ಹ ಕ ರಾಜೇಗೌಡ ಇನ್ನಿಲ್ಲ

ಎಂ ಜಿ ಚಂದ್ರ ಶೇಖರಯ್ಯ

ನಾಡಿನ ಹಿರಿಯ ಸಂಶೋಧಕ, ಸಂಪಾದಕ, ಜಾನಪದ ತಜ್ಞ, ಕಥೆಗಾರ, ಜೀವನ ಚರಿತ್ರಕಾರ, ಅಪಾರ ಜೀವನ ಪ್ರೀತಿಯ ಮಾನ್ಯ ಹ.ಕ .ರಾಜೇಗೌಡರು ನಿನ್ನೆ ಇಳಿಹೊತ್ತಿನಲ್ಲಿ ನಮ್ಮನ್ನು ಅಗಲಿದ್ದಾರೆ. ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಗಡಿಗ್ರಾಮ ಹನುಮನಹಳ್ಳಿ ಇವರ ಹುಟ್ಟೂರು. ಸಂತೆಬಾಚೆಹಳ್ಳಿ, ಮೇಲುಕೋಟೆ, ಶಿವಮೊಗ್ಗ, ಮೈಸೂರು ಮುಂತಾದ ಕಡೆ ವಿದ್ಯಾಭ್ಯಾಸ ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿದ್ದರು.

ಕನಕಪುರ ಮತ್ತು ಬೆಂಗಳೂರಿನ ಕಾಲೇಜುಗಳಲ್ಲಿ ಕೆಲವು ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ನಂತರ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ವಿಭಾಗದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿ ಇಪ್ಪತ್ತಾರು ವರ್ಷದ ಹಿಂದೆ ನಿವೃತ್ತರಾದರು. ೧೯೮೦ರ ದಶಕದಲ್ಲಿ ಎನ್.ಜಿ.ಇ.ಎಫ್.ನಲ್ಲಿ ವಿಶೇಷ ಅಧಿಕಾರಿಯಾಗಿದ್ದರು.

ಅನುವಾದ, ಪ್ರಕಟಣೆ, ಮ್ಯಾಗಜೀನ್ ಹೊರತರುವ ಕೆಲಸ. ಬೆಂಗಳೂರಿನ ಮೇಖ್ರಿ ವೃತ್ತದ ಸಮೀಪದಲ್ಲಿರುವ ಬೆಂಗಳೂರಿನ ಉತ್ತರ ಗಡಿ ಗೋಪುರದ ಜಾಗವನ್ನು ಆಂಧ್ರದ ನರ್ತಕಿಯೊಬ್ಬರಿಗೆ ನೀಡಿದ್ದನ್ನು ಪ್ರತಿಬಟಿಸಿದ್ದರ ಪರಿಣಾಮವಾಗಿ ಇಂದು ಆ ಸ್ಥಳದಲ್ಲಿ ಸುಂದರ ಉದ್ಯಾನ ನಿರ್ಮಾಣವಾಗಿದೆ. ಅಪಾರ ಕನ್ನಡ ಪ್ರೇಮಿಯಾಗಿದ್ದ ಅವರು ಅನೇಕ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡವರು.

ಡಾ.ದೇ. ಜವರೇಗೌಡ, ಡಾ.ಹಾ.ಮಾ. ನಾಯಕ, ಡಾ.ಜೀ.ಶಂ. ಪರಮಶಿವಯ್ಯ ಮುಂತಾದವರ ಒಡನಾಟದಲ್ಲಿ ಸಾಹಿತ್ಯ, ಸಂಶೋಧನೆ, ಜಾನಪದ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಇವರ ‘ಕಥಾ ಭಾರತಿ’ ಎಪ್ಪತ್ತರ ದಶಕದಲ್ಲಿ ಪಿಯುಸಿ ತರಗತಿಗೆ ಹಾಗೂ ‘ನಾಡಪ್ರಭು ಕೆಂಪೇಗೌಡ’ ನಾಟಕ ಮೈಸೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿದ್ದವು.

ಇವರ ‘ಸಾಹಿತ್ಯ ಶೋಧ’ ಮತ್ತು ‘ಇತಿಹಾಸ ಶೋಧ’ ಕೃತಿಗಳು ಸಾಕಷ್ಟು ಜನಮನ್ನಣೆ ಪಡೆದಿವೆ. ಇವರು ಸಂಪಾದಿಸಿರುವ ‘ಕೆಂಪಣ್ಣಗೌಡನ ಯಕ್ಷಗಾನ ಪ್ರಸಂಗಗಳು’ ಮೂಡಲಪಾಯ ಯಕ್ಷಗಾನಕ್ಕೆ ಅನೇಕ ಪ್ರಸಂಗಗಳನ್ನು ನೀಡಿತು. ‘ಕೆಂಪೇಗೌಡ ಮತ್ತು ಅವನ ವಂಶಸ್ಥರು’ ನಾಡಪ್ರಭು ಕೆಂಪೇಗೌಡರ ಮೇಲೆ ಬೆಳಕು ಚೆಲ್ಲುವ ಕೃತಿ. ಕರ್ನಾಟಕ ಸಂಗೀತ ಕ್ಷೇತ್ರದ ಮೇರುನಕ್ಷತ್ರ ಭೈರವಿ ಕೆಂಪೇಗೌಡರನ್ನು ಕುರಿತು ಇವರು ಬರೆದಿರುವ ‘ಭೈರವಿ ಕೆಂಪೇಗೌಡ’ ಐಬಿಎಚ್ ನಿಂದ ಪ್ರಕಟವಾಗಿದೆ.

ಮುಖ್ಯವಾಗಿ ಮಂಡ್ಯ ಜಿಲ್ಲೆಯ ಅನೇಕ ಸಾಧಕರನ್ನು ಕುರಿತು ಇವರು ಜೀವನ ಚರಿತ್ರೆ ಬರೆದಿದ್ದಾರೆ ಇಲ್ಲವೇ ಅಭಿನಂದನ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ೧೯೭೦ರ ದಶಕದಲ್ಲಿ ಪದವಿ ಕಾಲೇಜು ಆರಂಭವಾಗಲು ಕಾರಣಕರ್ತರಾದವರಲ್ಲಿ ಇವರೂ ಒಬ್ಬರು. ಸದಾ ಏನಾದರೊಂದು ಯೋಜನೆ ರೂಪಿಸಿ ಅದನ್ನು ಅನುಷ್ಠಾನಕ್ಕೆ ತರಲು ಯೋಗ್ಯರಾದವರ ಜೊತೆಗೆ ಸೇರಿ ಕಾರ್ಯಪ್ರವೃತ್ತರಾಗುತ್ತಿದ್ದರು.

ಈಚಿನ ವರ್ಷಗಳಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿರುವ ಶ್ರೀ ಶ್ರೀ ಶ್ರೀ ಡಾ‌. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಪೋಷಕತ್ವದಲ್ಲಿ ನಾಡಿನ ಹಿರಿಯ ಸಾಧಕರ ಜೀವನ ಚರಿತ್ರೆಗಳನ್ನು ಬರೆಸಿ ಪ್ರಕಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈಗಾಗಲೇ ಐವತ್ತು ಪುಸ್ತಕಗಳು ಇವರ ನೇತೃತ್ವದಲ್ಲಿ ಪ್ರಕಟವಾಗಿವೆ.

ಚುಂಚಶ್ರೀ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ‘ರಾಜಪಥ’ ಅವರ ಅಭಿನಂದನ ಕೃತಿ. ಶ್ರೀ ಹ.ಕ.ರಾಜೇಗೌಡರು ಕಳೆದ ಇಪ್ಪತ್ತು ವರ್ಷಗಳಿಂದ ನನಗೂ ಆತ್ಮೀಯರಾಗಿದ್ದರು. ನಾನು ಅವರ ಒತ್ತಾಯಕ್ಕೆ ಮಣಿದು ‘ಬಚ್ಚಳ್ಳಿಯ ಬೆಳಕು’ ಪುಸ್ತಕವನ್ನು ಬರೆದೆ. ಅಪಾರ ಜೀವನ ಪ್ರೀತಿಯ ಅವರು ತಮಗೆ ಆತ್ಮೀಯರಾವರನ್ನು ಹನುಮನಹಳ್ಳಿಯ ತೋಟದ ಮನೆಗೆ ಆಹ್ವಾನಿಸಿ ಆತಿಥ್ಯ ನೀಡುತ್ತಿದ್ದರು.

ನಾನು ಹತ್ತಾರು ಬಾರಿ ಅವರ ಅತಿಥಿಯಾಗಿ ತೋಟದ ಮನೆಗೆ ಹೋಗಿದ್ದೇನೆ. ಅವರ ಆತಿಥ್ಯ ಸವಿದಿದ್ದೇನೆ. ಶ್ರವಣಬೆಳಗೊಳದಲ್ಲಿ ನಡೆದ ೮೧ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಿತ್ಯ ಅಲ್ಲಿಯೇ ವಾಸ. ಡಾ.ಡಿ.ಕೆ. ರಾಜೇಂದ್ರ, ಮಂಜುನಾಥ ಅದ್ದೆ, ಅಪ್ಪಗೆರೆ ತಿಮ್ಮರಾಜು, ಜಯಪ್ರಕಾಶ್ ಗೌಡ ಮುಂತಾದ ಅನೇಕರ ಜೊತೆಗೆ ಅಲ್ಲಿಗೆ ಹೋಗಿ ಬಂದ ನೆನಪು ಹಸಿರಾಗಿದೆ.

ಈಚಿನ ಕೆಲವು ವರ್ಷಗಳಿಂದ ಅನಾರೋಗ್ಯ ಅವರನ್ನು ಕಾಡುತ್ತಿತ್ತು. ವಯಸ್ಸು ಕೂಡ ದೊಡ್ಡದು. ದೊಡ್ಡ ಬದುಕು ಅವರದು. ಆ ಹಿರಿಯ ಜೀವ ಇಂದು ನಮ್ಮನ್ನು ಅಗಲಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ನಮಸ್ಕಾರಗಳು ಸರ್. ವಿದಾಯದ ನಮನ.

‍ಲೇಖಕರು Avadhi

June 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: