ಹೌದು, ಹಂಸಲೇಖ ʼಲಯʼತಪ್ಪಿದ್ದಾರೆ

ಜಿ ಪಿ ಬಸವರಾಜು

ಹಂಸಲೇಖ ‘ಲಯ ತಪ್ಪಿದ್ದಾರೆ.’ ಹೌದು ‘ಲಯ’ ತಪ್ಪಿದ್ದಾರೆ. ಅವರೊಬ್ಬರೇ ಅಲ್ಲ. ನೂರು, ಸಾವಿರ, ಲಕ್ಷ, ಲಕ್ಷೋಪಲಕ್ಷ ಮಂದಿ ಲಯ ತಪ್ಪಿದ್ದಾರೆ. ಎಣಿಸಲು ಹೊರಟರೆ ಈ ದೇಶದಲ್ಲಿ ಲಯ ತಪ್ಪಿದವರ ಮತ್ತು ತಪ್ಪಬೇಕಾದವರ ಸಂಖ್ಯೆ ಮಿತಿ ಮೀರುತ್ತದೆ. ಒಟ್ಟು ಜನಸಂಖ್ಯೆ ಅರ್ಧಕ್ಕೂ ಹೆಚ್ಚುಪಾಲು ಇರುವ ಈ ಮಂದಿ ಈಗೀಗ ಲಯ ತಪ್ಪುತ್ತಿದ್ದಾರೆ.

ಸಾವಿರಾರು ವರ್ಷಗಳ ಕಾಲ ಹಸಿವು, ಅಪಮಾನ, ಯಾತನೆ, ಹೊರಲಾರದ ಹೊರೆಯನ್ನು ಹೊತ್ತ ಭಾರ ಹೀಗೆ ಸಾವಿರ ಸಂಕಷ್ಟಗಳನ್ನು ಅನುಭವಿಸಿದ, ಅನುಭವಿಸುತ್ತಿರುವ ಜನ ಲಯ ತಪ್ಪಿರುವುದು ಕೆಲವರಿಗಾದರೂ ಕಾಣುತ್ತಿದೆಯಲ್ಲಾ, ಅದು ನಮ್ಮ ಪ್ರಜಾಪ್ರಭುತ್ವದ ದೊಡ್ಡಸ್ತಿಕೆ; ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ನಮ್ಮ ಸಂವಿಧಾನದ ದೊಡ್ಡಸ್ತಿಕೆ.

ಜಾತ್ಯಸ್ಥರ ಮನೆಗಳ, ಮಹಲುಗಳ, ಬಂಗಲೆಗಳ, ದೇವಾಲಯಗಳ, ಮಠ ಮಂದಿರಗಳ ಅಂಗಳದಲ್ಲಿ, ಹಿತ್ತಿಲಲ್ಲಿ ದೇಹಗಳನ್ನು ಕುಗ್ಗಿಸಿಕೊಂಡು  ಶತಮಾನಗಳಿಂದ ಕಾಯುತ್ತಿರುವ ಮಂದಿಯ ಕಾಲುಗಳಲ್ಲಿ ಕಸುವಿಲ್ಲ; ಬಿಸಿಲು ಮಳೆ ಚಳಿಗೆ ಮುರುಟಿದ ದೇಹಗಳಲ್ಲಿ ರಕ್ತ ಚಲನೆಯೇ ಇಲ್ಲ. ಇಂಥವರು ಲಯ ತಪ್ಪುವುದು ಸಹಜ. ಅದೇನೂ ದೊಡ್ಡ ಸಂಗತಿಯಲ್ಲ.

ಒಂದಿಷ್ಟು ಎಚ್ಚರ, ಒಂದಿಷ್ಟು ಅರಿವು, ಒಂದಿಷ್ಟು ಬೆಳಕು ಕಂಡುಕೊಂಡವರು ಮೊದಲ ಬಾರಿಗೆ ಮಾತನಾಡುತ್ತಿದ್ದಾರೆ. ಅವರು ಆಡುವ ಮಾತಿನ ಲಯ ತಪ್ಪುತ್ತಲೇ ಇರುತ್ತದೆ; ತಪ್ಪುತ್ತಲೇ ಇರಬೇಕು. ಇದು ಲೋಕ ಕಲ್ಯಾಣಕ್ಕೆ ನೆರವಾಗುತ್ತದೆ.

‘ಲಯ’ ತಪ್ಪಬಾರದೆಂದು ಸಿದ್ಧಾರ್ಥ ಏಕಾಂಗಿಯಾಗಿ ಕಾಡಿಗೆ ನಡೆದ. ಉಸಿರಿನ ಲಯಹಿಡಿದು, ಅಂಗಾಂಗಳನ್ನು ಬಗ್ಗಿಸುವ, ಹಿಗ್ಗಿಸುವ, ಲಯಗಾರಿಕೆಯನ್ನು ಬಲ್ಲವರು ಎದುರಾದರು. ಅಂಥ ಲಯ ತನಗೇಕೆ ಸಾಧ್ಯವಿಲ್ಲ ಎಂದು ಸಿದ್ದಾರ್ಥ ಅವರನ್ನು ಅನುಕರಿಸಿದ. ಅನ್ನ ನೀರು ಬಿಟ್ಟು ದೇಹವನ್ನು ದಂಡಿಸಿ ‘ಲಯ’ ಕಂಡುಕೊಳ್ಳಲು ನೋಡಿದ. ಹತ್ತಾರು ವರ್ಷ ದಿಕ್ಕೆಟ್ಟು ಹುಡುಕಾಡಿದ. ಕೊನೆಗೂ ಅವನಿಗೆ ದಿಕ್ಕುದೆಸೆ ಕಾಣಿಸಿದಾಗ ಅದರ ಲಯ ಬೇರೆಯೇ ಆಗಿತ್ತು. ಅದು ದೇಹ-ಮನಸ್ಸನ್ನು ಬೆಸೆದ ಲಯ. ಅದು ದಂಡಿಸುವ ಲಯ ಅಲ್ಲ; ದೇಹ-ಮನಸ್ಸು ಎರಡನ್ನೂ ಅರಳಿಸುವ ಲಯ. ಅದು ಬುದ್ಧಲಯ.

ಬುದ್ಧ ಜನರ ಬಳಿಗೆ ನಡೆದ. ಅವರನ್ನು ಕಣ್ಣಿಟ್ಟು ನೋಡಿದ. ಅವರ ಮಾತನ್ನೇ ತಾನೂ ಆಡಿದ. ಆ ಮಾತಿನ ಲಯವನ್ನು ಹಿಡಿದೇ ಬಾಳಿನ ಅರ್ಥ ಕಂಡುಕೊಂಡ. ತಾನು ಕಂಡದ್ದನ್ನು ಜನರ ಮಾತಿನಲ್ಲಿಯೇ ಜನರ ಮುಂದೆ ಆಡಿದ. ಜನರಿಗೆ ತಿಳಿಯದ ಭಾಷೆಯಲ್ಲಿ ಆಡಿ ಅವರನ್ನು ಗೊಂದಲಕ್ಕೆ ತಳ್ಳುವ ಕೆಲಸವನ್ನು ಅವನು ಮಾಡಲಿಲ್ಲ. ಬುದ್ಧ ಕಂಡುಕೊಂಡದ್ದು ಜನತೆಯ ಲಯ; ಅವರ ಬದುಕಿನ, ಉಸಿರಾಟದ ಏರಿಳಿವಿನ ಲಯ. ಬಾಳಿನ ಲಯ.

ಗಾಂಧೀಜಿ ಕಂಡುಕೊಂಡ ಲಯವೂ ಇದೇ. ಈ ಲಯವನ್ನು ಕಂಡುಕೊಳ್ಳಲು ಅವರು ಲಾಗಾಯ್ತಿನ ತೋರುಗಾಣಿಕೆಯ ಲಯವನ್ನು ತಪ್ಪಬೇಕಾಯಿತು. ಗಾಂಧೀಜಿಯದು ಒಳಗಿನ ಲಯ;  ಅಂತರಂಗದ ಮಾತಿನ, ಸತ್ಯದ, ಬೆಳಕಿನ ಲಯ. ಅದಕ್ಕಾಗಿಯೇ ಅವರು ವಿರೋಧಿಗಳನ್ನು ಎದುರಿಸಬೇಕಾಯಿತು. ಏಕಾಂಗಿಯಾಗಿ ನಿಂತರೂ ಅವರು ತಮ್ಮ ಬದುಕಿನ ಲಯವನ್ನು ಬಿಟ್ಟು ದೂರ ಸರಿಯಲಿಲ್ಲ.

ನಮ್ಮ ಕುವೆಂಪು ಬಹಳ ಹಿಂದೆಯೇ ಈ ಲಯವನ್ನು ಕಂಡುಕೊಂಡರು. ಸಮುದಾಯದ ದಿಕ್ಕುತಪ್ಪಿಸುವವರ ‘ಲಯ’ದ ವಿರುದ್ಧ ಗುಡುಗಿದರು. ಕಾಡಿನ ಮನುಷ್ಯನ ಈ ಗುಡುಗು ಗುಹೆಯೊಳಗೆ ಸುಖವಾಗಿ ಮಲಗಿದ್ದ ಹುಲಿಯನ್ನು ಬೆಚ್ಚಿಬೀಳಿಸಿತು. ‘ನೇರವಾಗಿ ಹಣೆಗೇ ಗುರಿಯಿಟ್ಟು ಹೊಡೆಯಿರಿ’ ಎಂಬ ಮಾತನ್ನೂ ಕುವೆಂಪು ಲಯತಪ್ಪದಂತೆ ಆಡಿದರು. ಗಾಯಗೊಳಿಸಿ ಬಿಟ್ಟರೆ ಅದು ಅತ್ಯಂತ ಅಪಾಯ. ನಿಮ್ಮನ್ನೇ ಬಲಿತೆಗೆದುಕೊಂಡು ಬಿಡುತ್ತದೆ ಗಾಯಗೊಂಡ ಹುಲಿ ಎಂದರು ಕುವೆಂಪು. ಆಗ ಕುವೆಂಪು ವಿರೋಧಿಗಳನ್ನು ಎದುರಿಸಬೇಕಾಯಿತು.

ಪಾತಾಳದಾಳದ ಕತ್ತಲಿಯಿಂದ ಮೇಲೆದ್ದು ಬಂದವರ ಪ್ರತಿನಿಧಿಯಾಗಿ ಎದ್ದುನಿಂತ ದೇವನೂರ ಮಹಾದೇವ ತಮ್ಮೆಲ್ಲ ನೋವನ್ನು ನುಂಗಿಕೊಂಡರು. ಒಡಲಾಳದಲ್ಲಿ ಲಾವಾ ಪುಟಿದೇಳುತ್ತಿದ್ದರೂ ಅದನ್ನು ಗಂಟಲಲ್ಲೇ ಇಟ್ಟುಕೊಂಡು ಹೇಳಿದರು: ‘ಖಂಡವಿದೆಕೋ, ಮಾಂಸವಿದೆಕೊ, ಗುಂಡಿಗೆಯ ಬಿಸಿ ರಕ್ತವಿದೆಕೊ.’

ಬೆನ್ನಮೇಲೆ ಕುಳಿತವರನ್ನು ಹೊತ್ತು, ಜಾತಿಯ ಕೋಟೆಯೊಳಗೇ ಜೀತ ನಡೆಸುತ್ತಿರುವವರ ಮಾತುಗಳು ಬತ್ತಿ ಶತಮಾನಗಳೇ ಆಗಿವೆ. ಬಾಬಾಸಾಹೇಬರು ಈ ಜನರ ಮಾತುಗಳನ್ನು ನೆನಪಿಸಿದರು. ಮಾತಿನ ಶಕ್ತಿಯನ್ನು ಬಳಸುವ ಸಂವಿಧಾನವನ್ನು ತೋರಿಸಿಕೊಟ್ಟರು. ಹೆಗಲಿನ ಮೇಲೆ ಕುಳಿತವರನ್ನು ಮೊದಲು ಕೆಳಗೆ ತಳ್ಳಿ ಎಂದರು. ಇದೆಲ್ಲ ಆಗಿ ೭೫ ವರ್ಷಗಳೇ ಆಗಿವೆ. ಹೆಗಲಿಳಿಯಲು ಒಪ್ಪದವರು ಈಗಲೂ ಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ. ಮಾತಿನ ಲಯದ ಬಗ್ಗೆ ಹೇಳುತ್ತಿದ್ದಾರೆ.

ಜಗತ್ತಿನಾದ್ಯಂತ ತಮ್ಮದೇ ಮಾತಿನ ಲಯ ಕಂಡುಕೊಳ್ಳುತ್ತಿರುವ ಸಮುದಾಯಗಳು, ಬುಡಕಟ್ಟುಗಳು, ನೆಲಮೂಲ ಸಂಸ್ಕೃತಿಯವರು ಇದೀಗ ಬೆಳಕಿಗೆ ಬರುತ್ತಿದ್ದಾರೆ. ಅವರೆಷ್ಟು ಸುಂದರವಾಗಿದ್ದಾರೆ; ಅವರೆಷ್ಟು ಬಣ್ಣಬಣ್ಣಗಳಲ್ಲಿ ಹೊಳೆಯುತ್ತಿದ್ದಾರೆ. ಅವರ ಮಾತಿನ ಲಯ ಎಷ್ಟೊಂದು ಅದ್ಭುತ! ಇದನ್ನು ಮೊದಲು ನೋಡಬೇಕಾಗಿದೆ. ಇದು ಕಂಡರೆ ಈವರೆಗೆ ಆಡಿಕೊಂಡು ಬಂದಿರುವವರ ಲಯಗಾರಿಕೆ ಎಷ್ಟು ಕೃತಕವಾದದ್ದು, ಎಷ್ಟು ಪೊಳ್ಳಾದದ್ದು, ಎಷ್ಟು ಜೀವವಿರೋಧಿಯಾದದ್ದು ಎಂಬುದು ಮನದಟ್ಟಾಗುತ್ತದೆ.

ಬದುಕಿನ ಈ ಲಯವನ್ನು ಕಂಡುಕೊಳ್ಳುವುದೇ ಎಲ್ಲರ ಮುಂದಿರುವ ಸವಾಲು. ಈ ಸವಾಲಿಗೆ ಎದುರಾಗಿ ನಿಲ್ಲುವವರಿಗೆ ಎಂಟೆದೆಗಳು ಸಾಲುವುದಿಲ್ಲ. ವರ್ಗ, ಜಾತಿ, ಅಂತಸ್ತು, ಮಠ, ಮಂದಿರಗಳು, ಊಟದ ಕಟ್ಟುಪಾಡುಗಳು, ರುಚಿಯ ಇಕ್ಕಟ್ಟುಗಳು ಸಾಲುವುದಿಲ್ಲ. ಎಲ್ಲ ಮನುಷ್ಯರನ್ನೂ ತಬ್ಬಿಕೊಂಡ, ಎಲ್ಲ ಭಾಷೆ, ಸಂಸ್ಕೃತಿ, ಊಟೋಪಚಾರ, ತೆಗ್ಗು ತೆವರಿಗಳನ್ನು ಜೊತೆಗಿಟ್ಟುಕೊಂಡು ಈ ಸವಾಲಿಗೆ ಎದುರಾಗಬೇಕು. ಆಗ ಬದುಕಿನ ಲಯ ಸಿಕ್ಕಬಹುದು. ಬದುಕಿನ ಲಯ ಎಲ್ಲ ಲಯಗಳಿಗಿಂತಲೂ ಮೇಲಿನದು. ಆಗ ಹಂಸಲೇಖ ಅಥವಾ ಅವರಂಥವರು ಆಡುವ ಮಾತಿನ ಲಯ ಅರ್ಥವಾಗುತ್ತದೆ. ಅಲ್ಲಿಯವರೆಗೆ  ಹಂಸಲೇಖ ಲಯತಪ್ಪಿದವರಂತೆಯೇ ಕಾಣಿಸುತ್ತಾರೆ.

ಸಂವಿಧಾನವನ್ನು ಸುಡುವ ಮಾತುಗಳನ್ನು ಆಡುವವರನ್ನು ನಾವು ಸಹಿಸುತ್ತೇವೆ. ಅವರ ಮಾತಿನ ಲಯ ತಪ್ಪಿದೆ ಎಂದು ಹೇಳುವ ಎದೆಗಾರಿಕೆಯನ್ನೂ ತೋರುವುದಿಲ್ಲ. ಮಾತನ್ನೇ ಕಳೆದುಕೊಂಡು ಸಾವಿರಾರು ವರ್ಷಗಳಿಂದ ಊರಾಚೆಯೇ ನಿಂತವರ ‘ಮಾತಿನ ಲಯ’ದ ಬಗ್ಗೆ ತಟ್ಟನೆ ಭಾಷ್ಯ ಬರೆಯುತ್ತೇವೆ. ಇದು ನ್ಯಾಯದ ತಕ್ಕಡಿಯೇ? 

ಮಾತು ಮತ್ತು ಮಾತಿನ ಲಯ ಬಲ್ಲ ಜಾಣರೇ,

ಮೊದಲು ನಿಮ್ಮ ನಿಮ್ಮ ಕಿವಿಗಳನ್ನು ಸರಿಪಡಿಸಿಕೊಳ್ಳಿ; ಕಣ್ಣುಗಳನ್ನು ಸರಿಪಡಿಸಿಕೊಳ್ಳಿ, ಎದೆಬಡಿತ ಸರಿಯಿದೇಯೇ, ಲಯತಪ್ಪಿದೆಯೇ ನೋಡಿಕೊಳ್ಳಿ. ಇದಕ್ಕೆ ನಮ್ಮ ಸಂವಿಧಾನದಲ್ಲಿ, ಜನತಂತ್ರದಲ್ಲಿ ಖಂಡಿತಾ ಅವಕಾಶವಿದೆ.

ನಂತರ ಮಾತನ್ನು ಕಳೆದುಕೊಂಡವರ ಮಾತು; ಅವರ ಮಾತಿನ ಲಯದ ಮಾತು.

‍ಲೇಖಕರು Admin

November 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

 1. ಸುಮತಿ

  ಬಹಳ ಚೆನ್ನಾಗಿ ಬರೆದಿದ್ದೀರಿ. ಸಮಾಜದಲ್ಲಿ ಪ್ರತಿಯೊಬ್ಬರೂ ಲಯ ಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕುವೆಂಪು, ಗಾಂಧೀಜಿ, ಬುದ್ಧ ನ ದಾರಿಯಲ್ಲಿ ಹಂಸಲೇಖ ನಡೆದಿದ್ದರೆ, ಜಗತ್ತು ಅವರಿಗೆ ತಲೆಬಾಗಿ ವಂದಿಸುತ್ತಿತ್ತು.
  ರೌಡಿಶೀಟರ್ ಗಳು ನಾಯಕರಾಗುತ್ತಿರುವ ಕಾಲ ಇದು.
  ಮಾಮ.. ಮಜಾ ಮಾಡು. ಕಾಲೇಜು life ಇರೋದೇ love ಮಾಡಲು ಅಂತ ಹಂಸಲೇಖ ಮಾತನ್ನು ನಿಮ್ಮ ಮಗಳು ಹೇಳಿದರೆ, ಅವಳು ಲಯ ಹುಡುಕಲಿ ಎಂದು ಖುಷಿ ಪಡುತ್ತೀರಾ? ಅಬ್ದುಲ್ ಕಲಾಂ ರಂತಹ ಮಾರ್ಗದರ್ಶಕರು, ಶರೀಫರಂತಹ ಗಾಯಕರು ಲಯದ ದಾರಿ ತೋರುತ್ತಾರೆ.
  ಬುದ್ಧ , ಗಾಂಧೀಜಿ, ಬಸವಣ್ಣ, ಕುವೆಂಪು ಹೇಳಿದ ಮಾತನ್ನೇ ಹಂಸಲೇಖ ಹೇಳಿದ್ದಾರೆ ಅಂದರೆ ,ಹಂಸಲೇಖ ಅವರನ್ನು ಬುದ್ಧನ ಎತ್ತರಕ್ಕೆ ನೀವು ಕೊಂಡೊಯ್ದರೆ, ನಿಮ್ಮ ಲಯ ಬೇರೆಯೇ ಇದೆ.
  ಪೇಜಾವರರನ್ನು ಲಾಯಕ್ಕೆ ತಳ್ಳಿ, ನೀವು ಲಯ ಹುಡುಕಿ. ಶುಭವಾಗಲಿ.

  ಪ್ರತಿಕ್ರಿಯೆ
 2. ವಿಜಯವಾಮನ

  ಹಂಸಲೇಖರನ್ನು ಈ ಲೇಖನದಿಂದ ಡಿಲೀಟ್ ಮಾಡಿಕೊಂಡು ಈ ಲೇಖನ ಓದಿಕೊಂಡರೆ ತುಂಬಾ ಅರ್ಥಪೂರ್ಣವಾದ ಬರಹ.

  ಪ್ರತಿಕ್ರಿಯೆ
 3. ramesh pattan

  ಹಂಸಲೇಖರ ಉಡಾಫೆ ಮಾತನ್ನು ಸಮರ್ಥಿಸಿಕೊಳ್ಳುವದು ಸರಿಯೇ ?

  ಪ್ರತಿಕ್ರಿಯೆ
 4. M A Sriranga

  Fine. Good argument sir. So on the basis of your theory any one can speak anything and use your points for defence if he faces a civil /defamation case in the court of law.

  ಪ್ರತಿಕ್ರಿಯೆ
 5. Basavaraju G P

  ಸುಮತಿ ಅವರ ಪ್ರತಿಕ್ರಿಯೆ ಮತ್ತು ಸಜ್ಜನಿಕೆಗೆ ವಂದನೆಗಳು. ಇಂಥ ಸಜ್ಜನಿಕೆ ಇದ್ದಾಗಲೇ ಸಂವಾದ ಸಾಧ್ಯ. ಸಂವಾದದ ಮೂಲಕ ಪ್ರರಸ್ಪರರ ತಿಳಿವು ತಿಳಿಯಾಗುವ ಸಾಧ್ಯತೆ ಇರುತ್ತದೆ.
  ನನಗೆ ಹಂಸಲೇಖರಾಗಲಿ, ಪೇಜಾವರರಾಗಲಿ ಮುಖ್ಯವಲ್ಲ. ಇವರಿಬ್ಬರೂ ಪ್ರತಿನಿಧಿಸುವ ಮೌಲ್ಯಗಳೇ ಪ್ರಧಾನ. ಹಂಸಲೇಖ ಅವರ ಪ್ರಕರಣದಲ್ಲಿ ಈ ಮೌಲ್ಯಗಳ ಮಧ್ಯೆ ನಡೆಯುತ್ತಿರುವ ಸಂಘರ್ಷ ಮೇಲೆ ಬಂದಿದೆ. ಬುದ್ಧನ ಕಾಲದಿಂದ ಇವತ್ತಿನ ಕುವೆಂಪು ಮತ್ತು ದೇವನೂರರ ವರೆಗೂ ಈ ಸಂಘರ್ಷ ನಡೆದುಕೊಂಡು ಬರುತ್ತಿರುವುದು ಕಳವಳಕಾರಿಯಾದ ಸಂಗತಿ. ಹಂಸಲೇಖ ಏನೆಲ್ಲ ಮಾತನಾಡಿದರು ಎಂಬುದಕ್ಕಿಂತ ಮುಖ್ಯವಾಗಿ ಅವರೊಂದು ಅಭಿಪ್ರಾಯವನ್ನು ಮುಂದಿಟ್ಟರು. ಇದಕ್ಕೆ ಚರ್ಚೆ, ಸಂವಾದದ ಮೂಲಕ ಎದುರಾಗಬಹುದಿತ್ತು. ಇದನ್ನು ಕಡೆಗಣಿಸಿ, ಹಂಸಲೇಖಾ ಅವರ ವಿರುದ್ಧ ಬೀದಿ ಪ್ರತಿಭಟನೆ, ಪೊಲೀಸ್ ಠಾಣೆ ಇತ್ಯಾದಿ ದಾರಿ ಹಿಡಿದದ್ದು ದೊಡ್ಡ ಸಂಗತಿಯೊಂದನ್ನು ಸೂಚಿಸುತ್ತಿದೆ. ಈ ಕಾರಣಕ್ಕಾಗಿಯೇ ನನ್ನ ಲೇಖನ.
  ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಜೀವಾಳವೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ. ಇದು ಜಾತಿಮತಧರ್ಮಗಳನ್ನು ಮೀರಿದ, ಎಲ್ಲರ ಸಮಾನತೆಯನ್ನು ಬಯಸುವ ಸಂವಿಧಾನ; ಭಾರತವನ್ನು ಒಂದು ಘನತೆವೆತ್ತ ರಾಷ್ಟ್ರವಾಗಿ ಮುನ್ನಡೆಸುವ ಸಂವಿಧಾನ. ನಮ್ಮ ಜನಪ್ರತಿನಿಧಿಯೊಬ್ಬರು ಈ ಸಂವಿಧಾನವನ್ನು ಸುಡಬೇಕೆಂದು ಒಮ್ಮೆ ಹೇಳಿದರು. ಇವತ್ತು ಹಂಸಲೇಖ ಅವರ ವಿರುದ್ಧ ದೊಡ್ಡ ಪ್ರತಿಭಟನೆಗಿಳಿದಿರುವ ಯಾವ ಗುಂಪೂ ಈ ಸುಡುವ ಸಂಸ್ಕೃತಿಯ ವಿರುದ್ಧ ದನಿ ಎತ್ತಲಿಲ್ಲ. ಇದಕ್ಕೇನು ಕಾರಣ? ಜಾತಿ, ಧರ್ಮಗಳ ಮಹಾಗೋಡೆಯೇ ? ಅಥವಾ ನಮ್ಮೊಳಗೇ ಇಟ್ಟುಕೊಂಡಿರುವ ಜಾತಿಧರ್ಮದ ಅಖಂಡ ಮೋಹವೇ?
  ಈ ಬಗ್ಗೆ ಚಿಂತಿಸುವುದು ನಮ್ಮ ಸಂವಿಧಾನವನ್ನು ಗೌರವಿಸುತ್ತದೆ; ಪ್ರಜಾತಂತ್ರವನ್ನು ಬಲಿಷ್ಠಗೊಳಿಸುತ್ತದೆ. ಹಾಗೆಯೇ ಇಡೀ ಸಮಾಜದ, ರಾಷ್ಟ್ರದ ಮುನ್ನಡೆಗೂ ಕಾರಣವಾಗುತ್ತದೆ.

  -ಜಿ.ಪಿ.ಬಸವರಾಜು

  ಪ್ರತಿಕ್ರಿಯೆ
 6. M A Sriranga

  Right to speak does not mean we have the right to defame anybody. Your arguments does stand in the court of law.

  ಪ್ರತಿಕ್ರಿಯೆ
 7. ಸುಮತಿ

  ನಿಜ ಬಸವರಾಜು sir. ಪ್ರತಿಕ್ರಿಯೆಗೆ ಅರ್ಥಪೂರ್ಣ ಉತ್ತರ ಕೊಟ್ಟಿರಿ. ನಿಮ್ಮ ಆಶಯ ನನ್ನ ಆಶಯ ಒಂದೇ. ಲಯ ಹುಡುಕುವುದು. ಲಾಭಕ್ಕಾಗಿ ಅಲ್ಲ, ಅದು ಜೀವನ ವಿಧಾನ, ಅನುದಿನದ ಸಂಧಾನ ಆಗಬೇಕು. ಅದಕ್ಕೆ ಇಂತಹ ವ್ಯಕ್ತಿಗಳ ಹೇಳಿಕೆಗಳು, ಕೃತ್ಯಗಳು ಬೇಡ. ಇಂತಹ ವರ ಮಾತುಗಳ ಬಗ್ಗೆ ಬರೆದು ಸಮಯ ವ್ಯರ್ಥ ಮಾಡದೆ, ನಾವು ನಮ್ಮ ಮಟ್ಟದಲ್ಲಿ ಕೆಲಸ ಮಾಡುತ್ತಾ ಹೋಗೋಣ.

  ಪ್ರತಿಕ್ರಿಯೆ
 8. ಸುಮತಿ

  ವಿಜಯವಾಮನ ರ ಮಾತು ಒಪ್ಪುತ್ತೇನೆ

  ಪ್ರತಿಕ್ರಿಯೆ
 9. M. A. Sriranga

  ಬಸವರಾಜು ಅವರೇ ತಮ್ಮ ಮಾತು ಕೇವಲ ಜಾಣತನದ್ದು ಅಷ್ಟೆ. ನಮಗೆ ಹಕ್ಕುಗಳು ಇರುವ ಹಾಗೆಯೇ ಕರ್ತವ್ಯಗಳೂ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ವ್ಯಕ್ತಿ ನಿಂದನೆ ಅಲ್ಲ. ಮನ ಬಂದಂತೆ ಮಾತಾಡಿ ಇನ್ನೊಬ್ಬರ ಭಾವನೆಗಳನ್ನು ನೋಯಿಸುವುದೂ ಅಲ್ಲ.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ M. A. SrirangaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: