಲ್ಲಿ ಬಹುತೇಕರು ಬಯಸಿ ಬಯಸಿ ಹೆಣ್ಣುಮಕ್ಕಳನ್ನು ಪಡೆದು ನನ್ನ ಹೆಸರಿಟ್ಟು ಕರೆದು ಸಂಭ್ರಮಿಸಿದ್ದಾರೆ. ದತ್ತು ಪಡೆದು ಮಮತೆಯ ಬಳ್ಳಿಯನ್ನು ಬೆಳೆಸುವುದನ್ನು ನೋಡಿದಾಗ ಮನಸು ತುಂಬಿ ಬಂದಿದೆ.

ಇಂಥದ್ದೆಲ್ಲವನ್ನ ಮೀರಿ ಹೆಣ್ಣುಮಕ್ಕಳನ್ನು ಹಿಂಸಿಸಿದ ಘಟನೆಗಳ ಬಗ್ಗೆ ತಿಳಿದಾಗ ಕುದಿದಿದ್ದೇನೆ. ತಪ್ಪು ಯಾರದು? ನೂರು ಗಾಳಿಗಳ ಸುಲಿಗೆಯ ದಾಳಿ ಸಹಿಸಿಕೊಂಡು ಶತಶತಮಾನದಿಂದ ಮಾಘ ಮೌನದಲ್ಲಿರುವ ಹೆಣ್ಣುಮಕ್ಕಳದೇ? ಎನಿತು ಕರೆದರೂ ಓಕೊಳ್ಳದಿರುವ ಅಚಿನ್ನಿದ್ರೆಯಲ್ಲಿರುವ ವ್ಯವಸ್ಥೆ ಯದ್ದೇ? ತಿಳಿದಿಲ್ಲ. ಇದಕ್ಕೆ ಪರಿಹಾರ ಏನು ಎಂದು ಕೇಳಿದರೆ ಎಲ್ಲರಂತೆ ನನ್ನದೂ ಗೊತ್ತಿಲ್ಲ ಎನ್ನುವುದೇ ಉತ್ತರ.

ಇದಕ್ಕೆ ಎಂದು? ಎಲ್ಲಿ? ಕೊನೆ. ಈ ಬದುಕೇ ಹೀಗೆ ನಾವು ಅಂದುಕೊಂಡಂತೆ ಏನೂ ಆಗುವುದಿಲ್ಲ. ಎಲ್ಲವೂ ತಮ್ಮಿಂದ ತಾವೇ ಘಟಿಸುವ ಪಥ ನಿರ್ದೇಶನಗಳು ಎನ್ನುವ ಭಾವ ತೀವ್ರವಾಗಿ ಕಾಡುತ್ತದೆ. ಆಗೆಲ್ಲ ‘ಬುದ್ಧ ಹರಿಶ್ಚಂದ್ರ’ ನಾಟಕದ ‘ತುಂಡು ಬಟ್ಟೆಯುಡಬೇಡ. ರಾತ್ರಿ ಒಬ್ಬಳೇ ತಿರುಗಾಡಬೇಡ. ಎಂದವರಿಗೆ: ಗೆಳೆಯ, ನಿನ್ನ ಈ ಸಲಹೆಗೆ ಧನ್ಯವಾದ. ಆದರೆ ಒಂದು ಮಾತು ನೆನಪಿರಲಿ; ನೀವು ನಮ್ಮೊಟ್ಟಿಗೆ ಹೀಗಿರಿ ಎಂದು ಎಲ್ಲಿಯೂ, ಯಾರನ್ನೂ ಯಾವತ್ತೂ ಬೇಡಿಲ್ಲ. ಕೊಚ್ಚಿದಷ್ಟೂ ಹೆಚ್ಚಿ ಬರುವ ಸೃಷ್ಟಿಶೀಲ ಪ್ರಕೃತಿಯಂಥಹ ನಾವು ಇಡೀ ವ್ಯವಸ್ಥೆಯೇ ನಮ್ಮ ವಿರುದ್ಧವಿದ್ದಾಗಲೂ ಬದುಕಿಯೇ ತೀರಬೇಕು ಎಂದು ಪಣ ತೊಟ್ಟಿದ್ದೇವೆ.

ಮುಂದೆ ಎಂದಾದರೊಂದು ದಿನ ನಮ್ಮೊಟ್ಟಿಗೆ ಕೆಟ್ಟದಾಗಿ ನಡೆದುಕೊಳ್ಳಲಾರರು ಎನ್ನುವ ಕೋಟಿ ವರ್ಷಗಳ ಕಾಯುವಿಕೆಯ ಜೊತೆಯೇ ಇಂತಹ ದಾಳಿಗಳನ್ನೂ ಬದುಕಿನ ಒಂದು ಅಂಗವೆಂದೇ ಸ್ವೀಕರಿಸಿದ್ದೇವೆ. ಆದ್ದರಿಂದಲೇ ಯಾವ ಶಸ್ತ್ರಾಸ್ತ್ರಗಳಿಲ್ಲದೆ ಕ್ರೂರ ಮೃಗಗಳೊಂದಿಗೆ ಲಕ್ಷ ಲಕ್ಷ ವರ್ಷಗಳಿಂದ ಬದುಕುಳಿದಿರುವ ಮೊಲದ ಆತ್ಮದಂತಹ ಹೆಣ್ಣುಮಕ್ಕಳು ನಾವು. ನಮ್ಮ ಪಾಲಿಗೆ ನಿಸರ್ಗದ ಒಲುಮೆಯೇ ವಜ್ರಕವಚ’ ಎನ್ನುವ ಅಶರೀರವಾಣಿ ಕಿವಿಯಲ್ಲಿ ಅನುರಣಿತವಾಗಿ ನಾಳೆಯ ಅನಿರೀಕ್ಷಿತ ಆಘಾತ ತಡೆದುಕೊಳ್ಳುವ ಶಕ್ತಿ ಸಂಚಯವಾಗುತ್ತದೆ ಮನ್ಸಸಿನಲ್ಲಿ.

ಎಲ್ಲರ ಆಸೆಗಳನ್ನು ಪೂರೈಸಬಲ್ಲೆ, ದುರಾಸೆಯನ್ನಲ್ಲ ಎನ್ನುವ ಭೂಮಿಯನ್ನ ಇನ್ನೂ ಆಪ್ತವಾಗಿಸಿಕೊಳ್ಳುವ ಪ್ರಯತ್ನದಲ್ಲಿ ಹೊರಗಡಿ ಇಡುತ್ತೇನೆ ದಿಟ್ಟತನದಲ್ಲಿ. ಕಲ್ಪನೆಯ ಹಾರಾಟದಲ್ಲಿ ಅಡ್ಡಿ ಇಲ್ಲ, ತಡೆಯಿಲ್ಲ. ವಾಸ್ತವದ ಓಡಾಟದಲ್ಲಿ ನೆಲದ ನಡೆದಾಟದಲ್ಲಿ ಅಪಾಯವಿದ್ದರೆ ಎಂದು ಮನದ ಮೂಲೆಯಲ್ಲಿ ಅಳುಕೆದ್ದರೂ ಅದನ್ನು ಪಕ್ಕಕ್ಕೆ ಸರಿಸಿ ಕಂಗೆಡದಂತೆ ಜೀವದ ಧೃತಿ ತೀಡುತ್ತೇನೆ.

‍ಲೇಖಕರು avadhi

December 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: