ನನ್ನ ತೇಜಸ್ವಿ
ಜಯರಾಮಾಚಾರಿ
ಯಾರಾದರೂ ನಾನು ಓದೋದು ಸುರು ಮಾಡ್ತೀನಿ ಒಳ್ಳೆ ಬುಕ್ ರೆಫರ್ ಮಾಡಪ್ಪ ಅಂದ್ರೆ ನನ್ನನ್ನೂ ಸೇರಿ ಎಷ್ಟೊ ಜನ ರೆಫರ್ ಮಾಡೋ ಏಕೈಕ ಲೇಖಕನೆಂದರೆ “ಪೂರ್ಣ ಚಂದ್ರ ತೇಜಸ್ವಿ”.
ಅದಕ್ಕೂ ಕಾರಣ ಇದೆ
ಒಂದು ಸಲ ತೇಜಸ್ವಿಯವರ ಪುಸ್ತಕ ಹಿಡಿದರೆ ಮತ್ಯಾವತ್ತೂ ಅವರು ಓದೋದು ನಿಲ್ಸೊಲ್ಲ ಅನ್ನೊ ಗ್ಯಾರಂಟೀಡ್ confidence. ಅದು ಅವರ ಬರಹಕ್ಕಿರುವ ಬದುಕಿಗಿರುವ ಶಕ್ತಿ. ಕಾರಂತರನ್ನ ಬಿಟ್ಟರೆ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಈ ತರವಾಗಿ ವೈವಿಧ್ಯವಾಗಿ ಬರೆದು ಬದುಕಿದವರು ತೇಜಸ್ವಿಯವರು.
ತೇಜಸ್ವಿಯನ್ನು ನಾನು ಭೇಟಿ ಮಾಡಿದ್ದು ತೇಜಸ್ವಿ ಓದಿಕೊಂಡಿರದ ಟೈಮಲ್ಲಿ , ಸ್ಕೂಲಿನಲ್ಲಿದ್ದಾಗ. ತೇಜಸ್ವಿ ಕುವೆಂಪುರವರ ಮಗ, ಹವಳದ ದಂಡೆಗಳು ಪಾಠದ ಕರ್ತೃ ಎಂದಷ್ಟೇ ಗೊತ್ತಿತ್ತು. ಒಂದು ದಿನ ನಮ್ಮ ಸೋಷಿಯಲ್ ಮಿಸ್ಸು ಉಮಾ ಮೇಡಮ್ ನೋಡ್ರೊ ಇವತ್ತು ತೇಜಸ್ವಿಯವರು ಬೆಂಗಳೂರಿಗೆ ಬರ್ತಾರೆ ಎಂದು ಚಿತ್ರಕಲಾ ಪರಿಷತ್ ವಿಳಾಸ ಹೇಳಿದಾಗ ಅವರ ಕೈಲಿ ಹೊಗಳಿಸಿಕೊಳ್ಳಬೇಕೆಂಬ ಉಮೇದಲ್ಲಿ ಹೋಗಿದ್ವಿ.
ಅವರೇ ಸೆರೆ ಹಿಡಿದ ಪಕ್ಷಿ ಚಿತ್ರಗಳ ಎಕ್ಸಿಬಿಷನ್ ಅದು. ಅಲ್ಲೆಲ್ಲೊ ಮೂಲೇಲಿ ಲೂಸ್ ಶರ್ಟು ಲೂಸ್ ಪ್ಯಾಂಟು ಬಗಲಿಗೊಂದು ಬಟ್ಟೆ ಬ್ಯಾಗ್ ಹಾಕಿ ಯಾರ ಜೊತೆನೊ ಮಾತಾಡಬೇಕಾದರೆ ನಾವು ಹೋಗಿ ಅವರ ಪಾಠ ಓದಿದ್ವಿ ಇಷ್ಟ ನೀವು ಎಂದಾಗ ಗಡ್ಡ ಕೆರಕಂಡು ಯಾವ ಶೋ ಆಫ್ ಕೊಡದೆ ನಮ್ಮ ಜೊತೆ ಐದತ್ತು ನಿಮಿಷ ಮಾತಾಡಿದರು
ನಾನು ಗ್ಯಾಪಲ್ಲಿ ಪತ್ರ ಬರೀಬೌದಾ ಸಾರ್ ಅಡ್ರೆಸ್ ಸಾರ್ ಅಂದಾಗ ಪೂರ್ಣ ಚಂದ್ರ ತೇಜಸ್ವಿ ಮೂಡಿಗೆರೆ ಪೋಸ್ಟ್ ಚಿಕ್ಕಮಗಳೂರು ಜಿಲ್ಲೆ ಅಂತ ಬರೆದು ಕಳಿಸು ಅಂದಿದ್ರು. ನಾನು ಆಗಲೇ ಜಯಂತ ಕಾಯ್ಕಿಣಿಗೆ ಪತ್ರ ಬರೆದಿದ್ದೆ ಅದಕ್ಕೆ ಉತ್ತರವೂ ಬಂದು ಒಸಿ ಬಿಲ್ಡಪ್ ತಗೊಂಡಿದ್ದೆ.
ನನ್ನ ಜೀವನವೆಲ್ಲ ಹೆಚ್ಚು ಕಮ್ಮಿ ಹಿಂಗೇನೆ ರಾಜಕುಮಾರ್ ನಮ್ ಪಾಲಿಗೆ ದೇವರಾಗಿದ್ದು ಅವರು ಸತ್ತ ಮೇಲೆನೆ , ಕಾರಂತರ ಓದುವಷ್ಟರಲ್ಲಿ ಅವರು ಇರಲಿಲ್ಲ, ಕುವೆಂಪುರವರನ್ನು ಒಂದು ಸಲವೂ ಮಾತಾನಾಡಿಸಲಾಗಲಿಲ್ಲ. ತೇಜಸ್ವಿಯವರ ಪುಸ್ತಕಗಳನ್ನ ಹುಚ್ಚನಂತೆ ಓದಿ ಅವರನ್ನ ಭೇಟಿ ಆಗಬೇಕೆಂದಾಗ ಅವರೇ ಇರಲಿಲ್ಲ. ತೇಜಸ್ವಿ ಬರೀ ಬರಹದಿಂದಲೇ ಸೆಳೆದವರಲ್ಲ ಅವರ ಬದುಕಿನಿಂದ ಸೆಳೆದವರು ಅವರ ಮಾತಿನಿಂದ ಸೆಳೆದವರು ಅವರ ಮೌನದಿಂದ ಸೆಳೆದವರು ಅವರ ತಿಕ್ಕಲಿನಿಂದ ಸೆಳೆದವರು
ಅವರನ್ನು ಇಷ್ಟ ಪಡೋರಿಗೆಲ್ಲ ಇರೋ ಏಕೈಕ ಆಸೆ ಬದುಕುದ್ರೆ ಅವರ ತರ ಬದುಕಬೇಕು. ಅವರು ಅವರ ತೋಟ ಅವರ ಮನೆ ಮನೆಯಂಗಳದ ಸ್ಕೂಟರು ಅವರ ಹೊಂಡ ಹಾಲಿನಲ್ಲಿ ಇರೋ ಏಕೈಕ ಅವರ ಫೋಟೋ ಆ ಮನೆಯಲ್ಲಿ ರಾಜೇಶ್ವರಿ ಮೇಡಂ. ಇವತ್ತಿಗೂ ತೇಜಸ್ವಿ ಮನೆ ಹುಡುಕಿ ಹೋದವರಿಗೆ ರೋಡು ಬದಿಯಿರೋ yellow gate ಓಪನ್ ಆಗುತ್ತೆ. ಮನೆಗೆ ಹೋದವರ ಜೊತೆ ರಾಜೇಶ್ವರಿ ಮೇಡಂ ಕಾಫಿ ಕೊಟ್ಟಿ ತೇಜಸ್ವಿಯವರನ್ನ ನಮ್ಮೊಳಗೆ ಇಳಿಸುತ್ತಾರೆ.
ತೇಜಸ್ವಿ ಬದುಕಿದಂತೆ ಬದುಕಲಾಗದಿದ್ದರೂ ಅವರು ಇದ್ದಿದ್ದರೆ ಉಗಿಯದಂತೆ ಬದುಕುವುದೇ ಈ ಜುನುಮದ ಪುಣ್ಯ ಅನ್ಕೊಂಡು ಅಷ್ಟು ಬದುಕಿದರೆ ಸಾಕುಲವ್ ಯೂ ತೇಜಸ್ವಿ.
ಹ್ಯಾಪಿ ಬಡ್ಡೇ ಬಾಸು.
0 ಪ್ರತಿಕ್ರಿಯೆಗಳು